ಹೂ ಈಸ್ ಹೂ?: ಎರಡು ಐನ್‌ಸ್ಟೈನ್ ಕತೆಗಳು
Team Udayavani, Apr 15, 2018, 7:30 AM IST
ಎಲ್ಲಿಗೆ ಬಂತು ಅಮೆರಿಕಕ್ಕೆ ಹೋಗೋ ತಯಾರಿ. ವೀಸಾ ಕೈ ಬಂತಾ” ಜೋಸೆಫ್ ಆವತ್ತು ಬೆಳಿಗ್ಗೆ ಬೆಳಿಗ್ಗೆ ಎದುರಾದ ವಿನ್ಸೆಂಟ್ ಬಳಿ ಹೀಗೇ ಕ್ಯಾಶುಯಲ್ ಆಗಿ ಕೇಳಿದ್ದ. “”ಹೌದು, ಹೌದು, ನಾನೇ ಹೇಳಬೇಕಂತ ಇದ್ದೆ. ಇನ್ನೇನು ಹತ್ತು-ಹದಿನೈದು ದಿನಗಳಲ್ಲಿ ಎಲ್ಲ ಆಗುತ್ತೆ. ಮತ್ತೆ ಸಿಗ್ತಿನಿ ನಿಂಗೆ” ಎಂಬ ಉತ್ತರವೂ ಬಂದಿತ್ತು. ಆದರೆ, ಆರು ತಿಂಗಳ ನಂತರ ಮತ್ತೆ ಅಕಸ್ಮಾತ್ ಭೇಟಿಯಾದಾಗ ವಿನ್ಸೆಂಟ್ ಈ ಯಾವ ಮಾತುಕತೆಯೂ ನಡೆದಿದ್ದೇ ಇಲ್ಲವೆಂಬಂತೆ ತಲೆಯಾಡಿಸಿದ.
“”ಅಲ್ಲ, ಇನ್ನೂ ಎರಡು ವರ್ಷ ಕೋರ್ಸ್ ಇದೆ. ಅಂಥಾದ್ದರಲ್ಲಿ ಹೇಗೆ ಅಮೆರಿಕಕ್ಕೆ ಹೋಗೋದು. ಇದೆಲ್ಲ ನಿನಗೂ ಗೊತ್ತಿದ್ದು ನೀನು ಕೇಳ್ಳೋದಾದ್ರೂ ಹ್ಯಾಗೆ ! ಅಥಾÌ ನೀನು ಕೇಳಿದೆ ಅಂದ್ಕೊಂಡಿ ಅನ್ಸುತ್ತೆ. ಅಂಥ ಒಂದು ಮಾತ್ಕತೆ ನಮ್ಮ ನಡುವೆ ನಡೆದಿದ್ದೇ ಇಲ್ಲ ಜೋಸೆಫ್, ಸರೀ ನೆನಪ್ ಮಾಡ್ಕೊ” ಹೌದು, ಆಗ ಹಾಗೆ ಕೇಳುವುದಕ್ಕೆ ಸರಿಕಟ್ಟು ಕಾರಣವೇ ಇರಲಿಲ್ಲವಲ್ಲ ಎನಿಸಿತು ಜೋಸೆಫ್ಗೆ. ಹಾಗಾದ್ರೆ ತಾನು ಕೇಳಿದ್ದು ಕನಸಲ್ಲ !
ಮೂರು ವರ್ಷದ ನಂತರ ಮಾತ್ರ ಹಾಗೇ ಆಯ್ತು.
“”ಎಲ್ಲಿಗೆ ಬಂತು ಅಮೆರಿಕಕ್ಕೆ ಹೋಗೋ ತಯಾರಿ, ವೀಸಾ ಕೈಗೆ ಬಂತಾ” ಚರ್ಚ್‌ನಿಂದ ಹೊರಬರುತ್ತ ಕಣ್ಣಿಗೆ ಬಿದ್ದ ವಿನ್ಸೆಂಟ್ ಬಳಿ ಜೋಸೆಫ್ ಹೀಗೇ ಕ್ಯಾಶುಯಲ್ ಆಗಿ ಕೇಳಿದ್ದ.
