ಪರಿಹಾರ
Team Udayavani, May 27, 2018, 7:00 AM IST
ಒಡಹುಟ್ಟಿದವರ ನಡುವೆಷ್ಟು ಛಿನ್ನ? ಮೈಹೋಲುವವರ ಮನಸೇಕೆ ಭಿನ್ನ?!
-ಸುಮ್ಮಗೊಂದು ಸಾಲು.
“”ಏಳು… ಬಿಸಿನೀರು ರೆಡಿಯಿದೆ. ಎದ್ದು ಸ್ನಾನ ಮಾಡುವೆಯಂತೆ…” ದತ್ತೂ ಕಾಕ ಗುಮಾನಿಗಣ್ಣಿಟ್ಟುಕೊಂಡೇ ಹೇಳಿದರು. ಮೈಯಲ್ಲಿ ತೊಟ್ಟ ಬಟ್ಟೆಯಲ್ಲದೆ ಇನ್ನೇನೂ ತಂದಿರದಿದ್ದ ನನ್ನನ್ನು, ತನ್ನ ಸ್ವಂತ ಅಣ್ಣನ ಮಗನ ಮಗನಾದರೂ- ಆಗಂತುಕನಂತಲೇ ಕಂಡರು. ನಿಜವೇನೆಂದರೆ, ನನ್ನನ್ನು ಹೀಗೆ ಕಾಣುವುದು- ಸರಿಯೂ ಇತ್ತು; ಸಹಜವೂ ಇತ್ತು. ಬಹುಶಃ, ಆ ಹೊತ್ತಿನ ಅಗತ್ಯವೂ ಆಗಿದ್ದಿತು!
ರಾತ್ರಿಯಿಡೀ ಹತ್ತೆಂಟು ತಾಸು ಹೊತ್ತಿನುದ್ದಕ್ಕೂ, ಒಂದೇ ಸಮ ತನ್ನ ಮೈಕುಲುಕುವುದರೊಡನೆ ನನ್ನ ಮೈಯನ್ನೂ ಮೆರಿìಗೋರೌಂಡು ಮಾಡಿದ್ದ ಬಸ್ಸಿನಲ್ಲಿ, ಬರೋಬ್ಬರಿ ಎಂಟುನೂರೈವತ್ತು ಕಿ.ಮೀ.ಸಾಗಿಬಂದಿದ್ದರಿಂದ-ಪೂರ್ತಿ ಆಯಾಸವೇ ಮೊದಲಾಗಿತ್ತು. ಏನೇನೆಲ್ಲ ಸಂಧಿವಾತ. ಗಿಜಿ ಗಿಜಿ ಗಿಜಿ ರೇಜಿಗೆ. ಮೈಗೊಂದಿಷ್ಟು ಬಿಸಿನೀರು ಬಿದ್ದರೆ ಸಾಕು, ಹಾಯೆನಿಸೀತು, ಅನಿಸುತ್ತಿತ್ತು. ಅಲ್ಲೇ ಗೋಡೆಯಲ್ಲಿ ತೂಗಿದ್ದ ಕನ್ನಡಿಯೊಳಗಿಣಿಕಿದರೆ ನನ್ನ ನಿದ್ದೆಗೆಟ್ಟ ಕಣ್ಣುಗಳ ರಂಪ ಎದ್ದೆದ್ದು ತೋರಿತು. “”ಲಗೇಜೇನೂ ಇಲ್ಲವಾ, ಪಂಢರಿ? ಬಟ್ಟೆಬರೆಗೇನು ಮಾಡುತೀಯಾ?” ದತ್ತೂ ಕಾಕ ಅತ್ತಿತ್ತ ನೋಡುತ್ತ ಕೇಳಿದರು.
ಕಕ್ಕಾವಿಕ್ಕಿಯಾಯಿತು. “”ಧರಣಿಯ ಫೋನು ಬರುವ ಹೊತ್ತಿಗೆ ಆಫೀಸಿನಲ್ಲಿದ್ದೆ, ದತ್ತೂ ಕಾಕ… ಸಂಜೆ ಮನೆಗೆ ಹೋಗೋಕಾಗಲಿಲ್ಲ. ಆಫೀಸಿನಿಂದ ಸೀದಾ ಬಸ್‌ಸ್ಟ್ಯಾಂಡು ತಲುಪಿದ್ದಾಯಿತು” ಸಮಜಾಯಿಷಿ ಹೇಳುವುದಾಯಿತು. ಏನೋ ಸಂಕೋಚ. ಒಂದೇ ಸಮ ಭಿಡೆ ಮಾಡುವ ಮನಸ್ಸು. ಒಂದೇ ಮನೆಯ, ಒಂದೇ ರಕ್ತ ಹಂಚಿಕೊಂಡು ಉಂಟಾದವರಾದರೂ- ಬಳಕೆಯಿಲ್ಲದೆಯೆ ಸಲುಗೆಯುಂಟೆ ಎಂದು- ದಾರಿಯುದ್ದಕ್ಕೂ ಯೋಚನೆಯಾಗಿದ್ದು, ಈಗ ಸಾಕ್ಷಾತ್ ಅವತರಿಸಿ ಕಾಡಿತು.
“”ನಿನಗೆ ಅಗತ್ಯ ಇಲ್ಲದೆ ಇರಬಹುದು, ಪಂಢರಿ. ನಿನ್ನಷ್ಟು ಓದುಬರಹ ಕಾಣದ ನಮಗೆ ಈ ಹಣ ಬೇಕೇಬೇಕು. ತತ್‌ಕ್ಷಣ ಹೊರಟು ಬಂದುಬಿಡು. ಎಲ್ಲ ರೆಡಿಯಾಗಿದೆ. ನಿನ್ನ ರುಜು ಇಲ್ಲದೆ, ನಮಗೂ ಒಂದು ಬಿಡಿಗಾಸು ಸಿಗೋಲ್ಲ” ಧರಣಿ ಅಂತನ್ನುವ ಈ ದತ್ತೂ ಕಾಕನ ಮೂರನೆಯ ಅಣ್ಣನ ಎರಡನೇ ಮೊಮ್ಮಗ, ಅಂದರೆ ನನ್ನೊಬ್ಬ ದಾಯಾದಿ- ಹೀಗೆಲ್ಲ ಅರುಹಿ, ಒಂದೇ ವಾರದಲ್ಲಿ ಮೂರು ಸರ್ತಿ ಫೋನು ಮಾಡಿದ್ದ. ಪ್ರತಿಸರ್ತಿಯೂ ಇದೇ ರಾಗ. ಇದೇ ಹಾಡು.
