Story: ಚದುರಂಗದ ರಾಜನಂತಾಗದೆ…
Team Udayavani, Oct 22, 2023, 1:15 PM IST
ಹೆಂಗಸರಿಗೆ ಪಾರ್ಲರ್ ಸೇವೆ ಕೂಡಾ ಮನೆಯಲ್ಲೇ ಲಭ್ಯವಿದೆ. ವೈದ್ಯರೂ ಸಹ ಹೋಮ್ ವಿಸಿಟ್ಟಿಗೆ ಬರುತ್ತಾರೆ. ಮನೆಗೇ
ಬಂದು ಬ್ಲಿಡ್ ಟೆಸ್ಟ್ ಸ್ಯಾಂಪಲ್ ತೆಗೆದುಕೊಂಡು ಹೋಗಿ ಫಲಿತಾಂಶವನ್ನು ವಾಟ್ಸಪ್‌ಗೆ ಕಳಿಸುತ್ತಾರೆ. ಬಂಗಾರವನ್ನು ಅಡವಿಟ್ಟು ಲೋನ್ ಕೊಡುವವರೂ ಈಗ ಮನೆಬಾಗಿಲಿಗೇ ಬರುತ್ತಾರೆ…
ಮಂಗನಿಂದ ಮಾನವನಾದ ಕಥೆ ಎಲ್ಲರಿಗೂ ಗೊತ್ತೇ ಇದೆ. ಬಾಲವಿದ್ದ ಮನುಷ್ಯ, ಅದನ್ನು ಅಷ್ಟಾಗಿ ಉಪಯೋಗಿಸದ ಕಾರಣ ಬರ್ತಾ ಬರ್ತಾ ಮಾಯವಾಯ್ತಂತೆ. ಹಲ್ಲುಗಳು ಸಹ ಆದಿಮಾನವನಿಗಿಂತ ಕಡಿಮೆ ಇವೆಯಂತೆ. ಬಳಕೆ ಕಡಿಮೆಯಾದಂತೆಲ್ಲ ಎಲ್ಲವನ್ನೂ ಕಳೆದುಕೊಳ್ಳಬಹುದು ಎನ್ನುವುದು ವಿಕಾಸವಾದ. ಈಗಿನ ಆಧುನಿಕ ಯುಗದಲ್ಲಿ ಎಲ್ಲವೂ ಮನೆಬಾಗಿಲಿಗೇ ಲಭ್ಯವಾಗುತ್ತಿರುವುದರಿಂದ ಮುಂದೆ ಇನ್ನೂ ಏನೇನು ಅಂಗ, ಅವಯವಗಳು ಮಾಯವಾಗುತ್ತವೆಯೋ ದೇವರೇ ಬಲ್ಲ. ಬರ್ತಾ ಬರ್ತಾ ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿಬಿಡುತ್ತಾನೇನೋ ಯಾರಿಗ್ಗೊತ್ತು? ಮನೆಯಲ್ಲೇ ಕುಳಿತೂ ಕುಳಿತೂ, ಕೇವಲ ಮೆದುಳು ಹಾಗೂ ಕೈಬೆರಳುಗಳನ್ನು ಕೆಲಸಕ್ಕೆ ಹಚ್ಚುವುದೇ ಹೆಚ್ಚಿರುವುದರಿಂದ, ಮುಂದಿನ ಮೂರ್ನಾಲ್ಕು ಪೀಳಿಗೆಯ ಹೊತ್ತಿಗೆ ಕೇವಲ ಕುಂಡೆ, ಮಂಡೆ, ಕೈಬೆರಳುಗಳ ಮನುಷ್ಯ ಜನ್ಮ ತಳೆಯಬಹುದೇನೋ, ಗೊತ್ತಿಲ್ಲ.
