Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ
Team Udayavani, Nov 24, 2024, 11:37 AM IST
“ನವೆಂಬರ್‌ನಲ್ಲಿ ಮಾತ್ರ ಕನ್ನಡ ಮಾತಾಡಿದರೆ ಸಾಕು’ ಎನ್ನುವ ಜನರ ಮಧ್ಯೆ ಪ್ರತಿಕ್ಷಣವೂ ಕನ್ನಡವನ್ನೇ ಧ್ಯಾನಿಸುವ, ಕನ್ನಡವನ್ನೇ ಉಸಿರಾಡುವ ವೆಂಕಟೇಶ ಮರಗುದ್ದಿ ಎಂಬ ವಿಶಿಷ್ಟ ವ್ಯಕ್ತಿಯೊಬ್ಬರು ಹುಬ್ಬಳ್ಳಿ ಯಲ್ಲಿದ್ದಾರೆ. ಇವರ ಮನೆ, ಮನಸ್ಸಿನ ತುಂಬಾ ಕನ್ನಡವೇ ತುಂಬಿಹೋಗಿದೆ. “ಕನ್ನಡದ ಕೈಂಕರ್ಯವೇ ನನ್ನ ಪಾಲಿನ ಸ್ವರ್ಗ’ ಎನ್ನುತ್ತಾರೆ ಮರಗುದ್ದಿ. ಬಂಗಾರದ ಬೋರಮಾಳ ಸರ ಮಾಡುವ ವೃತ್ತಿಯ ಈ ವ್ಯಕ್ತಿಯ ಕನ್ನಡ ಪರ ಹೋರಾಟದ ಕಥೆ ಕೇಳಿದರೆ ಹೆಮ್ಮೆ, ಖುಷಿ ಮತ್ತು ರೋಮಾಂಚನ
ಒಟ್ಟಿಗೇ ಆಗುತ್ತದೆ…
ಅವರ ನಡೆ ಕನ್ನಡ, ನುಡಿ ಕನ್ನಡ, ಮನೆ ಕನ್ನಡ, ಮನ ಕನ್ನಡ! ಸರ್ವಂ ಕನ್ನಡಮಯಂ ಅನ್ನುವ ಮಾತಿಗೆ ಅನ್ವರ್ಥವಾಗಿ ಬದುಕುತ್ತಿರುವ ಅವರೇ- ವೆಂಕಟೇಶ ಕೃಷ್ಣಾಜಿ ಮರೆಗುದ್ದಿ. ಮತ್ತೂಬ್ಬರ ಮನೆಯಂಗಳ, ಮನದಂಗಳದಲ್ಲಿ ಅವರು ಬಿತ್ತಿದ್ದೂ ಕನ್ನಡ! ಅವರೆಂದರೆ ಕನ್ನಡ, ಕನ್ನಡ, ಕನ್ನಡ!! ಕನ್ನಡಕ್ಕಾಗೇ ಜನನ, ಕನ್ನಡಕ್ಕಾಗೇ ಮರಣ ಎಂಬುದಕ್ಕೆ ಅವರ ಬದುಕು ಅನ್ವರ್ಥಕ. ಅವರ ಮನೆಯ ಹೆಸರು “ಸರ್ವಜ್ಞ’. ಒಳ ಹೊಕ್ಕರೆ ಬಸವಣ್ಣ, ತಾಯಿ ಭುವನೇಶ್ವರಿಯ ಭಾವಚಿತ್ರ. ನಡುಮನೆಯ ಹೆಸರು- “ಅಲ್ಲಮಪ್ರಭು ಸಭಾಂಗಣ!’ ಅಲ್ಲಿ ಜ್ಞಾನಪೀಠಿಗಳ ಭಾವಚಿತ್ರ. ಅಡುಗೆ ಮನೆಗೆ ಅಕ್ಕಮಹಾದೇವಿಯ ಹೆಸರು! ಒಂದು ಕೋಣೆಗೆ “ಪಂಪ’, ಇನ್ನೊಂದಕ್ಕೆ “ರನ್ನ’ ಎಂದು ಫಲಕ. ಮೊದಲ ಮಹಡಿಯಲ್ಲಿ ಲಕ್ಷ್ಮೀಶ ವೇದಿಕೆ, ಅಲ್ಲಿರುವ ಕೋಣೆಗಳ ಹೆಸರು ಕ್ರಮವಾಗಿ “ಕುಮಾರವ್ಯಾಸ’, “ರಾಘವಾಂಕ’. ಆ ಮೂಲಕ ಮನೆ ತುಂಬ ಕನ್ನಡದ ಕವಿಪುಂಗವರ ಸಿಹಿನೆನಪು.
ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿಯ, ಪ್ರಸ್ತುತ ಹುಬ್ಬಳ್ಳಿ ನಿವಾಸಿಯಾದ ವೆಂಕಟೇಶ ಕೃಷ್ಣಾಜಿ ಮರೆಗುದ್ದಿಯವರ ಬದುಕಿನ ಭಾವಬಿಂಬವಿದು. ಉತ್ತರ ಕರ್ನಾಟಕ ಸೀಮೆಯಲ್ಲಿ ಹೆಣ್ಣುಮಕ್ಕಳು ಧರಿಸುವ ಬಂಗಾರದ ಬೋರಮಾಳ ಸರ ಮಾಡುವ ವೃತ್ತಿ ಅವರದು. ಒಮ್ಮೆ ಖ್ಯಾತ ಬಂಗಾರದ ಅಂಗಡಿಯವರು ಬೋರಮಾಳ ಸರ ಮಾಡಿಕೊಡಲು ಹೇಳಿ, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅನ್ಯ ಭಾಷೆಯಲ್ಲಿ ಬರೆದುಕೊಟ್ಟಾಗ, ಅದನ್ನು ತಿರಸ್ಕರಿಸಿ, ಕನ್ನಡದಲ್ಲಿ ಮಾತ್ರ ಮಾಹಿತಿ ಬರೆಯುವೆನೆಂದು ಹೇಳಿ, ತಮ್ಮ ಆದಾಯಕ್ಕೆ ಕುತ್ತು ಬಂದರೂ ತಲೆಕೆಡಿಸಿಕೊಳ್ಳದ ನಿಷ್ಠಾವಂತ ಕನ್ನಡಿಗ ವೆಂಕಟೇಶ ಮರಗುದ್ದಿ. ತಂದೆ ತಾಯಿ ನೀಡಿದ ಸಂಸ್ಕಾರ, ಅಣ್ಣನ ಕನ್ನಡಾಭಿಮಾನವೇ ಅವರಿಗೆ ಪ್ರೇರಣೆ.
ಪೆಟ್ಟುತಿಂದರೂ ಎದೆಗುಂದಿಲ್ಲ…
ಕನ್ನಡ ನಾಮಫಲಕ ಅಳವಡಿಕೆಗೆ ಜಾಗೃತಿ ಮೂಡಿಸಲು ಹೋದಾಗ ಪೊಲೀಸರೂ ಸೇರಿದಂತೆ ಹಲವರಿಂದ ಗುದ್ದಿಸಿಕೊಂಡರೂ ಮರೆಗುದ್ದಿ ಎದೆಗುಂದಿಲ್ಲ. “ಬೇಕಾದರೆ ಇನ್ನೊಂದೆರಡು ಬಡಿಯಿರಿ, ಆದರೆ ಕನ್ನಡ ನಾಮಫಲಕ ಹಾಕಿ…’ ಎಂದು ವಿನಂತಿಸಿದ್ದಾರೆ. ಕನ್ನಡ ಫಲಕ ಹಾಕಿದ ಅಂಗಡಿ ಮಾಲೀಕರಿಗೆ ಸ್ವಂತ ಖರ್ಚಿನಿಂದ ಸನ್ಮಾನ ಮಾಡಿದ್ದಾರೆ. ಮಳಿಗೆಯಲ್ಲಿ ಕನ್ನಡದ ನಾಮಫಲಕಗಳು ಇರಲೇಬೇಕು ಎಂಬ ಅವರ ಕೋರಿಕೆಗೆ ಬಿಗ್ ಬಜಾರ್‌ನಂತಹ ದೈತ್ಯ ಮಳಿಗೆಗಳೂ ಮಣಿದಿದ್ದು ವಿಶೇಷ. ಸಾವಿರಾರು ನಾಮಫಲಕಗಳನ್ನು ಕನ್ನಡದಲ್ಲಿ ಹಾಕಿಸಿದ ಹಿರಿಮೆ ಅವರದು.
ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಕನ್ನಡ ದೂರದರ್ಶನ ಪ್ರಸಾರ ನಾಡಿನಾದ್ಯಂತ ಪ್ರಸಾರವಾಗಲು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಲಕ್ಷದಂತೆ ಬರೋಬ್ಬರಿ 3 ಲಕ್ಷ ಪತ್ರ ಚಳವಳಿ ನಡೆಸಿದ್ದು ಇವರ ಕನ್ನಡಾಭಿಮಾನಕ್ಕೆ ಸಾಕ್ಷಿ. ಗೋಕಾಕ್ ಚಳವಳಿ, ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೇ ವಲಯ ಸ್ಥಾಪನೆಗಾಗಿ ಎರಡು ಬಾರಿ ರೈಲು ತಡೆ ಚಳವಳಿ, ಕಾವೇರಿ ತೀರ್ಪು ನಾಡಿಗೆ ವ್ಯತಿರಿಕ್ತವಾಗಿ ಬಂದಾಗ ರೈಲು ತಡೆದು ಮಾಡಿದ ಹೋರಾಟ, ಮಹಾರಾಷ್ಟ್ರ ದಿಂದ ಕನ್ನಡಿಗರನ್ನು ಓಡಿಸಿ ಎಂದ ಬಾಳಾ ಠಾಕ್ರೆ ಅವರ ಪ್ರತಿಕೃತಿ ದಹಿಸಿ ಖಂಡಿಸಿದ್ದು, ಪಠ್ಯದಲ್ಲಿ ಕನ್ನಡಕ್ಕೆ ಅವಮಾನವಾದಾಗ, ಸಾರಿಗೆ ಸಂಸ್ಥೆಯ ಆವರಣದಲ್ಲಿನ ಕನ್ನಡ ಧ್ವಜ ಸ್ತಂಭ ತೆಗೆದಾಗ, ನಗರದ ರಸ್ತೆಗಳಿಗೆ ಕನ್ನಡ ಧೀಮಂತರ ಹೆಸರಿಡಲು ಆಗ್ರಹಿಸಿ… ಹೀಗೆ ಕನ್ನಡದ ಅಸ್ಮಿತೆಗಾಗಿ ಹೋರಾಡಬೇಕಾದ ಪ್ರಸಂಗ ಬಂದಾಗೆಲ್ಲ ಬೀದಿಗಳಿದು ಹೋರಾಡಿದ ಹಿರಿಮೆ ಮರೆಗುದ್ದಿಯವರದು.
ವರ್ಷವಿಡೀ ಕನ್ನಡದ ಕೆಲಸ
ಇದುವರೆಗೂ 206 ಮನೆಗಳಲ್ಲಿ “ಕನ್ನಡದ ಕಂಪು’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿರುವ ಮರೆಗುದ್ದಿಯವರು, ಮನೆ ಮನೆ ಕವಿಗೋಷ್ಠಿ, ಕಾವ್ಯ ಕಮ್ಮಟ, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತಿಗಳ ಭಾವಚಿತ್ರ ವಿತರಣೆ, ಶ್ರೇಷ್ಠ ಕಾದಂಬರಿಕಾರ ಅನಕೃ, ಡಾ.ರಾಜಕುಮಾರ್ ಸೇರಿದಂತೆ ಮಹನೀಯರ ಜನ್ಮದಿನಾಚರಣೆಯನ್ನು ಸ್ವಂತ ಖರ್ಚಿನಲ್ಲಿ ಆಚರಿಸಿದ್ದಾರೆ. ಕಲಾವಿದರು, ಸಾಹಿತಿಗಳಿಗೆ ಸನ್ಮಾನ ಮಾಡುವ ಮೂಲಕ ವರ್ಷವಿಡೀ ಒಂದಿಲ್ಲೊಂದು ಬಗೆಯ ಕನ್ನಡದ ಕೆಲಸದಲ್ಲಿ ನಿರತರಾಗಿರುತ್ತಾರೆ. 40 ವರ್ಷಗಳಿಂದ ಕುಟುಂಬ ಸಹಿತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಪ್ಪದೇ ಹೋಗುವುದು. ರಾಜ್ಯೋತ್ಸವ ಸಂದರ್ಭದಲ್ಲಿ ವೃದ್ಧಾಶ್ರಮ, ಅನಾಥ ಮಕ್ಕಳ ಶಾಲೆಯಲ್ಲಿ ಹಣ್ಣು, ಬ್ರೆಡ್, ಹಾಲು ವಿತರಿಸುವ ಸುಮನಸು ಅವರದು.
ಇಂಗ್ಲೆಂಡ್‌ನ ಥೇಮ್ಸ… ನದಿ ದಂಡೆಯಲ್ಲಿ ಬಸವಣ್ಣನ ಪ್ರತಿಮೆ ಅನಾವರಣಗೊಂಡಾಗ, ದೇವೇಗೌಡರು ಪ್ರಧಾನಿಯಾದಾಗ, ಬಿ. ಎಸ್. ಯಡಿಯೂರಪ್ಪ, ಉದ್ಯಮಿ ಸಂಕೇಶ್ವರ ಅವರು ಕನ್ನಡ, ಕರ್ನಾಟಕ ಹೆಸರಿನಲ್ಲಿ ಪಕ್ಷ ಕಟ್ಟಿದಾಗ ಸಿಹಿ ಹಂಚಿ ಸಂತಸಪಟ್ಟದ್ದು, ಮರಗುದ್ದಿಯವರಿಗೆ ಕನ್ನಡದ ಮೇಲಿರುವ ಪ್ರೀತಿಗೆ ಸಾಕ್ಷಿ.
