ಗ್ರೂಪ್ ಎಡ್ಮಿನ್
Team Udayavani, Dec 9, 2018, 6:00 AM IST
ಟಿವಿ ಎಂಬ ಮೂರ್ಖರ ಪೆಟ್ಟಿಗೆ ಬಂದಾಗಲೇ ನಮ್ಮ ಹಳಬರು,”ಕಲಿಗಾಲ ಬಂತು, ಈಗ ಎಲ್ಲರಿಗೂ ಟಿವಿ ಬಿಟ್ಟು ಬೇರೇನೂ ಬೇಕಿಲ್ಲ, ಎಲ್ಲಾ ಹಾಳಾಯ್ತು” ಎಂದು ಗೊಣಗುಟ್ಟಿದ್ದರು. ಆದರೆ, ಆ ನಂತರ ಬಂದ ಇನ್ನೂ ಭೀಕರ ಸಂಗತಿಗಳ ಮುಂದೆ ಇಂದು ಟಿವಿ ಪರಮ ಸಜ್ಜನವಾಗಿದೆ. ಬಳಿಕ ಕಂಪ್ಯೂಟರ್ ಎಂಬ ಮಹಾಪುರುಷ ಬಂದಾಗ ಯುವಜನರೆಲ್ಲ ಎಲ್ಲ ಮರೆತು ಅದರೆದುರು ಕೂತು ಶರಣಾದರು.
ಇಂಟರ್‌ನೆಟ್ ಎಂಬ ಮತ್ತೂಬ್ಬನಂತೂ ಎಲ್ಲರ ಮೇಲೆ ಸಮ್ಮೊàಹನಾಸ್ತ್ರ ಪ್ರಯೋಗಿಸಿ ವ್ಯಸನಿಗಳನ್ನಾಗಿಸಿದ. ಮುಂದೆ ಮೊಬೈಲ್‌ಎಂಬ ವಾಮನಮೂರ್ತಿ ಎಲ್ಲರ ಕಿವಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ತನ್ನ ದಾಸರನ್ನಾಗಿಸಿದ. ಫೇಸ್‌ಬುಕ್ ಎಂಬ ಮತ್ತೂಬ್ಬ ಅದೃಶ್ಯ ಮಾಂತ್ರಿಕನೋ ಈ ಕಂಪ್ಯೂಟರ್ ಮತ್ತು ಮೊಬೈಲ್ ಅವರೊಳಗೆ ಪರಕೀಯ ಪ್ರವೇಶ ಮಾಡಿ ನಮಗರಿವಿಲ್ಲದೇ ನಮ್ಮನ್ನು ದಾಸರನ್ನಾಗಿಸಿದ. ಈಗ ಇವರೆಲ್ಲರನ್ನೂ ಮೂಲೆಗೊತ್ತಿ ಪ್ರಪಂಚದ ಎಲ್ಲಾ ವರ್ಗದ ಮತ್ತು ಎಲ್ಲಾ ಪ್ರಾಯದ ಜನರನ್ನೂ, ಮಕ್ಕಳನ್ನೂ ಗಂಡುಹೆಣ್ಣೆಂಬ ಭೇದವಿಲ್ಲದೇ ವಶೀಕರಿಸಿ ಜಗತ್ತನ್ನು ಆಳುತ್ತಿರುವ ಮಹಾಶಕ್ತಿಯ ಹೆಸರೇ “ವಾಟ್ಸಾಪ್’.