“”ಹೌದು, ಹೌದು, ನಾನೇ ಹೇಳಬೇಕಂತ ಇದ್ದೆ. ಇನ್ನೇನು, ಹತ್ತು-ಹದಿನೈದು ದಿನಗಳಲ್ಲಿ ಎಲ್ಲ ಆಗುತ್ತೆ. ಹೊರಡೋದೆ. ಹೇಗಿದ್ರೂ ಮತ್ತೆ ಸಿಗ್ತಿನೆ ನಿಂಗೆ” ಎನ್ನುತ್ತಲೇ ಸ್ವಲ್ಪ ಗಡಿಬಿಡಿಯಲ್ಲೇ ವಿನ್ಸೆಂಟ್ ಹೊರಟುಹೋದ.
ಕಾರಿನೊಳಕ್ಕೆ ಸೇರಿ ಡ್ರೈವ್ ಮಾಡುತ್ತಲೇ ವಿನ್ಸೆಂಟ್‌ಗೆ ಇದ್ದಕ್ಕಿದ್ದ ಹಾಗೆ ವರ್ಷಗಳ ಹಿಂದೆ ಜೋಸೆಫ್ ಯಥಾವತ್ ಹೀಗೇ ಕೇಳಿದ್ದು ನೆನಪಾಯ್ತು. ಅರೆ! ಇದೇನಿದು ಹೀಗೆ ಅನಿಸ್ತಾ ಇದೆ ಎಂದುಕೊಂಡವನೇ ಏನೋ ತಳಮಳವಾದ ಹಾಗಾಗಿ ತಕ್ಷಣವೇ ಮೊಬೈಲ್ ಕೈಗೆ ತಗೊಂಡು ಜೋಸೆಫ್ಗೆ ಕಾಲ್ ಮಾಡಿದ. ಆವತ್ತು ಏನು ಮಾಡಿದರೂ ಜೋಸೆಫ್ ಮಾತಿಗೆ ಸಿಗಲೇ ಇಲ್ಲ. ಆಮೇಲೊಂದು ದಿನ, ಅಮೆರಿಕಕ್ಕೆ ಹೊರಡುವ ಮುನ್ನ, ಇಬ್ಬರೂ ಭೇಟಿಯಾದಾಗ ವಿನ್ಸೆಂಟ್ ತಪ್ಪದೇ ನೆನಪು ಕೆದಕಿದ. ಜೋಸೆಫ್ ಕೇಳಿದ್ದು, ಮತ್ತಾವತ್ತೂ ನೆನಪಿಸಿಕೊಂಡಾಗ ತಾನು ಇಲ್ಲವೇ ಇಲ್ಲ ಎಂದಿದ್ದು ಮತ್ತು ಈಗಿನ ಯಥಾವತ್ ಪುನರಾವೃತ್ತಿಯಿಂದಲೇ ತನಗದು ಥಟ್ಟನೆ ನೆನಪಾಗಿದ್ದು ಎಲ್ಲ ಹೇಳಿ “”ಎಂಥಾ ವಿಚಿತ್ರ ಅಲ್ವ ” ಎಂದ.
ತಮಾಷೆ ಎಂದರೆ ಜೋಸೆಫ್ ಮಾತೇ ಆಡಲಿಲ್ಲ. ಅವನಿಗೆ ಇದೆಲ್ಲ ಎಂಥ ತಮಾಷೆ ಎಂತಲೋ, ಈ ವಿನ್ಸೆಂಟಿಗೆ ಅಮರಿಕಕ್ಕೆ ಹೊರಟ ಹೊತ್ತಿಗೆ ಇದೆಂಥ ಬ್ರಾಂತಿ ಹುಟ್ಕೊಂಡಿದೆ ಅಂತಲೊ ಎನಿಸಿ ಏನು ಹೇಳಬೇಕಂತಲೇ ಗೊತ್ತಾಗಲಿಲ್ಲ. ಇದಕ್ಕೂ ಮೊದಲೊಮ್ಮೆ ಅವನೆಂದೂ ವಿನ್ಸೆಂಟ್ ಬಳಿ ಹಾಗೆಲ್ಲ ಮಾತನಾಡಿದ್ದೇ ಅವನಿಗೆ ನೆನಪಾಗಲಿಲ್ಲ. ಆದರೂ ಖಡಕ್ ನಂಬುಗೆಯಿಂದ ವಿನ್ಸೆಂಟ್ ಹೇಳುತ್ತಿದ್ದಾಗ ಅದನ್ನು ಹೇಗೆ ಅಲ್ಲಗಳೆಯಬೇಕೆಂಬುದೇ ಗೊತ್ತಾಗದೆ ಅವನ ಬಾಯಿಕಟ್ಟಿದಂತಾಗಿತ್ತು.
