ಮಕ್ಕಳ ಸ್ಕೂಲು ಮನೇಲಲ್ವೇ ? ; ಇದು ಕಲಿಕೆಯ ಸಮಯ
Team Udayavani, Jul 22, 2020, 2:25 PM IST
ಎಲ್ಲೋ ಕೋವಿಡ್ ಶುರುವಾಗಿದೆ ಎಂದು ಹುಟ್ಟಿಕೊಂಡ ಸುದ್ದಿ, ಈಗ ನಮ್ಮ ಬೀದಿಗೇ ಬಂದಾಗಿದೆ. ಯಾವಾಗ ನಮ್ಮ ಮನೆ ಬಾಗಿಲು ತಟ್ಟುತ್ತದೋ ಎನ್ನುವ ಆತಂಕದಲ್ಲೇ ನಾವೆಲ್ಲ ದಿನ ತಳ್ಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ, ನಮಗೆ ನಾವೇ ಮನೆಯೊಳಗೆ ಲಾಕ್ ಮಾಡಿಕೊಳ್ಳದೆ ವಿಧಿ ಇಲ್ಲ. ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ನಮಗೆ, ಈ ದಿಗ್ಬಂಧನ ನಿಜಕ್ಕೂ ಉಸಿರುಗಟ್ಟಿಸುತ್ತಿದೆ. ಆದರೆ, ಪರಿಸ್ಥಿತಿಯ ಅರಿವು ಮತ್ತು ಮನೆಯೊಳಗೇ ಇದ್ದರಷ್ಟೇ ಒಳಿತು ಎಂಬ ತಿಳಿವಳಿಕೆ ನಮಗೆ ಇದೆ. ಆದರೆ ಮಕ್ಕಳು?! ಇದ್ದ ಜಾಗದಲ್ಲಿ ಇರದ ಮಕ್ಕಳನ್ನು ಒಳಗೆ ಕಟ್ಟಿ ಹಾಕುವುದು ಹೇಗೆ?! ಹರಸಾಹಸವೇ ಸೈ. ಆದರೂ ಈ ಸಂದರ್ಭದಲ್ಲಿ ಅವರನ್ನು ಮನೆಯೊಳಗೆ ಇಟ್ಟುಕೊಳ್ಳಲೇಬೇಕಾಗಿದೆ.
ಇತ್ತೀಚಿಗಂತೂ ರಾತ್ರಿ ಕನಸಿನಲ್ಲೂ ಕೋವಿಡೇ ಬರುತ್ತಿದೆ. ಅಕಸ್ಮಾತ್ ಕೋವಿಡ್ ಬಂದುಬಿಟ್ಟರೆ? ನನಗೆ ಬಂದರೆ ಪರವಾಗಿಲ್ಲ, ಆದರೆ ಮಕ್ಕಳು? “”ದೇವರೇ ಎಲ್ಲರನ್ನೂ ಚೆನ್ನಾಗಿಟ್ಟಿರು ತಂದೆ” ಎಂದು ಬೇಡುತ್ತೇನೆ. ಎಚ್ಚರವಾದಾಗ ದಿಗ್ಭ್ರಮೆ! ಒಂದಷ್ಟು ಹೊತ್ತು ಬೇಕಾಗುತ್ತದೆ ವಾಸ್ತವಕ್ಕೆ ಮರಳಲು. ಕಣ್ಣುಗಳು ತುಂಬಿಕೊಳ್ಳುತ್ತವೆ. ಆದರೆ ಇದು ಅಳುತ್ತಾ ಕೂರುವ ಸಮಯವಲ್ಲ. ವೈರಾಣುವಿನ ಮೇಲೆ ಸಮರ ಸಾರಬೇಕಾಗಿರುವ ಸಮಯ. ಹೋರಾಟ ಮಾಡಲೇಬೇಕಿದೆ ನಮ್ಮದೇ ಉಳಿವಿಗಾಗಿ. ವೈದ್ಯರು ಮತ್ತು ಸರ್ಕಾರದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಈ ಸೋಂಕಿನಿಂದ ಪಾರು ಮಾಡಿಕೊಳ್ಳಲು ಮನೆಯನ್ನು, ಅದರ ಜೊತೆಗೆ ನಮ್ಮನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದೆಲ್ಲ ದೊಡ್ಡವರಿಗೆ ಅರ್ಥವಾಗುತ್ತದೆ. ಆದರೆ ಮಕ್ಕಳು? ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಲು ಬೇಸರಿಸುವ ಅವರನ್ನು ಒಳಗೇ ಇಟ್ಟುಕೊಳ್ಳಲು ಒಂದಷ್ಟು ಕ್ರಿಯಾಶೀಲ ಚಟುವಟಿಕೆಗಳನ್ನು ಅವರಿಂದ ಮಾಡಿಸಬಹುದು.
