ತಿಂಗಳಿನ ಬೆಳಕ ಹೊಂಗೆಳತಿ ಜೊತೆಯಾದೆ ನೀ ಕಂಗಳಿಗೆ ಕತ್ತಲೆಯೊಳಿದ್ದವಗೆ


Team Udayavani, Jun 10, 2018, 6:00 AM IST

ee-8.jpg

ಹಿಂದಣ ಅಂಕಣದಲ್ಲಿ ನೋಡಿದ್ದೆವು, ತನ್ನದೇ ನುಡಿಯನ್ನು ತಾನು ಪಡೆಯುವುದೇ ಬದುಕಿನ ಏಕಮಾತ್ರ ಹಂಬಲವಾಗಿರುವ ಕವಿ- ಒಂದು ಬದಿಯಲ್ಲಿ ಇದ್ದಾನೆ. ನುಡಿ ಪಡೆಯುವುದೆಂದರೆ ತನ್ನದೇ ನಾಲಗೆಯನ್ನು ಪಡೆದಂತೆ- ಪಡೆಯಲಾಗದಿದ್ದರೆ ಅದೊಂದು ದೊಡ್ಡ ವಿಕಲತೆ ಎಂದಾತ ಭಾವಿಸಿದ್ದಾನೆ. ಈ ಬಗೆಗೆ ಕವಿ ಅಡಿಗರೇ ಹೀಗೆ ಬರೆದಿದ್ದಾರೆ: “”ನನ್ನ ನಿಜವಾದ ಧರ್ಮ ಯಾವುದು, ಯಾವುದನ್ನು ಕೈಕೊಂಡು ನನ್ನ ಸರ್ವಸ್ವವನ್ನೂ ಯಾವುದರಲ್ಲಿ ಪ್ರಯೋಗಿಸಿದರೆ ಕೃತಾರ್ಥನಾಗಬಹುದು ಎಂಬ ಯೋಚನೆ ಹುಟ್ಟಿ ಕ್ರಮೇಣ ಅದು ಕಾವ್ಯದ ಮೂಲಕವೇ ಎಂಬ ನಿರ್ಧಾರಕ್ಕೆ ಬಂದೆ. ನನ್ನ ವಿಶಿಷ್ಟ ಮನೋಧರ್ಮದ ಸಂದರ್ಭದಲ್ಲಿ ನನ್ನ ಶಕ್ತಿಯ ತಕ್ಕಮಟ್ಟಿನ ಅರಿವು ನನ್ನಲ್ಲಿ ಮೂಡಿದ್ದರಿಂದ ಕಾವ್ಯರಚನೆಯ ಮೂಲಕವೇ ಜನ್ಮ ಸಾಫ‌ಲ್ಯ ಕಾಣಲು ನನಗೆ ಸಾಧ್ಯ ಎಂಬ ತೀರ್ಮಾನಕ್ಕೆ ಬಂದೆ”.

ಇವೆಲ್ಲ ವೀರ ಸಂಕಲ್ಪಗಳು. ಎಲ್ಲ ನಿಜ. ಆದರೆ ನಮ್ಮ ಸಂಕಲ್ಪಗಳೇ ನಮ್ಮ ಮಿತಿಗಳೂ ಆಗಬಹುದು. ಹೇಗೆಂದರೆ- ಆಗ ಇಂಥ ಸಂಕಲ್ಪ ವಿಕಲ್ಪಗಳಿಲ್ಲದೆ ಸಹಜವಾಗಿರುವವರನ್ನು ತಮ್ಮದೇ ನುಡಿ ಪಡೆಯದಂತಿರುವವರನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಅಂದರೆ, ತನಗಿಂತ ಭಿನ್ನರಾಗಿರುವವರನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಜನರ ಸಹಜ ಮಾತುಗಳಲ್ಲೇ ಅಂದರೆ articulate ಆದ ಮಾತುಗಳಲ್ಲೇ ಅವರ ತೋಡಿಕೊಳ್ಳುವಿಕೆ ಇಲ್ಲವೆ? ತಮ್ಮನ್ನು ತೋಡಿಕೊಳ್ಳಲು ಅವರಿಗೆ ತಿಳಿದಿಲ್ಲ ಎಂದು ಬಗೆಯಬೇಕೆ? ಹಾಗೆ ನೋಡಿದರೆ ತನ್ನ ಅರಿವು ತನಗೆ ಹೇಗೆ ಮುಖ್ಯವೋ ತನಗಿಂತ ಭಿನ್ನವಾದ ಇನ್ನೊಂದನ್ನು ತಿಳಿಯುವುದೂ ಅಷ್ಟೇ ಮುಖ್ಯವಲ್ಲವೆ? ಶಿಷ್ಟವಾದ ಭಾಷೆಗೆ ತನ್ನ ಶಿಷ್ಟತೆಯಿಂದಲೇ ತಾನು ಶಕ್ತಿಗುಂದುತ್ತಿದ್ದೇನೆ ಎಂದು ಅರಿವಾಗುವುದು ಯಾವಾಗ? ಅಶಿಷ್ಟವಾದ ಭಾಷೆಯ ನಿಸ್ಸಂಕೋಚ ನುಡಿಗಳನ್ನು ಕೇಳಿದಾಗ ಅಲ್ಲವೆ? ಅಂದರೆ, ಪ್ರಕೃತಿಯನ್ನು ತಿಳಿಯುವುದೇ ಎಲ್ಲ ಸಂಸ್ಕೃತಿಗಳ ಗುರಿ. ಪ್ರಕೃತಿಯ ತಿಳುವಳಿಕೆಯಿಂದಲೇ ಸಂಸ್ಕೃತಿಯು ತನ್ನನ್ನು ತಿದ್ದಿಕೊಳ್ಳುವ ಸಾಧ್ಯತೆ ಕೂಡ ಇರುವುದು!

ಆದರೆ ಅಡಿಗರ ಕವಿತೆಯಲ್ಲಿ- “ಬಾ ಇತ್ತ ಇತ್ತ ಇನ್ನೂ ಇತ್ತ’ದಲ್ಲಿ ಏನಾಗಿದೆ ಎಂದರೆ, ಕೇವಲ ಸಹಜ ಸಾಂದರ್ಭಿಕ ಮಾತುಗಳ, ತನ್ನ ನುಡಿಯನ್ನು ತಾನು ಪಡೆಯದಂತಿರುವ- ಈ ಅರ್ಥದಲ್ಲಿ ಮೌನವಾಗಿರುವ ಮಡದಿಯನ್ನು ಅರ್ಥಮಾಡಿಕೊಳ್ಳಲಾಗದೆ ತೀವ್ರವಾದ ಪಶ್ಚಾತ್ತಾಪದ ಭಾವವನ್ನು ಕಾಣುತ್ತೇವೆ. ಹೆಣ್ಣು-ಗಂಡು ಸಂಬಂಧದಲ್ಲಿ ಪಶ್ಚಾತ್ತಾಪಭಾವ ಗಂಡಿಗೆ ಅನಿವಾರ್ಯವೋ ಏನೋ. ಅಥವಾ ಯಾವುದೇ ವೀರಸಂಕಲ್ಪಕ್ಕೆ ಒಂದಲ್ಲ ಒಂದು ಸಂದರ್ಭದಲ್ಲಿ ಪಶ್ಚಾತ್ತಾಪದ ಭಾವ ಮೀಸಲೇನೋ.

ಹೆಣ್ಣು-ಗಂಡಿನ ಸಂಬಂಧದಲ್ಲಿ ಮಾತು-ಮೌನಗಳ ಭಿನ್ನ ಬಗೆಗಳನ್ನು ಬೇಂದ್ರೆಯವರಲ್ಲಿಯೂ ನೋಡಬಹುದು. ತಮ್ಮ ದಾಂಪತ್ಯದ ಅನುಭವಗಳನ್ನು ಹೇಳುವ ಬೇಂದ್ರೆಯವರ ದೀರ್ಘ‌ ಕವಿತೆ, ಸಖೀಗೀತದಲ್ಲಿ ಪಲ್ಲವಿಯಂತೆ ಒಂದು ಸಾಲು ಮತ್ತೆ ಮತ್ತೆ ಬರುತ್ತದೆ. “”ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೆ?” ಎಂಬ ಸಾಲು. ಹೆಣ್ಣು-ಗಂಡಿನ ನಡುವಣ ಸಂಬಂಧದ ವಿಸ್ಮಯವನ್ನು ಸೂಸುವ ಸಾಲು ಇದು. ಅಂಟಿದ ನಂಟು ಎಂದು ಹೇಳಿದರೂ ಇದು ಹೊಕ್ಕುಳ ಬಳ್ಳಿಯ ನಂಟು! ಇದರ ಮೊದಲು-ಕೊನೆ ಕಂಡವರಾರು! ಈ ನಂಟಿಗೆ ಇರುವ ಮುಖಗಳೆಷ್ಟು! ಅಲ್ಲದೆ, ಇದು ಅಗತ್ಯವಾಗಿ ಅಂಟಲೇಬೇಕಾಗಿದ್ದ ನಂಟು. ಅಂದರೆ ಗಂಡು-ಹೆಣ್ಣು ಕೂಡಿ ಬದುಕಿ ಪಡೆಯಲೇಬೇಕಾದ ಅನುಭವ ಪ್ರಪಂಚ. ಒಲ್ಲೆನೆಂದರೆ ನಡೆಯದು. ಬಸವಣ್ಣ , ತಮ್ಮೊಂದು ವಚನದಲ್ಲಿ ತಮ್ಮನ್ನು ಒಂದು ಹುಲುಗಿಳಿಯಾಗಿ ಮಾಡು, ಮಾಡಿ ಪಂಜರದೊಳಗಿಕ್ಕಿ ಸಲಹು ಎಂದು ಕೂಡಲ ಸಂಗಮನನ್ನು ಕೇಳುವರು. “ಪಂಜರದೊಳಗಿಕ್ಕಿ ಸಲಹು’ ಎನ್ನುವ ಮಾತು ಮಾರ್ಮಿಕವಾಗಿದೆ. ಇದು ಮನೆಯೊಳಗಿರುವ ಸಂಸಾರಿಯ ಅನುಭವ. ಗೃಹಸ್ಥನ ಅನುಭವ. “ನರವಿಂಧ್ಯ’ದಲ್ಲಿ ಕಳೆದುಹೋಗದೆ ವ್ಯಕ್ತಿ ಪಡೆಯಬೇಕಾದ ಖಾಸಾ ಅನುಭವ. ಬಸವಣ್ಣನವರು ಸಂಸಾರಿಯಲ್ಲವೆ? ಪಂಜರದಲ್ಲಿ ಒಂದು ಭದ್ರತೆ ಇದೆ ಎಂದು ಕೂಡ ಅವರಿಗೆ ಹೊಳೆದಿದೆ. ಕುವೆಂಪು ಹೇಳುವ ಅನಿಕೇತನ ಪರಿಕಲ್ಪನೆಗಿಂತ ಭಿನ್ನವಾದ ಮಾತು ಇದು. ಅಂಟಿದ ನಂಟು-ಜೀವದ ಒಡಲೇ ಆಗಿ ಇರುವ ನಂಟು. ಆದುದರಿಂದಲೇ ಈ ನಂಟಿನಿಂದ ಬಿಡಿಸಿಕೊಳ್ಳುವ ಮಾತೇ ಇಲ್ಲ. ಅನೇಕ ಮುಖಗಳಲ್ಲಿ ಬೆಳೆಯುತ್ತ ಹೋಗುವ ನಂಟು ಇದು. ಸಖೀಗೀತಕ್ಕಿಂತ ಹದಿನೇಳು ವರ್ಷ ಮುನ್ನವೇ ಪ್ರಾಯಃ ಮದುವೆಯಾದ ಹೊಸತರಲ್ಲಿ ಗಂಡಸು ಹೆಂಗಸಿಗೆ ಎಂಬ ಕವಿತೆಯನ್ನು ಬೇಂದ್ರೆ ಬರೆದಿದ್ದರು. ಅದು ಹೀಗೆ ಪ್ರಾರಂಭವಾಗುತ್ತದೆ.

