ಚಳಿ ಚಳಿ Come ಬಳಿ…
ಚುಮುಚುಮು ಚಳಿಯ ನಡುವೆ ಬೆಚ್ಚಗಿನ ಪಿಸು ಮಾತು!
Team Udayavani, Dec 3, 2023, 10:21 AM IST
ನಿದ್ದೆಯಿಂದೇಳಲು ಮೊಂಡು ಮಗುವಿನಂತೆ ಹಠ ಮಾಡುವ ಸೂರ್ಯ, “ಇನ್ನಷ್ಟು ಹೊದ್ದು ಮಲಗಲು ಬಿಡು..’ ಎನ್ನುತ್ತ ತಕರಾರಿಗೆ ಇಳಿಯುವ ಕುಳಿರ್ಗಾಳಿ. ಅಕ್ಕರೆಯಲಿ ತಬ್ಬಿ ಮಲಗಿಸುವ ಮಬ್ಬು ಮುಂಜಾವು. ಏಳುವುದೇ ಬೇಡ ಎನ್ನುವ ನಸುಗತ್ತಲಿನ ಮುಗಿಲು. ಇದೆಲ್ಲದರ ಜೊತೆಯಲ್ಲಿಯೇ ಬೆಳಕಿನ ಕೋಲುಗಳ ಹಿಡಿದು ತಿವಿದು ಎಬ್ಬಿಸುವ ಬೂದು ಬಣ್ಣದ ಬೆಳ್ಳಂಚಿನ ಮೋಡಗಳ ಸರದಿ ಸಾಲು. ಗೂಡಿನಿಂದ ಹೊರಬರದೇ ಕೂತಲ್ಲೇ ಕಿಚಿಗುಡುವ ಹಕ್ಕಿಗಳ ಮೆಲು ದನಿ. ಮಂಜಿನ ಕೌದಿಗಳ ತೋಳಿನಲ್ಲಿ ಕೂತು ತೂಕಡಿಸುವ ಬೆಟ್ಟ ಸಾಲು. ಚಿತ್ರಕಾರನೊಬ್ಬ ಕನಸಿನ ಚಿತ್ರವೊಂದ ಬಿಡಿಸಿದಂತೆ ಕವಿಯೊಬ್ಬ ಕವಿತೆಗಳ ಧ್ಯಾನಿಸಿದಂತೆ ಚಳಿಗಾಲವೊಂದು ಬಳಿ ಬಂದು ನಿಲ್ಲುವ ಕ್ಷಣ ಆಹ್! ಎಷ್ಟು ಚಂದ
ಮಳೆಗಾಲದ ರಗಳೆಗಳ ಆಚೆ ದಬ್ಬುತ್ತ. ಬೀಗುತ್ತ ತಿರುಗುತ್ತಿದ್ದ ಕೊಡೆ, ರೈನ್‌ಕೋಟ್‌ಗಳಿಗೆ ಮುಕ್ತಿ ಕಾಣಿಸಿ, ಅಲ್ಲೆಲ್ಲೋ ಮೂಲೆಯಲ್ಲಿದ್ದ ಸ್ವೆಟರ್, ಟೋಪಿಗಳ ಧೂಳು ಕೊಡವಿ ದಿನಚರಿಗಳ ಶಾಲೆಗೆ ಕರೆಯುತ್ತದೆ. ಅಪ್ಪಿತಪ್ಪಿಯೂ ಯಾರ ತಂಟೆಗೂ ಹೋಗುವುದಿಲ್ಲ. ಅಬ್ಬರವಿಲ್ಲದ. ಆರ್ಭಟವಿಲ್ಲ . ತಾನು ಬಂದಿದ್ದೇನೆ ಎದ್ದು ಸ್ವಾಗತಿಸಿ ಎನ್ನುವ ಯಜಮಾನಿಕೆಯೂ ಇಲ್ಲ. ಮನೆಯ ಹಿರಿಯನೊಬ್ಬ ತನ್ನ ಪಾಡಿಗೆ ತಾನು ಕೆಲಸ ನಿರ್ವಹಿಸುವ ಹಾಗೆ ಸಮಚಿತ್ತದ ಸ್ಥಿತಿ. ಹೀಗಾಗಿಯೇ ಈ ಚಳಿಗಾಲ ಎನ್ನುವುದು. ಮಳೆ ಮತ್ತು ಬೇಸಿಗೆಯಷ್ಟೇ ಪ್ರಮುಖವಾಗಿದ್ದರೂ. ಅದು ಎಲ್ಲಿಯೂ ಬೊಬ್ಬೆ ಹೊಡೆದು ಗದ್ದಲ ಎಬ್ಬಿಸದ ಕಾರಣಕ್ಕೆ ಯಾರೂ ಕೂಡ ಅದರ ಕುರಿತಾಗಿ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. “ಅಯ್ಯೋ ಚಳಿಗಾಲ ತಾನೇ ಬರತ್ತೆ ಹೋಗತ್ತೆ…’ ಎನ್ನುವಷ್ಟರ ಮಟ್ಟಿಗೆ ಅದು ಪಾಪದ ಜೀವ ಎಂದುಕೊಂಡರೂ, ಅದು ಕೂಡ ತನ್ನ ಅಸ್ತಿತ್ವ ತೋರಿಸುವ ಸಲುವಾಗಿ ಸಣ್ಣಕ್ಕೆ ಮಾಡುವ ಅನಾಹುತವನ್ನು ನಾವು ಬಿಟ್ಟು ಬಿಡುವಂತೆ ಇಲ್ಲ.
***
ಶರದೃತುವಿನ ಕೊನೆಯ ಹಂತಕ್ಕೆ ಮೆಲ್ಲಗೆ ಮಳೆಯ ಹನಿಗಳ ಜಾಗ ಆಕ್ರಮಿಸುವ ಈ ತಣ್ಣಗಿನ ಜೀವ ಆ ನಂತರ ತಾನೊಬ್ಬನೇ ಅಲ್ಲಿ ಇಲ್ಲಿ ಅಲೆಯುತ್ತ ಇಡೀ ಭುವಿಯನ್ನು ಬೆರಗಿನಿಂದ ನೋಡುತ್ತ ನಿಲ್ಲುತ್ತದೆ. ಅದು ನೋಡುವ ನೋಟಕ್ಕೆ ಮಳೆಗಾಲದಲ್ಲಿ ಚಿಗುರ ಹೊರಸೂಸಿ ತೊನೆಯುತ್ತಿದ್ದ ಹೂ, ಗಿಡ, ಮರಬಳ್ಳಿಗಳು ಕಾಮನ ಬಾಣಕ್ಕೆ ಮುಕ್ಕಣ್ಣ ಸಿಲುಕಿಕೊಂಡ ಹಾಗೆ ಸಿಕ್ಕಿ ಒ¨ªಾಡುತ್ತವೆ. ವಿರಹವೇದನೆಯಲಿ ಬಳಲುತ್ತ ಬೆಂಡಾಗಿ ಕೊನೆಗೆ ಬಣ್ಣ ಕಳೆದುಕೊಂಡು, ಮೇಕಪ್ ಇಲ್ಲದ ಪ್ರೇಯಸಿಯಂತೆ ಕಾಣಿಸುತ್ತದೆ.
ಶರದೃತು ಕೋಪಗೊಳ್ಳುತ್ತದೆ. ತಾನು ಕಟ್ಟಿದ ಹಸಿರು ಕೋಟೆಯನ್ನು ಚಳಿ ತನ್ನ ಕಣ್ಣೋಟದಲ್ಲಿಯೇ ಆಕ್ರಮಿಸಿದ್ದ ಕಂಡು ಹೇಳದೇ ಕೇಳದೆ ಹೊರಟುಬಿಡುತ್ತದೆ. ಜೊತೆಗೆ ಮಳೆಯೂ ಮುನಿಸಿ ನಡೆಯುತ್ತದೆ. ಅಷ್ಟರವರೆಗೆ ಅವರಿವರ ಮನೆಯ ಬಳಿ ನಿಂತು ಒಳಗೆ ಹೋಗುವುದೋ ಬೇಡವೋ ಎನ್ನುವ ಆಲೋಚನೆಯಲ್ಲಿದ್ದ ಚಳಿ ಮಹಾಶಯ ಏಕಾಂಗಿಯಾಗುತ್ತಾನೆ. ಆಗ ಕೈ ಹಿಡಿಯುವವನೇ ಹೇಮಂತ.
