ಪಡ್ಡಾಯಿ ದಿಕ್ಕಿನಲ್ಲಿ ಏನು ನಡೆಯಿತು?


Team Udayavani, Apr 22, 2018, 6:00 AM IST

Paddayi-03B.jpg

ಪಡ್ಡಾಯಿ ತುಳು ಚಿತ್ರವು 2017ರ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ರಜತ ಕಮಲಕ್ಕೆ ಆಯ್ಕೆಯಾಗಿದೆ. ಕರ್ನಾಟಕ ಕರಾವಳಿಯ ಪಶ್ಚಿಮದಿಕ್ಕಿನಲ್ಲಿ ಸಮುದ್ರವಿದೆ. ತುಳುವಿನಲ್ಲಿ ಪಡ್ಡಾಯಿ ಎಂದರೆ ಪಶ್ಚಿಮ ಅಥವಾ ಪಡುವಣ ಎಂದೇ ಅರ್ಥ. ಕಡಲತೀರದ ಊರುಗಳಿಗೆ “ಪಡ್ಡಾಯಿ’ ಎಂದೇ ಕರೆಯುತ್ತಾರೆ. ಪಶ್ಚಿಮ ದೇಶದ ನಾಟಕವಾದ ಮ್ಯಾಕ್‌ಬೆತ್‌ನ್ನು ತುಳುವಿನಲ್ಲಿ ಮರುನಿರ್ಮಿಸಿದ ದೃಷ್ಟಿಯಲ್ಲಿಯೂ ಇದು ಅರ್ಥಪೂರ್ಣವಾದ “ಪಡ್ಡಾಯಿ’. ಪಡ್ಡಾಯಿಯ ಚಿತ್ರೀಕರಣ ಮಾಡಿದ ಅನುಭವಗಳಲ್ಲಿ ಕೆಲವನ್ನು ಚಿತ್ರ ನಿರ್ದೇಶಕರೇ ಇಲ್ಲಿ ಹಂಚಿಕೊಂಡಿದ್ದಾರೆ… 

ನನ್ನ ಮೊದಲ ಸಿನೆಮಾ ಗುಬ್ಬಚ್ಚಿಗಳು (2008). ಅಲ್ಲಿಂದ ಆರಂಭವಾದ ಸಿನೆಮಾ ಯಾನ ಇಂದು ಪಡ್ಡಾಯಿ (2017) ಮೂಲಕ ಸುಮಾರು ಹತ್ತು ವರ್ಷ ಸಾಗಿಬಂದಿದೆ. ಪಡ್ಡಾಯಿ ಚಿತ್ರಕ್ಕೆ ಅತ್ಯುತ್ತಮ ತುಳು ಚಿತ್ರ ರಾಷ್ಟ್ರಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ, ಈ ಚಿತ್ರದ ಯಾನ ಮತ್ತೆ ನೆನಪಾಗುತ್ತಿದೆ. ಶೇಕ್ಸ್‌ಪಿಯರ್‌ ನಾಟಕಗಳನ್ನು ಓದಿ, ಅದರ ರೂಪಾಂತರಗಳನ್ನು ರಂಗದ ಮೇಲೆ, ಸಿನೆಮಾ ತೆರೆಯ ಮೇಲೆ ನೋಡಿ ಬೆಳೆದವನು ನಾನು. ಹೀಗೆ ನಾನೂ ಒಂದು ಸಿನೆಮಾ ಯಾಕೆ ಮಾಡಬಾರದು ಎಂದು ಚಿತ್ರಕಥೆ ಬರೆಯಲು ಹೊರಟೆ. ದೇಶದಲ್ಲಿ ನಡೆಯುತ್ತಿದ್ದ ಅನೇಕ ವಿದ್ಯಮಾನಗಳಿಂದ ತೊಡಗಿ ಮಂಗಳೂರಿನ ಪರಿಸರದ ಸುತ್ತಲಿನ ತಲ್ಲಣಗಳು ಸದಾ ನನ್ನನ್ನು ಕಾಡುತ್ತಲೇ ಇದ್ದವು. ಮ್ಯಾಕ್‌ಬೆತ್‌ ನಾಟಕದ ಮಹತ್ವಾಕಾಂಕ್ಷೆ, ದುರಾಸೆ, ಸಾಮುದಾಯಿಕ ಜೀವನದ ನಾಶ, ಯುದ್ಧ ಇತ್ಯಾದಿ ವಿಚಾರಗಳು ತಲೆಯೊಳಗೆ ಬೆಳೆಯುತ್ತಲೇ ಇದ್ದವು. 

