ಯಕ್ಷಗಾನದ ಭೀಮಸೇನ


Team Udayavani, Mar 10, 2019, 12:30 AM IST

s-2.jpg

ಇತ್ತೀಚೆಗೆ ನಿಧನರಾದ ಜಲವಳ್ಳಿ ವೆಂಕಟೇಶರಾಯರು ಯಕ್ಷಗಾನ ಕ್ಷೇತ್ರದಲ್ಲಿ ಭೀಮಸೇನನಂತೆ ನಡೆದಾಡಿದವರು !

ಜಲವಳ್ಳಿ ವೆಂಕಟೇಶರಾಯರು ಅಭಿಜಾತ ಪ್ರತಿಭೆ. ಉತ್ತರಕನ್ನಡದ ಕಲಾವಿದರಲ್ಲಿ “ಹೇಗೆ ಯಕ್ಷಗಾನ ಕಲಿತಿರಿ?’ ಎಂದು ಕೇಳಿದರೆ “ಹೇಗೆನ್ನಲಿ, ಹೀಗೇ ಕಲಿತೆ’ ಅನ್ನುತ್ತಾರೆ. ಸಾಮಾನ್ಯವಾಗಿ ಗುರುವೆಂದೇನೂ ಇರುವುದಿಲ್ಲ. ಆದರ್ಶವೆಂದು ಭಾವಿಸಿದ ವ್ಯಕ್ತಿಯನ್ನೇ ಗುರುವಾಗಿ ಸ್ವೀಕರಿಸುವುದು. ಮೂಡ್ಕಣಿ ನಾರಾಯಣ ಹೆಗಡೆಯವರು, ಕೆರೆಮನೆ ಶಿವರಾಮ ಹೆಗಡೆಯವರು, ಚಿಟ್ಟಾಣಿ ರಾಮಚಂದ್ರ ಹೆಗಡೆಯವರು, ಜಲವಳ್ಳಿ ವೆಂಕಟೇಶರಾಯರು ಕೂಡಾ “ಸ್ವಯಂಭೂ’ಗಳಂತೆ ಮೂಡಿಬಂದವರು. ಜಲವಳ್ಳಿ ವೆಂಕಟೇಶ ರಾಯರಿಗೆ ಕೆರೆಮನೆ ಶಿವರಾಮ ಹೆಗಡೆಯವರೇ ಆದರ್ಶ. ಅವರ ಮೇಲೆ ಗುರುಭಾವವೂ ಇತ್ತು. 

ಜಲವಳ್ಳಿಯವರು ಪ್ರಸಿದ್ಧರಾಗಿರುವುದು ಅವರ ಅನಕ್ಷರತೆಯ ಬಗ್ಗೆ. ಅಕ್ಷರಜ್ಞಾನವಿಲ್ಲದಿದ್ದರೂ ಅನುಪಮ ಕಲಾವಿದರಾಗಿದ್ದರು ಎಂಬುದು ಅವರ ಹೆಗ್ಗಳಿಕೆ. ಅವರು ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತಿಗೆ ಕುಳಿತಾಗ ಹಾಸ್ಯ ಚಟಾಕಿ ಹಾರಿಸುವುದನ್ನು ಕೇಳಿದ್ದೇನೆ. “ಬೆಳಿಗ್ಗೆ ಸಹಿ ಹಾಕೂದಕ್ಕೆ ಸುರು ಮಾಡಿದರೆ ಮಧ್ಯಾಹ್ನ ಒಂದೊಪ್ಪತ್ತಿನ ಒಳಗೆ ಸಹಿ ಹಾಕಿ ಮುಗಿಸಿಬಿಡುತ್ತೆ’ ಎನ್ನುತ್ತಾರೆ ಜಲವಳ್ಳಿ. ಆಗ ಚಿಟ್ಟಾಣಿಯವರು,  “ನಾನು ಒಂದು ತಾಸಿನೊಳಗೆ ಸಹಿ ಹಾಕಿ ಮುಗಿಸಿಬಿಡ್ತಿದ್ದಿನಲ್ಲೊ ಮಾರಾಯ’ ಎಂದು ನಗುತ್ತಿದ್ದರು. ಅಕ್ಷರಜ್ಞಾನವಿರದ ತಮ್ಮ ದೌರ್ಬಲ್ಯವನ್ನು ತಮ್ಮನ್ನು ತಾವು ಲೇವಡಿ ಮಾಡಿಕೊಳ್ಳುತ್ತಲೇ, ಅದನ್ನು ಉತ್ತರಿಸಿ ಬೆಳೆದುಬಿಟ್ಟಂಥ ಪರಿ ಯಾರಿಗೂ ಬೆರಗು ಮೂಡಿಸುವಂಥಾದ್ದು! 

