ಅನುರಾಗ ಸಂಭ್ರಮ
Team Udayavani, Feb 6, 2019, 12:30 AM IST
ಪ್ರೇಮದ ಗಂಗೆ ಇಳಿದು ಬಂದಂತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಅನು ಪ್ರಭಾಕರ್. ಫಕ್ಕನೆ ನೋಡಿದರೆ ಕರುನಾಡ ಮನೆ ಮಗಳಂತೆ ತೋರುವ ಅನು ಪ್ರಭಾಕರ್ ಸದ್ಯ ಗಂಡ ಮಗಳು ಮನೆ ಇದಿಷ್ಟೇ ಬದುಕು ಎನ್ನುವಂತೆ ಸುಮ್ಮನಿದ್ದಾರೆ. ಈ ನಡುವೆಯೂ ಬಿಡುವು ಮಾಡಿಕೊಂಡು ನಟಿಸಿದ “ಅನುಕ್ತ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಕಂಡು ಮೆಚ್ಚುಗೆ ಪಡೆಯುತ್ತಿದೆ. ಮಗಳು ನಂದನಾ ಬಂದಮೇಲೆ ಬದುಕೇ ನಂದನವನ ಆಗಿದೆ ಎನ್ನುವ ಅವರು ತಾಯ್ತನ, ಪತಿ, ತಾಯಿ ಕುರಿತು ಮಾತುಗಳನ್ನು ಹಂಚಿಕೊಂಡಿದ್ದಾರೆ.
-ತಾಯ್ತನದ ಅನುಭವ ಹೇಗಿದೆ?
ಜೀವನದಲ್ಲೇ ಅತ್ಯಂತ ಸುಂದರವಾದ ಘಟ್ಟ ಇದು. ತಾಯ್ತನದ ಪ್ರತಿ ಸೆಕೆಂಡನ್ನೂ ಅನುಭವಿಸುತ್ತಿದ್ದೇನೆ. ಮಗಳಿಗೆ ಈಗ 5 ತಿಂಗಳು ತುಂಬಿದೆ. ನಮ್ಮನ್ನು ಗುರುತು ಹಿಡಿಯುತ್ತಾಳೆ. ಮಾತನಾಡಿಸಿದರೆ ಪ್ರತಿಕ್ರಿಯಿಸುತ್ತಾಳೆ. ಅದನ್ನು ನೋಡುವುದೇ ದೊಡ್ಡ ಚಂದ. ಅವಳಿಗೆ ನಂದನಾ ಪ್ರಭಾಕರ್ ಮುಖರ್ಜಿ ಅಂತ ಹೆಸರಿಟ್ಟಿದ್ದೀವಿ.
-ನಿಮ್ಮ ಮತ್ತು ಪತಿ ಇಬ್ಬರ ಸರ್‌ನೆಮನ್ನೂ ಮಗುವಿಗೆ ಇಟ್ಟಿರುವುದಕ್ಕೆ ಕಾರಣ?
ತಾಯಿಯ ಹೆಸರನ್ನು ಮಕ್ಕಳಿಗೆ ಇಡುವ ಪರಿಪಾಠ ನಮ್ಮಲ್ಲಿ ಇನ್ನೂ ಇಲ್ಲ. ನಾನೂ ನನ್ನ ಹೆಸರನ್ನು ಬದಲಿಸಿಲ್ಲ. ಅನು ಪ್ರಭಾಕರ್ ಎಂದೇ ಇದೆ. ಈಗ ಅದರ ಮುಂದೆ ಮುಖರ್ಜಿ ಸೇರಿದೆ. ನಮ್ಮ ಮಗಳ ಹೆಸರಲ್ಲಿ ನನ್ನ ಹೆಸರೂ ಇರಬೇಕು ಎಂದು ನನಗೆ ಮೊದಲಿನಿಂದಲೂ ಆಸೆ ಇತ್ತು. ರಘು ತಲೆಯಲ್ಲೂ ಈ ಯೋಚನೆ ಇತ್ತು. ನಾನು ಹೇಳುತ್ತಲೇ ಅವರು ಖುಷಿಯಿಂದ ಒಪ್ಪಿಕೊಂಡರು. ಹೀಗಾಗಿ ಮಗಳ ಹೆಸರಿನ ಕ್ರೆಡಿಟ್ ನನಗೂ, ರಘುವಿಗೂ ಸಲ್ಲುತ್ತದೆ.
