ನಡೆದಾಡುತ್ತ ಅಥೆನ್ಸ್ !
Team Udayavani, Dec 1, 2019, 5:17 AM IST
ಬೆಳಿಗ್ಗೆ ಬೇಗ ಏಳುವ ಗಡಿಬಿಡಿ ಇರಲಿಲ್ಲವಾದರೂ ಆರೂವರೆಗೆ ಎಚ್ಚರವಾಯಿತು. ಬಿಸಿಬಿಸಿ ನೀರಿನ ಸ್ನಾನ ಮುಗಿಸಿ ಸ್ಟುಡಿಯೋದಿಂದ 2 ಕಿ. ಮೀ. ದೂರದಲ್ಲಿದ್ದ ಮೆಟ್ರೋಪಾಲಿಟನ್ ಕ್ಯಾಥೆಡ್ರೆಲ್ ಕಡೆ ಅರ್ಬನ್ ಫ್ರೀ ಟೂರ್ಸ್ ಕೊಟ್ಟ ವಿವರಗಳೊಂದಿಗೆ ಅವರ ಗೈಡ್ ವೆಸೂವಿಯಸ್‌ರನ್ನು ಹುಡುಕಿಕೊಂಡು ಹೊರಟೆ. ಸೋಲೋ ಯಾತ್ರಿಕರಿಗೆ ಇವರ ವಾಕಿಂಗ್ ಟೂರ್ ಬಹಳ ಅಚ್ಚುಮೆಚ್ಚು. ಇವರ ಗೈಡ್ ನಿಮಗೆ ಕಾಲು ನಡಿಗೆಯಲ್ಲಿ ಗ್ರೀಕ್ ದೇಶದ ಅಥೆನ್ಸ್‌ನ ಐತಿಹಾಸಿಕ ಸ್ಥಳಗಳನ್ನು ತೋರಿಸುತ್ತಾರೆ. ನಗರದ ಇತಿಹಾಸವನ್ನು ರಸವತ್ತಾಗಿ ವಿವರಿಸುತ್ತಾರೆ. ಅವರು “ಇಷ್ಟು ಕೊಡಿ’ ಅಂತ ಕೇಳುವುದಿಲ್ಲ. ಬೆಳಿಗ್ಗೆ 9.45ರಿಂದ ಮಧ್ಯಾಹ್ನ ಸುಮಾರು 1.30ರ ತನಕ ನಿಮ್ಮೊಂದಿಗೆ ಇದ್ದು ನಗರದ ಖಾದ್ಯಗಳ ಬಗ್ಗೆ, ಪೇಟೆಗಳ ಬಗ್ಗೆ, ರೆಸ್ಟುರಾಗಳ ಬಗ್ಗೆ ಕೂಡ ಹೇಳುತ್ತಾರೆ. ಒಬ್ಬೊಬ್ಬರು ಯುರೋ ಹತ್ತು ಕೊಟ್ಟರೆ ಖುಷಿಯಿಂದ ತೆಗೆದುಕೊಳ್ಳುತ್ತಾರೆ.
“ನಾನು ಬಾಸ್ಕೆಟ್ ಬಾಲ್ ಆಡುತ್ತಿದ್ದೆ. ಮೊದಲಿನಿಂದಲೂ ಇತಿಹಾಸ ನನ್ನ ಅಚ್ಚುಮೆಚ್ಚಿನ ವಿಷಯಗಾಗಿತ್ತು. ನಮ್ಮ ದೇಶದ ದಕ್ಷಿಣಭಾಗದಲ್ಲಿರುವ ಕ್ರೀಟ್ ದ್ವೀಪದ ಒಂದು ಪುಟ್ಟ ಊರಿನಲ್ಲಿ ಕೆಲಸಮಾಡಿಕೊಂಡು ನನ್ನ ಗೆಳತಿಯೊಂದಿಗೆ ಸಂತೋಷದಿಂದ ಇದ್ದೆ. ಆದರೆ, ನಮ್ಮ ಮಧ್ಯೆ ಬಿರುಕು ಕಾಣಿಸಿಕೊಂಡು, ಅಲ್ಲಿರಲು ಮನಸ್ಸಾಗದೆ ಅಥೆನ್ಸ್ ಕಡೆ ಐದು ವರ್ಷಗಳ ಹಿಂದೆ ಬಂದೆ’ ಎಂದು ನಮ್ಮ ಗೈಡ್ ವೆಸೂವಿಯಸ್ ನಗುನಗುತ್ತ ತನ್ನ ಪರಿಚಯ ಹೇಳಿಕೊಂಡ. ಹೌದು, ಗ್ರೀಕರು ಎತ್ತರದಲ್ಲಿ ಸುಮಾರು ನಮ್ಮ ಹಾಗೆ ಇದ್ದಾರೆ. ವೆಸೂವಿಯಸ್ ಮಾತ್ರ ಆರು ಅಡಿ ನಾಲ್ಕು ಇಂಚಾದರೂ ಇರಬೇಕು. ಒಳ್ಳೆಯ ಮೈಕಟ್ಟಿನ ಅವನು ಲಕ್ಷಣವಾಗಿ ಇದ್ದ, ಅವನ ಇಂಗ್ಲಿಷ್ ಕೂಡ ಬಹಳ ಸೊಗಸಾಗಿತ್ತು.