ಕನ್ನಡದ ಸೇವೆಯಲ್ಲೇ ಸಂತೃಪ್ತಿ…
“ಕನ್ನಡ ಮರೆತರೆ ಅಂಥ ಜನರನ್ನು ನಾನು ಬಯ್ಯುವುದಿಲ್ಲ. ಬದಲಾಗಿ, ಅವರಿಂದ ಗುದ್ದಿಸಿಕೊಂಡರೂ ಸರಿ, ಕನ್ನಡ ಜಾಗೃತಿ ಮೂಡಿಸುವೆ. ಪ್ರತಿಫಲಾಪೇಕ್ಷೆಯಿಲ್ಲದೆ ಕನ್ನಡದ ಕೆಲಸ ಮಾಡುವೆ. ಕನ್ನಡದ ವಿಷಯ ಬಂದಾಗ ಮಾತ್ರ ನಾನು ವೀರ ಕನ್ನಡಿಗ, ಕನ್ನಡಕ್ಕಾಗಿ ಜೀವ ಕೊಡಲೂ ಸಿದ್ಧ. ಕನ್ನಡಾಂಬೆಯ ಕೈಂಕರ್ಯವೇ ನನ್ನ ಪಾಲಿನ ಸ್ವರ್ಗ. ಇದಕ್ಕೆ ಮಡದಿ, ಮಕ್ಕಳು, ಸೊಸೆ ಎಲ್ಲರ ಸಹಕಾರವೂ ಇರುವುದು ನನ್ನ ಪುಣ್ಯ’ ಅನ್ನುತ್ತಾರೆ ಮರೆಗುದ್ದಿ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ವಿದ್ಯಾವರ್ಧಕ ಸಂಘ, ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ, ನೃಪತುಂಗ ಕನ್ನಡ ಸಂಘ, ಮಯೂರ ಸೇನೆ, ಕನ್ನಡ ಜಾಗೃತಿ ವೇದಿಕೆ, ಅನ್ವೇಷಣಾ ಸಾಹಿತ್ಯ ವೇದಿಕೆ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳೊಂದಿಗೆ ಒಡನಾಟ ಹೊಂದಿರುವ ಅವರಿಗೆ ಧೀಮಂತ ಕನ್ನಡಿಗ, ಕರ್ನಾಟಕ ಭೂಷಣ, ಕನ್ನಡ ಕಟ್ಟಾಳು ಪ್ರಶಸ್ತಿಗಳು ಸೇರಿದಂತೆ ಸಾಕಷ್ಟು ಪ್ರಶಸ್ತಿ, ಪುರಸ್ಕಾರ, ಸಮ್ಮಾನಗಳು ಲಭಿಸಿವೆ.
ಮರೆಗುದ್ದಿಯವರಿಗೆ ಫೋನ್ ಮಾಡಿದರೆ (ಅವರ ದೂರವಾಣಿ ಸಂಖ್ಯೆ: 9945114335) ಆ ಕಡೆಯಿಂದ ಅಪ್ಪಿ ತಪ್ಪಿ ಹಾಯ…, ಹಲೋ ಎಂಬ ಮಾತುಗಳು ಕೇಳಿಬರುವುದಿಲ್ಲ. ಬದಲಿಗೆ- ನಮಸ್ಕಾರ, ಶುಭೋದಯ, ಜೈ ಕರ್ನಾಟಕ ಎಂದು ಮಾತುಗಳು ಕೇಳಿಸುತ್ತವೆ. ನವೆಂಬರ್‌ನಲ್ಲಿ ಮಾತ್ರ ಕನ್ನಡ ಮಾತಾಡಿದರೆ ಸಾಕು ಅಂದುಕೊಳ್ಳುವ ಮನಸ್ಥಿತಿಯ ಜನರೇ ಸುತ್ತಲೂ ಇರುವಾಗ, ಪ್ರತಿ ಕ್ಷಣವೂ ಕನ್ನಡವನ್ನೇ ಧ್ಯಾನಿಸುವ, ಮಾತಾಡುವ ವ್ಯಕ್ತಿಯೊಬ್ಬ ನಮ್ಮೊಂದಿಗಿರುವುದು ಹೆಮ್ಮೆಯ ಸಂಗತಿಯಲ್ಲವೆ?
