ಮಗುವಿನಂಥ ನಗುವಿನ ಕಲಾಕಾರ
Team Udayavani, Apr 8, 2018, 7:00 AM IST
ರಾವ್‌ಬೈಲ್ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಪತ್ರಿಕೆಗಳ ವಾಚಕರಿಗೆ ವ್ಯಂಗ್ಯಚಿತ್ರಕಾರರಾಗಿ ಪರಿಚಿತರಾಗಿದ್ದರೂ ಅವರ ಪ್ರತಿಭೆಗೆ ಬಹುಮುಖಗಳಿದ್ದವು. ಕೀರ್ತಿಯನ್ನು ಬಯಸದೆ ಅಂತರ್ಮುಖಿಯಾಗಿ ಬದುಕು ನಡೆಸಿದ ಕಲಾಸಾಧಕನಿಗೆ ಅಕ್ಷರನಮನವಿದು…
ರಾವ್‌ಬೈಲ್ (ಪ್ರಭಾಕರ್ ರಾವ್ ಬೈಲಂಗಡಿ) ರವರ ನಿಧನದ ವಾರ್ತೆ ಕೇಳಿದಾಗಿನಿಂದ ಧಾರವಾಡದಲ್ಲಿ ಕೆಲವೇ ಸಮಯ ಅವರೊಂದಿಗೆ ಒಡನಾಡಿದ ಕ್ಷಣಗಳು ಮತ್ತೆ ಮತ್ತೆ ನೆನಪಿಗೆ ಬರುತ್ತಿವೆ. ರಾವ್‌ಬೈಲ್ ಅವರ ಪರಿಚಯವಾದದ್ದು ಸ್ವಚ್ಛವಾದ ಹುಚ್ಚನ್ನು ಹಂಚುವ ಜಯಂತ ಕಾಯ್ಕಿಣಿಯವರು ಬರೆದ ಒಂದು ಲೇಖನದ ಮೂಲಕ. ನಾನು ನೌಕರಿಗೆಂದು ಧಾರವಾಡಕ್ಕೆ ಹೋಗುವ ಪ್ರಸಂಗ ಬಂದಾಗ ಕಾಯ್ಕಿಣಿಯವರು, “”ಧಾರವಾಡದಲ್ಲಿ ಇರುವ ಅವಕಾಶ ಪುಣ್ಯ ಮಾಡಿದವರಿಗೆ ಮಾತ್ರ ಸಿಗುತ್ತದೆ, ಅಲ್ಲಿ ರಾವ್ ಬೈಲ್, ವೀಣಾ ಶಾಂತೇಶ್ವರ್ ಇದ್ದಾರೆ; ಭೇಟಿ ಮಾಡು” ಎಂದು ಅವರ ಆಪ್ತರ ದೊಡ್ಡ ಪಟ್ಟಿಯನ್ನೇ ಹೇಳಿದರು.
ಆ ನಂತರದ ದಿನಗಳಲ್ಲಿ ಕುಮುದಿನಿ ರಾವ್ ಅವರ ಬಳಿ ನೃತ್ಯಾಭ್ಯಾಸಕ್ಕೆ ಹೋಗುತ್ತಿದ್ದೆ. ಒಂದು ದಿನ ತರಗತಿ ಮುಗಿದ ಮೇಲೆ ಒಬ್ಬ ಸಂತನಂತಿರುವ ವ್ಯಕ್ತಿ ಬಂದು ಮೋಟರ್ ಸ್ವಿಚ್ ಆಫ್ ಮಾಡಿ ಹೋದರು. ನಾನು ಕುಮುದಿನಿ ಅವರನ್ನು “”ಧಾರವಾಡದಲ್ಲಿ ರಾವ್‌ಬೈಲ್ ಅಂತ ಕಲಾವಿದರಿದ್ದಾರಂತೆ. ನಿಮಗೆ ಅವರ ಪರಿಚಯವೇನಾದರೂ ಇದೆಯ? ನಾನವರನ್ನು ಭೇಟಿ ಮಾಡಬೇಕಿತ್ತು” ಅಂತ ಕೇಳಿದೆ. ಅದಕ್ಕವರು, “”ಈಗ ಮೋಟರ್ ಸ್ವಿಚ್ ಆಫ್ ಮಾಡಿ ಹೋದರಲ್ಲಾ ಅವರೇ ರಾವ್‌ಬೈಲ್” ಅಂದರು. ಕುಮುದಿನಿಯವರು ರಾವ್ ಬೈಲ್ ಅವರ ಪತ್ನಿ ಅನ್ನುವುದು ಅಲ್ಲಿಯವರೆಗೆ ನನಗೆ ತಿಳಿದೇ ಇರಲಿಲ್ಲ. ಅತ್ಯಂತ ಖುಷಿಯಿಂದ ತಕ್ಷಣ ಹೋಗಿ ಅವರನ್ನು ಮಾತನಾಡಿಸಿದೆ. ಅಷ್ಟೇ ಖುಷಿಯಿಂದ ನನ್ನನ್ನು ಮಾತನಾಡಿಸಿದರು. ಅವರ ಕಲಾಕೃತಿಗಳನ್ನು ನೋಡುವ ಆಸೆ ವ್ಯಕ್ತಪಡಿಸಿದಾಗ, ಅವರ ಮನೆಯ ಗೋಡೆಯ ಮೇಲೆ ತೂಗು ಹಾಕಿದ್ದ Madding Crowd ಹಾಗೂ ಒಂದು ಕಾಗೆ ಯ ಚಿತ್ರವನ್ನು ತೋರಿಸಿ, “”ಬಿಡುವು ಮಾಡಿಕೊಂಡು ಬಾ, ಮತ್ತಷ್ಟು ಚಿತ್ರಗಳಿವೆ” ಎಂದು ಹೇಳಿದರು.
ಒಂದು ಭಾನುವಾರ, ನಾನು ಅವರ ಮನೆಗೆ ಹೋದಾಗ, ಮಕ್ಕಳು ತಮ್ಮ ಆಟಿಕೆಗಳನ್ನು ತೋರಿಸುವಂತೆ, ಸಂಭ್ರಮದಿಂದ ತಮ್ಮ ಕಾರ್ಟೂನ್‌ಗಳನ್ನು, ಕೊಲಾಜ್‌ಗಳನ್ನು ತೋರಿಸಿದರು. ಅವರ ಸಂಭ್ರಮದಲ್ಲಿ ಇದೆಲ್ಲ ಶ್ರೇಷ್ಠ ಕಲಾಕೃತಿಗಳು, ತಾವೊಬ್ಬ ಶ್ರೇಷ್ಠ ಕಲಾವಿದ ಎನ್ನುವ ಭಾವನೆ ಲವಲೇಶವೂ ಇರಲಿಲ್ಲ. ಅವರ ಚಿತ್ರವೊಂದರಲ್ಲಿ ಮನೆಯೊಡತಿ ಹಾಗೂ ಕೆಲಸದಾಕೆ ಇಬ್ಬರೂ ಒಂದೇ ಕೋಳವನ್ನು ತಮ್ಮ ಒಂದೊಂದು ಕೈಗೆ ಹಾಕಿಕೊಂಡು ಜಗಳವಾಡುತ್ತಿದ್ದಾರೆ. ಅದನ್ನು ತೋರಿಸಿ, “”ನೋಡು, ಮನೆಯೊಡತಿಯರಿಗೆ, ಕೆಲಸದಾಕೆಗೆ ಯಾವತ್ತೂ ಹೊಂದುವುದೇ ಇಲ್ಲ. ಆದರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರ ಬದುಕು ನಡೆಯುವುದಿಲ್ಲ” ಅಂತ ತಮಾಷೆಯಾಗಿ ನಕ್ಕರು.