-ಗರ್ಭಿಣಿಯಾಗಿದ್ದ ಸಮಯದಲ್ಲಿ ಏನೆಲ್ಲಾ ಕಾಳಜಿ ವಹಿಸಿದ್ದಿರಿ?
ನಂದನಾ ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ನನ್ನನ್ನು ನೋಡಿಕೊಂಡಿದ್ದು, ಡೆಲಿವರಿ ಮಾಡಿಸಿದ್ದು ನನ್ನ ಅಕ್ಕ ಡಾ. ನೀಲಾ ದೀಕ್ಷಿತ್ ಅಂತ. ಅವಳು ಹುಬ್ಬಳ್ಳಿಯಲ್ಲಿದ್ದಾಳೆ. ನಾನು ಡೆಲಿವರಿ ಸಮಯದಲ್ಲಿ ಅಲ್ಲಿಯೇ ಹೋಗಿ ನೆಲೆಸಿದ್ದೆ. ಆಗೆಲ್ಲಾ ಚಟುವಟಿಕೆಯಿಂದಿದ್ದೆ. ಯೋಗ ಟೀಚರ್ ಮನೆಗೇ ಬಂದು ಯೋಗ ಹೇಳಿಕೊಡುತ್ತಿದ್ದರು. ಅಲ್ಲದೆ ಅಕ್ಕ “ನಿನಗೆ ಏನು ಸೇರುತ್ತದೆಯೊ ಅದೆಲ್ಲವನ್ನೂ ತಿನ್ನು’ ಎಂದು ಹೇಳಿದ್ದಳು. ಅನವಶ್ಯಕ ಪತ್ಯೆಯನ್ನು ಮಾಡಲಿಲ್ಲ. ಖಾರದ ಪದಾರ್ಥ ತಿಂದರೆ ಅಸಿಡಿಟಿ ಆಗುತ್ತಿತ್ತು. ಹೀಗಾಗಿ ಖಾರದ ಪದಾರ್ಥ ತಿನ್ನುತ್ತಿರಲಿಲ್ಲ. ಅಷ್ಟು ಬಿಟ್ಟರೆ ಎಲ್ಲಾ ಬಗೆಯ ಆಹಾರವನ್ನೂ ತಿನ್ನುತ್ತಿದ್ದೆ. ಹಣ್ಣುಗಳನ್ನು ತಿನ್ನಬೇಕು ಅಂತ ತುಂಬಾ ಅನ್ನಿಸುತ್ತಿತ್ತು. ದಂಡಿಗಟ್ಟಲೆ ಹಣ್ಣು ತಿನ್ನುತ್ತಿದ್ದೆ. ಪಪ್ಪಾಯವನ್ನೂ ತಿನ್ನುತ್ತಿದ್ದೆ. ಅಮ್ಮ ಮೆಂತ್ಯೆ ದೋಸೆ, ಕರಿಬೇವಿನ ಹಿಟ್ಟು, ಸೊಪ್ಪಿನ ಪಲ್ಯವನ್ನು ಹೆಚ್ಚಾಗಿ ಮಾಡಿಕೊಡುತ್ತಿದ್ದರು. ಅತ್ತೆ, ಅಮ್ಮ ಇಬ್ಬರೂ ನನ್ನ ಕಾಳಜಿ ವಹಿಸಿದ್ದರು.
-ಬಯಕೆ ಅಂತ ಗಂಡನ ಬಳಿ ಏನು ತರಿಸಿಕೊಂಡು ತಿಂದಿರಿ?
ಐಸ್‌ಕ್ರೀಂ!
-ಮತ್ತೆ ಅಭಿನಯಕ್ಕೆ ಮರಳುವುದು ಯಾವಾಗ?
ತಾಯ್ತನ ಎಂದರೆ ಲಾಂಗ್ ಟರ್ಮ್ ಕಮಿಟ್‌ಮೆಂಟ್. ಮಗುವಿಗೆ ವರ್ಷ ತುಂಬುವವರೆಗಾದರೂ ಬ್ರೇಕ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ. ಅದಾದ ಬಳಿಕವೂ ಮಗುವಿಗೆ ಸಮಯ ನೀಡಲು ಸಾಧ್ಯವಾಗುವಂಥ ಪಾತ್ರಗಳು ಸಿಕ್ಕರೆ ಮಾತ್ರ ಒಪ್ಪಿಕೊಳ್ಳುತ್ತೇನೆ.
-ನಂದನಾ ಬಂದ ಮೇಲೆ ನಿಮ್ಮ ಜೀವನ ಯಾವ ರೀತಿ ಬದಲಾಗಿದೆ?
ನಾನು ಸಂತೆಯಲ್ಲೂ ನಿದ್ದೆ ಮಾಡುವವಳು. ಎಂಥಾ ಶಬ್ದಕ್ಕೂ ನನಗೆ ಎಚ್ಚರವಾಗುವುದಿಲ್ಲ. ನಂದನಾ ಹುಟ್ಟಿದ ಮೇಲೆ ಮೊದಲಿನಷ್ಟು ನಿದ್ದೆಯಿಲ್ಲ. ಜೊತೆಗೆ ಆಕೆ ಚಿಕ್ಕ ಸಪ್ಪಳ ಮಾಡಿದರೂ ನನಗೆ ಎಚ್ಚರವಾಗುತ್ತದೆ. ಈಗ ನನ್ನ ಸಮಯದ ಬಹುಪಾಲು ನಂದನಾಗೆ ಮೀಸಲು.
-ವಿದ್ಯಾರ್ಥಿ ಜೀವನದಲ್ಲಿ ನಿಮಗೆ ಸಿಕ್ಕ ಉಡುಗೊರೆಗಳನ್ನು, ನೆನಪುಗಳನ್ನು ಜೋಪಾನ ಮಾಡಿಡುವ ಹವ್ಯಾಸ ಇತ್ತ ಅಂತ ಕೇಳಿದ್ದೆವು. ಈಗಲೂ ಅದು ಮುಂದುವರಿದಿದೆಯಾ?
ಹೌದು. ಈಗಲೂ ನನಗೆ ನೆನಪುಗಳನ್ನು ಕೂಡಿಡುವ ಅಭ್ಯಾಸ ಇದೆ. ಹಿಂದೆಲ್ಲಾ ಆ ಅಭ್ಯಾಸ ತುಂಬಾ ಇತ್ತು. ಈಗ ಸ್ವಲ್ಪ ಕಡಿಮೆಯಾಗಿದೆ. ಈಗ ಬಹಳ ಮುಖ್ಯ ಅನಿಸಿದ್ದನ್ನು ಮಾತ್ರ ಇಟ್ಟುಕೊಳ್ಳುತ್ತೇನೆ. ನನ್ನ ಬಳಿ ಇರುವ ಅಮೂಲ್ಯ ನೆನಪುಗಳು ಎಂದರೆ ಅಪ್ಪ ತೆಗೆದಿರುವ ಫೋಟೋಗಳು. ನಾನು ಹುಟ್ಟಿದ ಸಮಯದಲ್ಲಿ. ಮೊದಲ ಬಾರಿಗೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ ಫೋಟೊ… ಹೀಗೆ ನನ್ನ ಎಲ್ಲಾ ಮೊದಲುಗಳನ್ನು ಅಪ್ಪ ಸೆರೆಹಿಡಿದಿದ್ದಾರೆ. ನನ್ನ ಗಂಡನಿಗೂ ಫೋಟೊಗಳನ್ನು ಕೂಡಿಡುವ ಹವ್ಯಾಸ ಇದೆ. ನಮ್ಮ ಮನೆಯ ಒಂದು ಗೋಡೆಯ ತುಂಬಾ ನನ್ನ- ಅವರ ಅಪರೂಪದ ಫೋಟೊಗಳ ಗ್ಯಾಲರಿ ಮಾಡಿದ್ದೇವೆ. ನಮ್ಮ ಕುಟುಂಬಗಳ ಫೋಟೊಗಳು ಇದೆ. ಈಗ ಅದಕ್ಕೆ ನಂದನಾ ಫೋಟೊ ಕೂಡಾ ಸೇರಿಕೊಂಡಿದೆ. ಪ್ರತಿ ಫೋಟೊ ಹಿಂದೆಯೂ ಒಂದು ಕಥೆ ಇದೆ. ಆ ಕಥೆಗಳನ್ನು ನೆನೆಯುವುದೇ ಒಂದು ಸಂಭ್ರಮ.
-ನಿಮ್ಮ ಮತ್ತು ಪತಿ ರಘು ಮುಖರ್ಜಿ ನಡುವಿನ ಸಮಾನ ಆಸಕ್ತಿಗಳೇನು?