ಆದರೆ, ಈ ಇಬ್ಬರೂ ಹೀಗೆ ಮಾತನಾಡಿಕೊಳ್ಳುತ್ತಿರುವಾಗ ಯಾರೂ ಗಮನಿಸದ ಯೋಚನೆಯೊಂದು “”ಥತ್, ಈ ಜನ ಯಾವತ್ತೂ ಹೀಗೆಯೇ. ಯಾರೋ ಆಡಿದ್ದನ್ನ ಇನ್ಯಾರೋ ಅಂದ್ಕೊಂಡು ಇದ್ದವರ ತಲೇನೆಲ್ಲ ಕೆಡಿಸ್ತಾ ಇರ್ತಾರೆ” ಎಂದು ಗೊಣಗುತ್ತ ಅಲ್ಲಿಂದ ಹೊರಟು ಹೋಯ್ತು. ಅದು ನೋಡುವುದಕ್ಕೆ ಜೋಸೆಫ್ ತರ ಇತ್ತೆ ವಿನ್ಸೆಂಟ್ ತರ ಇತ್ತೆ, ಗೊತ್ತಿಲ್ಲ.
1
ಆಲ್ಬರ್ಟ್ ಐನ್‌ಸ್ಟೈನ್ ಯಾರಿಗೆ ಗೊತ್ತಿಲ್ಲ ! ಬಾಲ್ಯದಲ್ಲಿ ಮೂರು ವರ್ಷ ಕಳೆಯುವವರೆಗೂ ಐನ್‌ಸ್ಟೈನ್ ತೊದಲು ಮಾತುಗಳನ್ನೂ ಆಡುತ್ತಿರಲಿಲ್ಲವಂತೆ. ಮಾತು ಕಲಿತದ್ದೇ ಬಲು ನಿಧಾನ ಎಂದಾಗ ತಂದೆತಾಯಿಯರಿಗೆ ಚಿಂತೆ ಹತ್ತಿತ್ತು. ಈ ಮಗು ಬುದ್ಧಿಮಾಂದ್ಯನಿರಬಹುದೇ ಎಂದು ಅನುಮಾನಪಟ್ಟು ವೈದ್ಯರಿಗೆ ತೋರಿಸಿದ್ದೂ ಉಂಟು. ಆದರೆ, ಮುಂದೆ ಐನ್‌ಸ್ಟೈನ್ ತನ್ನ ಅಪಾರ ಬುದ್ಧಿಮತ್ತೆಯಿಂದ ಜಗತ್ತನ್ನೇ ಅಚ್ಚರಿಯಲ್ಲಿ ಕೆಡವಿದ್ದು; ಇಪ್ಪತ್ತು-ಇಪ್ಪತ್ತೆ„ದರ ವಯಸ್ಸಿಗೆ ತನ್ನ ಜೀವಮಾನದ ಶ್ರೇಷ್ಠ ಸಾಧನೆಯಾದ ಸಾಪೇಕ್ಷ ಸಿದ್ಧಾಂತವನ್ನು ರೂಪಿಸಿದ್ದೆಲ್ಲ ಈಗ ದಂತಕತೆ.
