Saptahika: ಬಿಟ್ಟುಕೊಡುವುದೇ ಪ್ರೇಮವಲ್ಲವೇ? ಪುರಾಣದಲ್ಲೊಂದು ಪ್ರೇಮಕಾವ್ಯ
Team Udayavani, Feb 11, 2024, 3:56 PM IST
ರಾಧಾ- ಮಾಧವರ ಪ್ರೇಮದ ಕಥೆ ಓದಿದ್ದೀರಿ. ಅರ್ಜುನ- ಸುಭದ್ರೆಯ ಪ್ರಣಯದ ಕಥೆಯನ್ನು ನೋಡಿದ್ದೀರಿ. ಅಭಿಮನ್ಯು- ಉತ್ತರೆಯ ಮೋಹದ ಕಥೆಯನ್ನು ಆಲಿಸಿದ್ದೀರಿ. ಈ ಕಥೆಗಳಷ್ಟೇ ಚೆಂದದ ಭೀಮ-ಹಿಡಿಂಬೆಯ ಅಮರ ಪ್ರೇಮದ ಕಥೆ ಇಲ್ಲಿದೆ. ಓದಿಕೊಳ್ಳಿ…
ಅಣ್ಣ ಹಿಡಿಂಬನನ್ನು ಕೊಂದ ಬಲಶಾಲಿ ಯುವಕನ ಬಾಹುಬಲವನ್ನು ಮನಸ್ಸು ಮೆಚ್ಚಿತ್ತು. “ಇದ್ದರೆ ಇರಬೇಕು ಇಂತಹವನೊಬ್ಬ ಸರದಾರ’ ಎನ್ನಿಸಲಾರಂಭಿಸಿತ್ತು. ಆ ಗುಂಪಿನಲ್ಲಿ ಹಿರಿಯ ಸ್ತ್ರೀಯೊಬ್ಬಳಿದ್ದಳು. ನೇರವಾಗಿ ಹೋಗಿ ಅವಳ ಕಾಲು ಹಿಡಿದುಕೊಂಡೆ. “ತಾಯಿ, ನನ್ನ ಹೆಸರು ಹಿಡಿಂಬೆ. ನನ್ನ ಅಣ್ಣ ಹಿಡಿಂಬನನ್ನು ಈ ಯುವಕ ಕೊಂದಿದ್ದಾನೆ. ಇದರಿಂದಾಗಿ ನಾನು ಈಗ ಅನಾಥಳಾಗಿದ್ದೇನೆ. ನನ್ನನ್ನು ಈಗ ನೀವೇ ರಕ್ಷಿಸಬೇಕು’ ಎಂದೆ.
“ನಾವೇ ಆಶ್ರಯವಿಲ್ಲದೆ ಕಾಡುಪಾಲಾಗಿದ್ದೇವೆ. ನನ್ನ ಈ ಐವರು ಮಕ್ಕಳು ಆಹಾರಕ್ಕಾಗಿ ಅರಣ್ಯದಲ್ಲಿ ಅಲೆದಾಡಬೇಕಿದೆ. ಇನ್ನು ನಿನ್ನನ್ನು ರಕ್ಷಿಸುವ ಮಾತೆಲ್ಲಿ ಬಂತು?’ ಎಂದಳು ಆಕೆ.
“ತಾಯಿ ನಿಮಗೆ ಇರುವುದಕ್ಕೆ ಆಶ್ರಯವನ್ನು ನಾನು ಕೊಟ್ಟೇನು. ಆಹಾರವನ್ನೂ ಒದಗಿಸಬಲ್ಲೆ. ನನ್ನ ರಕ್ಷಣೆಯಲ್ಲಿರುವ ಈ ಅರಣ್ಯಕ್ಕೆ ಸುತ್ತಮುತ್ತಲ ಊರುಗಳ ಯಾವ ಜನರೂ ಬರುವುದಿಲ್ಲ. ದುಷ್ಟಮೃಗಗಳು ನನಗೆ ಲಕ್ಷ್ಯವೇ ಅಲ್ಲ. ಅದೆಷ್ಟು ದಿನ ಇಲ್ಲಿರಬೇಕೆನ್ನಿಸುತ್ತದೆಯೋ ಅಲ್ಲಿಯವರೆಗೆ ನೀವು ಇಲ್ಲಿ ನೆಮ್ಮದಿಯಿಂದ ಇರಬಹುದು. ನಿಮ್ಮ ರಕ್ಷಣೆಯ ಹೊಣೆ ನನ್ನದು’ ಎಂದೆ.
