ಒಂದು ಮುಟ್ಟಿನ ಕತೆ: ಹೊರಗೆ ಕೂತವಳ ಕವಿತೆ
Team Udayavani, Apr 12, 2017, 6:52 AM IST
ನನ್ನ ಆಪ್ತ ಗೆಳತಿಗೆ ಒಂದು ದಿನ ಆರತಿ ಎತ್ತಿಸಿಕೊಳ್ಳುವ ಸಂದರ್ಭ ಬಂದೇಬಿಟ್ಟಿತು. ಅದನ್ನು ಅವಳ ಮನೆಯವರು ದೊಡ್ಡ ಕಾರ್ಯಕ್ರಮವೆಂಬಂತೆ ಪರಿಚಯವಿದ್ದ ಎಲ್ಲರನ್ನೂ ಕರೆದು ಆಚರಿಸಿದರು. ಅದು ಹೇಗೋ ನನ್ನ ಪಕ್ಕದ ಮನೆಯಲ್ಲಿದ್ದ ಹುಡುಗನಿಗೆ ಗೊತ್ತಾಗಿ ಹೋಯಿತು. ಆತ ಆಕೆಯ ಹಿಂದೆ ಬಿದ್ದ. ಪ್ರತಿ ಬಾರಿ ಆಕೆ ನನ್ನ ಮನೆಗೆ ಬರುವಾಗ ಹೋಗುವಾಗಲೆಲ್ಲ, “ನಿಮ್ಮನೆಯಲ್ಲಿ ಏನೋ ಕಾರ್ಯಕ್ರಮ ಆಯ್ತಂತೆ. ಸ್ವೀಟು ಕೊಡಿ’ ಎಂದು ಗಂಟು ಬೀಳ್ತಿದ್ದ. ಆಮೇಲೆ…
ಹ್ಯಾಪಿ ಟು ಬ್ಲೀಡ್ ಎನ್ನುವ ಯುವ ಮನಸ್ಸುಗಳ ದಿಟ್ಟತನದ ಅಭಿಯಾನವೊಂದು ಫೇಸ್‌ಬುಕ್ಕಿನಲ್ಲಿ, ವಾಟ್ಸಾಪಿನಲ್ಲಿ ಹಿಂದೊಮ್ಮೆ ನಡೆದಿತ್ತು. ಮೊನ್ನೆ ಯಾಕೋ ಒಂದು ಪೋಸ್ಟು ನೋಡಿದಾಗ ಆ ವಿಷಯ ನೆನಪಾಯಿತು. ಈ ದಿನಗಳಲ್ಲಿ ಎಷ್ಟೋ ದಿನದಿಂದ ಮನದಲ್ಲೇ ಉಳಿದು ಹೋಗಿದ್ದ ಸಂಗತಿಗಳು ಎದುರೆದುರು ನಿಂತು- ಅರೇ! ನಾನ್ಯಾಕಿನ್ನೂ ಈ ಎಲ್ಲ ವಿಚಾರಗಳನ್ನು ಯಾರಿಗೂ ಹೇಳಿಲ್ಲ ಎನ್ನಿಸಿ- ನಾಚಿಕೆಯೇ? ನನಗೆ ನಾನೇ ಕಿಚಾಯಿಸಿಕೊಂಡೆ. ಮತ್ತೆ, ಹಾಗೇನೂ ಇಲ್ಲ ಎಂದೂ ನನಗೆ ನಾನೇ ಸಂತೈಸಿಕೊಂಡೆ.
