Tour: ಲೋಹಿತನ ಜಾಡಿನಲ್ಲಿ ಒಂದು ಪ್ರಯಾಣ
Team Udayavani, Dec 31, 2023, 5:21 PM IST
ಹಕ್ಕಿಗಳಿಗೆಂದು ಊರೂರುಗಳಲ್ಲಿ ಅಲೆಯುವ ನಾನು 2023ರಲ್ಲಿ ಮಾಡಿದ ಮೂರು ಹೊರರಾಜ್ಯದ ಹಕ್ಕಿ ಪ್ರವಾಸಗಳೂ ಅರುಣಾಚಲ ಪ್ರದೇಶದಲ್ಲೇ ಆಗಿದ್ದವು. ಆದರೆ ಈ ಪ್ರವಾಸಗಳು ಮೂರು ಬೇರೆ ಬೇರೆ ಜಾಗಗಳಾಗಿದ್ದವು. ಏಪ್ರಿಲ್-ಮೇನ ಮೊದಲ ಪ್ರವಾಸ ಮಂಡಲ, ಸೆಲಾಪಾಸ್, ಈಗಲ್ ನೆಸ್ಟಿಗೆ ಆಗಿದ್ದರೆ ಎರಡನೆಯ ನವೆಂಬರ್ ಪ್ರವಾಸ ಮಿಶ್ಮಿಗೆ ಆಗಿತ್ತು. ಡಿಸೆಂಬರಿನಲ್ಲಿ ಹೊರಟ ಕೊನೆಯ ಪ್ರವಾಸ ವಾಲಾಂಗ್ ಕಡೆಗೆ.
ವಾಲಾಂಗಿನ ಪ್ರವಾಸದಲ್ಲಿ ಎಡೆಬಿಡದೆ ಸೆರಗು ಹಿಡಿದು ಬೆರಗಿನಿಂದ ನಡೆದದ್ದು ಲೋಹಿತ್ ನದಿಯ ಜಾಡಿನಲ್ಲಿ. ಅಸ್ಸಾಮ್ ದಾಟಿ ಇನ್ನರ್ ಲೈನ್ ಪರ್ಮಿಟ್ ಪಡೆದು ಪರ್ವತಗಳ ನಾಡಾದ ಅರುಣಾಚಲ ಪ್ರದೇಶಕ್ಕೆ ಕಾಲಿರಿಸಿ ಪರಶುರಾಮ ಕುಂಡದ ಬಳಿ ಸೇತುವೆಯ ಮೇಲೆ ನಿಂತಾಗ ಲೋಹಿತ ತನ್ನ ತಿಳಿ ನೀಲವರ್ಣದಿಂದ ಕಣ್ತುಂಬಿ ಮನಕ್ಕಿಳಿಯಿತು. ಕೆಂಪು ಜೇಡಿಮಣ್ಣಿನ ನೆಲದಲ್ಲಿ ಹರಿಯುತ್ತಿದ್ದ ನದಿಗೆ ಹೆಸರು ಬಂದದ್ದು ಅಸ್ಸಾಮಿ ಮೂಲದ ರಕ್ತ ಅರ್ಥದ ಲೋಹಿತ ಶಬ್ದದಿಂದ. ರಕ್ತದ ನದಿ ಎಂದೇ ಕರೆಸಿಕೊಳ್ಳುವ ಲೋಹಿತ್ ಜೊತೆ ಜೊತೆಯಲ್ಲಿ ನದಿಯ ಮೂಲದತ್ತ ಹಿಮ್ಮುಖವಾಗಿ ಮುಂದಿನ ನಮ್ಮ ಪಯಣ ಸಾಗಿತು. ಕಣಿವೆಯಾಳದಲ್ಲಿ ನದಿ ಕಣ್ಣಿಗೆ ಬೀಳುತ್ತಲೇ ಇತ್ತು.
