ಅಲೆ
Team Udayavani, Dec 3, 2017, 6:30 AM IST
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿರೆ ನನ್ನ ಮನಸು
ಕವಿ ಕೆಎಸ್‌ನ ಅವರ ಸುಪ್ರಸಿದ್ಧ ಹಾಡು ಸೆಲ್‌ಫೋನ್‌ನಲ್ಲಿದ್ದ ಎಫ್‌ಎಂ ವಾಹಿನಿಯಲ್ಲಿ ಅಲೆಅಲೆಯಾಗಿ ತೇಲಿ ಬರುತ್ತಿತ್ತು. ಹುಣ್ಣಿಮೆಯ ರಾತ್ರಿ. ಹಾಲು ಚೆಲ್ಲಿದಂತೆ ಬೆಳದಿಂಗಳು. ಸನಿಹದಲ್ಲಿ ಭೋರ್ಗರೆಯುತ್ತಿದ್ದ ಕಡಲು. ಕಡಲ ಕಿನಾರೆಯಲ್ಲಿ ಅವರಿಬ್ಬರೂ ನಡೆದುಕೊಂಡು ಸಾಗುತ್ತಿದ್ದರು. ಗಾಳಿ ಮರಗಳ ಎಡೆಯಿಂದ ಸೀಳಿಕೊಂಡು ಬರುತ್ತಿದ್ದ ಸಂಗೀತದಂಥ ಹಿನ್ನೆಲೆ. ಮುಂದೆ ಸಾಗಿದಷ್ಟೂ ಹಿಂದಕ್ಕೆ ಬರುತ್ತಿದ್ದ ಕಾಲುಗಳು.
ಕಿನಾರೆಯಲ್ಲಿ ಬೃಹತ್ ಸ್ವರೂಪದ ಬಂಡೆಕಲ್ಲು ಆನೆಗಳ ಹಿಂಡು ಮಲಗಿದಂತೆ ಕಾಣಿಸುತ್ತಿತ್ತು. ಆ ಬಂಡೆಕಲ್ಲನ್ನು ಅಪ್ಪಳಿಸಿ ಸುತ್ತಲೂ ಚಿಮ್ಮುತ್ತಿದ್ದ ತೆರೆಗಳು. ಒಂದಿಷ್ಟು ಆಯಾಸವೆನಿಸಿ, ಇಬ್ಬರೂ ನಿಂತರು. ಪರಸ್ಪರ ಎದುರು ಬದುರಾಗಿದ್ದರು. ಅವನು ಆಕೆಯ ಮುಖವನ್ನು ನೋಡಿದ. ಬೆಳದಿಂಗಳಿಗೆ ಸಂಭ್ರಮಿಸುತ್ತಿತ್ತು ಆ ಮುಖ. ಒಂದಿಷ್ಟು ಬೆವರ ಹನಿಗಳಲ್ಲಿ ಚಂದಿರ ಪ್ರತಿಫಲಿಸುತ್ತಿದ್ದ. ಮುಂಗುರುಳು ಆಕೆಯ ಮುಖ ತುಂಬಾ ಹಾರಾಡುತ್ತಿತ್ತು. ಅದೇ ಪ್ರಭಾವಶಾಲೀ ಕಂಗಳು. “”ನಿಮ್ಮನ್ನು ಕೊನೆಯ ಬಾರಿ ಕಂಡು ಸುಮಾರು ಇಪ್ಪತ್ತು ವರ್ಷಗಳು ಆಗಿರಬಹುದು ಅಲ್ವಾ?” ಅವನು ಒಂದೊಂದೇ ಶಬ್ದಗಳನ್ನು ನುಂಗುವಂತೆ ಕೇಳಿದ. ಅವಳು ಮುಗುಳುನಗುತ್ತ ಹೌದೆಂಬಂತೆ ತಲೆಯಾಡಿಸಿದಳು. ನರ್ತಿಸಿದ ಕಿವಿಯೋಲೆಯೂ ಅವನಿಗೆ ಚಂದಿರನಂತೆ ಕಂಡಿತು. ಅವಳು ಅದೇ ಸೌಂದರ್ಯವನ್ನು ಈಗಲೂ ಹೊಂದಿದ್ದಾಳೆ ಎಂದು ಆತನಿಗೆ ಅನಿಸಿತು. ಪರಸ್ಪರ ಪ್ರೇಮಿಸುತ್ತಿದ್ದ ಆ ದಿನಗಳಲ್ಲಿ ಅವರು ಇಲ್ಲಿಗೆ ಆಗಾಗ ಬರುತ್ತಿದ್ದವರಲ್ಲವೆ? ಪರಸ್ಪರ ಕೈಹಿಡಿದು ಓಡಾಡುತ್ತಿದ್ದವರಲ್ಲವೆ? ಹಾಡು ಕೇಳುತ್ತಿತ್ತು:
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು,
ನಿನ್ನೊಳಿದೆ ನನ್ನ ಮನಸು…
ಹಾಡನ್ನು ಮನನ ಮಾಡಿಕೊಳ್ಳುತ್ತ ಅವನು ಹೇಳಿದ, “”ಈ ಬದುಕು ಎಷ್ಟೊಂದು ವಿಚಿತ್ರ ಅಲ್ವಾ?” ಅವಳು ಉತ್ತರಿಸಲಿಲ್ಲ. ಹಾಗೆ ನೋಡಿದರೆ, ಅವಳು ಮಾತನಾಡುವ ಮನೋಸ್ಥಿತಿಯಲ್ಲಿಲ್ಲ ಅನಿಸುತ್ತಿತ್ತು. ಅವನು ಕೂಡ ಮಾತುಗಳಿಗೆ ತಡಕಾಡುತ್ತಿದ್ದ. ಎರಡು ದಶಕಗಳ ನಂತರ ಅವರು ಭೇಟಿಯಾಗುತ್ತಿದ್ದಾರೆ. ಶಿಕ್ಷಣ, ಉದ್ಯೋಗದ ಆರಂಭದ ವರ್ಷಗಳಲ್ಲಿ ಅವರು ಜತೆಯಾಗಿಯೇ ಇದ್ದವರು.
ಒಮ್ಮೆಲೇ ಕಡಲು ಭೋರ್ಗರೆಯಿತು. ಅವನ ಮನಸ್ಸು ಕೂಡ ಅವಳನ್ನು ಕಂಡು ಉಕ್ಕುವಂತಾಯಿತು. “”ನಿಮ್ಮನ್ನು ನಾವು ಎಂದೂ ಮರೆತವನಲ್ಲ. ನೀವು ಅನಿವಾರ್ಯವಾಗಿ ಮದುವೆಯಾಗಿ ಹೋದಾಗ ನಾನು ಅಸಹಾಯಕನಾಗಿ ಕಂಬನಿ ಸುರಿಸಿದ್ದೆ. ನಿಮ್ಮನ್ನು ಮರೆಯುವ ಪ್ರಯತ್ನವಾಗಿ ವಿದೇಶಕ್ಕೆ ಹೋದೆ. ಆದರೆ, ನಿಮ್ಮನ್ನು ಮಾತ್ರ ಮರೆಯಲಾಗಲಿಲ್ಲ” ಅವನು ಹೇಳುತ್ತಲೇ ಇದ್ದ; ಅವಳು ಕೇಳುತ್ತಲೇ ಇದ್ದಳು. “”ನಮ್ಮಂತೆ ಅದೆಷ್ಟೋ ಮಂದಿ ಅಸಹಾಯಕರಾಗಿ, ನೋವನ್ನು ನುಂಗಿ ಬಲವಂತವಾಗಿ ನಗುತ್ತ ಜೀವನ ಸಾಗಿಸುತ್ತಿರಬಹುದಲ್ವಾ?” ಅವನು ಕೇಳಿದ. ಈ ಮಾತುಗಳ ಬಗ್ಗೆ ಆತನಿಗೆ ಪೂರ್ತಿ ವಿಶ್ವಾಸವಿತ್ತು. ಏಕೆಂದರೆ, ಅವನೇ ಈ ಮಾತಿಗೆ ನಿದರ್ಶನವಾಗಿದ್ದ.