ತಾಯೆ ಕನಿಮನೆಯೆ ಅಕ್ಕ ಅಕ್ಕರತೆಯೇ
ಬಾ ಎನ್ನ ತಂಗಿ ಬಾ ಎನ್ನ ಮುದ್ದು ಬಂಗಾರವೇ
ನೀ ಎನ್ನ ಹೆಂಡತಿಯೋ
ಮೈಗೊಂಡ ನನ್ನಿಯೋ
ಮಗಳ್ಳೋ ನನ್ನೆದೆಯ ಮುಗುಳ್ಳೋ
ಇಲ್ಲಿ ಎಲ್ಲ ಸಂಬಂಧಗಳೂ-ತಾಯಿಯಿಂದ ತೊಡಗಿ ಮಗಳ ತನಕ ಬಂದಿವೆ. ಗೆಳತಿಯೂ ಬಂದಿದ್ದಾಳೆ. “ತಿಂಗಳಿನ ಬೆಳಕ ಹೊಂಗೆಳತಿ ಜೊತೆಯಾದೆ ನೀ ಕಂಗಳಿಗೆ ಕತ್ತಲೆಯೊಳಿದ್ದವಗೆ’ ಎಂಬ ಸಾಲು ಮುಂದೆ ಇದೆ. “ಜೊತೆಯಾದೆ ನೀ ಕಂಗಳಿಗೆ’ ಎಂಬ ಸಾಲನ್ನು ಗಮನಿಸಿ. ಅದ್ಭುತವಾದ ಮಾತಿದು. ನನ್ನ ಕಣ್ಣುಗಳಿಗೆ ನೀನು “ದೃಶ್ಯ’ ಮಾತ್ರವಲ್ಲ. ನನ್ನ ಕಣ್ಣುಗಳಿಗೆ ನೀನು ಜೊತೆಯ ಕಣ್ಣು. ನಾವಿಬ್ಬರೂ ಸೇರಿ ನೋಡುತ್ತಿರುವುದು ಲೋಕದ ದೃಶ್ಯ. ಇದು ಒಂದೆಡೆಯಾದರೆ, “ಜೊತೆಯಾದೆ ನೀ ಕಂಗಳಿಗೆ’ ಎನ್ನುವಾಗ “ಕನ್ನಡಿಯಂತೆ ನನ್ನ ಕಣ್ಣೆದುರಿನ ಕಣ್ಮಣಿಯೂ ಹೌದು ನೀನು’ ಅಂದಾಗ ನಿನ್ನ ಕಣ್ಣಿನಲ್ಲಿ ನನ್ನ, ನನ್ನ ಕಣ್ಣಿನಲ್ಲಿ ನಿನ್ನ ಪ್ರತಿಫ‌ಲನ ನಿರಂತರ ನಡೆದೇ ಇದೆ. “ಕಣ್ಣಿದಿರುಗಣ್ಣಿನೊಳಗೊಬ್ಬರೊಬ್ಬರ ಗೊಂಬೆ ನಮ್ಮಿಬ್ಬರೊಳಗೆ ಹಬ್ಬಿಹುದು’ ಎನ್ನುತ್ತಾನೆ. ಹೀಗೆ ನಿನ್ನ ಕಣ್ಣಿನಲ್ಲಿ ನನ್ನನ್ನು ನಾನು ನೋಡಲಾಗದೆ ಇರುತ್ತಿದ್ದರೆ ನಾನು ಕತ್ತಲೆಯಲ್ಲೇ ಇರುವಂತೆ ಆಗುತ್ತಿತ್ತು ಎನ್ನುವ ಭಾವ-ಬೇಂದ್ರೆಯವರಿಗೆ. ಇದು ಮೂಲಭಾವ. ನಾಲ್ಕು ಕಣ್ಣು ಸೇರದೆ ಪೂರ್ಣಚಿತ್ರವಿಲ್ಲ ಎನ್ನುವ ನಿಲುವು! ಇದು ನಂಟು!

ಬೇಂದ್ರೆಯವರ ಇನ್ನೊಂದು ಶ್ರೇಷ್ಠ ಕವನ ಕಲ್ಪವೃಕ್ಷ ವೃಂದಾವನಂಗಳಲಿ ಯಲ್ಲಿ “ಅಲ್ಲಿ ಎಲ್ಲರಿಗೆ ನಾಲ್ಕು ಕೈಗಳ್ಳೋ ಮಾಟ ತಪ್ಪದಿಹವು’ ಎಂಬ ಸಾಲು ಇದೆ. ನಾಲ್ಕು ಕೈಗಳ್ಳೋ ಎನ್ನುವಲ್ಲಿ ನಾಲ್ಕು ಕಂಗಳ್ಳೋ ಎಂದು ಕೂಡ ಹೇಳಬಹುದು. ನಾಲ್ಕು ಎನ್ನುವ ಪರಿಕಲ್ಪನೆ ಬೇಂದ್ರೆಯವರ ಚಿಂತನೆಯ ಭಾಗವೇ ಆಗಿರುವುದನ್ನು ಎಲ್ಲರೂ ಬಲ್ಲರು. ನಾಲ್ಕು ತಂತಿಗಳೂ ಮಿಡಿಯುವುದು ಅವರಿಗೆ ಮುಖ್ಯ. ಅನುರಣನ ಅವರಿಗೆ ಮುಖ್ಯ. ನಾಲ್ಕೆನ್ನುವ ಪರಿಕಲ್ಪನೆಗೂ ಸಖೀತಣ್ತೀಕ್ಕೂ ಬಹಳ ಹತ್ತಿರ ಇದೆ. ಕಲ್ಪವೃಕ್ಷ ವೃಂದಾವನಂಗಳಲಿಯಲ್ಲಿಯೂ ಕೇಂದ್ರ ಪಾತ್ರ ಸಖೀಯೇ ಆಗಿದ್ದಾಳೆ. ನಾಲ್ಕು ಕಣ್ಣುಗಳಲ್ಲಿಯೂ ಹೆಣ್ಣು-ಗಂಡು ತಮ್ಮನ್ನು ತಾವು ನೋಡಿಕೊಂಡ ಅನುಭವದಿಂದ ತಿಳಿದುಬಂದುದೇನೆಂದರೆ ಗಂಡು-ಹೆಣ್ಣು ಹೊದ್ದಿರುವುದು ಒಂದೇ ಬಟ್ಟೆ ಎಂಬ ಅರಿವು!