ಹೇಳುವುದಾದರೆ, ಸದ್ಯಕ್ಕೆ ನನಗೆ ಧರಣಿಯ ಧ್ವನಿ ಗೊತ್ತಿರುವಷ್ಟೂ ಈ ದತ್ತೂ ಕಾಕನ ಪರಿಚಯವಿಲ್ಲ. ಮಹಾಶಯನನ್ನು ಈವರೆಗೆ ಕಂಡು ಸಹಿತ ಗೊತ್ತಿಲ್ಲ. ಹೇಳಿಕೊಳ್ಳಲಿಕ್ಕೆ ನಮ್ಮೆಲ್ಲರದ್ದೂ ಒಂದೇ ಮನೆ. ರಕ್ತ “ಶಃಒಂದು’ತನ. ಒಂದೇ ಮನೆತನ. ಮೈಬಗೆದು ವಿಶ್ಲೇಷಿಸಬಹುದಾದರೆ, ನಮ್ಮ ಒಳತಂತುಗಳ ಅಮಿನೋ-ಆಮ್ಲದೊಳಗೂ ಸರೀಕ ಬಂಧುತ್ವದ ಮಾಹಿತಿಯಿರಬಹುದೇನೋ. ಆದರೆ, ಈ ಇದೇ ಬಾಂಧವ್ಯ ನಮ್ಮ ಮನಸೊಳಗಿಲ್ಲವೆ? ನೆನಪಿನಲ್ಲಿಲ್ಲವೆ?
“”ನೀನು ನಮ್ಮ ಸಳದೀಕರ್ ಕುಟುಂಬದ, ನನ್ನ ತಲೆಮಾರಿನ ಮೊದಲ ಕುಡಿ- ಪಂಢರಿ. ಹಾಗಾಗಿ ನೀನಿಲ್ಲದೆ ಕೆಲಸವಾಗಲ್ಲ. ಈ ಪರಿಹಾರ ದಕ್ಕಬೇಕು ಅಂದರೆ ನಿನ್ನ ಸಹಮತ ಬೇಕೇಬೇಕು” ಧರಣಿ ಇವಿವೇ ಮಾತನ್ನು ಪದೇಪದೇ ಆಡಿದ್ದ. ಪ್ರತಿಸಲವೂ ಹಿಂದಿನ ಸಲಕ್ಕೂ ಹೆಚ್ಚು ಒತ್ತಿ ಹೇಳಿದ್ದ. “”ನೀನು, ನಾನು, ರುಕ್ಮಾಯಿ, ವಿಠೊಬ, ಪುಂಡಲೀಕ… ಮತ್ತೆ ದತ್ತೂ ಕಾಕಾ… ನಾವು ಐದೂ ಜನ ಕೋರ್ಟಿನಲ್ಲಿ ಜಡ್ಜರ ಎದುರು ನಿಂತು ಸೈನ್ ಮಾಡಿಕೊಟ್ಟರೆ ಸಾಕು- ಕೆಲಸ ಮುಗಿದ ಹಾಗೆ. ಮುಂದಿನದೆಲ್ಲ ತಾನಾಗೇ ಆಗಿಬರುತ್ತೆ”
ಜನಾರ್ದನ, ಪಾಂಡುರಂಗ, ದತ್ತಮೂರ್ತಿ… ಈ ಹೆಸರುಗಳನ್ನು, ಹುಟ್ಟಿದಾಗಿನಿಂದ ಆಗೀಗ, ನನ್ನ ಮನೆಯಲ್ಲಿ ಅಪ್ಪ-ಅಮ್ಮರ ಮಾತುಗಳ ನಡುವೆ ಕೇಳಪಟ್ಟಿದ್ದೆನಾದರೂ, ಇವುಗಳು ನನ್ನ ಆಡಾಡುವ ವಯಸ್ಸಿನ ಮತ್ತು ಮನಸ್ಸಿನ ಒಳಪದರಗಳಲ್ಲೊಂದೂ ಪಡಿಮೂಡಿರಲಿಲ್ಲ. ಈ ಮೂವರೂ ನನ್ನ ಅಜ್ಜ ಅಂದರೆ- ಜಗನ್ನಾಥ ಸಳದೀಕರರ ಬೆನ್ನಿನಲ್ಲಿ ಉಂಟಾದ ತಮ್ಮಂದಿರು ಸದ್ಯಕ್ಕೆ, ಕೊನೆಯವರಾದ ದತ್ತೂ ಕಾಕನಲ್ಲದೆ, ಇನ್ನಾರೂ ಬದುಕಿಲ್ಲ. ಈ ದತ್ತೂ ಕಾಕನಿಗೆ ಸಮವಯಸ್ಕರಾದ ನನ್ನ ಅಪ್ಪ ಕೃಷ್ಣಕಾಂತ ಸಳದೀಕರ್, ತನ್ನ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ- ಕರ್ನಾಟಕದ ಬಿಜಾಪುರಕ್ಕೂ ಮಹಾರಾಷ್ಟ್ರದ ಸಾಂಗ್ಲಿಗೂ ನಡುವಿರುವ ಸಳದಿ ಎಂಬ ಈ ಹಳ್ಳಿಯಿಂದ ನೌಕರಿಯ ಮೇರೆಗೆ ಬೆಂಗಳೂರಿನಲ್ಲಿ ಬಂದು ನೆಲೆಯೂರಿದ ಮೇಲೆ, ಮಹಾನಗರಿಯಲ್ಲಿ ಬೇರೂರಿಕೊಂಡಿರುವ ಸರಿಸುಮಾರು ಎಲ್ಲರಂತೆಯೇ, ಸ್ವದೇಶ-ಸ್ವಜನವನ್ನೆಲ್ಲ ತಕ್ಕಮಟ್ಟಿಗೆ ತೊರೆದೇ ಬದುಕಿದ್ದರು. ಇತ್ತ, ಈ ನನ್ನ ಅಪ್ಪನೂ ಕಾಲವಾಗಿ ಹದಿನೆಂಟು ವರ್ಷ.
