“ಕೇಕ್’ ಇಟ್ ಈಸಿ
Team Udayavani, Dec 20, 2017, 4:19 PM IST
ಕ್ರಿಸ್ಮಸ್ ಅನ್ನು ಅನೇಕರು ನೆನಪಿಸಿಕೊಳ್ಳುವುದೇ ಕೇಕ್‌ನ ಕಾರಣದಿಂದ. ವರ್ಷದಂಚಿನಲ್ಲಿ ಬಾಯಿ ಸಿಹಿಮಾಡಿಕೊಳ್ಳುತ್ತಾ, ನವ ವಸಂತವನ್ನು ಬರಮಾಡಿಕೊಳ್ಳುವ ಆ ಸಡಗರಕ್ಕೆ ಮತ್ತೆ ಸಾಕ್ಷಿಯಾಗುತ್ತಿದ್ದೇವೆ. ಬೇಕರಿಯಲ್ಲಿ ಅಲಂಕಾರ ಮಾಡಿಕೊಂಡು, ಎಲ್ಲರನ್ನೂ ತನ್ನತ್ತ ಸೆಳೆಯುವ ಕೇಕ್‌ಗಳನ್ನು ಮನೆಯಲ್ಲೇ ತಯಾರಿಸುವ ಆಸೆ ಚಿಮ್ಮಿದರೆ, ಅದನ್ನು ಈಡೇರಿಸಿಕೊಳ್ಳಿ. ಕ್ರಿಸ್ಮಸ್ ವೇಳೆ ಮಾಡಬಹುದಾದ ಅತಿ ಸರಳ ಕೇಕ್‌ಗಳನ್ನು ಇಲ್ಲಿ ನೀಡಿದ್ದೇವೆ…
ಕ್ರಿಸ್ಮಸ್ ಸ್ಪೆಷಲ್ ಕೇಕ್
1.ಸ್ಪಾಂಜ್ ಕೇಕ್
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು-200ಗ್ರಾಂ, ಸಕ್ಕರೆ ಪುಡಿ-200ಗ್ರಾಂ, ವನಸ್ಪತಿ-200ಗ್ರಾಂ, ಮೊಟ್ಟೆ-4, ಬೇಕಿಂಗ್ ಪೌಡರ್-1/4 ಚಮಚ, ವೆನಿಲ್ಲಾ ಎಸೆನ್ಸ್ 4-5ಹನಿ, ಹಾಲು 7-8 ಹನಿ, ಉಪ್ಪು-ಚಿಟಿಕೆ.
ಐಸಿಂಗ್‌ಗೆ ಸಾಮಗ್ರಿ: ಬೆಣ್ಣೆ-1/2 ಕಪ್, ಸಕ್ಕರೆ-1/2 ಕಪ್, ವೆನಿಲ್ಲಾ ಎಸೆನ್ಸ್ 2-3 ಹನಿ,
ಮಾಡುವ ವಿಧಾನ: ಕೇಕ್ ಪಾತ್ರೆಯೊಳಗೆ ಸುತ್ತಲೂ ಬೆಣ್ಣೆ ಇಲ್ಲವೇ ತುಪ್ಪ ಸವರಿ, ಸ್ವಲ್ಪ ಮೈದಾ ಚಿಮುಕಿಸಿ ಓರೆಯಾಗಿಸಿ, ಹೆಚ್ಚಿನ ಮೈದಾ ಹಿಟ್ಟನ್ನು ತೆಗೆದು ಬಿಟ್ಟರೆ, ಕೇಕ್ ಪಾತ್ರೆ ಸಿದ್ಧ. ಈಗ ಐಸಿಂಗ್ ಸಾಮಗ್ರಿಗಳನ್ನು ಸೇರಿಸಿ ಮಿಶ್ರಣ ಮಾಡಿ. ವನಸ್ಪತಿ, ವೆನಿಲ್ಲಾ ಎಸೆನ್ಸ್ ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಕಲೆಸಿ. ಮೈದಾ ಹಿಟ್ಟು, ಉಪ್ಪು, ಬೇಕಿಂಗ್ ಪೌಡರ್ ಸೇರಿಸಿ ಎರಡು ಮೂರು ಬಾರಿ ಜರಡಿ ಹಿಡಿಯಿರಿ.
