ಸಂಸಾರದ ಸ ರಿ ಗ ಮ ಪ
Team Udayavani, Nov 21, 2018, 6:00 AM IST
ಗಂಡ- ಹೆಂಡತಿ, ಇಬ್ಬರೂ ದುಡಿಯುವ ಕಾಲ ಇದು. ಸಣ್ಣ ಸಣ್ಣ ಮಾತೂ ದೊಡ್ಡದಾಗಿ, ಸಂಬಂಧಗಳಲ್ಲಿ ಬಿರುಕು ಮೂಡಲು ಇಲ್ಲಿ ಜಾಸ್ತಿ ಸಮಯ ಬೇಡ. ಹಾಗಾಗದಿರಲು, ಸಂಸಾರವು ಕೊನೆಯ ತನಕವೂ ಸುಗಮವಾಗಿ ಸಾಗಲು ಒಂದಿಷ್ಟು ಗುಟ್ಟುಗಳಿವೆ. ಅವೇನು?
ಮದುವೆಯಾಗಿ ಪತಿಯ ಮನೆಗೆ ಹೊರಟ ಮಗಳಿಗೆ ಅಮ್ಮ ಕಿವಿಮಾತು ಹೇಳುತ್ತಾಳೆ. ಹೊಸ ಜಗತ್ತು, ಹೊಸ ಜನಗಳು, ಹೊಸ ಬದುಕು… ಇವೆಲ್ಲಕ್ಕೆ ಹೊಂದಿಕೊಂಡು, ಗಂಡನ ಮನೆ ಮಂದಿಯ ಮನಸ್ಸನ್ನು ಗೆಲ್ಲುವುದು ಸಣ್ಣ ವಿಷಯವಲ್ಲ. ಈಗ ಕೂಡು ಕುಟುಂಬಗಳು ಇರದಿದ್ದರೂ, ಗಂಡ- ಹೆಂಡತಿಯ ನಡುವೆಯೇ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಪತಿಯನ್ನು ಅರ್ಥ ಮಾಡಿಕೊಂಡು, ಉತ್ತಮ ಗೃಹಿಣಿಯಾಗಲು ಹೆಣ್ಣೊಬ್ಬಳು ಏನು ಮಾಡಬೇಕು ಎಂಬುದರ ಬಗ್ಗೆ ಒಂದೆರಡು ಮಾತುಗಳು…
1. ಮಾತು ಮಾತಿಗೂ ದೂಷಿಸಬೇಡಿ
ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಗಂಡ- ಹೆಂಡತಿ ನಡುವಿನ ದೊಡ್ಡ ದೊಡ್ಡ ತಪ್ಪುಗಳೂ ಅತಿ ಸಣ್ಣ ವಿಷಯ ಅನ್ನಿಸುತ್ತದೆ. ಕ್ರಮೇಣ ಒತ್ತಡಗಳು, ಜವಾಬ್ದಾರಿಗಳು ಹೆಚ್ಚಿದಂತೆ ಸಣ್ಣ ಸಣ್ಣ ತಪ್ಪುಗಳೂ ದೊಡ್ಡದಾಗಿ ಕಾಣುತ್ತವೆ. ಆಗ ತನ್ನದೇ ಸರಿ ಎಂದು ವಾದಿಸುವುದರಿಂದ ಸಂಸಾರದ ಶಾಂತಿ ಕದಡುತ್ತದೆ. ಹೆಣ್ಣಿಗೆ ಸಹನೆ ಎಂಬುದು ಸಹಜ ಗುಣ. ತಪ್ಪು ಆತನದೇ ಇದ್ದರೂ, ಆತ ತಾನೇ ಸರಿ ಎಂದು ವಾದಿಸಿದರೂ, ಒಂದಿಷ್ಟು ಹೊತ್ತು ಮೌನ ವಹಿಸಿ, ನಂತರ ಸಮಾಧಾನದಲ್ಲಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಉತ್ತಮ ಹೆಂಡತಿಯಾಗುವ ಗುಟ್ಟು ಮಾತು- ಕೃತಿಗಳಲ್ಲಷ್ಟೇ ಅಲ್ಲ ಮೌನದಲ್ಲೂ ಅಡಗಿದೆ.