ನಾವು ನಿಂತ ಜಾಗ ಅಥೆನ್ಸ್‌ನ ಸುಪ್ರಸಿದ್ಧ ಹಾಗೂ ಪುರಾತನ ಕ್ಯಾಥಡ್ರಲ್‌ಗೆ ಸೇರಿದೆ. ಇದು ಗ್ರೀಕ್ ಆಥೋìಡಾಕ್ಸ್ ಚರ್ಚ್ ಗಳ ಬಿಷಪ್ ನಿಲ್ಲುವ ತಾಣ. “ಒಟ್ಟೋಮನ್ ಸುಲ್ತಾನನ ಆಳ್ವಿಕೆ ಕೊನೆಗೊಂಡ ಬಳಿಕ ಆಗಿನ ನಮ್ಮ ದೇಶದ ರಾಜ ರಾಣಿಯರು ಇದರ ಸ್ಥಾಪನೆಗೆ 1842 ರಲ್ಲಿ ಅಡಿಗಲ್ಲು ಹಾಕಿ ಬಹಳ ಮುತುವರ್ಜಿಯಿಂದ ಕಟ್ಟಿಸಿದ ಚರ್ಚ್ ಇದು. ನಮ್ಮ ಪಕ್ಕದಲ್ಲಿರುವ ಪ್ರತಿಮೆ ಎರಡನೆಯ ಮಹಾಯುದ್ಧದ ಸಮಯದಲ್ಲಿ ಇಲ್ಲಿನ ಬಿಷಪ್ ಆಗಿದ್ದ ಡೊಮಾಸ್ಕಿನೋಸ್ ಎಂಬ ಮಹಾಶಯನದ್ದು’ ಎಂದು ಸ್ವಲ್ಪ ನಿಲ್ಲಿಸಿದ.
ಈಗ ಬಿಷಪ್‌ನ ಮಾಡಿದ ಪವಾಡಗಳ ಬಗ್ಗೆ ಹೇಳುತ್ತಾನೆ ವೆಸೂವಿಯಸ್‌ನ ಎಂದು ಭಾವಿಸಿ ಎಲ್ಲರೂ ಅವನ ಮುಖ ನೋಡುತ್ತಿದ್ದರು. ಆದರೆ, ತುಂಟ ನಗುವಿನೊಂದಿಗೆ “ಆ ಪುಣ್ಯಾತ್ಮ ಏನು ಒಳ್ಳೆಯದು ಮಾಡಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ’ ಎಂದ.
ಮೆಟ್ರೋಪಾಲಿಟನ್ ಕ್ಯಾಥಡ್ರಲ್
“ಈಗ ನಿಮಗೆ ನಾನು 2500 ವರ್ಷಗಳ ಹಿಂದಿನ ಅಥೆನ್ಸ್ ಹೇಗಿತ್ತು ಎಂದು ಅಳಿದುಳಿದ ಹಳೆ ಅವಶೇಷಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ’ ಎಂದು ವೆಸೂವಿಯಸ್ ನಮ್ಮನ್ನು ತನ್ನ ಜೊತೆ ನಡೆಯಲು ಹೇಳಿದ. ಬೆಟ್ಟದ ನಗರ ಅಥವಾ ಆಕ್ರೊಪೊಲಿಸ್‌ನ ಮೇಲೆ ರಾರಾಜಿಸುತ್ತಿದ್ದ ಭವ್ಯ ಹಾಗೂ ದಿವ್ಯ ದೇವಾಲಯದ ಅವಶೇಷಗಳನ್ನು ನೋಡಲು ಬೆಟ್ಟವನ್ನು ನಾವು ಹತ್ತಲು ಪ್ರಾರಂಭಿಸುವಾಗ ಆರಂಭದಲ್ಲೇ ಸಿಗುವ ಅವಶೇಷಗಳು ರೋಮನ್ “ಅಘೋರ’ ಕ್ಕೆ ಸೇರಿದ್ದು. “ಅಘೋರ’ ಎಂಬ ಸಾರ್ವಜನಿಕ ಸ್ಥಳದ ಕಲ್ಪನೆ ಗ್ರೀಕರದ್ದು. ಅವರು “ಫೋರಮ…’ ಎಂದು ಕರೆಯುತ್ತಾರೆ.
