Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!
Team Udayavani, Apr 14, 2024, 4:40 PM IST
ಹವ್ಯಾಸಿ ಫೋಟೋಗ್ರಫಿ ಗೆಳೆಯ ಅಂದಾನಗೌಡ, ಕಿರುಚಿತ್ರಗಳ ಕ್ಯಾಮೆರಾಮನ್ ಆಗಿರುವ (ಪಟಾಕಿ) ಬಸು ಅದೊಂದು ರಾತ್ರಿ ಫೋನ್ ಮಾಡಿ- “ಗದಗ ಹತ್ತಿರ ಮಾಗಡಿ ಪಕ್ಷಿಧಾಮದ ಕೆರೆಗೆ ಹೋಗಿಬರೋಣ’ ಅಂದರು. ಮುಂದಿನ ಎರಡು ದಿನ ಸರ್ಕಾರಿ ರಜೆಗಳಿದ್ದವು. ನಾನೂ ತಯಾರಾದೆ. ಬೆಳೆಗ್ಗೆ ಐದಕ್ಕೆಲ್ಲಾ ಎಲ್ಲರೂ ಕ್ಯಾಮೆರಾಗಳೊಂದಿಗೆ ಹೊರಟು, ಸೂರ್ಯೋದಯದ ಹೊತ್ತಿಗೆ ಮಾಗಡಿ ಕೆರೆಯ ಮುಂದಿದ್ದೆವು.
ಚಳಿಗಾಲದ ಅತಿಥಿ ವಲಸೆ ಪಕ್ಷಿಗಳಾದ ಪಟ್ಟೆತಲೆ ಬಾತು, ಬ್ರಾಹ್ಮಿಣಿ ಡೆಕ್, ಬ್ಲಾಕ್ ಐಬಿಸ್, ರೆಡ್ ಥಾರ್ಟ್, ಪೇಂಟೆಡ್ ಸ್ಟಾರ್ಕ್… ಹೀಗೆ ಸಾವಿರಾರು ಕಿಲೋಮೀಟರ್ ದೂರದ ಮಂಗೋಲಿಯಾ, ಸೈಬೀರಿಯಾ, ಟಿಬೆಟ್, ಉತ್ತರ ಭಾರತದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಬದುವ ಪಕ್ಷಿಗಳು ಇಡೀ ಕೆರೆಯಲ್ಲಿ ಕಲರವ ತುಂಬಿ ಹರಟುತ್ತಾ, ಹಾರಾಡುತ್ತಾ ರೆಕ್ಕೆಯಲ್ಲೇ ಚಿತ್ತಾರ ಬರೆದು ನೀಲಾಕಾಶಕ್ಕೆ ರಂಗು ತುಂಬುತ್ತವೆ. ಅವುಗಳ ಫೋಟೋ ತೆಗೆಯುವುದು ಒಂದು ಖುಷಿಯಾದರೆ, ಅವುಗಳನ್ನು ನೋಡುತ್ತಾ ಕೂಡುವುದು ಇನ್ನೊಂದು ಥರದ ಖುಷಿ. ಇದನ್ನು ಮುಗಿಸಿಕೊಂಡು ವಾಪಸ್ ಹೋಗುವಾಗ ಐತಿಹಾಸಿಕ ಸ್ಥಳ ಡಂಬಳದ ಸ್ಮಾರಕಗಳನ್ನು ನೋಡಬಹುದೇನೋ ಅಂದುಕೊಂಡೆ. ಕೊನೆ ಕ್ಷಣದಲ್ಲಿ-“ಇನ್ನು ಒಂದೇ ತಾಸು ಹುಬ್ಬಳ್ಳಿ, ಹುಬ್ಬಳ್ಳಿ ದಾಟಿದರೆ ದಟ್ಟ ಕಾಡು, ಅದನ್ನು ದಾಟಿದರೆ ಅಲ್ಲೊಂದು ಫಾಲ್ಸ್ ಇದೆ. ನೋಡ್ಕಂಡ್ ಬರೋಣ’ ಅಂದರು. ಕೊನೆಪಕ್ಷ ರಾತ್ರಿಯೊಳಗೆ ನನ್ನೂರು ಕೊಪ್ಪಳ ಸೇರುತ್ತೇನೆಂಬ ಭರವಸೆಯಿಂದ “ಸರಿ’ ಎಂದೆ.
ಹಾಗಾಗಲಿಲ್ಲ!
