Uttarakashi Tunnel Collaps: ಕತ್ತಲ ಬದುಕಿನಲ್ಲಿ ಸಿಲುಕಿದವರ ಅಳಲು…
Team Udayavani, Nov 26, 2023, 12:11 PM IST
ಆಕಸ್ಮಿಕವಾಗಿ ರೂಮಿನ ಬಾಗಿಲು ಲಾಕ್ ಆಗಿ ಒಳಗೆ ಸಿಕ್ಕಿ ಹಾಕಿಕೊಂಡರೆ? ಬಾತ್ ರೂಮಿಗೆ ಹೋದಾಗ ಹೊರಗಿನಿಂದ ಯಾರಾದರೂ ಬೋಲ್ಟ… ಹಾಕಿದರೆ?
ಕರೆಂಟ್ ಹೋಗಿ ಕೆಲವು ನಿಮಿಷ ಲಿಫ್ಟಿನಲ್ಲಿ ಸಿಕ್ಕಿ ಹಾಕಿಕೊಂಡರೆ? ಕತ್ತಲಲ್ಲಿ ಪ್ರಯಾಣಿಸುವಾಗ ಘಾಟಿ ಪ್ರದೇಶದಲ್ಲಿ ವಾಹನ ಕೆಟ್ಟು ನಿಂತರೆ? ಇಂಥ ಹಲವು ಘಟನೆಗಳು ಬಹುತೇಕ ನಮ್ಮೆಲ್ಲರ ಜೀವನದಲ್ಲಿ ನಡೆದಿರುತ್ತವೆ. ಕೆಲವೇ ನಿಮಿಷ, ಕೆಲವೇ ಗಂಟೆಗಳ ಕಾಲ ಹೀಗೆ ಸಿಲುಕಿ ಕೊಂಡಿದ್ದಾಗ, ಯಾರಾದರೂ ಬಂದು ಈ ಕಷ್ಟದಿಂದ ಕಾಪಾಡುತ್ತಾರೆ ಎನ್ನುವ ವಾಸ್ತವ ತಿಳಿದಿದ್ದರೂ, ಆ ಸಮಯದಲ್ಲಿ ಭಯ, ಯೋಚನೆ, ದುಃಖ, ಚಿಂತೆ ಎಲ್ಲವೂ ಜೊತೆ ಜೊತೆಗೆ ಮೂಡುವುದು ಸುಳ್ಳಲ್ಲ. ಹೀಗಿರುವಾಗ, ಉತ್ತರಾಖಂಡದ ರಾಷ್ಟ್ರೀಯ ಹೆದ್ದಾರಿ ಯಮುನೋತ್ರಿ ಬಳಿಯ ಸಿಲ್ಕ್ಯಾರಾ ಎಂಬಲ್ಲಿ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಅದರ ಅವಶೇಷಗಳ ಮಧ್ಯೆ ಸಿಲುಕಿರುವ 41 ಜನ ಕಾರ್ಮಿಕ ಪರಿಸ್ಥಿತಿ ಹೇಗಿರಬಹುದು?
ರಕ್ಷಣಾ ಕಾರ್ಯಗಳು ಎಷ್ಟೇ ಭರದಿಂದ ಸಾಗಿದರೂ ಅದೆಷ್ಟೇ ಆಧುನಿಕ ತಂತ್ರಜ್ಞಾನ ಯಂತ್ರೋಪಕರಣಗಳನ್ನು ಬಳಸಿದರೂ ಎರಡು ವಾರಗಳಾದರೂ ಅವರನ್ನು ರಕ್ಷಿಸಲು ಸಾಧ್ಯವಾಗದೆ ಇರುವುದು ದುರದಷ್ಟಕರ. ಆಪತ್ತಿನಲ್ಲಿ ಸಿಲುಕಿರುವ ಬಡ ಜೀವಗಳ ಬಗ್ಗೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ದಿನನಿತ್ಯ ಓದುತ್ತಿದ್ದೇವೆ. ಹಿಮಾಲಯದ ಪ್ರದೇಶದಲ್ಲಿ ಹೀಗೆ ಸುರಂಗ ನಿರ್ಮಿಸುವುದು ಸುರಕ್ಷಿತವೇ?-ಇದಕ್ಕೆ ಸಾಕಷ್ಟು ಅಧ್ಯಯನ ನಡೆಸಲಾಗಿದೆಯೇ? ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎನ್ನುವ ಹಲವಾರು ಪ್ರಶ್ನೆಗಳು, ಅದಕ್ಕೊಂದಿಷ್ಟು ಉತ್ತರಗಳು, ಚರ್ಚೆಗಳು ಹುಟ್ಟಿಕೊಂಡಿದೆ.