ಎತ್ತ ನೋಡಿದರೂ ಲೋಹಿತನ ಮೋಹಕ ನೋಟ:
ಇಳಿ ಸಂಜೆಯಲ್ಲಿ ಕತ್ತಲೆ ಕಣ್ಣಿಗೆ ಕಟ್ಟಿದಾಗ ವಾಲಾಂಗ್ ತಲುಪಿದ್ದೆವು. ಹಿಡಿ-ಕೈಪಿಡಿ ಇಲ್ಲದ ಐವತ್ತು ಮೆಟ್ಟಿಲು ಏರಿ ಹೋಂ ಸ್ಟೇ ಸೇರಿದೆವು. ಬೆಳಿಗ್ಗೆ ಐದೂವರೆಗೆ ಹಕ್ಕಿಗೆ ಹೊರಡಲು ರೆಡಿಯಾಗಿರಿ ಎಂದಿದ್ದರಿಂದ ಬಹು ದೂರದ ಕುಲುಕಾಟದ ಪಯಣಕ್ಕೆ ಬಾಡಿ ಬಸವಳಿದಿದ್ದರಿಂದ ಬೇಗ ಎರಡು ರಗ್ಗು ಹೊದ್ದು ಹಾಸಿಗೆಯಲ್ಲಿ ಬಿದ್ದು ನಿದ್ದೆಗೆ ಶರಣಾದೆ. ಏನೋ ಹರಿಯುವ ಸದ್ದು ಎಂದು ಬೆಳಿಗ್ಗೆ ಬಾಲ್ಕನಿಯ ಬಾಗಿಲು ತೆರೆದು ಕಣಿºಟ್ಟರೆ ಎದುರೆದುರೆ ಲೋಹಿತ ಕಣ್ ದಿಟ್ಟಿ ಕಾಣುವ ತನಕ. ಅರೆ ಲೋಹಿತ ಕಣ್ಣಿಗೆ ನೀನೆಷ್ಟು ಹಿತ ಎಂದುಕೊಂಡೆ. ನದಿಯ ದಡದಲ್ಲೇ ನಮ್ಮ ಸೇನಾಪಡೆಯ ಕ್ಯಾಂಪ್. ಸೇನೆಯ ಅನೇಕ ಸಾಹಸಗಳಿಗೆ ತೆರೆದ ತೋಳಿನಿಂದ ಸ್ವಾಗತ ನೀಡುವವ.
ನಮ್ಮ ಆ ದಿನದ ಹಕ್ಕಿ ಅರಸಾಟಕ್ಕೆ ಲೋಹಿತ್ ಕಣ್ಗಾವಲಾದ. ಹೆಲ್ಮೆಟ್ ಟಾಪಿನಲ್ಲಿ ಹಕ್ಕಿ ಹುಡುಕಿ ಸಂಜೆ ಕೆಳಗಿಳಿದರೆ ಲೋಹಿತನ ದಡದ ಸನಿಹದಲ್ಲಿಯೂ ಹುಡುಕಿದೆವು. ಮರುದಿನ ನಮ್ಮ ನಡೆ ಗಡಿಯ ಕಡೆಗೆ ಅಂದರೆ ಇಂಡಿಯಾದ ಕೊನೆಯ ಊರು ಕಾಹೋಗೆ ಆಗಿತ್ತು. ಲೋಹಿತನನ್ನು ಪದೇ ಪದೇ ದಾಟಿ ಅವನ ಪಕ್ಕದಲ್ಲೇ ಕಾಹೋ ತಲುಪಿದರೆ, ಚೀನಾ ದಾಟಿ ನಮ್ಮ ದೇಶಕ್ಕೆ ಲೋಹಿತ್ ಕಾಹೋ ಮೂಲಕ ಕಾಲಿರಿಸಿದ್ದ. ಟಿಬೇಟಿನ ಕಾಂಗ್ರಿ ಕಾರ್ಪೊ ಶ್ರೇಣಿಯಲ್ಲಿ ರೊಂಗ್ಟೋ ಚು ಹಾಗೂ ಜೌಯಲ್ ನ್ಗುಚು ನದಿಗಳಾಗಿ ಹುಟ್ಟಿ ನಂತರ ಎರಡೂ ಒಂದಾಗಿ ಗಡಿಗಳು ನಿಮಗೆ, ನನಗಲ್ಲ ಎನ್ನುವಂತೆ ಹರಿದು ನಮ್ಮ ದೇಶದ ಗಡಿಗೆ ಮುನ್ನುಗ್ಗಿದ್ದ ಲೋಹಿತ. ಅವನನ್ನು ದಾಟಲು ವಾಹನಗಳಿಗೆ ಸುಭದ್ರ ಸೇತುವೆಗಳಿದ್ದರೆ ಅಲ್ಲಲ್ಲಿ ತೂಗು ಸೇತುವೆಗಳೂ ಇದ್ದವು. “ಜೋಪಾನ, ಜಾರಿದರೆ ಪ್ರಪಾತ’ ಎಂದು ಲೋಹಿತ ಎಚ್ಚರಿಸುತ್ತಿದ್ದ. ನಾವೂ ಆಗಾಗ ಗಾಡಿ ನಿಲ್ಲಿಸಿ ಲೋಹಿತನೆಡೆಗೆ ದುರ್ಬೀನಿನಲ್ಲಿ ದೃಷ್ಟಿ ಹರಿಸುತ್ತಿದ್ದೆವು ಬಿಳಿಹೊಟ್ಟೆ ಬಕನಿಗಾಗಿ.
ಬಿಳಿ ಬಿಳಿ ಗುಂಡಾದ ನುಣುಪು ಕಲ್ಲುಗಳಿಗೆ ಮುತ್ತಿಟ್ಟ ನೀರು ಮುಂದುವರೆಯುತ್ತಿತ್ತೆ ವಿನಾ ನಾವರಸುತ್ತಿದ್ದ ಬಕ ಕಾಣಲಿಲ್ಲ. ಕಾಹೋದಿಂದ ಮರಳುವಾಗ ಹೊಸದಾಗಿ ಕಟ್ಟುತ್ತಿದ್ದ ಸೇತುವೆಯಂಚಿನಲ್ಲಿ ಲ್ಯಾಂಡ್ ಸ್ಲೆçಡಾಗಿ ತಾಸು ತ್ರಾಸು ಅನುಭವಿಸಿ ಕೊನೆಗೂ ವಾಲಾಂಗಿಗೆ ತಡವಾಗಿ ತಲುಪಿ ಸಮಾಧಾನದ ನಿಟ್ಟುಸಿರು ಬಿಟ್ಟೆವು.
ಕೊನೆಗೂ ಕ್ಯಾಮರಾ ಆಸೆ ತಣಿಸಿದ ಲೋಹಿತ:
ಕೊನೆಯ ದಿನ ವಾಲಾಂಗಿನಿಂದ ಮುಂಜಾವದಲ್ಲೇ ಮುನ್ಸರಿದು ಲೋಹಿತ್ ಜಿಲ್ಲೆಯ ತೇಜು ಕಡೆಗೆ ಹೊರಟರೆ ಜೊತೆಗೆ ಲೋಹಿತ ಸಾಥ್ ನೀಡಿದ. ಉದಯಕ್ ಪಾಸ್ ಏರಿದರೆ ಅಲ್ಲೂ ಲೋಹಿತ. ಸಂಜೆಗೆಂಪು ಆಗಸದಂಚಿನಲ್ಲಿ ತುಂಬಿದಾಗ ವ್ಯೂ ಪಾಯಿಂಟಿನಲ್ಲಿಳಿದು ಆ ರಂಗನ್ನು ಪಟಕ್ಕಿಳಿಸುವಾಗ ಲೋಹಿತನ ಬೆಳ್ಳಿಬಣ್ಣಕ್ಕೆ ರವಿ ರಂಗೇರಿಸಿದ ಚಿತ್ರ ನಯನ ಮನೋಹರವಾಗಿತ್ತು.
