Rural market: ಬದುಕು ಬದಲಿಸಿದ ಗ್ರಾಮೀಣ ಮಾರುಕಟ್ಟೆ ಜಾಲ
Team Udayavani, Oct 2, 2023, 3:39 PM IST
ಗುಜರಾತಿನ ಅರವಳ್ಳಿ ಜಿಲ್ಲೆಯ ಬಾಯಡ್ ತಾಲೂಕಿನ ಮೀನಾಬೆನ್ ಪ್ರಜಾಪತಿ ಬೆಳಗಾಗುತ್ತಿದ್ದಂತೆ ಮೊಬೈಲಿನಲ್ಲಿ “ರೂಡಿ’ ಆ್ಯಪ್ ತೆರೆಯುತ್ತಾಳೆ. ಯಾರಿಂದ ಏನೇನು ಆರ್ಡರ್ ಬಂದಿವೆ ಎಂದು ನೋಡಿಕೊಳ್ಳುತ್ತಾಳೆ. ರೂಡಿ ಪ್ರಾಸೆಸಿಂಗ್ ಸೆಂಟರ್‌ಗೆ ಹೋಗಿ ಆ ಎಲ್ಲ ಆರ್ಡರ್ ಗಳ ಪ್ಯಾಕೆಟ್‌ಗಳನ್ನು ಸರಿಯಾಗಿ ನೋಡಿ, ತೆಗೆದಿರಿಸುತ್ತಾಳೆ. ದಾರಿಯಲ್ಲಿ ಸಿಗುವ ನಾಕಾರು ಗ್ರಾಮಗಳಿಂದ ಆಕೆಗೆ ಆರ್ಡರ್ ಬಂದಿರುತ್ತದೆ. ಅದೇ ಪ್ರಕಾರ ವ್ಯಾನಿನಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಎರಡು ದಶಕಗಳ ಹಿಂದೆ ಪ್ರಜಾಪತಿಯ ಹೆಂಡತಿ ಎಂದು ಗುರುತಿಸಿಕೊಳ್ಳುತ್ತಿದ್ದವಳು, “ಮೀನಾಬೆನ್’ ಎಂಬ ಅಸ್ಮಿತೆ ದಕ್ಕಿಸಿಕೊಂಡು, ಈಗ “ರೂಡಿಬೆನ್’ ಎಂದು ಗುರುತಿಸಿಕೊಳ್ಳುವವರೆಗಿನ ಪಯಣ ಸುಲಭದ್ದಾಗಿರಲಿಲ್ಲ.
ರೂಡಿಬೆನ್ ಆದ ಆ ಕ್ಷಣ…
ಮೀನಾಳ ಕುಟುಂಬದವರು ತಲೆತಲಾಂತರದಿಂದ ಮಡಕೆ ಮಾಡುತ್ತಿದ್ದವರು. ಎರಡು ದಶಕಗಳ ಹಿಂದೆ ಗಂಡ, ಹೆಂಡತಿ ಸೇರಿ ಮಡಕೆ ಮಾಡಿ, ಮಾರಾಟ ಮಾಡಿದರೆ, ವಾರಕ್ಕೆ 200-300 ರೂಪಾಯಿ ದೊರೆಯುವುದೂ ಕಷ್ಟವಾಗಿತ್ತು. “ಸೇವಾ’ ಸಂಸ್ಥೆಯ ಕೃಷಿ ಸಹಕಾರಿ ಮಂಡಳಿಯವರು ಅಣಿಯೂರಿನಲ್ಲಿ ಸಭೆಗಳನ್ನು ನಡೆಸಿದಾಗ ಮೀನಾ ಆಸಕ್ತಿಯಿಂದ ಭಾಗವಹಿಸಿದಳು. ಮನೆಯಲ್ಲಿ ಅತ್ತೆ, ಗಂಡ ನ ವಿರೋಧ ಲೆಕ್ಕಿಸದೆ “ಸೇವಾ’ದ ಸದಸ್ಯಳಾದಳು. ಹಳ್ಳಿಯಲ್ಲಿ ಜನರು ಏನೇನು