ಸಂಸಾರ ಸರಿಗಮ…
ಬದಲಾಗಿದ್ದು ಸಂಗಾತಿಯಲ್ಲ,ಪರಿಸ್ಥಿತಿ...
Team Udayavani, Jan 1, 2020, 5:21 AM IST
ಮದುವೆಯಾದ ಹೊಸದರಲ್ಲಿ ಹೆಂಡತಿ ಹೇಳಿದ್ದನ್ನೆಲ್ಲ ತಲೆ ಮೇಲೆ ಹೊತ್ತು ಮಾಡುತ್ತಿದ್ದ ಪತಿರಾಯ, ದಿನ ಕಳೆದಂತೆ ಬದಲಾಗುತ್ತಾನೆ. ಮಗುವಾದ ಮೇಲೆ, ಹೆಂಡತಿಗೂ ಗಂಡನ ಎಲ್ಲ ಬೇಕು-ಬೇಡಗಳನ್ನು ನೋಡಿಕೊಳ್ಳಲು ಸಮಯ ಸಾಲುವುದಿಲ್ಲ. ಬದಲಾಗಿದ್ದು ಪರಿಸ್ಥಿತಿಯೋ, ಸಂಗಾತಿಯೋ ಅಂತ ಅರ್ಥವಾಗುವಷ್ಟರಲ್ಲಿ ಸಂಸಾರದಲ್ಲಿ ಅಪಸ್ವರ ಎದ್ದಿರುತ್ತದೆ…
ಎರಡು ವರ್ಷಗಳ ಹಿಂದೆ ಮಗಳ ಗೆಳತಿ ಸ್ಮಿತಾ, ಮದುವೆಗೆ ಕರೆಯಲು ಬಂದಿದ್ದಳು. ಜಗದ ಸಿರಿ ಸಂತೋಷವೆಲ್ಲ ತನ್ನ ಬಳಿಯೇ ಇದೆ ಎಂಬಷ್ಟು ಸಂಭ್ರಮದಲ್ಲಿದ್ದಳು. ಅವಳ ಖುಷಿ ನೋಡಿ ನನಗೂ ಸಂತೋಷವಾಯಿತು. “ಹೇಗೆ ಸ್ಮಿತಾ, ನಿನ್ನ ಭಾವಿ ಪತಿರಾಯರು?’ ಕೇಳಿದ್ದೆ ತಡ, ಅವಳ ಹುಡುಗನ ಬಗ್ಗೆ ಸ್ಮಿತಾ ಹೆಮ್ಮೆಯಿಂದ ಎಲ್ಲವನ್ನೂ ಹೇಳಿಕೊಂಡು ಬಿಟ್ಟಳು. “ಅವರು ತುಂಬಾ ಒಳ್ಳೆಯವರು ಆಂಟಿ. ನನ್ನ ಎಲ್ಲಾ ಆಸೆ, ಆಸಕ್ತಿಗಳಿಗೆ ಪ್ರೋತ್ಸಾಹ ಕೊಡ್ತಾರೆ. ಅವರನ್ನು ಮದುವೆ ಆಗೋಕೆ ನಾನು ಪುಣ್ಯ ಮಾಡಿದ್ದೆ’ ಅಂತ ಸಂಭ್ರಮಿಸಿದಳು. “ಒಳ್ಳೆಯದಾಗಲಮ್ಮ, ಸುಖವಾಗಿರು’ ಅಂತ ಸಂತೋಷದಿಂದ ಹರಸಿ ಕಳಿಸಿದ್ದೆ.
