ಮಿನುಗುತಿಹಳು ಮಹಾನಟಿ
Team Udayavani, Jun 6, 2018, 9:20 AM IST
ಮಹಾನಟಿ ಸಿನಿಮಾ ನೋಡಿದವರೆಲ್ಲ, ಕೀರ್ತಿ ಸುರೇಶ್‌ರ ಸಾವಿತ್ರಿಯ ಆವಾಹನೆಗೆ ಫಿದಾ ಆಗಿದ್ದಾರೆ. ಕೀರ್ತಿಯ ಅಭಿನಯಕ್ಕೆ ಹೇಗೆ ಚಪ್ಪಾಳೆ ಬಿದ್ದವೋ, ಅವರು ಧರಿಸಿದ್ದ ವೇಷಭೂಷಣವೂ ನೋಡುಗರ ಕಣ್ಣಲ್ಲಿ ಎಂದೂ ಮರೆಯದ ಚಿತ್ರವಾಗಿ ಉಳಿದುಕೊಂಡಿದೆ. ಈ ಮಹಾನಟಿಯನ್ನು ಶೃಂಗರಿಸಿದ್ದು ಯಾರು? ಪಾತ್ರಧಾರಿ ಕೀರ್ತಿಯ ಫ್ಯಾಶನ್ನಿನ ಗುಟ್ಟೇನು?
ಪಾತ್ರಕ್ಕೆ ಕಲಾವಿದನೊಬ್ಬ ಜೀವ ತುಂಬಿದರೆ, ಆ ಕಲಾವಿದನ ಜೀವಂತಿಕೆ ಆತ ಧರಿಸುವ ಉಡುಪಿನಲ್ಲಿ ಅಡಗಿರುತ್ತದೆ. ಬಯೋಪಿಕ್‌ಗಳ ವಿಷಯಕ್ಕೆ ಬಂದರಂತೂ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಪರಕಾಯ ಪ್ರವೇಶ ಮಾಡುವ ಕಲಾವಿದನಷ್ಟೇ, ವಸ್ತ್ರ ವಿನ್ಯಾಸವೂ ಅಚ್ಚುಕಟ್ಟಾಗಿರಬೇಕು. ಇಲ್ಲದಿದ್ದರೆ ಸಖತ್ ಅನ್ನಿಸುವ ನಟನೆಯೂ ವ್ಯರ್ಥ. ಈ ವಿಷಯದಲ್ಲಿ “ಮಹಾನಟಿ’ ಸಿನಿಮಾ ಗೆದ್ದಿದೆ.
“ಮಹಾನಟಿ’! ದಕ್ಷಿಣ ಭಾರತೀಯ ಚಿತ್ರರಂಗದ ದಂತಕಥೆ ಮಹಾನಟಿ ಸಾವಿತ್ರಿಯ ಜೀವನಗಾಥೆಯನ್ನು ಆಧರಿಸಿದ ತೆಲುಗು ಚಿತ್ರ. ಸಾವಿತ್ರಿಯನ್ನೇ ಮೈ ಮೇಲೆ ಆವಾಹಿಸಿಕೊಂಡಂತೆ ನಟಿಸಿದ ಕೀರ್ತಿ ಸುರೇಶ್ ಅಭಿನಯ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಇಬ್ಬರ ನಡುವೆ ತುಸು ಹೋಲಿಕೆಯಿದ್ದರೂ ಈ ಪರಕಾಯ ಪ್ರವೇಶದಲ್ಲಿ ವಸ್ತ್ರ ವಿನ್ಯಾಸಕರ ಶ್ರಮಕ್ಕೆ ಸಲಾಂ ಎನ್ನಲೇಬೇಕು.
