ಅಮ್ಮಾ, ಲಂಚ್ ಬಾಕ್ಸ್ ರೆಡೀನಾ?
Team Udayavani, Aug 22, 2018, 6:00 AM IST
ಮನೆ ಮಂದಿಗಾದರೂ ಓಕೆ, ಆದರೆ ಈ ಮಕ್ಕಳಿಗೆ ಟಿಫಿನ್ ಬಾಕ್ಸ್ ಸಿದ್ಧಪಡಿಸುವುದೇ ಒಂದು ದೊಡ್ಡ ತಲೆನೋವು. ಆರೋಗ್ಯಕ್ಕೂ ಹಿತವಾಗಿ, ತಿನ್ನಲೂ ರುಚಿಯಾಗಿ, ನೋಡಲೂ ಆಕರ್ಷಕವಾಗಿ ಕಾಣಿಸದರೇನೇ ಅವು ತಿನಿಸುಗಳನ್ನು ಚಪ್ಪರಿಸಿಕೊಂಡು ತಿನ್ನುತ್ತವೆ. ಹಾಗಾದರೆ, ಚಿಣ್ಣರ ಲಂಚ್‌ಬಾಕ್ಸ್ ಹೇಗಿದ್ದರೆ ಚೆನ್ನ?
ಪುಟ್ಟ ಮಕ್ಕಳಿಗೆ ಶಾಲೆಗೆ ಡಬ್ಬಿ ರೆಡಿ ಮಾಡುವುದೇ ತ್ರಾಸದ ಕೆಲಸ. ಮೊದಲೇ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಅವರಿಗೆ ಯಾವುದು ಇಷ್ಟ, ಅವರ ಆರೋಗ್ಯಕ್ಕೆ ಯಾವುದು ಪೂರಕ, ಲಂಚ್‌ಬಾಕ್ಸ್‌ನಲ್ಲಿ ಏನಿಟ್ಟರೆ ಅದು ಅವರ ಹೊಟ್ಟೆ ಸೇರುತ್ತದೆ ಎಂದೆಲ್ಲಾ ಚಿಂತಿಸಿ ಅಮ್ಮಂದಿರು ಹೈರಾಣಾಗುತ್ತಾರೆ. ಕೆಲವು ಶಾಲೆಗಳು ಇಂಥವನ್ನು ತರಬಹುದು, ಇಂಥದ್ದು ಬೇಡ ಎಂದು ಕಟ್ಟುನಿಟ್ಟಾಗಿ ಮೊದಲೇ ತಿಳಿಸುತ್ತವೆ. ಸಣ್ಣ ಮಕ್ಕಳಿಗೆ ಉಪ್ಪಿಟ್ಟು, ಚಿತ್ರಾನ್ನ, ವಾಂಗೀಬಾತ್ ಇತ್ಯಾದಿಗಳನ್ನು ಸ್ವತಃ ತಿನ್ನಲು ಬಾರದು ಎಂಬುದು ಅದರ ಉದ್ದೇಶ. ತಿನ್ನಲು ಸುಲಭ ಎಂದು ಬ್ರೆಡ್, ಬನ್, ಬಿಸ್ಕೆಟ್, ಕೇಕ್‌ನಂಥ ಬೇಕರಿ ಪದಾರ್ಥಗಳನ್ನು ಕೊಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಾರದುದ್ದಕ್ಕೂ ದೋಸೆ, ಇಡ್ಲಿ, ಚಪಾತಿ ತಿನ್ನಲು ಮಕ್ಕಳೂ ಬೇಸರಿಸಿಕೊಳ್ಳುತ್ತವೆ. ಆಗೇನು ಮಾಡಬೇಕೆಂದರೆ, ಅದೇ ತಿನಿಸುಗಳ ಆಕಾರ ಬದಲಿಸಿ, ಸ್ವಲ್ಪ ಸಿಂಗರಿಸಿ ಮಕ್ಕಳ ಕಣ್ಣಿಗೆ ಚೆನ್ನಾಗಿ ಕಾಣುವಂತೆ ಡಬ್ಬಿಯಲ್ಲಿಡಬೇಕು. ಆಗ ಮಕ್ಕಳೂ ಖುಷಿ ಖುಷಿಯಾಗಿ ಸವಿಯುತ್ತವೆ. ಬೇಕಾದ್ರೆ ನೀವೂ ಈ ಕೆಳಗಿನ ಟಿಪ್ಸ್‌ಗಳನ್ನು ಟ್ರೈ ಮಾಡಿ ನೋಡಿ.