ಗಂಡಸು ಹೆಂಗಸಿಗೆ ಕವಿತೆಯ ಕೊನೆಯ ಸಾಲುಗಳಿವು:
ನನ್ನ ನಿನ್ನಯ ಮನದ ಜೊನ್ನಮಗ್ಗದ ಮೇಲೆ
ನಿನ್ನ ಮತ್ತೆನ್ನೆದೆಯ ಕಸೆಗೆ ಕಸೆಯನುಗೊಳಿಸಿ
ನನ್ನಿ ನೇಕಾರಿತಿಯು ಮುಗಿಯದಿಹ ಬಟ್ಟೆಯನ್ನನವರತ ನೇಯುತಿಹಳು
ಇದು ತೆಗೆದಿರಿಸಬಹುದಾದ-ಬೇಕಾದಾಗ ತೊಡಬಲ್ಲ- ಬಟ್ಟೆಯಲ್ಲ. ಅಂತಃಕರಣದಲ್ಲಿ ನೇದ, ನೇಯುತ್ತಲೇ ಹಾಕಿಕೊಳ್ಳಬೇಕಾದ ಬಟ್ಟೆ. ಬಾಳಬಟ್ಟೆ ! ಇದು ಬಾಳನ್ನು ಒಳಗಿನಿಂದಲೇ ಅನುಭವಿಸಿ ಪಡೆದ ಅರಿವು. ಬಾಳೇ ನೀಡಿದ ಅರಿವು. ಆದರೆ ಬಾಳಿಗೆ ಶರಣಾಗುವುದರ ಹೊರರೂಪವೆಂದರೆ ಗಂಡು-ಹೆಣ್ಣನ್ನು, “ಶರಣು ಬಂದೇನು ಶರಣ್ಯಳೆ, ಹೆಣ್ಣೇ, ಸೃಷ್ಟಿಯೇ ಸಲಹುವೆ ಧರಿತ್ರಿಯಾಗಿ’ ಎಂದು ಆರ್ತತೆಯಿಂದ ಕೇಳಿಕೊಳ್ಳುವುದೇ ಆಗಿ ಕವಿತೆಯಲ್ಲಿ ವ್ಯಕ್ತವಾಗಿದೆ. ಬಾಳಬಟ್ಟೆಯನ್ನು ತಾವೂ ನೇಯುತ್ತಿರುವ ಅನುಭವವೇ ಆರ್ತತೆಯಾಗಿ ಹೊಮ್ಮಿದೆಯೇನೋ. ಇಬ್ಬರೂ ಹೊದ್ದಿರುವುದು ಒಂದೇ ಬಟ್ಟೆಯಾಗಿರುವುದರಿಂದ ಯಾರು ಯಾರ ಬಟ್ಟೆಯನ್ನು ಕಸಿಯುವ ಯತ್ನ ಮಾಡಿದರೂ ಅದು ತಮ್ಮನ್ನೇ ತಾವು ಬತ್ತಲೆ ಮಾಡಿಕೊಂಡಂತೆ ಆಗುವುದು. ಇದು ನಿಜವಾದರೂ ಚರಿತ್ರೆಯಲ್ಲಿ ನೋಡಿದರೆ ಗಂಡಸು ಹೆಂಗಸಿನ ಬಟ್ಟೆಯನ್ನು ಕಸಿಯುತ್ತಲೇ ಇದ್ದಾನೆ. ಆ ಮೂಲಕ ತಾನು ಬತ್ತಲೆಯಾಗುತ್ತಲೇ ಇದ್ದಾನೆ. ಕವಿತೆಯೊಳಗೆ ಈ ಅಂಶ ಬಂದಿಲ್ಲ. ಆ ಮಾತು ಬೇರೆ.
