Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Team Udayavani, Nov 24, 2024, 6:58 PM IST
ಲೇಪಾಕ್ಷಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ, ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯಿಂದಾಗಿ ಹೆಸರುವಾಸಿಯಾದ ಸಣ್ಣದೊಂದು ಹಳ್ಳಿ. ವಿಜಯನಗರ ಸಾಮ್ರಾಜ್ಯದೊಂದಿಗೆ ನಿಕಟ ಸಂಬಂಧ ಹೊಂದಿದ, ಆ ಕಾಲಘಟ್ಟದಲ್ಲಿ ಸಮೃದ್ಧ ಪಟ್ಟಣವಾಗಿ ಮೆರೆದ ಲೇಪಾಕ್ಷಿ ಇಂದು ವಾಸ್ತುಶಿಲ್ಪದ ಶ್ರೇಷ್ಠತೆಗೆ ಸಾಕ್ಷಿಯಾಗಿ ನಿಂತಿದೆ. “ತೆರೆದ ವಸ್ತು ಸಂಗ್ರಹಾಲಯ’ ಎಂದೇ ಕರೆಯಲ್ಪಡುವ ಲೇಪಾಕ್ಷಿ, ದ್ರಾವಿಡ ವಾಸ್ತು ಶಿಲ್ಪದ ವೈಭವ ಮತ್ತು ತಾಂತ್ರಿಕ ಕಲಾ ನೈಪುಣ್ಯಕ್ಕೆ ಮಾದರಿಯಾಗಿದೆ. ಪುರಾಣ ಕಥೆಯ ಪ್ರಕಾರ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ಇದೇ ಸ್ಥಳದಲ್ಲಿ ಜಟಾಯು ಪಕ್ಷಿ ರಾವಣನನ್ನು ತಡೆದಿದ್ದಕ್ಕೆ, ಕೋಪಗೊಂಡ ರಾವಣ ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿದ. ಕೆಳಗೆ ಬಿದ್ದ ಪಕ್ಷಿ, ಶ್ರೀರಾಮ ಆ ಮಾರ್ಗವಾಗಿ ಬರುವುದನ್ನೇ ಕಾದು ಸೀತೆಯ ಅಪಹರಣದ ವೃತ್ತಾಂತವನ್ನು ತಿಳಿಸಿ ಪ್ರಾಣ ಬಿಡುತ್ತದೆ. ಆಗ ರಾಮ “ಲೇ ಪಕ್ಷಿ’ (ಪಕ್ಷಿಯೇ ಎದ್ದೇಳು) ಎಂದು ಕರೆದು ಅದಕ್ಕೆ ಮೋಕ್ಷ ಕರುಣಿಸಿದನಂತೆ. ಅದರಿಂದಾಗಿ ಈ ಸ್ಥಳಕ್ಕೆ ಲೇಪಾಕ್ಷಿ ಎಂದು ಹೆಸರು ಬಂತಂತೆ.
ವಾಸ್ತು ಶಿಲ್ಪಿಗಳ ನೈಪುಣ್ಯ
ವಿಜಯನಗರ ಅರಸರ ಆಶ್ರಯದಲ್ಲಿ 16ನೇ ಶತಮಾನದಲ್ಲಿ ನಿರ್ಮಿಸಲಾದ ವೀರಭದ್ರ ದೇವಾಲಯ ಲೇಪಾಕ್ಷಿಯ ಮುಖ್ಯ ಆಕರ್ಷಣೆ. ಕೃಷ್ಣದೇವರಾಯನ ತಮ್ಮ ಅಚ್ಯುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣ, ಕೂರ್ಮಶೈಲವೆಂಬ (ಆಮೆ ಆಕಾರದ) ಬೆಟ್ಟದ ಮೇಲೆ ಈ ದೇವಸ್ಥಾನ ಕಟ್ಟಿದನೆಂದು ಇತಿಹಾಸ ಹೇಳುತ್ತದೆ. ಏಳು ಪ್ರಾಕಾರಗಳಷ್ಟು ವಿಸ್ತಾರವಾಗಿದ್ದ ದೇವಾಲಯದಲ್ಲಿ ಈಗ ಮೂರು ಪ್ರಾಕಾರಗಳಷ್ಟೇ ಉಳಿದಿವೆ. ದೇವಾಲಯದ ಸಂಕೀರ್ಣವು ಭವ್ಯವಾದ ಪ್ರವೇಶ ದ್ವಾರದಿಂದ ಆರಂಭವಾಗುತ್ತದೆ. ದೇವಸ್ಥಾನದ ಮೊದಲ ಪ್ರಾಕಾರದ ಸ್ತಂಭಗಳಲ್ಲಿ ಶಿವ ಪಾರ್ವತಿಯರ ಮುಂದೆ ರಂಭೆ ನಾಟ್ಯ ಮಾಡುವುದನ್ನು, ಅದನ್ನು ಮುನಿವರ್ಯರಾದಿಯಾಗಿ ಸಭಾಸದರು ವೀಕ್ಷಿಸುತ್ತಿರುವುದನ್ನು ಗಮನಿಸಬಹುದು. ಪರಮೇಶ್ವರ ಹಾಗೂ ಪಾರ್ವತಿ ಕುಳಿತು ನೃತ್ಯವನ್ನು ವೀಕ್ಷಿಸುತ್ತಿರುವ ದೃಶ್ಯಗಳ ಕೆತ್ತನೆಗಳೂ ಇಲ್ಲಿವೆ.