ನೀವೆಲ್ಲ ಮಹಾಭಾರತದ ಅಭಿಮನ್ಯುವಿನ ಕಥೆ ಕೇಳಿದ್ದಿರಿ. ಅವನಿಗೆ ಚಕ್ರವ್ಯೂಹದೊಳಗೆ ಹೋಗಲಿಕ್ಕೆ ಗೊತ್ತಿತ್ತು, ಹೊರಬರಲಿಕ್ಕಲ್ಲ. ಈ ವಾಟ್ಸಾಪ್ ಎಂಬ ಆಧುನಿಕ ದ್ರೋಣಾಚಾರ್ಯ ರಚಿಸಿದ ಚಕ್ರವ್ಯೂಹದೊಳಗೆ ಹೋಗುವುದಷ್ಟೇ ನಮಗೆ ಗೊತ್ತಿರುವುದು. ಹೊರಬರುವ ಆಲೋಚನೆಯನ್ನೇ ಮಾಡೋ ಹಾಗಿಲ್ಲ. ಹೀಗಿದೆ ಪರಿಸ್ಥಿತಿ. ನಿಮಗೇನಾದರೂ ಇಷ್ಟವಿಲ್ಲದೇ ಹೊರಬರಲು ಪ್ರಯತ್ನಿಸಿದಿರೋ ನೀವು ಗ್ರೂಪಿನ ಖಳನಾಯಕರಾಗಿಬಿಡುತ್ತಿರಿ. ನಾನೊಮ್ಮೆ ಅಪ್ಪಿತಪ್ಪಿ ಯಾವುದೋ ತಪ್ಪು ಬಟನ್ ಒತ್ತಿ ಒಂದು ಗ್ರೂಪಿನಿಂದ ಎಕ್ಸಿಟ್ ಆಗಿ ಬಿಟ್ಟೆ. ಮುಂದಿನ ಕ್ಷಣವೇ, ಅದು ನನ್ನ ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪೋ ಎಂಬ ಹಾಗೆ ಭಾಸವಾಗತೊಡಗಿತು. ಗ್ರೂಪ್ ಸದಸ್ಯರು ಒಬ್ಬೊಬ್ಬರಾಗಿ ಕರೆಮಾಡಿ ಕಾರಣ ಕೇಳುವವರೇ. “ಯಾಕೆ ? ಬೇಜಾರಾಯಿತಾ?”, “”ನಮ್ಮದೇನಾದರೂ ತಪ್ಪಾಯಿತಾ?” ಇತ್ಯಾದಿ. ಅವರಿಗೆಲ್ಲ ಸಮಜಾಯಿಶಿ ಹೇಳಿ ಸಾಕಾಗಿ ಕೊನೆಗೆ ಅಡ್ಮಿನ್ ಅವರನ್ನು ಕಾಡಿಬೇಡಿ ಗ್ರೂಪ್‌ಗೆ ಮತ್ತೆ ಸೇರ್ಪಡೆಯಾದ ಬಳಿಕವೇ ನಾನು ನಿಟ್ಟುಸಿರುಬಿಟ್ಟಿದ್ದು.
ಆವಾಗಲೇ ನನಗೆ ಈ ವಾಟ್ಸಾಪ್ ಮಹಾತ್ಮನ ಪ್ರಚಂಡ ಶಕ್ತಿಯ ಅರಿವಾಗಿದ್ದು. ಇನ್ನು ಈ ವಾಟ್ಸಾಪ್ ಗುಂಪಿನ ಅಡ್ಮಿನ್ ಎಂಬ ಮಹಾಪುರುಷನ ವ್ಯಕ್ತಿತ್ವವೋ ಅವರ್ಣನೀಯ. ಪ್ರಾಯಶಃ ಅಮೆರಿಕದ ಅಧ್ಯಕ್ಷ ಅಥವಾ ಭಾರತದ ಪ್ರಧಾನಿಗಳು ಕೂಡ ಇವರಷ್ಟು ಅಧಿಕಾರ ಹೊಂದಿರುವರೋ ತಿಳಿಯದು. ಯಾರನ್ನು ಗುಂಪಿಗೆ ಸೇರಿಸಬೇಕು ಅಥವಾ ಕಿತ್ತೆಸೆಯಬೇಕು ಎನ್ನುವುದು ಇವರದ್ದೇ ನಿರ್ಣಯ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗೆ ಟಿಕೆಟ್ ನೀಡುವ ಗತ್ತಿನಿಂದ ಅಡ್ಮಿನ್ ತನ್ನ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಆದರೆ, ಇತ್ತೀಚಿಗೆ ಬಂದ ಸುದ್ದಿಯ ಪ್ರಕಾರ ಗುಂಪಿನಲ್ಲಿ ಏನಾದರೂ ಅನಪೇಕ್ಷಿತ ಮೆಸೇಜು ಚಲಾವಣೆಯಾಗುತ್ತಿದ್ದರೆ ಅದಕ್ಕೆ ಅಡ್ಮಿನ್ ಜವಾಬ್ದಾರ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಗೊತ್ತಾಗುತ್ತಲೇ, ಕೆಲವು ಅಡ್ಮಿನ್‌ಗಳು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ ಎಂದು ನಂಬಲರ್ಹ ಮೂಲಗಳ ವರದಿ. ಇನ್ನು ಗುಂಪಿನ ಸದಸ್ಯರೋ ಸಂಸತ್ತಿನಲ್ಲಿ ಸದಸ್ಯರು ಚಟುವಟಿಕೆಯಿಂದ ಕಲಾಪ ನಿರ್ವಹಿಸುವಂತೆ ಚುರುಕಾಗಿರುತ್ತಾರೆ. ಒಂದು ಮೆಸೇಜು ಬರುವುದೇ ತಡ, ಎಲ್ಲರೂ ಅದಕ್ಕೆ ಪ್ರತಿಕ್ರಿಯೆ ನೀಡುವವರೇ. ಇವರ ಮೊನಚಾದ, ಖಾರವಾದ ಮತ್ತು ಚುಟುಕಾದ ಪ್ರತಿಕ್ರಿಯೆ ಕಂಡು ನುರಿತ ಸಾಹಿತ್ಯ ವಿಮರ್ಶಕ ಕೂಡಾ ನಾಚಿಕೊಳ್ಳಬೇಕು. ಇನ್ನು ಗುಂಪಿನಲ್ಲಿ ಕೆಲವು ಸ್ವಘೋಷಿತ ಸೆನ್ಸಾರ್ ಮಂಡಳಿಗಳೂ ಇವೆ. ಇವರು ಒಂಥರಾ ಗುಂಪಿನ ಮೊರಲ್ ಪೊಲೀಸ್ ಹಾಗೆ ಕೆಲಸ ಮಾಡುತ್ತಾರೆ. ಗುಂಪಿನ ಹೆಸರು ಮತ್ತು ಉದ್ದೇಶಗಳಿಗೆ ಸಂಬಧಿಸದ ಯಾವುದೇ ಮೆಸೇಜ್ ಬಂದ ಕೂಡಲೆ ಇವರು ಜಾಗ್ರತರಾಗುತ್ತಾರೆ. ಮೊದಮೊದಲು ವಿನಯದಿಂದ ಈ ಬಗ್ಗೆ ತಿಳಿಸುತ್ತಾರೆ ಬಳಿಕ ತೀಕ್ಷ್ಣವಾಗಿ ಟೀಕಿಸುತ್ತಾರೆ. ಕೆಲವರು ಇವರ ಅತೀ ನಿಯಂತ್ರಣಕ್ಕಾಗಿ ರೋಸಿ ಗುಂಪಿಗೆ ರಾಜೀನಾಮೆ ನೀಡುವುದೂ ಇದೆ.
ಒಂದು ಗುಂಪಿಗೆ ಹೊಸದಾಗಿ ಸೇರ್ಪಡೆಯಾದ ಬಳಿಕ ಕೆಲವು ದಿನ ನವವಧುವಿನಂತೆ ಹೊಸ ಜೀವನ ಆನಂದಮಯವಾಗುತ್ತದೆ. ಆದರೆ, ದಿನ ಹೋದಂತೆ ಹಳಸಲು ಶುರುವಾಗುತ್ತದೆ. ಮೊದಮೊದಲು ಬರುವಂಥ “ಗುಡ್ ಮಾರ್ನಿಂಗ್’, “ಗುಡ್ ನೈಟ್’, “ಶುಭೋದಯ’, “ಶುಭರಾತ್ರಿ’ ಸಂದೇಶಗಳ ಜತೆ ಬರುವ ಹೂವಿನ ಚಿತ್ರ, ಸುಂದರ ದೃಶ್ಯಗಳ ಚಿತ್ರ ಇವನ್ನೆಲ್ಲ ನೋಡಿ ಮೆಚ್ಚುಗೆ (ಲೆ„ಕ್ಸ್) ಹಾಕಿದ್ದೇ ಹಾಕಿದ್ದು.