“ಯಾರಧ್ದೋ ಮುಟಟ್ಟು ಆಗಿರ್ಬೇಕು. ಅದಕ್ಕೇ ಕಾಗೆ ಬಂದಿಲ್ಲ’- ಇದು ನಾವು ಸಣ್ಣವರಿದ್ದಾಗ ಹೇಳುತ್ತಿದ್ದ ಕೀಟಲೆಯ ಸಾಲು. ಆದರೆ ಅದನ್ನು ನಾವೇಕೆ ಹಾಡುತ್ತಿದ್ದೆವೆಂಬುದಾಗಲಿ ಅದರ ಅರ್ಥವೇನೆಂಬುದಾಗಲಿ ಗೊತ್ತೇ ಇಲ್ಲದ ಅನಾದಿ ಕಾಲವದು. ನಾವು ಅದನ್ನು ಸಾಮಾನ್ಯವಾಗಿ ಹೇಳುತ್ತಿದ್ದದ್ದು ಮನೆಯಲ್ಲಿ ಯಾರದ್ದಾದರೂ ಶ್ರಾದ್ಧದ ದಿವಸ. ಆ ದಿನ ಸತ್ತವರ ಸಲುವಾಗಿ ಕಟ್ಟಿದ ಪಿಂಡವನ್ನು ಮನೆಯ ಮೇಲಿಟ್ಟು ಕಾಗೆ ಬರಲಿ ಎಂದು ಆಕಾಶ ನೋಡುತ್ತ, ಕಾಗೆ ಬಾರದಿದ್ದರೆ ನಮ್ಮಗಳ ಊಟ ತಡವಾಗುತ್ತದೆ ಎಂಬ ಸಂಕಟದಲ್ಲಿ ಬಿದ್ದು ಹೊಯ್ದಾಡುವಾಗ ಇಂಥದ್ದೊಂದು ವಾಕ್ಯ ನಮ್ಮ ಹಿರಿಯ ಹೆಂಗಸರ ನಡುವಿನಿಂದ ಸದ್ದಿಲ್ಲದೆ ಎದ್ದು, ಅವರು ತಮ್ಮ ತಮ್ಮಲ್ಲೇ ಒಬ್ಬರನ್ನೊಬ್ಬರು ಅನುಮಾನಿಸಿಕೊಳ್ಳುತ್ತ ತಮ್ಮ ಮುಟ್ಟಿನ ದಿನಾಂಕವನ್ನು ಪಿಸುಗುಟ್ಟುವಾಗ ಅವರ ಬಾಲಗಳಾದ ನಾವು ಮುಟ್ಟು ಎಂದರೆ ಏನೆಂದೇ ಗೊತ್ತಿಲ್ಲದೆ ಟಾಂ ಟಾಂ ಹೊಡೆಯುತ್ತಿದ್ದ ಮಾತಿದು.
ಮುಟ್ಟು ಎಂಬ ಗೌಪ್ಯ ಮತ್ತು ತೀರಾ ಖಾಸಗಿ ವಿಷಯದ ಬಗ್ಗೆ ನನಗೆ ಅರಿವು ಮೂಡಿದ್ದು ಯಾವಾಗ ಎಂಬ ಸ್ಪಷ್ಟ ನೆನಪಿಲ್ಲ. ಆದರೆ ಅದರ ಬಗೆಗಿನ ಕುತೂಹಲ ಶುರುವಾದದ್ದು ಮಾತ್ರ ಐದನೇ ತರಗತಿಯಲ್ಲಿದ್ದಾಗ. ನನಗೆ ಈಗಲೂ ಚೆನ್ನಾಗಿ ನೆನಪಿದೆ. ಬೇಸಿಗೆ ರಜಕ್ಕೆಂದು ಅಜ್ಜನ ಊರಿಗೆ ಹೋಗಿದ್ದ ಸಮಯ. ನಮ್ಮೊಂದಿಗೆ ಚೌಕಾಬಾರ ಆಡುತ್ತಿದ್ದ ನಮ್ಮ ಸಣ್ಣ ಅತ್ತೆಯೊಬ್ಬಳು ಬಚ್ಚಲ ಕೋಣೆಗೆ ಹೋಗಿ ಬಂದ ಕೂಡಲೆ ನಾನು ಹೊರಗೆ ಎನ್ನುತ್ತ ಮುಟ್ಟಿನ ಕೋಣೆಯನ್ನು ಹೊಕ್ಕು ಕೂತೇ ಬಿಟ್ಟಳು. ಅದೋ ತೀರಾ ಸಣ್ಣ ಕತ್ತಲ ಕೋಣೆ. ಬೇರಾರೂ ಒಳಗೆ ಹೋಗಬಾರದು ಎಂಬ ಗುರುತರ ಕಟ್ಟಪ್ಪಣೆ. ಹೊರಗೆ ನಿಂತು ಬಾರೇ ಆಟಕ್ಕೆ ಎಂದು ಎಷ್ಟೇ ಗೋಗರೆದರೂ ಆಕೆ ಈಗ ಬರೋ ಹಾಗಿಲ್ಲ. ನೀವ್ಯಾರೂ ಇಲ್ಲಿಗೆ ಬರಬೇಡಿ. ನನ್ನ ಮುಟ್ಟಬೇಡಿ ಅಂದುಬಿಟ್ಟಳು. ನಮಗೋ ಆಕೆ ಆಟದ ಮಧ್ಯದಲ್ಲಿ ಎದ್ದು ಹೋದ ಹತಾಶೆ ಮತ್ತು ಹೋಗುವಾಗ ಸರಿಯಿದ್ದ ಈಕೆ ಬರುವುದರೊಳಗಾಗಿ ಹೀಗಾದದ್ದು ಹೇಗೆ ಎನ್ನುವ ಯಕ್ಷಪ್ರಶ್ನೆ.
ಸರಿ, ಮಂಗ ಬುದ್ಧಿ, ವಿಪರೀತ ಕುತೂಹಲದ ವಯಸ್ಸು. ಹೇಗಾದರೂ ಈ ಸತ್ಯವನ್ನು ಕಂಡು ಹಿಡಿಯಲೇಬೇಕೆಂಬ ಹುರುಪಿನಲ್ಲಿ ನಾವು ಒಂದಿಬ್ಬರು ಅವಳಿಂದ ದೂರದಲ್ಲಿ ನಿಂತು “ಅಲ್ಲ… ಬಚ್ಚಲ ಮನೆಯಲ್ಲಿ ನಿಂಗೆ ಎಂತಾಯೆ¤à?’ ಎಂದು ಜೋರು ದನಿಯಲ್ಲಿ ಪ್ರಶ್ನಿಸಿದೆವು. ಚೋಟುದ್ದ ಇದ್ದ ನಮ್ಮಗಳಿಂದ ಆಕೆ ಇಂಥದ್ದೊಂದು ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲವೋ ಏನೋ. ಅದೂ ಅಲ್ಲದೆ ಸೂರು ಹಾರುವಂತೆ ನಾವು ಕೇಳಿದ್ದರಿಂದ ಆಕೆಗೆ ನಾಚಿಕೆ ಆಗಿರಬೇಕು. ಆಕೆ ಕೋಪಗೊಂಡು “ಹೋಗ್ರೋ ತಲೆಹರಟೆಗಳ!’ ಎಂದು ಬೈದು ಅಟ್ಟಲೆತ್ನಿಸಿದಳು. ಆದರೆ ನಾವು ಛಲ ಬಿಡದ ತ್ರಿವಿಕ್ರಮರಂತೆ ಮತ್ತೆ ಮತ್ತೆ ಅದನ್ನೇ ಪ್ರಶ್ನಿಸುತ್ತ ಅಲ್ಲಿಯೇ ನಿಂತೆವು. ಆಕೆಗೂ ಈ ಪೆಕರಾಗಳು ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದೆನ್ನಿಸಿರಬೇಕು “ಕರಟ ಮುಟ್ಟಿದೆ’ ಎಂದುಬಿಟ್ಟಳು. ನಾವು ಆ ಕ್ಷಣಕ್ಕೆ ಇರಬಹುದೇನೋ ಅಂದುಕೊಂಡೆವಾದರೂ ಅದರ ಮರುದಿನ ನಮ್ಮಲ್ಲೇ ಸಣ್ಣದೊಂದು ಚರ್ಚೆ ಶುರುವಾಯಿತು. “ಕರಟ ಮುಟ್ಟಿದರೆ ಹೊರಗೆ ಕೂರಬೇಕಾ? ಅದೂ ಮೂರು ದಿನ? ಹೆಂಗಸರು ಮಾತ್ರ ಯಾಕೆ ಕೂರಬೇಕು?’.