ಹೀಗಿರುವಾಗ, ವಾರದೊಪ್ಪತ್ತಿಗೆ ಹಿಂದೆ ಇದ್ದಕ್ಕಿದ್ದಂತೆ ನನ್ನ ಕೈಫೋನಿನಲ್ಲಿ ತಗುಲಿಬಂದು, “ಧರಣೀಧರ ಸಳದೀಕರ’ನೆಂದು ಪರಿಚಯಿಸಿಕೊಂಡ ಧರಣಿಯೆಂಬ ಈ ಮನುಷ್ಯ- ನನ್ನನ್ನು “ಪಂಢರಿ ಸಳದೀಕರ್’ ಎಂದು ಸರ್‌ನೆಮು- ಸಹಿತ ಸಂಬೋಧಿಸಿದ ಮೇರೆಗೆ, ನಾವಿಬ್ಬರೂ ಒಂದೇ ಮನೆತನಕ್ಕೆ ಸೇರಿದ ಸೆಕೆಂಡ್ ಕಸಿನ್ನುಗಳೆಂಬ- ಹೊಸತೊಂದು ನಂಟು ಉಂಟಾಯಿತು. ಈ ಸಂಬಂಧದಲ್ಲಿ ನಡುವೆ, ನನ್ನ ಅಪ್ಪ ಆಗಿಂದಾಗ (ನನ್ನ ಅಮ್ಮನೊಡನೆ) ಪ್ರಸ್ತಾಪಿಸುತ್ತಿದ್ದ “ದತ್ತೂ ಕಾಕ’ನೆಂಬ ಹೆಸರು ಕೊಂಡಿಯಾಯಿತು. ರುಕ್ಮಾಯಿ, ವಿಠೊಬ, ಪುಂಡಲೀಕ… ಇವರುಗಳೂ, ಈ ಧರಣೀಧರನ ಹಾಗೇ ಜ್ಞಾತಿಗಳೆಂದು- ನನ್ನ ಅಮ್ಮ ಹೇಳಿದ್ದು ಬಿಟ್ಟರೆ, ಇವರುಗಳ ಬೇರೆ “ಜಾತಕ’ ನನಗಿನ್ನೂ ಗೊತ್ತಿಲ್ಲ!
“”ಇರಲಿ, ಒಂದು ಕೆಲಸ ಮಾಡು. ಬಚ್ಚಲುಮನೆಯಲ್ಲೇ ಬಟ್ಟೆ ಹಿಂಡಿಕೊಂಡು- ಅಲ್ಲೇ ಹಿತ್ತಲಲ್ಲಿ ಹರವಿಕೋ.. ಬಿಸಿಲಿದೆ. ಅರ್ಧ ಗಂಟೇಲಿ ಒಣಗಿಬಿಡುತ್ತೆ. ಅಲ್ಲೀವರೆಗೂ ಇದನ್ನ ಸುತ್ತಿಕೊಂಡಿರು” ಎಂದು ಹೇಳಿದ ದತ್ತೂ ಕಾಕ, ಟವೆಲಿನೊಡನೆ ಒಂದು ಸ್ನಾನದ ಪಂಚೆಯನ್ನೂ ಕೈಗಿತ್ತರು. ಕುದಿನೀರಿನ ಹಂಡೆಯ ಬಚ್ಚಲಿಗಿಳಿದಾಗ, ಅಲ್ಲೇ ಬದಿಗೋಡೆಯಲ್ಲಿ ಕಣ್ಮಟ್ಟಕ್ಕೆ ಸರಿಯಾಗಿ ಹೂಡಿದ ಕಿಟಕಿಯ ಆಚೆಗೆ, ಕಣಾಗುವವರೆಗೂ ಹಬ್ಬಿ ಹರಿಯುತ್ತಿದ್ದ ಹೊಳೆ ಕಾಣಿಸಿತು. “ಓಹ್… ವಾರಣಾನದಿ…’ ಎಂದು ಉದ್ಗರಿಸಿ, ನದಿಯ ಹಿನ್ನೀರನ್ನೇ ನೋಡಿಕೊಂಡು ಕೆಲ ಗಳಿಗೆ ಮೈಮರೆತೆ.
“”ವಾರಣಾ-ಹೊಳೆ ಇಡೀ ಸಾಂಗ್ಲಿ ಜಿಲ್ಲೆಗೆ ನೀರು ಕೊಡುವ ನದಿ ಕಣೋ- ಪುಟ್ಟ… ಸಳದಿಯಿಂದ ಮೂವತ್ತು ಮೈಲು ದೂರಕ್ಕೆ ಹರಿಪುರ ಅಂತ ಊರಿದೆ. ಅಲ್ಲಿ ಕೃಷ್ಣಾನದಿಯ ಜೊತೆ ಸಂಗಮಿಸುತ್ತೆ” ಅಮ್ಮ ಹೇಳಿದ್ದು ನೆನಪಾಯಿತು. ಹರಿಪುರದಲ್ಲಿ ಸಂಗಮದ ಮಗ್ಗುಲಿಗೇ ಒಂದು ದೊಡ್ಡ ಗುಡಿ ಇದೆ. ಸಂಗಮಶಿವನ ದೇವಸ್ಥಾನ. “”ಹೇಗಿದ್ದರೂ ಅಷ್ಟು ದೂರ ಹೋಗುತಿದೀಯಲ್ಲ, ಸಾಧ್ಯವಾದರೆ ನೋಡಿಕೊಂಡು ಬಾ. ಸೊಗಸಾದ ಜಾಗ. ನೋಡಬೇಕಾದ್ದು” ಅಂತಲೂ ಅಮ್ಮ ಹೇಳಿದ್ದಳು.