ಸಾಗರನ ಹೃದಯದಲಿ
ರತ್ನ ಪರ್ವತ ಮಾಲೆ
ಮಿಂಚಿನಲಿ ನೇವುದಂತೆ
ಅವರು ಅಂದಿನಂತೆ ಇಂದು ಕೂಡ ಆ ಹೆಬ್ಬಂಡೆಯನ್ನೇರಿದರು. ಆತ ಅಂದಿನಂತೆ ಆಕೆಗೆ ಸಹಾಯಹಸ್ತ ನೀಡಿದ. ಅವಳು ನಯವಾಗಿ ನಿರಾಕರಿಸಿ ಆತನ ಜತೆಯಲ್ಲಿ ಬಂದಳು. ಇಬ್ಬರೂ ಕುಳಿತರು. ಎತ್ತರ ಎತ್ತರಕ್ಕೆ ಚಿಮ್ಮುತ್ತಿದ್ದ ತೆರೆಗಳು. ಬಂಡೆಯನ್ನು ಅಪ್ಪಳಿಸುತ್ತ ಹಾಲ್ನೊರೆಯಾಗುತ್ತಿದ್ದ ಕ್ಷಣಗಳು.
“”ನಿಮ್ಮ ಬಗ್ಗೆ ಮತ್ತೆ ತಿಳಿದುಕೊಳ್ಳುವ ಪ್ರಯತ್ನ ನಾನು ಮಾಡಲಿಲ್ಲ. ನಿಮಗೆ ಒಂದಿನಿತೂ ತೊಂದರೆ ಆಗಬಾರದೆಂದು ನನ್ನ ನಿರ್ಧಾರವಾಗಿತ್ತು. ನಿಮ್ಮ ಸುಖೀ ಜೀವನವನ್ನು ನಾನು ಹಾರೈಸುತ್ತಲೇ ಇದ್ದೆ. ಈಗಲೂ…” ಅವನ ನುಡಿಗಳು ಪ್ರಾಮಾಣಿಕವಾಗಿತ್ತು. ಹುಣ್ಣಿಮೆಗೆ ಸಂಭ್ರಮಿಸುತ್ತಿದ್ದ ಕಡಲಿನ ತೆರೆಗಳ ಹಾಗೆ ಧಾವಿಸುತ್ತಿತ್ತು. ಒಂದು ರೀತಿಯಲ್ಲಿ ಬಂಡೆಯ ಹಾಗೆ ಕುಳಿತಿದ್ದ ಆಕೆಯನ್ನು ಅಪ್ಪಳಿಸುತ್ತಿತ್ತು.
ಅಪ್ಪಳಿಸಿದ ತೆರೆಗಳು ಹಾಗೆಯೇ ಚದುರುತ್ತಿದ್ದವು. ಬಂಡೆ ಏನೂ ಆಗಿಲ್ಲ ಎಂಬಂತೆ ನಿಶ್ಚಲವಾಗಿದ್ದಂತೆ ತೋರುತ್ತಿತ್ತು. ಆದರೆ, ದೃಢವಾಗಿತ್ತು.
ತೀರದಲಿ ಬಳುಕುವಲೆ
ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿದಂತೆ
ನಿನ್ನೊಳಿದೆ ನನ್ನ ಮನಸು…
ಹಾಡು ಇಂಪಾಗಿ ಕೇಳಿಸುತ್ತಿತ್ತು.
ಆಗೆಲ್ಲಾ ಈ ಹಾಡು ಕೇಳುತ್ತ ಆತನ ತುಂಬು ತೋಳಿನ ಒಳಗೆ ಅವಳು ಸೇರಿಕೊಳ್ಳುತ್ತಿದ್ದಳು. ಅವಳ ಮುಂಗುರುಳು ಸವರುತ್ತ ಅವನು ಆ ಸಾಲುಗಳನ್ನು ಗುನುಗುನಿಸುತ್ತಿದ್ದ. ಆ ಹಾಡಿನ ಧ್ವನಿಗೆ ಅವಳು ಶ್ರುತಿಯಾಗುತ್ತಿದ್ದಳು. ಎಲ್ಲವೂ ನೆನಪಾಗುತ್ತಿದೆ.