ಸರಿ, ಸಂಶೋಧನೆ ಶುರುವಾಯಿತು. ಬಚ್ಚಲಮನೆಯ ಕರಟವನ್ನು ಮುಟ್ಟಿಯೇ ನೋಡುವುದು ಎಂದುಕೊಂಡು ನಮ್ಮ ಗ್ಯಾಂಗು ಬಚ್ಚಲಮನೆಗೆ ದಾಳಿ ಇಟ್ಟಿತು. ಆದರೆ ಅಲ್ಲಿ ಕರಟವೇ ಇರಲಿಲ್ಲ! ಆಕೆ ನಮಗೆ ಏನೋ ಸುಳ್ಳು ಹೇಳಿದ್ದಾಳೆಂದು ಅನ್ನಿಸಿತು. ನಮ್ಮನ್ನು ಯಾಮಾರಿಸಿದ ಆಕೆಯ ಮೇಲೆ ಕೋಪವೂ ಬಂತು. ಅವಳ ಸುಳ್ಳನ್ನು ಎಲ್ಲರ ಎದುರು ಅನಾವರಣಗೊಳಿಸಿ ಅವಮಾನಿಸಬೇಕೆಂದು ನಿರ್ಧರಿಸಿ ಮತ್ತೆ ಅವಳ ಮುಂದೆ ಹೋಗಿ ನಿಂತೆವು. ಆಕೆ ಪಾಪ, ಸಣ್ಣ ಕೋಣೆಯಲ್ಲಿ ತಟ್ಟೆ ಚೊಂಬು ತಲೆಯ ಬುಡದಲ್ಲಿ ಇಟ್ಟುಕೊಂಡು ಮುದುರಿ ಮಲಗಿದ್ದಳು. ಬಾಗಿಲ ಬುಡದಲ್ಲಿ ಹೆಡ್‌ಮಾಸ್ತರರ ಹಾಗೆ ನಿಂತಿದ್ದ ನಮ್ಮನ್ನು ನೋಡಿದವಳೇ “ಏನು ಕೋತಿಗಳಾ?’ ಎಂದಳು. “ಎಲ್ಲಿದೆಯೇ ಕರಟ, ಬಚ್ಚಲಮನೆಯಲ್ಲಿ?’ ತನಿಖಾಧಿಕಾರಿಗಳಂತೆ ಪ್ರಶ್ನಿಸಿದೆವು. ಈ ಪ್ರಶ್ನೆ ಕೇಳಿದ್ದೇ ತಡ ಅವಳು ಹೆದರಿಕೊಳ್ಳುವುದು ಬಿಟ್ಟು ನಮ್ಮನ್ನು ಸುಡುವ ಕಣ್ಣಿನಿಂದ ದುರದುರನೆ ನೋಡಿ “ನಿಮ್ಗೆ ಬೇರೆ ಕೆಲಸ ಇಲ್ವಾ ತಲೆಹರಟೆಗಳಾ?’ ಎಂದುಬಿಟ್ಟಳು. ನಮಗೋ ಅವಳು ಸತ್ಯ ತಿಳಿಸದೆ ನಮ್ಮನ್ನೇ ಬೈದಳಲ್ಲ ಎನ್ನುವ ಕೋಪ ಬಂದು “ಇರು ಮಾಡ್ತೀವಿ. ನಮಗೇ ಸುಳ್ಳು ಹೇಳ್ತೀಯಾ…’ ಎನ್ನುತ್ತ ಅಲ್ಲೇ ತಂತಿಯ ಮೇಲೆ ನೇತು ಹಾಕಿದ್ದ ಬಟ್ಟೆಯನ್ನು ತೆಗೆದು ಅವಳ ಕಡೆಗೆ ಎಸೆಯತೊಡಗಿದೆವು. ಆಕೆ ಏನೂ ಮಾಡಲು ತೋಚದೆ “ಬೇಡ ಕಣೊ… ಬೇಡ ಕಣೊ…’ ಎನ್ನುತ್ತ ಬೇಡಿಕೊಳ್ಳತೊಡಗಿದಳು. ಪಾಪ ಮರುದಿನ ಅಷ್ಟೂ ಬಟ್ಟೆಯನ್ನು ನಮ್ಮನ್ನು ಬೈದುಕೊಳ್ಳುತ್ತಲೇ ಒಗೆದಳು. ಆದರೂ ಸತ್ಯ ಹೇಳಲಿಲ್ಲ.