“ವಾರಣಾನದಿಗೆ ಅಡ್ಡವಾಗಿರುವ ಅಣೆಕಟ್ಟನ್ನು ಎತ್ತರಿಸಲಿಕ್ಕಿರುವ ಯೋಜನೆಯಿಂದಾಗಿ ಸಾಂಗ್ಲಿಜಿÇÉೆಯ ಮತ್ತಷ್ಟು ಪ್ರದೇಶಗಳಿಗೆ ನೀರಿನ ಸೌಕರ್ಯ ಹೆಚ್ಚಲಿದೆ’ ಇದು ಗೂಗಲಿನಲ್ಲಿ ಓದಿದ ಸುದ್ದಿ.
“”ಇನ್ನೊಂದು ವರ್ಷಕ್ಕೆ ಊರು ಮುಳುಗುತ್ತೆ, ಪಂಢರಿ. ಅಷ್ಟರಲ್ಲಿ ನಮಗೆಲ್ಲ ಒಂದು ನೆಲೆಯಾಗಬೇಕು. ಅದಕ್ಕೆ ಪರಿಹಾರಧನ ಇಸಕೋಬೇಕು. ನೀನು ಬಾರದಿದ್ದರೆ ನಮ್ಮೆಲ್ಲರ ಬದುಕೂ ಮುಳುಗುತ್ತೆ ಅಷ್ಟೆ” ಇದು ಧರಣೀಧರ ಪ್ರತಿಸಲವೂ ಫೋನಿನಲ್ಲಿ ಒತ್ತೂತ್ತಿ ಆಡಿದ ಮಾತು.
“”ಅರ್ಜೆಂಟು ಅಂತ ಸೀದಾ ಆಫೀಸಿನಿಂದ ಬಸ್ಸು ಹತ್ತಿದನಂತೆ, ಕಣೇ… ದೂಸರಾ ಚಡ್ಡಿ ಕೂಡ ತಂದಿಲ್ಲ” ಬಚ್ಚಲುಮನೆಯ ಹೊರಗೆ, ದತ್ತೂ ಕಾಕ ಯಾರಿಗೋ ಹೇಳುತ್ತಿದ್ದುದು ಕಿವಿಗೆ ಬಿತ್ತು. “”ಬಾರದೇ ಏನು ಮಾಡುತಾನೆ, ಕಾಕ… ದುಡ್ಡು ಸಿಗುತ್ತೆ ಅಂದರೆ ಚಡ್ಡಿ ಸೈತ ಬಿಚ್ಚಿ ನಂಗಾ ನಿಲ್ಲುವ ಕಾಲ ಇದು” ಹಿಂದೆಯೇ, ಗಂಡುಮಾತಿನ ಮಾರುತ್ತರ ಕೇಳಿಬಂದು ಆಘಾತವೇ ಆಯಿತು.
ಎಚ್ಚೆತ್ತೆ! ವಿಚಿತ್ರವೆನ್ನಿಸಿತು. ಛೇ! ತಪ್ಪು ಮಾಡಿಬಿಟ್ಟೆ. ಯಾರಿಗೆ ಬೇಕಿತ್ತು ಈ ದುಡ್ಡು? ಧರಣಿಯ ಮಾತಿಗೆ ಮರುಳಾದುದೇ ತಪ್ಪಾಯಿತು. ಅವನ ದಾಕ್ಷಿಣ್ಯಕ್ಕೆ ಸಿಲುಕಿ ಈ ಪರಿಯ ಇರಿಮಾತಿಗೀಡಾಗುವುದೆ? ನಾನಾಗಿಯೇ ಹಪಹಪಿಸಿಕೊಂಡೆಲ್ಲಿ ಬಂದೆ? ವರ್ಷಕ್ಕೊಂದು ಕೋಟಿ ಸಂಪಾದಿಸುವ ನನಗೆ ಇಲ್ಲಿನ ಪುಡಿಗಾಸಿನ ಮುಲಾಜೆ? ಅಥವಾ ಈ ಬಡ್ಡೀಮಕ್ಕಳ ಪಿತ್ರಾರ್ಜಿತದಲ್ಲಿ ಪಾಲು ಕೇಳಿದೆನೇನು? ಥತ್ತ್… ತೇರಿ…
“”ಆಗಲ್ಲ ಅಂತ ಖಡಕ್ಕಾಗಿ ಹೇಳಬಾರದಿತ್ತೇನೋ, ಪರೀ? ನಿನ್ನ ಅಪ್ಪನಿಗೇ ಬೇಡವಾಗಿದ್ದು ನಿನಗೇತಕ್ಕೆ ಹೇಳು?” ಅಮ್ಮ ಹೇಳಿದ್ದಳು. “”ಅದೇನು ನಿನ್ನ ಬಾಬಾ ನಿಯತ್ತಿನಿಂದ ಸಂಪಾದಿಸಿದ ಆಸ್ತಿ ಅಂದುಕೊಂಡೆಯಾ? ಅಥವಾ ಸ್ವಯಾರ್ಜಿತವಾ? ಅವರಿವರ ತಲೆ ಒಡೆಯೋ ಜಮೀನುದಾರಿಕೆ ಮಾಡಿಕೊಂಡು ಕೂಡಿಸಿದ್ದು. ಹೋಗಲಿ, ಮಹಾಶಯ ಏನು ಕಟ್ಟಿಕೊಂಡ ಹೆಂಡತಿಗೆ ತಕ್ಕುದಾಗಿ ಧರ್ಮವಾಗಿ ನಡಕೊಂಡರಾ? ಅದು ಸೈತ ಇಲ್ಲ. ಇಂಥ ಪಾಪದ ಆಸ್ತಿ ನಮಗೇತಕ್ಕೆ ಹೇಳು” ಅಮ್ಮ ಹಳೆಯದನ್ನೆಲ್ಲ ನೆನೆದು, ತನ್ನ ಮಾವ ಜಗನ್ನಾಥ ಸಳದೀಕರರ ಗುಣಗಾನ ಕೈಕೊಂಡು ಹೇಳಿದ್ದಳು.