ಹುಬ್ಬಳ್ಳಿ ದಾಟಿದ ನಂತರ ದಾರಿ ಮಧ್ಯೆ ಒಂದು ದಟ್ಟ ಕಾಡು, ಫ್ರೈ ಕ್ಯಾಚರ್ ಹಾಗೂ ಇತರೆ ವಿವಿಧ ಪಕ್ಷಿಗಳ ಸೆರೆ. ಆ ಕಾಡೊಳಗೊಂದು ಹರಿವ ಸಣ್ಣ ತೊರೆ. ನಂತರ ಸಿದ್ದಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ “ಬುರುಡೆ ಫಾಲ್ಸ್’ ಕಡೆ ಸ್ಟೇರಿಂಗ್ ತಿರುಗಿಸಿದರು. ಅದು, ಟ್ರಕ್ಕಿಂಗ್ ಮಾಡುವವರಿಗೆ ಮತ್ತು ದಟ್ಟ ಕಾನನದಲ್ಲಿ ತಿರುಗುವ ಹವ್ಯಾಸಿಗರಿಗೆ ಹೇಳಿ ಮಾಡಿಸಿದಂಥ ಸ್ಥಳ. ಅಕ್ಟೋಬರ್‌ನಿಂದ ಜನವರಿ ತಿಂಗಳ ಮಧ್ಯೆ ವೀಕ್ಷಿಸಲು ಸೂಕ್ತ ಸ್ಥಳವಿದು. ಅಲ್ಲೆಲ್ಲಾ ಸ್ವೇಚ್ಛೆಯಿಂದ ತಿರುಗಾಡಿ ಸಂಜೆ ರಸ್ತೆಗೆ ಬಂದರೆ ನೆಟÌರ್ಕ್ ಇಲ್ಲ. ಹಾಗಾಗಿ ಯಾರಿಗೂ ಫೋನೂ ಇಲ್ಲ, ಮೆಸೇಜೂ ಇಲ್ಲ.
ಗೋವಾಕ್ಕೆ ಹೋಗ್ತಿದೀವಿ..!
ಅಲ್ಲಿಗೆ ನಿಕ್ಕಿಯಾಯಿತು. ಇವರು ಇವತ್ತೇ ವಾಪಸ್ ಹೊರಡೋದು ಡೌಟು ಅಂತ. ಸೀರಿಯಸ್ಸಾಗಿ ಗದರಿಸಿ- “ಕರೆಕ್ಟಾಗಿ ಹೇಳ್ರೋ, ಎಲ್ಲಿಗೆ ಹೊಂಟೀರಿ?!’ ಅಂದರೆ, ಕಿಸಕ್ಕನೇ ನಕ್ಕು, ಇನ್ನೇನು ಭಾಳ ದೂರಿಲ್ಲ ದೋಸ್ತಾ, ನಾವೀಗ ಹೊರಟಿರೋದು ಗೋವಾಕ್ಕೆ ಅಂದರು ನೋಡಿ… ಮನೆಯಲ್ಲಿ ಸಂಜೆಗೆ ವಾಪಸ್ ಬರುವುದಾಗಿ ಹೇಳಿದ್ದು ಬಿಟ್ಟರೆ, ದಾರಿ ಮಧ್ಯೆ ಒಂದು ಕರೆ ಕೂಡ ಮಾಡಿಲ್ಲ. ಬಟ್ಟೆ ಬರೆ, ಕೊನೆಗೆ ಕ್ಯಾಮೆರಾ ಬಿಟ್ಟು ಒಂದು ಟವೆಲ್ಲೂ ಇಲ್ಲ. ನಿತ್ಯ ತೆಗೆದುಕೊಳ್ಳುವ ಟ್ಯಾಬ್ಲೆಟ್ಸೋ ಇಲ್ಲ.