ಬೇಂದ್ರೆ ಸಖೀಗೀತ ಎಂದರು. ಹಾಡಿದರು. ಸಖ-ಸಖೀ ಎಂಬ ಭಾವದಲ್ಲಿ ಬೌದ್ಧಿಕ ಸಾಹಚರ್ಯದ ಕಲ್ಪನೆ ಇದೆ. ಆದರೆ ಸಖೀಗೀತದಲ್ಲಿ ಬೇರೆಯೇ ಆದ ಒಂದು ಚಿತ್ರಣ ಕಾಣಿಸುತ್ತದೆ. 

ಈ ಸಾಲುಗಳನ್ನು ಗಮನಿಸಿ:
ನಿಮ್ಮ ಮಾತೇ ಬೇರೆ ಮನ ಬೇರೆ ಜನ ಬೇರೆ
ರಸರುಚಿ ಬೇರೆ ಜೀವನ ಬೇರೆಯೇ
ನಿಮಗೆಮ್ಮ ಸಹವಾಸ ವನವಾಸದಂತೆಯೆ
ನಮ್ಮ ಹುಚ್ಚರ ಮಾತು ಹುಡುಗಾಟಿಕೆ.
ಗೆಳೆಯರ ಕೂಡಾಡಿ ಬರುವಾಗ ನಾ ನಿಮ್ಮ
ಮುಖದಲುಕ್ಕುವ ಗೆಲವ ಕಂಡಿಲ್ಲವೇ
ಮನೆ ಬೆಳಕು ಮುಂದಿರೆ ಆ ಕಣ್ಣು ಕುಂದಿರೆ
ನಾನೊಳಗೆ ನೊಂದಿರೆ ನೀವರಿಯಿರೆ.
ಗಂಗೆಯ ಕಷ್ಟವು ಗೌರಿಗೆ ತಿಳಿಯದು
ಹೆಂಗಸಿನ ಕಷ್ಟವು ಗಂಡಸಿಗೆ
ಎಂದಿಗೂ ತಿಳಿಯದು. ಏತಕೆ ತಿಳಿಯೋದು?
ದುಃಖವು ನಮ್ಮದು ನಮಗೆ ಇದೆ.
ಎಂದು ನಿಟ್ಟುಸಿರಿಗೆ ಮಿಡಿದ ಕಂಬನಿ ಬಂದು
ಈ ಗಲ್ಲ ಸೋಂಕಲು ನಾ ನಡುಗಿದೆ.
ತಂಪು ತಣ್ಣಿಸುತಿರಲಿ ಕಂಪುಕಮ್ಮಯಿಸಲಿ
ಬಾಳದ ಬೇರಂತೆ ಬೇಸಿಗೆಗು
ನಿಮ್ಮ ಜೀವನದಲ್ಲಿ ಮಂಗಲವಾಗಲಿ
ಎಂದೆಂದು ಕೊನೆಗೊಮ್ಮೆ ನೀನೆನ್ನಲು
ನನ್ನ ತಾಯಿಯ ನೆನೆದು ನಾ ಸುಮ್ಮನಾದೆನು;
ಒಳಗೊಂದು ಹೊರಗೊಂದು ಜೀವಿಸಿದೆ.
ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ ಗಂಡು-ಹೆಣ್ಣುಗಳ ಇಜೊjàಡಿನ ಹೃದಯದ್ರಾವಕವಾದ ಚಿತ್ರಣವಿದು. ಇಲ್ಲಿ ತಪ್ಪೊಪ್ಪಿಗೆ ಇದೆ. ಪಶ್ಚಾತ್ತಾಪವಿದೆ. ಗಂಡು ಮಾಡಿದ ತಪ್ಪೇನು? ಒಳಗೊಂದು ಹೊರಗೊಂದು ಜೀವಿಸಿದುದು. ಹಾಗಂದರೇನು? ಹೊರ ಜಗತ್ತನ್ನು ಮುಖ್ಯವೆಂದು ಬಗೆದು ಮನೆಯೊಳಗನ್ನು ನಿರ್ಲಕ್ಷಿಸಿದುದು. ಈ ನಿರ್ಲಕ್ಷ್ಯಕ್ಕೆ ನಾನಾ ರೂಪಗಳಿವೆ. ಮುಖ್ಯವಾಗಿ ಮಡದಿಯನ್ನು ಅರ್ಥಮಾಡಿಕೊಳ್ಳಲು ಯತ್ನಿಸದೆ ಇದ್ದುದು. ಆಕೆಯನ್ನು ತನಗಿಂತ ಕೀಳೆಂದು ಬಗೆದುದು. ಅವಳಿಗೆ ಲೋಕಾನುಭವವಿಲ್ಲ, ದೈನಿಕದಲ್ಲಿ ತೊಡಗಿದ ಅವಳ ಮಾತಿಗೆ ರಸವಿಲ್ಲ-ರುಚಿಯಿಲ್ಲ ಎಂದು ತಿಳಿದುದು. ಆದರೆ, ಈಗ ತಿಳಿದಿದೆ. ಅನುಭವದ ಕಾವಿನಿಂದ ಆಡಿದ ಆಕೆಯ ಮಾತು ತನ್ನನ್ನು ನಡುಗಿಸಬಲ್ಲುದೆಂದು. ನಿಟ್ಟುಸಿರು; ಕಂಬನಿ ಇದ್ದರೂ ಅವುಗಳ ಹಿಂದೆ ಮಾತೂ ಇತ್ತಲ್ಲ. ವಿಚಿತ್ರವೆಂದರೆ, ಲೋಕವನ್ನು ನಡುಗಿಸಬಲ್ಲ ಮಾತಿಗಾಗಿ ಕವಿ ಹುಡುಕಾಡುತ್ತಿದ್ದ. ಆಡುಮಾತುಗಳನ್ನು articulate ಮಾಡುತ್ತ ಮಾತಿಗೆ ಮೊನಚನ್ನು ನೀಡಬಲ್ಲ ಬಗೆಬಗೆಗಳನ್ನು ಹುಡುಕುತ್ತಿದ್ದ. ಅದು ಕವಿಯ ಕರ್ಮವೇ ಆಗಿತ್ತು. ಈಗ ಅನುಭವಕ್ಕೆ ಬಂತು; inarticulate ಆದ ಮಾತುಗಳೂ ನಡುಗಿಸಬಲ್ಲುದೆಂದು; ಆಳಕ್ಕೆ ಹೋಗಬಲ್ಲುವೆಂದು.
ದೇವರ ದಾಸಿಮಯ್ಯ ತನ್ನ ಇಷ್ಟದೈವದೊಂದಿಗೆ “ನನ್ನಂತೆ ಒಡಲುಗೊಂಡು ನೋಡು’ ಎಂದು ಕೇಳಿದ್ದ. ಇಷ್ಟದೈವದ ಜೊತೆಗಲ್ಲದೆ ಬೇರೆ ಯಾರ ಜೊತೆ ಹಾಗೆ ಕೇಳುವುದು ಸಾಧ್ಯ? ಇದು ಕವಿಗೆ ತಿಳಿದಿತ್ತು. ಈಗ ಗೊತ್ತಾಯಿತು: ಹೆಣ್ಣು ಗಂಡನ್ನು-ನೀನೂ ನನ್ನಂತೆ ಒಡಲುಗೊಂಡು ನೋಡು ಎಂದು ಕೇಳಬಹುದೆಂದು! ಮನೆಯೊಳಗಿನ ದೈನಿಕದಲ್ಲಿ ತೊಡಗಿ ನೋಡು; ದೈನಿಕದ ಚಟುವಟಿಕೆಗಳಲ್ಲಿ ಬಳಕೆಯಾಗುವ ಮಾತುಗಳನ್ನು ಅವುಗಳ ಅನುಭವದ ಹಿನ್ನೆಲೆಯಲ್ಲಿ ಆಲಿಸಿ ನೋಡು- ಎಂದು ಕೇಳಬಹುದೆಂದು.