“ಮಹಾನಟಿ’ಯ ಪ್ರಮುಖ ಆಕರ್ಷಣೆ ಕೀರ್ತಿ ಸುರೇಶ್‌ರ ವೇಷಭೂಷಣ ಮತ್ತು ಆಭರಣಗಳು. ಬಿಂದಿಯಿಂದ ಹಿಡಿದು, ಸೀರೆಯವರೆಗೆ ಎಲ್ಲಿಯೂ ಲೋಪವಾಗದಂತೆ 60-70 ದಶಕದ ಫ್ಯಾಷನ್‌ನ ಮರುಸೃಷ್ಟಿ ಇದು. ಈ ಚಿತ್ರ ಮಹಾನಟಿಯೊಬ್ಬಳ ಬಯೋಪಿಕ್ ಎಂದಷ್ಟೇ ಅಲ್ಲದೇ, ವಸ್ತ್ರ ವಿನ್ಯಾಸದ ಜಾಣ್ಮೆಯಿಂದಲೂ ನೋಡುಗರನ್ನು ಸೆಳೆಯುತ್ತದೆ. ಬಾಲನಟಿಯಾಗಿ ಸಿನಿರಂಗವನ್ನು ಪ್ರವೇಶಿಸಿ, ಮಹೋನ್ನತ ಕಲಾವಿದೆ ಎನಿಸಿಕೊಂಡ ಸಾವಿತ್ರಿ ಯಾವ ರೀತಿ ಇದ್ದರು? ಹೇಗೆಲ್ಲ ಸಿಂಗಾರಗೊಳ್ಳುತ್ತಿದ್ದರು? ಅವರ ಉಡುಗೆ- ತೊಡುಗೆಗಳಲ್ಲಿ ಅಂಥ ಮಾಯಾ ಸೆಳೆತವೇನಿತ್ತು? ಇವನ್ನೆಲ್ಲ ಕೂಲಂಕಷವಾಗಿ ಅಧ್ಯಯನ ಮಾಡಿರುವುದಂತೂ ಇಲ್ಲಿ ಪಕ್ಕಾ.
ಇಂದ್ರಾಕ್ಷಿ ಕೈಚಳಕ
ಈ ಜಾದೂವಿನ ಹಿಂದಿನ ಕೈಚಳಕ, ವಸ್ತ್ರ ವಿನ್ಯಾಸಕಿ ಇಂದ್ರಾಕ್ಷಿ ಪಾಟ್ನಾಯಕ್ ಅವರದು. ಸತ್ಯಜಿತ್ ರೇ ಅವರಂಥ ಖ್ಯಾತ ನಿರ್ದೇಶಕರ ಗರಡಿಯಲ್ಲಿ ಪಳಗಿದ ಇಂದ್ರಾಕ್ಷಿ ಅವರ ಶ್ರದ್ಧೆಯ ಪ್ರತಿಫಲನವೇ ಈ ಸಿನಿಮಾ. “ಮಹಾನಟಿ’ಯ ಅಷ್ಟೂ ವೇಷಭೂಷಣ, ಆಭರಣಗಳ ವಿನ್ಯಾಸ ಈಕೆಯದ್ದೇ. ಕೀರ್ತಿಯ ನಟನೆಗೆ, ಇಂದ್ರಾಕ್ಷಿಯ ವಸ್ತ್ರವಿನ್ಯಾಸ ಜೊತೆಯಾಗಿ ಒಂದು ಅದ್ಭುತ ಸೃಷ್ಟಿಯಾಗಿದೆ.
ಹಳೆಯ ಫ್ಯಾಷನ್‌ಗೆ ಮರುಜೀವ ಕೊಡುವುದು ಅಂದುಕೊಂಡಷ್ಟು ಸುಲಭದ್ದೇನಲ್ಲ. ಹಳೆಯ ಕಾಲದ ಆಭರಣಗಳು, ವಿವಿಧ ವಿನ್ಯಾಸದ ಸೀರೆಗಳಿಗಾಗಿ ಕೋಲ್ಕತ್ತಾದ ಬುರ್ರಾ ಬಜಾರ್‌ನಿಂದ ಹೈದರಾಬಾದಿನ ಚಾರ್ ಮಿನಾರ್‌ವರೆಗೆ ಅಲೆದಿದ್ದಾರಂತೆ. ಇದರಲ್ಲಿ ವಿನ್ಯಾಸಕರಾದ ಗೌರಾಂಗ್ ಷಾ ಮತ್ತು ಅರ್ಚನಾ ರಾವ್‌ರ ಕೊಡುಗೆಯೂ ಬಹಳಷ್ಟಿದೆ.
