ಚೊಕ್ಕಾಡಿಯೆಂಬ ಸವರ್ಣದೀರ್ಘ ಸಂಧಿ
Team Udayavani, Mar 10, 2019, 12:30 AM IST
ನವೋದಯ ಸಾಹಿತ್ಯ ಸಂದರ್ಭದಲ್ಲಿ ಹಿರಿಯ ಲೇಖಕರಾದ ಮಾಸ್ತಿಯವರನ್ನು ಅವರ ಸರೀಕರು ಪ್ರೀತಿಯಿಂದ ಅಣ್ಣ ಮಾಸ್ತಿ ಎಂದು ಕರೆಯುತ್ತಿದ್ದರಂತೆ. ಮಾಸ್ತಿಯವರ ಬಗ್ಗೆ ಬೇಂದ್ರೆ, ಕುವೆಂಪು, ಪುತಿನ, ಅನಕೃ- ಹೀಗೆ ವಿಭಿನ್ನ ಮನೋಧರ್ಮ, ವ್ಯಕ್ತಿತ್ವಗಳ ಅನೇಕ ಲೇಖಕರಿಗೆ ಅಪಾರವಾದ ಗೌರವಾದರ. ಅವರ ನಡುವೆ ವಾದವಿವಾದಗಳು, ಭಿನ್ನಾಭಿಪ್ರಾಯಗಳು ಇರಲಿಲ್ಲವೆಂದಲ್ಲ. ಶೂದ್ರತಪಸ್ವಿ ಬಗ್ಗೆ ಕುವೆಂಪು ಮತ್ತು ಮಾಸ್ತಿಯವರ ನಡುವೆ ನಡೆದ ಸಾಹಿತ್ಯ ವಾಗ್ವಾದ ಜನಜನಿತವಾಗಿರುವಂಥದ್ದು. ಕೊನೆಕೊನೆಗೆ ಮಾಸ್ತಿ ಮತ್ತು ಬೇಂದ್ರೆಯವರ ನಡುವೆಯು ಇರಸುಮುರುಸು ಉಂಟಾಗಿತ್ತು ಎಂದು ಕೇಳಿಬಲ್ಲೆ. ಅನಕೃ ಮಾಸ್ತಿಯವರನ್ನು ಬಹಿರಂಗವಾಗಿಯೇ ಟೀಕಿಸಿದ್ದುಂಟು. ಮಾಸ್ತಿಯವರ ರಾಮನವಮಿ ಪದ್ಯವನ್ನು ಮನಸಾರೆ ಮೆಚ್ಚಿಯೂ ಅಡಿಗರು ತಮ್ಮ ಮಾಸ್ತಿಯವರ ಬಗ್ಗೆ ಬರೆದ ಪದ್ಯದಲ್ಲಿ ಅರ್ಥವಾಗುವಂತೆ ಬರೆದರೆ ಸಾಲದು, ಅರ್ಥಪೂರ್ಣವಾಗಿ ಬರೆಯಬೇಕೆಂದು ಪರೋಕ್ಷವಾಗಿ ಮಾಸ್ತಿ ಮಾರ್ಗವನ್ನು ಕಿಚಾಯಿಸಿದ್ದುಂಟು. ಇಷ್ಟಾಗಿಯೂ ಎಲ್ಲ ಹಿರಿಯ ಲೇಖಕರಿಗೂ ಮಾಸ್ತಿ ಒಂದು ಆದರ್ಶ. ಮಾಸ್ತಿ ಒಂದು ಕೈಗಂಬ; ಮಾಸ್ತಿ ಅವರ ಅಕ್ಕರೆಯ ಹಿರಿಯಣ್ಣ!
