ಥಾಯ್ಲೆಂಡ್‌ನ ಫುಕೆಟ್ ದ್ವೀಪ ಕಾಯುವ ಇಬ್ಬರು ನಾಯಕಿಯರು
Team Udayavani, Aug 5, 2018, 6:00 AM IST
ಥಾಯ್ಲೆಂಡಿನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫುಕೆಟ್ ದ್ವೀಪಕ್ಕೆ ಹೆದ್ದಾರಿಯಲ್ಲಿ ನಮ್ಮ ಪಯಣ ನಡೆದಿತ್ತು. ಫುಕೆಟ್, ದೇಶದ ದಕ್ಷಿಣ ಭಾಗದಲ್ಲಿದ್ದು ಪ್ರವಾಸಿಗರ ಸ್ವರ್ಗ ಎನಿಸಿರುವ ಸಂಪದ್ಭರಿತ ದ್ವೀಪ. ಹಿಂದೆ ಇದಕ್ಕೆ ತಲಂಗ್ ಎಂಬ ಹೆಸರಿತ್ತು. ರಾ. ಜಂಕ್ಷನ್ ಎಂಬುದು ಇಲ್ಲಿನ ಅತೀ ಜನದಟ್ಟಣೆಯ ಸಿಗ್ನಲ್. ಅಲ್ಲಿ ನಡುವೆ ಜೋಡಿ ಶಿಲ್ಪವೊಂದು ಕಣ್ಣಿಗೆ ಬಿತ್ತು. ನಮ್ಮ ಡ್ರೆçವರ್ ಕಾರಿನ ಹಾರ್ನ್ ಒತ್ತಿ ಸದ್ದು ಮಾಡಿ, ಭಕ್ತಿಯಿಂದ ತಲೆ ಬಗ್ಗಿಸಿದ. ನಗರ ಪ್ರವೇಶಕ್ಕೆ ಮುಂಚೆ ಈ ರೀತಿ ಇವರಿಬ್ಬರ ದರ್ಶನ, ಆಶೀರ್ವಾದ ಪಡೆಯುವುದು ರೂಢಿ ಎಂದು ವಿವರಿಸಿದ. ಕಾರು ನಿಲ್ಲಿಸಿ ಪಕ್ಕದಲ್ಲೇ ಮಾರುತ್ತಿದ್ದ ಚೆಂಡು ಹೂವಿನ ಮಾಲೆ, ಸುಗಂಧ ಕಡ್ಡಿ ಮತ್ತು ತೆಳುವಾದ ಬಂಗಾರದ ಎಲೆಗಳನ್ನು ಕೊಂಡುತಂದ. ಯಾರು, ಏನು ಎತ್ತ ಗೊತ್ತಿಲ್ಲದ ನಾವು ನೋಡುತ್ತಲೇ ಇದ್ದೆವು. ನಗರದ ಪ್ರಮುಖ ಜಾಗದಲ್ಲಿ ಪುರುಷ ವೇಷ ಧರಿಸಿ, ಕೈಯ್ಯಲ್ಲಿ ಕತ್ತಿ ಹಿಡಿದು, ವಿರುದ್ಧ ದಿಕ್ಕುಗಳಲ್ಲಿ ನೋಡುತ್ತಾ ಕಾವಲುಗಾರರಂತೆ ನಿಂತ ಇವರು ಯಾ ಚಾನ್ ಮತ್ತು ಯಾ ಮೂಕ್ ಎಂದು ತಿಳಿಸಿದ (ಥಾಯ್ ಭಾಷೆಯಲ್ಲಿ ಅಥವಾ ಅಂದರೆ ಅಜ್ಜಿ ).
ಸಾಧಾರಣವಾಗಿ ಮಹಿಳೆ ಎಂದರೆ ಮನೆವಾರ್ತೆ ಎಂಬ ನಂಬಿಕೆ ಸಾಂಪ್ರದಾಯಿಕ ಥಾಯ್ ಸಮಾಜದಲ್ಲಿ ಇಂದಿಗೂ ಇರುವಾಗ, ಈ ಅಜ್ಜಿಯರ ಶಿಲ್ಪ ಇಲ್ಲಿರುವುದರ ಬಗ್ಗೆ ಆಶ್ಚರ್ಯವಾಯಿತು. ಇದಕ್ಕೆ ಕಾರಣವಾದ ಎರಡು ಶತಕಗಳ ಹಿಂದೆ ನಡೆದ ಸ್ವಾರಸ್ಯಕರ ಐತಿಹಾಸಿಕ ಘಟನೆ ಹೀಗಿದೆ.