2. ಮನೆಯನ್ನು ಒಪ್ಪವಾಗಿಡಿ…
ಮನೆ, ಮನಸ್ಸಿನ ಕನ್ನಡಿ. ಗಲೀಜಾದ, ವಸ್ತುಗಳನ್ನೆಲ್ಲ ಹರಡಲ್ಪಟ್ಟ ಮನೆಯಲ್ಲಿ ಯಾರಿಗೆ ತಾನೇ ಇರಲು ಮನಸ್ಸಾದೀತು? ಗಂಡ ಸಂಜೆ ಆಫೀಸಿನಿಂದ ಬರುವಾಗ, ಬಾಗಿಲಲ್ಲೇ ಮುರಿದ ಆಟಿಕೆ, ಕಸ, ತೊಳೆಯದೇ ಬಿಟ್ಟ ಲೋಟ ಕಾಣಿಸಿದರೆ ಅವನ ಮನಸ್ಸೂ ಕದಡುತ್ತದೆ. ಮನೆ ಒಪ್ಪ ಓರಣವಾಗಿದ್ದರೆ ಅವನ ಕೆಲಸದ ದಣಿವು ಕೂಡ ಅರ್ಧದಷ್ಟು ಕಡಿಮೆಯಾಗುತ್ತದೆ. ಜೊತೆಗೆ, “ವ್ಹಾ, ಎಷ್ಟು ಚೆನ್ನಾಗಿಟ್ಟಿದ್ದೀಯೇ ಮನೆಯನ್ನು!’ ಎಂಬ ಹೊಗಳಿಕೆಯೂ ನಿಮ್ಮದಾಗುತ್ತದೆ.
3. ನಂಬಿಕೆ ಅತಿ ಮುಖ್ಯ
ಪತಿ- ಪತ್ನಿಯರ ನಡುವೆ ಯಾವ ಮುಚ್ಚು ಮರೆಯೂ ಇರಬಾರದು. ಆಗ ಮಾತ್ರ ಸಂಬಂಧಗಳ ಬೇರು ಗಟ್ಟಿಯಾಗಲು ಸಾಧ್ಯ. ಆಫೀಸಿನಿಂದ ಬಂದವನ ಬಳಿ, ನಿನ್ನ ದಿನ ಹೇಗಿತ್ತು ಎಂದು ವಿಚಾರಿಸಿ. ಮನೆಯಲ್ಲಿ ನೀವೇನು ಮಾಡಿದಿರಿ ಎಂದೂ ಹಂಚಿಕೊಳ್ಳಿ. ಆಗ ನಿಮ್ಮಿಬ್ಬರ ನಡುವಿನ ಆತ್ಮೀಯತೆ ಹೆಚ್ಚುತ್ತದೆ. ಗಂಡನ ಆಫೀಸಿನ ವಿಷಯದಿಂದ ದೂರವಿರುವುದು ಒಳ್ಳೆಯದು. ಆಫೀಸಿನಲ್ಲಿ ದಿನವಿಡೀ ದುಡಿದು ಬಂದು ಪುನಃ ಮನೆಯಲ್ಲೂ ಅದನ್ನೇ ಮಾತನಾಡಿದರೆ ಬೋರ್ ಆಗಬಹುದು. ಆತನ ಇಷ್ಟವನ್ನು ಅರಿತು ನಡೆದರೆ ಒಳ್ಳೆಯದು.
4. ಧನಾತ್ಮಕ ಚಿಂತನೆಗಳು
ಉತ್ತಮ ಮನೆಯೊಡತಿ, ಉತ್ತಮ ಮನದೊಡತಿಯೂ ಆಗಬೇಕು. ಕರುಣೆ, ಉತ್ತಮ ಗುಣ, ಪ್ರೀತಿ, ತಾಳ್ಮೆ, ಸಹನೆ , ಗೌರವ ಭಾವ ಮನಸ್ಸಿನಲ್ಲಿದ್ದರೆ, ಮಕ್ಕಳೂ ನಿಮ್ಮನ್ನು ನೋಡಿ ಕಲಿಯುತ್ತಾರೆ.