ನಮ್ಮ ಕಾಲದಲ್ಲಿ ನಾನು ಅಣ್ಣ ಎಂದು ಕರೆಯುವುದು ಕವಿ, ಕತೆಗಾರ, ವಿಮರ್ಶಕ, ಭಾವಗೀತಾಕವಿ, ಪ್ರಕಾಶಕ, ಸಂಘಟಕ ಸುಬ್ರಾಯ ಚೊಕ್ಕಾಡಿಯನ್ನು! 1940ರಲ್ಲಿ ಜನಿಸಿದ ಚೊಕ್ಕಾಡಿಯವರ ತಂದೆ ಪ್ರಸಿದ್ಧ ಯಕ್ಷಗಾನ ಕಲಾವಿದ ಅಜ್ಜನಗದ್ದೆ ಗಣಪಯ್ಯ. ಹೀಗಾಗಿ, ಚೊಕ್ಕಾಡಿಗೆ ಸಾಹಿತ್ಯ, ಸಂಗೀತದಲ್ಲಿ ಅಪಾರವಾದ ಒಲವು. ಗಣಪಯ್ಯನವರು ಕನ್ನಡ ಪುಸ್ತಕಗಳನ್ನು ಹೆಗಲ ಚೀಲದಲ್ಲಿ ಹಾಕಿಕೊಂಡು ಮನೆಮನೆಗೆ ಹೋಗಿ ಮಾರಾಟ ಮಾಡುತ್ತಿದ್ದರಂತೆ. ಎಳೆವಯಸ್ಸಿನಲ್ಲಿಯೇ ಚೊಕ್ಕಾಡಿ ತಮ್ಮ ತಂದೆಗೆ ಪುಸ್ತಕ ಮಾರಾಟದಲ್ಲಿ ಸಾತುಕೊಟ್ಟವರು. ಕೂಡುಕುಟುಂಬ. ಬಡತನ. ತಮ್ಮ ತಂದೆಯವರ ಅನಾರೋಗ್ಯದ ಕಾರಣ ಕಿರುಹರೆಯದಲ್ಲೇ ಸಂಸಾರದ ನೊಗಹೊರಬೇಕಾದ ಅನಿವಾರ್ಯ ಸ್ಥಿತಿ. ಈ ಕಾರಣಗಳಿಂದ ಚೊಕ್ಕಾಡಿಯವರಿಗೆ ಕಾಲೇಜು ಅಭ್ಯಾಸ ಮಾಡಲಿಕ್ಕಾಗಲಿಲ್ಲ. ಪ್ರೈಮರಿ ಶಾಲೆಯಲ್ಲಿ ಅಧ್ಯಾಪಕರಾಗಿ ಸಂಸಾರದ ಚುಕ್ಕಾಣಿ ಹಿಡಿದರು. ಸಾಹಿತ್ಯದ ಅಧ್ಯಯನ ಅವರೇ ಸ್ವಯಂಭುವಾಗಿ ರೂಪಿಸಿ ಬೆಳೆಸಿಕೊಂಡಿದ್ದು. ಚಿಕ್ಕಂದಿನಲ್ಲೇ ಕಾವ್ಯರಚನೆಯಲ್ಲೂ ಅವರು ತೊಡಗಿದರು! ಅಡಿಗರ ಚಂಡೆಮದ್ದಲೆ ಸಂಗ್ರಹ ಅವರ ಕೈಗೆ ಬಂದದ್ದು ಅವರ ಕಾವ್ಯ ಜೀವನದಲ್ಲಿ ಹೊಸ ಅಧ್ಯಾಯವನ್ನೇ ತೆರೆಯಿತು. ಕಾಮವನ್ನು ನಿಕಷ ಮಾಡಿಕೊಂಡು ತೀವ್ರವಾದ ಪ್ಯಾಸನೇಟ್ ಕವನಗಳನ್ನು ಬರೆದರು. ನಾನು ಅವರ ಕಾವ್ಯದ ಕೇಂದ್ರವಾಯಿತು. ತನ್ನ ಸುತ್ತಲೇ ಜಗತ್ತು ಸುತ್ತುತ್ತಿದೆ ಎಂದು ಭಾವಿಸಿದ ಆತ್ಮಕೇಂದ್ರಿತ ದಿನಗಳವು. ಮುಕ್ತಹಂಸ ಎಂಬುದು ಅವರ ಕಾವ್ಯನಾಮ. 1967ರಲ್ಲಿ ಲಕ್ಷ್ಮಿ ಅವರು ಚೊಕ್ಕಾಡಿಯ ಕೈಹಿಡಿದು ತುಂಬಿದ ಮನೆಗೆ ಬಂದರು. ಮಾಸ್ತಿಯವರ ರಾಮನವಮಿ ಪದ್ಯದಲ್ಲಿ ಆಗುವಂತೆ ಸುಬ್ರಾಯ ಮತ್ತು ಲಕ್ಷ್ಮಿ ಅವರದ್ದು ಮೌನದಾಂಪತ್ಯ. ಪ್ರೀತಿಗೆ ಮಾತಿನ ಹಂಗೆಲ್ಲಿದೆ ಎನ್ನುವ ಸದ್ಗ ೃಹಿಣಿ ಲಕ್ಷ್ಮಿ. ಪುಂಖಾನುಪುಂಖವಾಗಿ ಚೊಕ್ಕಾಡಿಯವರ ಕವಿತೆಗಳು ಗೋಕುಲ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ದಿನಗಳವು. ಜೊತೆಜೊತೆಯಲ್ಲೇ ತಿರುಮಲೇಶ, ದೊಡ್ಡರಂಗೇಗೌಡ, ಜಯಸುದರ್ಶನ, ನಾನು ಗೋಕುಲದ ಕಾವ್ಯಕ್ಕೆ ಮೀಸಲಾದ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದು ನನಗೆ ಈಗ ನೆನಪಾಗುತ್ತಿದೆ. ಹೀಗೆ, ತಮ್ಮ ಕಾವ್ಯದ ಮೂಲಕ ಚೊಕ್ಕಾಡಿ ಮೊದಲು ನನ್ನ ಮನಸ್ಸನ್ನು ಪ್ರವೇಶ ಮಾಡಿದ್ದು.