ಆದದ್ದಾಗಲಿ ಎಂದು ಹೊರಟು ಗೋವಾ ತಲುಪಿದಾಗ ಮಧ್ಯರಾತ್ರಿ. ಗೋವಾದಲ್ಲಿ ಜಗತ್ತು ತೆರೆದುಕೊಳ್ಳುವುದೇ ರಾತ್ರಿ ಹನ್ನೊಂದು ಗಂಟೆ ನಂತರ. ಬೆಳಗಿನ ಜಾವದ ತನಕ ಜಗಮಗಿಸುವ ದೀಪಗಳ ದಾರಿಯಲ್ಲಿ ಸುತ್ತರಿದು ಬೆಳಿಗ್ಗೆ ಎದ್ದವರೆ ಮಡಗಾವ್ ಬೀಚಲ್ಲಿ ಮರಳಲ್ಲಿ ಸಾಗುತ್ತಾ ನೋಡುತ್ತಿದ್ದರೆ, ಸಮುದ್ರದ ಅಲೆಗಳಿಗೆ ಮೈಯೊಡ್ಡಿ ನಿಂತ ಪುಟ್ಟ ಮಕ್ಕಳಿಂದ ಹಿಡಿದು, ಹರೆಯದ, ಮಧ್ಯ ವಯಸ್ಕ ಮತ್ತು ಬಿಳಿ ತಲೆವರೆಗಿನವರ ಮನೋರಂಜನೆಯ ಚಿತ್ರಣ…
ಮರೆಯಲಾಗದ ಚಿತ್ರಗಳು
ದಡಕ್ಕಪ್ಪಳಿಸುವ ಅಲೆಗಳ ಸದ್ದು, ಅಲೆ ಸವರಿ ಹೋದ ನುಣುಪು ಮಣ್ಣಲ್ಲಿ ಹೆಸರು ಬರೆದು ಸಂಭ್ರಮಿಸುವ ಪ್ರೇಮಿಗಳ ಖುಷಿ. ಎಪ್ಪತ್ತು ದಾಟಿದರೂ ಜೊತೆಗೆ ಕೈ ಹಿಡಿದು ನಡೆವ ವೃದ್ಧ ದಂಪತಿಗಳು, ಈಗಷ್ಟೇ ಹರೆಯ ಉಕ್ಕುವ ಹುಡುಗಿಯರ ಸೆಲ್ಫಿ ನಗು, ರಂಗೀಲಾ ಸಿನಿಮಾದ ಊರ್ಮಿಳಾಳಂತೆ ಚಲ್ ಮೇರೆ ಸಂಗ್ ಸಂಗ್ ಎನ್ನುವಂತೆ ಕುಣಿಯುವ ಬಾಲೆ… ಹೀಗೆ ಎಲ್ಲ ಚಿತ್ರಗಳನ್ನೂ ಸೆರೆಹಿಡಿದೆವು.
ತಂದೆಯೊಬ್ಬ- ಸಮುದ್ರದ ಅಲೆಗಳನ್ನು ಧೈರ್ಯವಾಗಿ ಎದುರಿಸು ಎಂದು ಮಗಳಿಗೆ ಪದೇಪದೇ ಹೇಳುತ್ತಾ ಅವಳನ್ನು ದಡದಲ್ಲಿ ನಿಲ್ಲಿಸುತ್ತಿದ್ದ. ಅಲೆಗಳು ಅಬ್ಬರದಿಂದ ಹತ್ತಿರ ಬರುತ್ತಿದ್ದಂತೆಯೇ ಮೂರ್ನಾಲ್ಕು ವರ್ಷ ವಯಸ್ಸಿನ ಆ ಬಾಲೆ ಕಿಟಾರನೆ ಕಿರುಚುತ್ತಾ ತಂದೆಯಬಳಿಗೆ ಓಡೋಡಿ ಬರುತ್ತಿದ್ದಳು. ಇನ್ನೊಂದೆಡೆ, ಸಿಖ್ ಸಮುದಾಯದ ನಾಲ್ಕೈದು ವರ್ಷದ ಬಾಲಕ, ರಭಸದಿಂದ ದಡಕ್ಕೆ ಅಪ್ಪಳಿಸುವ ಅಲೆಗಳಿಂದ ನೀರು ತುಂಬಿಕೊಳ್ಳಲು ಕೈಯಲ್ಲಿ ಜಗ್ಗು ಹಿಡಿದು ನಿಲ್ಲುವುದು, ಅಲೆಗಳ ಶಬ್ಧಕ್ಕೆ ಬೆಚ್ಚಿ ಓಡಿ ಬರುವುದು ಮಾಡುತ್ತಿದ್ದ. ಈ ಚಿತ್ರಗಳು, ಬದುಕಿನ ವೈರುಧ್ಯಗಳು, ಆಕಸ್ಮಿಕಗಳನ್ನು ಎದುರಿಸಲು ನಮ್ಮನ್ನು ಎಚ್ಚರಿಸುವಂತಿದ್ದವು.
ಆಕಸ್ಮಿಕವಾಗಿ ಹೋಗಿಬರುವ ಪ್ರವಾಸಗಳು ನೀಡುವ ಅಚ್ಚರಿ ಮತ್ತು ಕೊಡುವ ಖುಷಿ ಸದಾಕಾಲ ನೆನಪಲ್ಲಿ ಉಳಿಯುತ್ತವೆ ಮತ್ತು ಹೇಳದೆ ಕರೆದುಕೊಂಡು ಹೋದ ಗೆಳೆಯರನ್ನು ನೆನಪಿಸುತ್ತವೆ.
-ಚಿತ್ರ-ಲೇಖನ: ಪಿ.ಎಸ್. ಅಮರದೀಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.