Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…
Team Udayavani, Jul 1, 2024, 1:41 PM IST
ಮಲೆನಾಡು ಸೀಮೆಯಲ್ಲಿ ಮಳೆಗಾಲದಲ್ಲಿ ಚಾರಣ (Trekking) ಮಾಡಬೇಕೆಂಬುದು ಹಲವರ ಆಸೆ, ಕನಸು. ಆದರೆ ಚಾರಣ ಮಾಡುವುದೆಂದರೆ ಸುಮ್ಮನೇ ಗುಡ್ಡ ಹತ್ತಿ ಇಳಿಯುವುದಲ್ಲ. ಅದಕ್ಕೊಂದು ಮಾನಸಿಕ-ದೈಹಿಕ ಸ್ಥಿರತೆ ಬೇಕು. ಶಿಸ್ತು ಬೇಕು. ಪೂರ್ವತಯಾರಿಯೊಂದಿಗೆ ಹೆಜ್ಜೆಯಿಟ್ಟಾಗ ಮಾತ್ರ, ಚಾರಣ ಸ್ಮರಣೀಯವಾಗಬಲ್ಲದು…
ಮಳೆಗಾಲ-ಮಲೆನಾಡು ಪರ್ಫೆಕ್ಟ್ ಕಾಂಬಿನೇಷನ್! ಮಳೆಗಾಲದಲ್ಲಿ ಮಲೆನಾಡು, ಇರುವುದಕ್ಕಿಂತ ದುಪ್ಪಟ್ಟು ಸುಂದರವಾಗಿ ಕಾಣಿಸುತ್ತದೆ. ನಿರಂತರವಾಗಿ ಸುರಿಯುವ ಜಡಿ ಮಳೆ, ಹಗಲು-ರಾತ್ರಿಗೆ ಹೆಚ್ಚು ವ್ಯತ್ಯಾಸ ಎನಿಸದ ಮಬ್ಬು ಕತ್ತಲೆ, ಹೊರಗೆ ಕಾಲಿಡಲು ಥಂಡಿ, ಇಂಬಳ, ಚಕ್ರದ ಹುಳ, ಬಸವನಹುಳಗಳಂತಹ ಅತಿಥಿಗಳ ಆಗಮನ, ಎತ್ತ ನೋಡಿದರೂ ಹಸಿರು, ಸಂಜೆ ಆಗುತ್ತಿದ್ದಂತೆ ಜಿಂವ್ ಗುಡುವ ಜೀರುಂಡೆಗಳು, ಮರಗಳಿಂದ ತೊಟ್ಟಿಕ್ಕುವ ಮಳೆಯ ಹನಿಗಳ ಸದ್ದು, ಮಳೆಗಾಲದಲ್ಲಿ ಸೃಷ್ಟಿಯಾಗುವ ಸುಂದರ ಜಲಪಾತ ಗಳು- ಮಲೆನಾಡೆಂದರೆ ಅದು ಅಪ್ಪಟ ಸ್ವರ್ಗ! ಬೆಂಕಿಯ ಒಲೆಯ ಮುಂದೆ ಕೂತರೆ ಸಾಕು, ಎದ್ದೇಳಲು ಮನಸ್ಸು ಬಾರದು, ಲೋಟದ ಮೇಲೆ ಲೋಟ ಬಿಸಿ ಬಿಸಿ ಕಾಫಿ ಗಂಟಲಿಗೆ ಆಹಾರವಾದರೆ ಜೊತೆಗೆ ಹಲಸಿನ ಕಾಯಿಯ ಹಪ್ಪಳ, ಚಿಪ್ಸ್, ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜ, ಕಾಲಕ್ಕೆ ತಕ್ಕ ಹಾಗೆ ದೊರೆಯುವ ಕಳಲೆ, ಹಲಸು, ಪತ್ರೊಡೆಗಳಂತಹ ಖಾದ್ಯಗಳು ಆಹಾ ಎನಿಸುವಂತೆ ಮಾಡುವುದು ಸುಳ್ಳಲ್ಲ! ಇಂಥ ಮಳೆಗಾಲವನ್ನು ಬರಿದೆ ಆಸ್ವಾದಿಸುವ ಬದಲು ಪ್ರಕೃತಿಯ ಮಡಿಲಿನಲ್ಲಿ ಸವಿದರೆ..? ನೀವು ಸಾಹಸಿಗರಾಗಿದ್ದರೆ, ಚಾರಣ ಪ್ರಿಯರಾಗಿದ್ದರೆ, ಟ್ರೆಕ್ಕಿಂಗ್ ಫ್ರೀಕ್ ಎನ್ನುವ ಹಾಗೆ ಅಪರಿಮಿತ ಆಸಕ್ತಿ ನಿಮಗಿದ್ದರೆ ಮಳೆಗಾಲದ ಚಾರಣದ ಸವಿ ನಿಮಗರಿವಿರುತ್ತದೆ. ಇಲ್ಲದೇ ಹೋದರೆ ನೀವು ಈಗಾಗಲೇ ಬೇರೆ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಜಾಗಗಳಿಗೆ ಹೋಗಬೇಕೆಂದು ಯೋಚಿಸಿ ಹೊರಟಿರಬಹುದು. ಆದರೆ ಅದಕ್ಕೂ ಮೊದಲು ನೀವು ಅನೇಕ ವಿಷಯಗಳನ್ನು ಗಮನಿಸಬೇಕು.
