ಶತಕ ವೀರಮಣಿಯರು!
Team Udayavani, Feb 13, 2019, 12:30 AM IST
ಪೊಲೀಸ್ ಮಹಿಳೆಯೂ ಮಹಿಳೆಯೇ. ಸಮಾಜದಲ್ಲಿ ಒಡನಾಡುವಾಗ, ಹೊಸ ಜಾಗಕ್ಕೆ ಹೋಗುವಾಗ ಎಲ್ಲರಿಗೂ ಇರುವ ಭಯ, ಆತಂಕ ಅವಳಲ್ಲೂ ಇರುತ್ತದೆ. ಅದನ್ನು ಮೀರಲು ಪ್ರಯತ್ನಿಸಿದವರಲ್ಲಿ ಕೆ.ಎಸ್.ಆರ್.ಪಿ ಕಾನ್‌ಸ್ಟೆಬಲ್ ಶಾವಂತ್ರಮ್ಮನೂ ಒಬ್ಬರು. ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪ್ರವಾಸ ಮುಂತಾದ ವಿಷಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಸೈಕಲ್ ಜಾಥಾದಲ್ಲಿ ಅವರು ಪಾಲ್ಗೊಂಡಿದ್ದರು. ಅವರಂತೆಯೇ ಕೆಲಸ ಬಿಟ್ಟರೆ ಮನೆ ಇವಿಷ್ಟೇ ಬದುಕು ಎಂಬಂತಿದ್ದ 100 ಮಂದಿ ಮಹಿಳೆಯರು ಸೈಕಲ್ ಜಾಥಾದಲ್ಲಿ ಪಾಲ್ಗೊಂಡು, ಐದು ದಿನಗಳಲ್ಲಿ 540 ಕಿ.ಮೀ ಕ್ರಮಿಸಿದ್ದು ಸಾಧನೆಯೇ ಸರಿ!
ಜೀವನದಲ್ಲಿ ಯಾವ ಸೌಲಭ್ಯ ಸವಲತ್ತುಗಳೂ ಸುಮ್ಮನೆಯೇ ಬರುವುದಿಲ್ಲ. ಸೈಕಲ್ ಹೊಡೆಯಬೇಕಾಗುತ್ತದೆ. ಇನ್ನು ಸಮಾಜದಲ್ಲಿ ಬದಲಾವಣೆ ತರುವುದೆಂದರೆ ಅದಕ್ಕೂ ಮೀರಿದ ಕಷ್ಟದ ಕೆಲಸ. ಆ ಬದಲಾವಣೆಯನ್ನೂ ಅಕ್ಷರಶಃ ಸೈಕಲ್ ಹೊಡೆದೇ ತರಲು ಪ್ರಯತ್ನಿಸಿದ ಮಹಿಳಾಮಣಿಯರಲ್ಲಿ ಶ್ರಾವಂತಮ್ಮನೂ ಒಬ್ಬರು. ಬೆಂಗಳೂರಿನ ಕೋರಮಂಗಲದಲ್ಲಿರುವ ಕೆ.ಎಸ್.ಆರ್.ಪಿ ಪೊಲೀಸ್ ಪಡೆಯ 4ನೇ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆàಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಸಿಂಗಮ್ಮನಹಳ್ಳಿ ಅವರ ಊರು. ಮನೆಯಲ್ಲಿ ತಂದೆ ತಮ್ಮ ಇಬ್ಬರೇ ಇರುವುದು. ಚಿಕ್ಕವಯಸ್ಸಿನಲ್ಲೇ ತಾಯಿ ತೀರಿಕೊಂಡಿದ್ದಾರೆ. ಮನೆಯಲ್ಲಿದ್ದಾಗ ಶಾವಂತ್ರಮ್ಮ, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಗದ್ದೆಯಲ್ಲಿ ಜೋಳ ಕಳೆ ಕೀಳುವುದು, ಕೊಟ್ಟಿಗೆ ಚೊಕ್ಕ ಮಾಡುವುದು ಮುಂತಾದ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಅದೇ, ಬೆಂಗಳೂರಿನಲ್ಲಿದ್ದಾಗ ಅವರೇನಾ ಇವರು ಎಂದನುಮಾನ ಬರುವಂತೆ ಇಸ್ತ್ರಿ ಮಾಡಿದ ಪೊಲೀಸ್ ಸಮವಸ್ತ್ರ ಧರಿಸಿ, ಠಾಕುಠೀಕಾಗಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಮನೆ ಮತ್ತು ಕೆಲಸ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಆಧುನಿಕ ಹೆಣ್ಣಿನ ಪಾತ್ರ ಇದು.