ವಿಜ್ಞಾನದಲ್ಲಿ ಅದೆಷ್ಟೇ ಮುಂದುವರಿದರೂ ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ಅವರ ಆಸಕ್ತಿ ಅಷ್ಟಕ್ಕಷ್ಟೆ. ಅದಕ್ಕೆ ಕಾರಣರಾದದ್ದು ಅವರ ಗುರುಗಳಾದ ಎಚ್. ಎಫ್. ವೆಬರ್ ಎಂಬವರು. ಮೊದಮೊದಲು ಪ್ರಯೋಗಗಳಲ್ಲಿ ಭಲೇ ಆಸಕ್ತಿ ತೋರಿಸುತ್ತಿದ್ದ ಈ ಹುಡುಗ ಒಮ್ಮೆ ಈಥರ್ ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂದು ನೋಡಲು ಒಂದು ವಿಚಿತ್ರ, ಅಷ್ಟೇ ಅಪಾಯಕಾರಿಯಾದ ಪ್ರಯೋಗಕ್ಕಿಳಿದಾಗ ಗುರುಗಳಾದ ವೆಬರ್ ಗದರಿಸಿದರಂತೆ. ಗುರುಗಳಿಂದ ಬೈಗುಳಾರ್ಚನೆಯಾದ ಮೇಲೆ ಐನ್‌ಸ್ಟೈನರಿಗೆ ಪ್ರಯೋಗಗಳ ಮೇಲೆ ಇದ್ದ ಆಸಕ್ತಿಯೆಲ್ಲ ಆವಿಯಾಗಿಹೋಯಿತು. ಅವರು ತಾತ್ತಿ$Ìಕ ಭೌತಶಾಸ್ತ್ರದತ್ತ ಆಸಕ್ತರಾದರು. ಪ್ರಯೋಗಾಲಯದ ಸಹಾಯವಿಲ್ಲದೆ ಎಲ್ಲೆಂದರಲ್ಲಿ, ಕೇವಲ ಪೆನ್ನು-ಪೇಪರುಗಳ ಸಹಾಯದಿಂದ ರಚಿಸಬಹುದಾದ ಹೊಸ ಸಂಗತಿಗಳತ್ತ ಮನಸ್ಸು ತೊಡಗಿಸಿದರು. ಅದಕ್ಕೆ ಸರಿಯಾಗಿ, ಪರೀಕ್ಷೆಯಲ್ಲಿ ಅಷ್ಟೇನೂ ಉತ್ತಮ ಅಂಕ ಗಳಿಸದೆ ಸಾಧಾರಣ ದರ್ಜೆಯಲ್ಲಿ ಪಾಸಾದ ಅವರಿಗೆ ಯಾವ ಕಾಲೇಜಿನಲ್ಲೂ ಅಧ್ಯಾಪನದ ಉದ್ಯೋಗ ಸಿಗದೆ ಕೊನೆಗೆ ಉದರಂಭರಣಕ್ಕಾಗಿ ಪೇಟೆಂಟ್ ಇಲಾಖೆಯಲ್ಲಿ ಗುಮಾಸ್ತನ ಕೆಲಸ ಮಾಡಬೇಕಾಗಿ ಬಂತು. ಅಲ್ಲಿ ಇಲಾಖೆಯ ಲೆಕ್ಕಪತ್ರಗಳ ನೂರಾರು ಕಡತಗಳ ರಾಶಿಯ ಮಧ್ಯದಲ್ಲೇ ಐನ್‌ಸ್ಟೈನ್ ತನ್ನ ಭೌತಶಾಸ್ತ್ರದ ಲೆಕ್ಕಾಚಾರಗಳನ್ನೂ ಹಾಳೆಯ ಮೇಲೆ ಮೂಡಿಸುತ್ತ ನೌಕರಿ-ಸಂಶೋಧನೆಗಳ ದ್ವಿಮುಖ ಬಾಳನ್ನು ಬದುಕುತ್ತಿದ್ದರು. ಹೀಗೆ, ದೈನಂದಿನ ಬದುಕಿನ ಯಾವ್ಯಾವುದೋ ಕೆಲಸಗಳನ್ನು ಮಾಡುತ್ತಿರುವಾಗೆಲ್ಲ ಭೌತಶಾಸ್ತ್ರದ ಕುರಿತು ನಿರಂತರವಾಗಿ ಯೋಚಿಸುವುದು ಅವರ ಸಂಶೋಧನಾ ಜೀವನದ ಅವಿಭಾಜ್ಯ ಅಂಗವೇ ಆಗಿಹೋಯಿತು.