ನೀವು ಚಾರಣಕ್ಕೆ ಹೊರಡುವ ಮೊದಲೇ ಅಧಿಕೃತ ಗುರುತಿನ ಚೀಟಿಯನ್ನು ನೀಡಿ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಮಳೆಗಾಲವಾದ್ದರಿಂದ ಬೆಳಗ್ಗೆ ಸುಮಾರು 8 ಗಂಟೆಯ ನಂತರ ಚಾರಣ ಆರಂಭಿಸಬಹುದು. ಇಂಬಳಗಳು ನಿಮ್ಮನ್ನು ಅತೀವವಾಗಿ ಪ್ರೀತಿಸುತ್ತವೆಯಾದ್ದರಿಂದ ಮುಂಜಾಗರೂಕತೆ ಬೇಕು. ಬೇವಿನ ಎಣ್ಣೆ, ಡೆಟಾಲ್, ನಶ್ಯದ ಪುಡಿ ನಿಮ್ಮನ್ನು ಇಂಬಳಗಳ ಕಾಟದಿಂದ ರಕ್ಷಿಸಬಲ್ಲದು. ಮಳೆಯಿಂದ ರಕ್ಷಣೆ ಪಡೆಯಲು ಕೋಟ್ ಅತ್ಯಗತ್ಯ. ಅಲ್ಲಿನ ಗಾಳಿಗೆ ಛತ್ರಿ ಉಪಯೋಗಕ್ಕೆ ಬಾರದು. ಚಳಿ-ಗಾಳಿಯನ್ನು ತಡೆದುಕೊಳ್ಳಲು ಅಸಾಧ್ಯವೆಂದಾದರೆ ಕಿವಿಗೆ ಹತ್ತಿ ಇಟ್ಟುಕೊಳ್ಳಬಹುದು. ಜೊತೆಗೆ ಬೇಗ ಒಣಗುವ, ಕ್ರೀಡೆಗೆ ಬಳಸಬಹುದಾದ ಬಟ್ಟೆಗಳನ್ನು ಧರಿಸುವುದು ಉತ್ತಮ. ಉತ್ತಮ ಗುಣಮಟ್ಟದ, ಜಾರದೆ ಇರುವ ಶೂಗಳನ್ನು ಧರಿಸಿ ಚಾರಣ ಪ್ರಾರಂಭಿಸಿ.
ಈಗೀಗಂತೂ ಚಾರಣದ ಹೆಸರಿನಲ್ಲಿ ಪ್ಲಾಸ್ಟಿಕ್ ಅಥವಾ ತ್ಯಾಜ್ಯಗಳನ್ನು ತೆಗೆದುಕೊಂಡು ಹೋಗಿ ಪರಿಸರಕ್ಕೆ ಸುರಿಯುವವರ ಸಂಖ್ಯೆ ಹೆಚ್ಚು, ಅಲ್ಲಲ್ಲೇ ಬಿಸಾಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರವನ್ನು ಹಾಳುಗೆಡವುತ್ತದೆ ಎನ್ನುವ ಸಾಮಾನ್ಯ ಅಂದಾಜೂ ಇಲ್ಲದ ನಾಗರೀಕ ಸಮಾಜ ಅದನ್ನೆತ್ತಿಕೊಂಡು ಅಲ್ಲೇ ಬಿಟ್ಟು ಬರುವುದು ಅಕ್ಷಮ್ಯ. ಟ್ರೆಕಿಂಗ್ ಪೋಲ್ ಅಥವಾ ಮರದ ಕೋಲುಗಳನ್ನು ಬಳಸಿ ಚಾರಣ ಮಾಡುವುದು ಉತ್ತಮ. ಸರಿಯಾದ ಗ್ರಿಪ್ ಇಲ್ಲದ ಶೂ ಧರಿಸದೇ ಸಾಧಾರಣ ಚಪ್ಪಲಿಗಳನ್ನು ಹಾಕಿಕೊಂಡು ಚಾರಣ ಮಾಡುವ ಸಾಹಸ ನಿಮ್ಮ ದೇಹಕ್ಕೆ ಘಾಸಿ ಮಾಡುವ ಸಾಧ್ಯತೆ ಹೆಚ್ಚು.
ಈಗ ಮಳೆಗಾಲವಾದ್ದರಿಂದ ಚಾರಣ ಮಾಡುವಾಗ ಜಾರುವ ಮಣ್ಣಿನ ಮೇಲೆ ಕಾಲಿಡುವ ಬದಲು ಹುಲ್ಲಿನ ಮೇಲೆ ನಡೆಯುವುದರಿಂದ ಜಾರಿ ಬೀಳುವ ಅಪಾಯದಿಂದ ಪಾರಾಗಬಹುದು.
ವಾರಾಂತ್ಯ ಎಂದರೆ ವೀಕೆಂಡ್ ಗೇಟ್ ವೇ ಎಂದು ತಿಳಿದು ರೆಸಾರ್ಟ್‌ಗಳಿಗೆ ಹೋಗಿ ಮೋಜು ಮಸ್ತಿ ಮಾಡುವ ವರ್ಗವೊಂದಿದೆ. ಈಗ ಅದರ ವ್ಯಾಪ್ತಿ ಮುಂದೆ ಹೋಗಿ ಟ್ರಿಪ್ ಹೆಸರಲ್ಲಿ ಚಾರಣ ಹೋಗುವ, ಅಲ್ಲೇ ಪಾರ್ಟಿ ಮಾಡಿ ಬರೋಣ ಎನ್ನುವ ಮನಸ್ಥಿತಿ ಅನಾಹುತಕ್ಕೆ ಎಡೆ ಮಾಡುತ್ತದೆ. ಮೊದಲನೆಯದಾಗಿ ಪರಿಸರ ಹಾಳಾಗುವಂತೆ ಅಲ್ಲೇ ಕುಡಿದ, ತಿಂದ ತ್ಯಾಜ್ಯಗಳನ್ನು ಬಿಸಾಕುವುದು. ಮತ್ತೂಂದು, ದೇಹದ ಸ್ಥಿತಿಯ ಬಗ್ಗೆ ಅರಿವಿಲ್ಲದೇ ಚಾರಣ ಮಾಡಲು ಹೋಗಿ ಅವಘಡಗಳಾಗುವ ಸಾಧ್ಯತೆಗಳು. ಹಾಗಾಗಿ ಚಾರಣ ಮಾಡುವುದಾದರೆ ಅದಕ್ಕೆ ತಕ್ಕದಾದ ಮನಸ್ಥಿತಿ ಮತ್ತು ತಯಾರಿ ಮಾಡಿಕೊಳ್ಳಬೇಕು.
ಚಾರಣ ಅಪಾರವಾದ ದೈಹಿಕ ಕ್ಷಮತೆಯನ್ನು ಬೇಡುತ್ತದೆ. ಸುಮ್ಮನೆ ಗುಡ್ಡ ಹತ್ತಿ ಇಳಿಯುವುದಲ್ಲ. ಹೆಚ್ಚು ದೂರ ಕ್ರಮಿಸಬೇಕಾಗುವ ಚಾರಣದಲ್ಲಿ ಅಭ್ಯಾಸವಿಲ್ಲದೆ ಹೋದರೆ ಫಜೀತಿ ಪಡಬೇಕಾಗುತ್ತದೆ. ಈಗಾಗಲೇ ವಾಕಿಂಗ್ ಅಥವಾ ಜಾಗಿಂಗ್ ಮಾಡುವ ಅಭ್ಯಾಸ ಇರಬೇಕಾಗುತ್ತದೆ. ಇಲ್ಲದೆ ಹೋದರೆ ಚಾರಣಕ್ಕೂ ಕೆಲವು ತಿಂಗಳುಗಳ ಮೊದಲು ಜಿಮ್, ಯೋಗ ಅಥವಾ ಬಿರುಸು ನಡಿಗೆ ಮುಂತಾದವುಗಳನ್ನು ಅಭ್ಯಾಸ ಮಾಡಿ.
