ಬೇಬೀಸ್ ಡೇ ಔಟ್
ಮಡಿಲಲ್ಲಿ ಕೂಸು ಕಣ್ತುಂಬಾ ಕನಸು
Team Udayavani, Oct 23, 2019, 4:13 AM IST
ಘನ ಪದಾರ್ಥಗಳೆಲ್ಲ ಗಂಟಲಲ್ಲಿ ಸಿಕ್ಕಿ, ವಾಂತಿಯಾಗುತ್ತಿತ್ತು. ಅವನಿನ್ನೂ ಸರಿಯಾಗಿ ನುಂಗಲು ಕಲಿತಿಲ್ಲ. ಬಾಟಲ್‌ನಲ್ಲಿ ನೀರು, ಹಾಲು ಕುಡಿಸುವ ಯತ್ನದಲ್ಲಿ ನೀರೊಂದೇ ಗೆದ್ದಿತು. ಅಷ್ಟಾದರೂ ಆಯ್ತಲ್ಲ ಎಂದುಕೊಂಡು, ಬಾಳೆಹಣ್ಣಿನ ಮೇಲೆ ನಂಬಿಕೆ ಇರಿಸಿ, ಧೈರ್ಯ ತಂದುಕೊಂಡೆ. ರೆಡಿ ಸೆರಲ್ಯಾಕ್‌ಗಳನ್ನು ಕೊಡಲು ಮನಸ್ಸಿಲ್ಲ, ಎಲೆಕ್ಟ್ರಿಕ್ ಕುಕರ್ ಕೊಳ್ಳಲೋ ಬೇಡವೋ ಎಂಬ ಗೊಂದಲದ ನಡುವೆಯೇ ಹೊರಡುವ ದಿನ ಬಂದಾಗಿತ್ತು.
ನನ್ನ ಪುಟಾಣಿ ಹೊಟ್ಟೆಗೆ ಬಂದು 3 ತಿಂಗಳಿರುವಾಗ ಊಟಿಗೆ ಹೋಗಿದ್ದು. ಆ ನಂತರದಲ್ಲಿ ಆಸ್ಪತ್ರೆ-ಮನೆ, ಮನೆ-ಆಸ್ಪತ್ರೆ ಬಿಟ್ಟರೆ ಒಂದೆರಡು ಬಾರಿ ಊರಿಗೆ ಹೋಗಿದ್ದು ಅಷ್ಟೇ. ಇನ್ನು, ಮಗು ಹುಟ್ಟಿದ ಮೇಲಂತೂ ಅದೇ ಸಂಭ್ರಮದಲ್ಲಿ ತವರಲ್ಲಿ ಐದಾರು ತಿಂಗಳು ಕಳೆವ ಹೊತ್ತಿಗಾಗಲೆ, ಎಲ್ಲಾದರೂ ದೂರ ಪ್ರವಾಸ ಹೋಗದಿದ್ದರೆ ತಲೆ ಚಿಟ್ಟು ಹಿಡಿದು, ಕುಳಿತಲ್ಲೇ ಗೆದ್ದಲು ಹಿಡಿಯುತ್ತದೆ ಎಂದು ಅನಿಸತೊಡಗಿತ್ತು. ಅಷ್ಟರಲ್ಲಿ ಪತಿ ಪರಮೇಶ್ವರನ ಹುಟ್ಟುಹಬ್ಬವೂ ಬಂತು. ಅದೇ ನೆಪದಲ್ಲಿ ಟ್ರಿಪ್ ಹೋಗುವ ಪ್ಲಾನ್ ಮಾಡಿದೆವು.