ಜಲವಳ್ಳಿಯವರ ಕಲಾಜೀವನದ ಆರಂಭದ ದಿನಗಳ ಬಗ್ಗೆ ನನಗೆ ತಿಳಿದಿಲ್ಲ. ಉತ್ತರಕನ್ನಡದ ಕಡೆಯವರಿಗೆ ಗುಂಡಬಾಳ ಮೇಳವೇ ಕಲಾಕಾಶಿ ಇದ್ದಂತೆ. ಜಲವಳ್ಳಿಯವರೂ ಅಲ್ಲಿಯೇ ತಮ್ಮ ಕಲಾಜೀವನ ಆರಂಭಿಸಿರಬೇಕು. ಆದರೆ, ನನಗೆ ತಿಳಿದಿರುವುದು ಕೊಳಗಿಬೀಸ್‌ ಮೇಳದಲ್ಲಿ ಅವರ ತಿರುಗಾಟದ ಬಗ್ಗೆ. ಆಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೂ ಜಲವಳ್ಳಿ ವೆಂಕಟೇಶ ರಾಯರೂ ಜೊತೆಗಿದ್ದರಂತೆ. ಆವಾಗಿನಿಂದಲೇ ಮುಖಾಮುಖೀ ಪಾತ್ರಗಳನ್ನು ಮಾಡಿ ಜನಪ್ರಿಯತೆಯ ಗ್ರಾಫ‌ನ್ನು ಏರಿಸಿಕೊಂಡಿದ್ದರು.