ಆ ತಾಯಿಯ ಮುಖದಲ್ಲಿ ಸ್ವಲ್ಪ ಸಮಾಧಾನ ಕಾಣಿಸಿತು. “ಈ ಉಪಕಾರಕ್ಕೆ ಪ್ರತಿಯಾಗಿ ನಿನಗೆ ನಾನೇನು ಕೊಡಬಲ್ಲೆ ಹಿಡಿಂಬೆ?’ ಎಂದಳು ಆಕೆ. ಮನಸ್ಸಿನಲ್ಲಿ ಇದ್ದದ್ದನ್ನು ನೇರವಾಗಿ, “ತಾಯೀ ಕೊಡುವುದಾದರೆ ನನಗೆ ನಿಮ್ಮ ಸೊಸೆಯ ಸ್ಥಾನವನ್ನು ಕೊಡಿ. ನಿಮ್ಮ ಈ ಬಲಶಾಲಿ ಮಗನಿಗೆ ಮನಸೋತಿದ್ದೇನೆ’ ಎಂದೆ. “ನನಗೆ ಸ್ವಲ್ಪ ಸಮಯ ಕೊಡು’ ಎಂದ ಆಕೆ ಮಕ್ಕಳೊಡನೆ ಸಮಾಲೋಚನೆ ಕೈಗೊಂಡಳು.
ಅವರಿಗಿದ್ದ ಅವಶ್ಯಕತೆಗೋ, ನನ್ನ ಮೇಲಿನ ಸಹಾನುಭೂತಿಗೋ ಭೀಮ ನನಗೆ ಜೊತೆಯಾದ. ನಾನು ಅವರೆಲ್ಲರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದರ ಜೊತೆಜೊತೆಯಲ್ಲಿ ಭೀಮನನ್ನು ನನ್ನ ಪ್ರೀತಿಯೊಳಗೆ ಬಂಧಿಸಿದೆ.
ದಿನಗಳು ಕಳೆದಂತೆ ಭೀಮನ ಪ್ರೀತಿಯೊಂದು ನನ್ನಲ್ಲಿ ಮೊಳಕೆಯೊಡೆದಾಗ ತಾಯಾಗುವ ಸಂತಸ ನನ್ನದಾದರೆ, ಮಗುವಂತೆ ನನ್ನನ್ನು ನೋಡಿಕೊಳ್ಳುವ ಸಂಭ್ರಮ ಭೀಮನದಾಗಿತ್ತು! ಹೊಟ್ಟೆಗೆ ಬಿದ್ದ ಕೂಸು ಭೂಮಿಗೆ ಬರುವ ಮೊದಲೇ ನನಗಿಂತ ಹೆಚ್ಚು ಸಂಭ್ರಮಿಸಿದವ ಭೀಮ. ಸಹಜವಲ್ಲವೇ? ಹೊಟ್ಟೆಯಲ್ಲಿ ಮಗು ಮಿಸುಕಾಡಿದಾಗಲೆಲ್ಲಾ ಪಕ್ಕದಲ್ಲಿದ್ದ ಭೀಮ ಮಗ್ಗುಲು ಬದಲಿಸುತ್ತಿದ್ದ! ಅಪ್ಪನೆನ್ನುವ ಸಂಭ್ರಮ ಇಷ್ಟು ಹಿರಿದೇ?
ದಿನಗಳು ಕಳೆದದ್ದು ತಿಳಿಯಲೇ ಇಲ್ಲ! ಘಟ್ಟಿಗ ಮಗರಾಯ ಹುಟ್ಟಿದ್ದ. ಅತ್ತೆಗಾದರೋ ಬದುಕಿನ ಮುಂದಿನ ದಾರಿಯನ್ನು ಹುಡುಕಿ ಹೊರಡುವ ಅವಸರ. ಪಾಂಡವರಿಗೊಂದು ಬದುಕಿನ ನೆಲೆ ಒದಗಿಸಿಕೊಡುವ ಹೊರೆ ಅವರ ಮೇಲಿತ್ತು. ನನ್ನೊಂದಿಗೆ ಬದುಕು ಹಂಚಿಕೊಂಡ ಭೀಮ ತಮ್ಮ ಕ್ಷತ್ರಿಯ ಧರ್ಮವನ್ನೆಲ್ಲಿ ಮರೆತುಬಿಡುವನೋ ಎಂಬ ಅನುಮಾನ ಅತ್ತೆಯವರನ್ನು ಕಾಡುತ್ತಿದ್ದಿರಬೇಕು. “ನಾವಿನ್ನು ಹೊರಡುತ್ತೇವೆ ಹಿಡಿಂಬೆ. ಇಲ್ಲಿಯೇ ತಳಹಿಡಿದು ಕುಳಿತೆವಾದರೆ ನನ್ನ ಮಕ್ಕಳಿಗೆ ಅರಣ್ಯವೇ ಗತಿಯಾದೀತು’ ಎಂದರು ಅತ್ತೆ. ಅವರ ಆತಂಕವೂ ಸಹಜವಾದದ್ದೆ.
