ತೀರಿಸಲಾಗದ ಋಣ ತೀರಿಸಬಾರದ ಋಣ
Team Udayavani, Nov 20, 2019, 6:11 AM IST
ಒರಳು ಕಲ್ಲಿನಲ್ಲಿ ಬೆಳಗಿನ ದೋಸೆಗೆ ಹಿಟ್ಟು ರುಬ್ಬಿ, ಬಿಸಿ ಬಿಸಿ ದೋಸೆ ಹೊಯ್ದು ಮನೆಯವರಿಗೆಲ್ಲ ಬಡಿಸುತ್ತಿದ್ದ ಅಮ್ಮನಿಗೆ, ಕೊನೆಗೆ ದೋಸೆಯೇ ಉಳಿಯುತ್ತಿರಲಿಲ್ಲ. ಬೆಳೆಯುತ್ತಿರುವ ಮಕ್ಕಳು, ಅಮ್ಮನಿಗೆ ಉಳಿದಿದೆಯಾ ಅಂತ ನೋಡದೇ ತಿಂದು ಮುಗಿಸುತ್ತಿದ್ದೆವು..
ಅಂದಿನ ದಿನಗಳಲ್ಲಿ ಬಡತನವನ್ನೇ ಹಾಸಿ ಹೊದ್ದು ಮಲಗುತ್ತಿದ್ದ ಅಪ್ಪ- ಅಮ್ಮನಿಗೆ ನಾವು ನಾಲ್ವರು ಮಕ್ಕಳು. ನಾನು, ಇಬ್ಬರು ತಂಗಿಯರು, ಒಬ್ಬ ತಮ್ಮ. ನಮ್ಮಲ್ಲಿ ಪ್ರೀತಿ, ಮಮತೆ, ಹೊಂದಾಣಿಕೆ, ನಂಬಿಕೆ ಎಲ್ಲವೂ ಇತ್ತು; ಹಣವೊಂದನ್ನು ಬಿಟ್ಟು! ಬದುಕೋಕೆ ಹಣ ಮುಖ್ಯ ಅಂತ ತುಂಬಾ ವರ್ಷಗಳ ನಂತರವೇ ಅರಿವಾಗಿದ್ದು. ಯಾಕಂದ್ರೆ, ಸಾಲದ ಹೊರೆ ಹೊತ್ತು ಸಂಜೆ ಏಳರವರೆಗೂ ತೋಟದಲ್ಲಿ ದುಡಿದು ಮನೆಗೆ ಬರುತ್ತಿದ್ದ ಅಪ್ಪ- ಅಮ್ಮನ ಮುಖದಲ್ಲಿ ಆಗ ಬಡತನದ ಕುರುಹೇ ಕಾಣುತ್ತಿರಲಿಲ್ಲ ಅಥವಾ ನಮಗೆ ಅರ್ಥವಾಗುತ್ತಿರಲಿಲ್ಲವೇನೋ…
ಒಮ್ಮೊಮ್ಮೆ ಅನಿಸುತ್ತದೆ, ಈಗಿನಂತೆ ಆಗ ಎಲ್ಲವೂ ಅರ್ಥವಾಗುತ್ತಿದ್ದರೆ ಬಳಪದ ಬಾಕ್ಸಿಗಾಗಿ, ಬಣ್ಣದ ಫ್ರಾಕಿಗಾಗಿ, ಉದ್ದದ ಛತ್ರಿಗಾಗಿ ಆಸೆ ಪಡುತ್ತಲೇ ಇರಲಿಲ್ಲ.. ದುಡಿದೋ, ಸಾಲ ಮಾಡಿಯೋ ಎಲ್ಲವನ್ನೂ ಕೊಡಿಸುತ್ತಿದ್ದ ಅಪ್ಪ, ಯಾವತ್ತೂ ಅಸಹನೆ ತೋರಿಸಿದವನೇ ಇಲ್ಲ. ಈಗೆಲ್ಲ ರಾಶಿ ರಾಶಿ ಹಣವಿದ್ದರೂ, ಏನೋ ವ್ಯವಹಾರದ ಕಷ್ಟ , ಇನ್ನೇನೋ ಟೆನ್ಷನ್ನು, ಟೈಮ್ ಇಲ್ಲ ಅಂತ ಮಕ್ಕಳ ಮೇಲೆ ರೇಗುವ ಅಪ್ಪಂದಿರನ್ನು ನೋಡಿದಾಗ, ಅಪ್ಪ ನೆನಪಾಗುತ್ತಾರೆ…ಆಗ ಅಪ್ಪನಿಗೆ ಏನೂ ಇರ್ಲಿಲ್ಲ, ಆದ್ರೂ ಅಪ್ಪ ರೇಗ್ತಿರ್ಲಿಲ್ಲ …
ಒರಳು ಕಲ್ಲಿನಲ್ಲಿ ಬೆಳಗಿನ ದೋಸೆಗೆ ಹಿಟ್ಟು ರುಬ್ಬಿ, ಬಿಸಿ ಬಿಸಿ ದೋಸೆ ಹೊಯ್ದು ಮನೆಯವರಿಗೆಲ್ಲ ಬಡಿಸುತ್ತಿದ್ದ ಅಮ್ಮನಿಗೆ, ಕೊನೆಗೆ ದೋಸೆಯೇ ಉಳಿಯುತ್ತಿರಲಿಲ್ಲ. ಬೆಳೆಯುತ್ತಿರುವ ಮಕ್ಕಳು, ಅಮ್ಮನಿಗೆ ಉಳಿದಿದೆಯಾ ಅಂತ ನೋಡದೇ ತಿಂದು ಮುಗಿಸುತ್ತಿದ್ದೆವು.. ಅಮ್ಮನ ಕಣ್ಣಲ್ಲಿ, ಮಕ್ಕಳ ಹೊಟ್ಟೆ ತುಂಬಿಸಿದ ಖುಷಿ…ಛೇ, ಅದ್ಯಾಕೆ ಆಗ ಅಮ್ಮನ ಹಸಿವು ನಮಗೆ ಕಾಣಿಸಲೇ ಇಲ್ಲ. ಎಲ್ಲರೂ ಒಂದೊಂದು ದೋಸೆ ಕಡಿಮೆ ತಿಂದು, ಅಮ್ಮನಿಗೆ ಉಳಿಸಬಹುದಿತ್ತಲ್ಲ ಅನಿಸುತ್ತದೆ ಈಗ.
ಮಕ್ಕಳಿಗೆ ಹುಷಾರಿಲ್ಲ ಅಂತ ಮುಖ ಸಣ್ಣದು ಮಾಡಿ, ದೇಹ ಹಿಡಿಯಾಗಿಸಿಕೊಂಡು ಬೆಳಗಿನಿಂದ ಸಂಜೆವರೆಗೂ ಊರ ಸೊಸೈಟಿಯಲ್ಲಿ ಕಾಯುತ್ತ ಕೂತು, ಆಮೇಲೆ ಅವರು ಕರುಣಿಸಿದ ಎರಡು ಸಾವಿರ ರೂಪಾಯಿ ಹಿಡಿದು, ಈ ಸಲದ ಅಡಕೆ ಮಾರಿದ ಮೇಲೆ ಸಾಲ ತೀರಿಸುತ್ತೇನೆ ಅಂತ ಕೈ ಮುಗಿದು ಬರುತ್ತಿದ್ದ ಅಪ್ಪನನ್ನು ನೋಡಿದ್ದೇನೆ. ಆಗಿನ್ನೂ ಏಳೆಂಟು ವರ್ಷ ನಂಗೆ. ಅಪ್ಪ ಹೊರಗಡೆ ಹೋಗುವಾಗ “ನಾನೂ ಬರ್ತೀನಿ’ ಅಂತ ಹಠ ಮಾಡಿ ಹೋಗುತ್ತಿದ್ದೆ.
ಸೊಸೈಟಿಯಿಂದ ನಾಲ್ಕೈದು ಕಿ.ಮೀ. ನಡೆದೇ ಬರಬೇಕಿತ್ತು ಮನೆಗೆ. ನಾನು ನಡೆಯಲು ಹಠ ಮಾಡಿದಾಗ, ಅಪ್ಪ ಹೆಗಲಮೇಲೆ ಹೊತ್ತು ಬರ್ತಿದ್ರು. ಅಪ್ಪನ ಮನಸ್ಸಿನಲ್ಲಿ ಸಾವಿರ ಹೋರಾಟಗಳು ನಡೆಯುತ್ತಿದ್ದರೂ, ಹೆಗಲ ಮೇಲೆ ಹೊತ್ತು ಕಥೆ ಹೇಳುತ್ತಾ ನಡೆಯುತ್ತಿದ್ದ ಅಪ್ಪನನು ಈಗ ನೆನೆಸಿಕೊಂಡರೆ ಕಣ್ಣು ತುಂಬುತ್ತದೆ…ಛೇ. ಆವತ್ತು ನಾನು ಕಷ್ಟವಾದ್ರೂ ನಡೆದೇ ಬರಬೇಕಿತ್ತು ಅನಿಸುತ್ತದೆ…
ಅಪ್ಪ-ಅಮ್ಮನಿಗೆ ಬಡತನ ನೀಡಿದ, ಕಷ್ಟ, ಅವಮಾನ, ನೋವುಗಳು ಅದೆಷ್ಟೋ… ಆದರೂ ಅವರ ಸಹನಶೀಲತೆ, ಕಷ್ಟ ಸಹಿಷ್ಣುತೆ, ಸ್ವಾಾಭಿಮಾನ ಪ್ರಾಾಮಾಣಿಕತೆಯೇ ಇಂದಿಗೂ ನನ್ನ ಆದರ್ಶ. ಹೆಂಡತಿಯಾಗಿ, ಅಮ್ಮನಾಗಿ, ಸೊಸೆಯಾಗಿ ಬೇಸರವಾದಾಗೆಲ್ಲ ತವರೂರ ದಾರಿ ಹಿಡಿಯುತ್ತೇನೆ. ಅಮ್ಮನ ಮಡಿಲಲ್ಲಿ ಮಗುವಾಗುತ್ತೇನೆ. ಮಲೆನಾಡಿನ ಪುಟ್ಟ ಹಳ್ಳಿಯಲ್ಲಿನ ಒಂಟಿ ಮನೆ. ಅಬ್ಬರವಿಲ್ಲದ, ಆಡಂಬರವಿಲ್ಲದ ಮನೆ. ನೆಟ್‌ವರ್ಕ್ ಕೂಡಾ ಸಿಗದ ಆ ಜಾಗದಲ್ಲಿ ಅದೆಷ್ಟು ಪ್ರಶಾಂತತೆ ಇದೆ!
ಆವತ್ತೊಂದಿನ ಅಪ್ಪ … “ಎಲ್ಲಾ ಸಾಲ ಮುಕ್ತ ಮಾಡಿ, ಈ ವರ್ಷದ ಅಡಕೆ ಮಾರಿ ಅಮ್ಮನ ಹೆಸರಿನಲ್ಲಿ ಡಿಪಾಸಿಟ್ ಮಾಡಿದ್ದೀನಿ ಮಗಳೇ’ ಅಂತ ಸಂತೋಷದಿಂದ ಹೇಳುವಾಗ, ಕಣ್ಣು ತುಂಬಿ ಬಂದಿತ್ತು. ಮಕ್ಕಳ ಓದು, ಮದುವೆ, ಬಾಣಂತನವನ್ನೆಲ್ಲ ಮುಗಿಸಿ ಮನೆ, ಜಮೀನು ಅಭಿವೃದ್ಧಿಪಡಿಸಿ, ಸಾಲವೆಲ್ಲ ತೀರಿಸಿ “ಋಣಮುಕ್ತನಾದೆ’ ಅಂತ ಹೇಳಿಕೊಳ್ಳುವಾಗ ಅಪ್ಪನಿಗೆ ಅರವತ್ತೈದು ವಯಸ್ಸು… ಅಮ್ಮನ ಮುಖದಲ್ಲಿ ಯುದ್ಧ ಮುಗಿಸಿದ ತೃಪ್ತಿ …