ಮೇಕಪ್ ಮಾಯೆ
ಕೀರ್ತಿ ಸುರೇಶ್‌ಗೆ ಸಾವಿತ್ರಿಯ ಮೇಕಪ್ ಹಾಕಿ 130 ಕೋನಗಳಲ್ಲಿ ಚಿತ್ರಿಸಿದ್ದಾರೆ. ಸಾವಿತ್ರಿ ಉಡುತ್ತಿದ್ದ ನವಿರಾದ ಸೀರೆಗಳು, ಕತ್ತಿಗೆ ಮುತ್ತಿಕ್ಕುತ್ತಿದ್ದ ನೆಕ್‌ಲೇಸ್‌ಗಳು, ಅವರು ಹಾಕುತ್ತಿದ್ದ ತುರುಬು, ಆ ತುರುಬಿಗೆ ಸಿಕ್ಕಿಸುತ್ತಿದ್ದ ಹೂಗಳು, ಮೈಕಟ್ಟಿಗೆ ಹೊಂದುವಂತೆ ಧರಿಸುತ್ತಿದ್ದ ಬಿಗಿಯಾದ ಗುಬ್ಬಿತೋಳಿನ ರವಿಕೆ ಹೀಗೆ… ಸಾವಿತ್ರಿಯ ವೇಷಭೂಷಣವನ್ನು ಭೂತಗನ್ನಡಿಯಲ್ಲಿಟ್ಟು ಗಮನಿಸಿ ಮರುಸೃಷ್ಟಿಸಲಾಗಿದೆ.
ಇಟಲಿಯಿಂದ ಬಂದ ಆಭರಣ
ಚಿತ್ರದಲ್ಲಿ ಕೀರ್ತಿ ಧರಿಸಿದ ಫ್ಯಾಷನೇಬಲ್ ಆಭರಣಗಳನ್ನು ಇಟಲಿಯಿಂದ ತರಿಸಲಾಗಿದೆ. ಕನ್ನಡಕಗಳನ್ನು ಮುಂಬೈನ ದಾದರ್‌ನಲ್ಲಿರುವ ಪಾರ್ಸಿ ಅಂಗಡಿಯಿಂದ, ವಾಚುಗಳನ್ನು ಚೋರ್ ಬಜಾರಿನಿಂದ ಖರೀದಿಸಲಾಗಿದೆ. 60/70ರ ದಶಕದಲ್ಲಿ ಕಾಂಜೀವರಂ ಸೀರೆ ಬಹು ಪ್ರತಿಷ್ಠೆಯ ಉಡುಗೆಯಾಗಿತ್ತು. ಸಾವಿತ್ರಿ, ಎಲ್ಲ ಸಮಾರಂಭಗಳಿಗೂ ಕಾಂಜೀವರಂ ಸೀರೆಯನ್ನೇ ಉಡುತ್ತಿದ್ದರಂತೆ. ಕೀರ್ತಿ ಸುರೇಶ್ ಸಹ ಭಾರೀ ಜರಿಯ ಬಾರ್ಡರ್‌ನ ಕಾಂಜೀವರಂ ಸೀರೆಗಳಲ್ಲಿ ಮಿಂಚಿದ್ದಾರೆ. ರವಿಕೆಗಳನ್ನೂ ಆಗಿನ ಶೈಲಿಯಲ್ಲೇ ವಿನ್ಯಾಸ ಮಾಡಲಾಗಿದೆ. ಕತ್ತಿನವರೆಗೂ ಮುಚ್ಚುವ ರವಿಕೆಗಳು, ತುಂಬು ತೋಳಿನ ರವಿಕೆಗಳು, ಗುಬ್ಬಿ ತೋಳು… ಹೀಗೆ ಮೈ ಒಂದಿನಿತೂ ಕಾಣದಂತೆಯೂ ಫ್ಯಾಷನ್ ಮಾಡಬಹುದು, ಮೈ ಕಾಣದಂತೆಯೂ ಗ್ಲಾಮರಸ್ ಆಗಿ ಮಿನುಗಬಹುದು ಎಂಬುದನ್ನು ಈ ಸಿನಿಮಾ ತೋರಿಸಿದೆ.