ಹಲವು ವರ್ಷಗಳು ಕಳೆದಿದ್ದವು. ಮದುವೆ- ಗಿದುವೆ ಆಗಿಹೋಗಿತ್ತು. ಮುಂಚಿನಿಂದಲೂ ಅವರಿಗೆ ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿಕೊಂಡು ಬರುವುದು ಅಭ್ಯಾಸ. ಅದೊಂದು ದಿನ, ಎಂದಿನಂತೆ, ಮಲಗುವ ಮುನ್ನ ಸ್ನಾನದ ತೊಟ್ಟಿಗಿಳಿದರು. ಎಲ್ಲ ದಿನಗಳಲ್ಲಿ ಐದಾರು ನಿಮಿಷಗಳಲ್ಲಿ ಸ್ನಾನದ ಮನೆಯಿಂದ ಹೊರಬರುತ್ತಿದ್ದವರು ಅಂದೇಕೋ ಸ್ವಲ್ಪ ಹೆಚ್ಚು ಹೊತ್ತು ತೆಗೆದುಕೊಂಡರು. ಹತ್ತು ನಿಮಿಷ, ಅರ್ಧ ತಾಸು ಕಳೆದವು. ಹತ್ತಿರ ಹತ್ತಿರ ಒಂದು ತಾಸು ಮುಗಿಯಿತು. ಭಯಬಿದ್ದ ಪತ್ನಿ ನಿಧಾನವಾಗಿ ಸ್ನಾನದ ಮನೆಯ ಬಾಗಿಲು ತೆರೆದು ನೋಡಿದಾಗ, ಅಲ್ಲಿ ಐನ್‌ಸ್ಟೈನ್ ತೊಟ್ಟಿಯಲ್ಲಿ ನೀರು, ಸೋಪು ಹಚ್ಚಿಕೊಂಡು ಕೂತಿದ್ದಾರೆ. ಕಣ್ಮುಚ್ಚಿ ಏನನ್ನೋ ಧ್ಯಾನಿಸುತ್ತಿದ್ದಾರೆ. ಕೈಬೆರಳು ಗಾಳಿಯಲ್ಲಿ ಏನನ್ನೋ ಅಸ್ಪಷ್ಟವಾಗಿ ಬರೆಯುತ್ತಿದೆ. ಬೆರಳಿನ ಚಲನೆಯೊಂದಿದೆ ಎನ್ನುವುದನ್ನು ಬಿಟ್ಟರೆ ಆ ಸ್ಥಿತಿಗೂ ನಿದ್ದೆಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ! ಪತ್ನಿ “ರೀ!’ ಎಂದು ಕರೆದು ಆ ತಪಸ್ಸನ್ನು ಭಂಗಮಾಡಿದಳು. ಮೇನಕೆಯ ಸದ್ದಿಗೆ ಕಣಿºಟ್ಟ ವಿಶ್ವಾಮಿತ್ರನಂತೆ ಕಣ್ಣು ತೆರೆದು ವಾಸ್ತವ ಜಗತ್ತಿಗೆ ಬಂದ ಐನ್‌ಸ್ಟೈನ್, “”ಓಹ್! ಕ್ಷಮಿಸು. ನಾನು ನನ್ನ ಸ್ಟಡಿ ಟೇಬಲ್‌ನಲ್ಲಿ ಕೂತಿದ್ದೀನಿ ಅಂತ ಭಾವಿಸಿದ್ದೆ!” ಎಂದು ಹೇಳಿ ಬೇಗ ಸ್ನಾನ ಮುಗಿಸಿ ಈಚೆ ಬಂದರು.