ಚೊಕ್ಕಾಡಿಯವರದ್ದು ಮೊದಲಿನಿಂದಲೂ ವಿಸ್ತರಿಸಿಕೊಳ್ಳುವ ಸ್ವಭಾವ. ಅವರ ಊರಿನ ಪಕ್ಕದಲ್ಲೇ ಗಗನವ್ಯಾಪಿಯಾಗಿ ನಿಂತಿದ್ದ ಬಂಟಮಲೆ ಪರ್ವತ ಪ್ರಕೃತಿ ಮತ್ತು ಜೀವಜಗತ್ತನ್ನು ಸಂಪೂರ್ಣವಾಗಿ ಒಳಗೊಂಡಂತೆ ಪ್ರಕೃತಿ ಮತ್ತು ಜೀವಜಗತ್ತನ್ನು ತಮ್ಮ ಅಂತರಂಗದಲ್ಲಿ ಒಳಗೊಳ್ಳುವ ಅದಮ್ಯ ತುಡಿತ ಚೊಕ್ಕಾಡಿಗೆ. ಇಂಥವರು ಬಹಳ ಕಾಲ ಸ್ವಯಂಲೋಲುಪ್ತಿಯಲ್ಲಿ ಉಳಿಯಲಾರರು. ಚೊಕ್ಕಾಡಿಯವರ ಕಥೆ-ಕವಿತೆಗಳು ಲೋಕಸಮಸ್ತವನ್ನೂ ತನ್ನಲ್ಲಿ ಒಳಗೊಳ್ಳತೊಡಗಿದ್ದು ಅವರ ಸಾಹಿತ್ಯಕ ಬದುಕಿನ ಎರಡನೆಯ ಘಟ್ಟ. ತಾನು ಬೆಳೆಯುವುದು ಮಾತ್ರವಲ್ಲ ತನ್ನ ಗೆಳೆಯರೂ ಸಾಹಿತ್ಯಾಸಕ್ತ ಕಿರಿಯರೂ ಬೆಳೆಯಬೇಕೆಂಬ ಬಯಕೆಯಿಂದ ತಮ್ಮ ಪುಟ್ಟ ಹಳ್ಳಿಯಲ್ಲೇ ಸಾಹಿತ್ಯಾಸಕ್ತರನ್ನು ಸಂಘಟಿಸಿದರು. ತಮ್ಮದೇ ವಸಂತಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದರು. ಸಾಲಸೋಲ ಮಾಡಿ ಬೇರೆ ಲೇಖಕರ ಪುಸ್ತಕಗಳನ್ನೂ ಪ್ರಕಟಿಸಿದರು. ಲಂಕೇಶರ ನನ್ನ ತಂಗಿಗೊಂದು ಗಂಡು ಕೊಡಿ ಎಂಬ ಸುಪ್ರಸಿದ್ಧ ನಾಟಕವನ್ನು ಚೊಕ್ಕಾಡಿ ತಮ್ಮ ವಸಂತಪ್ರಕಾಶನದ ಮೂಲಕ ಪ್ರಕಟಪಡಿಸಿದರು ಎನ್ನುವುದು ಹೊಸ ಪೀಳಿಗೆಗೆ ಪ್ರಾಯಃ ಗೊತ್ತಿರಲಿಕ್ಕಿಲ್ಲ. ಮುಂದೆ ಪ್ರಕಾಶನದಿಂದ ಕೈಸುಟ್ಟುಕೊಂಡು ಪ್ರಕಟಣ ಸಾಹಸವನ್ನು ಅವರು ಕೈಬಿಡಬೇಕಾಯಿತು.
