ಬಾಲ್ಯ ಬಂಗಾರ ನೀನು…
Team Udayavani, Jun 13, 2018, 6:00 AM IST
ಮೂಲೆಯಲಿ ನಿಲ್ಲಿಸಿದ್ದ ಅಪ್ಪ ಕೊಡಿಸಿದ್ದ ಸೈಕಲ್ಲು ಧೂಳು ಹಿಡಿದಿತ್ತು. ಮೆಲ್ಲನೆ ಸವರಿದೆ, ನೆನಪುಗಳ ಬುತ್ತಿ ಬಿಚ್ಚತೊಡಗಿತು. ಅಂದು ಹದಿನೈದನೇ ಹುಟ್ಟಿದಹಬ್ಬ. ಶಾಲೆ ಮುಗಿಸಿ ಮನೆಗೆ ಬರುವುದರೊಳಗೆ ವಿಭೂತಿ, ಹೂವು ಮುಡಿದ ಈ ಸೈಕಲ್ ನನಗಾಗಿ ಕಾಯುತ್ತಿತ್ತು. ಅದಕ್ಕೋಸ್ಕರ ಒಂದು ವರ್ಷ ಊರ ಗೌಡರ ಹೊಲವನ್ನು ರಾತ್ರಿ ಪಾಳಿ ಕಾಯಲು ಒಪ್ಪಿಕೊಂಡಿದ್ದ ಎನ್ನುವುದು ತಿಳಿದಿದ್ದು ಅದೆಷ್ಟೋ ದಿನಗಳ ನಂತರ… ಬಾಲ್ಯದ ಇಂಥ ಪುಟಗಳು ಯಾಕೋ ಇಂದು ತೆರೆದುಕೊಂಡವು…
ಕಡುಗತ್ತಲು, ಕಣ್ಣರಳಿಸಿದಷ್ಟೂ ದೂರಕೆ… ಅಲೆದೂ ಅಲೆದು ಕಾಲುಗಳು ಸೋತುಬಿಟ್ಟಿವೆ. “ಅಯ್ಯೋ, ಇದೇನಿದು, ನಾನೆಲ್ಲಿದ್ದೇನೆ?’ ಎಂದುಕೊಳ್ಳುವುದರೊಳಗೆ ದೂರದಲೆಲ್ಲೋ ಬೆಳಕಿನ ಕಿಂಡಿ ಕಾಣಿಸಿತು. ಕತ್ತಲ ತಪ್ಪಿಸಿಕೊಳ್ಳುವ ಕಾತರತೆ ಬಹುಬೇಗ ಕಿಂಡಿಯ ತಲುಪಿಸಿತು. ಆದರೆ, ನನ್ನಂಥವರಿಗೆ ಇಲ್ಲಿ ಪ್ರವೇಶವಿಲ್ಲವಂತೆ. ಕಾಡಿ ಬೇಡಿದ ನಂತರವೇ ತಿಳಿದದ್ದು: ವರ್ತಮಾನದ ಪೊರೆಯ ಕಿತ್ತೂಗೆದು ಬಾಲ್ಯದ ಹುಟ್ಟುಡುಗೆಯಲ್ಲಿ ಬಾಗಿ ನುಸುಳಬೇಕೆಂದು. ಬೆಳಕು ಕೈ ಬೀಸಿ ಕರೆಯುತ್ತಿತ್ತು. ಮನದ ಮಾತಿಗೆ ಓಗೊಟ್ಟೆ. ಭವಿಷ್ಯ, ವರ್ತಮಾನವ ಕಳಚಿ ಒಳನುಸುಳಿದೆ.