“”ಪ್ರೀತಿ ಅನ್ನುವುದು ಶಾಶ್ವತ. ಅಂತಹ ಅದ್ಭುತ ಅನುಭೂತಿ ನಿಮ್ಮಿಂದ ದೊರೆತಿದೆ. ಆದ್ದರಿಂದಲೇ, ನಾನು ಜೀವನ್ಮುಖೀಯಾಗಲು ಸಾಧ್ಯವಾಗಿದೆ” ಆತ ಭಾವುಕನಾಗಿದ್ದ, ಅವಳು ಸ್ಥಿರವಾಗಿರುವಂತೆ ತೋರುತ್ತಿದ್ದಳು.
ಅಲೆ ಬಂದು ಕರೆಯುವುದು
ನಿನ್ನೊಲುಮೆ ಅರಮನೆಗೆ
ಹೊರಗಡಲ ರತ್ನ ಪುರಿಗೆ
“”ಇಂದು ಸೆಮಿನಾರ್‌ನಲ್ಲಿ ನಿಮ್ಮನ್ನು ಕಂಡು ಒಂದು ಕ್ಷಣ ಆಘಾತಗೊಂಡಿದ್ದೆ. ಎಲ್ಲಾ ವರ್ಣನೆಗಳ ಹಾಗೆ ನನ್ನನ್ನು ನಾನು ನಂಬಲು ಸಾಧ್ಯವಾಗದ ಸ್ಥಿತಿ”
“”ಅದು ಕೂಡ ನನ್ನ ಮೆಚ್ಚಿನ ನವಿಲು ಬಣ್ಣದ ಉಡುಗೆಯಲ್ಲಿ. ನೀವು ಕೂಡಾ ಮಾತನಾಡಿಸಿದಿರಿ. ಈ ಕಡಲ ಕಿನಾರೆಗೆ ಮತ್ತೆ ಜತೆಯಾಗಿ ಬರಲು ಒಪ್ಪಿಕೊಂಡಿರಿ. ಈಗ ನಾನು ಹೊಂದಿರುವ ಭಾವನೆಗಳನ್ನು ವಿವರಿಸಲು ನನ್ನಲ್ಲಿ ಶಬ್ದಗಳಿಲ್ಲ. ಇಂಥ ಕತೆ-ಕಾದಂಬರಿಗಳನ್ನು ಓದಿದ್ದೇನೆ. ಆದರೆ, ಈ ಸಂವೇದನೆ ನನ್ನ ಪಾಲಿಗೆ ದೊರೆತಿರುವುದಕ್ಕೆ ನಾನು ನಿಮಗೆ ಕೃತಜ್ಞನಾಗಿದ್ದೇನೆ” ಅವನು ಹೇಳುತ್ತಲೇ ಇದ್ದ.
ಅವಳು ಈಗ ಮೌನ ಮುರಿದಳು. “”ನಾವಿನ್ನು ಹೊರಡೋಣವೇ?” ಎಂದಳು. ಅವರು ಅಲ್ಲಿಂದ ಹೊರಟರು. ಹುಣ್ಣಿಮೆ ಚಂದಿರ ಬಾನನಡುವೇರಲು ಕಡಲ ಅಲೆ ಮತ್ತಷ್ಟು ತೀವ್ರವಾಗತೊಡಗಿತು. ಹಾಡು ಬೆಳದಿಂಗಳಿನಂತೆ; ಕಡಲ ಅಬ್ಬರದ ಅಲೆಗಳಂತೆ ಕೇಳಿ ಬರುತ್ತಿತ್ತು:
ಅಲೆ ಇಡುವ ಮುತ್ತಿನಲೆ
ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿ ಮಹಿಮೆ
ನಿನ್ನೊಳಿದೆ ನನ್ನ ಮನಸು
– ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.