ಮತ್ತೂಂದು ಸ್ವಾರಸ್ಯದ ಸಂಗತಿಯೆಂದರೆ, ಇಲ್ಲಿರುವ ಎಂಟು ಅಡಿ ಎತ್ತರದ ಸ್ತಂಭವೊಂದು ಕೆಳಗೆ ನೆಲಕ್ಕೆ ತಾಗದೇ ನಿಂತಿದೆ. ತೆಳುವಾದ ಬಟ್ಟೆ ಅಥವಾ ಕಾಗದವನ್ನು ಇದರಲ್ಲಿ ತೂರಿಸಿ ಹೊರತೆಗೆಯಬಹುದು. ಮೇಲ್ಛಾವಣಿಯ ಕಮಲದಲ್ಲಿ ಗುರುತ್ವಾಕರ್ಷಣೆಯ ಬಲವನ್ನು ಅಳವಡಿಸಿ, ಕೆಳಗೆ ಯಾವುದೇ ಆಧಾರವಿಲ್ಲದೇ ಈ ಕಂಬವನ್ನು ನಿಲ್ಲಿಸಿದ್ದಾರೆ. ಈ “ತೂಗು ಸ್ತಂಭ’ ಪ್ರಾಚೀನ ವಾಸ್ತು ಶಿಲ್ಪಿಗಳ ನೈಪುಣ್ಯತೆಯನ್ನು ಪ್ರತಿನಿಧಿಸುತ್ತದೆ.
ಕಾಲ ಬಳಿಯಲ್ಲಿ ದಕ್ಷನ ತಲೆಯನ್ನು ಹೊಂದಿದ ವೀರಭದ್ರ ಸ್ವಾಮಿಯ ವಿಗ್ರಹ ಮುಖ್ಯ ಗರ್ಭಗುಡಿಯಲ್ಲಿದೆ. ಮೇಲ್ಛಾವಣಿಯಲ್ಲಿ ವಿರೂಪಣ್ಣ ಕುಟುಂಬ ಸಮೇತನಾಗಿ ವೀರಭದ್ರನನ್ನು ಪೂಜಿಸುತ್ತಿರುವ ದೊಡ್ಡದಾದ ಚಿತ್ರವನ್ನು ಕಾಣಬಹುದು. ಪಕ್ಕದಲ್ಲಿ ದೊಡ್ಡದಾದ ಬಂಡೆ ಕಲ್ಲಿದೆ. ಅದರ ಒಳಗಿನ ಗುಹೆಯಲ್ಲಿ ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ್ದರಂತೆ. ಗರ್ಭಗುಡಿಯ ಒಳಗಿನಿಂದ ಈ ಬಂಡೆಯ ಒಳಭಾಗ ನೋಡಬಹುದು. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ವಿವರಿಸುವ ವರ್ಣಚಿತ್ರಗಳನ್ನು ದೇವಾಲಯದ ಮೇಲ್ಛಾವಣಿಯಲ್ಲಿ ಚಿತ್ರಿಸಲಾಗಿದೆ. ಈ ವರ್ಣ ಚಿತ್ರಗಳು (ಫ್ರೆಸ್ಕೋ ವರ್ಣ ಚಿತ್ರಗಳು) ಈಗ ಮಾಸುತ್ತಿದ್ದರೂ ಆ ಕಾಲದಲ್ಲಿ ಬಳಸುತ್ತಿದ್ದ ಬಣ್ಣಗಳು ಮತ್ತು ಚಿತ್ರಿಸುವ ರೀತಿಯನ್ನು ಗಮನಿಸಿದಾಗ ಬೆರಗಾಗುತ್ತದೆ.