ಬೊಂಬಾಟ್ ಬಿಂದಿ
ಇನ್ನು ಮುಖದ ಪ್ರಮುಖ ಆಕರ್ಷಣೆಯಾದ ಹಣೆಯ ಬಿಂದಿಗೂ ಹಳೆಯ ಸ್ಪರ್ಶ ಸಿಕ್ಕಿದೆ. ಹಿಂದಿನ ಕಾಲದಲ್ಲಿ ಇಡುತ್ತಿದ್ದ ಜಾರುವ ಹನಿಯಂಥ (ತಿಲಕ) ಹಣೆಯ ಬೊಟ್ಟುಗಳನ್ನು ಈ ಚಿತ್ರದಲ್ಲಿ ಕೀರ್ತಿ ಬಳಸಿದ್ದಾರೆ. ದುಂಡು ಮುಖ, ಬಾದಾಮಿ ಆಕಾರದ ಮುಖಕ್ಕೆ ಈ ಬಗೆಯ ತಿಲಕ ವಿಶಿಷ್ಟ ಮೆರುಗು ನೀಡುತ್ತದೆ. ಈ ಅಪ್ಪಟ ಶಾಸ್ತ್ರೀಯ ಮುಖ ನೋಡುಗರ ಮನದಲ್ಲಿ ಬಹುಕಾಲ ಉಳಿಯುವಲ್ಲಿ ಬಿಂದಿಯ ಪಾತ್ರವೂ ಇದೆ.
ದೊಡ್ಡ ಜುಮುಕಿಗಳು, ಅಗಲವಾದ ಕಿವಿಯೋಲೆಗಳು, ವೃತ್ತಾಕಾರದ ದೊಡ್ಡ ಕಿವಿಯ ರಿಂಗ್‌ಗಳು ಕೀರ್ತಿಯವರ ಮುಖದ ಶೋಭೆಯನ್ನು ಮತ್ತಷ್ಟು ಹೆಚ್ಚಿಸಿವೆ. ದಟ್ಟ ಕೆಂಪು ಮತ್ತು ಮೆರೂನ್ ಬಣ್ಣದ ಲಿಪ್‌ಸ್ಟಿಕ್, ನೀಳಜಡೆಗೆ ಮುಡಿದ ಹೂವು, ವಿವಿಧ ವಿನ್ಯಾಸದ ತುರುಬುಗಳು, ಆ ತುರುಬಿಗೆ ಸಿಕ್ಕಿಸುವ ಮುತ್ತಿನ ಮತ್ತು ಹರಳಿನ ಗೊಂಚಲುಗಳು, ಕಣ್ಣಿಗೆ ಗಾಢವಾಗಿ ಹಚ್ಚಿದ ಕಾಡಿಗೆ… ತೆರೆಯ ಮೇಲಿರುವುದು ಕೀರ್ತಿಯೋ, ಮಹಾನಟಿ ಸಾವಿತ್ರಿಯೋ ಎಂಬ ಗೊಂದಲ ಸೃಷ್ಟಿಸುವಷ್ಟು ಸೊಗಸಾಗಿದೆ.
– ವೀಣಾಪ್ರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.