ಆದರೆ ನಾನು ನಿರ್ಧರಿಸಿಯಾಗಿತ್ತು. “”ಧರಣಿ… ನನಗೆ ಈ ದುಡ್ಡಿನ ಆವಶ್ಯಕತೆ ಅಂತೇನೂ ಇಲ್ಲ. ನಿನ್ನ ಸಲುವಾಗಿ ಬರುತಿದ್ದೀನಿ ಅಷ್ಟೆ” ನಿನ್ನೆ ಸಹ, ಬಸ್ಸೇರುವ ಮೊದಲು ಫೋನಿನಲ್ಲಿ ಇದನ್ನೇ ಹೇಳಿದ್ದೆ. ಆದರೆ ಬಸ್ಸುದಾರಿಯುದ್ದಕ್ಕೂ ಗೊಂದಲವೇ ಮೊದಲಾಯಿತು. ಬಸ್ಸಿಗೆ ಮೊದಲು, ಗಾಂಧಿನಗರದಲ್ಲಿಯೇ ಎಲ್ಲಾದರೂ ಒಂದು ಜೊತೆ ಬಟ್ಟೆ ಕೊಳ್ಳಬೇಕೆನ್ನುವುದು ಸಹ- ಬೆಂಗಳೂರಿನ ಹಾಳು ಗಡಿಬಿಡಿಯ ನಡುವೆ ಕೈಗೂಡಲಿಲ್ಲ. ಹೋಗಲಿ, ಒಂದು ಅಂಡರ್‌ವೆàರ್ ಕೂಡ ಖರೀದಿಸಲಾಗಲಿಲ್ಲ. ಆಫೀಸಿನಲ್ಲೊಂದು ಮೀಟಿಂಗು ಅಗತ್ಯಕ್ಕೂ ಹೆಚ್ಚು ನೀಳಯಿಸಿ ಕಾಡಿತು. ಕೊನೆಗೆ, ಹೆಂಡತಿ ಆಖ್ಯಾಳಿಗೂ ಸರಿಯಾಗಿ ತಿಳಿಸಲಾಗಲಿಲ್ಲ. ಅವಳೂ ಆಫೀಸಿನಲ್ಲಿ ಬ್ಯುಸಿಯಿದ್ದುದರಿಂದ ಎರಡೇ ಮಾತು ಹೇಳಿ, ಬಸ್ಸೇರಿದ ಮೇಲೆ ಡಿಟೇಲಾಗಿ ಮೆಸೇಜು ಬರೆದಿದ್ದಾಯಿತು. ಈ ಆಖ್ಯಾ, ನಿಜಕ್ಕೂ ನನ್ನ ಪಾಲಿನ ದೇವತೆ; ನನ್ನೆಲ್ಲ ನಡೆನುಡಿಯನ್ನು ಸದಾ ಅನುಮೋದಿಸುವವಳು. “”ಏನು ಗೊತ್ತಾ, ಪರೀ… ನೀನು ಈ ಹಣವನ್ನು ಇಸಕೊಳ್ಳದಿದ್ದರೆ ಅನ್‌ಕ್ಲೈಮx… ಅಮೌಂಟ್ ಅಂತ ಗವನ್ಮೆìಂಟ್ ಟ್ರೆಶರೀಲಿ ಸುಮ್ಮನೆ ಬಿದ್ದಿರುತ್ತಂತೆ. ಹಾಗಾಗಿ ಹೋಗಿ ಬಾ. ಊರಿನಲ್ಲಿ, ಅವರಲ್ಲಿ ಯಾರಿಗೆ ಹೆಚ್ಚು ಅನನುಕೂಲ ಇದೆಯೋ ಅವರ ಹೆಸರಿಗೆ ಬರಕೊಟ್ಟು ಬಂದುಬಿಡು” ಎಂದು ವಾಪಸು ಬರೆದಳು. ದತ್ತೂ ಕಾಕ ಹೇಳಿದಂತೆಯೇ, ಮಿಂದ ಬಳಿಕ ಸ್ನಾನದ ಪಂಚೆ ಸುತ್ತಿಕೊಂಡು ಹಿತ್ತಲಿನಲ್ಲಿ- ಹಿಂಡಿದ ಬಟ್ಟೆಯನ್ನು ಒಣಹಾಕಿ ಬಿಸಿಲು ಕಾಯಿಸಿಕೊಂಡು ನಿಂತೆ. ಆಚೆಗಿನ ಹೊಳೆಯನ್ನು ಕಣ್ತುಂಬಿ ನೋಡಿದೆ. ನೋಟದುದ್ದಕ್ಕೂ ಅಂಚಿನವರೆಗೆ ಹಬ್ಬಿದ್ದ ನೀರೇ ನೀರು. ಅಣೆಕಟ್ಟಿನ ಹಿನ್ನೀರು. ಕ್ಷಿತಿಜವೆಂದರೆ ನೆಲವೋ ಆಕಾಶವೋ ನೀರೋ- ತಿಳಿಯದಷ್ಟು ನೀರು! ನೀರು! ಮನಸೊಳಗಿನ ಬೇಜಾರನ್ನೂ, ನಿ¨ªೆಗೇಡಿನ ಆಯಾಸವನ್ನೂ- ಒಟ್ಟೇ ಸಂಭಾಳಿಸಿಕೊಂಡು, ನೀರು ನೋಡುತ್ತಲೇ ಉಳಿದೆ.