ಅದೆಷ್ಟು ರಂಗುರಂಗಿನ ಲೋಕ. ನಡೆದು ಬಂದ ಹಾದಿಯದ್ದೇ ತುಣುಕು ಇದು. ಮನಸ್ಸು ಹಾರಾಡುವ ಹಕ್ಕಿಯಾಗಿದೆ. ಖುಷಿಯಲ್ಲಿ ಕುಣಿದು ಕುಪ್ಪಳಿಸಬೇಕು. ಅದೆಂಥ ಹಗುರ ಭಾವ, ನಿನ್ನೆಗಳ ಭ್ರಮೆಯ ಲೋಕದಿಂದ ವಾಪಸ್ಸು ಬಂದು ಇಪ್ಪೆ ಗಿಡದ ಮಡಿಲಲ್ಲಿ ದಣಿವಾರಿಸಿಕೊಳ್ಳತೊಡಗಿದೆ. ಕಳಚಿದ ಪೊರೆಯ ಲವಲೇಶಗಳು ಮರೆಯಾಗಿ ಭಾವುಕಳಾಗತೊಡಗಿದೆ, ಉಮ್ಮಳಿಸಿ ಬರುತ್ತಿರುವ ಕಣ್ಣಾಲಿಗಳ, ದುಪಟ್ಟಾದಿಂದ ಒತ್ತಿ ಸುತ್ತಲೂ ಕಣ್ಣಾಡಿಸಿದೆ. ಎದುರಲ್ಲಿ, ಬದುಕ ಅರಳಿಸಿದ ಚಂದನೆಯ ಕೈದೋಟ, ಅಪ್ಪನೇ ಮಾಲಿ. ಹರಿದ ಬನಿಯನ್ನು, ಪಟಾಪಟಿ ಚಡ್ಡಿ, ಉಂಗುಷ್ಟ ಕಿತ್ತ ಚಪ್ಪಲಿ. ಅಯ್ಯೋ, ಅಪ್ಪ ಎಷ್ಟೊಂದು ಸೊರಗಿದ್ದಾನಲ್ಲಾ ಎಂದುಕೊಳ್ಳುವುರೊಳಗೆ, “ಬಾ ಮಗಾ, ಎಲ್ಲಿ ಹೋಗಿದ್ದೆ? ಅಮ್ಮ ನಿನ್ನ ಹುಡುಕುತ್ತಾ ಇದ್ದಳು. ಒಳಗೆ ಹೋಗು, ನಿನಗಾಗಿ ರವೆ ಉಂಡೆ ಮಾಡವಳೆ’ ಎಂದು ಪೀತಿಯಿಂದ ಬರಮಾಡಿಕೊಂಡ. ಬೆನ್ನ ನೇವರಿಸಿದ. ಪ್ರಪಂಚವೇ ಎದುರಾದರೂ, ಇವ ನನ್ನ ಬೆನ್ನೆಲುಬು ಎನ್ನುವುದನ್ನು ಮತ್ತೆ ನೆನಪಾಗಿಸಿದ. ನಾಳೆಗಳು ಮುಷ್ಟಿಯಲ್ಲಿ ಬಿಗಿಯಾದ ಅನುಭವ.
ಮೂಲೆಯಲಿ ನಿಲ್ಲಿಸಿದ್ದ ಅಪ್ಪ ಕೊಡಿಸಿದ್ದ ಸೈಕಲ್ಲು ಧೂಳು ಹಿಡಿದಿತ್ತು. ಮೆಲ್ಲನೆ ಸವರಿದೆ, ನೆನಪುಗಳ ಬುತ್ತಿ ಬಿಚ್ಚತೊಡಗಿತು. ಅಂದು ಹದಿನೈದನೇ ಹುಟ್ಟಿದಹಬ್ಬ. ಶಾಲೆ ಮುಗಿಸಿ ಮನೆಗೆ ಬರುವುದರೊಳಗೆ ವಿಭೂತಿ, ಹೂವು ಮುಡಿದ ಈ ಸೈಕಲ್ ನನಗಾಗಿ ಕಾಯುತ್ತಿತ್ತು. ಬೇಕು ಅಂತ ನಾನು ಅಪ್ಪನ ಬಳಿ ಕೇಳಿರಲಿಲ್ಲ. ಮನದೊಳಗೆ ನಾನೂ ಸೈಕಲ್ ಏರಿ ಶಾಲೆಗೆ ಹೋಗಬೇಕೆಂಬ ಆಸೆ ಇದ್ದರೂ, ಅಪ್ಪನ ಪರಿಸ್ಥಿತಿ ಕಣ್ಣ ಮುಂದೆ ಬಂದು ಆಸೆ ಕಮರುತ್ತಿತ್ತು. ಆದರೆ, ಅಪ್ಪ ಅದು ಹೇಗೋ ನನ್ನ ಆಸೆಯನ್ನು ಅರಿತು ಸೈಕಲ್ಲನ್ನು ಉಡುಗೊರೆಯಾಗಿ ನೀಡಿದ್ದ. ಅದಕ್ಕೋಸ್ಕರ ಒಂದು ವರ್ಷ ಊರ ಗೌಡರ ಹೊಲವನ್ನು ರಾತ್ರಿ ಪಾಳಿ ಕಾಯಲು ಒಪ್ಪಿಕೊಂಡಿದ್ದ ಎನ್ನುವುದು ತಿಳಿದಿದ್ದು ಅದೆಷ್ಟೋ ದಿನಗಳ ನಂತರ. ಹೇಳದೆ ಕೇಳದೆ ಕಣ್ಣ ಹನಿ ಮತ್ತೆ ಜಾರಿದವು. ಅಮ್ಮನ ಬಳೆಗಳ ಸದ್ದು ಕೇಳಿ ಜಾಗೃತಳಾದೆ.
