ಅಪಾರ ಮೂರ್ತಿಯೇ… ಎಷ್ಟೆಲ್ಲ ಬರೆದ್ರೂ ಇಷ್ಟೂ ಖಾಲಿಯಾಗಿಲ್ಲ
Team Udayavani, Oct 20, 2024, 4:50 PM IST
ಸ್ಟೇಟ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಎಮ್ಮೆಸ್ಸೆನ್, ಸ್ವಯಂ ನಿವೃತ್ತಿ ಪಡೆದು ಬರವಣಿಗೆಗಾಗಿಯೇ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡರು. ಬರೆಯುವುದೇ ಬದುಕು ಎಂದುಕೊಂಡು ಸುಮಾರು 12 ಸಾವಿರ ಕಂತು ಟಿವಿ ಧಾರಾವಾಹಿಗಳಿಗೆ, ಹಲವಾರು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ, 60 ಪುಸ್ತಕ ಬರೆದಿದ್ದಾರೆ, ಸಾವಿರಾರು ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ಇಷ್ಟೆಲ್ಲ ಬರೆದರೂ ಅವರು ಇಷ್ಟೂ ಖಾಲಿಯಾಗಿಲ್ಲ…
ಕುಬೇರಪ್ಪ ಅಂತ ಹೆಸರಿಟ್ಟುಕೊಂಡು ಇರೋ ಬರೋ ಬ್ಯಾಂಕುಗಳಲ್ಲೆಲ್ಲಾ ಸಾಲ ತೆಗಿಯೋ ಪುಣ್ಯಾತ್ಮರನ್ನ ನೋಡಿದ್ದೀವಿ. ರಾಮಚಂದ್ರ ಅಂತ ಹೆಸರು ಹೊತ್ತು ಅಪ್ಪನನ್ನೇ ಮನೆಯಿಂದ ಹೊರಗೆ ಹಾಕಿದ ಗುಣವಂತರನ್ನೂ ಕಂಡಿದ್ದೀವಿ. ಸಿಕ್ಕಾಪಟ್ಟೆ ಶಾರ್ಟ್ ಟೆಂಪರ್ ಇರುವ ಶಾಂತರಾಜು ಕೂಡಾ ನಮಗೆ ಗೊತ್ತು. ನನ್ನ ಗೆಳೆಯ ಜ್ಞಾನಮೂರ್ತಿ ಎಸ್ಸೆಸ್ಸೆಲ್ಸಿಯಲ್ಲೆ ಏಳು ಸಲ ಡುಮುಕಿ ಹೊಡೆದಿದ್ದ. ನಮ್ಮ ಹೈಸ್ಕೂಲ್ ಕ್ಲಾಸ್ ಮೇಟ್ ಸರಸ್ವತಿ ಶುದ್ಧ ಪಿಟಿಪಿಟಿ. ಪಾರ್ವತಿ ಅಂತ ಹೆಸರಿಟ್ಟುಕೊಂಡಿರುವ ನನ್ನ ಗೆಳೆಯನ ಹೆಂಡತಿ ಹಾತೆಹುಳು ಕಂಡರೆ ಹಾ…! ಅಂತ ಕೂಗಿ ಹಾಹಾಕಾರ ಮಾಡಿಬಿಡುತ್ತಾಳೆ…
ಇರ್ತಾರೆ… ಹೀಗೆಲ್ಲ ಇರ್ತಾರೆ. ಹೆಸರಿಗೂ ಗುಣಕ್ಕೂ ಹೊಂದಿಕೆ ಇರಬೇಕೆಂಬ ಕಾನೂನು ಎಲ್ಲೂ ಇಲ್ಲ. ಹಾಗಿದ್ದಿದ್ದರೆ ನಮ್ಮ ಎಂ.ಎಸ್. ನರಸಿಂಹಮೂರ್ತಿ ಅವರ ಹೆಸರನ್ನು ಎಂದೋ ಸರ್ಕಾರಕ್ಕೆ ಒಪ್ಪಿಸಿ ವಿನೋದ ಮೂರ್ತಿ ಅಂತಲೋ, ಸುಹಾಸ ಅಂತಲೋ ಹೆಸರಿಟ್ಟುಕೊಳ್ಳಬೇಕಾಗಿತ್ತು. “ನಗುತ ನಗಿಸುತ ನಗುವ ವರವ ಮಿಗೆ ಬೇಡಿ’ಕೊಂಡು ಭೂಮಿಗೆ ಬಂದಿರುವವರು ನಮ್ಮ ಪ್ರೀತಿಯ ನರಸಿಂಹಮೂರ್ತಿ.