5. ಒಟ್ಟಿಗೇ ತಿರುಗಾಡಿ
ಗಂಡ- ಹೆಂಡತಿಯ ನಡುವೆ ಎಷ್ಟೇ ಹೊಂದಾಣಿಕೆಯಿದ್ದರೂ, ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅಂಥ ಸಂಧರ್ಭಗಳಲ್ಲಿ ಮನಸ್ತಾಪವನ್ನು ಮರೆಯಲು ಫ್ಯಾಮಿಲಿ ಜತೆ ಔಟಿಂಗ್ ಹೊರಡಿ. ಅದು ದೂರ ಪ್ರವಾಸವೇ ಆಗಿರಲಿ ಅಥವಾ ಹತ್ತಿರದ ದೇವಸ್ಥಾನ, ಸಂಜೆ ಪಾರ್ಕ್‌ನಲ್ಲಿ ವಾಕಿಂಗ್, ಐಸ್‌ಕ್ರೀಂ ಪಾರ್ಲರ್‌ಗಾದರೂ ಹೋಗಿ ಬನ್ನಿ. ಭಿನ್ನಾಭಿಪ್ರಾಯಗಳನ್ನು ಮರೆಯಲು ಹೊಸ ವಾತಾವರಣ ಸಹಾಯ ಮಾಡುತ್ತದೆ.
6. ಪ್ರೀತಿಯನ್ನು ವ್ಯಕ್ತಪಡಿಸಿ
ಆ್ಯನಿವರ್ಸರಿ, ಹುಟ್ಟುಹಬ್ಬ, ಕೆಲಸದಲ್ಲಿ ಬಡ್ತಿ… ಇನ್ನಿತರ ಖುಷಿಯ ದಿನಗಳಲ್ಲಿ ಸಪ್ರೈìಸ್ ಗಿಫr… ಕೊಡುವುದೋ, ಸಪ್ರೈìಸ್ ಆಗಿ ಇಷ್ಟದ ಅಡುಗೆ ತಯಾರಿಸುವುದೋ ಅಥವಾ ಸಣ್ಣ ಪಾರ್ಟಿ ಮಾಡಿದರೆ ಗಂಡನಿಗೆ ಖುಷಿಯಾಗುತ್ತದೆ. ಪ್ರೀತಿ ಮನಸ್ಸಿನಲ್ಲಿದ್ದರೆ ಸಾಕು ಅಂದರೂ, ಮನಸ್ಸಿಂದ ಮಾಡಿದ ಇಂಥ ಕೆಲಸಗಳಲ್ಲೂ ಪ್ರೀತಿ ತೋರಿಸುವುದು ಮುಖ್ಯ.
7. ನೀವು ನೀವಾಗಿರಿ
ಗೃಹಿಣಿಯಾದವಳು ಗಂಡನ ಅರ್ಧಾಂಗಿಯೂ ಹೌದು. ಹಾಗೆಂದು ಆತನ ಮೇಲೆ ಅತಿಯಾದ ನಿರೀಕ್ಷೆಗಳನ್ನಿಡಬಾರದು. ಆತ ತಾನು ಹೇಳಿದಂತೆ ಇರಬೇಕು ಎಂದು ಗಂಡನನ್ನು ಕೈಮುಷ್ಟಿಯಲ್ಲಿಟ್ಟುಕೊಳ್ಳಲು ಬಯಸುವುದು ಸರಿಯಲ್ಲ. ಆತನು ಆತನಾಗಿರಲಿ, ನೀವು ನೀವಾಗಿರಿ. ಆತನನ್ನು ಬದಲಾಯಿಸಲು ಹೋಗುವುದು ಮೂರ್ಖತನ. ಹಾಗೆಂದು ಕೆಟ್ಟ ಗುಣ, ಕೆಟ್ಟ ಚಟಗಳು ಗಂಡನಿಗಿದ್ದರೆ ಹೆಂಡತಿಯು ತಾಯಿಯಾಗಿ ಅವನನ್ನು ತಿದ್ದಿ ತೀಡಬೇಕು.