ದಿನಕಳೆದಂತೆ, ಬೆಳಿಗ್ಗೆ ಒಂದೊಂದು ಗುಂಪಿನಲ್ಲೂ ಇಂಥ ನೂರಾರು ಸಂದೇಶಗಳನ್ನು ನೋಡಿ ಇವನ್ನೆಲ್ಲ ಡಿಲೀಟ್ ಮಾಡಬೇಕಲ್ಲ ಎಂದು ಹಿಡಿಶಾಪ ಹಾಕುವ ಪರಿಸ್ಥಿತಿ. ವಾಟ್ಸಾಪ್ ಯಾವಾಗಿನಿಂದ ಸಂದೇಶಗಳ ಮೇಲೆ ರೈಟ್ ಟಿಕ್ ಹಾಕುವ ಪದ್ಧತಿ ಪ್ರಾರಂಭಿಸಿತೋ ಅಲ್ಲಿಗೆ ಶುರುವಾಯಿತು ನೋಡಿ ಧರ್ಮಸಂಕಟ. “”ನಾನು ನಿನ್ನೆ ಕಳಿಸಿದ ಮೆಸೇಜ್ ನೀವಿನ್ನೂ ನೋಡಿಲ್ಲ?” ಎಂದು ಆಫೀಸಿನ ಬಾಸ್ (ಮೇಲಧಿಕಾರಿ) ಅಥವಾ ಮನೆಯ ಬಾಸ್ (ಮಡದಿ) ಹೇಳಿದರೆ ನಿಮಗೆ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. “”ಇಲ್ಲ ನೋಡಿದ್ದೆ” ಎಂದು ಹೇಳಿದಿರೋ ಮುಗಿಯಿತು ಕಥೆ. “”ಅಲಿÅà, ಸುಳ್ಳು ಯಾಕೆ ಹೇಳ್ತಿರಾ? ಮೆಸೇಜ್ ಮೇಲೆ ಒಂದೇ ಟಿಕ್ ಇತ್ತು ಅಥವಾ ಮೆಸೇಜ್ ಮೇಲೆ ಎರಡನೇ ಟಿಕ್ ನೀಲಿ ಬಣ್ಣ ಆಗಿಲ್ಲ” ಎಂದು ನಿಮ್ಮನ್ನು ಸಾಕ್ಷಿ ಸಮೇತ ಹಿಡಿದು ಬಿಡುತ್ತಾರೆ. ಇಷ್ಟಾದರೂ ಈ ಗುಂಪುಗಳಿಗೆ ಸೇರ್ಪಡೆಯಾಗುವುದು ಅದರಲ್ಲಿನ ಎಲ್ಲ ಗೊಂದಲ ಮತ್ತು ಸಮಸ್ಯೆಗಳ ನಡುವೆಯೂ ಅಲ್ಲಿ ಮುಂದುವರೆಯುವುದು ಎಲ್ಲರಿಗೂ ಅನಿವಾರ್ಯ. ಇದನ್ನೆಲ್ಲ ನೋಡುವ ಮೊದಲೇ ಪಾಪ ನಮ್ಮ ದಾಸಶ್ರೇಷ್ಠರು, “ಈಸಬೇಕು ಇದ್ದು ಜೈಸಬೇಕು’ ಎಂದು ಬರೆದಿಟ್ಟಿದ್ದಾರೆ. ಇನ್ನು ಕೆಲವರಿಗಂತೂ ಎಷ್ಟು ಹೆಚ್ಚು ಗುಂಪುಗಳಿಗೆ ಸದಸ್ಯತ್ವ ಸಿಗುತ್ತೋ ಅಷ್ಟು ಹೆಮ್ಮೆ ಜಾಸ್ತಿ – “”ನನಗಂತೂ ಸಾಕಾಗಿ ಹೋಯ್ತಪ್ಪಾ! ಈವಾಗಲೇ ನಲ್ವತ್ತೆŒ„ದು ಗ್ರೂಪ್‌ಗ್ಳಲ್ಲಿದ್ದೇನೆ. ಮೆಸೇಜ್ ಓದಿ ಡಿಲೀಟ್ ಮಾಡುವಷ್ಟರಲ್ಲಿ ರಾತ್ರಿ ಒಂದು ಗಂಟೆಯಾಗುತ್ತದೆ. ಏನು ಮಾಡುವುದು…?” ಎಂದು ಬಾಯಲ್ಲಿ ಗೊಣಗುತ್ತಾ ಮನಸ್ಸಿನಲ್ಲೇ ಹೆಮ್ಮೆ ಪಟ್ಟುಕೊಳ್ಳುತ್ತಾರೆ.