– ಯಾವುದೇ ತರಕಾರಿ ಹಾಕದೆ ಉಪ್ಪಿಟ್ಟು ತಯಾರಿಸಿ. ಅದು ಬಿಸಿಯಿರುವಾಗಲೇ ಮಕ್ಕಳ ತುತ್ತಿಗೆ ತಕ್ಕಂತೆ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಬಾಕ್ಸ್‌ಗೆ ಹಾಕಿ. ಬಿಸಿಯಿರುವಾಗ ಉಂಡೆ ಕಟ್ಟಿರುವುದರಿಂದ ಅದು ಬಿರಿಯುವುದಿಲ್ಲ. ನೋಡಲೂ ಚೆನ್ನಾಗಿ ಕಾಣಿಸುತ್ತದೆ.
– ದೋಸೆಯನ್ನು ದೊಡ್ಡದಾಗಿ ಹುಯ್ಯುವ ಬದಲು ಚಿಕ್ಕದಾಗಿ ಮಾಡಿ. ಮೇಲೊಂದು ತರಕಾರಿ ತುಂಡು ಇಟ್ಟು ಅಲಂಕರಿಸಿ. ದೋಸೆ ಹಿಟ್ಟಿಗೆ ಕ್ಯಾರೆಟ್ ತುರಿ ಸೇರಿಸಿದರೆ, ದೋಸೆಯ ಬಣ್ಣವೂ ಬದಲಾಗುತ್ತದೆ, ರುಚಿಯೂ ಹೆಚ್ಚುತ್ತದೆ.
– ದೋಸೆಹಿಟ್ಟನ್ನೇ ಪಡ್ಡು ಪ್ಲೇಟಿನಲ್ಲಿಟ್ಟು ಬೇಯಿಸಿದರೆ ಉಪ್ಪಿನ ಪಡ್ಡು ಉಂಡೆಗಳು ಸಿದ್ಧ. ಅದೇ ಹಿಟ್ಟಿಗೆ ಬೆಲ್ಲದ ಪುಡಿ ಬೆರೆಸಿ, ಪಡ್ಡು ಮಾಡಿದರೆ ಮಕ್ಕಳಿಗೆ ಇಷ್ಟವಾಗಬಹುದು.
– ಚಮಚ ಇಡ್ಲಿ ತಟ್ಟೆಯಲ್ಲಿ (ಸ್ಪೂನ್ ಇಡ್ಲಿ ಪ್ಲೇಟ್) ಇಡ್ಲಿ ತಯಾರಿಸಿ, ಒಣ ದ್ರಾಕ್ಷಿ ಅಥವಾ ದಾಳಿಂಬೆ ಹಣ್ಣಿನಿಂದ ಅಲಂಕರಿಸಿ ಬಾಕ್ಸ್‌ಗೆ ಹಾಕಿ. ಮಕ್ಕಳು ಅವತ್ತು ಖುಷಿಯಿಂದ ಡಬ್ಬಿ ಖಾಲಿ ಮಾಡುತ್ತಾರೆ.
– ಚಪಾತಿ ಹಿಟ್ಟನ್ನು ಲಟ್ಟಿಸಿ, ನಾಲ್ಕೈದು ತುಂಡು ಮಾಡಿ ಬೇಯಿಸಿದರೆ ಚಪಾತಿ ಸ್ಲೆ„ಸ್ ತಯಾರು. ಬಿಸಿಯಿರುವಾಗಲೇ ಸ್ವಲ್ಪ ಜೇನುತುಪ್ಪ ಸವರಿ, ಉರುಳಿಸಿ ರೋಲ್ ಮಾಡಿದರೆ ತಿನ್ನಲು ರುಚಿಕರ ಮತ್ತು ಸುಲಭ.
– ಮಕ್ಕಳಿಗೆ ಚಾಕ್ಲೇಟ್ ಇಷ್ಟ ಅಂತ ಅದನ್ನು ಡಬ್ಬಿಯಲ್ಲಿಡುವ ಬದಲು ಡ್ರೈ ಪ್ರೂಟ್ಸ್ ಇಡುವ ಅಭ್ಯಾಸ ಮಾಡಿ.
– ತಿಂಡಿ ಡಬ್ಬಿಯ ಜೊತೆಗೆ ಇನ್ನೊಂದು ಸಣ್ಣ ಬಾಕ್ಸ್‌ನಲ್ಲಿ ಹಣ್ಣು, ತರಕಾರಿ ತುಂಡುಗಳನ್ನು ಕಳುಹಿಸಿ. ಬಣ್ಣ ಬಣ್ಣದ ತರಕಾರಿಗಳನ್ನು ನೀಟಾಗಿ ಜೋಡಿಸಿ ಕೊಟ್ಟರೆ ಮಕ್ಕಳಿಗೂ ಖುಷಿಯಾಗುತ್ತದೆ.
– ಅಂಗಡಿಯಿಂದ ತಂದ ಸ್ನ್ಯಾಕ್ಸ್‌ಗಳ ಬದಲು, ಮನೆಯಲ್ಲೇ ತಯಾರಿಸಿದ ಕುರುಕಲು ತಿಂಡಿಗಳನ್ನು ಕೊಡಿ
– ರಾಗಿ, ಜೋಳ, ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಪದಾರ್ಥಗಳು ಮಕ್ಕಳ ಬೆಳವಣಿಗೆಗೆ ಪೂರಕ.