***
ಇಬ್ಬರೂ ಸೇರಿ ಕಾರ್ತಿಕದ ಕತ್ತಲಲ್ಲಿ ಆಗೀಗ ಇಣುಕಿ ನೋಡುತ್ತ ನವಿರಾದ ಕತ್ತಲ ತೆಕ್ಕೆಯಲಿ ಜಾರಿಕೊಳ್ಳುತ್ತ ತಮ್ಮ ಪಾಡಿಗೆ ತಾವು ಇದ್ದವರು ಉರಿವ ಹಣತೆಗಳ ಮೋಹದಲ್ಲಿ ಜಾರಿಬಿದ್ದು ರೆಕ್ಕೆ ಕಟ್ಟಿಕೊಂಡು ಹಾರಲು ಯತ್ನಿಸುತ್ತಾರೆ. ಇವರು ಗರಿಗಳ ಬೀಸಿ ಹಾರುವ ವೇಗಕ್ಕೆ ಹಾವು. ಇಲಿಯಿಂದ ಹಿಡಿದು ಇರುವೆ ಸೊಳ್ಳೆಗಳು ತನಕ ಎಲ್ಲವೂ ಬೆಚ್ಚಗಿನ ಜಾಗ ಹುಡುಕಿ ಕಾಣೆಯಾಗುತ್ತವೆ. ಅಷ್ಟೇ ಏಕೆ ಇವರುಗಳೊಂದಿಗೆ ಸ್ಪರ್ಧೆಗೆ ಇಳಿಯಲಾಗದೆ ಖುದ್ದು ಬೆಳಕೂ ಕೂಡ “ಏನಾದ್ರು ಮಾಡ್ಕೊàಳ್ರಪ್ಪ…’ ಎನ್ನುತ್ತ ಭೂಮಿಯಿಂದ ದೂರ ಸರಿದು ಹಗಲು ಪಾಳಿಯ ಕಡಿಮೆ ಮಾಡಿ ರಾತ್ರಿ ಅವಧಿಯ ಹೆಚ್ಚಿಸಿ ಸುಮ್ಮನಾಗುತ್ತದೆ. ಈ ಗೆಳೆಯರಿಬ್ಬರ ಗೆಳೆತನ ಮತ್ತಷ್ಟು ಗಟಿxಯಾಗುತ್ತದೆ. ಕೈ ಕೈ ಹಿಡಿದು ಬೆಟ್ಟ, ಗುಡ್ಡ, ಕಾಡು-ಮೇಡು ಅಲೆದು ಅಲ್ಲಿದ್ದ ತಂಗಾಳಿಯ ಕಾಲಿಗೆ ಚಕ್ರ ಕಟಿx ಊರಿನೊಳಗೆ ಬಿಡುತ್ತಾರೆ. ಹಾಗೆ ಚಕ್ರ ಕಟ್ಟಿ ಕಡ ಗಾಳಿ ಎಷ್ಟು ಜಬರ್ದಸ್ತಿನಲ್ಲಿ ಬೀಸುತ್ತದೆ ಎಂದರೆ, ಮನೆಯ ಸೂರು ಗೀರು ಎಲ್ಲವೂ ತಣ್ಣಗೆ ಕೊರೆಯುತ್ತ, ಅಲ್ಲಿದ್ದ ಚೂರುಪಾರು ಶಾಖವನ್ನು ಕೂಡ ದೂರ ಓಡಿಸುತ್ತವೆ. ದೊಡ್ಡ ರಗ್ಗು, ಗಡ¨ªಾದ ಕಂಬಳಿ, ಬಿದ್ದರೆ ಏಳಲಾಗದಷ್ಟು ದಪ್ಪ ಕೌದಿ. ಅಷ್ಟೇ ಏಕೆ? ಬಿಸಿ ಹಂಡೆಯ ನೀರು. ಜೋರು ಉರಿಯ ಸೌದೆ ಒಲೆ ಯಾವುದರ ಮೊರೆ ಹೊಕ್ಕರೂ ಪಾರಾಗುವ ಉಪಾಯ ಮಾತ್ರ ಕಾಣುವುದೇ ಇಲ್ಲ ದೂರ ಓಡಿದಷ್ಟೂ ಬಿಡದೇ ಕಾಡುವ ಆಗಂತುಕನ ಹಾಗೆ ಕೈ ಕಾಲುಗಳಲ್ಲಿ ಸೇರಿ. ಹೊಟ್ಟೆಯ ಆಳದಲ್ಲಿ ಬಚ್ಚಿಟ್ಟುಕೊಳ್ಳುತ್ತ ರೋಮ ರೋಮಗಳಲ್ಲಿ ನಡುಕ ಹುಟ್ಟಿಸುತ್ತವೆ. ದೇಹದ ತುಂಬೆಲ್ಲ ಒಣ ಚಕ್ಕೆಗಳ ಎಬ್ಬಿಸುತ್ತ. ಗೊತ್ತೇ ಆಗದಂತೆ ಹಿಂಸಿಸುತ್ತ, ಕೊಬ್ಬರಿ ಎಣ್ಣೆ, ತುಪ್ಪ ವ್ಯಾಸಲೇನ್ ಮಾಯಿಶ್ಚರೈಸರ್ ಯಾವುದನ್ನು ಕೊಳಗ ಗಟ್ಟಲೆ ತಂದು ಸುರುವಿಕೊಂಡರೂ ಬರಗಾಲ ಭೂಮಿಯ ಕಳೇಬರದಂತೆ ಕಾಣುವುದು ತಪ್ಪುವುದಿಲ್ಲ.
***
ಇನ್ನು ರಸ್ತೆ ಬದಿಯಲ್ಲಿ ರಾಶಿ ರಾಶಿ ಕಟಿxಗೆ ಹಾಕಿ ಸಾಮೂಹಿಕವಾಗಿ ಚಳಿ ಓಡಿಸುವ ಯತ್ನ ಕೈಗೊಂಡರು. ಒಬ್ಬರೇ ಹೀಟರ್‌ಗಳ ಹಾಕಿ ಕೂತರೂ ಹಲ್ಲುಗಳು ಕಟಕಟ ಸದ್ದು ಮಾಡುವುದನ್ನು ತಪ್ಪಿಸಲಾಗುವುದಿಲ್ಲ. ಸರಿ ಸುಮಾರು ಎರಡು-ಮೂರು ತಿಂಗಳ ಕಾಲ (ನವೆಂಬರ್ – ಜನವರಿ) ಅರಾಮ ಅಡ್ಡಾಡುವ ಈ ಇಬ್ಬರು ಸ್ನೇಹಿತರು. ಏನೆಲ್ಲ ತಂಟೆ ತಕರಾರುಗಳ ಮಾಡುತ್ತಾರೆಂದರೆ, ಅನುಭವಿಸಿದವರಿಗಷ್ಟೇ ಗೊತ್ತು. ಸಣ್ಣಗೆ ಮಾಡುವ ಕಿತಾಪತಿಗಳು ಮೊದಮೊದಲು ನವಿರಾಗಿ ಕಂಡರೂ ಬರುಬರುತ್ತ, “ಸದ್ಯ ಈ ಚಳಿಗಾಲ ಮುಗಿದರೆ ಸಾಕು…’ ಎನ್ನುತ್ತ ಮುದುರಿ ಕೂರುವಂತಾಗುತ್ತದೆ. ಇದಕ್ಕೆ ಉತ್ತರವೇನೋ ಎಂಬಂತೆ ಹೇಮಂತನಿಗೂ ಚಳಿರಾಯನ ಜೊತೆ ತಿರುಗಿ ತಿರುಗಿ ಬೇಸರ ಹುಟ್ಟಿಕೊಳ್ಳುತ್ತದೆ. ತಾನಿನ್ನು ಹೀಗೆ ಸುಖಾಸುಮ್ಮನೆ ಅಲೆಯುವುದರಲ್ಲಿ ಅರ್ಥವಿಲ್ಲ ಎನ್ನಿಸುತ್ತದೆ. ಅದೂ ಅಲ್ಲದೆ ರಸ್ತೆಯಲ್ಲಿ ನಡುಗುತ್ತ ನಿಂತ ಜೀವಗಳ ಹಳೆಯ ಜೋಪಡಿಯಲ್ಲಿ ಹರುಕು ಚಾದರದ ಸಲುವಾಗಿ ಕಾಯುವ ಕಣ್ಣುಗಳ ನೋಡಿದಾಗಲೆಲ್ಲ ಅವನಿಗೆ ಕರುಳು ಚುರುಕ್ ಎನ್ನುತ್ತದೆ. ಒಂದಿನ ಚಳಿಗೆ ಯಾವ ಮಾಹಿತಿ ನೀಡದೆ ಕಾಣೆಯಾಗುತ್ತಾನೆ. ಚಳಿ ಮತ್ತೆ ಏಕಾಂಗಿ ನಿಂತು ಆ ನಂತರ ಅನಿವಾರ್ಯ ಎಂಬಂತೆ ಶಿಶಿರನ ಜೊತೆಯಾಗುತ್ತಾನೆ. ಪಯಣ ಎಂದಿನಂತೆ ಮುಂದುವರೆಯುತ್ತದೆ.