ಇದರ ಹಿಂದೊಂದು ಕತೆ ಇದೆ !
ಚಾನ್ ಮತ್ತು ಮೂಕ್ ಸಹೋದರಿಯರು ಬಾನ್ ಕೀನ್ ಹಳ್ಳಿಯ ಮುಖ್ಯಸ್ಥನ ಮಕ್ಕಳು. ಅಂದಿನ ಪದ್ಧತಿಯಂತೆ ಚಿಕ್ಕ ವಯಸ್ಸಿನಲ್ಲೇ ಮದುವೆ ಯಾದ ಅಕ್ಕ ಚಾನ್‌ಗೆ ಬೇಗನೇ ಪತಿವಿಯೋಗ ವಾಯಿತು. ಕೆಲಸಮಯದಲ್ಲೇ ತಲಂಗ್ ನಗರದ ರಾಜ್ಯಪಾಲ ನೊಂದಿಗೆ ಮರು ಮದುವೆಯೂ ಆಯಿತು. ಆದರೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಆತನೂ ಕೊನೆಯುಸಿರೆಳೆದ. 1785ರ ಆರಂಭದಲ್ಲಿ ಈ ದುರ್ಘಟನೆ ನಡೆದಾಗ ಚಾನ್‌ಳ ವಯಸ್ಸು ನಲವತ್ತೈದರ ಆಸುಪಾಸು. ಗಂಡನನ್ನು ಕಳೆದುಕೊಂಡ ದುಃಖದಲ್ಲಿರುವಾಗಲೇ ಬರ್ಮಾ ಸೈನ್ಯದ ದಾಳಿಯ ಕುರಿತ ಆಘಾತಕರ ಸುದ್ದಿ ! ನಾಯಕನಿಲ್ಲದಿದ್ದಾಗ ಸುಲಭವಾಗಿ ತಲಂಗ್ ತಮ್ಮ ಕೈವಶ ಮಾಡಿಕೊಳ್ಳಬಹುದು ಎಂಬ ಹುನ್ನಾರ ಬರ್ಮಾ ಸೇನೆಯದ್ದು. ಸುದ್ದಿ ತಿಳಿದು ಗಾಬರಿಯಾದರೂ ಧೈರ್ಯಗೆಡದೆ ತಂಗಿ ಮತ್ತು ಪಟ್ಟಣದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಅಕ್ಕ ಚಾನ್ ಮಹಿಳೆಯರಿಗೂ ಪುರುಷ ಸೈನಿಕರ ವೇಷ ತೊಡಿಸಿ, ಕೈಯಲ್ಲಿ ಕತ್ತಿ ಹಿಡಿಸಿ ಯುದ್ಧಕ್ಕೆ ಸಜ್ಜುಗೊಳಿಸಿದರು.
ಇಡೀ ನಗರದ ಸುತ್ತ ಗಸ್ತು ಹೊಡೆಯುತ್ತಿದ್ದ ಅಪಾರ ಸಂಖ್ಯೆಯ ಪುರುಷ ವೇಷಧಾರಿ ಮಹಿಳಾ ಸೈನಿಕರನ್ನು ಕಂಡು ಬರ್ಮಾ ಸೇನೆ ಹೆದರಿತು.ಅದೇ ವರ್ಷ ಮಾರ್ಚ್‌ನಲ್ಲಿ ಐದು ವಾರಗಳ ನಡೆದ ಯುದ್ಧದಲ್ಲಿ ಸೀಮಿತ ಸೈನ್ಯಬಲವಿದ್ದರೂ ಯುಕ್ತಿಯಿಂದ ಗೆಲುವು ಸಾಧಿಸಿದ ಕೀರ್ತಿ ಈ ಸಹೋದರಿಯರದ್ದು!
