ಅಡುಗೆ ಮನೆ ಕೆಲಸ ಆತೇನ್ರೀ?
Team Udayavani, Oct 16, 2019, 5:54 AM IST
ಅಡುಗೆಮನೆಯ ಸಿಂಕ್‌ನಲ್ಲಿರೋ ಪಾತ್ರೆಗಳನ್ನು ಒಂದು ಹೊತ್ತು ತೊಳೆಯದಿದ್ದರೂ ಹಿಮಾಲಯ ಪರ್ವತವನ್ನೇ ಮೀರಿಸುವಂತೆ, ನಲ್ಲಿಗೆ ಮುತ್ತಿಡುತ್ತಾ ನಿಂತುಬಿಡುತ್ತವೆ. ಎಷ್ಟು ತೊಳೆದರೂ ಸಾಲದು. ತಿಕ್ಕು, ತೊಳಿ, ತೆಗೆದಿಡು… ಬರೀ ಅದೇ ಕೆಲಸ. ಇನ್ನು ಯಾರಾದ್ರೂ ನೆಂಟರೋ, ಗೆಳೆಯರೋ ಆಗಮಿಸಿದರೆ ಮುಗೀತು ನಮ್ಮ ಕತೆ.
ಅಕ್ಕ-ಪಕ್ಕದ ಮನೆಯ ಹೆಂಗಸರು ಭೇಟಿಯಾದಾಗ ಅಥವಾ ಗೆಳತಿಯರು ಫೋನು ಮಾಡಿಕೊಂಡಾಗ ಪರಸ್ಪರ ಕೇಳುವ ಸಹಜ ಪ್ರಶ್ನೆ ಇದು. ಅಡುಗೆ ಮನೆ ಮತ್ತು ಅಡುಗೆ ಕೆಲಸ ಅಂದ್ರೇನೇ ಹಾಗೆ, ಅಷ್ಟು ಸುಲಭಕ್ಕೆ ಮುಗಿಯುವುದಿಲ್ಲ. ಒಂದು ಕೆಲಸ ಮುಗಿಯಿತು ಅನ್ನುವಾಗ ಮತ್ತೂಂದು ಕೆಲಸ ಕಣ್ಣಿಗೆ ಬೀಳುತ್ತದೆ.
ಮೂರು ಹೊತ್ತು ಬೇಯಿಸಿ ತಿನ್ನಬೇಕೆಂದು ಯಾವ ಪುಣ್ಯಾತ್ಮ ಹೇಳಿದನೋ ಗೊತ್ತಿಲ್ಲ. ಒಬ್ಬೊಬ್ಬರಿಗೆ ಒಂದೊಂದು ತಿಂಡಿ, ಒಂದೊಂದು ಅಡುಗೆ ಮಾಡುವ ಹೊತ್ತಿಗೆ ಸಾಕಾಗಿಬಿಡುತ್ತದೆ. ಫಾರಿನ್‌ನ ಊಟ-ತಿಂಡಿಯ ಪದ್ಧತಿಯೇ ಗೃಹಿಣಿಯರಿಗೆ ಅನುಕೂಲ ಅಂತ ಒಮ್ಮೊಮ್ಮೆ ಅನ್ನಿಸುವುದುಂಟು. ವಿದೇಶದಲ್ಲಿನ ಮಂದಿ, ಒಂದಿಷ್ಟು ಬ್ರೆಡ್ಡು, ಬಟರು, ಜ್ಯಾಮ್ ತಿಂದು ಆರಾಮವಾಗಿ ಹೊರಗೆ ಹೋಗಿಬಿಡುತ್ತಾರೆ. ನಮ್ಮದು ಹಾಗಲ್ಲವಲ್ಲ. ಬೆಳಗ್ಗೆಗೆ ಒಂದು ಬಗೆಯ ತಿಂಡಿ, ಮಧ್ಯಾಹ್ನಕ್ಕೆ ಅನ್ನ-ಸಾಂಬಾರು, ತೊವ್ವೆ, ಪಲ್ಯ, ಮಜ್ಜಿಗೆ, ಮತ್ತೆ ರಾತ್ರಿಗೆ ಅನ್ನು-ಸಾರು, ಚಪಾತಿ…ಹೀಗಿರುವಾಗ ಅಡುಗೆ ಕೆಲಸ ಬೇಗ ಮುಗಿಯೋದಾದ್ರೂ ಹೇಗೆ? ಅಡುಗೆ ಮಾಡಿ ಮುಗಿಯಿತು ಅನ್ನುವಾಗ, ಪಾತ್ರೆಗಳಿಂದ ತುಂಬಿದ ಸಿಂಕ್ ಕೈ ಬೀಸಿ ಕರೆಯುತ್ತದೆ. ಇಡೀ ಮನೆ ಕ್ಲೀನಾಗಿಡುವುದೂ ಒಂದೇ, ಈ ಅಡುಗೆ ಮನೆಯನ್ನು ಕ್ಲೀನ್ ಮಾಡುವುದೂ ಒಂದೇ.
ಜೊತೆಗೆ ಈ ವಾಟ್ಸಪ್ಪು, ಫೇಸ್‌ಬುಕ್ಕು, ನ್ಯೂಸ್‌ಪೇಪರ್, ಟಿ.ವಿ., ಪುಸ್ತಕಗಳತ್ತ ಒಂಚೂರು ಕಣ್ಣು ಹಾಯಿಸಿ ಬರೋಣ ಅಂತ ಕುಳಿತುಕೊಂಡೆವೋ; ಮುಗಿಯಿತು ಕಥೆ. ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಎಲ್ಲ ಕೆಲಸಗಳೂ ಹಿಂದೆ ಬಿದ್ದುಬಿಡುತ್ತವೆ. ಮನೆಯಲ್ಲಿ ಹಿರಿಯರಿದ್ದರೆ- “ಈಗಿನ ಕಾಲದ ಹೆಣ್ಣುಮಕ್ಕಳಿಗೇನು? ಕುಟ್ಟೋದು, ಬೀಸೋದು, ರುಬ್ಬೊàದು, ಕಟ್ಟಿಗೆ ಒಲೆ ಮುಂದೆ ಬೇಯೋದು ಎಂಥದ್ದೂ ಇಲ್ಲ! ಆದರೂ ಬೆಳಗ್ಗೆಯಿಂದ ಸಂಜೆಯವರೆಗೂ ಅಡುಗೆ ಮನೆಯ ಕೆಲಸ ಮುಗಿಸಲಾರದೆ ಒದ್ದಾಡುತ್ತವೆ’ ಎಂಬ ಒಗ್ಗರಣೆ ಮಾತುಗಳು ಧಾರಾಳವಾಗಿ ಸಿಡಿಯುತ್ತವೆ. ಬಹುತೇಕ ಗೃಹಿಣಿಯರ ಜೀವನದ ಬಹುಪಾಲು ಸಮಯ ಅಡುಗೆ ಮನೆಯೊಳಗೇ ಕಳೆದು ಹೋಗುತ್ತದೆ. ಗೃಹಿಣಿಯ ಕಥೆಯೇ ಹೀಗಾದರೆ ಉದ್ಯೋಗಸ್ಥೆಯರ ಪಾಡು ಕೇಳಲೇಬೇಡಿ!