ಕೇಳದೆಯೇ ತಿಳಿಯಬೇಕಾಗಿತ್ತು. ಏಕೆಂದರೆ, ಇಲ್ಲಿ ಗಂಡಿನ ವ್ಯಕ್ತಿತ್ವದಲ್ಲಿ ಕವಿಯ ವ್ಯಕ್ತಿತ್ವವಿತ್ತು. ಈಗ ತಪ್ಪು ನಡೆದುಹೋಗಿದೆ ಎಂಬ ಭಾವ ಬಂತು. ತಪ್ಪುಗಾರನಿಗೆ ತಪ್ಪೊಪ್ಪಿಗೆಗೆ ಮಾತುಗಳೇ ಸಿಗಲಿಲ್ಲ! ಏಕೆಂದರೆ, ಮಡದಿಯ ಮಾತು ತಾಯಿಯ ಮಾತಿನಂತಿತ್ತು. ಆಲಂಕಾರಿಕವಾಗಿಲ್ಲ ಅಲ್ಲ ; ವಾಸ್ತವವಾಗಿ. ಅಂದರೆ ತಾಯಿಯೂ ಇಂಥದೇ ಮಾತನ್ನು ಆಡಿದ್ದಳು! ಈಗ ಕವಿಗೆ ಮಾತು ಸಿಗಲಲ್ಲಿ ! “”ನನ್ನ ತಾಯಿಯ ನೆನೆದು ನಾ ಸುಮ್ಮನಾದೆನು”. ಈಗ ಪಾತ್ರಗಳು ಅದಲು-ಬದಲಾದಂತೆ. ಗಂಡು ಹೆಣ್ಣಾದಂತೆ; ಹೆಣ್ಣು ಗಂಡಾದಂತೆ. ಇದು ಬೌದ್ಧಿಕ ಸಾಹಚರ್ಯವೂ ಸೇರಿ ಎಲ್ಲ ಬಗೆಯ ಸಾಹಚರ್ಯಕ್ಕಿಂತಲೂ ಹೆಚ್ಚಿನ ಅವಸ್ಥೆಯಾಗಿದೆ.  Articulate ಆದ ಭಾಷೆಯ ಉದ್ದೇಶ inarticulate ಆದ ಭಾಷೆಯ ಮಹಣ್ತೀವನ್ನು- ಜೀವಂತಿಕೆಯನ್ನು ತಿಳಿಯುವುದೇ ಆಗಿದೆ. ಇನ್ನೊಂದು ರೀತಿಯಲ್ಲಿ ಇದನ್ನು ಹೇಳುವುದಾದರೆ- ಲೋಕವನ್ನು ಹೆಣ್ಣು-ಗಂಡು ಎಂದು ಎರಡಾಗಿ ನೋಡಿದರೆ ಹೆಣ್ಣನ್ನು ತಿಳಿಯುವುದೇ ಗಂಡಿನ, ಗಂಡನ್ನು ತಿಳಿಯುವುದೇ ಹೆಣ್ಣಿನ ಸಾರ್ಥಕತೆಯಾಗಿ ಕಂಡುಬರುತ್ತದೆ. ಇದಕ್ಕಿಂತ ಹೆಚ್ಚಿನ ಉದ್ದೇಶವೇ ಬದುಕಿಗೆ ಇಲ್ಲವೇನೋ ಎನ್ನಿಸುತ್ತದೆ. ಆದುದರಿಂದಲೇ- ತಿಳಿಯಲಾಗದೆ ಇದ್ದರೆ ಉಂಟಾಗುವ ಪಶ್ಚಾತ್ತಾಪದ ಭಾವ ಗಾಢವಾದದ್ದು. ಅಡಿಗರ “ಬಾ ಇತ್ತ ಇತ್ತ ಇನ್ನೂ ಇತ್ತ’ ಕವಿತೆಯ ಈ ಸಾಲುಗಳನ್ನು ನೋಡಿ: ಈಗ ಪಶ್ಚಾತ್ತಾಪವೊಂದೇ ಸಾಧ್ಯ.

ಒಲವನ್ನೆಲ್ಲ ಒಂದೇ ನುಡಿಯಲ್ಲಿ ಗಿಡಿಯುವುದು ಮನೋವ್ಯಥೆಯ ಕಥೆಯನೊಂದೇ ಒಂದು ಮಾತಲ್ಲಿ ಕಡೆದಾಡುವುದು ಆಗುವಂಥಾ ಕೆಲಸವಲ್ಲ. ನಿಜ. ಕಸಿವಿಸಿಗೊಂಡು ಕೊರಗುತ್ತೇನೆ ನನ್ನಷ್ಟಕ್ಕೆ, ನಾ ನಲ್ಲೆ. ಯಥಾಪ್ರಕಾರ ಮನ್ನಿಸು ನನ್ನ ಓ ಚಿನ್ನ. 

ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.