ಅಕ್ಷತಾ ಲೈವ್! ಫೇಸ್‌ಬುಕ್ಕೇ ಸಂಗೀತ ಕಛೇರಿ
Team Udayavani, Nov 8, 2017, 6:40 AM IST
ಫೇಸ್‌ಬುಕ್‌ನಲ್ಲಿ ಅಕ್ಷತಾ ಉಡುಪ ಹಾಡಿದ ಒಂದೊಂದು ಹಾಡು, ನಾಡಿನ ಮೂಲೆ ಮೂಲೆಗಳನ್ನು ತಲುಪಿ, 63 ಸಾವಿರ ಫಾಲೋವರ್ಸ್‌ಗಳನ್ನು ಹುಟ್ಟುಹಾಕಿದೆ. ಈಕೆಯ ಒಂದು ಹಾಡಿಗೆ ಕಡಿಮೆಯೆಂದರೂ 10 ಲಕ್ಷ ಜನ ಕೇಳುಗರು ಇದ್ದೇ ಇರುತ್ತಾರೆ…
ಈಕೆ ಹಾಡಿದ್ದು ಪ್ರಚಾರಕ್ಕಲ್ಲ. ಚಪ್ಪಾಳೆಗೂ ಅಲ್ಲ. ಫಲಾಪೇಕ್ಷೆಯಿಲ್ಲದೆ, ಗೆಳತಿಯರೆಲ್ಲ “ಹಾಡು ಮಾರಾಯ್ತಿ’ ಅಂದಿದ್ದಕ್ಕೆ ಸುಮ್ಮನೆ ಹಾಡಿದಳು ಚಿಕ್ಕ ತುಣುಕೊಂದನ್ನು. ಅದೇ ತುಣುಕು ಕರುನಾಡಿನಲ್ಲೆಡೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕಂಡಿತು. ಹೋದಲ್ಲಿ ಬಂದಲ್ಲಿ ಜನರು “ನೀವು ಅಕ್ಷತಾ ಅಲ್ವಾ?’ ಎಂದು ಕೇಳುವ ಮಟ್ಟಿಗೆ ಹೆಸರು ತಂದುಕೊಟ್ಟಿತು ಆ ಹಾಡಿನ ತುಣುಕು. ಆ ಪುಟ್ಟ ಹಾಡಿನ ತುಣುಕು ಲಕ್ಷಾಂತರ ಅಭಿಮಾನಿಗಳನ್ನೂ ಹುಟ್ಟುಹಾಕಿರೋ ಸಮಾಚಾರ ಇವರಿಗೆ ಗೊತ್ತೇ ಇರಲಿಲ್ಲ!
ಅಕ್ಷತಾಳ ಫೇಸ್‌ಬುಕ್ ಲೈವ್! ಅಭಿಮಾನಿಗಳೆಲ್ಲ ಇದಕ್ಕಾಗಿ ಕಾಯುತ್ತಾರೆ. ದಿನದಲ್ಲಿ ಹತ್ತಾರು ಸಲ ಇವರ ಹಾಡಿಗಾಗಿಯೇ ಫೇಸ್‌ಬುಕ್ ನೋಡ್ತಾರೆ. ಉಡುಪಿಯ ಬೈಲೂರು ಗ್ರಾಮದ ಅಕ್ಷತಾ ಉಡುಪ ಫೇಸ್‌ಬುಕ್‌ನಲ್ಲಿ ಮಾಡಿದ ಜಾದೂ ಇದು. ತನ್ನ ಪ್ರತಿಭೆಯ ಪ್ರದರ್ಶನಕ್ಕೆ, ಯಾವುದೋ ಸ್ಟಾರ್ ಸಂಗೀತಗಾರನ ಮನೆಮುಂದೆ ಸಾಲಿನಲ್ಲಿ ನಿಂತು ಕಾಯಲಿಲ್ಲ. ಗ್ಲ್ಯಾಮರ್ ಇದ್ದರೂ ಟಿವಿ ಚಾನೆಲ್ಲುಗಳ ಸ್ಟುಡಿಯೋಗೆ ಹೋಗಿ ಕೂರಲಿಲ್ಲ. ಎಲ್ಲರಂತೆ ಟೈಂಪಾಸ್‌ಗೆ ಫೇಸ್‌ಬುಕ್ ನೋಡುತ್ತಿದ್ದ ಈ ಚೆಂದುಳ್ಳಿ, ಅದನ್ನೇ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಂಡರು. ಈಕೆ ಹಾಡಿದ ಒಂದೊಂದು ಹಾಡು, ನಾಡಿನ ಮೂಲೆ ಮೂಲೆಗಳನ್ನು ತಲುಪಿ, 63 ಸಾವಿರ ಫಾಲೋವರ್ಸ್‌ಗಳನ್ನು ಹುಟ್ಟುಹಾಕಿದೆ. ಈಕೆಯ ಒಂದು ಹಾಡಿಗೆ ಕಡಿಮೆಯೆಂದರೂ 10 ಲಕ್ಷ ಜನ ಕೇಳುಗರು ಇದ್ದೇ ಇರುತ್ತಾರೆ.