ಹಾಲು, ಪೇಪರ್ ಬೆಳ್ಳಂಬೆಳಿಗ್ಗೆ ಬಾಗಿಲಿಗೆ ನಮಸ್ಕಾರ ಮಾಡಿರುತ್ತವೆ. ಗ್ಯಾಸ್ ಸಿಲಿಂಡರ್ ಕೂಡಾ ಬುಕ್ ಮಾಡಿದ ಮರುದಿನವೇ ಬಾಗಿಲು ತಟ್ಟುತ್ತಿರುತ್ತದೆ. ಪೋಸ್ಟ್ ಕೂಡಾ ಹಿಂದಿನಿಂದಲೂ ಮನೆಬಾಗಿಲಿಗೆ ಸೇವೆ ಒದಗಿಸುವಲ್ಲಿ ಮಂಚೂಣಿಯಲ್ಲಿದೆ. ಪತ್ರ ಬರೆಯುವುದು, ಸ್ಟಾಂಪು ಹಚ್ಚುವುದು, ಎಲ್ಲವೂ ಈಗ ಅಷ್ಟಕ್ಕಷ್ಟೇ. ಇ-ಮೇಲ್‌ಗಳು, ವಾಟ್ಸಪ್‌ಗ್ಳ ಕಾಲ ಶುರುವಾಗಿ ಅಂಚೆ ಕಚೇರಿ, ಬ್ಯಾಂಕು ಎಂದು ಅಂಡಲೆಯುವ ಪ್ರಮೇಯವೇ ಕಡಿಮೆ. ವರ್ಷಕ್ಕೊಮ್ಮೆ ಮನೆ ದೇವರಿಗೆ ಹೋಗಿ ಬಂದಂತೆ ಹೋದರಾಯಿತು ಅಷ್ಟೇ. ಒಂದಿಷ್ಟು ರೇಷನ್ನಿಗೋ, ಸಾಮಾನಿಗೋ ಕಾಲಾಡಿಸುತ್ತ ಹೊರಗೆ ಹೋಗುತ್ತಿದ್ದವರನ್ನು, ಅವೂ ಸಹ ಯಾವ್ಯಾವುದೋ ಆ್ಯಪ್‌ಗ್ಳ ಮೂಲಕ ಮನೆಬಾಗಿಲಿಗೆ ಬಂದು ಬೀಳುತ್ತಿವೆ. ಕರೆಂಟ್ ಬಿಲ್ಲು, ನೀರಿನ ಬಿಲ್ಲು, ಟೆಲಿಫೋನ್ ಬಿಲ್ಲು, ಕರೆನ್ಸಿ ಎಲ್ಲ ಆನ್‌ಲೈನ್‌ನಲ್ಲೇ.
ಮನೆಯ ಹೆಂಗಸರೂ ಅಡುಗೆ ಮಾಡುವುದಕ್ಕೆ ಬೇಸರವಾಗಿ ಆಗೀಗ ಗಂಡನಿಗೆ ದುಂಬಾಲು ಬಿದ್ದು ಹೋಟೆಲ್ ಸಿನೆಮಾ ಎಂದು ಕರೆದುಕೊಂಡು ಹೋಗುತ್ತಿದ್ದ ಕಾಲ ಮಾಯವಾಗುತ್ತಿದೆ. ಈಗ ಸ್ವಿಗ್ಗಿ, ಜೊಮ್ಯಾಟೋದಿಂದ ಯಾವ ಹೋಟೆಲ್ಲು, ಖಾನಾವಳಿ, ಹೀಗೆ ಯಾವ ಅಡುಗೆ ಬೇಕೆಂದರೂ ಕೂತಲ್ಲೇ ಆರ್ಡರ್ ಮಾಡಿ ಆರಾಮಾಗಿರುತ್ತಾರೆ. ಮನೆಬಾಗಿಲಿಗೇ ಸಿನಿಮಾ ಥಿಯೇಟರ್ ಅನ್ನು ಕರೆತಂದ ಓಟಿಟಿಯಂತೂ ಎಲ್ಲರ ಪಾಲಿನ ಸಿನೆಮಾ, ಸೀರೀಸ್‌ಗಳ ಗುರು. ಮನೆಯಲ್ಲೇ ಹೋಮ್ ಥಿಯೇಟರ್ ನಿರ್ಮಿಸಿಕೊಂಡು ಬೇಕು ಬೇಕಾದ್ದನ್ನೆಲ್ಲ ವೀಕ್ಷಿಸುವ ಅನುಕೂಲ.