ಆ ಬಳಿಕ ಅವರು ತೆಂಕುತಿಟ್ಟಿನ ಸುರತ್ಕಲ್‌ ಮಹಾಮ್ಮಾಯಿ ಕೃಪಾಪೋಷಿತ ಯಕ್ಷಗಾನ ನಾಟಕ ಸಭಾಕ್ಕೆ ಹೋಗಿರ ಬೇಕು. ಅಲ್ಲಿ ಹಲವು ವರ್ಷಗಳ ತಿರುಗಾಟ ನಡೆಸಿದರು. ತಮ್ಮ ಕಲಾಬದುಕಿನ ಯಶಸ್ಸಿನ ಬಗ್ಗೆ ಹೇಳಿಕೊಳ್ಳುವಾಗ ಜಲವಳ್ಳಿಯವರು ಶೇಣಿ ಗೋಪಾಲಕೃಷ್ಣ ಭಟ್ಟರ ಹೆಸರನ್ನು ತಪ್ಪದೆ ಸ್ಮರಿಸುತ್ತಾರೆ. ಶನೀಶ್ವರ ಮಹಾತ್ಮೆ ಪ್ರಸಂಗದಲ್ಲಿ ಶೇಣಿ ಗೋಪಾಲಕೃಷ್ಣರ ರಾಜಾವಿಕ್ರಮನ ಮುಂದೆ ಜಲವಳ್ಳಿ ವೆಂಕಟೇಶ ರಾಯರು ಶನೀಶ್ವರನಾಗಿ ಮೆರೆದವರು. ಶೇಣಿಯವರೇ ಅರ್ಥಗಾರಿಕೆಯ ಸೂಕ್ಷ್ಮಗಳನ್ನು ಜಲವಳ್ಳಿಯವರಿಗೆ ಹೇಳಿಕೊಟ್ಟರು. ಆಗ ಅಗರಿ ರಘುರಾಮ ಭಾಗವತರು ಪ್ರಧಾನ ಭಾಗವತರಾಗಿದ್ದರು. ತೆಕ್ಕಟ್ಟೆ ಆನಂದರಾಯ ಮಾಸ್ತರರೂ ಅಲ್ಲಿಯೇ ಇದ್ದಿರಬೇಕು. ಸುರತ್ಕಲ್‌ ಮೇಳದಿಂದ ಮತ್ತೆ ಸಾಲಿಗ್ರಾಮ ಗುರು ಪ್ರಸಾದಿತ ಯಕ್ಷಗಾನ ಮಂಡಳಿಗೆ ಬಂದು ಸೇರಿದಾಗ ಜಲವಳ್ಳಿ ಪೂರ್ಣ ಹೊಸತಾಗಿದ್ದರು. ಅವರ ಮಾತುಗಾರಿಕೆ ಅತ್ಯಂತವಾಗಿ ಮೇಲ್ಪಂಕ್ತಿಯಲ್ಲಿತ್ತು. ಸಾಲಿಗ್ರಾಮದಲ್ಲಿ ಮಟಪಾಡಿ ವೀರಭದ್ರ ನಾಯಕರು, ಸಿರಿಯಾರ ಮಂಜುನಾಥ ನಾಯ್ಕರು, ಆರಾಟೆ ಮಂಜು ಮುಂತಾದ ಕಲಾವಿದರೊಂದಿಗೆ ಜಲವಳ್ಳಿ ರಂಗದ ಮೇಲೆ ಕಾಣಿಸಿಕೊಂಡರು. ಮುಂದೆ ಗುಂಡ್ಮಿ ಕಾಳಿಂಗ ನಾವಡರು ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಭಾಗವತರಾದಾಗ ಜಲವಳ್ಳಿ ಹೆಸರು ಕೂಡ “ಸ್ಟಾರ್‌’ ಪಂಕ್ತಿಯಲ್ಲಿ ಸೇರ್ಪಡೆಗೊಂಡಿತು. ಕಾಳಿಂಗ ನಾವಡರ ಹಾಡುಗಾರಿಕೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಭಸ್ಮಾಸುರ, ಜಲವಳ್ಳಿ ವೆಂಕಟೇಶರಾಯರ ಈಶ್ವರ- ಯಕ್ಷಗಾನದ ಚರಿತ್ರೆಯಲ್ಲಿ ಎಂದಿಗೂ ಅಳಿಸಲಾರದ ಪಾತ್ರಗಳು. ಕೀಚಕ ವಧೆ ಪ್ರಸಂಗದಲ್ಲಿ ಚಿಟ್ಟಾಣಿ ಕೀಚಕನಾದಾಗ ಜಲವಳ್ಳಿ ವಲಲಭೀಮನಾದರು. ಗದಾಯುದ್ಧ ಪ್ರಸಂಗದಲ್ಲಿ ಚಿಟ್ಟಾಣಿ ಕೌರವನಿಗೆ, ಜಲವಳ್ಳಿಯವರ ಭೀಮನೇ ಬೇಕು. ಚಿತ್ರಾಕ್ಷಿ ಕಲ್ಯಾಣದಲ್ಲಿ ಚಿಟ್ಟಾಣಿ-ಜಲವಳ್ಳಿಯವರ ರುದ್ರಕೋಪ-ರಕ್ತಜಂಘ ಜೋಡಿ ಹೆಸರುವಾಸಿ. ಬಡಗುತಿಟ್ಟು ಯಕ್ಷಗಾನಾಕಾಶದಲ್ಲಿ ಜೋಡಿಹಕ್ಕಿಗಳಂತೆ ಹಾರಾಡಿದ ದಿನಗಳವು.