ವಾರಣಾವತದಿಂದ ಇಲ್ಲಿಗೆ ಬಂದಾಗ ಇದ್ದ ಭಯ ಈಗ ಅವರಲ್ಲಿ ಇದ್ದಂತಿರಲಿಲ್ಲ. ಭೀಮ, ಮಾತಿಗಾದರೂ ನನ್ನೊಂದಿಗೇ ಇದ್ದುಬಿಡುವನೆಂಬ ಪೊಳ್ಳು ಆಶ್ವಾಸನೆಯನ್ನು ಎಂದೂ ಕೊಟ್ಟವನಲ್ಲ. ಆ ನಿರೀಕ್ಷೆಯನ್ನು ನಾನು ಇಟ್ಟುಕೊಳ್ಳುವುದು ಸರಿಯಲ್ಲ ಎಂಬ ತಿಳುವಳಿಕೆ ಭೀಮನೊಡನೆ ಸಂಬಂಧ ಬೆಸೆದುಕೊಳ್ಳುವ ಹಂತದಲ್ಲಿಯೇ ನನಗಿತ್ತು. ಅತ್ತೆಯವರೂ ಸಹ ಈ ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದರು. ಮುಂದೆ ಪಾಂಡವರಿಗೆ ರಾಜ್ಯ ಸಿಕ್ಕಿದ ನಂತರವೂ ರಾಕ್ಷಸ ಕುಲದ ನನ್ನನ್ನು ಹಸ್ತಿನಾವತಿಗೆ ಕರೆಸಿಕೊಳ್ಳುವ ಸಾಧ್ಯತೆಯಿರಲಿಲ್ಲ. ಅದು ನನಗೂ ಬೇಕಿರಲಿಲ್ಲ.
ಕೊನೆಗೂ ಆ ದಿನ ಬಂದೇಬಿಟ್ಟಿತು. ಮುಂದಿನ ನಡೆಯೇನೆಂದು ತಿಳಿಯದಿದ್ದರೂ ಕುಂತಿದೇವಿ ಮತ್ತು ಪಾಂಡವರು ಹೊರಟುನಿಂತರು! ಭೀಮನ ಪ್ರೀತಿಯ ಆಸರೆಯನ್ನು ಮನಸ್ಸೂ ಬಯಸಿತ್ತು ದೇಹವೂ ಬಯಸಿತ್ತು ಆದರೇನು? ನಮಗೆ ಬೇಕೆನಿಸಿದ್ದೆಲ್ಲವೂ ದೊರೆಯಲೇಬೇಕೆಂಬ ನಿಯಮವೇನೂ ಇಲ್ಲವಲ್ಲ. ಬಿಟ್ಟುಕೊಡುವುದೇ ಪ್ರೇಮವಲ್ಲವೇ? ಭೀಮನನ್ನು ಅಗಲಿ ಜೀವನ ಸಾಗಿಸಲು ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಲಾರಂಭಿಸಿದೆ.
ಘಟೋತ್ಕಚನನ್ನು ಎಷ್ಟು ನೋಡಿದರೂ ಭೀಮನಿಗೆ ತೃಪ್ತಿಯಿರಲಿಲ್ಲ. ಬಲವಾದ ತೋಳಿನಲ್ಲಿ ನನ್ನನ್ನೂ- ಮಗನನ್ನೂ ತಬ್ಬಿ ಹಿಡಿಯುವಾಗ “ಈ ಕ್ಷಣ ಜಗತ್ತು ಸ್ತಬ್ಧವಾಗಬಾರದೇ?’ ಎಂಬ ಭಾವ ಬಲವಾಗಿ ಕಾಡುತ್ತಿತ್ತು. ಭೀಮನು ಹೊರಟು ನಿಂತಾಗ ಕಣ್ತುಂಬಿತು. ಮಲಗಿದ್ದ ಘಟೋತ್ಕಚನ ಇಡೀ ದೇಹಕ್ಕೆ ರಕ್ಷೆಯನ್ನಿಟ್ಟು, ಬೆರಳುಗಳನ್ನು ಹಣೆಯ ಪಕ್ಕಕ್ಕೆ ಒತ್ತಿ, ಲಟಲಟನೆಂದ ಲಟಿಗೆಗೆ ನಸುನಕ್ಕು ಮತ್ತೂಮ್ಮೆ ಬಾಗಿ ಮಗನ ಹಣೆಗೆ ಮುತ್ತಿಟ್ಟು ಹೊರಟುನಿಂತಾಗ ನನ್ನ ಭೀಮನ ಕಣ್ಣಲ್ಲೂ ನೀರಿತ್ತು. ತನ್ನ ಕಣ್ಣೀರನ್ನು ಅವನು ಮರೆಮಾಚಲು ಪ್ರಯತ್ನಿಸಿದನಾದರೂ ನನಗದು ಕಾಣಿಸಿತು ಸಿಕ್ಕಿದಷ್ಟು ದಿನ ಪ್ರೀತಿಯನ್ನಷ್ಟೇ ಹಂಚಿಕೊಂಡ ನನ್ನ ಮತ್ತು ಭೀಮನ ಪ್ರೇಮಕಾವ್ಯಕ್ಕೆ ಬೇರೆ ಯಾವುದು ಸಾಟಿಯಾದೀತು? ಬದುಕಿನಲ್ಲಿ ಅತಿಯಾಸೆ ಸಲ್ಲದು.
– ಸುರೇಖಾ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.