ಈ ನಡುವೆ, ನನಗೆ ಗೊತ್ತಿರದ ಯಾರು ಯಾರೋ ಬಂದು ಹಿತ್ತಲಿನಲ್ಲಿ ಇಣಿಕಿಹೋದರು. ಕೆಲವು ಗಂಡಸರು. ಕೆಲವು ಹೆಂಗಸರು. ಎದುರಾಗಿ ಸಿಕ್ಕ ಕೆಲವರಿಗೆ “ನಮಸ್ತೆ’ ಹೇಳುವುದಾಯಿತು. ಅವರ ಚಹರೆಗಳಲ್ಲಿ ನನ್ನ ಮುಖಬಿಂಬದ ಝಲಕು ಸಿಕ್ಕೀತೆ ಎಂದು ಹುಡುಕಿದ್ದಾಯಿತು. ನನ್ನ ಅಪ್ಪನನ್ನು ಯಾರು ಎಷ್ಟು ಹೋಲುತ್ತಾರೆಂದು ಅಳೆದಿದ್ದೂ ಆಯಿತು. ಅವರಿವರು ಪರಿಚಯಿಸಿಕೊಂಡ ನೆಂಟಸ್ತಿಕೆಯೊಳಗೆ ಅಪ್ಪನ ಪರಿವಿಡಿಯಿರಿಸಿ ನನ್ನನ್ನು ನಾನೇ ನೋಡಿದ್ದೂ ಆಯಿತು. ಪರಸ್ಪರ ಮೈ ಹೋಲುವುದಾದರೂ ಮನಸ್ಸೆಷ್ಟು ಭಿನ್ನ ಅಂತನಿಸುವಾಗ, ಜಗತ್ತಿಗೆ ಜಗತ್ತೇ ಇಡಿಯಾಗಿ ಹಿಡಿಯಾಗಿ ಎಡಬಿಡಂಗಿ ಅನ್ನಿಸಿ ಕಾಡಿತು.
“ಅಂಕಲ್ ಬಾಬಾ ನಿಮಗೆ ಬರಹೇಳುತಾ ಇದ್ದಾರೆ’ ಹತ್ತು ವಯಸ್ಸಿನ ಹುಡುಗನೊಬ್ಬ ಬಂದು ಕರೆದ. ಅವನಾರೆಂದು ಕೇಳಿ ತಿಳಿಯಬೇಕೆನಿಸಿತಾದರೂ ಕೇಳದೆಯೆ ತಡೆದು- ಅಷ್ಟಿಷ್ಟು ಒಣಗಿದ ಬಟ್ಟೆಯನ್ನು ಹಸಿಹಸಿಯೇ ತೊಟ್ಟು ಹಿಂಬಾಲಿಸಿದೆ. ಬಾಬಾ ಅಟ್ಟದಲ್ಲಿದ್ದಾರೆಂದು ಹೇಳಿದ ಹುಡುಗ, ಏಣಿಯಂತಹ ಮಹಡಿಯಿರುವಲ್ಲಿಗೆ ನನ್ನನ್ನೊಯ್ದು ದಾರಿತೋರಿ ಮರೆಯಾದ. ನಿಧಾನವಾಗಿ ಮೆಟ್ಟಿಲೇರಿಕೊಂಡು ಮೇಲೆ ಹೋದೆ. ಹೆಂಚಿನ ನಡುವಿನ ಸೀಳುಗಳ ಮೂಲಕ ಹತ್ತಾರು ಬೆಳಕಿನ ಕೋಲುಗಳಿದ ಅದ್ಭುತವಾದ ಎಡೆಯೊಳಕ್ಕೆ ಸಂದೆ.
“”ಪಂಢರಿ, ನೀನಿನ್ನೂ ಚಿಕ್ಕವನು. ನಿನಗೆ ಇದನ್ನೆಲ್ಲ ನಾನು ಹೇಳಬಾರದು. ಆದರೆ, ಆಡದೆ ವಿಧಿಯಿಲ್ಲ” ಕಿಟಕಿಯ ಕಟ್ಟೆಯಲ್ಲಿ, ಅಡ್ಡಡ್ಡ ಸಾಗುವ ಕಬ್ಬಿಣದ ಸರಳುಗಳಿಗೆ ಬೆನ್ನೊಡ್ಡಿ ಕುಳಿತಿದ್ದ ದತ್ತೂ ಕಾಕ ಹೇಳಿದರು. “”ನಾಶಾ¤ ಮುಗಿಸಿಯೇ ಮಾತನಾಡಬಹುದಿತ್ತು. ಆದರೆ ಹೊತ್ತಾಗಿ ಹೋಗಿದೆ. ಎಲ್ಲರೂ ಬಂದ ಮೇಲೆ ಸುಮ್ಮನೆ ವ್ಯಾಜ್ಯ ಆಗೋದು ಬೇಡ ಅಂತ ಈಗಲೇ ಬರಹೇಳಿದೆ. ಸ್ಸಾರೀ” ಅಂತಂದರು. ಅಚ್ಚರಿಯಾಯಿತು. “”ನಿನಗೆ ನಮ್ಮಿà ಮನೆತನ, ವಂಶಸ್ತಿಕೆ, ಜಮೀನುದಾರಿಕೆ, ಇವಾವುವೂ ಗೊತ್ತಿಲ್ಲ, ಮಗೂ, ಗೊತ್ತಾಗದೇ ಇರೋದೇ ಚೆನ್ನು” ದತ್ತೂ ಕಾಕ ಒಡಪೊಡಪಾಗಿ ಪೀಠಿಕೆಯಿಟ್ಟರು. ಬಿಸಿಲಿನ ಕೋಲುಗಳಲ್ಲಿ ತೂಗುತ್ತಿದ್ದ ಸಣ್ಣ ಸಣ್ಣ ಕಣಗಳಷ್ಟೇ ಅತಂತ್ರಸ್ತವಾದ ಮಾತುಗಳನ್ನು ಹೇಳಿದರು. “”ಇನ್ನೇನು ಆ ಧರಣಿ, ರುಕ್ಮಾಯಿ, ವಿಠೊಬ, ಪುಂಡಲೀಕ ಎಲ್ಲರೂ ಬಂದುಬಿಡುತಾರೆ. ಸುಮ್ಮನೆ ಅವರೆದುರು ಮಾತು ಬೇಡ. ಇಕೋ ಇದನ್ನು ಓದಿಕೋ. ಓದಿಕೊಂಡು ಕೆಳಗೆ ಬಾ” ಅನ್ನುತ್ತ, ಒಂದು ಕಂದು ಬಣ್ಣದ ಲಕೋಟೆಯನ್ನು ನನ್ನ ಕೈಯಲ್ಲಿಟ್ಟು ಹೊರಟರು. ಮೆಲ್ಲಗೆ ಮೆಟ್ಟಿಲವರೆಗೂ ಸರಿದು, “”ಹಾnಂ… ಬಾಗಿಲು ಮುಂದುಮಾಡಿ ಹೋಗಿರುತೀನಿ. ಓದಿದ ಮೇಲೆ ಕಾಗದವನ್ನು ಜೋಪಾನವಾಗಿ ತಂದು ನನ್ನ ಕೈಗೆ ಕೊಡು. ಯಾರಿಗೂ ಕಾಣಿಸದ ಹಾಗೆ ಕೊಡು ಅಷ್ಟೆ” ಅಂತಂದು, ಕಡೆಯಲ್ಲಿ- “”ನನ್ನ ಸಮಸ್ಯೆಗೆ ಪರಿಹಾರ ನಿನ್ನ ಕೈಯಲ್ಲಿದೆ ಅಷ್ಟೇ” ಎಂದಂದು ಕೊಸರೂ ಹೇಳಿ ಇಳಿದು ಮರೆಯಾದರು.