– ಎಳ್ಳುಂಡೆ, ರವೆ ಉಂಡೆ, ನುಚ್ಚಿನುಂಡೆ, ಡ್ರೈಪ್ರೂಟ್ಸ್ ಉಂಡೆಗಳನ್ನು ಮನೆಯಲ್ಲೇ ಮಾಡಿ, ಬಾಕ್ಸ್‌ಗೆ ಹಾಕಿಕೊಡಿ. ಅಂಗಡಿಯ ಸಿಹಿ ತಿನಿಸುಗಳಿಗಿಂಥ ಇವು ರುಚಿ ಹಾಗೂ ಸತ್ವಯುತ.
ಬಾಕ್ಸ್
ಯಾವುದು ಬೇಡ?
1. ಲೇಸ್, ಕುರ್‌ಕುರೆ, ಚಿಪ್ಸ್‌ನಂಥ ಕುರುಕಲು ತಿಂಡಿಗಳನ್ನು ಮಕ್ಕಳು ಇಷ್ಟಪಡುತ್ತವೆ. ಹಾಗಂತ ದಿನವೂ ಅದನ್ನೇ ಬಾಕ್ಸ್‌ಗೆ ಕೊಡುವುದು ಸರಿಯಲ್ಲ. ಅದು ಆರೋಗ್ಯಕ್ಕೆ ಹಾನಿಕರ.
2. ತೀರಾ ಮಸಾಲೆ ಬಳಸಿದ ಪದಾರ್ಥಗಳು ಸಲ್ಲ.
3. ಅಮ್ಮಂದಿರೂ ದುಡಿಯುತ್ತಿರುವ ಈ ದಿನಗಳಲ್ಲಿ ಮಕ್ಕಳ ಬಾಕ್ಸ್‌ಗಂತಲೇ ಪ್ರತ್ಯೇಕ ತಿಂಡಿ ರೆಡಿ ಮಾಡುವುದು ಕಷ್ಟ. ಹಾಗಂತ ವಾರಪೂರ್ತಿ ಬ್ರೆಡ್, ಕೇಕ್, ಬಿಸ್ಕೆಟ್, ಚಾಕ್ಲೆಟ್‌ನಿಂದ ಲಂಚ್‌ಬಾಕ್ಸ್ ತುಂಬಲು ಹೋಗಬೇಡಿ.
4. ಮಕ್ಕಳು ಸರಿಯಾಗಿ ತಿನ್ನುವುದಿಲ್ಲ ಎಂದು ಅತಿಯಾಗಿ ಗದರಬೇಡಿ. ಸತ್ವಯುತ ಆಹಾರದ ಅಗತ್ಯವನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿ.
5. ಅತಿಯಾದ ಗಟ್ಟಿ ಪದಾರ್ಥಗಳನ್ನು ಕೊಡಬೇಡಿ. ಲಂಚ್ ಬ್ರೇಕ್‌ನಲ್ಲಿ ಸುಲಭವಾಗಿ ತಿಂದು ಮುಗಿಸುವಂಥ ಪದಾರ್ಥಗಳಿರಲಿ.
6. ಲಂಚ್‌ಬಾಕ್ಸ್ ತೆಗೆದು ನೋಡಿದಾಗ, “ಅಯ್ಯೋ, ಇಷ್ಟನ್ನೂ ಹೇಗಪ್ಪಾ ತಿಂದು ಮುಗಿಸಲಿ?’ ಅನ್ನೋ ಭಾವನೆ ಮಕ್ಕಳಿಗೆ ಬರಬಾರದು. ಹಾಗಾಗಿ, ತಿನಿಸುಗಳನ್ನು ನೀಟಾಗಿ ಜೋಡಿಸಿ. ಒಂದೇ ದೊಡ್ಡ ಡಬ್ಬಿಯ ಬದಲು, ಎರಡೂ¾ರು ಸಣ್ಣ ಡಬ್ಬಿಗಳನ್ನು ಕಳುಹಿಸಿ.
7. ವಾರಪೂರ್ತಿ ಒಂದೇ ಪದಾರ್ಥವನ್ನು ಕೊಟ್ಟರೆ ಮಕ್ಕಳಿಗೆ ತಿನ್ನಲು ಬೋರಾಗುತ್ತದೆ. ದಿನವೂ ಹೊಸ ಹೊಸ ಪದಾರ್ಥಗಳು ಬಾಕ್ಸ್ ಅನ್ನು ಅಲಂಕರಿಸಲಿ.
ಕೆ.ವಿ. ರಾಜಲಕ್ಷ್ಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.