ಅಡುಗೆಮನೆಯ ಸಿಂಕ್‌ನಲ್ಲಿರೋ ಪಾತ್ರೆಗಳನ್ನು ಒಂದು ಹೊತ್ತು ತೊಳೆಯದಿದ್ದರೂ ಹಿಮಾಲಯ ಪರ್ವತವನ್ನೇ ಮೀರಿಸುವಂತೆ, ನಲ್ಲಿಗೆ ಮುತ್ತಿಡುತ್ತಾ ನಿಂತುಬಿಡುತ್ತವೆ. ಎಷ್ಟು ತೊಳೆದರೂ ಸಾಲದು. ತಿಕ್ಕು, ತೊಳಿ, ತೆಗೆದಿಡು… ಬರೀ ಅದೇ ಕೆಲಸ. ಇನ್ನು ಯಾರಾದ್ರೂ ನೆಂಟರೋ, ಗೆಳೆಯರೋ ಆಗಮಿಸಿದರೆ ಮುಗೀತು ನಮ್ಮ ಕತೆ. ಟೀ/ಕಾಫಿ ಮಾಡು, ಬೋಂಡಾ ಮಾಡು, ಸ್ವೀಟ್ ಮಾಡು… ಅಂತ ಮತ್ತೂಂದಿಷ್ಟು ಪಾತ್ರೆಗಳ ಸೇರ್ಪಡೆ. ರೊಟ್ಟಿ, ಚಪಾತಿ ಮಾಡಿದಾಗಲಂತೂ ಇಡೀ ಗ್ಯಾಸ್ ಕಟ್ಟೆ, ಹಿಟ್ಟಿನ ರಾಶಿಯಲ್ಲಿ ಮುಳುಗಿ ಹೋಗಿರುತ್ತದೆ.
ಅಡುಗೆ ಅಂದರೆ ಇಷ್ಟೇ ಕೆಲಸವಲ್ಲ. ದಿನಸಿ ಸಾಮಾನಿನ ಡಬ್ಬಿಗಳತ್ತ ಆಗಾಗ ಕಣ್ಣು ಹಾಯಿಸುತ್ತಲೇ ಇರಬೇಕು. ಸಕ್ಕರೆ, ಉಪ್ಪು, ಸಾಸಿವೆ, ಜೀರಿಗೆ, ಮೆಂತ್ಯೆ, ಕಡಲೆಬೇಳೆ ಡಬ್ಬಿಗಳೆಲ್ಲ ಒಮ್ಮೆ ತಳ ಕಂಡ ಕೂಡಲೇ ತೊಳೆದು, ತುಂಬಿಡಬೇಕು. ಮರೆಯದೆ ರೇಷನ್ ತರಿಸಿ, ಗಿರಣಿಗೆ ಹಿಟ್ಟು ಹಾಕಿಸಿ ತುಂಬಿಡಬೇಕು. ಅಪ್ಪಿತಪ್ಪಿ ಒಂದು ಸಾಮಗ್ರಿ ಖಾಲಿಯಾದರೂ ಬಂದ ಅತಿಥಿಗಳ ಮುಂದೆ ಮರ್ಯಾದೆ ಹೋಗುವ ಪ್ರಸಂಗ ಎದುರಾಗುತ್ತದೆ. (ಹತ್ತಿರದಲ್ಲೇ ಅಂಗಡಿಗಳು ಇರದ ಹಳ್ಳಿ ಮನೆಯ ಹೆಂಗಸರಂತೂ ಆಗಾಗ ಡಬ್ಬಿ ಚೆಕ್‌ಅಪ್ ನಡೆಸಲೇಬೇಕು.) ಫ್ರಿಡ್ಜ್ನಲ್ಲಿ ಹಾಲು, ಮೊಸರು, ತರಕಾರಿ ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು. ಉಳಿದು ಬಳಿದದ್ದನ್ನೆಲ್ಲಾ ಚಿಕ್ಕಪುಟ್ಟ ಬಟ್ಟಲೊಳಗೆ ತುಂಬಿಸಿ, ಫ್ರಿಡ್ಜ್ನೊಳಗೆ ಇಟ್ಟು ಮರೆತುಬಿಡುವುದೇ ಹೆಚ್ಚು. ನಿನ್ನೆ ಉಳಿದಿದ್ದನ್ನು ಇವತ್ತು ತಿಂದು ಮುಗಿಸುವುದನ್ನೂ ನೆನಪಿಡಬೇಕು. ದೋಸೆಗೆ ರುಬ್ಬು, ಕಾಳು ನೆನೆಹಾಕು, ಸೊಪ್ಪು ಬಿಡಿಸು, ತರಕಾರಿ ಹೆಚ್ಚು, ಹಾಲು ಕಾಯಿಸು, ತೊಳೆದ ಪಾತ್ರೆ ಒರೆಸು, ತೆಗೆದಿಡು, ಕಟ್ಟೆ ಒರೆಸು… ಒಂದೇ, ಎರಡೇ. ಇನ್ನು ಮುಸುರೆಯ ಬಕೀಟು, ಕಸದ ಬುಟ್ಟಿ ಆಗಾಗ ಖಾಲಿ ಮಾಡುವುದನ್ನು ಮರೆತರೆ, ಮನೆಮಂದಿಯ ಮೂಗಿಗೇ ಸಂಕಟ!