“ಬಾ ಕಂದ, ದಣಿವಾಗಿಲ್ಲೇನು? ಎಲ್ಲೆಲ್ಲಿ ಅಂತ ನಿನ್ನ ಹುಡುಕೋದು?’ ಬೆನ್ನ ಸವರುತ್ತಾ ಒಳಗೆ ಕರಕೊಂಡು ಹೋದಳು ಅಮ್ಮ. ತಟ್ಟೆ ತುಂಬಾ ರವೆ ಉಂಡೆ… ಅಬ್ಟಾ, ಏನು ರುಚಿ! ಅದೆಷ್ಟೋ ಯುಗಗಳೇ ಕಳೆದಿರಬೇಕು. ಗಬಗಬ ತಿಂದದ್ದು ನೆತ್ತಿಗೇರಿ ಕೆಮ್ಮು ನಿಲ್ಲದೆ ಕಣ್ಣೀರು ಬಂತು. ಅಮ್ಮ ತನ್ನ ಒಡೆದ ಕೈಗಳಿಂದ ಕಣ್ಣ ಹನಿಗಳನ್ನು ಒರೆಸಿದಳು. ಆ ಸ್ಪರ್ಶ ಸಂಜೀವಿನಿಯಂತೆ ಜೀವಕಳೆ ತುಂಬಿತು. ಅವಳನ್ನೇ ನೋಡುತ್ತಾ ಮೈಮರೆತೆ. ಯಾಕೋ ಕಂದಾ, ನಿಧಾನಕ್ಕೆ ತಿನ್ನು. ಆತುರ ಏಕೆ? ಎಂದು ಮಡಿಲಲ್ಲಿ ಮಲಗಿಸಿಕೊಂಡಳು. ಆಕಾಶವೇ ಅಂಗೈಯಲ್ಲಿ ಇರುವಂತೆನ್ನಿಸಿತು. ಅÇÉೇ ಸಣ್ಣದೊಂದು ನಿ¨ªೆ. ಹೊಸ ಹುರುಪನ್ನು ಹೊತ್ತು ಮುಂದೆ ಸಾಗಿದೆ.