ಹೀಗೆ ತಮ್ಮ ಪ್ರಾಂತ್ಯವನ್ನು ರಕ್ಷಿಸಿದ ಈ ಸಹೋದರಿಯರಿಗೆ ಚಕ್ರಿ ವಂಶದ ರಾಜ ಮೊದಲನೆಯ ರಾಮ, ಥಾವೋ ಥೆಪ್ ಕ್ರಸಾತ್ರಿ ಮತ್ತು ಥಾವೋ ಸಿ ಸನ್ ಥಾನ್ ಎಂಬ ಬಿರುದುಗಳನ್ನಿತ್ತು ಗೌರವಿಸಿದ. ಯುದ್ಧದ ನಂತರವೂ ಮಹಿಳೆಯರು ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಲು ಸಹಾಯ ಮಾರ್ಗದರ್ಶನ ಮಾಡುತ್ತಿದ್ದ ಯಾ ಚಾನ್ 1793 ರಲ್ಲಿ ಮರಣ ಹೊಂದಿದಳು. ಸ್ಥಳೀಯ ಜನತೆ ತಮ್ಮ ಸ್ವಾತಂತ್ರ್ಯಕ್ಕಾಗಿ ಸೆಣಸಾಡಿದ ಈ ಇಬ್ಬರನ್ನೂ ಕತೆ, ಹಾಡಿನ ಮೂಲಕ ಗೌರವಿಸುತ್ತ¤ ಬಂದಿತ್ತು.1909 ರಲ್ಲಿ ರಾಜ ಆರನೆಯ ರಾಮ, ಈ ಸಹೋದರಿಯರ ಶಿಲ್ಪ ನಿರ್ಮಿಸುವ ಯೋಜನೆ ಮುಂದಿಟ್ಟ.ಅದು ಕಾರ್ಯಗತವಾಗಿ 1967 ರಲ್ಲಿ ರಾಜ ಒಂಬತ್ತನೆಯ ರಾಮನ ಕಾಲದಲ್ಲಿ ಅದ್ದೂರಿಯಾಗಿ ಇಲ್ಲಿ ಸ್ಥಾಪನೆಗೊಂಡಿತು. ಐದೂವರೆ ಅಡಿ ಎತ್ತರದ ಲೋಹದ ಶಿಲ್ಪಗಳ ಕೆಳಗೆ ಪುಟ್ಟ ಪ್ರತಿಕೃತಿಯನ್ನು ಇಡಲಾಗಿದ್ದು ಜನರು ಇದಕ್ಕೆ ಪೂಜೆ ಸಲ್ಲಿಸುತ್ತಾರೆ. ತಮ್ಮ ದ್ವೀಪವನ್ನು ಈ ಯೋಧೆಯರು ರಕ್ಷಿಸುತ್ತಾರೆ ಎಂಬ ಬಲವಾದ ನಂಬಿಕೆ ಜನರದ್ದಾಗಿದೆ. ಹೊರಸಂಚಾರಕ್ಕೆ ಹೋಗುವ ಪ್ರವಾಸಿಗರು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಈ ತಮ್ಮ ಸುರಕ್ಷೆ, ಯಶಸ್ಸಿಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಾಡಿನ ರಕ್ಷಣೆಗಾಗಿ ದಿಟ್ಟ ಹೆಜ್ಜೆಯಿಟ್ಟ ಈ ಸಹೋದರಿಯರ ಗೌರವಾರ್ಥ ಅಂಚೆ ಚೀಟಿಗಳನ್ನೂ ಸರ್ಕಾರ ಬಿಡುಗಡೆ ಮಾಡಿದೆ.
ಪ್ರತೀ ವರ್ಷ ಮಾರ್ಚ್ ತಿಂಗಳಿನಲ್ಲಿ ಎರಡು ವಾರಗಳ ಕಾಲ ಸಹೋದರಿಯರ ಸ್ಮರಣಾರ್ಥ ಥಾವೋ ಥೆಪ್ ಕ್ರಸಾತ್ರಿ ಮತ್ತು ಥಾವೋ ಸಿ ಸನ್ ಥಾನ್ ಉತ್ಸವ ನಡೆಸಲಾಗುತ್ತದೆ.
– ಕೆ. ಎಸ್. ಚೈತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.