ಪುಟ್ಟ ಮಗು ಕರೆದುಕೊಂಡು ಸುತ್ತಾಟ ಬೇಡ ಎಂಬ ಹಿರಿಯರ ಮಾತುಗಳು ಹೊರಬರುವ ಮೊದಲೇ ಬಾಯಿಗೆ ಪ್ಲಾಸ್ಟರ್ ಹಾಕುವ ನನ್ನ ಉದ್ದೇಶ ಸಾಧಿತವಾಯಿತು! ಪ್ರವಾಸಕ್ಕೆ ಅಣ್ಣ-ಅತ್ತಿಗೆಯೂ ಜೊತೆಗೂಡಿದರು. ಅವರ ಮಗಳು ನನ್ನ ಮಗನಿಗಿಂತ ಒಂದು ತಿಂಗಳಿಗೆ ಚಿಕ್ಕವಳು. ಹಾಗಾಗಿ ಸಮಾನ ಸುಖೀ (?)ಗಳ ಜೊತೆಗೆ ಪ್ರಯಾಣಿಸುವುದು ಧೈರ್ಯ ನೀಡಿತ್ತು. 8, 9 ತಿಂಗಳ ಮಕ್ಕಳನ್ನಿಟ್ಟುಕೊಂಡು ಅಂಡಮಾನ್‌ಗೆ ಹೊರಟಿದ್ದೆವು.
ಹೊರಡುವ ದಿನ ಹತ್ತಿರಾದಂತೆಲ್ಲ ನನಗೆ, ಮಗುವಿನ ಊಟದ್ದೇ ಚಿಂತೆ. ಅದಕ್ಕಾಗಿಯೇ ಮಗುವಿಗೆ ಬಾಳೆಹಣ್ಣು, ಚಿಕ್ಕು ತಿನ್ನಿಸುವ ಅಭ್ಯಾಸ ಮಾಡಿಸತೊಡಗಿದೆ. ಸೇಬು, ಚಪಾತಿ, ದೋಸೆ ಯಾವುದು ಕೊಟ್ಟರೂ ಗಂಟಲಲ್ಲಿ ಸಿಕ್ಕಿ, ವಾಂತಿಯಾಗುತ್ತಿತ್ತು. ಅವನಿನ್ನೂ ಸರಿಯಾಗಿ ನುಂಗಲು ಕಲಿತಿಲ್ಲ. ಬಾಟಲ್‌ನಲ್ಲಿ ನೀರು, ಹಾಲು ಕುಡಿಸುವ ಯತ್ನದಲ್ಲಿ ನೀರೊಂದೇ ಗೆದ್ದಿತು. ಅಷ್ಟಾದರೂ ಆಯ್ತಲ್ಲ ಎಂದುಕೊಂಡು, ಬಾಳೆಹಣ್ಣಿನ ಮೇಲೆ ನಂಬಿಕೆ ಇರಿಸಿ, ಧೈರ್ಯ ತಂದುಕೊಂಡೆ. ರೆಡಿ ಸೆರಲ್ಯಾಕ್‌ಗಳನ್ನು ಕೊಡಲು ಮನಸ್ಸಿಲ್ಲ, ಎಲೆಕ್ಟ್ರಿಕ್ ಕುಕರ್ ಕೊಳ್ಳಲೋ ಬೇಡವೋ ಎಂಬ ಗೊಂದಲದ ನಡುವೆಯೇ ಹೊರಡುವ ದಿನ ಬಂದಾಗಿತ್ತು.