ಸಾಕಷ್ಟು ದಿನಗಳ ನಂತರ, ಯಾವುದೋ ಸಂದರ್ಭ ದಲ್ಲಿ, ನನಗೆ ಕಾರ್ಕಳದ ಉದ್ಯಮಿ, ನಿತ್ಯಾನಂದ ಪೈ ಪರಿಚಯವಾದರು. ಅವರೊಂದಿಗೆ ಮಾತನಾಡುತ್ತ, ಮ್ಯಾಕ್‌ಬೆತ್‌ ಕಥೆಯನ್ನು ನಾನು ನಮ್ಮ ಊರಿನ ಸಂದರ್ಭಕ್ಕೆ ಅಳವಡಿಸಿಕೊಂಡಿ ರುವುದು, ಮೀನುಗಾರಿಕೆಯ ಹಿನ್ನೆಲೆಯಲ್ಲಿ, ತುಳು ಭಾಷೆಯಲ್ಲಿ ಸಿನೆಮಾ ಮಾಡಬೇಕೆಂದಿ ರುವುದನ್ನು ವಿವರಿಸಿದೆ. ಅವರಿಗೆ ಈ ಯೋಜನೆಯ ಬಗ್ಗೆ ಆಸಕ್ತಿ ಮೂಡಿ, ತಾನೇ ಇದನ್ನು ನಿರ್ಮಿಸುತ್ತೇನೆ ಎಂದು ಬಿಟ್ಟರು! ತುಳು ಚಿತ್ರರಂಗಕ್ಕೆ ಸಾಕಷ್ಟು ಪ್ರೇಕ್ಷಕರು ಇದ್ದರೂ, ಇದೊಂದು ಸೀಮಿತ ಮಾರುಕಟ್ಟೆ. ಹೀಗಾಗಿ ಸಿನೆಮಾದ ಬಜೆಟ್‌ ಕೂಡ ನಿಯಂತ್ರಣದಲ್ಲಿರಬೇಕಾದದ್ದು ವ್ಯಾವಹಾರಿಕವಾಗಿ ಅಗತ್ಯವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾತುಕತೆ ನಡೆಸಿ ರಚನಾತ್ಮಕ ಸಿದ್ಧತೆ ಮಾಡಿಕೊಂಡೆವು.