ಕಾಲು ಶಾಲೆಯತ್ತ ಸಾಗಿದವು. ಅದು, ಈಗಲೂ ಜೋಪಡಿಯಂತೆಯೇ ಇದೆ. ಯಾವ ಬದಲಾವಣೆಯೂ ಇಲ್ಲ. ಅದೇ ಮುರಿದ ಹೆಂಚಿನ ಒಂದೇ ಕೋಣೆಯ ಶಾಲೆ. ಕೋಣೆ ತುಂಬಾ ಮಕ್ಕಳ ಕಲರವ. ಊಟ, ಪಾಠ, ಆಟ ಎಲ್ಲವೂ ಅಲ್ಲೇ. ಕೋತಿಗಳಂಥಾ ಮಕ್ಕಳನ್ನು ಪಳಗಿಸಲು ಈರಯ್ಯ ಮೇಷ್ಟ್ರು ಪಡುತ್ತಿದ್ದ ಹರಸಾಹಸ, ಕದ್ದುಮುಚ್ಚಿ ತಿಂದ ಮಾವಿನ ಕಾಯಿ, ಬಿಕ್ಕೆ ಕಾಯಿ, ನೇರಳೆ ಹಣ್ಣು, ಬೇಲದ ಹಣ್ಣು, ಎಲಚಿಕಾಯಿ, ನೆಲ್ಲಿಕಾಯಿ… ಒಂದಾ ಎರಡಾ..? ಕಲ್ಲು, ಕಪ್ಪೆ ಚಿಪ್ಪು, ಎಲೆ, ಕಡ್ಡಿಗಳೇ ಆಟಿಕೆಗಳು. ಇಳೆ, ಮಳೆ, ಕಾಮನ ಬಿಲ್ಲು, ಇಬ್ಬನಿ, ಕಟ್ಟಿ ಸುರಿಯುವ ಮೋಡಗಳೇ ಜೀವನ, ಬದುಕು ಕಟ್ಟಿದ ಸ್ವರಗಳು. ಅಕಾರಣ ಹುಟ್ಟಿದ ಮೊದಲ ಪ್ರೀತಿ. ನಗು, ನೋಟದಲ್ಲೇ ಅವನು ಕಾಡಿದ ರೀತಿ. ಕಟ್ಟಿಕೊಟ್ಟ ಕನಸುಗಳು, ಅಬ್ಟಾ… ಅದೆಷ್ಟು ಚಂದದ ದಿನಗಳು. ಮುಗಿಯಲೇ ಬಾರದು. ನಿತ್ಯ ನೂತನ ಜೀವನ. ಇಳೆ ಸಂಜೆಗತ್ತಲ ತಬ್ಬುತ್ತಿರುವಾಗ ಹೊಟ್ಟೆ ಚುರ್ರ ಎನ್ನತೊಡಗಿತು. ಅಮ್ಮನ ನೆನಪಾಗಿ ಕಾಲುಗಳು ಮತ್ತೆ ಮನೆಯತ್ತ ಸಾಗಿದವು.
ಅಯ್ಯೋ, ಅದೆಷ್ಟು ಹುಡುಕಿದರೂ ಮನೆ ಸಿಗುತ್ತಲೇ ಇಲ್ಲ. ಭಯವಾಗತೊಡಗಿತು. ಅಪ್ಪಾ… ಅಮ್ಮಾ… ಜೋರಾಗಿ ಕೂಗತೊಡಗಿದೆ. ಯಾರೂ ಒಗೊಡುತ್ತಿಲ್ಲ. ನಾನೆಲ್ಲೋ ಕಳೆದುಹೋಗಿದ್ದೇನೆ. ಗಂಟಲು ಗದ್ಗದಿತವಾಗತೊಡಗಿತು. ಎಲ್ಲಿ ಅಂತ ಹುಡುಕಲಿ? ಎದೆಯ ಡವಡವ ನನಗೇ ಕೇಳಿಸುತ್ತಿದೆ. ಕೈಕಾಲು ನಡುಗುತ್ತಿವೆ. ಬಾಯಿ ಒಣಗತೊಡಗಿದೆ.. ಮತ್ತಷ್ಟು ಭಯ ಆವರಿಸಿತು. ಅದೆಂಥದೋ ಕರ್ಕಶ ಶಬ್ದ ಹೆದರಿಕೆಯನ್ನು ಇನ್ನೂ ಹೆಚ್ಚಿಸಿತು. ಎರಡೂ ಕಿವಿಗಳನ್ನು ಮುಚ್ಚಿಕೊಂಡೆ. ಉಹುಂ, ನಿಲ್ಲದು. ಶಬ್ದದ ದಿಕ್ಕಿನೆಡೆಗೆ ಕೈಬೀಸಿದೆ; ಟಳ್- ಟಪ್ ಎಂದಿತು.
