ನಿಮ್ಮೆಜಮಾನ್ರಿಗೆ ಆ್ಯಕ್ಸಿಡೆಂಟ್ ಆಗಿದೆ…
Team Udayavani, May 3, 2017, 5:54 PM IST
ಮಧ್ಯಾಹ್ನ ಸುಮಾರು 3 ಗಂಟೆ, ಚಾನೆಲ್‌ನಲ್ಲಿದ್ದೆ! ಊಟ ಮುಗಿಸಿ ಅರ್ಧ ಬರೆದಿಟ್ಟಿದ್ದ ಪ್ರೋಮೋ ಲೈನ್ಸ್ ಮುಗಿಸಲು ಕಂಪ್ಯೂಟರ್ ಮುಂದೆ ಕೂತೆ. ಮೊಬೈಲ್ ರಿಂಗಣಿಸಿತು. ಯಾರದಿರಬಹುದು ಕಾಲ್ ಎಂದು ಕಣ್ಣು ಹಾಯಿಸಿದಾಗ, ಅದ್ಯಾವುದೋ ಲ್ಯಾಂಡ್ ಲೈನ್ ನಂಬರ್. ರಿಸೀವ್ ಮಾಡಲೋ ಬೇಡವೋ, ಅನ್ನೋ ಮನಸ್ಸಿಲ್ಲದ ಮನಸ್ಸಿಂದೆ ಸ್ವೆ„ಪ್ ಮಾಡಿ, ‘ಹಲೋ’ ಎಂದೆ! ‘ಅರುಣ್ ಮೂರ್ತಿ ಹೆಂಡ್ತೀನಾ?’ ಯಾವುದೋ ಹೆಂಗಸಿನ ದನಿ. ನನ್ನೆದೆ ಯಾಕೋ ಢವಗುಟ್ಟಿತು. ‘ಹೌದು’ ‘ನಿಮ್ಮೆಜಮಾನ್ರಿಗೆ ಆಕ್ಸಿಡೆಂಟ್ ಆಗಿದೆ. ಮಲ್ಲಿಗೆ ಆಸ್ಪತ್ರೇಲಿ ಇದಾರೆ. ಬೇಗ ಬನ್ನಿ. ಅರ್ಜೆಂಟ್! ತಲೆಗೆ ಹೊಡೆತ ಬಿದ್ದಿದೆ’. ಧಡಕ್ಕನೆ ಎದ್ದು ನಿಂತೆ, ಒಂದೇ ಸಮನೆ ನಡುಕ. ನನ್ನ ಅವಸ್ಥೆ ನೋಡಿ ನನ್ನ ಸಹೋದ್ಯೋಗಿಗಳು ಏನಾಯ್ತು ಎನ್ನುವಂತೆ ನೋಡಿದರು. ನಾನು ಸಾವರಿಸಿಕೊಂಡು “ನನ್ನ ಮೊಬೈಲ್ ನಂಬರ್ ಹೆಂಗೆ ಸಿಕ್ತು?’ ಎಂದೆ. “ನಿಮ್ ಹಸ್ಬೆಂಡ್ ಕೊಟ್ರಾ’ ಅಂದಾಗ ಒಂಚೂರು ಸಮಾಧಾನ. ನನ್ನ ನಂಬರ್ ಕೊಟ್ಟಿದ್ದಾರೆ ಅಂದ್ಮೇಲೆ ಹೆದರಿಕೆ ಇಲ್ಲ ಅನ್ನಿಸ್ತು. ನನ್ನ ಕಲೀಗ್ ಬೈಕ್ನಲ್ಲಿ ಮಲ್ಲಿಗೆ ಹಾಸ್ಪಿಟಲ್‌ಗೆ ಹೊರಟು, ದಾರಿಯಲ್ಲೇ ಮನೆಯವರಿಗೆಲ್ಲಾ ವಿಷಯ ತಿಳಿಸಿದೆ. ಐ.ಸಿ.ಯು ಒಳಗಿದ್ದ ಯಜಮಾನರನ್ನು ನೋಡಿ ನನಗೆ ಜಂಘಾಬಲವೇ ಉಡುಗಿಹೋಯ್ತು. ತಲೆ, ಕಿವಿ, ಮೂಗು ಎಲ್ಲದರಿಂದ ರಕ್ತ ಸೋರುತ್ತಿದೆ. ಅಷ್ಟರಲ್ಲಿ ಅವರ ಬೈಕ್ ಕೀ, ಲ್ಯಾಪ್‌ಟಾಪ್, ಆಫಿಸ್ ಬ್ಯಾಗ್ ಹಿಡಿದು ನಿಂತಿದ್ದ ಹೆಂಗಸು ನನ್ನ ಕಣ್ಣಿಗೆ ಬಿದ್ರು. ಪಕ್ಕದಲ್ಲಿದ್ದ ನರ್ಸ್, ‘ಅವರೇ ನಿಮ್ಮ ಹಸ್ಬೆಂಡ್‌ನ ಇಲ್ಲಿಗೆ ಕರ್ಕೊಂಡು ಬಂದಿದ್ದು’ ಅಂದರು.