ಸೀರೆ, ಒಡವೆ, ಗ್ಯಾಜೆಟ್, ಚಪ್ಪಲಿ, ಪೂಜೆ ಸಾಮಾನುಗಳಿಂದ ಹಿಡಿದು ಏನೇ ಖರೀದಿಸಬೇಕೆಂದರೂ ಇನ್‌ಸ್ಟಾಗ್ರಾಂನ ವಿವಿಧ ಪೇಜ್‌ಗಳು, ವಿಧವಿಧ ಆ್ಯಪ್‌ಗ್ಳ ಮೂಲಕವೇ ವಿಂಡೋ ಶಾಪಿಂಗ್ ಮಾಡಿ, ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿಬಿಡುತ್ತಾರೆ. ಮುಂದೆ ಅಂಗಡಿಗಳು, ಮಾಲ್‌ಗಳನ್ನು ಸಹ ಮುಚ್ಚುವ ಪರಿಸ್ಥಿತಿ ಬರಬಹುದು.
ಹೆಂಗಸರಿಗೆ ಪಾರ್ಲರ್ ಸೇವೆ ಕೂಡಾ ಮನೆಯಲ್ಲೇ ಲಭ್ಯವಿದೆ. ವೈದ್ಯರೂ ಸಹ ಹೋಮ್ ವಿಸಿಟ್ಟಿಗೆ ಬರುತ್ತಾರೆ. ಮನೆಗೇ ಬಂದು ಬ್ಲಿಡ್ ಟೆಸ್ಟ್ ಸ್ಯಾಂಪಲ್ ತೆಗೆದುಕೊಂಡು ಹೋಗಿ ಫಲಿತಾಂಶವನ್ನು ವಾಟ್ಸಪ್‌ಗೆ ಕಳಿಸುತ್ತಾರೆ. ಬಂಗಾರವನ್ನು ಅಡವಿಟ್ಟು ಲೋನ್ ಕೊಡುವವರೂ ಈಗ ಮನೆಬಾಗಿಲಿಗೇ ಬಂದು, ಪರಿಶೀಲಿಸಿ ಸೀದಾ ಖಾತೆಗೆ ಜಮೆ ಮಾಡುವ ಸೌಲಭ್ಯ ಬಂದಿದೆ. ಖರೀದಿಗೆ, ಮಾರುವುದಕ್ಕೆ, ಬಾಡಿಗೆಗೆ ಹಾಗೂ ಲೀಸ್‌ಗೆ ಮನೆ, ಸೈಟು ಯಾವುದಕ್ಕೂ ಬ್ರೋಕರ್, ಏಜೆಂಟುಗಳು ಬೇಕಿಲ್ಲ. ಅವುಗಳಿಗೂ ವಿವಿಧ ಆ್ಯಪ್‌ಗ್ಳಿವೆ. ಮದುವೆ ಮಾಡಲೂ ಕಷ್ಟಪಡಬೇಕಿಲ್ಲ “ಶಾದಿ ಡಾಟ್ ಕಾಮ್’ನಿಂದ ಹಿಡಿದು ಆಯಾ ಜಾತಿಗಳ ಮ್ಯಾಟ್ರಿಮೋನಿಗಳು ಕುಳಿತಲ್ಲೇ ವಧು-ವರರನ್ನು ಪರಿಚಯಿಸಿಬಿಡುತ್ತವೆ. ವೀಡಿಯೋ ಕಾಲ್ ಮೂಲಕವೇ ಎಲ್ಲಿಂದೆಲ್ಲಿಗೆ ಬೇಕಾದರೂ ಸಂಬಂಧಗಳು ಕುದುರುತ್ತಿವೆ. ಹಾಗೆಯೇ ಕಡಿಯುತ್ತಲೂ ಇವೆ. ಈಗ ಬಹುತೇಕ ದೇವಸ್ಥಾನಗಳೂ ಸಹ ಆನ್‌ಲೈನ್ ದರ್ಶನಕ್ಕೆ ವ್ಯವಸ್ಥೆ ಮಾಡಿವೆ. ಮೊದಲಿನ ಹಾಗೆ ಗಂಟೆಗಟ್ಟಲೆ ಕ್ಯೂ ಹಚ್ಚಿ ಹೋಗುವ ಪ್ರಮೇಯವಿಲ್ಲ.