ಈ ಮಧ್ಯೆ ಭೂ ಲೋಕದ ಮಾನವ ಜೀವಿಗಳು ಕೂಡ ಚಳಿ ನಡು ಮುರಿಯುವ ಸಲುವಾಗಿ ಉಪಾಯಗಳ ಹುಡುಕುತ್ತವೆ. ಬೋಂಡ, ಬಜ್ಜಿಗಳು “ಘಂ..’ ಎನ್ನುವ ಪರಿಮಳದೊಂದಿಗೆ ಸ್ಪರ್ಧೆಗಿಳಿಯುತ್ತವೆ. ಚಹಾ, ಕಷಾಯಗಳು “ನನ್ನ ನೀನು ಗೆಲ್ಲಲಾರೆ…’ ಎಂದು ಸಾಥ್ ನೀಡತೊಡಗುತ್ತವೆ.
ಚಳಿಯೂ ಸುಮ್ಮನೆ ಕೂರುವುದಿಲ್ಲ. ಶೀತ, ನೆಗೆಡಿ ಕೆಮ್ಮುಗಳ ಪಡೆ ಕಟ್ಟಿ ಮರು ದಾಳಿಗಿಳಿಯುತ್ತದೆ. ಆದರೆ ಅಷ್ಟೊಂದು ಯಶ ಕಾಣುವುದಿಲ್ಲ. ಕಾರಣ ಬಹುತೇಕ ವೈರಸ್‌ಗಳಿಗೆ ಈ ಕಾಲದಲ್ಲಿ ಖಾಯಿಲೆ ಹಬ್ಬಿಸುವ ಯಾವ ಆಸಕ್ತಿಯೂ ಇಲ್ಲದೆ ಎದ್ದು ಓಡಾಡಿದವರಂತೆ ಮಾಡಿ ಮತ್ತೆ ಅÇÉೇ ಹೊದ್ದು ಮಲಗುತ್ತವೆ. ಚಳಿಗೆ ನಿಧಾನಕ್ಕೆ ತನ್ನ ಸೋಲು ಖಚಿತವಾಗತೊಡಗುತ್ತದೆ. ಆ ಹೊತ್ತಿಗೆ ನಿಧಾನಕ್ಕೆ ತನ್ನ ಹುಚ್ಚಾಟಗಳ ಕಡಿಮೆ ಮಾಡಿ ಸಂಧಾನಕ್ಕೆ ಇಳಿಯುತ್ತದೆ. ಈ ಹೊತ್ತಿಗೆ ಸರಿಯಾಗಿ ಶಿಶಿರನಿಗೆ ಕೂಡ ಸುಖಾ ಸುಮ್ಮನೆ ಮತ್ತೂಬ್ಬರ ಒದ್ದಾಡಿಸುವುದು ಎಲೆ ಉದುರಿ ಬೋಳು ನಿಂತ ಮರಗಳ ನೋಡುವುದು ಪ್ರಾಣಿ, ಪಕ್ಷಿಗಳಿಲ್ಲದ ಖಾಲಿ ದಾರಿಯ ತಿರುಗುವುದು ಬೇಸರ ಎನ್ನಿಸಿ ಚಳಿಯ ಸಂಗದಿಂದ ಹಿಂಸರಿಯ ತೊಡಗುತ್ತಾನೆ. ಇನ್ನು ಹೀಗೆ ಚಳಿಯ ಸಾಮ್ರಾಜ್ಯ ಪತನಗೊಳ್ಳುವ ಸುದ್ದಿಯೊಂದು ಸಣ್ಣಗೆ ರವಿಯ ಕಿವಿಗೂ ಬಿದ್ದು ಅವನಿಗೆ ಮತ್ತೆ ತನ್ನ ಸಾಮ್ರಾಜ್ಯ ಸ್ಥಾಪಿಸುವ ಹುಚ್ಚೊಂದು ಮೆಲ್ಲಗೆ ಹತ್ತಿಕೊಳ್ಳುತ್ತದೆ.