ನಮ್ಮಂತೆಯೇ ಅವರೂ
ಮಹಿಳಾ ಪೊಲೀಸ್ ಎಂದ ಕೂಡಲೆ ನಮ್ಮ ಕಣ್ಣ ಮುಂದೆ ಒರಟು ಸ್ವಭಾವದ, ಗಡಸು ವ್ಯಕ್ತಿತ್ವದ ಚಿತ್ರವೊಂದು ಮೂಡುತ್ತದೆ. ಆದರೆ ಆಂತರ್ಯದಲ್ಲಿ ಆಕೆಯೂ ಒಬ್ಬಳು ಹೆಣ್ಣು ಎಂಬುದು ನಮಗೆ ನೆನಪೇ ಆಗುವುದಿಲ್ಲ. ಎಲ್ಲಾ ಮಹಿಳೆಯರು ಎದುರಿಸುವ ಸವಾಲುಗಳನ್ನು ಆಕೆಯೂ ಎದುರಿಸಲೇಬೇಕು ಎಂಬ ವಾಸ್ತವವನ್ನು ಒಂದು ಕ್ಷಣ ಪಕ್ಕಕ್ಕಿಟ್ಟುಬಿಡುತ್ತೇವೆ. ಶಾವಂತ್ರಮ್ಮನೂ ಅದಕ್ಕೆ ಹೊರತಾಗಿಲ್ಲ. ಕರ್ತವ್ಯ ಮುಗಿಸಿ ಮನೆಗೆ ಹೋದ ನಂತರ ಅವರದೇ ಪ್ರಪಂಚ ತೆರೆದುಕೊಳ್ಳುತ್ತದೆ. ಅವರಿಗೆ ಹಾಡು ಕೇಳುವುದೆಂದರೆ ಇಷ್ಟ. ಬಿಡುವು ಸಿಕ್ಕಾಗ ಧಾರಾವಾಹಿ ನೋಡುತ್ತಾರೆ. ಅದರಲ್ಲೂ ಸೆಂಟಿಮೆಂಟ್ ಧಾರಾವಾಹಿ, ಸಿನಿಮಾಗಳೆಂದರೆ ಅವರಿಗೆ ತುಂಬಾ ಇಷ್ಟ. ಬದುಕಿಗೆ ಸಂದೇಶ ಕೊಡುವಂಥ ಪುಸ್ತಕಗಳನ್ನು ಓದುವುದು ಕೂಡಾ ಅವರ ಮೆಚ್ಚಿನ ಹವ್ಯಾಸ. ಪೊಲೀಸ್ ಆದವರು ಇದನ್ನೆಲ್ಲಾ ಮಾಡುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ ಅವರ ಕೆಲಸದ ದೆಸೆಯಿಂದ ಅವರೂ ನಮ್ಮಂತೆಯೇ ಎಂಬುದು ನಮಗೆ ತೋಚುವುದಿಲ್ಲ.
ದಿನಕ್ಕೆ 100 ಕಿ.ಮೀ.
ಬದುಕು ಆಗಾಗ ಬದಲಾವಣೆಯನ್ನು ಕೇಳುತ್ತಿರುತ್ತದೆ. ನಾವು ಕೂಡಾ ಅಂಥ ಒಂದು ಅವಕಾಶಕ್ಕಾಗಿ ಕಾಯುತ್ತಿರುತ್ತೇವೆ. ಶಾವಂತ್ರಮ್ಮನವರಿಗೂ ಮಹಿಳಾ ಪೊಲೀಸರು 540 ಕಿ.ಮೀ ಸೈಕಲ್ ಜಾಥಾ ಹೋಗುವ ಸುದ್ದಿ ಕೇಳಿದಾಗ ಹಾಗೆಯೇ ಅನ್ನಿಸಿತು. ಕೂಡಲೆ ಒಪ್ಪಿಕೊಂಡುಬಿಟ್ಟರು. ಹಿರಿಯ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ನೀಲಮಣಿ ರಾಜು ಮುಂತಾದವರ ಒತ್ತಾಸೆಯಿಂದ ನಡೆದ ಕಾರ್ಯಕ್ರಮವಾಗಿತ್ತದು. ಸುಮಾರು 100 ಮಂದಿ ಮಹಿಳೆಯರು ಬೆಳಗಾವಿಯಿಂದ ಬೆಂಗಳೂರಿಗೆ, 5 ದಿನಗಳ ಕಾಲ ಸೈಕಲ್ ತುಳಿಯುವುದು ಜಾಥಾದ ಗುರಿ. 100 ಮಹಿಳೆಯರಲ್ಲಿ 60 ಮಂದಿ ಪೊಲೀಸರು. ಇಲ್ಲಿಯ ತನಕ ಕೆಲಸ ಮತ್ತು ಮನೆ ಬಿಟ್ಟು ಹೊರಗಡೆ ಯಾವ ಚಟುವಟಿಕೆಗಳಲ್ಲೂ ಭಾಗಿಯಾಗದ ಶಾವಂತ್ರನಮ್ಮನವರಿಗೆ ಅದೊಂದು ಹೊಸ ಅನುಭವವಾಗಿತ್ತು. ಅವರಷ್ಟೇ ಅಲ್ಲ ಅವರ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯರಿಗೆಲ್ಲಾ ಸವಾಲಾಗಿತ್ತದು.