ಚಾರಣವೆಂದರೆ ಮೋಜಲ್ಲ. ಅದೊಂದು ಶಿಸ್ತು ಬೇಡುವ ಪ್ರಕ್ರಿಯೆ. ಬೆಳಗ್ಗೆ ಬೇಗ ಎದ್ದು ಹೊರಡುವ ತಯಾರಿಯಿಂದ ಹಿಡಿದು ಎಲ್ಲವೂ ಶಿಸ್ತುಬದ್ಧವಾಗಿರಬೇಕು. ಚಾರಣದ ಮೊದಲ ದಿನ ತುಂಬಾ ದಣಿಯದಂತೆ ನೋಡಿಕೊಳ್ಳಿ. ಬೆಳಗ್ಗೆ ಬೇಗ ಎದ್ದು ಅಭ್ಯಾಸವಿಲ್ಲದಿದ್ದರೆ ಅದು ನಿಮಗೆ ತಲೆನೋವು ಮುಂತಾದ ಸಮಸ್ಯೆಗಳನ್ನು ತರುತ್ತದೆ. ಎದ್ದ ಕೂಡಲೇ ಬಿಸಿನೀರು ಕುಡಿಯುವ ಕ್ರಮ ಅನುಸರಿಸಿ.
ಚೆಂದದ ಟ್ರೆಕಿಂಗ್ ಮಾಡಿದ ಮೇಲೆ ಒಳ್ಳೆಯ ಫೋಟೋಸ್, ವಿಡಿಯೋ ಹಾಕದೆ ಇದ್ದರೆ ಹೇಗೆ? ಹಾಗೆಂದುಕೊಂಡು ಅಪಾಯಕಾರಿ ಸ್ಥಳಗಳಿಗೆ ತೆರಳಿ ಫೋಟೋ ಅಥವಾ ವಿಡಿಯೋ ತೆಗೆಯುವ ಸಾಹಸಕ್ಕೆ ಕೈ ಹಾಕಬೇಡಿ. ಸಾಧ್ಯವಾದಷ್ಟೂ ಜಾಗ್ರತೆ ವಹಿಸಿ.
ದೂರದ ಜಾಗದಲ್ಲಿ ನೆಟ್‌ವರ್ಕ್ ಸಿಗದೇ ಇರಬಹುದು. ಮೊದಲೇ ನಿಮ್ಮವರಿಗೆ ನೀವು ತೆರಳುವ ಜಾಗದ ಬಗ್ಗೆ ಮಾಹಿತಿ ನೀಡಿ, ಚಾರ್ಜರ್ ಅಲ್ಲದೆ ಪವರ್ ಬ್ಯಾಂಕ್ ಮುಂತಾದ ಪರಿಕರಗಳನ್ನು ತೆಗೆದುಕೊಂಡು ಹೋಗಿ.
ನೀವು ತೆರಳಿದ ಜಾಗದಲ್ಲಿನ ಗೈಡ್, ಸೆಕ್ಯೂರಿಟಿ ಮುಂತಾದವರ ನಂಬರ್ ತೆಗೆದುಕೊಳ್ಳಿ. ಮುಖ್ಯವಾಗಿ ಗುಂಪಿನಲ್ಲಿ ಹೋಗಿದ್ದರೆ, ಗುಂಪನ್ನು ಬಿಟ್ಟು ಬೇರೆ ಕಡೆ ಹೋಗುವುದು ಅಥವಾ ಫೋಟೋ, ವಿಡಿಯೋ ಮಾಡುತ್ತಾ ಹಿಂದೆ ಉಳಿಯುವುದನ್ನು ತಪ್ಪಿಸಿ. ಕೊನೆಯದಾಗಿ, ನೀವು ಹೋಗುವುದು ಪ್ರಕೃತಿಯನ್ನು ಆಸ್ವಾದಿಸಲು. ನಾಗರೀಕರಾಗಿ ವರ್ತಿಸಿ ಮತ್ತು ಪ್ರಕೃತಿಯನ್ನು ರಕ್ಷಿಸಿ.
-ಶ್ವೇತಾ ಭಿಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.