ಕೇಳಿತೇ ಆಕ್ರಂದನ?
ಹೀಗೆ ಸುರಂಗದಲ್ಲಿ ಸಿಲುಕಿಕೊಂಡವರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಳ್ಳುವುದು ಕಷ್ಟ. ಸುರಂಗದಲ್ಲಿ ಸಿಲುಕಿಕೊಂಡ 41 ಜನರಲ್ಲಿ ಹೆಚ್ಚಿನವರು ಬಡ ಕುಟುಂಬಕ್ಕೆ ಸೇರಿದ ಕೂಲಿ ಕಾರ್ಮಿಕರು. ಹೆಚ್ಚಿನವರು ಅವಿದ್ಯಾವಂತರು. ಹೊಟ್ಟೆ-ಬಟ್ಟೆಗಾಗಿ ದೈಹಿಕ ಶ್ರಮ ಬೇಡುವ ಕಷ್ಟದ ಕೆಲಸವನ್ನು ಆಶ್ರಯಿಸಿಕೊಂಡವರು. ಅವರುಗಳ ಪ್ರತಿ ಮನೆಯ ಪರಿಸ್ಥಿತಿಯು ಖಂಡಿತವಾಗಿಯೂ ವಿಭಿನ್ನವಾಗಿರುತ್ತದೆ. ವಯಸ್ಸಾದ ಹೆತ್ತವರು, ಗರ್ಭಿಣಿಯರು, ಚಿಕ್ಕ ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವವರು, ಬದುಕಿನ ಕೊನೆಯ ದಿನಗಳನ್ನು ಎಣಿಸುತ್ತಿರುವ ಹಿರಿಯರು ಇಂಥ ಮನೆಗಳಲ್ಲಿರುತ್ತಾರೆ. ತಮ್ಮ ಮನೆಯವರ ಕಷ್ಟದ ಸಂದರ್ಭದಲ್ಲಿ ಜೊತೆಗಿರಬೇಕಾಗಿದ್ದ ಅವರು, ಸೂರ್ಯನ ಬೆಳಕಿನ ಕುರುಹೇ ಕಾಣದೆ, ಹಗಲು- ರಾತ್ರಿ ಎಂಬ ಅರಿವಿಲ್ಲದೆ, ಸರಿಯಾದ ಊಟ, ನೀರು, ನಿದ್ದೆ ಇಲ್ಲದೆ, ತಮ್ಮ ಹಣೆಬರಹ ಹೇಗಿದೆಯೋ ಎನ್ನುವ ಭಯದಲ್ಲಿ ಜೀವನ್ಮರಣ ಯಾತನೆ ಅನುಭವಿಸುವುದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ.
ದೇವರ ದಯೆಯಿಂದ ಸದ್ಯಕ್ಕೆ ಎಲ್ಲರೂ ಕ್ಷೇಮ!