ಹೊರಗೆ ಹೋಗಿ ಆಡುತ್ತಿದ್ದ ಮಕ್ಕಳು ಈಗ ಆನ್‌ಲೈನ್ ಗೇಮ್ಸ್ , ರೀಲ್ಸ್ ನೋಡುತ್ತ, ಅದರಲ್ಲೇ ವಿವಿಧ ಆ್ಯಪ್‌ಗ್ಳಲ್ಲಿ ಟ್ಯೂಷನ್ಸ್ ಕೇಳುತ್ತಾ ದೈಹಿಕ ಶ್ರಮವಿಲ್ಲದೆ ಅರಾಮಾಗಿದ್ದಾರೆ. ಪುಸ್ತಕ ಕೊಳ್ಳುವುದಕ್ಕೆ, ಓದುವುದಕ್ಕೆ, ಕೇಳುವುದಕ್ಕೆ ಅನೇಕ ಆ್ಯಪ್‌ಗ್ಳು ಇವೆ. ವಾಚ್‌ಮನ್, ನಾಯಿಗಳ ಅವಲಂಬನೆಯಿಲ್ಲದೆ, ಮನೆ ಅಂಗಡಿಯ ಸುತ್ತ ಮುತ್ತ ಸಿ.ಸಿ ಕ್ಯಾಮೆರಾ ಹಾಕಿಸಿಕೊಂಡು ಕುಳಿತಲ್ಲೇ ಎಲ್ಲ ಗಮನಿಸುವ ಕಾಲದಲ್ಲಿ ಇದ್ದೇವೆ.
ಗೂಗಲ್ ಪೇ, ಫೋನ್ ಪೇ ಆ್ಯಪ್‌ಗ್ಳು ಕೈಯ್ಯಲ್ಲಿ ಹಣ ಹಿಡಿದುಕೊಂಡು ಓಡಾಡುವುದನ್ನೇ ಮರೆಸುತ್ತಿವೆ. ದೇವರ ಕಾಣಿಕೆಹುಂಡಿಗಳು ಕಡಿಮೆಯಾಗಿ ಈ-ಹುಂಡಿಗಳು ಲಗ್ಗೆಯಿಟ್ಟಿವೆ. ಐದು ರೂಪಾಯಿ ಕೊತ್ತಂಬರಿಗಿರಲಿ, ಐವತ್ತು ಸಾವಿರ ಒಡವೆಗಳಿಗೇ ಇರಲಿ; ಪೇ ಗಳದ್ದೇ ದರ್ಬಾರು. ಅಂಗಡಿಗೆ ಹೋಗಿ ಸಾಮಾನು ತರುವುದು, ಕೊಟ್ಟ ಹಣವನ್ನು ಚಿಲ್ಲರೆ ಮಾಡಿಸುವುದು ಎಲ್ಲ ಭೂತಕಾಲವಾಗಿ, ಅದೂ ಸಹ ಪಾಠದೊಳಗಿನ ಪಠ್ಯವಾಗಿ ಮಕ್ಕಳು ಓದಬಹುದು ಎನಿಸುತ್ತದೆ. ಐವತ್ತು ರೂಪಾಯಿಯಲ್ಲಿ ಹದಿಮೂರು ರೂಪಾಯಿ ಕಳೆದರೆ ಚಿಲ್ಲರೆ ಎಷ್ಟು ಉಳಿಯಬಹುದು ಎನ್ನುವ ಲೆಕ್ಕವೇ ಡಿಫೆರೆನ್ಸಿಯೇಷನ್ ಮತ್ತು ಇಂಟಿಗ್ರೇಷನ್ನಿಗಿಂತ ಕಠಿಣ ಎನಿಸಬಹುದೇನೋ. ವರ್ಕ್ ಫ್ರಂ ಹೋಂ ಕೊರೋನಾ ಕಾಲದಿಂದ ಹೆಚ್ಚಾಗಿ, ಮನೆಯಿಂದಲೇ ಉದ್ಯೋಗ ಮಾಡುವವರ ಸಂಖ್ಯೆಯೂ ಹೆಚ್ಚಿರುವುದರಿಂದ ಆಫೀಸ್ ಎನ್ನುವ ಪರಿಕಲ್ಪನೆ ಕೂಡಾ ಬದಲಾಗಬಹುದು.
