ಮಗುವೇ ನೀ ನನ್ನ ಪ್ರಾಣದಂತೆ…
Team Udayavani, Jun 6, 2018, 9:48 AM IST
ಎರಡನೇ ಮಗು ಮನೆಗೆ ಬಂದಾಗ, ಮೊದಲ ಮಗುವಿಗೆ ಖುಷಿ, ಆತಂಕ ಒಟ್ಟಿಗೇ ಆಗುತ್ತದೆ. ಆಟವಾಡಲು ಜೊತೆಗೊಂದು ಗೊಂಬೆ ಸಿಕ್ಕಿತೆಂದು ಖುಷಿ, ಹೆತ್ತವರ ಪ್ರೀತಿಯಲ್ಲಿ ಪಾಲು ಪಡೆಯಲು ಸ್ಪರ್ಧಿ ಇದ್ದಾನೆಂದು ಆತಂಕ! ಇದೇ ಕಾರಣಕ್ಕೆ, ಪಾಪು ಬೇಡ ಕೊಟಿºಡೂ ಎಂದು ಕೆಲವು ಮಕ್ಕಳು ಹೇಳುವುದುಂಟು. ಆದರೆ, ಅಂಥ ಮಕ್ಕಳಲ್ಲಿಯೇ ಒಬ್ಬಳು ಸಕ್ಕರೆ ಮನಸ್ಸಿನ ತಾಯಿ ಇರುತ್ತಾಳೆ!
ದೊಡ್ಡ ಮಕ್ಕಳು, ಚಿಕ್ಕಮಕ್ಕಳನ್ನು ಹೇಗೆ ಒಪ್ಪಿಕೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲಿ ಬಾಲಿವುಡ್ ನಟಿ ದಿವ್ಯಾ ದತ್ತಾರ ಬದುಕಿನ ಕಥೆ ಇದೆ. ಮನೆಗೆ ಹೊಸ ಕಂದ ಬಂದಾಗ ಬಾಲ್ಯದಲ್ಲಿ ತಾನು ಹೇಗೆಲ್ಲಾ ವರ್ತಿಸಿದ್ದೆ ಎಂಬುದನ್ನು ದಿವ್ಯಾ ಹೇಳಿಕೊಂಡಿದ್ದಾರೆ…
ನಮ್ಮ ಮನೆಯಲ್ಲಿದ್ದವರು ಮೂರೇ ಜನ: ನಾನು, ಅಪ್ಪ, ಅಮ್ಮ. ಆ ದಿನಗಳಲ್ಲಿ, ಇಬ್ಬರ ಪ್ರೀತಿಯೂ ನನಗೆ ದಂಡಿಯಾಗಿ ಸಿಗುತ್ತಿತ್ತು. ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಅದರ ಮಧ್ಯೆಯೇ ಸಮಯ ಹೊಂದಿಸಿಕೊಂಡು ನನ್ನೊಂದಿಗೆ ಆಟಕ್ಕೂ ಬರುತ್ತಿದ್ದರು. ಜೊತೆಯಲ್ಲಿ ಇದ್ದಾಗಲೆಲ್ಲಾ ಅಮ್ಮ ಚಿತ್ರಗೀತೆಯನ್ನೋ, ಭಕ್ತಿಗೀತೆಯನ್ನೋ, ಜೋಗುಳವನ್ನೋ ಹಾಡುತ್ತ ನನ್ನನ್ನು ಖುಷಿಪಡಿಸುತ್ತಿದ್ದಳು. ಅಪ್ಪ- ಕಥೆ ಹೇಳುತ್ತ, ಕೂಸುಮರಿ ಆಡಿಸುತ್ತ, ತಮಾಷೆಯ ಫೈಟಿಂಗ್ ಮಾಡುತ್ತ, ಸೋತು ಹೋದಂತೆ ನಟಿಸುತ್ತ ನನ್ನ ಸಡಗರ ಹೆಚ್ಚಿಸುತ್ತಿದ್ದರು.