ಇಲ್ಲಿಯವರೆಗೆ ಒಳಗೆ ಸಿಲುಕಿಕೊಂಡವರಲ್ಲಿ ಗಂಭೀರ ಆರೋಗ್ಯದ ಸಮಸ್ಯೆ ಕಂಡುಬಂದಿಲ್ಲವಾದರೂ ಮುಂದೆ ಕಂಡುಬರುವ ಭಯವಂತೂ ಇದ್ದೇ ಇದೆ. ಆಮ್ಲಜನಕದ ಕೊರತೆ, ನೀರು, ಆಹಾರದ ಕೊರತೆ, ಅರಿವೆ, ಶೌಚದ ಸಮಸ್ಯೆಗಳ ಜೊತೆಗೆ ಸೀಮಿತ ಜಾಗದಲ್ಲಿ 40 ಜನ 12 ದಿನಗಳ ಕಾಲ ಕಳೆಯುವುದು ಸಾಮಾನ್ಯದ ವಿಷಯವಲ್ಲ. ಸುರಕ್ಷಿತವಾಗಿ ಹೊರಗೆ ಬರುವ ಯಾವ ಭರವಸೆ ಇರದಿದ್ದರೂ, ಬದುಕಬೇಕಾದರೆ ಎಲ್ಲದಕ್ಕಿಂತ ಮುಖ್ಯವಾಗಿ ಅವರಿಗೆ ಬೇಕಾಗಿರುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ.
ಸುರಂಗದಲ್ಲಿ ಸಿಲುಕಿಕೊಂಡ ಕಾರ್ಮಿಕರಿಗೆ ಒಣ ಹಣ್ಣು, ಸೇಬು, ಕಿತ್ತಳೆ ಹಣ್ಣುಗಳು, ವಿಟಮಿನ್ ಮಾತ್ರೆಗಳು, ಕಿಚಡಿಯಂತಹ ಆಹಾರವನ್ನು ನೀಡಲಾಗುತ್ತಿದೆಯಾದರೂ ಅದು ಅವರಿಗೆ ಸಾಕಾಗುತ್ತದೆಯೇ? ಸರಿಯಾದ ಆಹಾರವಿಲ್ಲದೆ ಆರೋಗ್ಯ ಸಮಸ್ಯೆಯಾಗುವ ಭಯ ಒಂದು ಕಡೆ. ಸುರಂಗದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು. ನಿಃಶಕ್ತಿ, ರಕ್ತದೊತ್ತಡ, ಹೃದಯ ಬಡಿತದ ಸಮಸ್ಯೆ, ತಲೆನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮೊದಲೇ ಬಿಪಿ, ಶುಗರ್‌ನಂತಹ ಸಮಸ್ಯೆಗಳಿರುವವರಲ್ಲಿ ಸರಿಯಾದ ಸಮಯಕ್ಕೆ ಔಷದ ಸೇವಿಸದೆ ಸಮಸ್ಯೆ ಉಲ್ಬಣಿಸಬಹುದು.
ಪ್ರತಿಯೊಬ್ಬ ಮನುಷ್ಯನ ದೈಹಿಕ ಸ್ಥಿತಿಗತಿಗಳು ಹೇಗೆ ಭಿನ್ನವೋ ಮಾನಸಿಕ ಸ್ಥಿತಿಯೂ ಅಷ್ಟೇ ವಿಭಿನ್ನವಾಗಿರುತ್ತದೆ. ಇಂತಹ ಸಂದರ್ಭಗಳನ್ನು ಎದುರಿಸಲು ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ಒಬ್ಬೊಬ್ಬ ವ್ಯಕ್ತಿಯ ಸ್ಪಂದನೆ ಒಂದೊಂದು ರೀತಿಯಾಗಿರುತ್ತದೆ. ಕೆಲವರು ಸರಿ ಹೋಗುತ್ತದೆ ಎನ್ನುವ ಭರವಸೆಯಲ್ಲಿ ಕಾಯುತ್ತಿರಬಹುದು. ಮತ್ತೆ ಕೆಲವರು ತಮ್ಮವರಿಂದ ದೂರವಾಗುತ್ತಿದ್ದೇವೆ ಎಂದು ಮನಸಿಗೆ ಹಚ್ಚಿಕೊಳ್ಳಬಹುದು. ಕೆಲವರು ಈ ಒತ್ತಡವನ್ನು ತಮ್ಮ ಜೊತೆ ಇರುವವರ ಮೇಲೆ ಅಸಹನೆ ತೋರಿಸುತ್ತಾ ವ್ಯಕ್ತಪಡಿಸಬಹುದು. ಇನ್ನು ಕೆಲವರು ಖನ್ನತೆಗೆ ಜಾರಬಹುದು. ಇಂತಹ ಎಲ್ಲ ಭಯಗಳ ಮಧ್ಯೆಯೂ ತಜ್ಞರು ಒಂದಷ್ಟು ಆಶಾದಾಯಕ ಅಂಶಗಳನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿ ಸಿಲುಕಿಕೊಂಡ ಹೆಚ್ಚಿನವರು ಹೊಟ್ಟೆಪಾಡಿಗಾಗಿ ದುಡಿಯುವವರು. ಕಷ್ಟ ಬಡತನ ಅನುಭವಿಸಿರುವವರು. ಇಂತಹ ಸಮಸ್ಯೆಗಳನ್ನು ಇತರರಿಗಿಂತ ಶಕ್ತರಾಗಿ ಎದುರಿಸಬಲ್ಲ ತಾಕತ್ತು ಅವರಿಗಿದೆ. ಇದರೊಂದಿಗೆ ಅವರಿಗೆ ಜೊತೆಗಾರರು ಇರುವ ಕಾರಣ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಮಾನಸಿಕವಾಗಿ ಧೈರ್ಯ ತಂದುಕೊಳ್ಳಬಹುದು.
ಜೋಪಾನವಾಗಿ ಕುಟುಂಬ ಸೇರಿಕೊಳ್ಳಲಿ
ತಜ್ಞರ ಪ್ರಕಾರ ಸಿಲುಕಿಕೊಂಡಿರುವ ಕಾರ್ಮಿಕರು ಸುರಂಗದಿಂದ ಹೊರಗೆ ಬಂದ ಬಳಿಕವೂ ಒಂದಷ್ಟು ದಿನ ವೈದ್ಯರ ಅವಲೋಕನದಲ್ಲಿ ಇರಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುರಂಗದಡಿ ಯಲ್ಲಿ ಸಿಲುಕಿರುವ ಕಾರ್ಮಿಕರನ್ನು ಕರೆತರಲು ಹಗಲು-ರಾತ್ರಿ ಶ್ರಮಿಸುತ್ತಿವೆ. ಆದಷ್ಟು ಬೇಗ ಕಾರ್ಮಿಕರನ್ನು ಅವರ ಕುಟುಂಬಕ್ಕೆ ಸೇರಿಸುವ ವಿಶ್ವಾಸವನ್ನು ಎಲ್ಲರೂ ವ್ಯಕ್ತಪಡಿಸುತ್ತಿದ್ದಾರೆ. ಕೋಟ್ಯಾಂತರ ಭಾರತೀಯರು ಕೂಡ ಸುರಂಗದೊಳಗೆ ಸಿಲುಕಿಕೊಂಡಿರುವ ಎಲ್ಲಾ ಕಾರ್ಮಿಕರೂ ಆದಷ್ಟು ಬೇಗ ಸುರಕ್ಷಿತವಾಗಿ ಹೊರಗೆ ಬರಲಿ, ತಮ್ಮವರನ್ನು ಸೇರಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದಷ್ಟು ಬೇಗ ನಮ್ಮೆಲ್ಲರ ಪ್ರಾರ್ಥನೆ ಈಡೇರಲಿ, ಸಿಹಿ ಸುದ್ದಿ ಹೊರಬರಲಿ ಎಂಬುದಷ್ಟೇ ಸಮಸ್ತ ಭಾರತೀಯರ ಹಾರೈಕೆ.
– ಅಶ್ವಿನಿ ಸುನಿಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.