ವಿಮಾನ ಮೇಲೇರುವಾಗ ಒತ್ತಡಕ್ಕೆ ಕಿವಿ ಗುಯ್ಗುಡಲಾರಂಭಿಸಿದಂತೆ, ಇವನು ಕುಯ್ ಎಂದು ರಾಗ ತೆಗೆದ. ಕಿವಿಗೆ ಹತ್ತಿ ಹಾಕಿದರೆ ತೆಗೆದು ಬಿಸಾಡುತ್ತಿದ್ದ. ಅಯ್ಯಯ್ಯೋ, ಆರಂಭದಲ್ಲೇ ಹೀಗಾದರೆ, ಇನ್ನೂ ಐದು ದಿನ ಕಳೆಯುವುದು ಹೇಗಪ್ಪಾ ಎನಿಸಿತು. ಬೆಳಗಿನ ಉಪಾಹಾರಕ್ಕೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ಬಾಳೆಹಣ್ಣನ್ನು ಕೈಯಲ್ಲೇ ಗಿವುಚಿ ತಿನ್ನಿಸತೊಡಗಿದೆ. ಊಟಿಯ ಹೋಟೆಲ್‌ನಲ್ಲಿ ಎದುರು ಟೇಬಲ್‌ಲ್ಲಿ ಕುಳಿತಿದ್ದ ಅಮ್ಮ-ಮಗ, ಕೈತುಂಬಾ ಮೆತ್ತಿಕೊಂಡು, ಬಾಯಿಗೆ ತುರುಕಿಕೊಂಡು ಊಟ ಮಾಡಿ ಅಸಹ್ಯ ಹುಟ್ಟಿಸಿದ್ದು ನೆನಪಿಗೆ ಬಂತು. ಅದರಲ್ಲೂ ಇದು ಏರ್‌ಪೋರ್ಟ್. ನೋಡಿದವರಿಗೆ ಅಸಹ್ಯವಾಗಿರಬಹುದು.
ಆದರೆ, ಮಗನ ಹೊಟ್ಟೆ ತುಂಬಿದರೆ ಸಾಕು; ಯಾರು ಏನಾದರೂ ಅಂದುಕೊಳ್ಳಲಿ ಎಂದುಕೊಂಡೆ. ಇನ್ನು, ಹಾಲು ಕುಡಿಸುವುದು ಪರಮ ಪ್ರೈವೇಟ್ ಕೆಲಸ ಎಂದುಕೊಂಡಿದ್ದ ನಾನು (ಅತ್ತಿಗೆಯೂ), ನೀಲ್ ಐಲ್ಯಾಂಡ್‌ನ ಗ್ಯಾರೇಜಿನಲ್ಲಿ, ಬಂದರಿನಲ್ಲಿ, ಹಡಗು, ವಿಮಾನದಲ್ಲಿ, ಹಣ್ಣು ಮಾರುವ ಹೆಂಗಸಿನ ಅಂಗಡಿಯೊಳಗೆ, ಜನನಿಬಿಡ ಬೀಚ್ ಎದುರಿಗೆ, ಊಟಕ್ಕೆ ಹೋದ ಹೋಟೆಲ್‌ನಲ್ಲಿ- ಒಟ್ಟಾರೆ, ಎಲ್ಲಿ ಮಗು ಕಿರುಚುತ್ತದೋ ಅಲ್ಲಿ, ಅವನ ಹಸಿವು ನೀಗಿದರೆ ಸಾಕೆಂದು ಶಾಲಿನ ಮರೆಯಲ್ಲಿ ಕುಡಿಸಲು ಕಲಿತದ್ದು ಮತ್ತೂಂದು ಅನಿವಾರ್ಯತೆಯ ಪಾಠ.