ಇತ್ತೀಚೆಗೆ ಅವಳಿಗೆ ಮಗುವಾಯ್ತು. ತಾಯಿ-ಮಗೂನ ನೋಡಿಕೊಂಡು ಬರೋಣ ಅಂತ ಹೋಗಿದ್ದೆ. ಆಕೆ ತಾಯ್ತನದ ಸಂಭ್ರಮದಿಂದ ಕಂಗೊಳಿಸುತ್ತಿದ್ದಳು. ಮಗುನೂ ಮುದ್ದಾಗಿತ್ತು. “ಪುಣ್ಯವಂತೆ ಬಿಡು, ಒಳ್ಳೆಯ ಗಂಡ, ಮುದ್ದಾದ ಮಗು. ಇನ್ನೇನು ಬೇಕು ನಿನಗೆ?’ ಅಂತ ಹೇಳಿದೆ. ಒಂಥರಾ ಮುಖ ಮಾಡಿದ ಸ್ಮಿತಾ- “ಅಯ್ಯೋ ಆಂಟಿ, ನನ್ನ ಪುಣ್ಯ ಏನು ಅಂತ ಹೇಳ್ತೀರೋ! ಮದುವೆಗೆ ಮುಂಚೆ ಅಷ್ಟು ಒಳ್ಳೆಯವರಾಗಿದ್ದರು. ಈಗಂತೂ ನನ್ನ ಕಂಡರೆ ಅವರಿಗೆ ಆಗಲ್ಲ. ಸದಾ ರೇಗ್ತಾ ಇರ್ತಾರೆ. ನಾನು ಏನು ಮಾಡಿದ್ರೂ ತಪ್ಪು. ಮೊದಲಿನ ಥರಾ ಅವರಿಗೆ ನನ್ನ ಮೇಲೆ ಪ್ರೀತಿನೇ ಇಲ್ಲ…’ ಅಂತ ಪತಿಯ ಮೇಲೆ ಸಾವಿರ ದೂರು ಹೇಳಿದಳು.
“ಮದುವೆ ಆದ ಹೊಸದರಲ್ಲಿ ಎಲ್ಲರೂ ಹಾಗೇ! ಸಂಬಂಧ ಹಳೆಯದಾಗುತ್ತಾ ಹೋದ ಹಾಗೆ, ಅದರ ಪ್ರಖರತೆ ಕಡಿಮೆ ಆಗ್ತಾ ಹೋಗುತ್ತದೆ. ನೀನೇ ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗು’ ಅಂತ ಉಪದೇಶ ಮಾಡಿ ಬಂದೆ.
ಅವಳು ಬದಲಾಗಿದ್ದಾಳೆ…
ಮದುವೆಯಾದ ಹೊಸದರಲ್ಲಿ ಹೆಂಡತಿ ಹೇಳಿದ್ದನ್ನೆಲ್ಲ ತಲೆ ಮೇಲೆ ಹೊತ್ತು ಮಾಡುವ ಪತಿರಾಯ, ದಿನ ಕಳೆದಂತೆ ಬದಲಾಗುತ್ತಾನೆ. ಮೊದ ಮೊದಲು ಹೆಂಡತಿ ಮಾಡಿದ್ದೆಲ್ಲವೂ ಚೆನ್ನ, ಹೆಂಡತಿಯೇ ಪ್ರಪಂಚ, ಹೆಂಡತಿಯೇ ಅಪ್ಸರೆ. ಆಕೆಯ ನಗುವೂ ಚೆಂದ, ಮೊಗವೂ ಚಂದ, ಅಂತ ಅವಳ ಹಿಂದೆ ಮುಂದೆ ಸುತ್ತುತ್ತಾ, ಅವಳು ಕೇಳಿದ್ದನ್ನೆಲ್ಲ ಕೊಡಿಸುತ್ತಾ, ಹೇಳಿದಂತೆಲ್ಲ ಕೇಳುತ್ತಿದ್ದ ಗಂಡ, ವರ್ಷ ಕಳೆಯುವಷ್ಟರಲ್ಲಿ ವರಸೆ ಬದಲಿಸುತ್ತಾನೆ. ಅವಳ ಅಲಂಕಾರ ಚೆನ್ನಾಗಿಲ್ಲ, ಅಡುಗೆ ರುಚಿಯಾಗಿಲ್ಲ, ತನ್ನ ಅಪ್ಪ-ಅಮ್ಮನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಮೊದಲೆಲ್ಲ ನಾನು ಏನು ಕೇಳಿದ್ರೂ ಓಡಿಕೊಂಡು ಬಂದು ಮಾಡುತ್ತಿದ್ದಳು. ಈಗ ನಾನು ಸ್ನಾನಕ್ಕೆ ಹೋದ್ರೆ ಟವಲ್ ಕೊಡಲ್ಲ, ಕೇಳಿದ್ರೆ ನೀವೇನು ಸಣ್ಣ ಮಗುವೇ, ನಿಮ್ಮ ಕೆಲಸ ನೀವೇ ಮಾಡ್ಕೊಬಾರದೆ ಅಂತಾಳೆ. ಬಟ್ಟೆ ಒಗೆಯಲ್ಲ, ಇಸ್ತ್ರಿ ಮಾಡಲ್ಲ, ಕೆಲಸದವರನ್ನ ಇಟ್ಕೊಳಿ ಅಂತಾಳೆ, ಅವರ ಅಪ್ಪ ಅಮ್ಮನೂ ಅವಳ ಪರಾನೇ ಮಾತಾಡ್ತಾರೆ. ಮಗು ಆದ ಮೇಲಂತೂ ನಾನು ಲೆಕ್ಕಕ್ಕೇ ಇಲ್ಲ. ಯಾವಾಗಲೂ ಮಗು ಮಗು ಅಂತ ನನ್ನ ಉಪೇಕ್ಷಿಸುವುದು ಅದೆಷ್ಟು ಸರಿ?… ಅನ್ನುವ ಆಕ್ಷೇಪಣೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಮೊದಲಿನಂತಿಲ್ಲ ಅವನು…
ಮೊದಲೆಲ್ಲ ಎಷ್ಟು ಚೆನ್ನಾಗಿ ಅಡುಗೆ ಮಾಡ್ತೀಯಾ ಅಂತಿದ್ದರು. ಈಗ ಅಡುಗೆಯೇ ಚೆನ್ನಾಗಿರಲ್ಲ ಅಂತಾರೆ. ಅದೇನು ಡ್ರೆಸ್ ಮಾಡ್ಕೊತೀಯೋ, ಒಂಚೂರು ಡ್ರೆಸ್ ಸೆನ್ಸೇ ಇಲ್ಲ ಅಂತಾರೆ. ಹೊರಗಡೆ ಹೋಗುವಾಗ ಅಲಂಕಾರ ಮಾಡ್ಕೊಂಡು ಹೋಗಬಹುದು. ಮನೆಯಲ್ಲಿ ಇರುವಾಗಲೂ ಅಲಂಕಾರ ಮಾಡಿಕೊಂಡು ಕುಳಿತುಕೊಳ್ಳೋಕೆ ಆಗುತ್ತಾ? ಮನೆ ಕೆಲಸ ಯಾರು ಮಾಡ್ತಾರೆ? ಸಾಲದ್ದಕ್ಕೆ ಈ ವಾಂತಿ, ವಾಕರಿಕೆ, ತಲೆಸುತ್ತು, ಸುಸ್ತು ಬೇರೆ. ಇದು ಕಡಿಮೆ ಆಯ್ತು ಅಂತ ಅಂದುಕೊಳ್ಳುವಷ್ಟರಲ್ಲಿ ಹೊಟ್ಟೆ ದೊಡ್ಡದಾಗಿ ಓಡಾಡೋಕೆ ಕಷ್ಟ ಆಗುತ್ತದೆ. ಬಸರಿ ಕಷ್ಟ ಈ ಗಂಡಸರಿಗೇನು ಗೊತ್ತು! ಪ್ರಾಣಾನ ಒತ್ತೆ ಇಟ್ಟು ಮಗು ಹೆರಬೇಕು. ಕಷ್ಟ ಎಲ್ಲ ನನಗೆ. ಹೆಸರು ಮಾತ್ರ ಇವರಿಗೆ. ತವರಿಗೆ ಹೋಗಿ ಹೆತ್ತು, ಬಾಣಂತನ ಮುಗಿಸಿ ಮನೆಗೆ ಬಂದ್ರೆ, ಮನೆಗೆಲಸದ ಜೊತೆ ಮಗುನೂ ನೋಡಿಕೊಳ್ಳಬೇಕು. ಮಗು ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾ? ಇವರಿಗೆ ಇವರ ಕೆಲಸ ಮಾಡಿಕೊಳ್ಳೊಕೆ ಆಗಲ್ವಾ? ನಾನೇ ಎಲ್ಲದಕ್ಕೂ ಬರಬೇಕಾ? ನಂಗೇನು ನಾಲ್ಕು ಕೈ, ನಾಲ್ಕು ಕಾಲು ಇದೆಯೇ?… ಅಬ್ಬಬ್ಟಾ, ಅವಳ ದೂರುಗಳೂ ಕಡಿಮೆಯಿಲ್ಲ.
ಬದಲಾಗಿದ್ದು ಯಾರು?