ಗೆಳೆಯ ಜಿ. ಎಸ್. ಉಬರಡ್ಕ ಮೊದಲಾದವರನ್ನೂ, ತಮಗಿಂತ ಕಿರಿಯರಾದ ದೊಡ್ಡ ತರುಣ ಪಡೆಯನ್ನೂ ಕಟ್ಟಿಕೊಂಡು ಚೊಕ್ಕಾಡಿ ಸುಮನಸ ಎಂಬ ವಿಚಾರ ವೇದಿಕೆಯನ್ನು ಪ್ರಾರಂಭಿಸಿದರು. ನಾಟಕ, ಸಾಹಿತ್ಯ, ಜಿಜ್ಞಾಸೆ, ವಿಮರ್ಶೆ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಅನೇಕ ಪ್ರತಿಭಾವಂತ ಎಳೆಯರನ್ನು ಬೆಳೆಸಿದರು. ಈಗ ಅವರಲ್ಲಿ ಅನೇಕರು ಕನ್ನಡದ ಬಹುಮುಖ್ಯ ಲೇಖಕರಾಗಿ ಬೆಳೆದುನಿಂತಿದ್ದಾರೆ. ರಾಮಚಂದ್ರದೇವ, ಜಿ.ಎಸ್.ಉಬರಡ್ಕ, ಶ್ರೀಧರಾರಾಧ್ಯ, ಕಿಕ್ಕೇರಿ ನಾರಾಯಣ, ಎಸ್. ಅರ್. ವಿಜಯಶಂಕರ, ಕಂಜರ್ಪಣೆ ಸೋದರರು, ಚೊಕ್ಕಾಡಿ ಸೋದರರು ಅವರಲ್ಲಿ ಮುಖ್ಯರು.
ನನ್ನ ಪರಿವೃತ್ತ ಪ್ರಕಟವಾಗುವ ವೇಳೆಗಾಗಲೇ (1967) ಚೊಕ್ಕಾಡಿ, ತಿರುಮಲೇಶ್, ಆಲನಹಳ್ಳಿ ಕೃಷ್ಣ, ಬಿ. ಆರ್. ಲಕ್ಷ್ಮಣರಾವ್, ದೊರಂಗೌ ಮೊದಲಾದವರು ಯುವಕರಲ್ಲಿ ಮುಂಚೂಣಿಯ ಲೇಖಕರಾಗಿದ್ದರು. ಚೊಕ್ಕಾಡಿಯ ಕಥೆ-ಕವಿತೆಗಳು ಸಾಕ್ಷಿ, ಲಹರಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದಾಗ ನಾನು ಅವುಗಳ ತೀವ್ರ ಅಭ್ಯಾಸದಲ್ಲಿ ತೊಡಗುತ್ತಿದ್ದೆ. ಪರಸ್ಪರ ಪುಸ್ತಕಗಳನ್ನು ಕಳಿಸುವ ಮೂಲಕ ನಮ್ಮ ನಡುವೆ ಪತ್ರಸಂವಾದ ಪ್ರಾರಂಭವಾಯಿತು. ಅಮೂರ್ತಧ್ವನಿಯಾಗಿದ್ದ ಚೊಕ್ಕಾಡಿ ರಕ್ತಮಾಂಸಗಳ ವ್ಯಕ್ತಿಯಾಗಿ ನಿಧಾನಕ್ಕೆ ನನ್ನನ್ನು ಆಕ್ರಮಿಸಿದರು. ಅವರಿಗೆ ನಾನು “ಅಗ್ರಜ’ ಎನ್ನ ತೊಡಗಿದ್ದು ಆ ದಿನಗಳಲ್ಲಿ.
ಚೊಕ್ಕಾಡಿಯವರ ಕವಿತೆ, ಕಥೆಗಳೆಂದರೆ ನನಗೆ ಮೊದಲಿನಿಂದಲೂ ಅದೇನೋ ಮೋಹ. ಅವರ ಕವಿತೆಗಳಂತೂ ಮೌನವನ್ನು ತಂಬೂರಿಯು ಮಿಡಿವಂತೆ ಮಿಡಿಯುವ ಕವಿತೆಗಳು. ಲಯದ ಸಹಜ ಹಾಸುಹೊಕ್ಕು ಅವರ ಕವಿತೆಗಳಲ್ಲಿ ಮೋಹಕವಾಗಿ ಹೆಣೆದುಕೊಳ್ಳುತ್ತಿತ್ತು. ಮರಗಳು, ಹಕ್ಕಿಗಳು, ಅವರ ಕಾವ್ಯದ ಕೇಂದ್ರ ಪ್ರತಿಮೆಗಳಾಗಿದ್ದವು. ಪ್ರತಿಮಾಮಾರ್ಗದಲ್ಲಿ ಅವರು ಬರೆಯುತ್ತಿದ್ದ ಕವನಗಳು ಅವರಿಗಿಂತ ಸ್ವಲ್ಪ$ಎಳೆಪ್ರಾಯದ ನಮ್ಮಂಥವರನ್ನು ಅಯಸ್ಕಾಂತದಂತೆ ಆಕರ್ಷಿಸುತ್ತಿದ್ದವು.