ಪೋರ್ಟ್‌ಬ್ಲೇರ್‌ನಲ್ಲಿ ಇಳಿಯುತ್ತಿದ್ದಂತೆ, ಸೂರ್ಯ ಭಸ್ಮ ಮಾಡಿಬಿಡುತ್ತೇನೆ ಎನ್ನುವಂತೆ ಸುಡುತ್ತಿದ್ದ. ನೆತ್ತಿ ಸುಡುತ್ತಲ್ಲಾ ಎಂದು ತಲೆ ಮೇಲೆ ಬಟ್ಟೆ ಹಾಕಿದ್ದಕ್ಕೆ, ಸೂರ್ಯನಿಗಿಂತ ಭಯಂಕರ ಅವತಾರ ತಾಳಿ ಕಿರುಚಾಡಿ ಹೆದರಿಸಿಬಿಟ್ಟ ಮಗರಾಯ… ಟೊಪ್ಪಿ, ಹೊದಿಕೆ ಮುಂತಾದವೆಲ್ಲ ತನ್ನ ಸ್ವಾತಂತ್ರ ಹರಣದ ಸಂಕೇತ ಎಂಬುದು ಹುಟ್ಟಿದಾಗಿನಿಂದ ಅವನ ನಂಬಿಕೆ. ಸರಿ, ಹೋಗತ್ಲಾಗೆ ಎಂದುಕೊಂಡು ಬಿಸಿಲಲ್ಲೇ ಕಾಯಿಸುತ್ತಾ ಹೋಟೆಲ್ ಕಡೆ ಮುಖ ಮಾಡಿದೆವು. ಮಧ್ಯಾಹ್ನದ ಹೊತ್ತಿಗೆ ಇಲ್ಲಿನ ಸೆಲ್ಯುಲಾರ್ ಜೈಲಿಗೆ ಹೊರಟೆವು.
ವೀರ ಸಾವರ್ಕರ್ ಸೇರಿದಂತೆ ಹಲವಾರು ಸ್ವಾತಂತ್ರ ಯೋಧರು ಅನುಭವಿಸಿದ ಯಾತನೆಯ ಕತೆಗಳನ್ನು ಜೈಲಿನ ಕಂಬಿಕಂಬಿಗಳು ಸಾರಿ ಹೇಳುತ್ತಿದ್ದವು. ಕತ್ತಲೆ ಕೋಣೆಗಳೊಳಗೆ ಕಹಿ ಕತೆಗಳು ಆರ್ತನಾದದಂತೆ ಅನುರಣಿಸುತ್ತಿದ್ದವು. ಇದನ್ನು ನೋಡಿ ಮನಸ್ಸಿಗೆ ಮೋಡ ಕವಿವ ಹೊತ್ತಿಗೆ ಹೊರಗೆ ಕತ್ತಲಾಗಿತ್ತು. ಅಲ್ಲಿ, ಸಂಜೆ ಐದು ಗಂಟೆಗೆಲ್ಲ ಸೂರ್ಯಾಸ್ತವಾಗುತ್ತದೆ. ತದ ನಂತರ ಲೇಸರ್ ಶೋ ಇತ್ತು. ಆದರೆ ಮಕ್ಕಳು ಸುಸ್ತಾಗಿದ್ದವು. ನಾವೂ. ಹಾಗಾಗಿ, ರೂಮ್‌ಗೆ ಹಿಂದಿರುಗಿದೆವು.
ಕಣ್ಣು ಭಾರವಾದರೂ, ತೊಟ್ಟಿಲಿಲ್ಲದೆ ಮಲಗಲ್ಲ ಎಂಬ ಮಗನನ್ನು ಟವೆಲ್‌ನೊಳಗೆ ಮಲಗಿಸಿ ನಾನು, ನನ್ನ ಗಂಡ ತೂಗಿ ತೂಗಿ ಕೈ ಬತ್ತಿ ಬರುವ ಹೊತ್ತಿಗೆ ಅವನಿಗೆ ನಿದ್ರೆ ಹತ್ತಿತ್ತು. ಈ ಟೆಕ್ನಿಕ್ ಟ್ರಿಪ್‌ನುದ್ದಕ್ಕೂ ನಮ್ಮ ಸಹಾಯಕ್ಕೆ ಬಂತು. ಅಂದಿನಿಂದ ಪ್ರತಿದಿನ ಬೆಳಗಾಗುತ್ತಿದ್ದುದು 4 ಗಂಟೆಗೇ. ಅಲ್ಲಿ ಸೂರ್ಯ ಹುಟ್ಟುತ್ತಿದ್ದುದೇ ಆಗ. ನಮಗೇ ಆಶ್ಚರ್ಯವಾಗುವ ಹಾಗೆ, ಮಗ ಕೂಡಾ ನಾಲ್ಕು ಗಂಟೆಗೆ ಎದ್ದು, ಸಂಜೆ 6ಕ್ಕೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡ.