ಅಭ್ಯಾಸ ಪಂದ್ಯ
ಮನೆಯಲ್ಲಿ ಹೇಳಿದಾಗ ತಂದೆ ಮತ್ತು ತಮ್ಮನಿಗೆ ಅಚ್ಚರಿಯೋ ಅಚ್ಚರಿ! ಈಕೆ ಅಷ್ಟು ದೂರ ಸೈಕಲ್ ತುಳಿಯಬಲ್ಲಳೇ ಎನ್ನುವ ಅನುಮಾನ ಒಂದು ಕಡೆಯಾದರೆ ಸುರಕ್ಷತೆ ಕುರಿತ ಆತಂಕ ಇನ್ನೊಂದೆಡೆ. ಆದರೆ ಅವರು “ಜೋಪಾನ’ ಎಂದು ಹೇಳಿ ಪ್ರೋತ್ಸಾಹಿಸಿದರು. ಅಷ್ಟು ಸಾಕಾಗಿತ್ತು ಸೈಕಲ್ ಏರಿಯೇಬಿಟ್ಟಿದ್ದರು ಶಾವಂತ್ರಮ್ಮ. ಐದು ದಿನಗಳಲ್ಲಿ ಬೆಳಗಾವಿಯಿಂದ ಬೆಂಗಳೂರು ತಲುಪಬೇಕೆಂದರೆ, ಏನಿಲ್ಲವೆಂದರೂ ದಿನಕ್ಕೆ 100ಕಿ.ಮೀ ಸೈಕಲ್ ತುಳಿಯಬೇಕಿತ್ತು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮುನ್ನ ದೈಹಿಕ ತರಬೇತುದಾರರು ವಾರ್ಮ್ಅಪ್ ಎಕ್ಸರ್‌ಸೈಝ್ಗಳನ್ನು ಮಾಡಿಸುತ್ತಾರೆ. ಕ್ರಿಕೆಟ್‌ನಲ್ಲೂ ಆಸಲಿ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯವನ್ನು ನಡೆಸುತ್ತಾರೆ. ಅದೇ ರೀತಿ, ಜಾಥಾ ಹೋಗುವ ಮುನ್ನ ಕಿ.ಮೀ.ಗಟ್ಟಲೆ ಸೈಕಲ್ ತುಳಿಯುವ ಅಭ್ಯಾಸ ಮಾಡಬೇಕಿತ್ತು. ಆ ಹಂತವನ್ನು ದಾಟಿದ ನಂತರ ಜಾಥಾ ಶುರುವಾಯಿತು!
ಹಳ್ಳಿಗಳಲ್ಲಿ ಸ್ವಾಗತ
ಈ ಪಯಣದಲ್ಲಿ ಹಳ್ಳಿಗಳು, ಪಟ್ಟಣಗಳು ಎದುರಾದವು. ಬಹಳಷ್ಟು ಕಡೆ ಊರವರು ತಂಡವನ್ನು ಸ್ವಾಗತಿಸಿ ಸತ್ಕರಿಸಿದರು. ಶಾಲೆ, ಕಾಲೇಜುಗಳು, ದೇವಸ್ಥಾನ, ಸ್ವಸಹಾಯ ಸಂಘಗಳಿಗೆಲ್ಲಾ ಭೇಟಿ ಕೊಡುತ್ತಾ ಸ್ಥಳೀಯರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದು ಜಾಥಾದ ಮುಖ್ಯಾಂಶವಾಗಿತ್ತು. ನೂರು ಮಂದಿ ಮಹಿಳೆಯರು ಸೈಕಲ್ ಯಾತ್ರೆ ಮಾಡುವುದನ್ನು ಕಣ್ತುಂಬಿಕೊಳ್ಳಲೆಂದೇ ಜನರು ನೆರೆದಿರುತ್ತಿದ್ದರು. ಅವರೊಂದಿಗೆ ಸಮಯ ಕಳೆದು ಅವರ ಸತ್ಕಾರ ಸ್ವೀಕರಿಸಿ ಮುಂದುವರಿಯಬೇಕಾಗಿದ್ದಿತು. ಹೋದ ಕಡೆಯೆಲ್ಲಾ ನೀವು ಎಲ್ಲಿಯವರು? ಯಾಕೆ ಸೈಕಲ್ ತುಳಿಯುತ್ತಿದ್ದೀರಿ ಎಂಬ ಪ್ರಶ್ನೆಗಳೇ ಹೆಚ್ಚಾಗಿ ಕೇಳಿಬಂದಿದ್ದು. ಅವರಿಗೆಲ್ಲಾ ಸೈಕಲ್ ಜಾಥಾದ ಉದ್ದೇಶವನ್ನು ತಿಳಿಸಿ ಅವರ ಹುಬ್ಬೇರುವಂತೆ ಮಾಡುತ್ತಿದ್ದೆವು ಎಂದು ನೆನಪಿಸಿಕೊಳ್ಳುತ್ತಾರೆ ಶಾವಂತ್ರಮ್ಮ.