ನಾನು ಬೇಬಿ ಸಿಟ್ಟಿಂಗ್‌ಗೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಮನೆಯ ವಾತಾವರಣದಲ್ಲಿ ಏನೋ ಬದಲಾವಣೆ ಆದಂತೆ ಅನ್ನಿಸಿತು. ಸೂಕ್ಷ್ಮವಾಗಿ ಗಮನಿಸಿದಾಗ- ಅಮ್ಮನ ಹೊಟ್ಟೆ ಊದಿಕೊಂಡಂತೆ ಭಾಸವಾಯಿತು. ಅವತ್ತೂಂದು ಸಂಜೆ, ಅಪ್ಪನೂ ಜೊತೆಯಲ್ಲಿ ಇದ್ದಾಗಲೇ ಕೇಳಿಬಿಟ್ಟೆ: “ಅಮ್ಮ ಅಮ್ಮ, ಇದ್ಯಾಕೆ ನಿನ್ನ ಹೊಟ್ಟೆ ಊದಿಕೊಂಡಿದೆ? ನಿನಗೆ ನೋವಾಗ್ತಾ ಇಲ್ವ?’ ಅಮ್ಮ ಏನೂ ಉತ್ತರಿಸಲಿಲ್ಲ. ಮುಸಿಮುಸಿ ನಗುತ್ತ, ನನ್ನ ಕೆನ್ನೆ ಚಿವುಟಿ ಎದ್ದು ಹೋಗಿಬಿಟ್ಟಳು! ಅಪ್ಪ, ನನ್ನನ್ನು ಮುದ್ದಿನಿಂದ ನೋಡುತ್ತಲೇ ಹೇಳಿದರು: “ಅಲ್ಲಿ ಒಂದು ಗೊಂಬೇನ ಅಡಗಿಸಿ ಇಟ್ಟಿದೀವಿ. ಸ್ವಲ್ಪ ದಿನದಲ್ಲೇ ಅದು ಆಚೆಗೆ ಬರುತ್ತೆ. ಆಮೇಲೆ ದಿನಾಲೂ ನೀನು ಆ ಗೊಂಬೆಯ ಜೊತೆ ಆಟ ಆಡಬಹುದು…’
ಹೀಗೇ ಮತ್ತೂ ಕೆಲವು ದಿನಗಳು ಕಳೆದವು. ಈ ನಡುವೆ ಅಮ್ಮ ಇದ್ದಕ್ಕಿದ್ದಂತೆಯೇ ಮಲಗಿ ಬಿಡುವುದು, ತುಂಬಾ ಸುಸ್ತಾಗುತ್ತೆ ಎಂದು ನಿಟ್ಟುಸಿರು ಬಿಡುವುದು ಹೆಚ್ಚಾಗಿತ್ತು. ಗೊಂಬೆಯಿಂದಲೇ ಇಷ್ಟೆಲ್ಲಾ ತೊಂದರೆ ಆಗುತ್ತಿದೆ ಅನಿಸಿದ್ದರಿಂದ- ಆ ಗೊಂಬೇನ ಹೊರಗೆ ಬಿಟ್ಟು ಬಿಡಮ್ಮ, ಎಲ್ಲಾ ಸರಿಹೋಗುತ್ತೆ ಅನ್ನುತ್ತಿದ್ದೆ. ಈ ಮಾತು ಕೇಳಿ ಎಲ್ಲರೂ ನಗುತ್ತಿದ್ದರು. ಈ ವೇಳೆಗೆ ನಮ್ಮ ಮನೆಗೆ ಚಿಕ್ಕಮ್ಮನೂ, ನನ್ನದೇ ವಯಸ್ಸಿನ ಆಕೆಯ ಮಗಳೂ ಬಂದಿದ್ದರು.