ಮಕ್ಕಳು ಹೇಗೆ ಯೋಚಿಸುತ್ತಾರೋ ಗೊತ್ತಿಲ್ಲ. ಆದರೆ, ಇಬ್ಬರು ಮಕ್ಕಳೂ ಬದಲಾದ ಸ್ಥಳಕ್ಕೆ, ಅಲ್ಲಿನ ಪರಿಸರಕ್ಕೆ, ಬೇಗ ಎದ್ದು ಬೇಗ ಮಲಗುವ ಸಂದರ್ಭಕ್ಕೆ ಬಲುಬೇಗ ಹೊಂದಿಕೊಂಡರು. ಜೊತೆಗೆ, ಇಡೀ ದಿನ ಸುತ್ತಾಡುತ್ತಿದ್ದುದರಿಂದ ಮಕ್ಕಳಿಗೆ ಹಸಿವೂ ಚೆನ್ನಾಗಿ ಆಗುತ್ತಿತ್ತು. ನಿದ್ರೆಯೂ ಚೆನ್ನಾಗಿ ಬರುತ್ತಿತ್ತು. ಇದರಿಂದಾಗಿ ಅವರನ್ನು ನಿಭಾಯಿಸುವುದು ಅಂದುಕೊಂಡಿದ್ದಕ್ಕಿಂತಾ ಸುಲಭವೇ ಆಯಿತು. ಮರುದಿನ ಹ್ಯಾವ್ಲಾಕ್ ದ್ವೀಪದ ನೀಲಿ, ಶಾಂತ ನೀರಿನ ಎದುರೇ ಇತ್ತು ನಮ್ಮ ರೆಸಾರ್ಟ್.
ಇದು ಪ್ರೈವೇಟ್ ಬೀಚ್ ಆಗಿದ್ದರಿಂದ ಜನಜಂಗುಳಿಯೂ ಇರಲಿಲ್ಲ. ಈ ಪ್ರಪಂಚದ ಎಲ್ಲ ಕಷ್ಟನಷ್ಟಗಳು, ನೋವು-ನಲಿವುಗಳಿಂದ ದೂರವಾಗಿ ಹೊಸದೇ ಲೋಕದಲ್ಲಿ ನಿರಾತಂಕವಾಗಿ ಧ್ಯಾನಸ್ಥರಾದಂಥ ಭಾವ ಆವರಿಸುವ ತಾಣ. ಕಲಾಕೃತಿಯಂತೆ ಕಾಣುವ ಅಲೆಗಳಿಲ್ಲದ ನೀರು, ದೋಣಿ, ತೆಂಗಿನಮರಗಳು… ಮಲಗಿದ್ದ ಮಗುವನ್ನು ತೀರದ ಮರಳ ಮೇಲೆ ತಂದಿರಿಸಿ, ಒಬ್ಬರಾದ ಮೇಲೆ ಒಬ್ಬರಂತೆ ನೀರಿನಲ್ಲಿ ವಾಕ್ ಮಾಡಿಬಂದೆವು. ನಾವು ಪಾಪಿಗಳೇನಲ್ಲ ಎಂಬುದು ನನ್ನ ನಂಬಿಕೆಯಾಗಿತ್ತು, ಆದರೂ ಅಲ್ಲಿ ಎಷ್ಟು ದೂರ ಸಮುದ್ರದಲ್ಲಿ ನಡೆದರೂ ಮೊಣಕಾಲುದ್ದವೇ ನೀರು!