ಅಂದಹಾಗೆ, ಅಕ್ಷತಾ ಸ್ವಯಂಪ್ರೇರಣೆಯಿಂದ ಫೇಸ್‌ಬುಕ್‌ನಲ್ಲಿ ಹಾಡಲಿಲ್ಲ. ಈ ದುಂಬಿಯ ಗಾನಕ್ಕೆ ಮನಸೋತ ಗೆಳತಿಯರು, ಫೇಸ್‌ಬುಕ್‌ನಲ್ಲಿ ಹಾಡುವಂತೆ ಪ್ರೇರೇಪಿಸಿದರಂತೆ. “ಏನೆಂದು ಹೆಸರಿಡಲಿ’ ಚಿತ್ರದ “ಹೇಗೋ ಇದ್ದೆನು…’ ಹಾಡನ್ನು ಫೇಸ್‌ಬುಕ್ ಲೈವ್‌ನಲ್ಲಿ ಮೊದಲ ಬಾರಿಗೆ ಹಾಡಿದ್ದರು. ಅದು ತಲುಪಿದ್ದು, 20 ಲಕ್ಷ ಜನಕ್ಕೆ!
ಕರ್ನಾಟಿಕ್ ಸಂಗೀತ ಅಭ್ಯಸಿಸುತ್ತಿರುವ ಈಕೆಗೆ ತನ್ನದೇ ಕಂಪೋಸ್‌ನಲ್ಲಿ, ತಾನೇ ಹಾಡಿದ ಆಲ್ಬಂ ಮಾಡಬೇಕೆಂಬ ಕನಸಿದೆ. ವಿದ್ವಾನ್ ಮೈಸೂರು ಬಾಲಸುಬ್ರಹ್ಮಣ್ಯಮ್ ಈಕೆಯ ಗುರುಗಳು. ವಿದ್ವತ್ ಆದ ಮೇಲೆ ಸಂಗೀತ ತರಗತಿಗಳನ್ನು ನಡೆಸಬೇಕೆಂಬ ಆಸೆ ಅಕ್ಷತಾಳದ್ದು. ಸದ್ಯ ಸಿಎ ಪ್ರಾಕ್ಟೀಸ್ ಮಾಡುತ್ತಿರುವ ಅಕ್ಷತಾ, ಸಂಗೀತವನ್ನು ಬದುಕಿನ ಸಂತೋಷಕ್ಕಾಗಿ ಆರಿಸಿಕೊಂಡರಂತೆ. ಅನೇಕ ಸ್ಟೇಜ್ ಶೋಗಳಲ್ಲೂ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಮದ್ವೆಯಾದ ನಂತರ ಅಕ್ಷತಾ ಇದೀಗ ಬೆಂಗಳೂರು ವಾಸಿ. ಇನ್ನೂ ರಿಲೀಸ್ ಆಗದ ಎರಡು ಸಿನಿಮಾಗಳಿಗೂ ಹಾಡಿದ್ದಾರೆ. ಅಕ್ಷತಾ ಅವರ ನೆಚ್ಚಿನ ಗಾಯಕರು; ಎಸ್. ಜಾನಕಿ, ಲತಾ ಮಂಗೇಶ್ಕರ್, ಎಸ್‌ಪಿಬಿ.
“ಈಗ ಫೇಸ್‌ಬುಕ್, ಯೂಟ್ಯೂಬ್‌ನದ್ದೇ ಟ್ರೆಂಡ್. ಟಿವಿ ನೋಡಲಾಗದವರು ಇವುಗಳಲ್ಲಿಯೇ ಟಿವಿಗಳನ್ನು ಕಂಡುಕೊಂಡಿದ್ದಾರೆ. ಹಾಗಾಗಿ, ನಾನೂ ಆ ಹಾದಿಯಲ್ಲಿ ಸಾಗಿದೆ’ ಎನ್ನುವ ಅಕ್ಷತಾ, ಸಂಗೀತದ ಹಿನ್ನೆಲೆಯಿಂದ ಬಂದವರಲ್ಲ. ಸ್ವಂತ ಆಸಕ್ತಿ ಸಂಗೀತ ಕಲಿಯಲು ಪ್ರೇರೇಪಿಸಿತು. ಶಾಲಾ ದಿನಗಳಿಂದಲೇ ಬಹುಮಾನ ಗೆದ್ದರು. ಉಡುಪಿಯ ಉಷಾ ಮೋಹನ್ ಅವರ ಬಳಿ ಜೂನಿಯರ್ ಸಂಗೀತ ಕಲಿತರು. ಸಂತೂರ್ ಸೆಂಟರ್ ಪೇಜ್ ಪ್ರತಿವರ್ಷ ನಡೆಸುವ ರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಅಕ್ಷತಾ ರನ್ನರ್‌ಅಪ್ ಆಗಿದ್ದರು.
ಫೇಸ್‌ಬುಕ್‌ನಲ್ಲಿ ಇನ್ನೊಬ್ಬರ ಬದುಕಿನ ಸಮಾಚರ ತಿಳಿಯುವುದಕ್ಕಿಂತ, ಅಲ್ಲಿ ಬದುಕು ಕಂಡುಕೊಳ್ಳುವ ಅಕ್ಷತಾಳ ಗುಟ್ಟು ನಾಡಿಗೆ ಮಾದರಿ.
ರಿಯಾಲಿಟಿ ಶೋಗಳಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಅವಕಾಶ ಇರುವುದಿಲ್ಲ ಅಥವಾ ಅವಕಾಶ ಸಿಕ್ಕರೂ ಕೆಲವು ಕಮಿಟ್‌ಮೆಂಟ್‌ಗಳಿಂದ ಸಾಧ್ಯವಾಗುವುದಿಲ್ಲ. ಅಂಥವರಿಗೆ ಸಾಮಾಜಿಕ ಜಾಲತಾಣಗಳು ಉತ್ತಮ ಮಾಧ್ಯಮ.
– ಅಕ್ಷತಾ ಉಡುಪ, ಫೇಸ್‌ಬುಕ್ ಗಾಯಕಿ
– ಅನುರಾಧಾ ತೆಳ್ಳಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.