2
1916ರ ಅಕ್ಟೋಬರ್. ಆಲ್ಬರ್ಟ್ ಐನ್‌ಸ್ಟೈನ್ ಅವರ ಆತ್ಮೀಯ ಗೆಳೆಯನಾಗಿದ್ದ ಫ್ರೆಡರಿಕ್ ಆಡ್ಲರ್ ಹೊಟೇಲೊಂದರಲ್ಲಿ ಓರ್ವ ವ್ಯಕ್ತಿಯನ್ನು ಗುಂಡುಹೊಡೆದು ಸಾಯಿಸಿಬಿಟ್ಟರು. ಸತ್ತವನು ಬೇರ್ಯಾರೂ ಅಲ್ಲ; ಆಗಿನ ಡೆನ್ಮಾರ್ಕ್ ದೇಶದ ಪ್ರಧಾನಿ ಕೌಂಟ್ ಸ್ಟರ್‌ಗಿಕ್! ಅತ್ಯಂತ ಹೀನಾಯ ಕೃತ್ಯ ಎಸಗಿದ್ದಕ್ಕೆ ಆಡ್ಲರ್‌ಗೆ ಶಿಕ್ಷೆಯಾಯಿತು. ಅವರನ್ನು ಸೆರೆಗೆ ತಳ್ಳಲಾಯಿತು.
ಐನ್‌ಸ್ಟೈನ್ ಕಂಡುಹಿಡಿದ ಸಾಪೇಕ್ಷ ಸಿದ್ಧಾಂತದ ಅತ್ಯಂತ ದೊಡ್ಡ ಅಭಿಮಾನಿಯಾಗಿದ್ದ ಆಡ್ಲರ್, ಜೈಲಿನಲ್ಲಿದ್ದಾಗ ಲೋಕಲ್ ಟೈಮ್, ಸಿಸ್ಟಮ್ ಟೈಮ್, ಝೋನ್ ಟೈಮ್ ಎಂಬ ಹೆಸರಿನ ಒಂದು ಉದ್ದಾಮ, ಪಾಂಡಿತ್ಯಪೂರ್ಣ ಸಂಶೋಧನಾ ಲೇಖನ ಬರೆದರು. ಅಭಿಪ್ರಾಯ ತಿಳಿಸುವಂತೆ ಕೋರಿ ಅದನ್ನು ಆಗಿನ ಪ್ರಸಿದ್ಧ ಭೌತಶಾಸ್ತ್ರಜ್ಞರಿಗೆ ಕಳಿಸಿದರು. ಅದರ ಒಂದು ಪ್ರತಿ ಐನ್‌ಸ್ಟೈನ್ ಅವರಿಗೂ ಬಂತು. ನಿಜವಾದ ಸಮಸ್ಯೆ ಪ್ರಾರಂಭವಾದದ್ದೇ ಆಗ.
ಆಡ್ಲರ್ ಅವರ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ; ಹಾಗಾಗಿ ಅವರ ಕೃತ್ಯವನ್ನು ಮಾಫಿ ಮಾಡಬೇಕು; ಅದನ್ನೊಂದು ಮನೋರೋಗಿಯ ಅತಿರೇಕವೆಂದು ಪರಿಗಣಿಸಬೇಕೆಂಬ ಬೇಡಿಕೆ ಇಟ್ಟು ಅವರ ಕುಟುಂಬ ಓಡಾಡುತ್ತಿತ್ತು. ಅದಕ್ಕೆ ಸರಿಯಾಗಿ ಅವರೀಗ ಪ್ರೌಢಪ್ರಬಂಧವೊಂದನ್ನು ಬರೆಯಬೇಕೆ ! ಆ ಪ್ರಬಂಧವೂ ಹುಚ್ಚುತನದ ಪರಮಾವಧಿಗೊಂದು ಪುರಾವೆ; ಬುದ್ಧಿ ಸ್ಥಿಮಿತದಲ್ಲಿರುವ ಯಾವ ವ್ಯಕ್ತಿಯೂ ಅಂಥದೊಂದು ಪ್ರಬಂಧವನ್ನು ಬರೆಯಲು ಸಾಧ್ಯವೇ ಇಲ್ಲ – ಎಂದು ಕುಟುಂಬ ವಾದಿಸಿತು! ಆದರೆ, ಆಡ್ಲರ್ ಮಾತ್ರ ತಾನು ಜೀವನದ ಅತ್ಯಂತ ಶ್ರೇಷ್ಠವಾದ ಸಂಶೋಧನೆ ಮಾಡಿದ್ದೇನೆ; ಜೈಲಿಂದ ಹೊರಗೆ ಇದ್ದರೆ ಅಂಥಾದ್ದನ್ನು ಮಾಡಲಾಗುತ್ತಿತ್ತೋ ಇಲ್ಲವೋ ಎಂಬ ಭಾವನೆಯಲ್ಲಿದ್ದರು. ಕುಟುಂಬದವರ ವಾದ ಸರಿಯೋ ತಪ್ಪೋ ಎಂದು ನೋಡಲು ಆಡ್ಲರ್ ಬರೆದಿದ್ದ ಪ್ರಬಂಧದ ಒಂದು ಪ್ರತಿಯನ್ನು ಜೈಲಿನ ಅಧಿಕಾರಿಗಳು ಓರ್ವ ಮನೋರೋಗ ತಜ್ಞರಿಗೂ ಕಳಿಸಿಕೊಟ್ಟರು.
