Treking: ಕರಡಿ ಧಾಮದಲ್ಲಿ.. ಕರಡಿ ಧ್ಯಾನದಲ್ಲಿ..!
Team Udayavani, Nov 5, 2023, 11:39 AM IST
ಫಾರೆಸ್ಟ್ ವಾಚರ್‌ಗಳ ಮಾರ್ಗದರ್ಶನದಲ್ಲಿ ನಮ್ಮ ಚಾರಣ ಸರ್ವೋದಯ ಶಾಲೆಯ ಹಿಂಭಾಗದಿಂದ ಪಂಚಲಿಂಗ ಗುಹೆ ಮಾರ್ಗದಲ್ಲಿಸಾಗಿತು. ಪೊದೆಗಳು, ಮುಳ್ಳಿನ ಗಿಡಗಂಟೆಗಳಿಂದ ತಪ್ಪಿಸಿಕೊಳ್ಳುತ್ತಾ ಹೆಜ್ಜೆ ಹಾಕಿದೆವು. ಎಳೆ ಬಿಸಿಲು, ಬಗೆ ಬಗೆ ಖಗಗಳ ಕಲರವ, ಮಯೂರಗಳ ಕೇಕಾರವ, ಓಡಾಟ, ಕಾಡು ಕುಸುಮಗಳ ಚೆಲುವು, ಅವು ಬೀರುವ ಸುಗಂಧ ಮನಸ್ಸನ್ನು ಪ್ರಫುಲ್ಲಗೊಳಿಸಿದವು. ರವಿ ಹೊಂಗಿರಣಗಳು ಬೆಟ್ಟಗುಡ್ಡಗಳ ಮೇಲೆ ಬಿದ್ದು, ಶಿಲೆಗಳಿಗೆಲ್ಲ ಸ್ವರ್ಣಬಣ್ಣ ಲೇಪಿಸಿದಂತೆ ಕಂಗೊಳಿಸುತ್ತಿದ್ದವು. ಆ ಆಗಾಧ ಹೊಳಪು, ಹಸಿರಿನ ನಡುವೆ ಅಲ್ಲಲ್ಲಿ ಬಿಡುಬೀಸಾಗಿದ್ದ, ಪಾಚಿಗಟ್ಟಿದ ಬಂಡೆಗಳು ಇಡೀ ಕಾಡಿಗೆ ದೃಷ್ಟಿಬೊಟ್ಟು ಇಟ್ಟಂತೆ ಗೋಚರಿಸಿದವು!
ಇಲ್ಲಿ ಎತ್ತ ಕಣ್ಣು ಹಾಯಿಸಿದರೂ ಬರೀ ಕಲ್ಲುಗಳೇ! ಜಾರು ಬಂಡೆ, ಚಪ್ಪಟೆ, ಹಾಸು ಬಂಡೆ, ಗುಂಡುಕಲ್ಲು.. ಹೀಗೆ ಅಪರಿಮಿತ ಶಿಲಾ ಸಂಪತ್ತು ಇಲ್ಲಿನ ಬೆಟ್ಟಗುಡ್ಡಗಳ ಜೀವಾಳ. ಇಲ್ಲಿ ಅಸಂಖ್ಯಾತ ಗುಹೆಗಹ್ವರಗಳಿದ್ದು, ಇವು ಆದಿ ಮಾನವರ ನೆಲೆಬೀಡಾಗಿ, ಕರಡಿಗಳ ಆವಾಸ ಸ್ಥಾನವಾಗಿವೆ. ಇದರೊಟ್ಟಿಗೆ ಚಿತ್ತ ಸೆಳೆಯುವ ನಿಸರ್ಗ ಸೃಷ್ಟಿಸಿದ ಅದರಲ್ಲೂ ವಿಶೇಷವಾಗಿ ಹಿಟ್ಟುಕಲ್ಲುಗಳಲ್ಲಿ ಅರಳಿದ ಅಸಂಖ್ಯಾತ ಕಲಾತ್ಮಕ ಶಿಲೆಗಳ ತಾಣವಾಗಿದೆ! ಕಲ್ಲರಳಿ ಕಲೆಯಾಗಿ ನಿಂತ ಅದೆಷ್ಟೋ ಕಲ್ಲುಗಳು ನಮ್ಮ ಮೂರ್ತ ಮತ್ತು ಅಮೂರ್ತ ಕಲ್ಪನೆಗೆ ದೂಡುತ್ತವೆ.
ಕರಡಿ ಗುಂಗಿನಲ್ಲಿ ಕಾಡಲ್ಲಿ ಅಲೆದಾಟ:
ಈ ಧಾಮ ಮುಖ್ಯವಾಗಿ ಕರಡಿ, ಚಿರತೆಗಳ ಆವಾಸ ಸ್ಥಾನ. ಹಗಲಲ್ಲಿ ಅವು ಹೊರ ಬರುವುದು ಕಷ್ಟಸಾಧ್ಯ ಎನ್ನುವ ಭಂಡ ಧೈರ್ಯವೂ ನಮ್ಮಲ್ಲಿತ್ತು. ಆದರೆ ದಾರಿ ಮಧ್ಯೆ ಇದ್ದಕ್ಕಿದ್ದಂತೆ ದುರ್ಗಂಧ ಬರತೊಡಗಿತು! “ಸರ್, ಇಲ್ಲೆಲ್ಲೋ ಚಿರತೆ ಇರಬೇಕು. ಹೂತಿಟ್ಟ ಬೇಟೆಯನ್ನು ಈಗಷ್ಟೆ ಹೊರ ತೆಗೆದು ತಿನ್ನುತ್ತಿದೆ. ನಮ್ಮ ಸುಳುವಿಗೆ ಬಿಟ್ಟು ಹೊಂದಂತಿದೆ..!’ ಎಂದರು ವಾಚರ್ ರುದ್ರೇಶ್. ಒಂದು ಕ್ಷಣ ನಮ್ಮ ಜೀವ ಬಾಯಿಗೆ ಬಂದಿತ್ತು. ತಡಮಾಡದೇ ಅಲ್ಲಿಂದ ಜಾಗ ಖಾಲಿ ಮಾಡಿದೆವು. ದಾರಿ ಉದ್ದಕ್ಕೂ ಹಿಕ್ಕೆಗಳನ್ನು ನೋಡಿದ ನಾನು “ಕುರಿಗಳು ಈ ನಡು ಕಾಡಿಗೂ ಬರುತ್ತವಾ..? ಅಂದೆ. “ಇವು ಮೊಲದ ಹಿಕ್ಕೆ..’ ಎಂದರು ಅನ್ನಪೂರ್ಣ ನಾಗರಾಜ್.
ಚಾರಣದ ಆರಂಭದಿಂದ ಅಂತ್ಯದವರೆಗೂ ನಮಗೆಲ್ಲ ಕರಡಿಗಳದ್ದೇ ಗುಂಗು..! ಕರಡಿಗಳು ಯಾವ ಗುಡ್ಡದಲ್ಲಿವೆ? ಎಷ್ಟೊತ್ತಿಗೆ ಕೆಳಗೆ ಇಳಿಯುತ್ತವೆ..? ಏನೇನು ತಿನ್ನುತ್ತವೆ..? ನೀವು ಕರಡಿಗಳನ್ನು ನೋಡಿದ್ದೀರಾ? ನೋಡಲಿಕ್ಕೆ ಯಾವ ಟೈಮ್ ಬೆಸ್ಟ್ ಟೈಮ್..? ಹೀಗೆ ಚಿತ್ರ ವಿಚಿತ್ರ, ಸರಣಿ ಪ್ರಶ್ನೆಗಳನ್ನು ಒಬ್ಬರಾದ ನಂತರ ಒಬ್ಬರು ವಾಚರ್ಗಳಿಗೆ ಹಾಕುತ್ತಲೇ ಇದ್ದೆವು. ಅವರು ಅಷ್ಟೇ ಸಮಾಧಾನದಿಂದ ಉತ್ತರಿಸುತ್ತಿದ್ದರು. ಅವರು ತೋರಿಸಿದ ಗುಡ್ಡ, ಗುಹೆಗಳತ್ತಲೇ ನಮ್ಮ ಒಂದು ದೃಷ್ಟಿ ಸದಾ ನೆಟ್ಟಿರುತ್ತಿತ್ತು.
ಕೊಂಚ ಗಿಡಮರಗಳವು. ಅಲ್ಲಲ್ಲಿ ಕರಡಿಗಳು ಮಲ-ಮೂತ್ರ ಮಾಡಿದ್ದನ್ನು ವಾಚರ್ತೋರಿಸುತ್ತಿದ್ದರು. ಅದನ್ನು ನೋಡಿದ ನಮ್ಮಲ್ಲಿ ಕುತೂಹಲವೂ, ಆಂತಕವೂ ಒಟ್ಟೊಟ್ಟಿಗೆ ಆಗುತ್ತಿತ್ತು.
ಹಸಿರು ಹೊದ್ದಿದ್ದ ಕಾಡು..!
“ಈ ವರ್ಷ ಮಳೆನೇ ಇಲ್ಲ. ಇಡೀ ಕಾಡು ಬಾಡಿ, ರೌರವವಾಗಿ, ಚಾರಣ ಹೈರಾಣವಾಗುವುದು ಪಕ್ಕಾ..’ ಎಂದುಕೊಂಡು ಹೊರಟ ನಮಗೆ ಅಚ್ಚರಿ ಕಾದಿತ್ತು! ಕಾಡು ಸೀಳಿಕೊಂಡು ಹೋದಂತೆ ಮಳೆ ಕೊರತೆ ಮಧ್ಯೆಯೂ ಕಣ್ಣು ಕೊರೈಸುವ ದಟ್ಟ ಹಸಿರು, ತಂಪು ಇತ್ತು. ಒಮ್ಮೆಮ್ಮೆಯಂತೂ ಮಲೆನಾಡಿನ ಕಾನನ
ಹೊಕ್ಕಂತೆ ಭಾಸವಾಗುತ್ತಿತ್ತು. ಹಳ್ಳ-ಕೊಳ್ಳಗಳಲ್ಲಿ, ವಿಶಾಲ ಬಂಡೆಗಳ ಮೇಲೆ ಮಳೆ ನೀರು ಸಂಗ್ರಹವಾಗಿದ್ದು, ಅಲಲ್ಲಿ ಕಮಲಗಳು ಅರಳಿದ್ದು ಅಚ್ಚರಿ ತಂದಿತು. “ಹಂದಿ ಡೋಣಿ’ ಎಂಬ ಬಂಡೆಯಲ್ಲಿನ ಹೊಂಡದಲ್ಲಂತೂ ನೀರು ಭರ್ತಿ ಆಗಿತ್ತು. “ಒಮ್ಮೆ ಕಾಡು ಹಂದಿ ಇದರಲ್ಲಿ ನೀರು ಕುಡಿಯಲು ಹೋಗಿ, ಬಿದ್ದು ಸತ್ತಿತ್ತೆಂದು, ಅಂದಿನಿಂದ ಇದಕ್ಕೆ ಹಂದಿ ಡೋಣಿ ಎಂಬ ಹೆಸರು ಬಿದ್ದಿತೆಂದು…’ ವಾಚರ್ ಪಾಲಯ್ಯ ತಿಳಿಸಿದರು.
ಜೋಡಿ ಕಲ್ಲು ಮೋಡಿ ನೋಟ…
ಕರಡಿ ಧಾಮಕ್ಕೆ ಬರುವವರು ತಪ್ಪದೇ ಭೇಟಿ ನೀಡುವುದು ಅಂದಾಜು 16 ಅಡಿ ಎತ್ತರ ಇರುವ ಈ ಜೋಡಿಕಲ್ಲುಗೆ. ಸ್ಥಳೀಯರು ಇದನ್ನು ಡಕ್ಕಲು ಗುಂಡು ಎನ್ನುತ್ತಾರೆ. ಸಂಪೂರ್ಣ ಹಿಟ್ಟು ಕಲ್ಲು, ಉಬ್ಬುತಗ್ಗುಗಳಿಂದ ಕೂಡಿದ್ದು, ಅತ್ಯಂತ ಸುಂದರ,ಆಕರ್ಷಕವಾಗಿವೆ. ಇದನ್ನು ಸ್ಪರ್ಶಿಸಿದರೆ ಚಿಕ್ಕ ಚಿಕ್ಕ ಮರಳಿನಕಲ್ಲುಗಳು ಹಾಗೆ ಉದುರುತ್ತವೆ. “ಗಂಧದ ಗುಡಿ’ ಸಾಕ್ಷ್ಯಚಿತ್ರ ನಿರ್ಮಿಸುವ ಕಾಲಕ್ಕೆ ನಟ ದಿ.ಪುನೀತ್ ರಾಜಕುಮಾರ್, ವನ್ಯ ಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ ರಿಷಭ್ ಶೆಟ್ಟಿ
