ವೀಸಾ-ಬಾಲಾಜಿ
Team Udayavani, Dec 23, 2018, 6:00 AM IST
ಇಲ್ಲಿ ಪ್ರಾರ್ಥನೆಗೈದು ಅಮೆರಿಕ ವೀಸಾಕ್ಕೆ ಅನುಮತಿ ಕೋರಿದವರ ಇಷ್ಟಾರ್ಥ ಸಿದ್ಧಿಯಾಗತೊಡಗಿದಾಗ ಚಿಲ್ಕೂರಿನ ಬಾಲಾಜಿಯ ಹೆಸರು ಪ್ರಸಿದ್ಧವಾಯಿತು.
ವೀಸಾಕ್ಕೂ ಬಾಲಾಜಿ ದೇವರಿಗೂ ಏನು ಸಂಬಂಧ? ಕಲ್ಪನೆಗೂ ಬಾರದ ಈ ವಿಷಯ ಹೈದರಾಬಾದ್‌ನಲ್ಲಿ ತಿಳಿಯಿತು. ಹೈದರಾಬಾದ್‌ನಿಂದ 30 ಕಿ. ಮೀ. ದೂರದಲ್ಲಿರುವ ಚಿಲ್ಕೂರು ಎಂಬಲ್ಲಿರುವ ಬಾಲಾಜಿ ವೆಂಕಟರಮಣ ದೇವಸ್ಥಾನ 500 ವರ್ಷಕ್ಕೂ ಹಳೆಯದು. ಓಸ್ಮಾನ್ ಸಾಗರ ಕೆರೆಯ ದಂಡೆಯಲ್ಲಿರುವ, ಭಕ್ತ ರಾಮದಾಸನ ಪೂರ್ವಜರಾದ ಮಾದಣ್ಣ ಮತ್ತು ಅಕ್ಕಣ್ಣನ ಕಾಲದಲ್ಲಿ ನಿರ್ಮಿತವಾದ ಈ ದೇಗುಲ ಬಹಳ ಚಿಕ್ಕದಾದರೂ ಪ್ರಸಿದ್ಧವಾದದ್ದು. ಭಕ್ತರು ಪ್ರಾರ್ಥನೆ ಸಲ್ಲಿಸಿ ಕೇಳಿಕೊಂಡದ್ದನ್ನು ಉದಾರವಾಗಿ ; ಅದರಲ್ಲೂ ಹೊರದೇಶಗಳಿಗೆ ಉದ್ಯೋಗಕ್ಕಾಗಲಿ, ವಿದ್ಯಾರ್ಜನೆಗಾಗಲಿ ತೆರಳುವಾಗ ಅವಶ್ಯವಾಗಿ ಬೇಕಾದ ವೀಸಾವನ್ನು ದೊರಕಿಸಿಕೊಡುವನೆಂದು ಪ್ರಸಿದ್ಧನಾಗಿದ್ದಾನೆ ಈ ಪುಟ್ಟ ಬಾಲಾಜಿ. ಹಾಗಾಗಿಯೇ ಅನ್ವರ್ಥನಾಮ ವೀಸಾ ಬಾಲಾಜಿಯೆಂದು!
ಪ್ರತಿವರ್ಷವೂ ತಿರುಪತಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತನೊಬ್ಬ ವಯಸ್ಸಾದಂತೆ ಪ್ರಯಾಣಿಸಲು ಅಸಮರ್ಥನಾದ. ಆಗ ಬಾಲಾಜಿ ಅವನ ಕನಸಿನಲ್ಲಿ ಬಂದು ಚಿಲ್ಕೂರಿನಲ್ಲಿ ಒಂದು ಕಡೆ ಅಗೆದು ನೋಡಿದರೆ ತಾನು ದರ್ಶನವೀಯು ವೆನೆಂದು ಹೇಳಿದನಂತೆ. ಅದರ ಪ್ರಕಾರ ಉತನನ ನಡೆಸಿದಾಗ ಭೂಮಿಯೊಳಗೆ ಸಿಕ್ಕ ಬಾಲಾಜಿಯ ಚಿಕ್ಕ ವಿಗ್ರಹವನ್ನು ಪ್ರತಿಷ್ಠಾಪನೆಗೈದು ಅಲ್ಲೇ ಬಾಲಾಜಿಯ ಪೂಜಾ ಕೈಂಕರ್ಯಗಳನ್ನು ನಡೆಸತೊಡಗಿದನಂತೆ!