ಒಡೆದ ಮೊಟ್ಟೆಗಳನ್ನು ವನಸ್ಪತಿ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಕಲಸಿ. ಈ ಮಿಶ್ರಣಕ್ಕೆ, ಸ್ವಲ್ಪ ಸ್ವಲ್ಪವಾಗಿ ಮೈದಾ ಮಿಶ್ರಣವನ್ನು ಉದುರಿಸುತ್ತಾ ಚೆನ್ನಾಗಿ ಕಲಕಿ, ಹಾಲು ಸೇರಿಸಿ ಈ ಮಿಶ್ರಣವನ್ನೂ ಕೇಕ್ ಪಾತ್ರೆಗೆ ವರ್ಗಾಯಿಸಿ. ಓವನ್‌ನನ್ನು 180 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಬಿಸಿ ಮಾಡಿ, ಕೇಕ್ ಪಾತ್ರೆ ಇರಿಸಿ, ಸುಮಾರು 30 ನಿಮಿಷ ಬೇಕ್ ಮಾಡಿ. ಟೂತ್ ಪಿಕ್ ಇಲ್ಲವೇ ಚಾಕುವಿನಿಂದ ಚುಚ್ಚಿ ನೋಡಿದರೆ, ಚಾಕುವಿಗೆ ಕೇಕ್ ಅಂಟದಿದ್ದರೆ, ಕೇಕ್ ಬೆಂದಿದೆ ಎಂದರ್ಥ. ತಣ್ಣಗಾದ ಮೇಲೆ, ಐಸಿಂಗ್ ಮಾಡಿ ಅಲಂಕರಿಸಿ, ಬೇಕಾದ ಗಾತ್ರದಲ್ಲಿ ಕತ್ತರಿಸಿದರೆ, ಸ್ಪಾಂಜ್ ಕೇಕ್ ರೆಡಿ.
2.ರವಾ ಕೇಕ್
ಬೇಕಾಗುವ ಸಾಮಗ್ರಿ: ಬಾಂಬೆ ರವೆ- 3/4 ಕಪ್, ಮೈದಾ-1/4 ಕಪ್, ಹಾಲು-1/2 ಕಪ್, ಮೊಸರು-1/2 ಕಪ್, ಸಕ್ಕರೆ-1/2 ಕಪ್, ಏಲಕ್ಕಿ ಪುಡಿ-1/2 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ 7-8, ಅಡಿಗೆ ಸೋಡಾ-1/4 ಚಮಚ, ಬೇಕಿಂಗ್ ಸೋಡಾ-1/2 ಚಮಚ, ತುಪ್ಪ-1/4 ಕಪ್, ಉಪ್ಪು-ಚಿಟಿಕೆ, ಕೇಸರಿ ಬಣ್ಣ-ಸ್ವಲ್ಪ
ಮಾಡುವ ವಿಧಾನ: ಕೇಸರಿ ಬಣ್ಣವನ್ನು ಹಾಲಿನಲ್ಲಿ ಕಲಸಿಡಿ. ಮೊಸರಿಗೆ, ಸಕ್ಕರೆ ಹಾಕಿ ಚೆನ್ನಾಗಿ ಕಲಸಿ, ಹಾಲು, ರವೆ, ಮೈದಾ, ಏಲಕ್ಕಿ ಪುಡಿ, ಉಪ್ಪು, ತುಪ್ಪ, ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ನೆನೆಸಿ ಇಡಿ. ನಂತರ, ಅಡುಗೆ ಸೋಡಾ, ಬೇಕಿಂಗ್ ಸೋಡಾ, ಹುರಿದ ದ್ರಾಕ್ಷಿಗಳನ್ನು ಸೇರಿಸಿ ಕಲಸಿ. ತುಪ್ಪ ಸವರಿದ ಕೇಕ್ ಪಾತ್ರೆಗೆ ಈ ಮಿಶ್ರಣವನ್ನು ವರ್ಗಾಯಿಸಿ, ಕೇಕ್ ಪಾತ್ರೆಯನ್ನು ಓವನ್‌ನಲ್ಲಿರಿಸಿ, 180 ಡಿಗ್ರಿ ಉಷ್ಣತೆಯಲ್ಲಿ, ಸುಮಾರು 35ನಿಮಿಷ ಬೇಯಿಸಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಕತ್ತರಿಸಿದರೆ, ರುಚಿಯಾದ ರವಾ ಕೇಕ್ ಸವಿಯಲು ಸಿಧœ.
3. ಕ್ಯಾರೆಟ್ ಕೇಕ್
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು-1 ಕಪ್, ಕ್ಯಾರೆಟ್ ತುರಿ-1 ಕಪ್, ಸಕ್ಕರೆ ಪುಡಿ-1 ಕಪ್, ಬೆಣ್ಣೆ-1 ಕಪ್, ಟೂಟಿ ಫೂÅಟಿ-1/4 ಕಪ್, ದಾಲ್ಚಿನಿ ಪುಡಿ-1/4 ಚಮಚ, ಏಲಕ್ಕಿ ಪುಡಿ-1/2 ಚಮಚ, ಬೇಕಿಂಗ್ ಪೌಡರ್-1 ಚಮಚ, ಅಡುಗೆ ಸೋಡಾ-1/2 ಚಮಚ, ವೆನಿಲ್ಲಾ ಎಸೆನ್ಸ್-1/2 ಚಮಚ
ಮಾಡುವ ವಿಧಾನ: ಮೈದಾ ಹಿಟ್ಟು, ಅಡುಗೆ ಸೋಡಾ ಹಾಗೂ ಬೇಕಿಂಗ್ ಪೌಡರ್‌ಗಳನ್ನು ಸೇರಿಸಿ, ಜರಡಿ ಹಿಡಿದಿಡಿ. ಪಾತ್ರೆಯಲ್ಲಿ, ಬೆಣ್ಣೆ, ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ನಂತರ, ಮೈದಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚೆನ್ನಾಗಿ ತಿರುವಿ, ಇದಕ್ಕೆ ಕ್ಯಾರೆಟ್ ತುರಿ ಸೇರಿಸಿ ಚೆನ್ನಾಗಿ ಕಲೆಸಿ. ಈ ಮಿಶ್ರಣಕ್ಕೆ, ವೆನಿಲ್ಲಾ ಎಸೆನ್ಸ್, ಏಲಕ್ಕಿ ಪುಡಿ, ದಾಲಿcàನಿ ಪುಡಿ, ಟ್ಯೂಟಿ ಫೂÅಟಿಗಳನ್ನು ಹಾಕಿ, ತುಪ್ಪ ಸವರಿದ ಕೇಕ್ ಪಾತ್ರೆಗೆ ವರ್ಗಾಯಿಸಿ. ಓವನ್‌ನಲ್ಲಿರಿಸಿ, 180 ಡಿಗ್ರಿ ಉಷ್ಣತೆಯಲ್ಲಿ ಸುಮಾರು 35ನಿಮಿಷಗಳವರೆಗೆ ಬೇಕ್ ಮಾಡಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಕತ್ತರಿಸಿ.
4. ಬಾಳೆಹಣ್ಣಿನ ಕೇಕ್
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು-2 ಕಪ್, ಕಳಿತ ಬಾಳೆಹಣ್ಣು-3, ಸಕ್ಕರೆ ಪುಡಿ-1 ಕಪ್, ಬೆಣ್ಣೆ-1/2 ಕಪ್, ಮೊಟ್ಟೆ-2, ಅಡಿಗೆ ಸೋಡಾ-1/2ಚಮಚ, ಬೇಕಿಂಗ್ ಪೌಡರ್-3/4ಚಮಚ, ಹಾಲು-2 ಚಮಚ, ಉಪ್ಪು-ಚಿಟಿಕೆ, ನಿಂಬೆರಸ-ಎರಡು ಹನಿ.