ನರಸಿಂಹಮೂರ್ತಿ ಅಂದೆ ಅಲ್ಲವೆ? ನೀವು ಹಾಸ್ಯ ಸಾಹಿತ್ಯ ಪ್ರಿಯರಾಗಿದ್ದರೆ, ಟಿವಿ ಧಾರಾವಾಹಿಗಳ ವೀಕ್ಷಕರಾಗಿದ್ದರೆ ನಿಮಗೀ ಹೆಸರು ಗೊತ್ತಿರಲೇಬೇಕು. ಅವರು ಸುಮಾರು 12 ಸಾವಿರ ಕಂತು ಟಿವಿ ಧಾರಾವಾಹಿಗಳಿಗೆ, ಹಲವಾರು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ, 60 ಪುಸ್ತಕ ಬರೆದಿದ್ದಾರೆ, ಸಾವಿರಾರು ಹಾಸ್ಯ ಲೇಖನಗಳನ್ನು ಬರೆದಿದ್ದಾರೆ, ಸಾವಿರಾರು ಹಾಸ್ಯ ಭಾಷಣಗಳನ್ನು ಮಾಡಿದ್ದಾರೆ, ಹತ್ತಾರು ದೇಶಗಳನ್ನು ಸುತ್ತಾಡಿದ್ದಾರೆ, ಮನೆ ಹಿಡಿಸದಷ್ಟು ಸ್ಮರಣ ಫಲಕ, ಪ್ರಶಸ್ತಿ, ಪ್ರಮಾಣ ಪತ್ರ ಪಡೆದಿದ್ದಾರೆ. ಮಹಾ ಸಜ್ಜನ, ವಾದ ವಿವಾದಗಳಿಂದ ದೂರ, ಹೃದಯವಂತ, ವಿನಯವಂತ, ಸ್ನೇಹಜೀವಿ ಇತ್ಯಾದಿತ್ಯಾದಿ ಏನೇನೋ ನಿಮಗೆ ಗೊತ್ತಿರಬಹುದು. ಆದರೆ ನಿಮಗೆ ಇದು ಗೊತ್ತಿರಲಾರದು. ಅವರಿಗೀಗ ಭರ್ತಿ ಎಪ್ಪತ್ತೈದು ವರ್ಷ- ಮುಕ್ಕಾಲು ಶತಮಾನ!
1949ನೇ ಇಸವಿ ಅಕ್ಟೋಬರ್ 20ನೇ ತಾರೀಕು ನಮ್ಮ ಎಮ್ಮೆಸ್ಸೆನ್ ಹುಟ್ಟಿದ್ದು. ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜವಳಿ ಅಂಗಡಿ ಸೂರಪ್ಪನವರು, ತಾಯಿ ಸಾವಿತ್ರಮ್ಮ. ಮದುವೆಯಾಗಿ ಕೈಹಿಡಿದವರು ಸ್ವತಃ ಲೇಖಕಿಯೂ ಆದ ನಿರ್ಮಲಾ.
ನಿರ್ಮಲಾ ಮತ್ತು ಎಮ್ಮೆಸ್ಸೆನ್ ಅವರದು ಪ್ರೇಮ ವಿವಾಹ. ಅವರ ಪ್ರೇಮ ಪ್ರಸಂಗವೇ ಒಂದು ಬೇರೆಯ ಕತೆ. ಸಂಕ್ಷಿಪ್ತವಾಗಿ ಇಷ್ಟು ಹೇಳಬಹುದು. ಅವರಿಬ್ಬರೂ ಮೊದಲು ಭೇಟಿಯಾದದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ. ಅಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಬಂದಿದ್ದರು ನಿರ್ಮಲಾ. ಅವರ ಪ್ರಾರ್ಥನೆ ದೇವರಿಗೆ ಕೇಳಿಸಿತು; ಈ ಸುರಸುಂದರಾಂಗನ ಭೇಟಿಯಾಯಿತು. ಆಗ ಎಮ್ಮೆಸ್ಸೆನ್ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ನಿರ್ಮಲಾ ಅವರನ್ನು ಭೇಟಿಯಾದ ಮೇಲೆ ಎಮ್ಮೆಸ್ಸೆನ್ ಬ್ಯಾಂಕ್ ಲೆಕ್ಕದಲ್ಲಿ ಸ್ವಲ್ಪ ಏರು ಪೇರು ಆಗೋದಕ್ಕೆ ಶುರು ಆಯಿತು ಎಂಬ ಗುಮಾನಿ ಇದೆ. ಬ್ಯಾಂಕ್ ಲೆಕ್ಕಾಚಾರದ ಮಧ್ಯದಲ್ಲಿ ಪ್ರೇಮಪತ್ರ ಓದುವುದು, ಬರೆಯುವುದು ಮಾಡುತ್ತಿದ್ದರೆ ಹೀಗಾಗುವುದು ಸಹಜವೇ. ಪ್ರೇಮ ಗುಟ್ಟಾಗಿತ್ತು. ಆ ಪ್ರೇಮಪತ್ರಗಳನ್ನು ಮತಾöರಾದರೂ ಓದಿಬಿಟ್ಟರೆ? ಎಂಬ ಭಯ ಶುರುವಾಯಿತು ಈ ಸಂಕೋಚ ಶೀಲ ಪ್ರೇಮಿಗಳಿಗೆ. ಆಗ ತಮ್ಮಿಬ್ಬರಿಗೆ ಮಾತ್ರವೇ ಅರ್ಥವಾಗುವ ಗೂಢಲಿಪಿಯೊಂದನ್ನು ಕಂಡುಹಿಡಿದರು, ಎಮ್ಮೆಸ್ಸೆನ್. ಆ ಪತ್ರಗಳು ಈಗಲೂ ಇವೆಯಂತೆ. ಇನ್ನೂ ಯಾರಿಗೂ ಅವುಗಳ ಗೂಢ ಬಿಡಿಸುವುದು ಸಾಧ್ಯವಾಗಿಲ್ಲವಂತೆ. ಸಾಧ್ಯವಾಗಿದ್ದರೆ ಯಾವುದಾದರೂ ಒಂದು ಯೂನಿವರ್ಸಿಟಿ ಈ ದಂಪತಿಗಳಿಗೆ ಒಂದು ಡಾಕ್ಟರೇಟ್ ದಯಪಾಲಿಸಬಹುದಿತ್ತೇನೋ! ಅಂತೂ ಈ ಪ್ರೇಮ, ಮದುವೆಯಲ್ಲಿ ಸುಖಾಂತವಾಯಿತು.
ಈ ಲೇಖನದ ಮಧ್ಯೆ ಇದನ್ನು ಬರೆಯಬೇಕಾಗಿರಲಿಲ್ಲ. ಆದರೆ ಲೇಖನಕ್ಕೆ ಒಂದಿಷ್ಟು ರೊಮ್ಯಾಂಟಿಕ್ ಟಚ್ ಇರಲಿ ಅಂತ ಬರೆದದ್ದಷ್ಟೆ.
ಎಮ್ಮೆಸ್ಸೆನ್ ಓದಿದ್ದು ಕನ್ನಡ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ. ಸೇರಿದ್ದು ಬ್ಯಾಂಕ್. ಮಾಡಿದ್ದು ಸಾಹಿತ್ಯ ವ್ಯವಸಾಯ. ವಿನೋದ ಸಾಹಿತ್ಯವೇ ಅವರನ್ನು ಆಕರ್ಷಿಸಿದ್ದು ಕನ್ನಡ ವಿನೋದ ಸಾಹಿತ್ಯದ ಸೌಭಾಗ್ಯ. ಎಮ್ಮೆಸ್ಸೆನ್ ಬರೆದರು… ಬರೆದರು… ಬಿಡುವೇ ಇಲ್ಲದಂತೆ ಬರೆದರು. ವಿಶ್ವ- ವಿಶಾಲೂ ಅವರು ಸೃಷ್ಟಿಸಿಕೊಂಡ ನಗೆ ಪಾತ್ರಗಳು. ಅವರು ಕನ್ನಡ ನಿಯತಕಾಲಿಕೆಗಳ ಡಾರ್ಲಿಂಗ್ ಆದರು. ಯಾಕೆಂದರೆ ಈಗ ಬೇಕೆಂದರೆ ಆಗಲೇ ನಗೆಲೇಖನಗಳನ್ನು, ನಾಟಕಗಳನ್ನು ಬರೆದು ಕೊಡುತ್ತಿದ್ದವರು ನರಸಿಂಹಮೂರ್ತಿ. ಅವರು ಎಷ್ಟು ಬರೆದರು ಅಂದರೆ ಅವರ 29ನೇ ವಯಸ್ಸಿಗೇ ಸಾವಿರದೆಂಟು ಪುಟಗಳ ಸಮಗ್ರ ನಗೆ ಸಾಹಿತ್ಯ ಪ್ರಕಟವಾಗಿಹೋಯಿತು!