ಶ್ರೀಮಂತಿಕೆಯ ಅನಾವರಣ
ದೇವಾಲಯದಿಂದ ಸ್ವಲ್ಪ ದೂರದಲ್ಲಿ 15 ಅಡಿ ಉದ್ದ ಮತ್ತು 12 ಅಡಿ ಎತ್ತರದ ಏಕಶಿಲೆಯ ಆಕರ್ಷಕ ಬೃಹತ್ ನಂದಿಯ ಪ್ರತಿಮೆ ಇದೆ. ಪ್ರವಾಸಿಗರ ಆಕರ್ಷಣೆಗಾಗಿ ಜಟಾಯುವನ್ನು ನೆನಪಿಸಿಕೊಳ್ಳಲು ಎತ್ತರದ ಬಂಡೆ ಕಲ್ಲಿನ ಮೇಲೆ ಇತ್ತೀಚೆಗೆ ರೆಕ್ಕೆ ಬಿಚ್ಚಿದ ಜಟಾಯುವಿನ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಒಟ್ಟಿನಲ್ಲಿ ಲೇಪಾಕ್ಷಿ ಅದರ ಐತಿಹಾಸಿಕ ಪ್ರಾಮುಖ್ಯತೆ, ಅದ್ಭುತವಾದ ಶಿಲ್ಪಗಳು ಮತ್ತು ಫ್ರೆಸ್ಕೋ ವರ್ಣ ಚಿತ್ರಗಳೊಂದಿಗೆ ವಿಜಯನಗರದ ಗತ ಕಾಲದ ಶ್ರೀಮಂತ ಸಾಂಸ್ಕತಿಕ ನೋಟವನ್ನು ಪ್ರತಿನಿಧಿಸುತ್ತದೆ. ಇಲ್ಲಿನ ಶಿಲ್ಪಗಳು ಸಂಕೀರ್ಣವಾದ ಕಲಾತ್ಮಕತೆ, ಪೌರಾಣಿಕ ನಿರೂಪಣೆಗಳ ಮೂಲಕ ಭಾರತದ ವಾಸ್ತು ಶಿಲ್ಪದ ಪರಂಪರೆಯನ್ನು ಎತ್ತಿ ಹಿಡಿದಿದೆ. ಪ್ರಾಚೀನ ಯುಗದ ತಾಂತ್ರಿಕ ವಿನ್ಯಾಸಕರ ವಾಸ್ತು ಶಿಲ್ಪದ ಘನತೆ ಇಲ್ಲಿ ಬಿಂಬಿತವಾಗಿದೆ.
ನಾಗಲಿಂಗ, ಪಾರ್ವತಿ ಕಲ್ಯಾಣ:
ದೇವಾಲಯದ ಎರಡನೇ ಪ್ರಾಕಾರದಲ್ಲಿ ಬೃಹದಾಕಾರದ ಏಳು ಹೆಡೆಯ ನಾಗನ ಮೇಲೆ ಕುಳಿತಿರುವ ನಾಗಲಿಂಗವಿದೆ. ಇದೂ ಲೇಪಾಕ್ಷಿಯ ಮುಖ್ಯ ಆಕರ್ಷಣೆಗಳಲ್ಲೊಂದು. ನಾಗಲಿಂಗದ ಹಿಂಭಾಗದಲ್ಲಿ ದೊಡ್ಡ ಗಣಪತಿಯ ವಿಗ್ರಹವಿದೆ. ಅದರ ಪಕ್ಕದಲ್ಲಿಯೇ ಜೇಡ, ಹಾವು, ಆನೆ ಅಲ್ಲದೇ ಬೇಡರ ಕಣ್ಣಪ್ಪ ಶಿವಲಿಂಗವನ್ನು ಪೂಜಿಸುತ್ತಿರುವ ಚಿತ್ರಗಳನ್ನು ಕೆತ್ತಲಾಗಿದೆ. ಮುಂದಿನ ಭಾಗದಲ್ಲಿ ಅಪೂರ್ಣವಾದ ಪಾರ್ವತಿ ಪರಮೇಶ್ವರರ ಕಲ್ಯಾಣ ಮಂಟಪವಿದೆ. ಚಾವಣಿಯಿಲ್ಲದ ಈ ಮಂಟಪದ ಪ್ರತಿಯೊಂದು ಸ್ತಂಭಗಳ ಮೇಲಿನ ಕೆತ್ತನೆಯೂ ಅದ್ಭುತವಾಗಿದೆ. ಮದುಮಕ್ಕಳಾದ ಪಾರ್ವತಿ ಪರಮೇಶ್ವರರು, ವಸಿಷ್ಟ- ವಿಶ್ವಾ ಮಿತ್ರಾದಿ ಮುನಿಗಳು, ದತ್ತಾತ್ರೇಯರಾದಿಯಾಗಿ ಎಲ್ಲಾ ದೇವಾನುದೇವತೆಗಳು, ಕುಲ ಪುರೋಹಿತರು ಉಪಸ್ಥಿತರಿರುವ ಕೆತ್ತನೆಗಳಿವೆ. ಮದುವೆಯ ಸಂದರ್ಭದಲ್ಲಿ ಧಾರೆ ಎರೆಯುವ, ಹೆಣ್ಣು ಮಕ್ಕಳು ಪಾರ್ವತಿಯನ್ನು ಸಿಂಗರಿಸುತ್ತಿರುವ, ಹಣೆಗೆ ಕುಂಕುಮ ಇಡುತ್ತಿರುವ ಎತ್ತರದ ಹಿಮ್ಮಡಿ ಧರಿಸಿದ ಹೆಂಗಸರ ದೃಶ್ಯಾವಳಿಗಳು ಕಲ್ಲು ಕಲ್ಲಿನಲ್ಲೂ ಚಿತ್ರಿತಗೊಂಡಿದೆ. ಹಿಂದೂ ಪುರಾಣಗಳ ದೃಶ್ಯಗಳಿಂದ ಅಲಂಕರಿಸಲ್ಪಟ್ಟ ಈ ಕಂಬಗಳ ಕರಕುಶಲತೆಯು ಆ ಕಾಲದ ಕುಶಲಕರ್ಮಿಗಳ ಕೌಶಲ್ಯವನ್ನು ತೋರಿಸುತ್ತದೆ. ಹೊರ ಆವರಣದ ನೆಲದ ಮೇಲೆ ಶಿಲ್ಪಿಗಳ ಊಟದ ತಟ್ಟೆಗಳ ಕೆತ್ತನೆಗಳು, ಸೀತೆಯ ಹೆಜ್ಜೆ ಗುರುತಿನ ಚಿತ್ರಗಳು ಆಕರ್ಷಿಸುತ್ತವೆ.
ಜಟಾಯು ಪಕ್ಷಿ ಇ (ಬಿ)ದ್ದ ಸ್ಥಳ :
ವಿಜಯನಗರ ಅರಸರ ಆಶ್ರಯದಲ್ಲಿ 16ನೇ ಶತಮಾನದಲ್ಲಿ ನಿರ್ಮಿಸಲಾದ ವೀರಭದ್ರ ದೇವಾಲಯ ಲೇಪಾಕ್ಷಿಯ ಮುಖ್ಯ ಆಕರ್ಷಣೆ. ಕೃಷ್ಣದೇವರಾಯನ ತಮ್ಮ ಅಚ್ಯುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣ, ಕೂರ್ಮಶೈಲವೆಂಬ ಬೆಟ್ಟದ ಮೇಲೆ ಈ ದೇವಸ್ಥಾನ ಕಟ್ಟಿದನೆಂದು ಇತಿಹಾಸ ಹೇಳುತ್ತದೆ. ಏಳು ಪ್ರಾಕಾರಗಳಷ್ಟು ವಿಸ್ತಾರವಾಗಿದ್ದ ದೇವಾಲಯದಲ್ಲಿ ಈಗ ಮೂರು ಪ್ರಾಕಾರಗಳಷ್ಟೇ ಉಳಿದಿವೆ.
-ಚಿತ್ರ-ಲೇಖನ: ಜಿ.ಆರ್. ಪಂಡಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.