ಅಲ್ಲಿಯೇ ಪ್ಲೇಟೊ ತನ್ನ ಶಿಷ್ಯಂದಿರಿಗೆ ತಾನು ಸ್ಥಾಪಿಸಿದ ಶಾಲೆ ಅಕಾಡೆಮಿಯದಲ್ಲಿ ಪಾಠ ಮಾಡುತ್ತಿದ್ದ. ಪ್ಲೇಟೋನ ಕಾಲಾನಂತರ ಅಲ್ಲಿ ಅವನ ಶಿಷ್ಯ ಅರಿಸ್ಟಾಟಲ್ ಅದೇ ಶಾಲೆಯಲ್ಲಿ ಪಾಠ ಹೇಳಿದ್ದ.
ಮುಂದೆ ಬೆಟ್ಟ ಹತ್ತುತ್ತ ಆಕ್ರೊಪೊಲಿಸ್‌ನ ಎದುರಿಗಿದ್ದ ಕಲ್ಲಿನ ಬೆಟ್ಟದ ಹತ್ತಿರ ಮುಟ್ಟಿದ್ದೆವು. ನೀವು ಅಲ್ಲಿ ಕೆಳಗೆ ನೋಡಿದರೆ ನೀವು ಹತ್ತಿ ಬಂದ ಪ್ಲಾಕಾ ಮತ್ತು ರೋಮನ್ ಅಘೋರ ಕಾಣುತ್ತಿದೆ. ಎಡಗಡೆಗೆ ನೋಡಿದರೆ, ಅಲ್ಲೊಂದು ಗುಡ್ಡದ ಮೇಲೆ ಸ್ವಲ್ಪ ಸಮತಟ್ಟು ಪ್ರದೇಶ ಕಾಣುತ್ತಿದೆಯಲ್ಲ, ಅಲ್ಲೇ ನಮ್ಮ ಪ್ರಜಾತಂತ್ರದ ಆರಂಭವಾಗಿದ್ದು. ಅಲ್ಲಿ ಅಂದಿನ ರಾಜಕಾರಣಿಗಳು ಸ್ವಲ್ಪ ಎತ್ತರದ ಪ್ರದೇಶದಲ್ಲಿ ನಿಂತು ಅಥೆನ್ಸ್‌ನ ನಾಗರೀಕರಿಗೆ ಭಾಷಣ ಬಿಗಿದಿದ್ದರು. ನಾಗರೀಕರು ತಮ್ಮ ಮತ ಚಲಾಯಿಸಿ, ಅಳುವವರನ್ನು ವರ್ಷದ ಮಟ್ಟಿಗೆ ಆಯ್ಕೆ ಮಾಡುತ್ತಿದ್ದರು. ಆ ಗುಡ್ಡದ ಕೆಳಗೆ ಕಾಣುವ ಬೃಹತ್ ದೇವಾಲಯವೇ ಹೆಫಸ್ಟಾಸಿಸ್ ದೇವರ ಆಲಯ.
“ನಮ್ಮ ವಿಪತ್ತಿಗೆ ವಿದೇಶಗಳ ದಾಳಿ ಮಾತ್ರ ಕಾರಣ ಎಂದು ನಾನು ಹೇಳುತ್ತಿಲ್ಲ. ನಾವು ಇದ್ದದ್ದೇ ಹಾಗೆ. ನಮಗೆ ಯುದ್ಧ ಮಾಡಲು ವೈರಿಗಳು ಸಿಗದಿದ್ದರೆ ನಮ್ಮ ನಮ್ಮಲ್ಲಿಯೇ ಜಗಳ ಮಾಡಿಕೊಂಡು ಇದ್ದವರು ನಾವು’ ಎಂದು ವೆಸೂವಿಯಸ್ ನಕ್ಕ.