ಬಹುಶಃ ರಸ್ತೆಗಳ ಮೇಲೆ ಸಾಮಾನು ಸರಂಜಾಮುಗಳನ್ನು ಡೆಲಿವರಿ ಮಾಡುವ ಸಿಬ್ಬಂದಿ ಮತ್ತು ವಾಹನಗಳು ಬಿಟ್ಟರೆ ಬೇರೆಯವರನ್ನು ಕಾಣುವುದೇ ದುಸ್ತರವಾಗಬಹುದು. ಕುಡಿದ ನೀರೂ ಸಹ ಅಲ್ಲಾಡದಷ್ಟು ಸವಲತ್ತುಗಳಿರುವ ಕಾಲದಲ್ಲಿ, ಉಂಡಿದ್ದು ಅರಗಿಸಿಕೊಳ್ಳುವುದಕ್ಕೆ ಮಾತ್ರ ವಾಕಿಂಗ್, ಜಿಮ್ಮು, ಒಂದಿಷ್ಟು ಜೀವನೋತ್ಸಾಹವೆಂಬ ಟಾನಿಕ್ಕಿಗೆ ಪ್ರವಾಸ, ಪಿಕ್ನಿಕ್ ಅಂತ ಹೊರಗೆ ಕಾಲಿಡಬಹುದೇನೋ. ಆಕಾಶ, ಸೂರ್ಯ, ಚಂದ್ರ, ನಕ್ಷತ್ರಗಳನ್ನು ನೋಡಿ, ಪ್ರಕೃತಿ ಪರಿಚಯ ಮಾಡಿಕೊಳ್ಳಿ ಎಂದು ವೈದ್ಯರು ಶಿಫಾರಸ್ಸು ಮಾಡುವ ಕಾಲವೂ ಬರಬಹುದು.
ಯಾರು ಮನೆಯಲ್ಲಿ ಕುಳಿತರೂ, ರೈತ, ಯೋಧ, ಕಾರ್ಮಿಕ ಮಾತ್ರ ಹೊರಗೆ ಕಾಲಿಡಲೇಬೇಕು, ಚಳಿ, ಬಿಸಿಲು, ಮಳೆಯೆನ್ನದೆ ದುಡಿಯಲೇಬೇಕು.
ಇಲ್ಲದಿದ್ದರೆ ಜನರಿಗೆಲ್ಲ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆಯೇ ಗತಿ. ಅವರುಗಳು ಮನೆಯಲ್ಲೇ ಕುಳಿತುಬಿಟ್ಟರೆ ಜಗತ್ತೇ ಅಲ್ಲೋಲ ಕಲ್ಲೋಲವಾಗುವುದು ಖಂಡಿತ. ಚದುರಂಗದಲ್ಲಿ ರಾಜನಾಗಿ ಕೇವಲ ಅಕ್ಕ ಪಕ್ಕ, ಮುಂದೆ ಹಿಂದೆ, ಕೇವಲ ಒಂದು ಹೆಜ್ಜೆ ಮಾತ್ರ ಇಡುವ ಕಾಯಿಯಾಗಿ, ಕುಳಿತ ಜಾಗದಿಂದಲೇ ಪರರನ್ನೇ ಅವಲಂಬಿಸುವ ಸ್ಥಿತಿಯಂತೆ ಬದುಕಾಗಿದೆ.
ಕೊನೆಯದಾಗಿ, ಜೀವಹೋದ ನಂತರ ಶವವಾಹನವೂ ಸಹ ಮನೆಬಾಗಿಲಿಗೆ ಬಂದೇ ಬರುತ್ತದೆ. ಮನೆಯಲ್ಲೇ ಕುಳಿತು ಕುಳಿತು ಜೀವಂತ ಶವವಾಗುವ ಮೊದಲು ಸ್ವಲ್ಪ ಹೊರ ಜಗತ್ತಿಗೆ ಬಿದ್ದು ಸಾಮಾಜಿಕ ಜೀವನ ಅನುಭವಿ ಸುವತ್ತ ಗಮನಹರಿಸುವುದೊಳಿತು.
– ನಳಿನಿ ಟಿ. ಭೀಮಪ್ಪ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.