ಎಲ್ಲರಿಗಿಂತ ದೊಡ್ಡ ಸಂಕಷ್ಟ ಬಂದದ್ದು ಆಡ್ಲರ್‌ಗೂ ಅಲ್ಲ, ಐನ್‌ಸ್ಟೈನ್ ಅವರಿಗೆ. ಆಡ್ಲರ್ ಬರೆದದ್ದು ಸರಿಯಿಲ್ಲ ಎಂದರೆ ತನ್ನ ಸಾಪೇಕ್ಷ ಸಿದ್ಧಾಂತವೇ ತಪ್ಪು ಎಂದ ಹಾಗೆ. ಬರೆದದ್ದು ಸರಿಯಾಗಿದೆ ಎಂದರೆ ಆತ ಮಾನಸಿಕ ಅಸಮತೋಲನದ ಕಾರಣ ಕೊಟ್ಟು ಜೈಲಿಂದ ಪಾರಾಗಿ ಬರುವುದಕ್ಕೆ ತಾನಾಗಿ ಕೊಕ್ಕೆ ಹಾಕಿದ ಹಾಗೆ. ಪ್ರಬಂಧವನ್ನು ಮೆಚ್ಚುವುದಕ್ಕಿಂತಲೂ ಅದರ ಮೇಲೆ ಏನು ಷರಾ ಬರೆಯುವುದೆಂದೇ ಹಲವು ದಿನಗಳ ಕಾಲ ಐನ್‌ಸ್ಟೈನ್ ಯೋಚಿಸುತ್ತ ಕೂತರು. ಕೊನೆಗೆ ಇದನ್ನು ಒಂದು ವಿಚಿತ್ರ ಭೌತಿಕ ಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿದೆ. ಆ ಭೌತಸ್ಥಿತಿಯನ್ನು ಸದ್ಯಕ್ಕಿರುವ ಯಾವ ಪ್ರಯೋಗಶಾಲೆಗಳಲ್ಲೂ ಪ್ರಯೋಗಿಸಿನೋಡಿ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ, ಪ್ರಬಂಧದ ಸತ್ಯಾಸತ್ಯತೆಯನ್ನು ಕಾಲವೇ ನಿರ್ಧರಿಸಬೇಕು ಎಂದು ಬರೆದರು. ಅತ್ತ ಮನೋರೋಗ ತಜ್ಞರು ಆಡ್ಲರ್ ಬರೆದಿರುವ ಪ್ರಬಂಧದ ತಲೆಬುಡ ತಮಗೆ ಅರ್ಥವಾಗಿಲ್ಲದ ಕಾರಣ, ಆತನ ಮನಸ್ಥಿತಿ ನಿಜಕ್ಕೂ ಗಂಭೀರವಾಗಿದೆ ಎಂದು ಹೇಳಬಹುದು ಎಂದು ಟಿಪ್ಪಣಿ ಕಳಿಸಿದರು. ಬಂಧನವಾದ 18 ತಿಂಗಳ ತರುವಾಯ ಆಡ್ಲರರ ಬಿಡುಗಡೆಯಾಯಿತು!
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.