ಧಾರವಾಡದ ತಮ್ಮ ಮನೆಯ ಛಾವಣಿಯ ಮೇಲೆ ನೂರಾರು ಗಿಡಗಳನ್ನು ಪ್ರೀತಿಯಿಂದ ಬೆಳೆಸಿದ್ದರು. ಅಷ್ಟೇ ಸಂಭ್ರಮದಿಂದ ಅದನ್ನು ತೋರಿಸುತ್ತಿದ್ದರು. ಗಿಡಗಳ ವಿಶೇಷತೆಯನ್ನು, ಅದನ್ನು ತಂದ ಹಿನ್ನೆಲೆಯನ್ನು ಖುಷಿಯಿಂದ ಹೇಳುತ್ತಿದರು. “”ಜೋರು ಮಳೆಯಿದ್ದರೂ ಕೊಡೆ ಹಿಡಿದುಕೊಂಡು ಗಿಡಗಳಿಗೆ ಯಾಕೆ ನೀರು ಹಾಕಿ ಬರುತ್ತೀರಾ, ಮಳೆನೀರು ಸಾಲದೇ?” ಅಂತ ಅವರ ಪತ್ನಿ ಹೇಳಿದಾಗ, ಸುಮ್ಮನೆ ನಕ್ಕು ಅವರ ಕೆಲಸ ಅವರು ಮುಂದುವರೆಸುತ್ತಿದ್ದರು. ಮಳೆ ಇದ್ದರೂ ಪ್ರೀತಿಯ ಗಿಡಗಳಿಗೆ ನೀರು ಹಾಕುವ ಅವರೆ ಅಕ್ಕರೆ ಎಂತಹದ್ದು ?! ಅವರು ಹೀಗೆ ತರ್ಕಕ್ಕೆ ಸಿಗದಂತೆ ಬದುಕಿದ್ದವರು. ಹಾಗಾಗಿಯೇ, ಇದ್ದಕ್ಕಿದ್ದಂತೆ ಮುಂಬೈಯನ್ನು ಬಿಟ್ಟು ಬಂದರೇನೋ !
ಜಯಂತ ಕಾಯ್ಕಿಣಿಯವರಿಗೆ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಬಂದಾಗ, ಅವರೊಂದಿಗೆ ಖುಷಿ ಹಂಚಿಕೊಂಡೆ. ಅದಕ್ಕವರು ಸಂತೋಷದಿಂದ, “”ಓಹೋ, ಇನ್ನು ನೆಗಡಿ, ಕೆಮ್ಮು ಬಂದರೆ ಅವರಿಗೇ ಫೋನ್ ಮಾಡಬಹುದು. ಡಾಕ್ಟರ್ ಅಲ್ಲವಾ?” ಎಂದು ನಕ್ಕರು.
ರಾವ್‌ಬೈಲ್ ಅವರನ್ನು ಒಬ್ಬ ಕಲಾವಿದನಿಗಿಂತ ಹೆಚ್ಚಾಗಿ ಒಬ್ಬ ಸಾಧಾರಣ ಮನುಷ್ಯನಾಗಿ ನಾನು ನೋಡಿದ್ದು. ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಶಿಸ್ತು, ಅಚ್ಚುಕಟ್ಟು. ಕಲೆ, ಕಲಾವಿದ ಅಂತೆಲ್ಲ ಶಬ್ಧಗಳನ್ನು ಅವರು ಬಳಸಿದ್ದನ್ನು ಒಂದು ದಿನವೂ ನಾನು ಕೇಳಿಲ್ಲ. “ನೀವು ಮುಂಬೈಯಲ್ಲಿ ಬಹಳ ಪ್ರಸಿದ್ಧರಂತೆ. ಗೋವಿಂದ ನಿಹಲಾನಿ, ಅಮೋಲ್ ಪಾಲೇಕರ್ ನಿಮ್ಮ ಗೆಳೆಯರಂತೆ’ ಅಂತೆಲ್ಲ ನಾನು ಕೇಳಿದರೆ, ತಮಗೆ ಸಂಬಂಧವೇ ಇಲ್ಲದ ವಿಷಯವೇನೋ ಎಂಬಂತೆ ನಕ್ಕು ಬೇರೇನೋ ಹೇಳುತ್ತಿದ್ದರು ಅಥವಾ ತಮಾಷೆ ಮಾಡಿಬಿಡುತ್ತಿದ್ದರು.
