ಕ್ಯಾರೆಟ್ಟೇ ಕರೆಕ್ಟು : ತಿಂದರೆ, ಇರೋದಿಲ್ಲ ತೊಂದರೆ
Team Udayavani, Apr 17, 2019, 6:30 AM IST
‘ನಂಗೆ ತರಕಾರಿ ಅಂದ್ರೆ ಚೂರೂ ಇಷ್ಟ ಇಲ್ಲ’ ಅಂತ ಹೇಳುವವರಿಗೂ ಒಂದು ತರಕಾರಿ ಇಷ್ಟ ಆಗುತ್ತೆ. ಅದುವೇ, ಕ್ಯಾರೆಟ್. ಸಿಹಿ ಸಿಹಿಯಾಗಿರುವ ಈ ತರಕಾರಿಯನ್ನು ಹಸಿಯಾಗಿ ತಿನ್ನಬಹುದು, ಸಲಾಡ್ ಜೊತೆಗೆ ಬೆರೆಸಬಹುದು. ಇನ್ನೂ ಸುಲಭದ ವಿಧಾನವೆಂದರೆ, ಜ್ಯೂಸ್ ಮಾಡಿ ಹೊಟ್ಟೆಗಿಳಿಸುವುದು. ದಿನವೂ ಕ್ಯಾರೆಟ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಉತ್ತಮ.
ಕಡಿಮೆ ಕ್ಯಾಲೊರಿ
ದೇಹದ ತೂಕದ ಬಗ್ಗೆ ಅತೀವ ಕಾಳಜಿ ಉಳ್ಳವರು ಕೂಡಾ ಆರಾಮಾಗಿ ಕ್ಯಾರೆಟ್ ತಿನ್ನಬಹುದು. ಕಡಿಮೆ ಕ್ಯಾಲೊರಿಯ ಈ ತರಕಾರಿ ಕೊಬ್ಬನ್ನು ಕರಗಿಸಿ, ದೇಹದ ತೂಕವನ್ನು ಇಳಿಸುತ್ತದೆ.
ಕನ್ನಡಕಕ್ಕೆ ಬೈ ಬೈ
‘ಎ’ ವಿಟಮಿನ್ ಅನ್ನು ಹೇರಳವಾಗಿ ಒಳಗೊಂಡಿರುವ ಕ್ಯಾರೆಟ್, ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ದೃಷ್ಟಿದೋಷ ನಿಮ್ಮನ್ನು ಕಾಡಬಾರದು ಅಂತಿದ್ದರೆ, ದಿನವೂ ಕ್ಯಾರೆಟ್ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
ಚರ್ಮಕ್ಕೂ ಒಳ್ಳೆಯದು
ಕ್ಯಾರೆಟ್‌ನಲ್ಲಿರುವ ವಿಟಮಿನ್ ‘ಸಿ’ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ತುರಿಕೆ, ಮೊಡವೆ ಮುಂತಾದ ಚರ್ಮ ಸಂಬಂಧಿ ರೋಗಗಳ ಉಪಶಮನಕ್ಕೂ ಕ್ಯಾರೆಟ್ ಉತ್ತಮ ಪರಿಹಾರ.
ರೋಗ ನಿರೋಧಕ ಶಕ್ತಿಗಾಗಿ
ಸುಸ್ತು, ತಲೆತಿರುಗುವುದು, ನಿಶ್ಶಕ್ತಿ, ಪದೇ ಪದೆ ಜ್ವರ ಹೀಗೆ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ದೇಹವನ್ನು ಬಾಧಿಸುವ ಸಮಸ್ಯೆಗಳು ಅನೇಕ. ಇಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿತ್ಯವೂ ಕ್ಯಾರೆಟ್ ಜ್ಯೂಸು ಸೇವಿಸಿ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ: ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸಲು ಪರದಾಡುತ್ತಿರುವವರಿಗೆ ಕ್ಯಾರೆಟ್ ವರದಾನವಾಗಲಿದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿದ್ದರೆ, ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯವೂ ಕಡಿಮೆ.
ಮೆದುಳಿನ ಆರೋಗ್ಯಕ್ಕೆ: ಕ್ಯಾರೆಟ್‌ನಲ್ಲಿರುವ ಬೀಟಾ- ಕೆರೋಟಿನ್ ಅಂಶವು ಮೆದುಳು ಮತ್ತು ನರವ್ಯೂಹದ ಆರೋಗ್ಯವನ್ನು ವೃದ್ಧಿಸುತ್ತದೆ. ನಿತ್ಯವೂ ಕ್ಯಾರೆಟ್ ಸೇವಿಸಿದರೆ, ವೃದ್ಧಾಪ್ಯದಲ್ಲಿ ಮರೆವಿನ ಸಮಸ್ಯೆ ಕಾಡುವ ಸಂಭವ ಕಡಿಮೆ ಎನ್ನುತ್ತಾರೆ ತಜ್ಞರು.
ಗರ್ಭಿಣಿ, ಬಾಣಂತಿಯರಿಗೆ
ವಿಟಮಿನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂನಿಂದ ತುಂಬಿಕೊಂಡಿರುವ ಕ್ಯಾರೆಟ್ ಸೇವನೆ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯಕ್ಕೆ ಅವಶ್ಯಕ. ತಾಯಿ ಹಾಗೂ ಮಗುವಿನ ಮೂಳೆಗಳ ಬೆಳವಣಿಗೆಗೆ ಕ್ಯಾರೆಟ್ ಸಹಕಾರಿ.