ನಮ್ಮ ಬಹುತೇಕ ಚಿತ್ರೀಕರಣ ಉಡುಪಿ ಬಳಿಯ ಮಲ್ಪೆಯಲ್ಲೂ, ಪಡುಕೆರೆಯಲ್ಲೂ ನಡೆಯಿತು. ಮಲ್ಪೆ ಉಡುಪಿ ಜಿಲ್ಲೆಯ ಭಾಗದ ದೊಡ್ಡ ಮೀನುಗಾರಿಕಾ ಬಂದರು. ಸುಮಾರು ಮೂರು ಸಾವಿರ ದೋಣಿಗಳು ಇಲ್ಲಿ ದಿನವೂ ವ್ಯವಹಾರ ನಡೆಸುತ್ತವೆ. ಅಪರಾತ್ರಿಯಲ್ಲಿ ಸಮುದ್ರಕ್ಕಿಳಿಯುವ ಮೀನುಗಾರರು ಎಂಟು ಗಂಟೆಯಷ್ಟು ಹೊತ್ತಿಗೆ ದಡಕ್ಕೆ ಮೀನು ತಂದು ಹಾಕುತ್ತಾರೆ. ಅಲ್ಲಿ ಕೂಡಲೇ ಹರಾಜು, ಮಾರಾಟ ಇತ್ಯಾದಿಗಳು ಚುರುಕಾಗಿ ನಡೆದು ಮೀನುಗಾರಿಕೆಯ ಬಹುತೇಕ ವ್ಯವಹಾರ ಬೆಳಗ್ಗೆ ಹನ್ನೊಂದು ಗಂಟೆಯೊಳಗೆ ಮುಗಿದಿರುತ್ತದೆ. ಆದರೆ, ಮೀನುಗಾರರ ಜೀವನ ಈ ದೋಣಿಗಳೊಂದಿಗೆ ಎಷ್ಟು ಹಾಸು ಹೊಕ್ಕಾಗಿರುತ್ತದೆಯೆಂದರೆ, ದಿನದ ಯಾವುದೇ ಸಮಯಕ್ಕೇ ಬಂದರಿಗೆ ಹೋದರೂ, ಎಲ್ಲೋ ಹರಿದ ಬಲೆ ರಿಪೇರಿ ಮಾಡುತ್ತ ಕುಳಿತಿರುವವರು, ಮುಂದಿನ ಪ್ರಯಾಣಕ್ಕೆ ಮೀನನ್ನು ಸುರಕ್ಷಿತವಾಗಿ ದಡಕ್ಕೆ ತರಲು ದೋಣಿಗಳಲ್ಲಿ ಮಂಜುಗಡ್ಡೆ ತುಂಬಿಸುವವರು ಕಾಣಿಸುತ್ತಾರೆ. ಇನ್ನು ಹಾಯಾಗಿ ಎರಡು ಕಂಬಕ್ಕೆ ಬಟ್ಟೆ ಕಟ್ಟಿ ತೊಟ್ಟಿಲು ಮಾಡಿ ಮಲಗಿ ನಿದ್ರಿಸುವವರೂ, ದೋಣಿಯ ಮೇಲೆ ಸೋಪು ಹಚ್ಚಿಕೊಂಡು ಸ್ನಾನ ಮಾಡುವವರೂ ಸಿಗುತ್ತಾರೆ. ದೋಣಿಗಳನ್ನು ಜೋಡಿಸಿಟ್ಟ ಈ ಬಂದರು ನಮ್ಮ ಕಣ್ಣಿಗೆ ದೃಶ್ಯಗಳ ಮಹಾಪೂರ. ಹೀಗಾಗಿ, ಅಲ್ಲೇ ಚಿತ್ರೀಕರಿಸಲು ನಿರ್ಧರಿಸಿದ್ದೆವು. ಇಲ್ಲಿನ ಚಟುವಟಿಕೆಗಳ ಮಧ್ಯದಲ್ಲಿ ಚಿತ್ರೀಕರಣ ಮನೋಹರವಾದರೂ, ಧ್ವನಿ ದಾಖಲೀಕರಣ ತುಸು ಕಷ್ಟ. ಆದರೂ ನಮ್ಮ ಧ್ವನಿ ತಜ್ಞ ಜೇಮಿ ಸಾಕಷ್ಟು ಚಾಣಾಕ್ಷತನದಿಂದ ಲಭ್ಯ ಪರಿಕರಗಳಲ್ಲೇ ಚೆನ್ನಾಗಿ ಧ್ವನಿ ದಾಖಲೀಕರಿಸಿಕೊಂಡರು.

ಚಿತ್ರೀಕರಣದ ಕೊನೆಯ ಆದರೆ ಮಹಣ್ತೀದ ಹಂತದಲ್ಲಿ ನಾವು ಸಮುದ್ರಕ್ಕೆ ಮೀನುಹಿಡಿಯಲು ಹೋಗುವ ದೋಣಿಯಲ್ಲಿ ಹೋದೆವು. ಆಳ ಸಮುದ್ರದಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಇದಕ್ಕಾಗಿ ಗೆಳೆಯ ಪುರುಷೋತ್ತಮರ ಸಹಾಯ ಪಡೆದೆವು. ಅವರು ಮೀನುಗಾರಿಕೆಗೆ ಹೋಗುವ ದೋಣಿಯೊಂದರ ಲೆಕ್ಕಿಗ. ಈ ದೋಣಿಗಳಲ್ಲಿ ಸುಮಾರು ಇಪ್ಪತ್ತು ಜನರು ಮುಂಜಾವ ನಾಲ್ಕು ಗಂಟೆಗೆ ಹೊರಟು ಆಳ ಸಮುದ್ರವನ್ನು ತಲುಪುತ್ತಾರೆ. ಅಲ್ಲಿ “ತಾಂಡೇಲ’ ಅಥವಾ ಮೀನುಗಳ ಹೆಜ್ಜೆಯನ್ನು ಗುರುತಿಸುವವನು ಸೂಚಿಸಿದಲ್ಲಿ ಬಲೆಯನ್ನು ಬೀಸಿ ಮೀನು ಹಿಡಿಯುತ್ತಾರೆ.