“ನಾವೂ ನಿಮ್ಮ ಜೊತೆ ಇದ್ದೇವೆ’ ಎಂದು ಜರ್ಮನಿಯ ಯುವಕ ಹೇಳಿಯೇ ಬಿಟ್ಟ. ನನ್ನ ಪಕ್ಕದಲ್ಲಿ ನಿಂತ ಕೆನಡಾದಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಹುಡುಗಿಯರೂ ನಕ್ಕರು.
ಸುಮಾರು ಮೂರು ಸಾವಿರ ವರ್ಷಗಳ ಹಿಂದಿನಿಂದ ಅಲ್ಲಿ ಅಥೀನಾಳ ದೇವಾಲಯ ಇತ್ತು. ಈಗ ಅಲ್ಲಿ ಕಾಣುವುದು ಅದರ ಅವಶೇಷಗಳು ಮಾತ್ರ. ಅದನ್ನು ಭವ್ಯವಾಗಿ ಅಕ್ಕ ಪಕ್ಕದ ಎಲ್ಲಾ ದೇಶಗಳ ಕಣ್ಣು ಕುಕ್ಕುವ ಹಾಗೆ ಕಟ್ಟಿಸಿದ್ದು ಕ್ರಿ. ಪೂ. 447 ಮತ್ತು 438 ರ ಒಂಬತ್ತು ವರ್ಷಗಳ ಕಾಲಾವಧಿಯಲ್ಲಿ. ಬೆಟ್ಟ ಹತ್ತಿ ಮಹಾದ್ವಾರದ ಮೂಲಕ ದೇವಾಲಯದ ಆವರಣವನ್ನು ಪ್ರವೇಶಿಸಿದರೆ, ಅಲ್ಲಿ ಚಿಕ್ಕ ದೊಡ್ಡ ವಿಗ್ರಹಗಳ ಸಾಲು ಸಾಲು ಕಾಣುತ್ತಿತ್ತಂತೆ. ಭಕ್ತರು ದೇವತೆಗೆ ಹರಕೆ ತೀರಿಸಲು ಈ ವಿಗ್ರಹಗಳನ್ನು ಇಡುತ್ತಿದ್ದರು. ಬಲಕ್ಕೆ ನೋಡಿದರೆ ಆವರಣದ ತುದಿಯಲ್ಲಿ ಮಹಾದ್ವಾರಕ್ಕೆ ತಾಗಿಕೊಂಡಂತೆ ಇರುವುದೇ ಅಥೀನಾ ನೈಕಿಯ ಚಿಕ್ಕ ಸುಂದರ ದೇವಾಲಯ. ಅದನ್ನು ಈಗ ಬಹಳಷ್ಟು ಮಟ್ಟಿಗೆ ಮರು ನಿರ್ಮಿಸಿದ್ದಾರೆ. ಅಥೀನಾ ಜೊತೆ ಇಲ್ಲಿ ರೆಕ್ಕೆ ಇಲ್ಲದ ನೈಕಿ (ವಿಜಯದ ಸಂಕೇತ) ಅಲ್ಲಿ ಇತ್ತು. ಯುದ್ಧದಲ್ಲಿ ಜಯ ನಮ್ಮದೇ ಆಗಬೇಕೆಂಬ ಉದ್ದೇಶದಿಂದ ಮತ್ತು ವಿಜಯದ ದೇವತೆ ಅಥೆನ್ಸ್‌ನಿಂದ ಹಾರಿಹೋಗದಂತೆ ತಡೆಯಲು ಇಲ್ಲಿದ್ದ ಯಕ್ಷಿಗೆ ರೆಕ್ಕೆ ಇಲ್ಲ. ರೆಕ್ಕೆಯಿದ್ದ ಯಕ್ಷ-ಯಕ್ಷಿಣಿಯರ ಆ ಹಳೆಯ ಕಲ್ಪನೆ ಈಗಲೂ ಚರ್ಚ್‌ಗಳಲ್ಲಿ ಮತ್ತು ಪುರಾಣದ ಕಥೆಗಳಲ್ಲಿ ನಮಗೆ ಸಿಗುತ್ತದಲ್ಲವೆ? ಈ ದೇವತೆಯ “ನೈಕಿ’ ಹೆಸರಿನ ಭಾಗವನ್ನು ಒಂದು ವಿದೇಶಿ ಕಂಪನಿ ಹಾರಿಸಿಕೊಂಡು, ಆ ಹೆಸರಿನ ಸ್ಪೋರ್ಟ್ಸ್ ಶೂಗಳನ್ನು ಮಾರುತ್ತಿದೆ.