ಚಿಟ್ಟಾಣಿಯವರಿಗೂ ಜಲವಳ್ಳಿಯವರಿಗೂ ಸ್ನೇಹಾಚಾರ ಹೇಗಿತ್ತು? ನಾನೂ ಒಬ್ಬ ಕಲಾವಿದ. ಇನ್ನೊಬ್ಬರ ಜೊತೆ ಸಾತ್ವಿಕವಾದ ಸ್ಪರ್ಧೆ ಇದ್ದರೆ ಮಾತ್ರ ಬೆಳೆಯಲು ಸಾಧ್ಯ. ಚಿಟ್ಟಾಣಿ-ಜಲವಳ್ಳಿಯವರ ನಡುವೆ ಸ್ಪರ್ಧೆ ಇರಲಿಲ್ಲವೆಂದಲ್ಲ. ಆದರೆ, ಹಾರ್ದವಾಗಿ ಅವರಿಬ್ಬರೂ ಜೊತೆಯಾಗಿಯೇ ಇದ್ದರು. ವೃತ್ತಿರಂಗದಿಂದ ನಿವೃತ್ತಿ ಹೊಂದಿದ ಬಳಿಕವೂ ಒಟ್ಟಿಗೆ ರಂಗಸ್ಥಳದಲ್ಲಿ ಕಾಣಿಸಿಕೊಳ್ಳಲು ಇಬ್ಬರೂ ಒಳಗೊಳಗೆ ತುಡಿಯುತ್ತಿದ್ದರಂತೆ. ಅಂಥ ಜೋಡಿ ಮತ್ತೆ ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡದ್ದಿಲ್ಲ. ಸಾಲಿಗ್ರಾಮ ಮೇಳದಲ್ಲಿರು ವಾಗ ಕಾಳಿಂಗ ನಾವಡರು ನನ್ನನ್ನು ಮಳೆಗಾಲದ ಪ್ರದರ್ಶನಗಳಿಗೆ ಆಹ್ವಾನಿಸುತ್ತಿದ್ದರು. ಆಗ ನಾನು ಜಲವಳ್ಳಿಯವರನ್ನು ಹತ್ತಿರದಿಂದ ಕಾಣುವಂತಾಯಿತು. ಹಿರಿಯರಾದರೂ “ಭಾಗವತರೇ’ ಎಂದು ಸ್ಥಾನಕ್ಕೆ ಗೌರವ ಕೊಟ್ಟೇ ವ್ಯವಹರಿಸುತ್ತಿದ್ದರು. ನಾವಡರು ಮತ್ತು ಜಲವಳ್ಳಿಯವರ ಕಾಂಬಿನೇಷನ್‌ ಅನ್ನು ನಾನು ಬೆರಗಿನಿಂದ ಕಂಡಿದ್ದೇನೆ. ಚಂದ್ರಹಾಸ ಚರಿತ್ರೆಯಲ್ಲಿ “ಕ್ರೂರನಕ್ರಾಕುಲದ ಪೆರ್ಮಡು…’ ಎಂಬ ಪದ್ಯ ಸಾಲಿನಲ್ಲಿ ನಕ್ರ ಪದದ ಅರ್ಥ ಬಿಟ್ಟು ಹೋದದ್ದನ್ನು ನಾವಡರು ಜಲವಳ್ಳಿಯವರಿಗೆ ನೆನಪಿಸಿದ್ದರು. ಚೆಲುವೆ ಚಿತ್ರಾವತಿ ಪ್ರಸಂಗದಲ್ಲಿ ಕೀರ್ತಿವರ್ಮನ ಪಾತ್ರದಲ್ಲಿ “ಕೂಸು ಮತ್ತೂಂದಿಹುದೆ?’ ಎಂಬ ಸಾಲಿನ ಎತ್ತುಗಡೆಗೆ ಜಲವಳ್ಳಿಯವರಿಗೆ ಅವಕಾಶ ಕೊಡುವ ನಾವಡರು ಮುಂದಿನ ಸೊಲ್ಲನ್ನು ತಾನು ಎತ್ತಿಕೊಳ್ಳುವುದೇ ಚೆಂದ. ಆಗ ಹಿನ್ನೆಲೆಗೆ ಹಾರ್ಮೋನಿಯಂ. ಬಿಳಿ ಮೂರು, ಬಿಳಿ ನಾಲ್ಕರ ಶ್ರುತಿ. ಈಗಿನ ಶ್ರುತಿಪೆಟ್ಟಿಗೆಯ ರೇಂಜ್‌ಗಿಂತ ಎಷ್ಟೋ ಏರು! ಇಬ್ಬರದ್ದೂ ಸಮಶ್ರುತಿಯ ದನಿ !