ಅವತ್ತೂಂದು ದಿನ, ಮೊದಲೇ ಎಲ್ಲವೂ “ಫಿಕ್ಸ್’ ಆಗಿತ್ತು ಅನ್ನುವಂತೆ ಎಲ್ಲರೂ ಆಸ್ಪತ್ರೆಗೆ ಹೋದೆವು. ಅಮ್ಮ ಒಮ್ಮೆ ನನ್ನ ತಲೆ ನೇವರಿಸಿ, ಹಣೆಗೆ ಮುತ್ತಿಟ್ಟು, ಪಾಪೂನ ಹುಷಾರಾಗಿ ನೋಡ್ಕೊಳ್ಳಿ ಎಂದು ಚಿಕ್ಕಮ್ಮನಿಗೆ ಎರಡೆರಡು ಬಾರಿ ಹೇಳಿ, ನರ್ಸ್‌ಗಳ ಜೊತೆ ಹೋಗಿಬಿಟ್ಟಳು. ಅವತ್ತು ಐದಾರು ಗಂಟೆಗಳ ಕಾಲ ಕುಟುಂಬದವರೆಲ್ಲ ವಾರ್ಡ್‌ನ ಹೊರಗೇ ಇದ್ದೆವು. ಅಪ್ಪ, ಚಡಪಡಿಸುತ್ತ, ನಿಂತಲ್ಲಿ ನಿಲ್ಲದೆ ಓಡಾಡುತ್ತಿದ್ದರು. ಏನೂ ತೊಂದರೆ ಆಗದಿದ್ರೆ ಸಾಕು ಎಂದು ಎಲ್ಲರಿಗೂ ಮತ್ತೆಮತ್ತೆ ಹೇಳುತ್ತಿದ್ದರು.
ಕಿರೊÅà ಎಂಬ ಸದ್ದು ಬರುವುದೂ, ನರ್ಸೊಬ್ಬಳು ತಲೆ ಹೊರಗೆ ಹಾಕಿ- “ಬನ್ನಿ ಸಾರ್’ ಎಂದು ಅಪ್ಪನನ್ನು ಕರೆಯುವುದೂ ಏಕಕಾಲಕ್ಕೆ ಘಟಿಸಿತು. ಕೆಲ ನಿಮಿಷದ ನಂತರ ಅಪ್ಪ ಗೆಲುವಿನ ನಗೆಯೊಂದಿಗೆ ಹೊರಬಂದರು. ಅವರ ಕೈಯಲ್ಲಿ ಏನೋ ಇದ್ದಂತಿತ್ತು. ಸೀದಾ ನನ್ನ ಬಳಿಗೇ ಬಂದರು ಅಪ್ಪ. ನೋಡುತ್ತೇನೆ: ಬಿಳಿಯ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಕೆಂಪು ಗೊಂಬೆ! ಮಲಗಿತ್ತು. ಅಚ್ಚರಿಯಿಂದಲೇ ಅಪ್ಪನ ಮುಖ ನೋಡಿದೆ. “ಅಮ್ಮನ ಹೊಟ್ಟೆಯೊಳಗೆ ಒಂದು ಗೊಂಬೇನ ಅಡಗಿಸಿ ಇಟ್ಟಿದೀನಿ ಅಂದಿದ್ದೆ ಅಲ್ವ? ಇದೇ ಆ ಗೊಂಬೆ. ಇನ್ಮೆàಲೆ ಇದು ನಿನ್ನ ಜೊತೇನೇ ಇರುತ್ತೆ. ಇದನ್ನು ಹುಷಾರಾಗಿ ನೋಡ್ಕೊàಬೇಕು. ಓಕೆ?’ ಅಂದರು. ನಾನು- ಯಾವುದೋ ಮೋಡಿಗೆ ಒಳಗಾದವಳಂತೆ- “ಪ್ರಾಮಿಸ್’ ಅಂದುಬಿಟ್ಟೆ. ಆಗಲೇ ಚಿಕ್ಕಮ್ಮನ ಮಗಳೂ ಬಂದು- “ಪಾಪೂನ ನಾನು ಎತ್ಕೊàತೀನಿ ಕೊಡಿ’ ಅಂದಳು. ನಾನು ತಕ್ಷಣವೇ- “ಅಯ್ಯಯ್ಯೋ, ಬೇಡ ಬೇಡ, ನೀನು ಗೊಂಬೇನ ಬೀಳಿಸಿಬಿಡ್ತೀಯ. ನಿನಗೆ ಗೊತ್ತಾಗಲ್ಲ ಸುಮ್ನಿರು’ ಅಂದುಬಿಟ್ಟೆ. ನೆರೆದಿದ್ದವರೆಲ್ಲ- “ಅಹಹಹ, ಈಗಲೇ ಎಷ್ಟೊಂದು ಕೇರ್ ತಗೋತಿದಾಳೆ ನೋಡಿ’ ಎಂದು ನಕ್ಕರು.