ಮತ್ತೂ ವಿಚಿತ್ರವೆನಿಸಿತು. ಅರ್ಥಕ್ಕೂ ಹೆಚ್ಚಾಗಿ ನನ್ನೊಳಗೆ ಒಗಟಿಗೆ ಒಗಟೂ, ಮರ್ಮಕ್ಕೆ ಮರ್ಮವೂ ಗೂಢಯಿಸಿದವು. ಮೆಲ್ಲಗೆ ಲಕೋಟೆಯನ್ನು ತೆರೆದೆ. ಯಾವನೋ ನೋಟರಿಯ ಕಡೆಯಿಂದ ಅಫಿದಾವಿತ್ತು ಮಾಡಿಸಿದ ಪತ್ರವಿತ್ತು. ಜೊತೆಯಲ್ಲೊಂದು ಇನ್‌ಲೇಂಡ್ ಲೆಟರು. ಅಂತರ್ದೇಶೀಯ ಪತ್ರದ ಅಂಚು ಮಾಸಿದ್ದು ನೋಡಿ ಬಲು ಪುರಾತನ ಸಂಗತಿಯೆಂದು ಅನ್ನಿಸಿತು. ಅದರ ಮೇಲಿದ್ದ ಇಂಕು ಸಹ ಅಲ್ಲಿಲ್ಲಿ ಕದಡಿ ಮಾಸಿತ್ತು. ವಿಳಾಸದಲ್ಲಿನ ಅಕ್ಷರಗಳನ್ನು ನೋಡಿದ್ದೇ ಏನೆಂದು ಅರ್ಥವಾಯಿತು. “ಹೌದು, ನನ್ನ ಅಪ್ಪ ಬರೆದ ಪತ್ರವೇ ಕೃಷ್ಣಕಾಂತ ಸಳದೀಕರ್, ನಂಬರ್ 328, 12 ನೇ ಮೇಯ°…, 42ನೇ ಕ್ರಾಸ್, ರಾಜಾಜಿನಗರ 2ನೇ ಬ್ಲಾಕ್, ಬೆಂಗಳೂರು’- ಈ ವಿಳಾಸ ನೋಡಿ, ಪತ್ರಕ್ಕೆ ಸರಿಸುಮಾರು ನನ್ನದೇ ವಯಸ್ಸೆಂದು ಅಂದುಕೊಂಡೆ.
ಅದು ಸರಿ, ಇಷ್ಟು ಹಳೆಯ ಪತ್ರವನ್ನು ದತ್ತೂ ಕಾಕ ನನಗೇಕೆ ಕೊಟ್ಟರು? ಇದರಲ್ಲೇನಿದೆ? ಏನು ಬರೆದಿರಬಹುದು? ಆಸ್ತಿಪಾಸ್ತಿಯ ವಿಚಾರವೆ? ನನ್ನ ಅಪ್ಪ, ತಾನು ಬಿಟ್ಟುಬಂದ ಕುಟುಂಬದೊಡನೆ ಕೈಕೊಂಡಿರಬಹುದಾದ ವ್ಯಾಜ್ಯಾದಿ ವಿವರವೆ? ಅಥವಾ ಇನ್ನೇನೋ ವ್ಯವಹಾರವೇ?
ಮುಂದೇನೂ ತೋಚದೆ ಓದತೆರೆದರೆ, ಪತ್ರ ಮರಾಠಿಯಲ್ಲಿತ್ತು. ಅಪ್ಪ ಕೈಯಾರೆ ಬರೆದಿದ್ದು. “ಥತ್ತ್…’ ಅಂದುಕೊಂಡೆ. ಸ್ವಾತಂತ್ರೋತ್ತರದ ಔದ್ಯೋಗಿಕತೆಯ ಮಹಾನಗರದ ಮನೆಹಾಳು ತಳಿ ನಾನು. ಬೇರೆಯದಿರಲಿ, ಸ್ವಂತವಾದ ತಾಯ್‌ಲಿಪಿ ಎಂದೊಂದಿದ್ದೂ ಅದರೊಡನೆಯ ಬೇರು ಕಡಿದುಕೊಂಡ ಪೀಳಿಗೆಯ ಮುಖವಲ್ಲವೇ ನಾನು! ನಾಚುಗೆಯಾಯಿತು.
ನನಗೆ ಆ ಪತ್ರದಲ್ಲಿ ಅರ್ಥವಾದ ಒಂದೇ ವಿಷಯವೆಂದರೆ, ಅದರಲ್ಲಿದ್ದ ದಿನಾಂಕ. ಸನ್ ಹತ್ತೂಂಬತ್ತುನೂರ ಎಪ್ಪತ್ತಾರರ ಜೂನ್ ಇಪ್ಪತ್ತೇಳನೇ ತಾರೀಖನ್ನು ಇಂಗ್ಲಿಷ್ ಅಂಕೆಗಳಲ್ಲಿ ಬರೆಯಲಾಗಿತ್ತು. ಏನು ಮಾಡುವುದಂತ ತಿಳಿಯಲಿಲ್ಲ. ಅಪ್ಪನ ಕೈಬರಹವನ್ನು ಅರ್ಥೈಸಿಕೊಳ್ಳುವುದು ಹೇಗೆ? ಭಾಷೆ ಗೊತ್ತಿದ್ದೂ ಲಿಪಿ ಗೊತ್ತಿರದ ಅನಕ್ಷರಸ್ಥನಾಗಿಬಿಟ್ಟಿದ್ದೆ. ಬಳಿಕ, ಕಂದು ಲಕೋಟೆಯ ಒಳಗೆ ಕೈಯಾಡಿಸಿ, ಒಡನಿದ್ದ ಇನ್ನೊಂದು ಪತ್ರವನ್ನು ತೆಗೆದೆ. ಸದ್ಯ ಒಕ್ಕಣೆ ಇಂಗ್ಲಿಷಿನಲ್ಲಿತ್ತು.