ಮುಂದೆ ಪೆರ್ಡೂರು ಅನಂತಪದ್ಮನಾಭ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ ಜಲವಳ್ಳಿ ಬಂದರು. ನಗರ ಜಗನ್ನಾಥ ಶೆಟ್ಟಿ , ಆರ್ಗೋಡು ಮೋಹನದಾಸ ಶೆಣೈ, ರಾಮನಾೖರಿಯವರಂಥ ಹಿರಿಯ ಕಲಾವಿದರಿದ್ದರು. ನಾನು ಪ್ರಧಾನ ಭಾಗವತನಾಗಿದ್ದೆ. ಆಗ ಅವರಿಗೆ ಕೊಂಚ ಮರೆವಿನ ಸಮಸ್ಯೆ ಇತ್ತು. “ತುಂಬ ಹೊಣೆಗಾರಿಕೆಯ ಪಾತ್ರ ಬೇಡ ಭಾಗವತರೇ’ ಎನ್ನುತ್ತಿದ್ದರು. ಪದ್ಯ ಯಾವುದು, ನಡೆ ಹೇಗೆ ಎಂದು ಪದೇಪದೇ ಕೇಳಿ ಹೋಗುತ್ತಿದ್ದರು.

ಹಿರಿಯ ಕಲಾವಿದರಲ್ಲಿ ನಾನು ಗುರುತಿಸಿದ ಒಂದು ಅಂಶ ಎಂದರೆ ಅವರು ಪೌರಾಣಿಕ ಪ್ರಸಂಗಗಳಂತೆ ಹೊಸ ಪ್ರಸಂಗಗಳನ್ನೂ ಅಧ್ಯಯನ ಮಾಡುತ್ತಿದ್ದರು. ಜಲವಳ್ಳಿಯವರಂತೂ ಹೊಸ ಪ್ರಸಂಗದ ಪಾತ್ರವನ್ನು ತನ್ನ ಕಲ್ಪನಾಶಕ್ತಿಯಿಂದ ಹೇಗೆ ಚಿತ್ರಿಸಬಹುದು ಎಂದು ಸತತವಾಗಿ ಯೋಚಿಸುತ್ತಿದ್ದರು.

ನನಗೊಂದು ಘಟನೆ ನೆನಪಾಗುತ್ತಿದೆ. ಒಮ್ಮೆ ನಾನು ಮಂಗಳೂರಿನಲ್ಲಿ ಯಕ್ಷಗಾನ ರೆಕಾರ್ಡಿಂಗ್‌ನಲ್ಲಿದ್ದೆ. ಆಗ ಜಲವಳ್ಳಿ ಸಾಲಿಗ್ರಾಮ ಮೇಳದಲ್ಲಿದ್ದರು. ಆದರೆ, ಸಾಲಿಗ್ರಾಮದ ಮೇಳದ ಕಲಾವಿದರ ಕೂಡುವಿಕೆಯ ಚಂದ್ರಹಾಸ ಚರಿತ್ರೆ ಪ್ರಸಂಗಕ್ಕೆ ನಾನು ಪದ್ಯ ಹೇಳುವವನಿದ್ದೆ. ಹಾಗೆ, ಚಿಟ್ಟಾಣಿಯವರು ಪೆರ್ಡೂರು ಮೇಳದಲ್ಲಿದ್ದಾಗ ಅಲ್ಲಿನ ಕಲಾವಿದರನ್ನು ಸೇರಿಸಿ ನಡೆದ ರೆಕಾರ್ಡಿಂಗ್‌ನಲ್ಲಿ ಕಾಳಿಂಗ ನಾವಡರು ಹಾಡಿದ್ದರು. ಆ ಕಾಲ ಹಾಗಿತ್ತು.