ಇಲ್ಲಿಗೆ ಭೇಟಿ ನೀಡಿ ಈ ಕಲ್ಲುಗಳ ವಿನ್ಯಾಸ ನೋಡಿ ಅಚ್ಚರಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕುರುಚಲು ಕಾಡು. ಆದರೆ ಇಲ್ಲಿ ಕಾಡು ಹಣ್ಣು, ಔಷಧಿ ಗುಣಗಳುಳ್ಳ ಮರಗಿಡಗಳಿಗೆ ಬರವಿಲ್ಲ. ದಾರಿ ಉದ್ದಕ್ಕೂ ಸಿಕ್ಕ ಲೇಬಿ, ಮುಂಗಾರಿ, ಕೊಡಚಿ, ಅಂದಾವರ, ಲೇಬಿ, ಬರಗಿ,ದೇವದಾರಿ ಹಣ್ಣು, ಉಲುಪಿ.. ಹೀಗೆ ಸಾಕಷ್ಟು ಮರಗಳ ಬಗ್ಗೆ ತಂಡದಲ್ಲಿ ಬಲ್ಲವರು, ವಾಚರ್ಗಳು
ಪರಿಚಯಿಸಿದರು. ಇಂತಹವುಗಳನ್ನು ಮುಟ್ಟಿ, ಮೂಸಿ, ರುಚಿ ನೋಡಿ ಜ್ಞಾನ ಪಡೆದೆವು. ಮನೋಲ್ಲಾಸದ ಜೊತೆಗೆ ಸಸ್ಯ ಸಂಪತ್ತಿನ ಜ್ಞಾನ ನೀಡಿತ್ತು ಚಾರಣ.
ಅನುಭವದ ಬುತ್ತಿ ಸೇರಿದ ಚಾರಣ:
ಸಂಜೆ ಹೊತ್ತಿಗೆ ಕರಡಿಗಳು ಗುಡ್ಡದಿಂದ ಇಳಿಯಬಹುದೆಂದು ಆಸೆಗಣ್ಣಿನಿಂದ ಕಾದು ಕುಳಿತಿದ್ದೆವು. “ನೀವು ಮುರ್ನಾಲ್ಕು ಕಿ. ಮೀ ವಾಪಾಸು ನಡೆದು ಮುಖ್ಯ ರಸ್ತೆ ತಲುಪಬೇಕು. ಕತ್ತಲುಕವಿಯುವ ಹೊತ್ತಿಗೆ ಕಾಡು ಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಕರಡಿಗಳಿಂದ ಅಪಾಯ..’ ಎಂದರು ವಾಚರ್ ಮಂಜು, ಮಲ್ಲೇಶ್. ಹೀಗಾಗಿ ನಾವು ಕಾಡಿಗೆ ಬೆನ್ನು ಮಾಡಿದೆವು. ಹೋಗಿದ್ದು ಒಂದು ದಾರಿ ಮರಳಿದ್ದು ಮತ್ತೂಂದು ದಾರಿಯಲ್ಲಿ. ಈ ಹಾದಿ ಸಹ ಹಿತವಾಗಿತ್ತು. ಸರ್ವೋದಯ ಶಾಲೆಗೆ ಸೇರಿದ ಜಮೀನಿನಲ್ಲಿರುವ ಕಲ್ಲು ಕಟ್ಟಡದ ಬಾವಿಗಳನ್ನು ನೋಡುವ ಮೂಲಕ ಚಾರಣಕ್ಕೆ ತೆರೆ ಎಳೆದೆವು. “ಕರಡಿ ಸಿಗದಿದ್ದರೇನಂತೆ. ಅವನ್ನ ಝೂಗೆ ಹೋಗಿ ನೋಡಬಹುದು, ಆದರೆ ಇದು ಬರೀ ಕುರುಚಲು ಕಾಡಲ್ಲ. ಪ್ರಾಕೃತಿಕವಾಗಿ ಇದೂ ಶ್ರೀಮಂತವಾಗಿದೆ ಎಂಬ ತಥ್ಯ-ಸತ್ಯ ನಮಗೆ ಮನನವಾಗಿತು..’ ಅಂತಾ ಚಾರಣ ಶ್ರೀನಿವಾಸ್ ಅಂದಿದ್ದಕ್ಕೆ ಮಿಕ್ಕವರು “ಹೌದೌ…ದು’ ಎಂದರು.
-ಸ್ವರೂಪಾನಂದ ಕೊಟ್ಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.