“ದಿವಂಗತ ಕೃಷ್ಣಕಾಂತ ಸಳದೀಕರ ತನ್ನ ತಂದೆ ದಿವಂಗತ ಜಗನ್ನಾಥ ಸಳದೀಕರರಿಗೆ ದಿನಾಂಕ 27-06-1976ರಂದು ಬರೆದು ಕಳಿಸಿದ ಇನ್‌ಲೆಂಡ್ ಲೆಟರಿನ ತದ್ವತ್ ಅನುವಾದ’ ಎಂದು ಸುರುಗೊಂಡ ಅಫಿದಾವಿತ್ತು ಅದು.
ಅರರೇ ಇದನ್ನೇಕೆ ಅನುವಾದ ಮಾಡಿಸಿದ್ದಾರೆ? ತರ್ಜುಮೆ ಮಾಡಿಸಿದ್ದು ಯಾರು? ಮತ್ತು ಯಾತರ ಸಲುವಾಗಿ?
ಕುತೂಹಲ-ಕೌತುಕಗಳ ನಡುವೆಯೇ ಪತ್ರದಲ್ಲಿನ ಅನುವಾದಿತ ಒಕ್ಕಣೆಯನ್ನು ಓದಿದೆ. ಅಪ್ಪ ತನ್ನದೇ ಕಷ್ಟಸುಖವನ್ನು ಹೇಳಿಕೊಂಡಿದ್ದರು. ತನಗೆ ಬರುವ ಚಿಕ್ಕ ಸಂಬಳದ ಮುಖೇನ ಬೆಂಗಳೂರಿನಂತಹ ದುಬಾರಿ ಊರಿನಲ್ಲಿ ಬದುಕುವುದು ಕಷ್ಟವೆಂದು ತೋಡಿಕೊಂಡಿದ್ದರು. ಭಾಷೆ ಗೊತ್ತಿರದ ಪರವೂರಿನಲ್ಲಿ ನೆಲೆಯೂರಬೇಕಾದ ಪರಿಸ್ಥಿತಿಯನ್ನು ವಿವರಿಸಿದ್ದರು:
ಬಾಪೂ… ತಪ್ಪು ತಿಳಿಯಬೇಡಿ. ನನ್ನ ಇಲ್ಲಿನ ಪರಿಸ್ಥಿತಿಯೇನೂ ನೀವಂದುಕೊಂಡಷ್ಟು ಚೆನ್ನಾಗಿಲ್ಲ. ದೊಡ್ಡ ಊರು. ನನ್ನದೇ ಸಂಸಾರ. ಹಾಸಿಗೆಬಟ್ಟೆ, ಪಾತ್ರೆಪಡಗದ ಸಹಿತ ಎಲ್ಲವನ್ನೂ ಹೊಸತಾಗಿ ಮಾಡಿಕೊಂಡು ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಕೈಲಾದಷ್ಟು ಹಣವನ್ನು ಮಾತ್ರ ಕಳಿಸಬÇÉೆ. ನನ್ನ ಪಗಾರವನ್ನು ಆಧರಿಸಿ ನೀವು ಜಮೀನಿನ ಗೈಮೆಯನ್ನು ಮಾಡಿಸಲಾರಿರೆಂದು ನಿಮಗಿಂತ ಚೆನ್ನಾಗಿ ಗೊತ್ತು. ನೀವು ಪದೇಪದೇ ನನ್ನನ್ನು ಹೀಗೆ ಒತ್ತಾಯಿಸುವಿರಾದರೆ, ನನ್ನಿಂದಾಗದೆನ್ನುವ ಅಸಮರ್ಥತೆಯನ್ನು ಹೇಳುವುದಲ್ಲದೆ ಬೇರೆ ದಾರಿಯಿಲ್ಲ. ನಾನು ನನ್ನ ಬದುಕನ್ನು ನನ್ನ ಸ್ವಂತ ಪರಿಶ್ರಮದ ಮೇರೆಗೆ ಕಟ್ಟಿಕೊಳ್ಳುತ್ತೇನೆ. ನಿಮ್ಮ ಯಾವುದೇ ಆಸ್ತಿಪಾಸ್ತಿಯನ್ನು ಅಪೇಕ್ಷಿಸದೆ ದಾರಿ ನೋಡಿಕೊಳ್ಳುತ್ತೇನೆ. ಈ ಮಾತಿಗೆ ನಾನಷ್ಟೇ ಅಲ್ಲದೆ, ನನ್ನ ಹೆಂಡತಿಯನ್ನೂ ಒಳಗೊಂಡು ನನ್ನ ಉತ್ತರೋತ್ತರವಷ್ಟೂ ಬದ್ಧವಿರುತ್ತದೆಂಬುದನ್ನು ತಿಳಿಯಪಡಿಸುತ್ತೇನೆ.
ಇಷ್ಟು ಓದಿದ ಮೇಲೆ, ನನ್ನ ಮನಸ್ಸಿನಲ್ಲುಂಟಾಗಿದ್ದು ಅರ್ಥವೋ ಅನರ್ಥವೋ ಗೊತ್ತಾಗಲಿಲ್ಲ. ತೋಚದೆ ಸೂರು ನೋಡುವಾಗ, ಒಂದೊಂದೂ ಬಿಸಿಲುಗೋಲಿನ ಮುಖೇನ ಹತ್ತಾರು ಸೂರ್ಯಗಳು ಒಟ್ಟೊಟ್ಟಿಗೆ ಕುಕ್ಕಿ ಕಣತ್ತಲು ಉಂಟಾಯಿತು.
ನಾಗರಾಜ ವಸ್ತಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.