ನಾವೆಲ್ಲ ಬೆಳಗ್ಗೆ ಬೇಗ ರೆಕಾರ್ಡಿಂಗ್‌ ಸ್ಥಳದಲ್ಲಿ ಸೇರಿದ್ದೆವು. ಮಧ್ಯಾಹ್ನದವರೆಗೆ ಎರಡು-ಮೂರು ಸಲ ವಿಘ್ನಗಳು ಬಂದವು. “ಯಾಕೋ ಹಿತವೆನ್ನಿಸುತ್ತಿಲ್ಲ’ ಎಂದರು ಜಲವಳ್ಳಿ ಯಾವುದರದೋ ಪೂರ್ವಸೂಚನೆ ಎಂಬಂತೆ. ನಾನು ಕೊಂಚ ಖನ್ನನಾಗಿದ್ದೆ. ಅಷ್ಟರಲ್ಲಿ ಹುಡುಗನೊಬ್ಬ ಬಂದು ನನ್ನ ತಂದೆ ತೀರಿಕೊಂಡ ಸುದ್ದಿಯನ್ನು ತಲುಪಿಸಿದ. ನಾನು ಕುಸಿದುಬಿಟ್ಟೆ. ಜಲವಳ್ಳಿಯವರು ಹಿರಿಯನಾಗಿ ನನ್ನ ಹತ್ತಿರ ಇದ್ದು ಸಮಾಧಾನಿಸಿದರು. ತರಾತುರಿಯಿಂದ ಮಂಗಳೂರಿನಿಂದ ಗೋಕರ್ಣದ ಕಡೆಗೆ ಹೊರಡಿಸಿದರು. ಕಾರಿನಲ್ಲಿ ಸಾಲಿಗ್ರಾಮದವರೆಗೆ ನನ್ನ ಜೊತೆಗಿದ್ದರು. ಉದ್ದಕ್ಕೂ ಪ್ರಬುದ್ಧವಾದ ಸಾಂತ್ವನದ ಮಾತುಗಳೇ. ಏಕಮಾತ್ರ ಪುತ್ರನಾಗಿರುವ ನಾನು ನನ್ನ ಅಮ್ಮನನ್ನು ಎದುರಿಸುವಾಗ ಹೇಗೆ ಆತ್ಮಸ್ಥೈರ್ಯದಿಂದಿರಬೇಕೆಂದು ಬೋಧಿಸಿದರು.

ಮೊನ್ನೆ ಹೊನ್ನಾವರದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಟ್ಟಿದ್ದರು. ಆಗ ಮೇಲಿನ ಘಟನೆ ನನಗೆ ನೆನಪಾಗಿ ಸಂಕಟವೆನಿಸಿತು. ಸಾಂತ್ವನ ಪಡಿಸಿದ ಜೀವವೇ ಉಸಿರಿಲ್ಲದೆ ಮಲಗಿತ್ತು.

ಇವತ್ತು ಎಜುಕೇಟೆಡ್‌ ಎಂದು ಹೇಳಿಕೊಳ್ಳುವ ಅನೇಕರಲ್ಲಿ ಮಾತಿನ ಮಧ್ಯೆ ಧಾರಾಳ ಇಂಗ್ಲಿಶ್‌ ಪದಗಳು ನುಸುಳುತ್ತವೆ. ಆದರೆ, ಅನ್‌ಎಜುಕೇಟೆಡ್‌ ಎನ್ನಲಾಗುವ ಕಲಾವಿದರು ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡವನ್ನು ನಿಜವಾದ ಅರ್ಥದಲ್ಲಿ ಗೆಲ್ಲಿಸುತ್ತ ಬಂದಿದ್ದಾರೆ. ಅಂಥವರಲ್ಲಿ ಜಲವಳ್ಳಿ ವೆಂಕಟೇಶರಾಯರೂ ಒಬ್ಬರು. ಅವರು ಯಕ್ಷಗಾನಕ್ಕೆ ಮಾತ್ರವಲ್ಲ , ನಾಡುನುಡಿಗೆ ಸಲ್ಲಿಸಿದ ಸೇವೆಯೂ ದೊಡ್ಡದೇ.

ಸುಬ್ರಹ್ಮಣ್ಯ ಧಾರೇಶ್ವರ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.