ಆಮೇಲೆ ಎಮ್ಮೆಸ್ಸೆನ್ ಟಿ.ವಿ.ಧಾರಾವಾಹಿ ಚಿತ್ರಕತೆ, ಸಂಭಾಷಣೆಗಳ ಕಡೆ ಹೊರಳಿಕೊಂಡರು. ಕಂಡಕ್ಟರ್ ಕರಿಯಪ್ಪ, ಕ್ರೇಜಿ ಕರ್ನಲ್, ಪಾಪ ಪಾಂಡು ಮತ್ತು ಸಿಲ್ಲಿ ಲಲ್ಲಿ ಧಾರಾವಾಹಿಗಳು ಅವರನ್ನು ಜನಪ್ರಿಯತೆಯ ತುತ್ತತುದಿಗೆತ್ತಿ ನಿಲ್ಲಿಸಿದವು. ಆಮೇಲೆ ಬರೆದ ಪಾರ್ವತೀ ಪರಮೇಶ್ವರ ಮತ್ತು ಪಾಂಡುರಂಗ ವಿಠಲ ಧಾರಾವಾಹಿಗಳು ಒಟ್ಟು ಸುಮಾರು 3000 ಎಪಿಸೋಡುಗಳನ್ನು ಬರೆಸಿಕೊಂಡವು. ಇವುಗಳ ಜೊತೆಗೆ ಇನ್ನಿತರ ಹಲವಾರು ಧಾರಾವಾಹಿಗಳು, ಪತ್ರಿಕೆಗಳಲ್ಲಿ ಹಾಸ್ಯ ಲೇಖನಗಳು, ನಾಟಕಗಳು, ಸಿನಿಮಾ ಸಂಭಾಷಣೆಗಳು, ಕಾದಂಬರಿಗಳು… ಅದೆಷ್ಟು ಬರೆದರು ಅಂದರೆ ಭಾರತ ದೇಶದಲ್ಲೇ ಅವರದೊಂದು ದಾಖಲೆ. ಬೇರಾವ ಭಾಷೆಯಲ್ಲೂ ಯಾವುದೇ ಲೇಖಕ ಇಷ್ಟು ಕತೆಗಳನ್ನು ಬರೆದಂತಿಲ್ಲ. ಅಚ್ಚರಿಯೆಂದರೆ, ಇಷ್ಟೆಲ್ಲಾ ಬರೆದೂ ಎಮ್ಮೆಸ್ಸೆನ್ ಖಾಲಿಯಾಗಿಬಿಟ್ರಾ ಅಂತ ಈವರೆಗೆ ಯಾರೂ ಅಂದಿಲ್ಲ. ಮತ್ತೂಂದು ಮಾತು ಹೇಳಬೇಕು. ಸ್ಟೇಟ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಎಮ್ಮೆಸ್ಸೆನ್, ಸ್ವಯಂ ನಿವೃತ್ತಿ ಪಡೆದು ಬರವಣಿಗೆಗಾಗಿಯೇ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡರು. ನಡುನಡುವೆ ಹಾಸ್ಯ ಭಾಷಣಗಳಲ್ಲಿಯೂ ತೊಡಗಿಕೊಂಡರು. ಇದಕ್ಕೆ ಅವರು ಸಮಯವನ್ನು ಹೇಗೆ ಹೊಂದಿಸಿಕೊಂಡರೋ, ಈಗಲೂ ಅದು ಅಚ್ಚರಿ! ಯಾಕೆಂದರೆ ಎಲ್ಲರಿಗೂ ದಿನಕ್ಕೆ ಇಪ್ಪತ್ತನಾಲ್ಕೇ ಗಂಟೆ ತಾನೆ?
ಎಮ್ಮೆಸ್ಸೆನ್ ಈಗ ಎಪ್ಪತ್ತೈದಕ್ಕೆ ಬಂದಿದ್ದಾರೆ. ಅವರಿನ್ನೂ ಬರೆದು ದಣಿದಿಲ್ಲ. ಬರೆಯುತ್ತಲೇ ಇದ್ದಾರೆ. ಅವರ ಲೇಖನಿಯ ಮಸಿ ಆರದಿರಲಿ, ಅವರು ಕನ್ನಡಿಗರನ್ನು ನಗಿಸುತ್ತಾ, ನಗುತ್ತಾ ನೂರ್ಕಾಲ ಬಾಳಲಿ. ಅವರಿಗೆ ನೂರಾರು ಪ್ರಶಸ್ತಿ, ಪುರಸ್ಕಾರ, ಗೌರವಗಳು ಬಂದಿವೆ, ಬರಬೇಕಾದವೂ ಇವೆ. ಬರಬೇಕಾದವು ಬೇಗ ಬರಲಿ ಎಂದು ಮನಸಾ ಹಾರೈಸೋಣ.
-ಪ್ರೊ. ಕೃಷ್ಣೇಗೌಡ, ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.