ಸದ್ಯಕ್ಕೆ ಓದುವ ಹೊರೆ ಒಂದಷ್ಟು ತಗ್ಗಿರುವುದರಿಂದ, ಆ ಸಮಯವನ್ನು ಮಕ್ಕಳ ಹವ್ಯಾಸ ಮತ್ತು ಆಸಕ್ತಿಗೆ ಅನುಗುಣವಾಗಿ ಬಳಸುತ್ತಾ ಹೋಗಬಹುದು. ಉದಾಹರಣೆಗೆ- ಮಕ್ಕಳಿಗೆ ಚಿತ್ರಕಲೆ, ಸಂಗೀತ, ನೃತ್ಯ, ಅಭಿನಯ, ಕ್ರಾಫ್ಟ್ ಇಂತಹ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದರೆ, ಪ್ರಸ್ತುತ ಅದನ್ನು ಕಲಿಸುವ ಆನ್‌ಲೈನ್ ಕ್ಲಾಸ್‌ಗಳೂ ಲಭ್ಯ ಇವೆ. ಯೂಟ್ಯೂಬ್‌ನಲ್ಲೂ ಹಲವಾರು ವಿಡಿಯೋಗಳಿವೆ. ಅವನ್ನು ಬಳಸಿಕೊಂಡು ಮಕ್ಕಳಿಗೆ ಕಲಿಯಲು ಹೇಳಬಹುದು. ಇದು ನಿಯಂತ್ರಿತ ಕಲಿಕೆಯಾಗಿರಬೇಕು. ತಂದೆ- ತಾಯಂದಿರ ಸಹಭಾಗಿತ್ವ ಇರಬೇಕು. ಕಾರಣ, ಮಕ್ಕಳು ಮೊಬೈಲ್ /ಕಂಪ್ಯೂಟರ್ ವ್ಯಸನಿಗಳಾಗುವ ಸಂಭವವಿರುತ್ತದೆ.
ಮತ್ತೆ ಉಳಿದ ಸಮಯದಲ್ಲಿ ಅಡುಗೆ ಮಾಡುವುದನ್ನೂ ಕಲಿಸಬಹುದು. ಮೊನ್ನೆ, ಮೂರನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ನೂಡಲ್ಸ್ ಮಾಡುವುದನ್ನು ಕಲಿತ. ಅದರಿಂದ ಅವನಿಗಾದ ಖುಷಿ ಅದೆಷ್ಟೋ. ಹಸಿವಾದಾಗ, ತಾನೇ ಏನನ್ನಾದರೂ ತಯಾರಿಸಿ ತಿನ್ನಬಹುದೆನ್ನುವ ಸಂಭ್ರಮ ಅದು. ಈಗ ಅವನಿಗೆ, ಇನ್ನೂ ಏನನ್ನಾದರೂ ಕಲಿಯಬೇಕೆನ್ನುವ ಆಸೆ ಬಂದಿದೆ. ಆದರೆ ಇಂತಹುದನ್ನು ಮಕ್ಕಳಿಂದ ಮಾಡಿಸುವಾಗ ಪೋಷಕರ ಮೇಲ್ವಿಚಾರಣೆ ಇರಲೇಬೇಕು.
ಮಕ್ಕಳಿಗೆ ಮನೆಗೆಲಸ ಮತ್ತು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದನ್ನು ಈಗಿನಿಂದಲೇ ಕಲಿಸಬಹುದು. ಪ್ರತಿ ಒಳ್ಳೆಯ ಕೆಲಸಕ್ಕೂ ಪ್ರಶಂಸೆ ಮಾಡುತ್ತಾ, ಅದರ ಪ್ರಾಮುಖ್ಯತೆಯನ್ನು ಮಕ್ಕಳು ಅರಿಯುವಂತೆ ಮಾಡಬೇಕು. ಮಕ್ಕಳು ಬೆಳೆದು ನಿಲ್ಲುವ ಹೊತ್ತಿಗೆ ಎಲ್ಲ ರೀತಿಯಿಂದಲೂ ಅವರು ಸ್ವತಂತ್ರರಾಗಿರಬೇಕು. ಆಗ ಮಾತ್ರ ಮುಂದೆ ಓದು, ಕೆಲಸ ಅಂತ ಎಲ್ಲೇ ಹೋಗಲಿ ಸರ್ವೈವ್ ಆಗಿ ಬರುತ್ತಾರೆ.