ಸ್ವಲ್ಪ ಸಮಯದ ಹಿಂದೆ ನಮ್ಮ ಭಾಷಾಪಂಡಿತರು ಬಹಳ ಚಿಂತೆಯಲ್ಲಿದ್ದರು. ಭಾಷೆ ಕುಲಗೆಟ್ಟು ಹೋಗುತ್ತಿದೆ ಈ ಎಸ್.ಎಂ.ಎಸ್. ಭಾಷೆಯಿಂದಾಗಿ ಎಂದು ಅವರ ಆತಂಕವಾಗಿತ್ತು. ಈಗ ವಾಟ್ಸಾಪ್ ಯುಗದಲ್ಲಿ ಪ್ರಾಯಶಃ ಇನ್ನು ಭಾಷಾಪಂಡಿತರಿಗೆ ಕೆಲಸವಿರಲಿಕ್ಕಿಲ್ಲ. ಯಾಕೆಂದರೆ, ಈಗ ಲಿಪಿಯಿಲ್ಲದ ಭಾಷೆ ಚಾಲ್ತಿಗೆ ಬರಲಾರಂಭಿಸಿದೆ. ಅದೇ “ಇಮೋಜಿ’ ಭಾಷೆ. ಇತ್ತೀಚೆಗೆ ನನ್ನ ಮಿತ್ರರೊಬ್ಬರು ಕೇಳಿದರು- “”ಆ ಅಳುವ ಇಮೋಜಿ ತುಂಬ ಚೆನ್ನಾಗಿದೆ ಅಲ್ವಾ?”. ನಾನು ಏನೆಂದು ತಿಳಿಯದೆ ಕಣ್ಣು ಕಣ್ಣು ಬಿಟ್ಟಾಗ “”ನಿನಗೆ ಇಮೋಜಿ ಗೊತ್ತಿಲ್ವಾ?” ಎಂದರು. ನಾನು ಮತ್ತೆ ಬೆಪ್ಪನಂತೆ “”ನನಗೆ ಹೈದರಾಬಾದಿನ ರಾಮೋಜಿ ಮಾತ್ರ ಗೊತ್ತು” ಎಂದು ಹಲ್ಲು ಕಿರಿದೆ. ಬಳಿಕ ನನ್ನ ಮಗನಿಂದ ಇದರ ಬಗ್ಗೆ ತಿಳಿದುಕೊಂಡು ಈ ಇಮೋಜಿ ಭಂಡಾರವನ್ನು ನೋಡಿದರೆ ತಲೆ ತಿರುಗಿತು. ಮನುಷ್ಯನ ಸಂವಹನಕ್ಕೆ ಬೇಕಾದ ಎಲ್ಲವೂ ಅಲ್ಲಿ ಚಿತ್ರ ರೂಪದಲ್ಲಿತ್ತು. ಅದನ್ನು ನೋಡಿದಾಗ ನಮಗೆ ಲಿಪಿಯ ಅಗತ್ಯವಿದೆಯೆ ಅಂದು ಅನಿಸಿತು. ಪ್ರಾಯಶಃ ಶಿಲಾಯುಗದ ಮಾನವ, ಮೊಹೆಂಜೋದಾರೋ ಚಿತ್ರಲಿಪಿ ಇವೆಲ್ಲಾ ಆಗಿನ ಕಾಲದ ಇಮೋಜಿಯೋ ಏನೋ ಗೊತ್ತಿಲ್ಲ.