ಮಾಡುವ ವಿಧಾನ: ಮೈದಾ ಹಿಟ್ಟು, ಸೋಡಾ, ಬೇಕಿಂಗ್ ಪೌಡರ್‌ಗಳನ್ನು ಎರಡು ಮೂರು ಬಾರಿ ಜರಡಿ ಹಿಡಿಯಿರಿ. ಸಕ್ಕರೆ, ಬೆಣ್ಣೆ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ. ಮೊಟ್ಟೆಯ ಒಳಗಿನ ಸಾರ, ನಿಂಬೆರಸ, ಬಾಳೆಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಮಿಶ್ರಣ ಹಾಗೂ ಮೊಟ್ಟೆಯ ಮಿಶ್ರಣಗಳನ್ನು ಸೇರಿಸಿ, ಅದಕ್ಕೆ ಮೈದಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸುತ್ತಾ, ಹಾಲು ಸೇರಿಸಿ. ಈ ಮಿಶ್ರಣವನ್ನು ತುಪ್ಪ ಸವರಿದ ಕೇಕ್ ಪಾತ್ರೆಗೆ ವರ್ಗಾಯಿಸಿ, ಓವನ್‌ನಲ್ಲಿರಿಸಿ, 180ಡಿಗ್ರಿ ಉಷ್ಣತೆಯಲ್ಲಿ ಸುಮಾರು 35ನಿಮಿಷಗಳವರೆಗೆ ಬೇಯಿಸಿ.
5. ಖರ್ಜೂರದ ಕೇಕ್
ಬೇಕಾಗುವ ಸಾಮಗ್ರಿ: ಬೀಜ ತೆಗೆದ ಖರ್ಜೂರಗಳು-10, ಮೈದಾ ಹಿಟ್ಟು-1 ಕಪ್, ಸಕ್ಕರೆ ಪುಡಿ-1 ಕಪ್, ಬೆಣ್ಣೆ-1/2 ಕಪ್, ಹಾಲು-6 ಚಮಚ, ತುಪ್ಪದಲ್ಲಿ ಹುರಿದ ಒಣ ದ್ರಾಕ್ಷಿ 8-10, ತುಪ್ಪದಲ್ಲಿ ಹುರಿದ ಗೋಡಂಬಿ 8-10, ಉಪ್ಪು-ಚಿಟಿಕೆ, ಬೇಕಿಂಗ್ ಪೌಡರ್-1 ಚಮಚ, ಅಡುಗೆ ಸೋಡಾ-1/2 ಚಮಚ
ಮಾಡುವ ವಿಧಾನ: ಖರ್ಜೂರದ ತುಂಡುಗಳನ್ನು ಹಾಲಿನಲ್ಲಿ 2-3ಗಂಟೆ ನೆನೆಸಿಡಿ. ಮೈದಾ ಹಿಟ್ಟು, ಬೇಕಿಂಗ್ ಪೌಡರ್ ಹಾಗೂ ಅಡುಗೆ ಸೋಡಾಗಳನ್ನು ಸೇರಿಸಿ ಜರಡಿ ಹಿಡಿಯಿರಿ. ಬೆಣ್ಣೆ ಹಾಗೂ ಸಕ್ಕರೆ ಸೇರಿಸಿ ಕಲೆಸಿ, ಅದಕ್ಕೀಗ ಖರ್ಜೂರದ ತುಂಡುಗಳನ್ನು ಹಾಕಿ ಮಗುಚಿ. ನಂತರ, ಈ ಮಿಶ್ರಣಕ್ಕೆ, ಮೈದಾ ಹಿಟ್ಟಿನ ಮಿಶ್ರಣ, ಹಾಲು, ಉಪ್ಪು ಹಾಕಿ ಚೆನ್ನಾಗಿ ಕಲಕಿ, ಕೇಕ್ ಪಾತ್ರೆಗೆ ವರ್ಗಾಯಿಸಿ, ಹುರಿದ ದ್ರಾಕ್ಷಿ, ಗೋಡಂಬಿಗಳನ್ನು ಸಮನಾಗಿ ಹರಡಿ ಓವನ್‌ನಲ್ಲಿರಿಸಿ. ಸುಮಾರು 30ನಿಮಿಷಗಳವರೆಗೆ 160 ಡಿಗ್ರಿ ಉಷ್ಣತೆಯಲ್ಲಿ ಬೇಯಿಸಿದರೆ ಖರ್ಜೂರದ ಕೇಕ್ ಸವಿಯಲು ಸಿದ್ಧ.
ಜಯಶ್ರೀ ಕಾಲ್ಕುಂದ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.