ದೋಣಿಯಲ್ಲಿ ಮೀನುಗಾರರ ಸಂಖ್ಯೆಯೇ ಸಾಕಷ್ಟಿರುವಾಗ ನಮ್ಮ ಚಿತ್ರೀಕರಣದ ತಂಡ ಅತ್ಯಂತ ಸಣ್ಣದಾಗಿರುವುದು ಅಗತ್ಯವಾಗಿತ್ತು. ಹೀಗಾಗಿ, ನಮ್ಮ ಛಾಯಾಗ್ರಾಹಕ ವಿಷ್ಣು ಲೈಟ್‌ ಇಲ್ಲದೇ ಚಿತ್ರೀಕರಣ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಉಳಿದ ಚಿತ್ರೀಕರಣಕ್ಕೆ ಬಳಸಿದ ಕೆಮರಾ ಬಿಟ್ಟು, ಸಣ್ಣದಾದ ಕೆಮರಾ ಸಿದ್ಧ ಮಾಡಿಕೊಂಡೆವು. ದೋಣಿಯವರಿಗೆ ಹೊರೆಯಾಗದಂತೆ, ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ನೀರು ಇತ್ಯಾದಿಗಳನ್ನು ಕಟ್ಟಿಕೊಂಡು ಮೋಹನ ಶೇಣಿ, ಚಂದ್ರಹಾಸ್‌ ಉಳ್ಳಾಲ್‌ ಇಬ್ಬರೇ ನಟರನ್ನು ಸೇರಿಸಿಕೊಂಡು ಸಮುದ್ರ ಯಾನಕ್ಕೆ ಸಿದ್ಧರಾದೆವು. 

ಮುಂಜಾವ ಮೂರು ಗಂಟೆ. ಮೀನುಗಾರರು ನಮಗಾಗಿ ಕಾಯುತ್ತಿದ್ದರು. ಮಲ್ಪೆಯ ಬಂದರಿನಲ್ಲಿ ದೋಣಿಗಳನ್ನು ಒಂದಕ್ಕೊಂದು ತಾಗಿಸಿ ನಿಲ್ಲಿಸಿರುತ್ತಾರೆ. ಆಯಾ ದೋಣಿಯ ಮೇಲಿನ ವಿವಿಧ ಬಣ್ಣದ ಧ್ವಜಗಳ ಮೂಲಕ ದೋಣಿಯನ್ನು ಗುರುತಿಸಲಾಗುತ್ತದೆ. ನಾವು ಪ್ರಯಾಣಿಸಬೇಕಿದ್ದ ದೋಣಿಯನ್ನು ತಲುಪಲು ಹಲವು ದೋಣಿಗಳನ್ನು ದಾಟುತ್ತ ಸಾಗಬೇಕಿತ್ತು. ಕೊನೆಗೆ ನಮ್ಮ ನಟರು ಒಂದು ದೋಣಿಯಲ್ಲಿ ಹೋಗುವುದೆಂದೂ, ಕೆಮರಾ ಮತ್ತು ನಾನು ಇನ್ನೊಂದು ದೋಣಿಯಲ್ಲಿ ಹಿಂಬಾಲಿಸುತ್ತ, ನಟರ ಆರಂಭಿಕ ಶಾಟ್ಸ್‌ ತೆಗೆಯುವುದೆಂದೂ ನಿರ್ಧರಿಸಿಕೊಂಡು ಹೊರಟೆವು. 

ಯಾವುದೋ ಗೊಂದಲಮಯ ಬಸ್‌ನಿಲ್ದಾಣದಿಂದ ಹೊರಡುವ ಬಸ್ಸುಗಳಂತೆ ಪರಸ್ಪರರಿಗೆ ಜಾಗ ಮಾಡಿಕೊಡುತ್ತ, ಜೋರಾಗಿ ಮಾತನಾಡುತ್ತ ಮಲ್ಪೆಯ ಬಂದರನ್ನು ತೊರೆದು ಹೊರಟೆವು. ಪಡ್ಡಾಯಿ ಚಿತ್ರದ ಆರಂಭದಲ್ಲಿ ಕಾಣುವ ಟೈಟಲ್ಸ್‌ನಲ್ಲಿರುವ ದೃಶ್ಯದ ಶಾಟ್ಸ್‌ ತೆಗೆದದ್ದು ಇದೇ ಸಮಯಕ್ಕೆ ! ನಸುಕಿನಲ್ಲಿ ಯುದ್ಧಕ್ಕೆ ಹೊರಡುವ ಸೈನ್ಯದಂತೆ ನೂರಾರು ದೋಣಿಗಳು ಏಕಕಾಲಕ್ಕೆ ಸಮುದ್ರಮುಖೀಯಾಗಿ ಹೊರಟಿದ್ದವು. ಉಪ್ಪಿನ ತೇವವನ್ನು ಹೆೊತ್ತು ತರುವ ನರುಗಾಳಿ ಮುಖಕ್ಕೆ ಸೋಕುತ್ತಿದ್ದಂತೆ, ಉತ್ಸಾಹದಲ್ಲಿ ಅತ್ತಿತ್ತ ಕಣ್ಣು ಹಾಯಿಸುತ್ತ, ಸಾಧ್ಯವಾದ ಶಾಟ್ಸ್‌ ತೆಗೆದುಕೊಳ್ಳುತ್ತ ಸಾಗಿದೆವು. ದೋಣಿಯ ಒಂದು ಮೂಲೆಯಲ್ಲಿ ಒಲೆಯ ಮೇಲೆ ದೊಡ್ಡದೊಂದು ಹಂಡೆಯಲ್ಲಿ ಅಕ್ಕಿ, ಅನ್ನವಾಗಲು ಧ್ಯಾನಿಸುತ್ತಿತ್ತು.