ನಾನು ಕಣ್ತುಂಬಿಕೊಂಡು ಆಕೆಯ ಬಳಿ ಹೋಗಿ ಅವರ ಕೈ ಹಿಡಿದುಕೊಂಡೆ! ಆಕೆ ನನ್ನನ್ನು ಬಳಸಿ, ‘ಹೆದರಬೇಡಿ, ಸ್ಕ್ಯಾನಿಂಗ್ ಮಾಡಿದೀನಿ. ರಿಪೋರ್ಟ್ ಬರಬೇಕು. ನನ್ನ ಅಂದಾಜಲ್ಲಿ ಹೇಳುವುದಾದ್ರೆ ತೊಂದರೆಯೇನೂ ಇಲ್ಲ. ನಿಮ್ಮ ಯಜಮಾನರು, ಡಾಕ್ಟರ್ ಕೇಳಿದ್ದಕ್ಕೆಲ್ಲಾ ರೆಸ್ಪಾಂಡ್ ಮಾಡ್ತಿದಾರೆ. ತೊಗೊಳ್ಳಿ ಅವರ ಕತ್ತಿನ ಚೈನ್, ಉಂಗುರ, ವಾಚ್’ ಅಂತ ಕವರ್ ಕೊಟ್ರಾ. ‘ರಾಜಭವನ್ ರಸ್ತೇಲಿ ನಮ್ ಕಾರಿನ ಮುಂದೇನೇ ಇವ್ರ ಬೈಕ್ ಸಡನ್ನಾಗಿ ಸ್ಕಿಡ್ ಆಗಿ ಎಗರಿ ಬಿದ್ದುಬಿಟ್ರಾ. ನಾನು ನನ್ ಡ್ರೈವರ್ ಇಳಿದು ಬರೋವಷ್ಟ್ರಲ್ಲಿ ಯಾರೋ ಹೆಲ್ಮೆಟ್, ಮೊಬೈಲ್ ಎಗರಿಸಿಬಿಟ್ಟಿದ್ರು. ತಕ್ಷಣ ನಮ್ ಕಾರಿನಲ್ಲೇ ಕರ್ಕೊಂಡು ಬಂದು ಇಲ್ಲಿ ಅಡ್ಮಿಟ್ ಮಾಡಿ, ಫಾರ್ಮಾಲಿಟೀಸ್ ಎಲ್ಲಾ ಕಂಪ್ಲೀಟ್ ಮಾಡಿದೀನಿ. ಅವರಿಗೆ ಸ್ವಲ್ಪ ಎಚ್ಚರಿಕೆ ಬಂದ್ಮೇಲೆ ನಿಮ್ಮ ಹೆಸರು, ಫೋನ್ ನಂಬರ್
ಹೇಳಿದ್ರು. ಡೋಂಟ್ ವರಿ, ಎಲ್ಲಾ ಸರಿಹೋಗುತ್ತೆ. ನನ್ನ ಮೊಮ್ಮಗಳ ಸ್ಕೂಲ್ ಡೇ ಗೆ ಹೊರಟಿದ್ದೆ. ಬಹುಶಃ ಮುಗಿದುಹೋಗಿರುತ್ತೆ. ಮನೇಗೆ ಹೊರಡ್ತೀನಿ. ಏನಾಯ್ತು ಅಂತ ಕಾಲ್ ಮಾಡಿ. ರಿಜಿಸ್ಟರ್‌ನಲ್ಲಿ ನನ್ನ ನಂಬರ್ ಇದೆ.’ ಅಂತ ಹೇಳಿ ಹೊರಟುಹೋದಳು ಆ ಪುಣ್ಯಾತ್ಗಿತ್ತಿ.
ಪರಿಚಯ ಇಲ್ಲದಿದ್ರೂ ಯಾರು ಇಷ್ಟು ಸಹಾಯ ಮಾಡ್ತಾರೆ? ನಾನೇ ಆಕೆಯ ಜಾಗದಲ್ಲಿದ್ದಿದ್ರೆ, ಸುಮ್ಮನೆ ನೋಡಿ ಅಯ್ಯೋ ಪಾಪ ಅಂತ ಲೊಚಗುಟ್ಟಿ, ನನ್ನ ಪಾಡಿಗೆ ಹೊರಟುಬಿಡ್ತಿದೆನೋ! ಆವತ್ತೇ ಡಿಸೈಡ್ ಮಾಡಿಬಿಟ್ಟೆ. ಎಷ್ಟೇ ಕಷ್ಟವಾದ್ರೂ ಈ ಥರ ಸಹಾಯ ಮಾಡ್ಬೇಕು ಅಂತ! ನಮ್ಮೆಜಮಾನ್ರು ಹುಷಾರಾಗಿ ಮನೆಗೆ ಬಂದ ಮಾರನೇ ದಿನವೇ ನಾನು- ಅವರು, ಆಕೆ (ಅವರ ಹೆಸರು ಗೀತಾ)ಯ ಮನೆಗೆ ಹೋಗಿಬಂದೆವು. ನಮ್ಮ ಮನೆಗೂ ಆ ದಂಪತಿ ಬಂದಿದ್ದರು. ಈಗ, ಪ್ರತಿ ಬೆಳಗ್ಗೆ ದೇವರ ಜೊತೆಗೆ ಆಕೆಯನ್ನೂ ನೆನೆಯುತ್ತೇನೆ!
ಕುಮುದವಳ್ಳಿ ಅರುಣ್ ಮೂರ್ತಿ