ಸಂಸಾರ ಮತ್ತು ಲೋಕ ಸಂಸಾರ ಎರಡೂ ಚೊಕ್ಕಾಡಿಯವರ ಕೊರಳಿಗೆ ಸುತ್ತಿಕೊಂಡಿದ್ದವು. ಬಡತನದ ಬವಣೆಯನ್ನು ಅವರು ಲೆಕ್ಕಿಸಲೇ ಇಲ್ಲ. ತಮ್ಮಂದಿರನ್ನು ಬೆಳೆಸಿದರು. ಗೆಳೆಯರನ್ನು ಪ್ರೋತ್ಸಾಹಿಸಿದರು. ಕಿರಿಯರನ್ನು ಗಂಭೀರವಾಗಿ ವಿಚಾರಮಾಡಲು ಹಚ್ಚಿದರು. ಓರ್ವ ಪ್ರ„ಮರಿಶಾಲೆಯ ಅಧ್ಯಾಪಕ ಇವೆಲ್ಲವನ್ನು ಮಾಡಿದರು. ಚೊಕ್ಕಾಡಿಯವರ ಅಂತರಂಗದ ಬಲ ಅದು. ಪ್ರೀತಿ ಅದರ ಸಹಜಸ್ಥಾಯಿ ಸ್ವಭಾವವಾಗಿತ್ತು.
ಚೊಕ್ಕಾಡಿ ನನಗೆ ತೀರ ನಿಕಟವಾದದ್ದು ಅವರು ಭಾವಗೀತೆಗಳನ್ನು ರಚಿಸ ತೊಡಗಿದ ಮೇಲೆ. ಪುತ್ತೂರು ನರಸಿಂಹ ನಾಯಕರಿಗಾಗಿ ಸಿ. ಅಶ್ವತ್ಥ್ ಗಜಲ್ ಮಾದರಿಯ ಒಂದು ಧ್ವನಿಸುರುಳಿ ನಿರ್ಮಿಸಲು ಸಿದ್ಧರಾದ ದಿನವದು. ಗಜಲ್‌ಗಳನ್ನು ಯಾರಿಂದ ಬರೆಸಬೇಕೆಂದು ನಾವೆಲ್ಲ ಚರ್ಚೆ ಮಾಡಿದೆವು. ಕೊನೆಗೆ ಚೊಕ್ಕಾಡಿ ಮತ್ತು ಡುಂಡಿರಾಜ್ ಗಜಲ್ಲುಗಳನ್ನು ಬರೆಯಬೇಕೆಂದು ನಿಶ್ಚಯವಾಯಿತು. ಇಬ್ಬರೂ ಕವಿಗಳು ಬೆಂಗಳೂರಿಗೆ ಬಂದರು. ಯಥಾಪ್ರಕಾರ ಮಿನರ್ವಾ ಕಾಮತ್ತಲ್ಲಿ ನಾವೆಲ್ಲ ಸೇರಿದೆವು. ಚೊಕ್ಕಾಡಿ, ಡುಂಡಿ, ಬಿ. ಆರ್. ಎಲ್., ವ್ಯಾಸರಾವ್, ದೊರಂಗೌ ಮೊದಲಾಗಿ ಅಶ್ವತ್ಥರಿಗೆ ಪ್ರಿಯರಾಗಿದ್ದ ಎಲ್ಲ ಕವಿಗಳೂ ಕಾಮತ್ತಲ್ಲಿ ಸೇರಿದ್ದೆವು. ಯಾರದ್ದೇ ಧ್ವನಿ ಸುರುಳಿಯಾಗಲಿ ಅಶ್ವತ್ಥರೊಂದಿಗೆ ನಾವೆಲ್ಲ ಇದ್ದೇ ಇರುತ್ತಿದ್ದೆವು. ಕೆಲವೊಮ್ಮೆ ಹಿರಿಯರಾದ ಜಿಎಸ್‌ಎಸ್ ಅವರೂ ಆಗಮಿಸಿ ಹೊಸ ಸಂಯೋಜನೆಗಳನ್ನು ಕೇಳಿ ಹೋಗುತ್ತ ಇದ್ದರು.