8. ಉತ್ತಮ ಕೇಳುಗರಾಗಿ…
ಯಾರು ಉತ್ತಮ ಕೇಳುಗರಾಗುತ್ತಾರೋ ಅವರು ಸಂಬಂಧಗಳನ್ನು ಉತ್ತಮವಾಗಿ ನಿಭಾಯಿಸಬಲ್ಲರು. ಕೆಲವು ಸಲ ಪತಿಯ ಮಾತುಗಳನ್ನು ಕೇಳುವ ಆಸಕ್ತಿ ಇರದಿದ್ದರೂ, ಕೊನೇ ತನಕ ಕೇಳಬೇಕಾಗುತ್ತದೆ. ನಡುವೆ ಬಾಯಿ ಹಾಕಿ, ಆಸಕ್ತಿ ಇಲ್ಲವೆಂದು ಕಡ್ಡಿ ತುಂಡಾದಂತೆ ಹೇಳಿದರೆ; ಮುಂದೆ ಆತ ನಿಮ್ಮೊಂದಿಗೆ ಏನನ್ನೂ ಹೇಳಿಕೊಳ್ಳದೇ ಇರಬಹುದು. ನೀವು ಉತ್ತಮ ಕೇಳುಗರಾದರೆ, ಆತನೂ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ.
9. ಮೆಚ್ಚುಗೆ ವ್ಯಕ್ತಪಡಿಸಿ
ಪತಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳುವವಳು ಉತ್ತಮ ಹೆಂಡತಿ. ಆಕೆಯ ಬೇಕುಬೇಡಗಳನ್ನು ಪೂರೈಸುವವನು ಉತ್ತಮ ಪತಿ. ಆತ ಪ್ರೀತಿಯಿಂದ ತಂದುಕೊಡುವ ಸೀರೆ, ಆಭರಣಗಳಲ್ಲಿ ಹುಳುಕು ಹುಡುಕದೆ ಮೆಚ್ಚುಗೆಯ ನುಡಿಗಳನ್ನಾಡಿ.
10. ಪತಿಯನ್ನು ಕಡೆಗಣಿಸದಿರಿ
ಸಂಸಾರ ಜಂಜಾಟದಲ್ಲಿ ಮಕ್ಕಳು ಬಂದಮೇಲೆ, ಹೆಂಡತಿಯ ಹೆಚ್ಚು ಸಮಯ, ಗಮನ ಮಕ್ಕಳ ಮೇಲೆಯೇ ಇರುತ್ತದೆ. “ಇತ್ತೀಚೆಗೆ ನೀನು ನನ್ನನ್ನು ನೆಗ್ಲೆಕ್ಟ್ ಮಾಡ್ತಾ ಇದ್ದೀಯ’ ಅಂತ ಗಂಡ ಬಾಯಿಬಿಟ್ಟು ಹೇಳಬಹುದು. ಹಾಗಾಗದಿರಲಿ, ದಿನದ ಸ್ವಲ್ಪ ಹೊತ್ತನ್ನು ಗಂಡನಿಗಾಗಿ ಮೀಸಲಿಡಿ. ಮಕ್ಕಳ ಲಾಲನೆ ಪಾಲನೆ ಅಮ್ಮನ ಕರ್ತವ್ಯವಾಗಿದ್ದರೂ, ನಾಳೆ ಜತೆಯಲ್ಲಿರುವುದು ಪತಿಯೇ ಹೊರತು ಮಕ್ಕಳಲ್ಲ (ಅಪವಾದವೂ ಇದೆ).
ರಜನಿ ಭಟ್ ಕಲ್ಮಡ್ಕ, ಅಬುಧಾಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.