ಇಂತಹ ಸುದೀರ್ಘ ಮತ್ತು ಅನಿರ್ದಿಷ್ಟ ಕಾಲದ ಬಿಡುವು, ಒಂದೊಳ್ಳೆಯ ಓದಿಗೆ ಹೇಳಿಮಾಡಿಸಿದ ಸಮಯ. ಹಾಗಾಗಿ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಅಭಿರುಚಿಯನ್ನು ಬೆಳೆಸಬಹುದು. ಓದು ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ, ಅವರ ವ್ಯಕ್ತಿತ್ವಕ್ಕೆ ಪ್ರಬುದ್ಧತೆಯನ್ನೂ ತಂದುಕೊಡುತ್ತದೆ. ಹೊಸ ಹೊಸ ಶಬ್ದಗಳನ್ನೂ ಕಲಿಯುತ್ತಾ ಹೋಗು ತ್ತಾರೆ ಮಕ್ಕಳು. ಭಾಷಾ ಕೌಶಲ್ಯ ಹೆಚ್ಚಿ, ಅದು ಅವರ ಓದಿಗೂ ಪೂರಕವಾಗುತ್ತದೆ. ಕನ್ನಡ, ಇಂಗ್ಲಿಷ್, ಹಿಂದಿಯ ಜೊತೆಗೆ ಅವಕಾಶವಿದ್ದರೆ ಇನ್ನೂ ಬೇರೆ ಬೇರೆ ಭಾಷೆಗಳನ್ನು ಕಲಿಯಲು ಉತ್ತೇಜಿಸಬಹುದು. ಸದ್ಯದ ದಿನಗಳಲ್ಲಿ ಹೊರಗೆ ಹೋಗಿ ಆಡುವ ಅವಕಾಶ ಇಲ್ಲದಿರುವ ಕಾರಣ ಚೆಸ್, ಕೇರಂ, ಅಳಗುಳಿ ಮಣೆ, ಹಾವು-ಏಣಿ, ಚೌಕಾಭಾರ ದಂತಹ ಒಳಮನೆ ಆಟಗಳನ್ನು ಕಲಿಯಲು ಮತ್ತು ಆಡಲು ಉತ್ತೇಜಿಸಬಹುದು. ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿಯೇ ಯೋಗ, ಪ್ರಾಣಾಯಾಮ, ಏರೋಬಿಕ್ಸ್, ಪವರ್ ಯೋಗ…ದಂಥ ಚಟುವಟಿಕೆಗಳನ್ನು ರೂಢಿಸಿಕೊಂಡು, ಪ್ರತಿನಿತ್ಯ ನಿರ್ದಿಷ್ಟ ಅವಧಿಯಲ್ಲಿ ಮಾಡುವಂತೆ ಪ್ರೇರೇಪಿಸಬೇಕು. ನಾವೂ ಯೋಗ ಮಾಡುತ್ತಾ ಮಕ್ಕಳನ್ನೂ ಜೊತೆ ಸೇರಿಸಿಕೊಳ್ಳಬಹುದು.
ಮಕ್ಕಳು ಅತ್ಯಂತ ಕ್ರಿಯಾಶೀಲ ಪಾದರಸದಂತೆ. ಅವರ ಕ್ರಿಯಾಶೀಲತೆ, ಶಕ್ತಿ, ಸಾಮರ್ಥ್ಯವನ್ನು ಪೋಲಾಗಲು ಬಿಡಬಾರದು. ಅವರ ಪ್ರತಿಭೆ ಅರಳಲು ಪೂರಕವಾಗುವ ಅವಕಾಶಗಳನ್ನು ಒದಗಿಸಿದಾಗ, ಅದು ಸರಿ ಯಾದ ದಿಕ್ಕಿನಲ್ಲಿ ವಿಕಸನ ಹೊಂದುತ್ತದೆ. ಕೋವಿಡ್ ಕಾರಣಕ್ಕೆ ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ, ಪ್ರತಿ ಪೋಷಕರೂ ಮುತುವರ್ಜಿಯಿಂದ ತಮ್ಮ ಮಕ್ಕಳನ್ನು ನೋಡಿಕೊಳ್ಳಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ.
ಆಶಾ ಜಗದೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.