***
ಇನ್ನು ಈಗಷ್ಟೇ ಶುರುವಾಗಿರುವ ಚಳಿಯ ಪ್ರೀತಿಗೆ ಬೊಗಸೆಯೊಡ್ಡುತ್ತ ತಲೆಗೆ ಮಫ್ಲರ್ ಸುತ್ತಿಕೊಳ್ಳುತ್ತ ಕೊಸರು ಹೇಳುವುದಾದರೆ, ಈಗ್ಗೆ ಇಪ್ಪತ್ತು ವರ್ಷದ ಕೆಳಗಿದ್ದ ಮೂಳೆ ಕೊರೆಯುವ ಚಳಿ ಖಂಡಿತವಾಗಿ ಈಗಿಲ್ಲ. ಬದಲಾದ ಹವಾಮಾನ ಏರುಪೇರಾದ ಋತು ಲಕ್ಷಣಗಳು ಚಳಿಗಾಲವನ್ನು ಸೀಮಿತಗೊಳಿಸಿವೆ. ಕೆಲವು ಕಡೆಯಲ್ಲಂತೂ ಬಿರುಬೇಸಿಗೆ ಅಕಾಲಿಕ ಮಳೆಯಷ್ಟೇ ಉಳಿದುಬಿಟ್ಟಿವೆ. ನಡೆವ ಹಾದಿಯ ತುಂಬೆಲ್ಲ ಮಂಜಿನ ಹೂ ಹಾಸಿ. ತೊಳೆದ ಇಬ್ಬನಿಗಳ ಗುತ್ಛಗಳ ಕೈಗಿತ್ತು. ಸಡಗರ ಸಂಭ್ರಮಗಳ ತೇರಿನಲಿ ಹಿತವಾದ ಬೆಚ್ಚಗಿನ ನೂರು ನೆನಪುಗಳ ಹೊತ್ತು ತರುವ ಗಡಿಬಿಡಿಯ ಬದುಕಿಗೊಂದು ನಿರಾಳತೆ ಒದಗಿಸುವ ಚಳಿ ಮತ್ತೆ ಮತ್ತೆ ಎದುರು ನಿಲ್ಲುತ್ತಲೇ ಇರಲಿ ಎನ್ನುವುದರ ಜೊತೆಗೆ ಕೊನೆಯ ಸೊಲ್ಲೆಂದರೆ ಮೇಲೆ ಹೇಳಿದ ಎಲ್ಲ ಮಾತುಗಳು ನಮ್ಮ ಊರುಗಳಿಗೆ ಸಂಬಂಧಿಸಿದ್ದು ಮಾತ್ರವೇ ಅಂದರೆ ದೇಶದ ದಕ್ಷಿಣ ಭಾಗಕ್ಕೆ. ಇಲ್ಲಿ ಮುಗ್ಧ ಮಗುವಿನಂತೆ ಸಣ್ಣಪುಟ್ಟ ಅವಾಂತರ ಎಬ್ಬಿಸಿ ಹೋಗುವ ಇದು ಉತ್ತರಭಾರತದಲ್ಲಿ ಖಳನಾಯಕನ ವೇಷತೊಟ್ಟು ಒದ್ದಾಡಿಸುತ್ತದೆ ಅದೆಲ್ಲ ಅವಘಡಗಳ ಹೇಳುತ್ತ ಹೋದರೆ ಹುಟ್ಟುವ ಎದೆನಡುಕ ಚಳಿಗಿಂತಲೂ ದೊಡ್ಡದು..ಸದ್ಯಕ್ಕೆ ಇಷ್ಟು ಸಾಕಲ್ಲವೇ?
-ದೀಪ್ತಿ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.