ಕೊಳ್ಳುತ್ತಾರೆ, ಯಾವಾಗ ಮತ್ತು ಎಷ್ಟು ಕೊಳ್ಳುತ್ತಾರೆ, ಅವರ ಆಹಾರ ಕ್ರಮ ಇತ್ಯಾದಿ ಕುರಿತು ಸೇವಾ ಸಂಸ್ಥೆಯು ಸಮೀಕ್ಷೆ ನಡೆಸಿದಾಗ ಮೀನಾಳೂ ಪಾಲ್ಗೊಂಡಳು. ನಂತರ “ರೂಡಿ’ ಸಂಸ್ಕರಣಾ ಕೇಂದ್ರವನ್ನು ತೆರೆದಾಗ ಅಲ್ಲಿ ಕೆಲಸಕ್ಕೆ ಸೇರಿದ ಮೀನಾ, ಆಹಾರ ವಸ್ತುಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ವಿಂಗಡಿಸುವುದು, ಸ್ವತ್ಛಪಡಿಸುವುದು, ಸರಿಯಾಗಿ ಪ್ಯಾಕ್ ಮಾಡುವುದನ್ನು ಕಲಿತಳು. ನಂತರ ಈ “ರೂಡಿ’ ಸಾಮಗ್ರಿಗಳನ್ನು ಹಳ್ಳಿಯ ಮನೆಗಳಿಗೆ ತಲುಪಿಸುವ “ರೂಡಿಬೆನ್’ ಆದಳು. ಈಗ ರೂಡಿ ಸಂಸ್ಕರಣಾ ಕೇಂದ್ರದ ಮುಖ್ಯಸ್ಥೆಯಾಗಿರುವ ಮೀನಾಳ ದುಡಿಮೆ, ಸುತ್ತಲಿನವರು ಅವಳಿಗೆ ಕೊಡುವ ಗೌರವ ಕಂಡ ಅತ್ತೆ ಹಾಗೂ ಗಂಡ ಅವಳ ಕೆಲಸದ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಈಗ ಬೆಳಗ್ಗೆ ಆರುಗಂಟೆಗೆ ನಂಗೆ ಏನೋ ಟ್ರೈನಿಂಗ್ ಇದೆ, ಹೋಗಬೇಕು ಎಂದರೆ ಏನೂ ಹೇಳ್ಳೋದಿಲ್ಲ. ಮೊದಲಿನಂತೆ ಅವರ ಒಪ್ಪಿಗೆ ತಗೋಬೇಕು ಅಂತೇನೂ ಇಲ್ಲ ಎಂದು ಮೀನಾಬೆನ್ ಹೆಮ್ಮೆಯಿಂದ ಹೇಳುತ್ತಾಳೆ.
ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸಿಕ್ಕಿತು
ಗಾಂಧಿ ಜಯಂತಿಯಂದು ನಾವು ನೆನಪಿಸಿಕೊಳ್ಳುವ ಮತ್ತು ಬಳಸಿ, ಬಳಸಿ ಸವಕಲಾಗಿರುವ ಪದ ಗಳಲ್ಲಿ ಒಂದು ಎಂದರೆ ಗ್ರಾಮ ಸ್ವರಾಜ್ಯ. ನಮ್ಮ ಗ್ರಾಮ ಗಳು ನಿಜಕ್ಕೂ ಸ್ವಾವಲಂಬಿಯಾಗಿವೆಯೇ ಅಥವಾ ಹಾಗೆ ಸ್ವಾವಲಂಬಿಯಾಗುವಂತಹ ಪರಿಸ್ಥಿತಿಯಾದರೂ ಇದೆಯೇ ಎಂದು ಪ್ರಶ್ನಿಸಿಕೊಂಡರೆ ಇಲ್ಲ ಎಂಬ ಕಹಿ ಉತ್ತರವೇ ಎದುರಾಗುತ್ತದೆ.