ಅವರನ್ನು ಭೇಟಿಯಾದ ಮೇಲೆ ನನ್ನ ಸಂಪರ್ಕಕ್ಕೆ ಬಂದ ದೃಶ್ಯ ಕಲಾವಿದರನ್ನು “”ರಾವ್‌ಬೈಲ್ ಗೊತ್ತಾ?” ಅಂತ ಕೇಳುತ್ತಿದ್ದೆ. ಆ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದ ಬಹಳಷ್ಟು ಕಲಾವಿದರಿಗೇ ಇವರ ಪರಿಚಯ ಇರಲಿಲ್ಲ. ಆರ್ಟ್ ಗ್ಯಾಲರಿಯ ಬಳಿಯೇ ಅವರ ಮನೆಯಿದ್ದರೂ ಅಲ್ಲಿಯ ಕಲಿಕಾರ್ಥಿಗಳಿಗೆ ಇವರ ಕಲೆಯ ಬಗೆಗೆ ಅರಿವಿಲ್ಲದೇ ಇದ್ದದ್ದು ವಿಪರ್ಯಾಸ. ಆದರೆ, ಅದರ ಯಾವ ಅಪೇಕ್ಷೆಯೂ ಇಲ್ಲದೇ, ಪ್ರತಿನಿತ್ಯ ತಮ್ಮ ಹೊಸ ಹೊಸ ಕಲಾಕೃತಿಗಳೊಂದಿಗೆ ಸಂಭ್ರಮ ಪಡುತ್ತಿದ್ದರು. ಅವರ ಕೊಲಾಜ್‌ಗಳಿಗೆಂದೇ ನೂರಾರು ಬಣ್ಣದ ಮ್ಯಗಜೀನ್‌ಗಳ ರಾಶಿಯೇ ಅವರ ಬಳಿ ಇರುತ್ತಿತ್ತು. ಯಾವುದೋ ಹೀರೋನ ಚಿತ್ರದ ಪ್ಯಾಂಟ್‌ನ ತುದಿ ಇವರ ಕೊಲಾಜ್‌ನ ಮೀನಿನ ಬಾಯಿ ಆಗಿತ್ತು. ಯಾವುದೋ ಮಾಡೆಲ್‌ನ ಅಂಗಿ ಇವರ ಗಿಡದ ಎಲೆಯಾಗಿರುವುದನ್ನು ಕೀಟಲೆಯ ದನಿಯಲ್ಲಿ ತೋರಿಸುತ್ತಿದ್ದರು.
ಅವರ ಪತ್ನಿ ಕುಮುದಿನಿಯವರು ಧಾರವಾಡದಲ್ಲಿ ನಡೆಯುತ್ತಿದ್ದ ಸಂಗೀತ, ನೃತ್ಯ ಪರೀಕ್ಷೆಗಳ ಮುಖ್ಯಸ್ಥರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳ, ನೂರಾರು ಪರೀಕ್ಷೆಗಳ, ಹತ್ತಾರು ಪರಿವೀಕ್ಷಕರುಗಳನ್ನು ಮ್ಯಾನೇಜ್ ಮಾಡುತ್ತಿದ್ದ ಗಟ್ಟಿ ಮಹಿಳೆ ಅವರು. ಅವರ ಕೆಲಸಗಳಲ್ಲೂ ರಾವ್‌ಬೈಲ್ ಅವರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಒಮ್ಮೆ ಬಹಳ ಪರೀಕ್ಷೆಗಳು ನಡೆಯುತ್ತಿತ್ತು. ಯಾರಿಗೂ ಸಮಯ ಇರಲಿಲ್ಲ. ಆಗ ತಾವೇ ಒಂದು ಥರ್ಮಾಸಿನಲ್ಲಿ ಚಹಾ ತಂದಿದ್ದರು. ರಾವ್‌ಬೈಲ್‌ರಂತಹ ಅದ್ಭುತ ಕಲಾವಿದ ಇಷ್ಟೊಂದು ಸರಳವಾಗಿರಲು ಸಾಧ್ಯವೇ? ಎಂದು ಆಶ್ಚರ್ಯವಾಯಿತು. “”ನೀವೇಕೆ ತರೋಕೆ ಹೋದಿರಿ?” ಅಂದಾಗ ಮತ್ತದೇ ಮಗುವಿನಂತಹ ನಗು.