ಪಾಪು ಮನೆಗೆ ಬಂದ ಮೇಲೆ ಅಮ್ಮನ ವರ್ತನೆಯಲ್ಲಿ ತುಂಬಾ ಬದಲಾವಣೆ ಕಾಣಿಸ್ತು. ಮುಟ್ಟಿದರೆ ಜಿಬಜಿಬ ಅನ್ನುತ್ತಿದ್ದ, ಥೇಟ್ ಗೊಂಬೆಯಂತೆಯೇ ಇದ್ದ ಆ ಮಗುವಿಗೆ ಸ್ನಾನ ಮಾಡಿಸುವುದು, ಕೈ-ಕಾಲು ಭುಜವನ್ನು ಮಸಾಜ್ ಮಾಡುವುದು, ಎಣ್ಣೆ ಹಾಕುವುದು, ಹಾಲು ಕುಡಿಸುವುದು, ಲಾಲಿ ಹಾಡಿ ಮಲಗಿಸುವುದು, ಪ್ರತಿಕ್ಷಣವೂ ಮುದ್ದು ಮಾಡುವುದು… ಇದಿಷ್ಟೇ ಅಮ್ಮನ ಕೆಲಸ ಆಗಿಬಿಟ್ಟಿತ್ತು. ಈ ಮೊದಲು ನನಗಾಗಿ ಹಾಡುತ್ತಿದ್ದ ಹಾಡುಗಳನ್ನೆಲ್ಲ ಮರೆತು, ಪಾಪುಗೆಂದೇ ಅಮ್ಮ ಹೊಸ ಹಾಡುಗಳನ್ನು ಕಲಿತಿದ್ದಳು. ಎಷ್ಟೋ ಬಾರಿ, ಪುಟ್ಟ ಮಗುವಿನ ಆರೈಕೆಯ ನೆಪದಲ್ಲಿ ಅಪ್ಪ-ಅಮ್ಮ ಇಬ್ಬರೂ ನನ್ನನ್ನು ನೆಗ್ಲೆಕ್ಟ್ ಮಾಡುತ್ತಿದ್ದಾರೆ ಅನಿಸುತ್ತಿತ್ತು.
ಕೆಲವೊಮ್ಮೆ, ಅಮ್ಮನ ಮೇಲೆ – ಆ ಮಗುವಿನ ಮೇಲೆ ವಿಪರೀತ ಸಿಟ್ಟು ಬರುತ್ತಿತ್ತು. ಒಮ್ಮೆಯಂತೂ, ಜೋಗುಳ ಹಾಡುತ್ತಿದ್ದ ಅಮ್ಮನ ಬಳಿಗೆ ಹೋಗಿ- “ಈ ಪಾಪು ಬೇಡ. ಯಾರಿಗಾದ್ರೂ ಕೊಟ್ಟುಬಿಡು. ಇದು ಬಂದ್ಮೇಲೆ ನೀನು ನನ್ನ ಜೊತೆ ಸರಿಯಾಗಿ ಮಾತೇ ಆಡ್ತಿಲ್ಲ. ಐ ಹೇಟ್ ಯೂ’ ಅಂದುಬಿಟ್ಟಿದ್ದೆ. ನನ್ನ ಒರಟು ಮಾತು ಕೇಳಿ, ಅಮ್ಮನಷ್ಟೇ ಅಲ್ಲ; ಅಪ್ಪ ಕೂಡ ಗಾಬರಿಯಾದಂತೆ ಕಂಡುಬಂದರು.