ಗೆಳತಿಯರಾದ ಅಧಿಕಾರಿಗಳು
ಸೈಕಲ್ ಜಾಥಾ ಯಶಸ್ವಿಯಾಗಿ ನೆರವೇರುವುದಕ್ಕೆ ಕೆ.ಎಸ್.ಆರ್.ಪಿ ಪಡೆಯ ಸಹಕಾರ ಮುಖ್ಯ ಪಾತ್ರ ವಹಿಸಿತ್ತು. ಹೋದೆಡೆಯೆಲ್ಲಾ ಆಹಾರ, ವಸತಿ, ಮಾರ್ಗ ಮಧ್ಯ ಚೇತನದಾಯಕ ಪಾನೀಯ ಮತ್ತು ಆಹಾರ, ಆರೋಗ್ಯದ ಸಮಸ್ಯೆ ಎದುರಾದರೆ ನೆರವು ನೀಡುವ ವಾಹನ ಸೇರಿದಂತೆ ಎಲ್ಲಾ ವ್ಯವಸ್ಥೆಯೂ ಅಚ್ಚುಕಟ್ಟಾಗಿ ರೂಪಿಸಲ್ಪಟ್ಟಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳಾ ಅಧಿಕಾರಿಗಳೂ ಜಾಥಾದಲ್ಲಿ ಪಾಲ್ಗೊಂಡಿದ್ದು ಕಾನ್‌ಸ್ಟೆಬಲ್‌ಗಳಲ್ಲಿ ಹುರುಪು ತುಂಬಿತ್ತು. ಹಿರಿಯ ಅಧಿಕಾರಿಗಳಿಗೂ ಕಾನ್‌ಸ್ಟೆàಬಲ್‌ಗಳಿಗೂ ಸಂಪರ್ಕ ಕಡಿಮೆ. ಮೇಲಧಿಕಾರಿಗಳಾದರೂ ಅವರು ಗೆಳತಿಯರಂತೆ ನಡೆದುಕೊಂಡಿದ್ದು ಸೌಹಾರ್ದ ಸಂಬಂಧ ಏರ್ಪಟ್ಟಿತು. ನಾಲ್ವರು ಐಎಎಸ್ ಅಧಿಕಾರಿಗಳು, ಹನ್ನೊಂದು ಮಂದಿ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡು ಜಾಥಾ ಅವಿಸ್ಮರಣೀಯವಾಗುವುದಕ್ಕೆ ಕಾರಣರಾದರು.
ಪೊಲೀಸ್ ಆಗಿದ್ದರೂ ಒಬ್ಬಳೇ ದೂರದೂರಿಗೆ ಟೂರ್ ಎಂದೋ, ಪಿಕ್‌ನಿಕ್ ಎಂದೋ ಹೋಗುವುದಕ್ಕೆ ಆತಂಕ ಆಗುತ್ತೆ. ನನ್ನ ಕಥೆಯೇ ಹೀಗಿರುವಾಗ ಇನ್ನು ಸಾಮಾನ್ಯ ಮಹಿಳೆಯೊಬ್ಬಳು ಭಯ ಪಡುವುದು ಸಹಜ. ಇಂಥ ಅನೇಕ ಕಾರಣಗಳಿಂದಾಗಿ ನಮ್ಮ ಸೈಕಲ್ ಜಾಥಾ ಥರದ ಚಟುವಟಿಕೆಗಳು ತುಂಬಾ ಮುಖ್ಯವಾಗುತ್ತೆ. ಸಮಾಜದಲ್ಲಿ ಬದಲಾವಣೆ ಆಗುತ್ತೋ ಬಿಡುತ್ತೋ ಅದು ಮುಂದಿನ ಮಾತು. ಪ್ರಯತ್ನವಂತೂ ಆಗುತ್ತಿರಬೇಕು.
ಶಾವಂತ್ರಮ್ಮ, ಕಾನ್‌ಸ್ಟೆಬಲ್, ಕೆ.ಎಸ್.ಆರ್.ಪಿ
ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.