ಹಿರೋಡೇಸ್ ಕಟ್ಟಿಸಿದ ಓಡಿಯಂ
ಬೆಟ್ಟದ ಮೇಲಿನಿಂದ ವೆಸೂವಿಯಸ್ ನಮಗೆ ಕೆಳಗೆ ನಡೆಸಿಕೊಂಡು ಹೋಗಲು ಪ್ರಾರಂಭಿಸಿದ. “ಈಗ ನಮ್ಮ ನಗರದ ಅತ್ಯಂತ ಬೆಲೆಬಾಳುವ ಮತ್ತು ದುಬಾರಿ ಮನೆಗಳ ಮಧ್ಯದಿಂದ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ’ ಎಂದು ಪಾದಚಾರಿಗಳಿಗೆ ಮೀಸಲಿಟ್ಟ ದಾರಿಯಲ್ಲಿ ನಡೆಸಿಕೊಂಡು ಹೊರಟ. ದಾರಿಯುದ್ದಕ್ಕೂ ಬಗೆಬಗೆಯ ತಂತಿ ವಾದ್ಯ ನುಡಿಸುವವರು, ಹಾಡು ಹೇಳುವವರು, ಸೊಗಸಾಗಿ ನರ್ತನ ಮಾಡಬಲ್ಲವರು ತಮ್ಮ ತಮ್ಮ ಕಲೆಯ ಪ್ರದರ್ಶನ ಮಾಡುತ್ತಿದ್ದರು.
ಅಲ್ಲಿಂದ ನಮ್ಮನ್ನು ಅವನು ಕರೆದುಕೊಂಡು ಹೋಗಿದ್ದು, ಅಥೆನ್ಸ್‌ನ ಸುಪ್ರಸಿದ್ದ ಅಮೃತಶಿಲೆಯಲ್ಲಿಯೇ ಕಟ್ಟಿದ ಪ್ರಪಂಚದ ಏಕಮಾತ್ರ ಸ್ಟೇಡಿಯಂ ಕಲ್ಲಿಮಾರೋಗೆ ಗ್ರೀಸ್‌ನಲ್ಲಿ ಒಲಂಪಿಯಾ ಎಂಬಲ್ಲಿ ನಡೆಯುತ್ತಿದ್ದ ಯುವಕರ ಆಟೋಟ ಸ್ಪರ್ಧೆಗಳ ನೆನಪಿಗಾಗಿ ಆಧುನಿಕ ಒಲಿಂಪಿಕ್ಸ್ ಅನ್ನು ಕ್ರಿ. ಶ. 1896 ರಲ್ಲಿ ಈ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ನಡೆಸಲಾಗಿತ್ತು. ಅಲ್ಲಿಂದ ಮುಂದೆ ಅವನು ನಮಗೆ ನವಅಥೆನ್ಸ್‌ನ ಕುರುಹಾಗಿದ್ದ ಜಪ್ಪಿಯೋನ್ ಎಂಬ ವಿಶಾಲ ಕಟ್ಟಡ ತೋರಿಸಿದ. ಮುನ್ನೂರು ವರ್ಷಗಳ ಇತಿಹಾಸವಿದ್ದ ಕಟ್ಟಡದಲ್ಲಿ ಈಗ ಕಲೆ, ಶಿಲ್ಪ ಮತ್ತು ಇತರ ಪ್ರದರ್ಶನಗಳು ನಡೆಯುತ್ತವೆ ಎಂದು ಹೇಳಿದ.
ಹತ್ತಿರದಲ್ಲೇ ಇದ್ದ ಮೆಟ್ರೋಪಾಲಿಟನ್ ಕ್ಯಾಥೆಡ್ರೆಲ್ ಪಕ್ಕದಲ್ಲಿ ನಮಗೆಲ್ಲರಿಗೂ ಶುಭಾಶಯಗಳೊಂದಿಗೆ ಬೀಳ್ಕೊಟ್ಟ.
ಸತೀಶ್ಚಂದ್ರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.