ಅಂದಿನಿಂದ ಆ ಪಾಪುವಿನ ಮೇಲೆ ಸಿಡುಕುವುದು, ಅಪ್ಪ-ಅಮ್ಮನಿಗೆ ಕಾಣಿಸದಂತೆ ಮೊಟಕುವುದು, ಅದರ ಗೊಂಬೆಗಳನ್ನು ಕಿತ್ತು ಎಸೆಯುವುದೇ ನನ್ನ ಕೆಲಸ ಆಯಿತು. ಈ ವೇಳೆಗೆ ಪಾಪುಗೆ ಎಂಟು ತಿಂಗಳಾಗಿತ್ತು. ಅದು ತೆವಳುತ್ತ, ಅಂಬೆಗಾಲಿಡುತ್ತ, ಉರುಳಾಡುತ್ತ ಬೆಳೆಯುತ್ತಿತ್ತು. ಅಪ್ಪ-ಅಮ್ಮನ ಪ್ರೀತಿ ಕಡಿಮೆ ಸಿಗಲು ಈ ಮಗುವೇ ಕಾರಣ ಎಂದು ಭಾವಿಸಿ, ಅದರಿಂದ ನಾನು ಅಂತರ ಕಾಯ್ದುಕೊಂಡಿದ್ದೆ. “ಈ ಪಾಪು ದೇವರು ಕೊಟ್ಟಿರುವ ಗಿಫ್ಟ್, ಇದು ನಿನ್ನ ತಮ್ಮ, ನಿನಗೆ ಸಿಕ್ಕಿರುವ ಮಾತಾಡುವ ಗೊಂಬೆ’ ಎಂದೆಲ್ಲಾ ಅಪ್ಪ ಹೇಳಿದರೂ, ಪಾಪುವನ್ನು ನಾನು ಆದಷ್ಟೂ ದೂರವೇ ಇಟ್ಟಿದ್ದೆ.
ಅವತ್ತೂಂದು ಸಂಜೆ, ಅಪ್ಪ ಬೇಗನೆ ಬಂದರು. ಆ ವೇಳೆಗೆ ಅಮ್ಮನೂ ರೆಡಿಯಾಗಿದ್ದಳು. ನನ್ನನ್ನು ಹತ್ತಿರ ಕರೆದ ಅಪ್ಪ- “ಅರ್ಜೆಂಟಾಗಿ ಸಿಟಿಗೆ ಹೋಗಬೇಕಾಗಿದೆ. ನಾವು ವಾಪಸ್ ಬರುವತನಕ ಮಗೂನ ಹುಷಾರಾಗಿ ನೋಡಿಕೋ…’ ಇಷ್ಟು ಹೇಳಿ ಅವರಿಬ್ಬರೂ ಹೋಗಿಯೇಬಿಟ್ಟರು. ಹೋಗುವ ಮುನ್ನ- ಆಸ್ಪತ್ರೇಲಿ, ಪಾಪೂನ ಹುಷಾರಾಗಿ ನೋಡ್ಕೊàತೇನೆ ಅಂತ ಪ್ರಾಮಿಸ್ ಮಾಡಿದ್ದೆ ಅಲ್ವಾ? ಎಂದು ನೆನಪು ಮಾಡಿಯೇ ಹೋದರು.
ಮನೆಯೊಳಗೆ, ನಾನು-ಪಾಪು ಇಬ್ಬರೇ. ಅಪ್ಪ-ಅಮ್ಮನ ಪ್ರೀತಿಯನ್ನು ನನ್ನಿಂದ ಕಿತ್ಕೊಂಡ ಎಂಬ ಅಸಹನೆ ಇತ್ತಲ್ಲ; ಅದೇ ಕಾರಣದಿಂದ, ಪಾಪುವನ್ನು ತಿರುಗಿ ಕೂಡ ನೋಡದೆ, ಅವನ ಸುತ್ತ ಒಂದಷ್ಟು ಆಟದ ಗೊಂಬೆಗಳನ್ನು ಎಸೆದು, ಏನಾದ್ರೂ ಮಾಡ್ಕೊà ಅಂದು, ಒಂದು ಮೂಲೇಲಿ ಕುಳಿತು ಕಾಮಿಕ್ಸ್ ಓದತೊಡಗಿದೆ. ಎರಡೇ ನಿಮಿಷದಲ್ಲಿ ಅಂಬೆಗಾಲಿಡುತ್ತಾ ಪಾಪು ಅಲ್ಲಿಗೆ ಬಂದ. ದುರುಗುಟ್ಟಿಕೊಂಡು