ನಮ್ಮ ಯುವಜನಾಂಗವಂತೂ ಈಗ ಎಲ್ಲ ಸಂವಾದಗಳನ್ನೂ ಇಮೋಜಿ ಮೂಲಕವೇ ಮಾಡುತ್ತದೆ. ನಕ್ಕರೆ ಒಂದು ಮುಖ, ಅತ್ತರೆ ಅಳುಮುಖ, ಸಿಟ್ಟಿಗೆ ಕೆಂಪುಮುಖ, ಆಶ್ಚರ್ಯಕ್ಕೆ ಬಿಟ್ಟಕಣ್ಣು ಮುಖ, ಕೈ ಮತ್ತು ಕೈಬೆರಳಿನ ವಿವಿಧ ಭಂಗಿಗಳು, ಪ್ರಾಣಿಗಳು, ಪಕ್ಷಿಗಳು, ಪೀಠೊಪಕರಣಗಳು, ವಸ್ತುಗಳು… ಏನುಂಟು ಏನಿಲ್ಲ ? ಯಾರನ್ನಾದರೂ ಶ್ಲಾಘಿಸಬೇಕೆಂದರೆ ಚಪ್ಪಾಳೆಯ ಚಿತ್ರ, ದೇವರು, ಗುರುಗಳು ಇತ್ಯಾದಿ ಕಂಡರೆ ನಮಸ್ಕಾರದ ಚಿತ್ರ… ಯಾವ ಭಾವನೆಗಾದರೂ ಯಾವ ಸಂದರ್ಭಕ್ಕಾದರೂ ಅಲ್ಲಿ ಚಿತ್ರವಿದೆ. ಹಾಗಿದ್ದಾಗ ಭಾಷೆ ಯಾಕೆ ಬೇಕು? ಗುಂಪಿನಲ್ಲಿ ಯಾರದರೂ ಜನ್ಮದಿನ ಅಥವಾ ವಿವಾಹ ವರ್ಧಂತಿ ಇದ್ದರೆ ಮುಗಿಯಿತು.
ಕ್ಯಾಂಡಲ್ ಜತೆ ಕೇಕು, ಹೂಗುತ್ಛದ ಚಿತ್ರದ ಶುಭಾಶಯದಿಂದ ಇಡೀ ಗುಂಪಿನಲ್ಲಿ ನೂರಾರು ಸಂದೇಶಗಳು ತುಂಬಿ ಹೋಗುತ್ತವೆ. ಆಮೇಲೆ ಅವನ್ನು ಡಿಲೀಟ್ ಮಾಡಲು ತಲೆನೋವು. ಒಬ್ಬ ಮೇಧಾವಿಯಂತೂ ಇಮೋಜಿಯ ಎಲ್ಲ ಮುಖಚಿತ್ರಗಳ ಭಾವನೆಯನ್ನು ವಿವರಿಸಿ ಒಂದು ಸಂದೇಶ ಬರೆದು ಕಳಿಸಿದ್ದ. ಇದು ಹೀಗೇ ಮುಂದುವರೆದರೆ ಒಂದು ದಿನ ಈ ಇಮೋಜಿ ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಹೋರಾಟ ನಡೆದರೂ ಆಶ್ಚರ್ಯವಿಲ್ಲ. ಆಗ ಕರೆನ್ಸಿ ನೋಟಿನಲ್ಲಿ ವಿಧವಿಧವಾದ ಮುಖಗಳು, ಚಿನ್ಹೆಗಳು, ಆಕೃತಿಗಳು ಕಂಡು ಬಂದೀತು.
“”ಲೋಕದಲ್ಲಿದ್ದದೆಲ್ಲ ಮಹಾಭಾರತದಲ್ಲಿದೆ, ಮಹಾಭಾರತದಲ್ಲಿಲ್ಲದ್ದು ಲೋಕದಲ್ಲಿಲ್ಲ” ಎಂಬ ಮಾತು ಹಳತಾಯಿತು. ಇಂದು “ವಾಟ್ಸಾಪ್ ಜ್ಞಾನ’ ವಿಶ್ವದ ಎಲ್ಲವನ್ನೂ ಒಳಗೊಂಡಿದೆ. ಜನರು ತಮ್ಮ ಎಷ್ಟೋ ಸಮಸ್ಯೆಗಳನ್ನು ವಾಟ್ಸಾಪ್‌ನಿಂದಲೇ ಪರಿಹರಿಸಿಕೊಂಡಿದ್ದಾರೆ. ಯಾವುದರ ರಸ ಕುಡಿಯುವುದರಿಂದ ಭೇದಿ ನಿಲ್ಲುತ್ತದೆ, ಯಾವ ತರಕಾರಿ ಸೇವಿಸುವುದರಿಂದ ಏನು ಲಾಭವಿದೆ, ಯಾವ ಮನೆಮದ್ದು ಯಾವುದಕ್ಕೆ ಸೂಕ್ತ ಎಲ್ಲ ವಾಟ್ಸಾಪ್‌ನಲ್ಲಿ ಲಭ್ಯ.
– ಸುಧಾಕರ ನಾಯಕ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.