ಆವತ್ತು ದೇವರ ಮುಂದೆ ನಿಂತು ಬೇಡಿಕೊಂಡಿದ್ದೆ- “ಪರೀಕ್ಷೆ ಮಾಡಿದ್ದು ಸಾಕು ದೇವರೇ. ಅಪ್ಪ-ಅಮ್ಮನಿಗೆ ಬೇಕಿರೋದು ಆರೋಗ್ಯ. ಅದರ ಜೊತೆ ಆಟವಾಡಬೇಡ’ ಅಂತ. ಪ್ರತೀ ಸಲ ತವರಿಂದ ಬರುವಾಗಲೂ ಅಪ್ಪ-ಅಮ್ಮನ ಕಾಲು ಮುಟ್ಟಿ, ಪೂರ್ಣ ಶರಣಾಗತಿಯಲ್ಲಿ ನಮಸ್ಕರಿಸಿ ಬರುತ್ತೇನೆ. ಯಾಕಂದ್ರೆ, ಅವರಿಗಿಂತ ದೊಡ್ಡ ದೇವರನ್ನು ನಾನು ಕಂಡಿಲ್ಲ . ಅಮ್ಮ, ಅರಿಶಿಣ-ಕುಂಕುಮ ಕೊಟ್ಟು, ಅಂಗಳದಲ್ಲಿನ ಹೂವು ತಂದು ಕೊಡುತ್ತಾಳೆ. ಅಮ್ಮ ಮುಡಿಸಿ ಕಳಿಸಿದ ಗುಲಾಬಿ ಹೂವು ದಾರಿ ಮದ್ಯೆ ಎಲ್ಲೂ ಬೀಳದಂತೆ ಕಾಯ್ದುಕೊಂಡು ಬಂದು, ಮನೆಯಲ್ಲಿ ನೀರಿನ ಲೋಟದಲ್ಲಿ ಬಾಡುವವರೆಗೂ ಕಾಯ್ದಿಟ್ಟು ಅಮ್ಮನ ನೆನಪನ್ನು ಜೊತೆ ಉಳಿಸಿಕೊಳ್ಳುತ್ತೇನೆ.
ತವರಿನವರು ಕೊಟ್ಟ ಸಣ್ಣ ವಸ್ತುವೂ ಹೆಣ್ಮಕ್ಕಳಿಗೆ ಉಸಿರಿನಷ್ಟೇ ಆಪ್ತ. ಅಪ್ಪನೇನೋ ತನ್ನೆಲ್ಲ ಸಾಲ ತೀರಿಸಿ ಋಣಮುಕ್ತನಾದ. ಆದರ್ಶವಾಗಿ ಬದುಕಿ, ಮೂರು ಹೆಣ್ಣುಮಕ್ಕಳನ್ನು ಚೆಂದದ ಮನೆ ಸೇರಿಸಿದ. ಮಗನನ್ನು ವಿದೇಶದಲ್ಲಿ ಕೆಲಸ ಗಿಟ್ಟಿಸುವಷ್ಟು ಓದಿಸಿದ. ತಾನು ಮಾತ್ರ ಅದೇ ಮಲೆನಾಡಿನ ಹಳ್ಳಿಯ ಹಳೆಯ ಮನೆಯಲ್ಲಿಯೇ ಉಳಿದುಬಿಟ್ಟ. ಆದರೆ, ಪ್ರತೀ ಸಲ ಅವನಿಂದ ಪಡೆದೂ, ಪಡೆದೂ ನಾವು ಮಾತ್ರ ಅಪ್ಪನ ಋಣದಲ್ಲೇ ಉಳಿದುಬಿಟ್ಟೆವು. ನನಗೂ ಗೊತ್ತು ಅದು ತೀರಿಸಲಾರದ ಋಣ… ತೀರಿಸಬಾರದ ಋಣ.
* ಬಿ. ಜ್ಯೋತಿ ಗಾಂವ್ಕಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.