ಆದರೆ, ನಾನು ಪಾಪಿ ಇದ್ದರೂ ಇರಬಹುದು ಎನಿಸಿದ್ದು ಡೈಪರ್ ಬಿಸಾಡುವಾಗ. ಬೆಂಗಳೂರನ್ನು ಪ್ಲಾಸ್ಟಿಕ್‌ನಿಂದ ಹಾಳು ಮಾಡಿದ್ದು ಸಾಲಲಿಲ್ಲವೆಂಬಂತೆ ಇಲ್ಲಿ, ದೂರದ ಸುಂದರ ದ್ವೀಪಕ್ಕೆ ಬಂದು ಡೈಪರ್ ಎಸೆಯುತ್ತಿದ್ದೇನಲ್ಲಾ ಎಂದು ಒಳಗೊಳಗೇ ಹಿಂಸೆಯಾಗುತ್ತಿತ್ತು. ಹೀಗೆ ನಾನೆಸೆದ ಡೈಪರ್ ಇನ್ನು 500 ವರ್ಷಗಳಾದರೂ ಕರಗದೆ ಇಲ್ಲೇ ಕಸವಾಗಿ ಪರಿಸರವನ್ನು ಹಾಳು ಮಾಡುತ್ತಿರುತ್ತಲ್ಲ ಎಂದು ಕೊರಗಾಗುತ್ತಿತ್ತು.
ಸ್ಕೂಬಾ ಡೈವಿಂಗ್‌ಗೆ ಹ್ಯಾವ್ಲಾಕ್ ದ್ವೀಪ ಫೇಮಸ್. ಬಹಳ ದಿನದಿಂದ ಕನಸು ಕಂಡು ಸ್ಕೂಬಾಗೆ ಹೋದೆವು. ಈಗ ಮಕ್ಕಳನ್ನೇನು ಮಾಡುವುದು? ಇಲ್ಲಿ ತನಕ ಬಂದು ಹಾಗೆ ಹೋಗಲು ಸಾಧ್ಯವೇ ಇಲ್ಲ ಎಂದುಕೊಂಡು, ಅಣ್ಣ-ಅತ್ತಿಗೆ ಹೋದಾಗ ಅವರ ಮಗು ನಮ್ಮೊಂದಿಗಿರುವುದು, ನಾವು ಹೋದಾಗ ಅವರ ಬಳಿ ಮಗನನ್ನು ಬಿಟ್ಟು ಹೋಗುವುದೆಂದು ನಿರ್ಧರಿಸಿದೆವು. ಫ್ರೆಂಡ್ ಜೊತೆ ಸಿಕ್ಕಿದ್ದು ಇಬ್ಬರಿಗೂ ಖುಷಿಯಾಗಿತ್ತು- ಒಬ್ಬರ ಕಣ್ಣಿಗೆ ಮತ್ತೂಬ್ಬರು ಕೈ ಹಾಕುತ್ತಾ, ಕೂದಲು ಎಳೆಯುತ್ತಾ, ಹೊಡೆಯುತ್ತಾ, ಅರಚುತ್ತಾ ಸುಲಭವಾಗಿ ಟೈಂಪಾಸ್ ಮಾಡಿಕೊಂಡವು.
ಅವೆರಡೂ ಹತ್ತಿರವಿದ್ದೂ ಪೆಟ್ಟು ಮಾಡಿಕೊಳ್ಳದಂತೆ ನೋಡಿಕೊಳ್ಳುವಷ್ಟರಲ್ಲಿ ಹೈರಾಣಾಗಿದ್ದೆವು. ಸ್ಕೂಬಾ ತರಬೇತಿ ವೇಳೆ ಮಾತ್ರ, ನನಗೇನಾದರೂ ಆದರೆ ಮಗನ ಗತಿ ಏನು ಎಂಬ ಯೋಚನೆ ಹಾದು ಹೋಯ್ತು. ಮರುದಿನ ನೀಲ್ ಐಲ್ಯಾಂಡ್‌ನಲ್ಲಿ ಮಗ ಸಮುದ್ರದ ನೀರಿನಲ್ಲೊಂದಿಷ್ಟು ಹೊತ್ತು ಆಟವಾಡಿದ. ನಾವು ಕೂಡಾ ಒಂದೆರಡು ವಾಟರ್ ನ್ಪೋರ್ಟ್ಸ್ ಆಡಿದೆವು. ಆದರೂ ಮಗ ಆಡಿ ಖುಷಿ ಪಡುವಾಗ ಆಗುವಷ್ಟು ಖುಷಿ ನಮಗೆ ಬೇರೆಯದರಲ್ಲಿ ಸಿಗುತ್ತಿರಲಿಲ್ಲ.