ಅವರು ಧಾರವಾಡದಿಂದ ಬೆಂಗಳೂರಿಗೆ ನೆಲೆಸಲು ಹೊರಟಾಗ, ಒಂದು ದಿನ ಅವರ ಬಳಿಯಿದ್ದ ಪುಸ್ತಕಗಳನ್ನು ಕೊರಿಯರ್ ಮಾಡುವುದಕ್ಕೆ ಪ್ಯಾಕ್ ಮಾಡುತ್ತಿದ್ದರು. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಯಾರೋ ಒಬ್ಬ ಚಿತ್ರಕಲೆಯ ವಿದ್ಯಾರ್ಥಿ ಸಿಕ್ಕಿದ್ದನಂತೆ. ಅವನಿಗೆ ಉಪಯೋಗವಾಗಲಿ ಎಂದು ಅವನ ವಿಳಾಸ ತಂದು ಪುಸ್ತಕಗಳನ್ನು ಆತನಿಗೆ ಕಳಿಸಿದ್ದರು.
ಮುಟ್ಟಿ ನೋಡಿದರೆ ಎಲ್ಲಿ ಕೊಳೆಯಾಗುವುದೋ ಅನ್ನುವಷ್ಟರ ಮಟ್ಟಿಗೆ ತಮ್ಮ ಕಲಾಕೃತಿಗಳನ್ನು ಕಾಯ್ದುಕೊಂಡಿದ್ದರು. ತಮ್ಮ ಕಲಾಕೃತಿಯಿರಲಿ, ಅಂಚೆಗೆ ಹಾಕುವ ಯಾವುದೋ ಪತ್ರವಿರಲಿ, ಅಷ್ಟೇ ಜಾಗ್ರತೆಯಿಂದ ಶಿಸ್ತಿನಿಂದ ಜೋಪಾನ ಮಾಡುತ್ತಿದ್ದರು. ಇಂತಹ ಅದ್ಭುತ ಕಲಾವಿದರಾಗಿದ್ದು, ಯಾವ ಪ್ರಸಿದ್ಧಿಗೂ, ಪ್ರಶಸ್ತಿಗಳಿಗೂ ಅಪೇಕ್ಷೆಪಡದೇ, ತಾವೊಬ್ಬ ಕಲಾವಿದ ಅನ್ನುವುದೇ ಗೊತ್ತಿಲ್ಲದೆ ಇರುವ ಜನರ ಮೇಲೆ ಕಿಂಚಿತ್ ಬೇಸರವೂ ಇಲ್ಲದೆ, ಇಷ್ಟರ ಮಟ್ಟಿಗೆ ಸರಳವಾಗಿರುವುದು ಸಾಧ್ಯವೆ? ಅಂತ ಅವರನ್ನು ನೋಡಿದಾಗ ಅನ್ನಿಸುತ್ತಿತ್ತು.
ಜಯಂತ ಕಾಯ್ಕಿಣಿಯವರ ಒಂದು ಲೇಖನದಿಂದ ಇಂತಹ ಅದ್ಭುತ ವ್ಯಕ್ತಿಯ ಪರಿಚಯವಾದ್ದು ಅದೃಷ್ಟ. ಹೆಚ್ಚು ಮಾತಾಡದೇ ಸಿಕ್ಕ ಸ್ವಲ್ಪ ಅವಕಾಶದಲ್ಲಿ ಅವರ ವ್ಯಕ್ತಿಣ್ತೀ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರ ಕಲಾಕೃತಿಗಳಿಗಿಂತ, ರಾವ್‌ಬೈಲ್ ಎಂದರೆ ಕೊನೆಗೂ ನೆನಪಾಗುವುದು ಅವರ ಆ ಮಗುವಿನಂತಹ ನಗು ಮತ್ತು ಕೇವಲ ಪ್ರೀತಿ ಸೂಸುತ್ತಿದ್ದ ಕಣ್ಣುಗಳು!
ಚಿತ್ರಾ ವೆಂಕಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.