ಒಂದು ಹಂತದಲ್ಲಿ ಇಲ್ಲಿ ಪ್ರಾರ್ಥನೆಗೈದು ಅಮೆರಿಕಾ ವೀಸಾಕ್ಕೆ ಅನುಮತಿ ಕೋರಿದವರ ಇಷ್ಟಾರ್ಥ ಸಿದ್ಧಿಯಾಗತೊಡಗಿದಾಗ ಚಿಲ್ಕೂರಿನ ಬಾಲಾಜಿಯ ಹೆಸರು ಪ್ರಸಿದ್ಧವಾಯಿತು. ಮೊದಲಿಗೆ ದೇವಸ್ಥಾನವನ್ನು ಪ್ರವೇಶಿಸಿ ಪೂಜೆಪುನಸ್ಕಾರಗಳನ್ನು ಕೈಗೊಂಡು ಹನ್ನೊಂದು ಪ್ರದಕ್ಷಿಣೆಗಳನ್ನು ಹಾಕಿ ತಮ್ಮ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸಿಕೊಳ್ಳುತ್ತಾರೆ. ತಮ್ಮ ಅಭೀಷ್ಟ ನೆರವೇರಿದ ನಂತರ ದೇವರಿಗೆ ನೂರ ಎಂಟು ಪ್ರದಕ್ಷಿಣೆಗಳನ್ನು ಹಾಕಿ ಹರಕೆ ತೀರಿಸುತ್ತಾರೆ. ನೂರ ಎಂಟು ಪ್ರದಕ್ಷಿಣೆಗಳ ಲೆಕ್ಕವಿಡಲು ಕಾಗದದ ಕೋಷ್ಟಕ ಹಾಗೂ ಪೆನ್ಸಿಲುಗಳು ದೇವಸ್ಥಾನದ ಪ್ರವೇಶದ್ವಾರದ ಹೊರಗೆ ಹೂವು, ಹಣ್ಣು, ತೆಂಗಿನಕಾಯಿಗಳ ಜೊತೆಗೆ ಮಾರಾಟಕ್ಕಿವೆ. ಬೆಳಿಗ್ಗೆ 6ರಿಂದ ಸಾಯಂಕಾಲ 8 ಗಂಟೆಯವರೆಗೆ ತೆರೆದಿರುವ ಈ ದೇವಸ್ಥಾನದಲ್ಲಿ ದಿನದ ಯಾವ ಹೊತ್ತಿಗೆ ಭೇಟಿ ಇತ್ತರೂ ತಂಡೋಪತಂಡವಾಗಿ ಗೋವಿಂದಾ, ಗೋವಿಂದಾ ಎಂದು ಉದ್ಘೋಷಿಸುತ್ತ ಪ್ರದಕ್ಷಿಣೆ ಹಾಕುತ್ತಿರುವ 25-30ವಯಸ್ಸಿನ ತರುಣ ತರುಣಿಯರು ತಮ್ಮ ಹೆತ್ತವರ ಜೊತೆ ಕಾಣಸಿಗುತ್ತಾರೆ. ಧ್ವನಿವರ್ಧಕದಲ್ಲಿ ಅವ್ಯಾಹತವಾಗಿ ಕೇಳಿಸುವ ಧಾರ್ಮಿಕ ಪ್ರವಚನಗಳು ಇಡೀ ವಾತಾವರಣವನ್ನು ಭಕ್ತಿಮಯವಾಗಿಸುತ್ತದೆ. “ವಾಕ್’ ಎಂಬ ಧಾರ್ಮಿಕ ಪ್ರಕಟಣೆಯೂ ತೀರ್ಥ- ಪ್ರಸಾದಗಳ ಜೊತೆ ವಿತರಣೆಯಾಗುತ್ತದೆ.
ಈ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಇಲ್ಲ. ಏನಾದರೂ ಆರ್ಥಿಕ ಕೊಡುಗೆ ನೀಡುವುದಿದ್ದರೆ ನೇರವಾಗಿ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಬಹುದು. ಬ್ಯಾಂಕಿನ ವಿವರಗಳು ಲಭ್ಯವಿವೆ. ಪ್ರಸಿದ್ಧರಿಗಾಗಿ ಪ್ರತ್ಯೇಕ ದರ್ಶನದ ವ್ಯವಸ್ಥೆ ಇಲ್ಲ. ಎಲ್ಲರೂ ಒಂದೇ ಸಾಲಿನಲ್ಲಿ ಒಳಗೆ ಪ್ರವೇಶಿಸಬೇಕು. ಈ ದೇವಸ್ಥಾನವು ಸರ್ಕಾರದ ಅಧೀನಕ್ಕೆ ಒಳಪಟ್ಟಿಲ್ಲ. ಈ ವಿಷಯಗಳಲ್ಲಿ ಚಿಲ್ಕೂರು ಬಾಲಾಜಿ ದೇವಸ್ಥಾನ ಪ್ರಸಿದ್ಧವಾಗಿರುವ ಬೇರೆ ದೇವಸ್ಥಾನಗಳಿಗಿಂತ ವಿಭಿನ್ನ. ವಿನ್ಯಾಸದಲ್ಲಿ ಅತೀ ಸಾಧಾರಣವಾಗಿದೆ. ಪುರಾತನ ದೇವಸ್ಥಾನಗಳಲ್ಲಿ ಕಾಣುವ ಶಿಲ್ಪಕಲೆಗಳೊಂದೂ ಕಾಣಿಸುವುದಿಲ್ಲ. ಜನರು ತಮ್ಮ ಆಸೆ-ಅಪೇಕ್ಷೆಗಳಿಗನುಗುಣವಾಗಿ ದೇವರನ್ನು ಎಷ್ಟೊಂದು ಗಾಢವಾಗಿ ನಂಬುತ್ತಾರೆಂಬುದನ್ನು ಅರಿಯಲು ಇಲ್ಲಿಗೆ ಒಮ್ಮೆ ಭೇಟಿ ಇತ್ತರೆ ತಿಳಿಯುತ್ತದೆ.
ಉಮಾಮಹೇಶ್ವರಿ ಎನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.