ಮೌನ ಕ್ರಾಂತಿಕಾರಿ ಎಂದೇ ಹೆಸರಾದ ಗುಜರಾತಿನ ಇಳಾ ಭಟ್ ಅಸಂಘಟಿತ ವಲಯದ ಸ್ವಉದ್ಯೋಗಿ ಮಹಿಳೆಯರ ಸಂಘಟನೆ, “ಸೇವಾ’, ಸಂಸ್ಥೆಯನ್ನು ಆರಂಭಿಸಿದ್ದು, 1972ರಲ್ಲಿ. ನಗರದ ಅಸಂಘಟಿತ ವಲಯದ ಮಹಿಳೆಯರೊಂದಿಗೆ ಕೆಲಸ ಮಾಡುತ್ತಿದ್ದ “ಸೇವಾ’ಎಂಬತ್ತರ ದಶಕದಲ್ಲಿ ಗ್ರಾಮೀಣ ಭಾಗಕ್ಕೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿತ್ತು. ತೊಂಬತ್ತರ ದಶಕದ ಕೊನೆಯಲ್ಲಿ “ಸೇವಾ’ದ ಗ್ರಾಮೀಣ ಸದಸ್ಯರ ಸಂಖ್ಯೆ ಮೂರು ಲಕ್ಷದ ಸಮೀಪವಿತ್ತು. ಕೃಷಿ, ಹೈನುಗಾರಿಕೆ, ತಿನ್ನುವ ಅಂಟಿನಂತಹ ಅರಣ್ಯ ಉತ್ಪನ್ನಗಳು ಇತ್ಯಾದಿಗಳಿಗೆ ಸೂಕ್ತ ಮಾರುಕಟ್ಟೆಯ ಕೊರತೆಯಿರುವುದನ್ನು ಮನಗಂಡ “ಸೇವಾ’ ಸಂಸ್ಥೆಯು ಗ್ರಾಮೀಣ ಉತ್ಪಾದಕ ಗುಂಪುಗಳಿಗೆ ಮಾರುಕಟ್ಟೆ ಸಂಬಂಧಿತ ಸೇವೆಗಳನ್ನು ನೀಡುವುದಕ್ಕಾಗಿ “ಸೇವಾ ಗ್ರಾಮ ಮಹಿಳಾ ಹಾತ್’ ಅನ್ನು ಒಂದು ಅಪೆಕ್ಸ್ ಅಂಗವಾಗಿ ಆರಂಭಿಸಿತು. ಇದರ ಮೂಲಕ ಸಣ್ಣ ಮತ್ತು ಮಧ್ಯಮ ಹಿಡುವಳಿಯ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುವಂತಾಯಿತು.
ಸ್ವಾವಲಂಬನೆಯ ಬದುಕು
ಈಗ ಗುಜರಾತಿನ ಒಂಬತ್ತು ಜಿಲ್ಲೆಗಳಲ್ಲಿ ರೂಡಿ ಉತ್ಪಾದನಾ ಕೇಂದ್ರಗಳು ಇವೆ. 15,000 ಮಹಿಳಾ ಸಣ್ಣ ಮತ್ತು ಮಧ್ಯಮ ಹಿಡುವಳಿ ರೈತರು ಇದರ ಸದಸ್ಯರು. ಒಂದರ್ಥದಲ್ಲಿ ಇವರೇ ಕಂಪನಿಯ ಮಾಲೀಕರು ಮತ್ತು ನಿರ್ವಹಣೆ ಮಾಡುವವರು. ಸುಮಾರು 1500 “ರೂಡಿಬೆನ್’ (ರೂಡಿ ಅಕ್ಕ) ಸ್ವತಂತ್ರ ಉದ್ದಿಮೆದಾರರ ಹಾಗೆ ಕೆಲಸ ಮಾಡುತ್ತಾರೆ. ಇದರಿಂದ ರೂಡಿ ಸಂಸ್ಕರಣಾ ಕೇಂದ್ರಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೂ ನಿಯಮಿತವಾದ ಆದಾಯ ಸಿಕ್ಕಂತಾಗಿದೆ. ಮನೆಯಿಂದ ಎಂದೂ ಹೊರಗೆ ಕಾಲಿಡದಿದ್ದವರು ಈಗ ಸ್ವಾವಲಂಬಿಗಳಾಗಿ, ಲಕ್ಷಗಟ್ಟಲೆ ದುಡ್ಡಿನ ವಹಿವಾಟನ್ನು ಆತ್ಮವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಅರವಳ್ಳಿ ಜಿಲ್ಲಾ ಸಂಯೋಜನಾಧಿಕಾರಿ ನೈಮಿಷಾ ಜೋಶಿ ವಿವರಿಸುತ್ತಾರೆ.