ಇದುವರೆಗೂ ಯಾವ ಜವಾಬ್ದಾರಿ ಇಲ್ಲದೆ, ತಲೆಬಿಸಿ ಇಲ್ಲದೆ ಆರಾಮಾಗಿ ಇದ್ದವಳಿಗೆ ಈಗ ಮಗುವೊಂದು ಕೈಗೆ ಬಂದು 24/7 ಜವಾಬ್ದಾರಿ ಹೆಗಲೇರಿ ಕುಳಿತಿತ್ತು. ಅದನ್ನು ಮನೆಯಲ್ಲಷ್ಟೇ ಅಲ್ಲ, ಪ್ರವಾಸದಲ್ಲಿ ಕೂಡಾ ಸರಿಯಾಗಿ ನಿಭಾಯಿಸಿದೆ ಎಂದು ನನ್ನ ಬೆನ್ನು ನಾನೇ ತಟ್ಟಿಕೊಂಡೆ. ಈಗ ನಾನು, ಮಗ ಇಬ್ಬರೂ ಅಂಡಮಾನ್ ಬಿಸಿಲನ್ನೆಲ್ಲ ಚೆನ್ನಾಗಿ ಹೀರಿಕೊಂಡು ಕರ್ರಗಾಗಿ ಮನೆಗೆ ಬಂದಿದ್ದೇವೆ.
ಐದು ದಿನ ಬೆಳಗಿನಿಂದ ಸಂಜೆವರೆಗೆ ಬಿಡದೆ ಹೊತ್ತು ತಿರುಗಿ- ಇನ್ನು ಮುಂದೆ ಮನೆ ಬಿಟ್ಟು ಹೊರ ಹೋಗೋದು ಬೇಡಪ್ಪಾ ಬೇಡ, ಸಾಕಪ್ಪಾ ನಿಮ್ಮ ಸಹವಾಸ ಎಂದು ಮಗ ಹೇಳುತ್ತಾನೆಂದುಕೊಂಡಿದ್ದೆ. ಆದರೀಗ ಕತೆ ಉಲ್ಟಾ! ಬೆಳಗಾಗುತ್ತಿದ್ದಂತೆಯೇ ತಿರುಗಾಡಿಸು ಎಂದು ದುಂಬಾಲು ಬೀಳುತ್ತಿದ್ದಾನೆ. ನೀರು ನೋಡಿದ್ರೆ ಹಾರಲು ಶುರು ಮಾಡಿದ್ದಾನೆ. ಎತ್ತಿಕೊಳ್ಳದಿದ್ರೆ ಎಗರಾಡುತ್ತಾನೆ. ಮನೆಯೊಳಗೇ 9 ತಿಂಗಳು ಕಳೆದಿದ್ದ ಅವನನ್ನು ಈ ಪ್ರವಾಸ ರಿಫ್ರೆಶ್ ಮಾಡಿದೆ. ಆದರೆ ಅವನನ್ನೂ ಬ್ಯಾಗನ್ನೂ ಬಿಟ್ಟೂಬಿಡದೆ ಸಂಭಾಳಿಸಿದ ನಾವು ಸುಸ್ತಾಗಿದ್ದೇವೆ.
* ರೇಶ್ಮಾ ರಾವ್ ಸೊನ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.