ಇನ್ನು ಭದ್ರಾವತಿಯಲ್ಲಿ ನಾವೊಂದು ವಠಾರದಲ್ಲಿದ್ದೆವು. ಅಲ್ಲಿ ನನಗೊಬ್ಬಳು ಗೆಳತಿ. ಆಕೆ ನನಗಿಂತ ಬಹುಶಃ ಮೂರೋ ನಾಲ್ಕೋ ವರ್ಷಕ್ಕೆ ದೊಡ್ಡವಳಿದ್ದಿರಬೇಕು. ಒಂದು ದಿನ ಸಂಜೆ ನಾನು ಸಂಗೀತ ತರಗತಿಯನ್ನು ಮುಗಿಸಿ ವಾಪಸು ಬಂದೆ. ಅಷ್ಟೊತ್ತಿಗೆ ನನ್ನ ಅಮ್ಮನೂ ಸೇರಿದಂತೆ ವಠಾರದ ಅಷ್ಟೂ ಮಂದಿ ಹೆಂಗಸರು ಆಕೆಯ ಮನೆಯ ಮುಂದೆ ಜಮಾಯಿಸಿದ್ದರು. ನನಗೆ ಗಾಬರಿ! ಏನಾಯಿತಪ್ಪ ಇವಳಿಗೆ ಎಂದುಕೊಂಡೆ.
ಅಷ್ಟೊತ್ತಿಗಾಗಲೇ ಆಕೆ ನನ್ನ ಜೊತೆ ಶಾಲೆಗೆ ಬರದೆ ಐದಾರು ದಿನಗಳೇ ಕಳೆದುಹೋಗಿದ್ದವು. ಕೇಳಿದಾಗಲೆಲ್ಲ ಆಕೆಯ ಅಮ್ಮ ಆಕೆಗೆ ಹುಷಾರಿಲ್ಲ ಎಂದು ಹೇಳುತಿದ್ದರೇ ವಿನಾ ನನಗೆ ಅವಳನ್ನು ನೋಡಲು ಬಿಡುತ್ತಿರಲಿಲ್ಲ. ನಾನು ಅಜ್ಜಿಯ ಬಳಿ ದೂರಿದೆ. ಅವಳು ಸಾಂತ್ವನ ಹೇಳುವ ಬದಲಾಗಿ, ಅಲ್ಲಿಗೆ ಹೋಗಿದ್ದಕ್ಕೆ ಬೈದಳು. ನನಗೋ ತಲೆ ಬುಡ ಅರ್ಥವಾಗಲಿಲ್ಲ. ಪ್ರತಿದಿನ ಇಂದು ಬಂದಾಳು, ನಾಳೆ ಬಂದಾಳು ಎಂದು ಕಾಯುತ್ತಿದ್ದೆ. ಆಕೆ ಒಮ್ಮೆಯೂ ಹೊರಗೆ ಬಂದಿರಲೇ ಇಲ್ಲ. ಈಗ ನೋಡಿದರೆ ಎಷ್ಟೆಲ್ಲಾ ಜನ ಸೇರಿದ್ದಾರಲ್ಲ ಎಂದು ಎಣಿಸಿ, ಆದದ್ದಾಗಲಿ ಎಂದುಕೊಳ್ಳುತ್ತ ಅಲ್ಲಿಗೆ ಮೆಲ್ಲನೆ ಹೋಗಿ ನಿಂತೆ. ಏನಾಶ್ಚರ್ಯ! ಯಾರೊಬ್ಬರೂ ಬೈಯಲಿಲ್ಲ. ಬದಲಾಗಿ “ಓಳ್ಳೆಯದಾಯಿತು. ಬಾ ಇಲ್ಲಿ. ಒಂದು ಆರತಿ ಹಾಡು ಹೇಳು’ ಎಂದರು. ಆಕೆಯನ್ನು ನೋಡಿದರೆ, ಥೇಟ್ ಸಿನೆಮಾ ನಟಿಯರ ಹಾಗೆ ಅಲಂಕಾರ ಮಾಡಿಕೊಂಡು ಆರತಿ ಮಾಡಿಸಿಕೊಳ್ಳುತ್ತ ಕೂತಿದ್ದಳು. ಆನಂತರ ಅವಳು ಶಾಲೆಗೆ ಬರಲಿಲ್ಲ. ಶಾಲೆ ಬಿಡಿಸುವ ಮೊದಲು ಹೀಗೆ ಮಾಡುತ್ತಾರೇನೋ ಅಂದುಕೊಂಡು ಒಂದು ದಿನ ಧೈರ್ಯ ಮಾಡಿ ಅಮ್ಮನ ಬಳಿ “ನಂಗೂ ಶಾಲೆ ಬಿಡಿಸುವ ಮೊದಲು ಹೀಗೆಲ್ಲಾ ಮಾಡ್ತಾರಾ?’ ಎಂದು ಕೇಳಿಯೇಬಿಟ್ಟೆ.
ಆಕೆ “ನೀನು ಶಾಲೆ ಬಿಡೋದೂ ಇಲ್ಲ, ನಿಂಗೆ ಹಿಂಗೆ ಮಾಡೋದೂ ಇಲ್ಲ’ ಎಂದು ಕಡ್ಡಿ ಮುರಿದಂತೆ ಅಂದುಬಿಟ್ಟಳು. ಇಷ್ಟಾದರೂ ನಮ್ಮದೇ ದೇಹದಲ್ಲಿ ನಡೆಯುವ ಈ ಜೈವಿಕ ಕ್ರಿಯೆಯ ಬಗೆಗೆ ಅರಿವಾಗಲಿ, ಮಹತ್ವವಾಗಲಿ ಏನೊಂದು ತಿಳಿದಿರಲೇ ಇಲ್ಲ. ಸುಮಾರು ಎಂಟನೇ ತರಗತಿಗೆ ಬರುವವರೆಗೂ ಈ ರೀತಿಯಾದಂಥ ಅನೂಹ್ಯ ಚಕ್ರವೊಂದು ನಮ್ಮೊಳಗೇ ತಿರುಗಲಿದೆ ಎನ್ನುವ ಸಣ್ಣ ಕಲ್ಪನೆಯೂ ಇರಲಿಲ್ಲ. ಹೈಸ್ಕೂಲಿಗೆ ಬಂದ ಮೇಲೆ ಗೆಳತಿಯರ ನಡುವೆ ಈ ರೀತಿಯ ಮಾತುಗಳು ಗುಸುಗುಸು ಪಿಸುಪಿಸು ಎಂದು ಶುರುವಾಯಿತು. ಯಾರಾದರೂ ವಾರಗಟ್ಟಲೆ ಶಾಲೆ ತಪ್ಪಿಸಿದರೆಂದರೆ ಅವರಿಗೂ ಹೀಗೇ ಆಗಿರಬೇಕು ಎಂದುಕೊಳ್ಳುತ್ತ ಮುಸಿ ಮುಸಿ ನಗುತ್ತಿದ್ದೆವು.