ಈ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ದಕ್ಕುವ ಜೊತೆಗೆ ಡಿಜಿಟಲ್ ಸ್ವಾತಂತ್ರ್ಯವೂ ದಕ್ಕಿದೆ. ಗುಜರಾತಿನ ಹಲವು ಜಿಲ್ಲೆಗಳಲ್ಲಿ ಈಗ ನೂರಾರು ರೂಡಿ ಬೆನ್ ಇದ್ದಾರೆ. ಮೊದಲು ಮೊಬೈಲ್ ಬಿಡಿ, ಲ್ಯಾಂಡ್ ಲೈನ್ ಫೋನ್ ಕೂಡ ಬಳಸಿದವರಲ್ಲ ನಾವು. ಈಗ ಸ್ಮಾರ್ಟ್ ಫೋನ್ ಬಳಸ್ತೇವೆ. ಮೊಬೈಲಿನಲ್ಲಿ ರೂಡಿ ಆಪ್ ಮೂಲಕ ಆರ್ಡರ್ ತಗೊಳ್ಳೋದು, ಪೇಮೆಂಟ್ ಮಾಡೋದು, ಬ್ಯಾಂಕ್ ವ್ಯವಹಾರ ಎಲ್ಲವೂ ಬೆರಳಿನ ತುದಿಯಲ್ಲೇ ಕರಗತವಾಗಿದೆ, ಎಂದು ಮೊಬೈಲನ್ನು ತೋರಿಸುತ್ತ ಹೇಳುವ ಮೀನಾ ಪ್ರಜಾಪತಿಯ ಮುಖದಲ್ಲಿ ಹೆಮ್ಮೆಯ ನಗು ಮಿನುಗುತ್ತದೆ.
ರೂಡಿ ಎಂದರೆ…:
ರೂಡಿ ಎಂದರೆ ಗುಜರಾತಿ ಭಾಷೆಯಲ್ಲಿ ಸುಂದರ ಎಂಬರ್ಥವೂ ಇದೆ. “ಸೇವಾ’ ಅಹ್ಮದಾಬಾದಿನ ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಸಂಘಟಿಸುವ ಕೆಲಸ ಆರಂಭಿಸಿದಾಗ, ರೂಡಿ ಎಂಬ ಮಹಿಳೆ ಮೊದಲ ಸದಸ್ಯಳಾಗಿದ್ದಳು. ಆಕೆಯ ಹೆಸರಿನ ನೆನಪಿಗಾಗಿಯೂ ಕಂಪನಿಗೆ ರೂಡಿ ಎಂಬ ಹೆಸರನ್ನಿಡಲು ಯೋಚಿಸಿದೆವು. ರೂರಲ್ ಡಿಸ್ಟ್ರಿಬ್ಯೂಶನ್ ನೆಟ್‌ವರ್ಕ್ ಎಂಬುದರ ಸಂಕ್ಷಿಪ್ತರೂಪವೂ ರೂಡಿ ಎಂದಾಗುತ್ತದೆ. ಗ್ರಾಮೀಣ ಭಾಗದವರಿಗೆ ಪೌಷ್ಟಿಕ ಆಹಾರ ಭದ್ರತೆ ಒದಗಿಸುವ ಜೊತೆಗೆ ಗ್ರಾಮೀಣ ಸಮುದಾಯಕ್ಕೆ ಆದಾಯ ಸುರಕ್ಷತೆ ಒದಗಿಸುವುದು ರೂಡಿಯ ಧ್ಯೇಯವಾಗಿದೆ ಎನ್ನುತ್ತಾರೆ ರೂಡಿ ಮಲ್ಟಿಟ್ರೇಡಿಂಗ್ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ಸುನಿತಾ ಪಟೇಲ್.
-ಸುಮಂಗಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.