ಸಮುದ್ರದಲ್ಲಿ ಸಾಕಷ್ಟು ದೂರ ಸಾಗಿದ ಮೇಲೆ ಪರಸ್ಪರ ವಾಕಿ ಟಾಕಿ ಮೂಲಕ ಮಾತನಾಡಿ, ಜಿಪಿಎಸ್‌ ಮೂಲಕ ನಿಖರ ಸ್ಥಳವನ್ನು ತಿಳಿದುಕೊಂಡು ನಮ್ಮೆರಡೂ ದೋಣಿಗಳು ಸೇರಿದವು. ಇಡೀ ತಂಡ ಮೀನು ಹಿಡಿಯುವ ಮುಖ್ಯ ದೋಣಿಯನ್ನೇರಿದೆವು. ಅಷ್ಟರಲ್ಲಾಗಲೇ ಮೀನುಗಾರರ ತಂಡ ಕಣ್ಣುಗಳನ್ನು ಸಮುದ್ರದ ಮೈಗೆ ನೆಟ್ಟು, ಮೀನಿಗಾಗಿ ಹುಡುಕಾಟ ನಡೆಸಿದ್ದವು. ಸಮುದ್ರದೊಳಗಣ ಮೀನು, ಮೇಲಿಂದ ಕಾಣುವುದೇ ಎನ್ನುವ ಸಂಶಯ ನಮಗೆ ಬಾರದಿರಲಿಲ್ಲ. ಆದರೆ, ಅಷ್ಟರಲ್ಲೇ ತಾಂಡೇಲ ಒಂದು ದಿಕ್ಕಿಗೆ ಕೈ ತೋರಿದರು. ಚಲಿಸುತ್ತಿರುವ ನಮ್ಮ ದೋಣಿಗೆ ಎಡಕ್ಕೆ ಸ್ವಲ್ಪದೂರದಲ್ಲಿ, ಸಮುದ್ರದ ಮೈಯಲ್ಲಿ ನಡೆದೇ ಹೋಗುತ್ತಿವೆಯೇ ಎನ್ನುವಂತೆ ಒಂದು ದೊಡ್ಡ ಗುಂಪು ಮೀನುಗಳ ಕಲರವ ಕಾಣುತ್ತಿತ್ತು. “ಮೀನಿನ ಹೆಜ್ಜೆ’ ಎನ್ನುವ ಅಲಂಕಾರ ಇದರಿಂದಲೇ ಹುಟ್ಟಿತೇನೋ ಎಂದು ಅನ್ನಿಸಿತು ನನಗೆ. ಆದರೆ ನಮ್ಮ ತಾಂಡೇಲರಿಗೆ ಈ ಮೀನಿನ ತಂಡ ಸಣ್ಣದೆಂದೂ, ನಮ್ಮ ದೋಣಿಯ ವೇಗಕ್ಕೆ ಅದನ್ನು ಹಿಡಿಯುವುದು ಕಷ್ಟ ಎಂದೂ ಅನ್ನಿಸಿ ಅದನ್ನು ಕೈಬಿಟ್ಟು ಬಿಟ್ಟರು. ಆದರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೂಂದು, ಮೊದಲಿನದ್ದಕ್ಕಿಂತ ದೊಡ್ಡ ಮೀನಿನ ತಂಡ ಕಾಣಿಸಿತು. ನಮ್ಮ ಕೆಮರಾ ಚುರುಕಾಯಿತು. 