ಇಬ್ಬರೂ ಚಿತ್ರರಂಗಕ್ಕೆ ಸೇರಿದವರಾದ ಕಾರಣ ಸಿನಿಮಾಗಳನ್ನು ನೋಡುವ, ನೋಡಿದ ಸಿನಿಮಾಗಳನ್ನು ವಿಮರ್ಶಿಸುವ ಕೆಲಸ ಸದಾ ಮಾಡುತ್ತಲೇ ಇರುತ್ತೇವೆ. ನಂದನಾ ಹುಟ್ಟುವುದಕ್ಕೂ ಮೊದಲು ಥಿಯೇಟರ್‌ಗಳಿಗೆ ಹೋಗಿ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇವೆ. ಇಬ್ಬರಿಗೂ ಪ್ರವಾಸ ತುಂಬಾ ಇಷ್ಟ. ಬೆಂಗಳೂರಿನಿಂದ ಊಟಿಗೆ ಬೈಕ್‌ನಲ್ಲಿ ಪ್ರವಾಸ ಮಾಡಿದ್ದೇವೆ. ನಾವಿಬ್ಬರೂ ಮಾಡಿರುವ ಬೈಕ್ ರೈಡ್‌ಗಳಿಗೆ ಲೆಕ್ಕವಿಲ್ಲ.
-ರಘು ಅವರ ಯಾವ ಚಿತ್ರ ನಿಮಗೆ ಫೇವರೆಟ್
“ಸವಾರಿ’ ನನಗೆ ತುಂಬಾ ಇಷ್ಟ. “ದಯವಿಟ್ಟು ಗಮನಿಸಿ’ ಸಿನಿಮಾದಲ್ಲಿ ನಾಲ್ವರು ಹೀರೋಗಳಿದ್ದರೂ ರಘು ಪಾತ್ರ ತುಂಬಾ ಕಾಡುತ್ತದೆ. ಅವರು ಆ ಪಾತ್ರವನ್ನು ಕ್ಯಾರಿ ಮಾಡಿರುವುದು ನನಗೆ ತುಂಬಾ ವಿಶೇಷವೆನಿಸುತ್ತದೆ.
-ನಿಮ್ಮ ಫಿಟ್ನೆಸ್ ಮಂತ್ರವೇನು?
ನಾನು ಮನೆಯಲ್ಲಿ ಮಾಡುವ ಎಲ್ಲಾ ಆಹಾರವನ್ನೂ ತಿನ್ನುತ್ತೇನೆ. ನನ್ನ ದೇಹಕ್ಕೆ ಎಷ್ಟು ಬೇಕು ಎಂದು ನನಗೆ ಗೊತ್ತಿದೆ. ಹಾಗಾಗಿ ಲಿಮಿಟ್ ಮೀರುವುದಿಲ್ಲ. ಮೊದಲಿನಿಂದಲೂ ವಾಕಿಂಗ್, ರನ್ನಿಂಗ್ ಮತ್ತು ಯೋಗವನ್ನು ಕಡ್ಡಾಯವಾಗಿ ಮಾಡುತ್ತೇನೆ. ಈಗ ನನ್ನ ಗಂಡನ ಜೊತೆ ಕೆಲವೊಮ್ಮೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡುತ್ತೇನೆ. ತಿಂದಿದ್ದನ್ನು ಅಂದೇ ಕರಗಿಸಿದರೆ ತೂಕದ ಸಮಸ್ಯೆ ಇರುವುದಿಲ್ಲ.
-ನೀವೊಬ್ಬರು ತಾಯಿಯಾಗಿ ನಿಮ್ಮ ತಾಯಿಯ ಪಾತ್ರವನ್ನು ನೆನೆಯುವುದಾದರೆ?
ನಾನು ಇಂದು ಏನಾಗಿದ್ದೇನೋ, ಅದಕ್ಕೆಲ್ಲಾ ನನ್ನ ತಾಯಿಯೇ ಕಾರಣ. ನಾನು ಚಿತ್ರೋದ್ಯಮ ಪ್ರವೇಶಿಸಿದ್ದೇ ಗಾಯತ್ರಿ ಪ್ರಭಾಕರ್ ಮಗಳು ಅಂತ. ಒಬ್ಬಳು ಕಲಾವಿದೆಯಾಗಿ ಬೆಳೆಯಲು ಅಮ್ಮನ ಮಾರ್ಗದರ್ಶನ, ಪ್ರೋತ್ಸಾಹವೇ ಕಾರಣ. ಇಂದು ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರಿದೆ ಎಂದರೆ ಅದಕ್ಕೆ ಅಮ್ಮನೇ ಕಾರಣ.