ನನ್ನ ಪರಮಾಪ್ತ ಗೆಳತಿಯೊಬ್ಬಳು ನಿತ್ಯ ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಿದ್ದಳು. ಆಕೆಗೂ ಒಂದು ದಿನ ಆರತಿ ಎತ್ತಿಸಿಕೊಳ್ಳುವ ಸಂದರ್ಭ ಬಂದೇಬಿಟ್ಟಿತು. ಅದನ್ನು ಅವಳ ಮನೆಯವರು ದೊಡ್ಡ ಕಾರ್ಯಕ್ರಮವೆಂಬಂತೆ ಪರಿಚಯವಿದ್ದ ಎಲ್ಲರನ್ನೂ ಕರೆದು ಆಚರಿಸಿದರು. ಅದು ಹೇಗೋ ನನ್ನ ಪಕ್ಕದ ಮನೆಯಲ್ಲಿದ್ದ ಹುಡುಗನಿಗೆ ಗೊತ್ತಾಗಿ ಹೋಯಿತು. ಆತ ಆಕೆಯ ಹಿಂದೆ ಬಿದ್ದ. ಪ್ರತಿ ಬಾರಿ ಆಕೆ ನನ್ನ ಮನೆಗೆ ಬರುವಾಗ ಹೋಗುವಾಗಲೆಲ್ಲ, “ನಿಮ್ಮನೆಯಲ್ಲಿ ಏನೋ ಕಾರ್ಯಕ್ರಮ ಆಯ್ತಂತೆ. ಸ್ವೀಟು ಕೊಡಿ’ ಎಂದು ಗಂಟು ಬಿದ್ದ. ಇದು ನನ್ನ ಕಿವಿಯನ್ನು ತಲುಪುತ್ತಿತ್ತಾದರೂ ನನಗದರ ಪ್ರಭಾವ ತೀವ್ರವಾಗಿ ಆಗಿರಲಿಲ್ಲ. ಆಕೆ ಮಾತ್ರ ಅವನು ಹಾಗೆ ಕೇಳಿದಾಗಲೆಲ್ಲ ಬಿಳಿಚಿಕೊಳ್ಳುತ್ತಿದ್ದಳು. ಏನೊಂದು ಉತ್ತರ ಹೇಳದೆ ನನ್ನನ್ನೂ ದಬ್ಬಿಕೊಂಡು ನಡೆಯುತ್ತಿದ್ದಳು. ಕೊನೆ ಕೊನೆಗೆ ನನ್ನ ಮನೆಗೆ ಬರುವುದಕ್ಕೇ ನಿರಾಕರಿಸಿದಳು. ನನಗೋ ಅವಳ ಸಂಕಟಗಳಾಗಲಿ, ಸಂಕೋಚಗಳಾಗಲಿ, ತಲ್ಲಣಗಳಾಗಲಿ ಗೊತ್ತಾಗುತ್ತಲೇ ಇರಲಿಲ್ಲ. ಅವಳು ನನ್ನ ಮನೆಗೆ ಬರುವುದೇ ಇಲ್ಲ ಎಂದು ಹಠ ಹಿಡಿದಾಗ ದೂರು ನನ್ನ ಮನೆ ತಲುಪಿ, ಅವನಿಗೆ ಬೈಯ್ಯುವುದರೊಂದಿಗೆ ಮುಕ್ತಾಯ ಕಂಡಿತು.