ನೋಡಿದೆ. “ನಂಗಿಷ್ಟ ಇಲ್ಲ ನೀನು. ಹೋಗೋ ಆ ಕಡೆ. ಬೇಕಿಲ್ಲ ನೀನು’ ಎಂದು ಗದರಿಸಿದೆ. ಅವನು, ಬೊಚ್ಚು ಬಾಯಲ್ಲಿ ನಗುತ್ತ ಎರಡೂ ಕೈ ಚಾಚಿದ. ಎತ್ತಿಕೋ ಎಂಬಂತೆ ಮುಖ ಮಾಡಿದ. ಒಂದೇಟು ಹಾಕಿ, ಬೇಡ ಹೋಗ್ ಎಂದು ಅಬ್ಬರಿಸಿ ಇನ್ನೊಂದು ಮೂಲೆಗೆ ಹೋದೆ. ಎರಡೇ ನಿಮಿಷ, ಪಾಪು ಅಲ್ಲಿಗೂ ಬಂದ. ಮತ್ತೆ ಕೈ ಚಾಚಿದ. ಈ ಬಾರಿ ಸ್ವಲ್ಪ ಜೋರಾಗಿಯೇ ಹೊಡೆದು, ಇನ್ನೊಂದು ಮೂಲೆಗೆ ಹೋಗಿಬಿಟ್ಟೆ. ಒಂದು ನಿಮಿಷ ಹೋ… ಎಂದು ಅತ್ತವನು, ಮತ್ತೆ ಅಂಬೆಗಾಲಿಡುತ್ತ, ಎರಡು ಬಾರಿ ಜೋಲಿ ತಪ್ಪಿ ಬಿದ್ದರೂ ಮತ್ತೆ ನನ್ನೆಡೆಗೇ ಬಂದ. ಅವನನ್ನು ನೋಡಲೇಬಾರದೆಂದು ಪುಸ್ತಕ ಹಿಡಿದು ಕುಳಿತಿದ್ದೆ. ಅವನು ಒಂದು ಕೈಯಲ್ಲಿ ಮೆಲ್ಲಗೆ ನನ್ನನ್ನು ಹಿಡಿದುಕೊಂಡು, ಪುಸ್ತಕವನ್ನು ಕಿತ್ತಿಟ್ಟ. ನೋಡಿದರೆ- ಮಗು ಅಳುಮುಖದಲ್ಲಿ ನೋಡುತ್ತಿದ್ದ. ಎತ್ತಿಕೋ ಎಂಬಂತೆ ಸಂಜ್ಞೆ ಮಾಡುತ್ತಿದ್ದ. ಈ ಬಾರಿ ಅದೇಕೋ ಕಾಣೆ ಪಾಪ ಅನ್ನಿಸಿಬಿಡು¤. ಅದೇನೇ ಮಾಡಿದರೂ ಅವನನ್ನು ಆಚೆ ನೂಕಲು ಮನಸ್ಸೇ ಬರಲಿಲ್ಲ. ನನಗೇ ಗೊತ್ತಿಲ್ಲದಂತೆ “ಚಿನ್ನು’ ಎಂದು ಉದ^ರಿಸಿ, ಆ ಮಗುವನ್ನು ಬಾಚಿ ತಬ್ಬಿಕೊಂಡಿದ್ದೆ. ಇಂಥದೊಂದು ಕ್ಷಣಕ್ಕೇ ಕಾದಿದ್ದವನಂತೆ, ಪಾಪು ಖೀಲ್ಲನೆ ನಗುತ್ತ, ಗಟ್ಟಿಯಾಗಿ ನನ್ನ ಕೈ ಹಿಡಿದುಕೊಂಡ. ಅವನ ಗೊಂಬೆಗಳನ್ನೆಲ್ಲ ಒಂದೆಡೆ ರಾಶಿ ಹಾಕಿ, ಅವನೊಂದಿಗೆ ಆಡಲು ಕುಳಿತೆ. ನಂತರ, ನಮ್ಮದೇ ಭಾಷೆಯಲ್ಲಿ ಮಾತಾಡಿಕೊಂಡೆವು. ನಮಗಿಷ್ಟವಾದಂತೆ ಆಟವಾಡಿದೆವು. ಪಾಪು, ನಾನು ಹೇಳಿದಂತೆಲ್ಲಾ ಕೇಳುತ್ತ, ಮಾ… ಮಾ… ಅನ್ನುತ್ತ ಹಾಲ್‌ನ ಉದ್ದಕ್ಕೂ ಸರಿದಾಡಿದ.