ರಘು ಡ್ಯಾಡಿ ನಂ.1
ರಘು ಅದ್ಭುತ ತಂದೆ. ನಂದನಾ ಹುಟ್ಟಿದಾಗಿನಿಂದಲೂ ಅವರು ಪೇರೆಂಟಿಂಗ್‌ನಲ್ಲಿ ಸಂರ್ಪೂಣವಾಗಿ ತೊಡಗಿಸಿಕೊಂಡಿದ್ದಾರೆ. ಮಗು ಹುಟ್ಟಿದ 2ನೇ ದಿನದಿಂದಲೇ ಡಯಾಪರ್ ಬದಲಿಸುವುದು, ಸ್ನಾನ ಮಾಡಿಸುವುದು, ಅವಳು ಅತ್ತರೆ ಕೂಡಲೇ ಎದ್ದು ಬರುವುದು ಎಲ್ಲಾ ಮಾಡುತ್ತಾರೆ. ಅವಳು ಹುಟ್ಟುವ ಮೂರು ತಿಂಗಳ ಮೊದಲೂ ಅವರು ಕೆಲಸದಿಂದ ಬಿಡುವು ತೆಗೆದುಕೊಂಡಿದ್ದರು. ನನ್ನ ಜೊತೆಯೇ ಇರುತ್ತಿದ್ದರು. ಈ ವಿಚಾರದಲ್ಲಿ ನಾನು ನನ್ನ ಮಗಳು ಇಬ್ಬರೂ ಲಕ್ಕಿ.
ಮಗಳು ಕಿರಿಕಿರಿ ಮಾಡಲ್ಲ
ನಂದನಾ ತುಂಬಾ ಶಾಂತ ಸ್ವಭಾವದ ಮಗು ಅದು. ಹೊಟ್ಟೆಯಲ್ಲಿದ್ದಾಗಲೂ ನನಗೆ ತೊಂದರೆ ಕೊಟ್ಟಿಲ್ಲ ಅವಳು. 4 ತಿಂಗಳು ತುಂಬುವವರೆಗೂ ನಾನು ಶೂಟಿಂಗ್‌ಗಳಲ್ಲಿ ಭಾಗಿಯಾಗುತ್ತಿದ್ದೆ. ಎಳೆ ಮಕ್ಕಳು ತಾಯಂದಿರಿಗೆ ರಾತ್ರಿ ನಿದ್ದೆ ಮಾಡಲು ಅವಕಾಶವೇ ಕೊಡುವುದಿಲ್ಲ ಎಂದು ನಾನು ಕೇಳಿದ್ದೇನೆ. ನನ್ನ ಮಗಳು ರಾತ್ರಿ ಒಂದೆರಡು ಬಾರಿ ಎದ್ದೇಳುತ್ತಾಳೆ. ಹೆಚ್ಚೇನೂ ಕಿರಿಕಿರಿ ಮಾಡಲ್ಲ. 5 ತಿಂಗಳ ಕೂಸು ಅಂತ ನನಗೇ ಕೆಲವೊಮ್ಮೆ ನಂಬಲು ಆಗುವುದಿಲ್ಲ.
ನಮ್ಮನೆಯವರು ನಾಚಿಕೊಳ್ಳುತ್ತಾರೆ
ನನ್ನ ಗಂಡನನ್ನು ಯಾರಾದರೂ ಹ್ಯಾಂಡ್ಸಂ ಎಂದು ಕರೆದರೆ ನನಗೆ ಖುಷಿ ಆಗುತ್ತದೆ. ಕಾಲೇಜು ಹುಡುಗಿಯರು ಅವರ ಬಳಿ ಬಂದು, ಯು ಆರ್ ಸೋ ಹ್ಯಾಂಡ್ಸಮ್, ಚಾರ್ಮಿಂಗ್ ಅಂತೆಲ್ಲಾ ಅನ್ನುತ್ತಿರುತ್ತಾರೆ. ಆಗ ನನಗೆ ಹೆಮ್ಮೆಯಾಗುತ್ತದೆ. ಆಗೆಲ್ಲಾ ರಘು ನಾಚಿಕೊಳ್ಳುತ್ತಾರೆ. ಅವರು ಹೊಗಳಿಕೆಗಳಿಂದ ದೂರ, ಯಾರಾದರು ಸ್ವಲ್ಪ ಹೊಗಳಿದರೂ ನಾಚಿಕೆಯಿಂದ ಕುಗ್ಗಿಬಿಡುತ್ತಾರೆ. ನನಗೆ ಅದನ್ನು ನೋಡಲು ತುಂಬಾ ಖುಷಿ. ಅವರ ಪೇಚಾಟ ನೋಡಿ ನಾನು ಎಂಜಾಯ್ ಮಾಡುತ್ತಿರುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.