ಗಂಡ-ಹೆಂಡತಿಯರ ವಾದ ಕೇಳಿದರೆ, ಇಬ್ಬರ ಮಾತಿನಲ್ಲೂ ಅರ್ಥವಿದೆ ಅನ್ನಿಸುತ್ತೆ. ಹಾಗಾದ್ರೆ, ಬದಲಾಗಿದ್ದು ಯಾರು? ಮಗುವಾದ ಮೇಲೆ ಗಂಡನಿಗಿಂತ, ಮಗುವಿಗೆ ಆದ್ಯತೆ ಕೊಡುವುದೇ ಸರಿ ಅಂತ ಹೆಣ್ಣು ಭಾವಿಸುತ್ತಾಳೆ. ಮಗುವನ್ನು ನೋಡಿಕೊಳ್ಳುವುದರಲ್ಲಿಯೇ ಅವಳ ಎಲ್ಲಾ ಸಮಯ ಕರಗಿ ಹೋಗಿಬಿಡುತ್ತದೆ. ಆಗ ಗಂಡನಿಗೆ ಅಸಮಾಧಾನವಾಗುತ್ತದೆ. ಇವಳು ನನ್ನನ್ನು ನಿರ್ಲಕ್ಷಿಸುತ್ತಿದ್ದಾಳೆಂಬ ಭಾವ ಅವನಲ್ಲಿ ಮೂಡಿದಾಗ, ಸಂಸಾರದ ಸರಿಗಮ ತಪ್ಪುತ್ತದೆ. ಇಬ್ಬರಲ್ಲಿ ಒಬ್ಬರಾದರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು. ಸೇರಿಗೆ ಸವ್ವಾಸೇರು ಅಂತ ಪೈಪೋಟಿಗೆ ಬಿದ್ದರೋ, ಸಂಸಾರದ ನೆಮ್ಮದಿ ಹದಗೆಡುತ್ತದೆ.
ಆದ್ಯತೆ ಬದಲಾಗುತ್ತದೆ
ಮದುವೆಯಾದ ಹೊಸತರಲ್ಲಿ ಇರುವಂತೆ ಎಂದೆಂದಿಗೂ ಇರಲಾಗುವುದಿಲ್ಲ. ಸಂಬಂಧ ಯಾವುದೇ ಇರಲಿ, ಹೊಸತರಲ್ಲಿ ಎಲ್ಲವೂ ಚೆನ್ನ ಅಂತಲೇ ಅನ್ನಿಸುತ್ತದೆ. ದಿನಗಳೆದಂತೆ, ಪರಿಸ್ಥಿತಿಗಳು ಬದಲಾಗಬಹುದು. ಆದ್ಯತೆಗಳು ಬೇರೆ ಬೇರೆಯಾಗಬಹುದು. ಅದರ ಅರ್ಥ, ಸಂಬಂಧ ಹಳಸಿದೆ ಅಂತಲ್ಲ. ದಿನವೂ, ಚಿನ್ನ, ರನ್ನ ಅಂತ ಮುದ್ದು ಮಾಡುವುದಷ್ಟೇ ಸಂಸಾರವಲ್ಲ. ಪ್ರೀತಿ, ಪ್ರಣಯ, ಸಿಟ್ಟು, ಸಿಡುಕು, ಅಸಹನೆ, ಅಸಮಾಧಾನ… ಇವೆಲ್ಲವೂ ಸಂಸಾರದ ಸರಿಗಮಗಳೇ. ಈ ಪರಿಜ್ಞಾನ ಕಿರಿಯ ಜೋಡಿಗಳಲ್ಲಿ ಮೂಡಬೇಕು. ವರುಷಗಳು ಕಳೆಯುತ್ತಿದ್ದಂತೆ ಮನಸ್ಸು, ವಯಸ್ಸು , ಅನುಭವ, ಬಾಂಧವ್ಯ ಎಲ್ಲವೂ ಮಾಗಿ, ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ. ಹರೆಯದ ದುಡುಕು, ಆವೇಶ, ಕೋಪ, ಸಿಡುಕು ಎಲ್ಲಾ ಕಡಿಮೆಯಾಗಿ, ಇಬ್ಬರಲ್ಲೂ ಪಕ್ವತೆ ಮೂಡಿದರೆ ಸಂಸಾರ ಸುಮಧುರವಾಗುತ್ತದೆ.
-ಎನ್. ಶೈಲಜಾ ಹಾಸನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.