ನನಗೆ ಆ ದಿನ ಸ್ಪಷ್ಟವಾಗಿ ನೆನಪಿದೆ. ಚೊಕ್ಕಾಡಿಯವರ ಮುನಿಸು ತರವೇ ಮುಗುದೆ, ಸಂಜೆಯಾ ರಾಗಕೆ ಮೊದಲಾದ ಗೀತೆಗಳನ್ನು ತಮ್ಮ ಸುತ್ತಲೂ ಹರಡಿಕೊಂಡು ಅಶ್ವತ್ಥ ಕೂತಿದ್ದಾರೆ. ಎಲ್ಲರಿಗೂ ಕುತೂಹಲ. ಅಶ್ವತ್ಥ್ ಈ ಹೊಸ ಬಗೆಯ ಗಜಲುಗಳಿಗೆ ಹೇಗೆ ರಾಗಸಂಯೋಜನೆ ಮಾಡುವರೆಂದು! ಅಶ್ವತ್ಥ್ ಒಂದು ಕವಿತೆ ತಮ್ಮ ಹಾರ್ಮೋನಿಯಂ ಮೇಲೆ ಇರಿಸಿಕೊಂಡು ಸ್ವಲ್ಪ$ಹೊತ್ತು ಏನೋ ಗುನುಗುನಿಸುತ್ತಾರೆ. ಅದಕ್ಕೆ ತಕ್ಕ ರಾಗದ ಉಠಾವ್ ಪ್ರಸಾದ್ ತಮ್ಮ ಮ್ಯಾಂಡೊಲಿನ್ ವಾದ್ಯದಿಂದ ಕೊಡುತ್ತಾರೆ. ಅಶ್ವತ್ಥ್ “ಬಾಲಿ! ಏನಾದರೂ ಹೊಸ ರಿದಮ್ ಕೊಡಿ’ ಎಂದು ಬಾಲಿಯವರ ಮುಖವನ್ನು ನೋಡುತ್ತಾರೆ.
ಆಹಾ! ನಿಧಾನಕ್ಕೆ ಕವಿತೆಗೆ ಹಾಡಿನ ಆಧಾರ ಪಲುಕು ದಕ್ಕುತ್ತಿದೆ. ಅಶ್ವತ್ಥ್ ಹಾಡತೊಡಗುತ್ತಾರೆ. ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ! ಮುಂದೆ ಕುಳಿತಿರುವ ನಾಯಕರ ಮುಖ ಅರಳ ತೊಡಗುತ್ತದೆ. ಅಶ್ವತ್ಥ್ ಮತ್ತೆ ಮತ್ತೆ ಪಲ್ಲವಿ ಹಾಡಿ ಅದನ್ನು ಗಟ್ಟಿ ಮಾಡುತ್ತಾರೆ. ಕೊನೆಯ ನಿಲುಗಡೆ ಸ್ವಲ್ಪ ಬೇರೆ ಆಗಲಿ. ಅದನ್ನೆಲ್ಲೆಲ್ಲೋ ಕೇಳಿದಂತಿದೆ ಎಂದು ಅಶ್ವತ್ಥರ ಗೆಳೆಯ ಚಿಂತಾಮಣಿ ಅನ್ನುತ್ತಾರೆ. ಚಿಂತಾಮಣಿಯ ಅಭಿಪ್ರಾಯವೆಂದರೆ ಅಶ್ವತ್ಥರಿಗೆ ವೇದವಾಕ್ಯ. ಮೊದಲು ರೇಗಿ, “ಅದು ಅಷ್ಟೇ ಕಣ್ರೀ’ ಎಂದು ಗುಡುಗುತ್ತಾರೆ. ಸ್ವಲ್ಪ$ಹೊತ್ತು ಅಸಹನೀಯವಾದ ಮೌನ. ಈ ದೂರ್ವಾಸ ಮುನಿ ಮತ್ತೇನು ರಂಪಮಾಡುವರೋ ಎಂದು. “ಇನ್ನೊಮ್ಮೆ ಪ್ರಯತ್ನಿಸಿ’ ಎನ್ನುತ್ತಾರೆ ಚೊಕ್ಕಾಡಿ ಮೆಲುದನಿಯಲ್ಲಿ. ಅಶ್ವತ್ಥ್ ಎದ್ದು ಶತಪಥ ಹಾಕಿ ಮತ್ತೆ ರಪ್ಪನೆ ಹಾರ್ಮೋನಿಯಂ ಆಕ್ರಮಿಸುತ್ತಾರೆ. ನೋಡಿ ಹೀಗಾದರೆ ಹೇಗೆ ಎಂದು ಮತ್ತೆ ಪಲ್ಲವಿ ಗುನುಗುತ್ತಾರೆ. “ಆಹಾ! ಈಗ ಚೆನ್ನಾಗಿದೆ. ಹೊಸ ಮುರಿವು ಕಾಣುತ್ತಾ ಇದೆ’ ಎನ್ನುತ್ತಾರೆ ಚಿಂತಾಮಣಿ. ಇಡೀ ದಿನ “ಮುನಿಸು ತರವೇ’ ಹಾಡಿನ ಗುಂಗು. ಸಂಜೆಯ ವೇಳೆಗೆ ಹಾಡಿನ ಚರಣಗಳೂ ನಾದದ ಜೀವ ಕಟ್ಟಿಕೊಂಡು ಅಪೂರ್ವವಾದ ಒಂದು ಸಂಯೋಜನೆ ಒಂದು ಮಟ್ಟದಲ್ಲಿ ಪೂರ್ಣಗೊಳ್ಳುತ್ತದೆ. ಒಂದು ಮಟ್ಟದಲ್ಲಿ. ಈ ಅಶ್ವತ್ಥ್ ಅದಕ್ಕೆ ಇನ್ನೂ ಏನೇನು ಸೂಕ್ಷ್ಮಗಳನ್ನು ಮುಂದಿನ ದಿನಗಳಲ್ಲಿ ತರಲಿದ್ದಾರೋ! ಸಂಜೆ ನಾನು ಚೊಕ್ಕಾಡಿ ಸ್ವಲ್ಪ ಈ ಬಿಗುವಿನಿಂದ ಬಿಡುಗಡೆ ಹೊಂದಲು ಕೋಣೆಯಿಂದ ಹೊರಗೆ ಬರುತ್ತೇವೆ. “ಈ ಮನುಷ್ಯ ಅದ್ಭುತ ಕಣ್ರೀ ಮೂರ್ತಿ’ ಎಂದು ಚೊಕ್ಕಾಡಿ ಉದ್ಗರಿಸುತ್ತಾರೆ.
ಚೊಕ್ಕಾಡಿ ರಚಿಸಿದ ಮುನಿಸು ತರವೇ, ಸಂಜೆಯ ರಾಗಕೆ ಹಾಡಾಗಿ ಧ್ವನಿಸುರುಳಿಗೆ ಬಂದು ಈಗ ದಶಕಗಳೇ ಕಳೆದಿವೆ. ನರಸಿಂಹನಾಯಕರ ಧ್ವನಿಯಲ್ಲಿ ಆ ಹಾಡುಗಳನ್ನು ಕೇಳಿದರೆ ಈಗಲೂ ಮನಸ್ಸು ಮೇಣದ ಹಾಗೆ ಕರಗುತ್ತದೆ. ಒಳ್ಳೆಯ ಕವಿ. ಒಳ್ಳೆಯ ರಾಗಸಂಯೋಜನೆ. ಒಳ್ಳೆಯ ಗಾಯಕ. ಮೂರೂ ಒಟ್ಟಾದರೆ ಎಂಥ ಸೊಗಸಾದ ಹಾಡು ಹುಟ್ಟಬಹುದೆಂಬುದಕ್ಕೆ ಈ ಎರಡು ಹಾಡುಗಳು ಪ್ರತ್ಯಕ್ಷ ಉದಾಹರಣೆಗಳಾಗಿವೆ.
“ನನ್ನ ಬರವಣಿಗೆಯು ಸುತ್ತಲಿನ ಸಮಾಜದೊಂದಿಗೆ ಸಂವಾದ ನಡೆಸುವ ಸಾಧನವಾಗಬೇಕು ಎನ್ನುವ ಕನಸನ್ನು ನಾನು ಕಂಡೆ. ಸಾಹಿತ್ಯದ ಅಧ್ಯಯನವು ನಮ್ಮ ನಡೆ-ನುಡಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ನಾನು ಭಾವಿಸಿದ್ದೆ. ಆದರೆ ನನಗೆ ನಿರಾಸೆ ಕವಿದುಕೊಂಡಿದೆ. ನಮ್ಮ ಸಾಹಿತ್ಯ ಲೋಕದಲ್ಲೂ ಬೇರೆಡೆಯಂತೆಯೇ ಕಪಟ, ಮೋಸ, ವಂಚನೆ, ವಶೀಲಿ ಸ್ಥಾನಮಾನಗಳ ಅಸಹಜ ಹಂಬಲ ಚಿಲ್ಲರೆ ರಾಜಕೀಯ ಮೊದಲಾದುವನ್ನು ಕಂಡು ದಿಗ್ಭ್ರಮೆಗೊಂಡಿದ್ದೇನೆ’ ಎನ್ನುತ್ತಾರೆ ಚೊಕ್ಕಾಡಿ. ಅವರ ನೇರ ಮಾತಿಗೆ ಈ ಸಾಲುಗಳು ಸಾಕ್ಷಿ ನುಡಿಯುವಂತಿವೆ. ಹಾಗಂತ ಮನಸ್ಸನ್ನು ಎಂದೂ ಕಹಿಮಾಡಿಕೊಂಡವರಲ್ಲ ಪಕ್ವಮನಸ್ಸಿನ ಈ ಹಿರಿಯ ಕವಿ.