ಈಗ ವಯಸ್ಸು ಮುಟ್ಟು ನಿಲ್ಲುವ ಹಂತಕ್ಕೆ ತಲುಪತೊಡಗಿದೆ. ಯಾವಾಗ ಮುಗಿಯುತ್ತದೋ ಎಂಬ ರಗಳೆಯೂ ಶುರುವಾಗಿದೆ. ಆದರೆ ಅದು ಹೆಣ್ತನದ ಗುರುತು. ನನ್ನದು ಮಾತ್ರವೇ ಎನ್ನುವಂಥ ಅಧ್ಯಾತ್ಮ. ನನ್ನ ಜೀವಂತಿಕೆಯ ಲಕ್ಷಣ ಎನ್ನುವ ಆಪ್ತಭಾವ ಉಕ್ಕಿದಾಗ ಅದನ್ನು ಬಟಾಬಯಲಿನಲ್ಲಿ ತಬ್ಬಿಕೊಳ್ಳಬೇಕೆನ್ನಿಸುತ್ತದೆ. ಇಷ್ಟಾದರೂ ಅದಕ್ಕಿರುವ ಮೈಲಿಗೆ, ಚೌಕಟ್ಟು, ಬೇಲಿ ಹೊರಗಿನ ಎಲ್ಲ ಆವರಣಗಳು ಮತ್ತು ಎದೆಯೊಳಗೆ ಹೊಕ್ಕಿರುವ ನಾಚಿಕೆ ಸಂಕೋಚ ಗೌಪ್ಯತೆ ಎಲ್ಲವೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಅನಾವರಣಗೊಳ್ಳುತ್ತಲೇ ಇರುತ್ತವೆ. ಆಕಸ್ಮಿಕವಾಗಿಯಾದರೂ ದೇವಸ್ಥಾನಗಳಿಗೆ ಹೋಗಬೇಕಾಗಿ ಬಂದಾಗ ಎಂದೋ ತಲೆಯಲ್ಲಿ ತುಂಬಿಸಿರುವ ಅಗೋಚರ ಅಪರಾಧಿ ಪ್ರಜ್ಞೆಯಲ್ಲಿ ನರಳುತ್ತೇನೆ. ಮನೆಯ ಹಿರಿಯರ ಜೊತೆ ನ್ಯಾಪ್‌ಕಿನ್‌ಗಳ ಜಾಹೀರಾತು ನೋಡುವಾಗ ಮುಜುಗರವಾಗುತ್ತದೆ. “ಏನಮ್ಮಾ ಅದು?’ ಎನ್ನುವ ಮಗಳ ಪ್ರಶ್ನೆಗೆ ಉತ್ತರ ಹೇಳಲು ತಡಕಾಡುತ್ತೇನೆ. ಆಗೆಲ್ಲಾ ನನ್ನ ಪುಟ್ಟ ಮಗಳಿಗೆ ಈ ಯಾವ ಸಂಕಟಗಳು, ಸಂಕರಗಳು ಎದುರಾಗಬಾರದು ಅನ್ನಿಸಿದರೂ ಅದು ನಡೆಯಲೇಬೇಕಾದ ಹಾದಿ ಎಂದೆನ್ನಿಸಿ ಸುಮ್ಮನಾಗುತ್ತೇನೆ.
ಆದರೆ ನಾನು ಸುಮ್ಮನಿದ್ದರೂ ದಿನಗಳು ಸುಮ್ಮನಿರಬೇಕಲ್ಲ… ಮೊನ್ನೆ ದೀಪಾವಳಿಯ ಹಿಂದಿನ ದಿನ ಹೀಗೆಯೇ ಆಯಿತು. “ಅಮ್ಮಾ… ನಿನಗೊಂದು ಗಿಫ್ಟ್ ಇದೆ’ ಎನ್ನುತ್ತ ಎದುರು ನಿಂತಳು ಮಗಳು. ನಾನು ಸಹಜವಾಗಿಯೇ “ಏನು?’ ಎಂದೆ, ಆಕೆ ವಿಸ್ಪರ್‌ನ ಒಂದು ಪ್ಯಾಕೇಟ್ ಕೈಯ್ಯಲ್ಲಿ ಹಿಡಿದು “ಸ್ಕೂಲಲ್ಲಿ ಕೊಟ್ಟಿದ್ದು…’ ಎಂದು ಮುಸಿ ಮುಸಿ ನಕ್ಕಳು. ನನಗೆ ಪೆಚ್ಚಾಯಿತು. ಇಷ್ಟು ಬೇಗ ಬೆಳೆದುಬಿಟ್ಟಳಾ ನನ್ನ ಪುಟ್ಟಿ ಎನ್ನಿಸಿತು. “ಯಾಕಮ್ಮ ಇದು?’ ತುಂಟ ಕಣ್ಣಿನಲ್ಲಿ ಕೇಳಿದಳು. ನಾನು “ಪ್ರೌಡ್ ಟು ಬ್ಲೀಡ್ ಮಗಳೇ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಅವಳನ್ನು ಎದೆಗೊತ್ತಿಕೊಂಡೆ.
ದೀಪ್ತಿ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.