ಅನುಕರಣೀಯ ನಡೆ…
1971ರಲ್ಲಿಯೇ “ವೀರಪುಲಕೇಶಿ ಕನ್ನಡ ಬಳಗ’ ಕಟ್ಟಿ ಕನ್ನಡಾಂಬೆಯ ಪರಿಚಾರಿಕೆಯಲ್ಲಿ ನಿರತರಾದ ವ್ಯಕ್ತಿ ವೆಂಕಟೇಶ ಮರೆಗುದ್ದಿ. ವರನಟ ಡಾ. ರಾಜ್‌ಕುಮಾರ್‌ರ ಅಭಿಮಾನಿ. ಇವರು, ಗೇಯ ಗೀತೆಗಳ ಹಾಡುಗಾರರೂ ಹೌದು. ಕನ್ನಡದ ಅಂಕಿಗಳ ಗೋಡೆ ಗಡಿಯಾರ ತಯಾರಿಸಿದ ಹಿರಿಮೆ ಇವರದು. ಮನೆಯ ದಿನಸಿ ಪಟ್ಟಿ, ತಿಂಗಳ ಕೊಡುಕೊಳ್ಳುವಿಕೆ ವಿವರ, ಅವರಿವರ ದೂರವಾಣಿ ಸಂಖ್ಯೆ ಎಲ್ಲದರಲ್ಲೂ ಕನ್ನಡ ಅಂಕಿ ಬಳಸುವುದು ಮರಗುದ್ದಿಯವರ ವಿಶೇಷ. ಅವರ ನಡೆಯನ್ನು ಹೆಂಡತಿ, ಮಗ ಮತ್ತು ಸೊಸೆ ಕೂಡ ಅನುಸರಿಸುತ್ತಾರೆ! ಕನ್ನಡದ ಸೇವೆಗಾಗಿ ತಂಡಕಟ್ಟಿ, ಸ್ವಂತ ಖರ್ಚಿನಲ್ಲಿ ಐದು ದಶಕಗಳಿಂದ ಸದ್ದಿಲ್ಲದೆ ಕನ್ನಡಸೇವೆ ಮಾಡಿಕೊಂಡು ಬಂದಿರುವ ಹೆಗ್ಗಳಿಕೆ ಇವರದು.
ಕನ್ನಡ ಬೇಡ ಅಂದದ್ದಕ್ಕೆ ಮದುವೆ ಪ್ರಸ್ತಾಪ ಕೈಬಿಟ್ಟರು!:
ಮರೆಗುದ್ದಿ ಅವರ ಮಗನಿಗೆ ಒಂದು ಕಡೆ ಸಂಬಂಧ ಕೂಡಿ ಬಂದಿತ್ತು. ಹುಡುಗಿ ಕಡೆಯವರೂ ಒಪ್ಪಿಕೊಂಡಿದ್ದರು. ಇವರಿಗೂ ಹುಡುಗಿ, ಅವರ ಮನೆತನ ಒಪ್ಪಿಗೆಯಾಗಿತ್ತು. ಕಡೆಗೆ ಮದುವೆ ಮಾತುಕತೆಗೆ ಮಧ್ಯವರ್ತಿಯಾಗಿದ್ದ ಹಿರಿಯರ ಎದುರು ಮರೆಗುದ್ದಿ ಅವರು ಒಂದು ಕೋರಿಕೆ ಸಲ್ಲಿಸಿದರು. ಅದೆಂದರೆ… “ಮುಂದೆ ಹುಟ್ಟುವ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳಿಸಬೇಕು’ ಎಂದು. ಅದಕ್ಕೆ ಹುಡುಗಿ ಒಪ್ಪಲಿಲ್ಲ. ಆಗ ಮರೆಗುದ್ದಿ ಅವರು, ಕನ್ನಡ ತಿರಸ್ಕರಿಸುವ ಹುಡುಗಿ ನಮಗೂ ಬೇಡ ಎಂದು ಆ ಸಂಬಂಧವನ್ನೇ ಕೈ ಬಿಟ್ಟರು! ಈಗ ಅವರ ಮಗನಿಗೆ ಬೇರೆ ಕಡೆ ಮದುವೆ ಆಗಿದೆ. ಮರಗುದ್ದಿಯವರ ಸೊಸೆ ಕನ್ನಡಾಭಿಮಾನಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ?
-ಅಂಬರೀಷ ಹಾನಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.