ಗಂಗೋತ್ರಿಯ ತುಂಬಾ ತುಂಬಾ ಹಕ್ಕಿಗಳ್ಳೋ ಹಕ್ಕಿಗಳು
ಹೊಸತು ಹೂವು ಮೂಡಿದಂತೆ ಮರಗಳಲ್ಲಿ ಪೊದೆಗಳಲ್ಲಿ
ಕಟ್ಟಡಗಳ ಮಾಡಿನಲ್ಲಿ ಗಿಡಕೆ ಜೋತ ಗೂಡಿನಲ್ಲಿ
ಚಿಗಿತ ಹುಲ್ಲ ಕೌದಿಯಲ್ಲಿ ಆಕಾಶದ ಹಾದಿಯಲ್ಲಿ
ಗಂಗೋತ್ರಿಯ ತುಂಬ ತುಂಬ ಹಕ್ಕಿಗಳ್ಳೋ ಹಕ್ಕಿಗಳು
ಚೊಕ್ಕಾಡಿಯವರ ಈ ಕವಿತೆ ನನಗೆ ಅಚ್ಚುಮೆಚ್ಚು. ಅದರ ಬಗ್ಗೆ ಲೇಖನವನ್ನೇ ಬರೆದಿದ್ದೇನೆ. ಚೊಕ್ಕಾಡಿ ಹೇಳುವಂತೆ ಕಾವ್ಯದಲ್ಲಿ ಬರುವ ಮೌನದ ಸ್ವರೂಪವೆಂದರೆ ಅದು ಸಂಭ್ರಮ-ಗದ್ದಲಗಳ ನಡುವೆಯೂ ತಾನು ಒಂಟಿ ಎನಿಸುವ ಮೌನ. ಗಂಗೋತ್ರಿಯ ಹಕ್ಕಿಗಳು ಅಂಥ ಮೌನದ ಸ್ವರೂಪವನ್ನು ಕಡೆಯುತ್ತ ಇದೆ. ಸಂತೆಮನೆ ಎನ್ನುವ ಚೊಕ್ಕಾಡಿಯವರ ಕಾದಂಬರಿ ಇದೇ ಭಾವದ ಗದ್ಯಾತ್ಮಕ ಶೋಧನೆ ಎಂದು ನಾನು ಭಾವಿಸುತ್ತೇನೆ. ಚೊಕ್ಕಾಡಿಯವರ ಕಾವ್ಯ ವಿಮರ್ಶೆ ನನಗೆ ಬಹು ಮೆಚ್ಚು. ಅದು ಮುಲಾಜಿಗೆ ಎಂದೂ ಒಳಗಾಗುವುದಿಲ್ಲ. ನಿಷ್ಠುರವಾದ ಆದರೆ ಸಹೃದಯತೆ ಕಳೆದುಕೊಳ್ಳದ ಬಿಚ್ಚು ನುಡಿ ಅದು. ಅವರು ಒಂದು ಕವಿತೆಯನ್ನು ಒಪ್ಪಿದರೆಂದರೆ ಮುಗಿಯಿತು. ಅದನ್ನು ಲೋಕವೂ ಒಪ್ಪಿಯೇ ಒಪ್ಪುವುದು ಎಂದು ಲೇಖಕ ಭರವಸೆ ತಾಳಬಹುದು. ಚೊಕ್ಕಾಡಿ ಊಹುಂ ಎಂದು ತಲೆಕೊಡವಿದ ಕವಿತೆಗಳು ಎಷ್ಟೇ ತಿಪ್ಪರುಲಾಗಹಾಕಿದರೂ ನೆಲಬಿಟ್ಟು ಮೇಲೇರಲಾರವು.
ಪರಿಶುದ್ಧ ಚಾರಿತ್ರ್ಯದ ಹೋರಾಟ ಚೊಕ್ಕಾಡಿಯವರ ಸ್ನೇಹಮಯ ವ್ಯಕ್ತಿತ್ವದ ಪ್ರಧಾನ ರೇಖೆ. ಅದಕ್ಕೇ ನಾನು ತಮಾಷೆಗೆ ಹೇಳುವುದುಂಟು: ಚೊಕ್ಕ + ಅಡಿ = ಚೊಕ್ಕಾಡಿ. ಹೀಗಾಗಿ ಅವರು ಕನ್ನಡದ ಕಾವ್ಯಲೋಕದ ಸವರ್ಣದೀರ್ಘಸಂಧಿ!
ಎಚ್. ಎಸ್. ವೆಂಕಟೇಶಮೂರ್ತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.