ಮಿಶ್ಮಿ ಬೆಟ್ಟವನ್ನೇರಿದಾಗ ಬಯಲ ತುಂಬಾ ಹರಡಿಕೊಂಡ ದಿಬಾಂಗ್ ನದಿಯನ್ನು ಕಂಡಿದ್ದೆ. ದಿಬಾಂಗ್ ಮತ್ತಷ್ಟು ದೂರ ಹರಿದು ಲೋಹಿತನೊಂದಿಗೆ ಮಿಲನಿಸಿ ಮುನ್ನಡೆಯುತ್ತಿತ್ತು. ಇನ್ನೂರು ಕಿ.ಮೀ ಪಯಣದ ತನ್ನ ದಾರಿಯುದ್ದಕ್ಕೂ ಅನೇಕ ಉಪನದಿಗಳನ್ನು ತನ್ನೊಳಗೆ ಕೂಡಿಸಿಕೊಂಡು ಹರಿಯುವ ಲೋಹಿತ 9.15 ಕಿ.ಮೀ ಉದ್ದದ ಅಸ್ಸಾಂ-ಅರುಣಾಚಲಕ್ಕೆ ಕೊಂಡಿಯಾದ ಅಸ್ಸಾಮಿನ ಸಾದಿಯಾ ದೋಲಿಯ ಬಳಿಯ ಭೂಪೇನ್ ಹಜಾರಿಕಾ ಸೇತುವೆಯಡಿಯಲ್ಲಿ ಸಾಗಿ ತನ್ನ ಪರ್ವತಗಳಂಚಿನ ಪಯಣ ಮರೆತು ಭರದಿಂದ ಓಡುವ ಬ್ರಹ್ಮಪುತ್ರದ ಪ್ರಮುಖ ಉಪನದಿಯಾಗಿ ಬಯಲಿನಲ್ಲಿ ಬೆರೆತು ಹೋಗುವ ಅರುಣಾಚಲದ ಕೃಷಿಗೆ, ಕುಡಿಯುವ ನೀರಿಗೆ, ಶಕ್ತಿಯುತ್ಪಾದನೆಗೆ, ಪ್ರವಾಸೋದ್ಯಮದ ಬೆಳವಣಿಗೆಗೆ ನೆರವಾದ ಲೋಹಿತನ ಜಾಡಿನಲ್ಲಿ ಹೋಗಿಬಂದ ಚಿತ್ರಗಳನ್ನು ಸೆರೆಹಿಡಿಯುವ ಆಸೆಗೆ ಕ್ಯಾಮೆರಾ ಕೂಡಾ ಸ್ಪಂದಿಸಿತು.
ತಲುಪುವುದು ಹೇಗೆ?
ಅರುಣಾಚಲಕ್ಕೆ ನೇರ ವಿಮಾನ ಸಂಪರ್ಕ ಇಲ್ಲ. ಇತ್ತೀಚೆಗೆ ತೇಜು ಎಂಬ ಕಡೆ ಶುರುವಾಗಿದ್ದರೂ, ವಿಮಾನ ಸಂಖ್ಯೆ ಕಡಿಮೆ. ಅರುಣಾಚಲದ ಕೆಲವು ಕಡೆಗೆ ಗೌಹಾಟಿಗೆ ಹೋಗಿ ಅಲ್ಲಿಂದ ಬಸ್ ಅಥವಾ ಕಾರ್ ಮೂಲಕ ಹೋಗಬೇಕು. ಕೆಲವು ಕಡೆಗೆ ಅಸ್ಸಾಮಿನ ದಿಬ್ರೂಗಡಕೆj ಹೋಗಿ ಅಲ್ಲಿಂದ ಅರುಣಾಚಲಕ್ಕೆ ತೆರಳಬೇಕು. ವಿಮಾನದ ವೆಚ್ಚ ಅಂದಾಜು ಒಂದು ಕಡೆಗೆ ಹನ್ನೆರಡು ಸಾವಿರ. ಜೊತೆಗೆ ಕಾರ್, ಬಸ್ ಪ್ರಯಾಣದ ವೆಚ್ಚ ಪ್ರತ್ಯೇಕ.
-ಡಾ. ಲೀಲಾ ಅಪ್ಪಾಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.