ತಾಂಡೇಲ, “ಆರ್ಯಾ’ ಎಂದು ಪಾಸಿಟಿವ್‌ ಸೂಚನೆ ಕೊಟ್ಟರು. ನಮ್ಮ ದೊಡ್ಡ ದೋಣಿಯ ಹಿಂದಿದ್ದ ಪುಟಾಣಿ ದೋಣಿಗೆ ಜಿಗಿದ ಇಬ್ಬರು ಬಲೆಯ ಒಂದು ತುದಿಯನ್ನು ಹಿಡಿದುಕೊಂಡು  ಮೀನಿನ ತಂಡದ ಅರಿವಿಗೆ ಬಾರದಂತೆ ನಿಧಾನಕ್ಕೆ ಅದನ್ನು ಸುತ್ತುವರೆದರು. ಹೀಗೆ ಸುತ್ತುವಾಗ ದೋಣಿಯ ಒಂದು ಮಗ್ಗುಲಲ್ಲಿ ಇದ್ದ ಬಲೆ ಸರಾಗವಾಗಿ ಸಾಗರಕ್ಕಿಳಿದು ಮೀನುಗಳನ್ನು ಬಂಧಿಸುತ್ತಿತ್ತು. ಸಮುದ್ರಕ್ಕೆ ಇಳಿದ ಬಲೆಯನ್ನು ವೃತ್ತಾಕಾರದಲ್ಲಿ ಜೋಡಿಸಿಕೊಂಡು, ಬುಟ್ಟಿಯಂತೆ ಮಾಡಿಕೊಳ್ಳಲಾಯಿತು. ಈ ಪ್ರಕ್ರಿಯೆ ಸುಮಾರು ಹದಿನೈದು ನಿಮಿಷದಲ್ಲೇ ಪೂರ್ಣವಾಯಿತು. ಆಮೇಲೆ ಆರಂಭವಾದದ್ದು, ಈ ಬಲೆಯನ್ನು ಎಳೆಯುವ ಪ್ರಕ್ರಿಯೆ! ದೋಣಿಯಲ್ಲಿದ್ದ ಇಪ್ಪತ್ತು ಜನರು ಅಪಾರ ಶ್ರಮವಹಿಸಿ ಈ ಬಲೆಯನ್ನು ಎಳೆಯಲು ಆರಂಭಿಸಿದರು.  ತಾವು ಬಲೆಯಲ್ಲಿ ಇದ್ದೇವೆಂದು ತಿಳಿದು ಹಾರಿ ತಪ್ಪಿಸಿಕೊಳ್ಳಲು ಕೆಲವು ಮೀನುಗಳು ಯತ್ನಿಸುತ್ತಿದ್ದವು. ಇನ್ನು ಕೆಲವು ನಿಜಕ್ಕೂ ಜಿಗಿದು ಹೊರಕ್ಕೆ ಹೋಗುತ್ತಿದ್ದವು. ಸಮುದ್ರದಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆಯೋ ಏನೊ ಎಂದು ಅನ್ನಿಸುತ್ತಿತ್ತು. ಇದು ಶೇಕ್ಸ್‌ ಪಿಯರ್‌ನ ವಿವರಣೆಗಳಲ್ಲಿ ಕಾಣುವ ಯಾವುದೇ ಯುದ್ಧಕ್ಕೂ ಕಡಿಮೆಯಿಲ್ಲದಂತೆ ನಡೆಯುತ್ತಿತ್ತು. 

ಸುಮಾರು ಮೂರು ಗಂಟೆಯ ಮೊದಲ ಬೇಟೆ ಮುಗಿಯುವಷ್ಟರಲ್ಲಿ ನಮ್ಮ ಪ್ರಮುಖ ದೃಶ್ಯಗಳ ಚಿತ್ರೀಕರಣವೂ ಮುಗಿಯಿತು. ಹಿಡಿದ ಮೀನುಗಳನ್ನೆಲ್ಲ ಇನ್ನೊಂದು ದೋಣಿಗೆ ದಾಟಿಸಲಾಯಿತು. ನಮ್ಮ ಚಿತ್ರೀಕರಣವೂ ಮುಗಿದದ್ದರಿಂದ, ನಾವೂ ಮರಳಿ ಹೋಗಲಿರುವ ದೋಣಿಗೆ ದಾಟಿಕೊಂಡೆವು. ಹೇಳಹೊರಟರೆ ಇನ್ನೂ ಸಾಕಷ್ಟಿದೆ.

– ಅಭಯ ಸಿಂಹ

ಟಾಪ್ ನ್ಯೂಸ್

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.