ಕಣ್ಣೆಲ್ಲಾ ಮಂಜು ಮಂಜು. ಕಣ್ಣುಗಳನ್ನು ಉಜ್ಜುತ್ತಾ ಬಿಡಿಸಲು ಕಷ್ಟಪಟ್ಟೆ. ಸೂರ್ಯನ ಕಿರಣಗಳು ರೂಮ್ ತುಂಬಿಕೊಂಡಿದ್ದವು. ವಾಹನಗಳ ಸದ್ದು ವಾಸ್ತವಕ್ಕೆ ಕರೆತಂತು. ಅಯ್ಯೋ, ಮೊಬೈಲ್ ಸ್ಕ್ರೀನ್ ಒಡೆದಿದೆ. ಕರ್ಮ ಇದೊಂದು ಬಾಕಿ ಇತ್ತು.
ಉಫ್, ಇಷ್ಟೊತ್ತು ಕಂಡಿದ್ದೆಲ್ಲಾ ಕನಸೇ? ಇಷ್ಟು ಬೇಗ ಮುಗಿದವೇ ಚಂದದ ದಿನಗಳು? ಒಳಗೊಳಗೇ ಹವಣಿಕೆ. ದೂರದಲ್ಲಿ ಮಿನುಗಿ ಮರೆಯಾಗುವ ಚುಕ್ಕಿಯಂತೆ ಸಂಭ್ರಮಿಸುತ್ತಿರುವಾಗಲೇ ಮತ್ತೆ ಕರಾಳ ವರ್ತಮಾನಕ್ಕೆ ಬಂದು ಬಿಟ್ಟೆನೇ? “ಜಗವ ಜಯಿಸಿ ಬಾ ಮಗಳೇ, ಸಾರಥಿ ನಾನಾಗುವೆ’ ಎಂದಿದ್ದ ಅಪ್ಪ- ಅಮ್ಮ, ನಾಲ್ಕಾನೆ ವಯಸ್ಸಾಗಿದೆ ನಿನಗೆ. ಇನ್ಮುಂದೆ ನಿನ್ನ ದಾರಿ ನಿನ್ನದು ಎಂದು ಬದುಕಿನ ಅರ್ಧ ದಾರಿಯಲ್ಲೇ ರಥದಿಂದ ಕೆಳಗಿಳಿದು ದೂರ ಸರಿದಿ¨ªಾರೆ. ಶಾಲೆಯ ಸ್ಥಾನ ತುಂಬಿದ ಆಫೀಸು ನನ್ನಿಂದ ಆಗುವ ಉಪಯೋಗವನ್ನು ಹಿಂಡಿ ಹೀರುತ್ತಿದೆ. ಬದುಕನ್ನು ಸವೆಸಲು ಕಬ್ಬಿನ ಕಾಯಕ ಮುಂದುವರಿದಿದೆ. ಆಗೊಮ್ಮೆ ಈಗೊಮ್ಮೆ ನಾನು ಇನ್ನೂ ಬದುಕಿದ್ದೇನಾ? ಎಂದು ಏಳುವ ಪ್ರಶ್ನೆಗೆ ಉಸಿರಾಟ ಸಾಕ್ಷಿ ಒದಗಿಸುತ್ತದೆ. ಜೀವನ ಈ ಕಾಂಕ್ರೀಟ್ ಕಾಡಿನಲ್ಲಿ ಜನ- ಧನ, ಗದ್ದಲ- ಗೊಂದಲದಲ್ಲಿಯೇ ಮುನ್ನುಗ್ಗುತ್ತಿದೆ. ಆದರೆ, ಒಳಗೊಳಗೆ ನಾನು ಒಬ್ಬಂಟಿ. ಮನದ ಮಾತು ಮೌನದ ಖಜಾನೆಯಲ್ಲಿ ಯಾವಾಗಲೂ ಬಂಧಿ. ಬಂಧಮುಕ್ತಗೊಳಿಸಲು ಆಗೊಮ್ಮೆ ಈಗೊಮ್ಮೆ ಕನಸಿನ ನಾವಿಕ ಬೇಕು! ಭೂತದಂಗಡಿಯೆಡೆಗೆ ಕೈಹಿಡಿದು ಕರೆದೊಯ್ಯಲು…
– ಜಮುನಾ ರಾಣಿ ಎಚ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.