ಅವನು ಸೂಸು ಮಾಡಿಕೊಂಡಿರುವುದು ಆಗಲೇ ಗೊತ್ತಾಯಿತು. ತಕ್ಷಣ ಅಮ್ಮನ ರೂಂಗೆ ಹೋಗಿ, ಹೊಸ ಬಟ್ಟೆ ತಂದು, ಹಳೆಯದನ್ನು ತೆಗೆದು, ನನಗೆ ತೋಚಿದಂತೆ ಬಟ್ಟೆ ತೊಡಿಸಿದೆ. ಅಮ್ಮ ಕೊಟ್ಟು ಹೋಗಿದ್ದ ಹಾಲು ಕುಡಿಸಿದೆ. ಅಮ್ಮ, ಮಗುವನ್ನು ಟ್ರೀಟ್ ಮಾಡುತ್ತಿದ್ದಳಲ್ಲ; ಅದನ್ನೇ ನೆನಪಿಸಿಕೊಂಡು ನಾನೂ ಕೆಲಸ ಮಾಡುತ್ತಿದ್ದೆ.
ಹೀಗೆ ಹಾಲು ಕುಡಿಸಿದ ಮೇಲೆ, ಹಾಸಿಗೆಯ ಮೇಲೆ, ತೊಟ್ಟಿಲಲ್ಲಿ ಅಥವಾ ಚಾಪೆಯ ಮೇಲೆ ಮಲಗಿಸಿ ಹಾಡು ಹೇಳುತ್ತಾ ಚುಕ್ಕು ತಟ್ಟುತ್ತಿದ್ದಳು ಅಮ್ಮ. ನಾನೂ ಅದೇ ಥರ-ಪಾಪುವನ್ನು ಹುಷಾರಾಗಿ ಮಲಗಿಸಿ, ಸುತ್ತಲೂ ಗೊಂಬೆಗಳನ್ನಿಟ್ಟು, ಅವನ ಮಗ್ಗಲಲ್ಲೇ ಕುಳಿತು ಚುಕ್ಕು ತಟ್ಟುವ ವೇಳೆಗೆ ಅಮ್ಮ ಹೇಳುತ್ತಿದ್ದ ಹಾಡು ನೆನಪಾಗಿಬಿಟ್ಟಿತು. ಅಷ್ಟೆ: ಮೈಮರೆತು ಹಾಡತೊಡಗಿದೆ. ಪಾಪು, ನನ್ನ ಕೈ ಬೆರಳನ್ನು ಭದ್ರವಾಗಿ ಹಿಡಿದುಕೊಂಡೇ ನಿದ್ರೆಗೆ ಜಾರಿದ್ದ. ಥೇಟ್ ಅಮ್ಮನಂತೆಯೇ ನನ್ ರಾಜ, ನನ್ ಚಿನ್ನು ಎಂದು ಕರೆದು ಮಗುವಿನ ಹಣೆಗೆ ಮುತ್ತಿಡುತ್ತಿದ್ದಂತೆಯೇ ಬಾಗಿಲ ಬಳಿ ಸದ್ದಾಯಿತು.
ಅಪ್ಪ-ಅಮ್ಮ ಇಬ್ಬರೂ ಭಾವಪರವಶರಾಗಿ, ಕಣ್ತುಂಬಿಕೊಂಡು ನಿಂತಿದ್ದರು! (ಪಾಪುವನ್ನು ನಾನು ನೋಡಿಕೊಳ್ತೀನೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಅವರು ಹೊರಗೆ ಹೋಗುವುದಾಗಿ ಸುಳ್ಳು ಹೇಳಿದ್ದರು. ಬಾಗಿಲ ಮರೆಯಲ್ಲಿ ನಿಂತುಕೊಂಡ ಎಲ್ಲವನ್ನೂ ನೋಡಿದ್ದರು ಎಂದು ಅದೆಷ್ಟೋ ದಿನಗಳ ನಂತರ ಗೊತ್ತಾಯಿತು!)
ಆಧಾರ: ದಿವ್ಯಾ ದತ್ತ ಅವರು ಬರೆದ “ಮಿ ಆ್ಯಂಡ್ ಮಾ’ ಪುಸ್ತಕ
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.