ಇಷ್ಟೆಲ್ಲಾ ಹೇಳಿದ ಮೇಲೆ, ಅಡುಗೆ ಮನೆಯ ಸ್ಟೋರ್ ರೂಮ್ ಬಗ್ಗೆ ಹೇಳದಿದ್ದರೆ ಹೇಗೆ? ಒಂದು ಸಾಮಾನು ತೆಗೆಯಲು ಹೋದರೆ ನಾಲ್ಕು ಸಾಮಾನು ಕೆಳಗೆ ಬೀಳುವ ಹಾಗೆ, ಒಂದಿಂಚೂ ಜಾಗ ಬಿಡದಂತೆ ಸ್ಟೋರ್ ರೂಮಿನಲ್ಲಿ ಸಾಮಾನುಗಳನ್ನು ತುಂಬಿಡುವ ನನ್ನನ್ನು ನೋಡಿ, ನಿನಗೆಷ್ಟು ದೊಡ್ಡ ಅಡುಗೆಮನೆ ಕಟ್ಟಿಸಿಕೊಟ್ಟರೂ, ಜಾಗ ಇಲ್ಲ ಅಂತ ಒದ್ದಾಡ್ತೀಯ ಅಂತ ಯಜಮಾನರು ನಗುತ್ತಾರೆ.
ಇಡೀ ಕುಟುಂಬಕ್ಕೆ ಹೊತ್ತು ಹೊತ್ತಿಗೆ ಆಹಾರ ಒದಗಿಸುವ ಅಡುಗೆ ಮನೆಯೂ ಇತ್ತೀಚೆಗೆ ಆಧುನಿಕತೆಗೆ ತೆರೆದುಕೊಂಡಿದೆ. ಫ್ರಿಡ್ಜ್, ಗ್ರೈಂಡರ್, ಮಿಕ್ಸರ್, ಓವೆನ್, ಗ್ಯಾಸ್, ಇಂಡಕ್ಷನ್ ಒಲೆ, ಅಕ್ವಾಗಾರ್ಡ್, ಮೇಲೆ ಚಿಮಣಿ ಅಥವಾ ಎಕ್ಸ್‌ಹಾಸ್ಟ್ ಫ್ಯಾನ್, ಸ್ಟೀಲ್, ಪ್ಲಾಸ್ಟಿಕ್, ಅಲ್ಯುಮಿನಿಯಮ್, ಗಾಜಿನ ಡಬ್ಬಿಗಳು, ಪಾತ್ರೆಗಳು, ಅವುಗಳನ್ನು ಒಪ್ಪವಾಗಿ ಜೋಡಿಸಲು ವಾರ್ಡ್‌ರೋಬ್…ಹೀಗೆ, ಇವೆಲ್ಲವೂ ಅನುಕೂಲತೆಗಳಲ್ಲ, ಅಗತ್ಯಗಳೇ ಆಗಿಬಿಟ್ಟಿವೆ. ಕೆಲಸದ ಸಮಯದಲ್ಲಿ ಬೇಸರ ಕಳೆಯಲು, ಕರ್ಣಾನಂದಕ್ಕೆ ರೇಡಿಯೋ, ಎಮ್‌ಪಿ3ಗೆ ಪರ್ಯಾಯವಾಗಿ ಈಗ ಸಕಲಕಲಾವಲ್ಲಭೆ ಅಲೆಕ್ಸಾಳೂ ಸೇರಿದ್ದಾಳಂತೆ. ಪದೇ ಪದೆ ಆಪರೇಟ್ ಮಾಡುವ ಗೊಡವೆಯೇ ಇಲ್ಲ, ‘ಅಲೆಕ್ಸಾ’ ಅಂತಾ ಕೂಗಿ ಆರ್ಡರ್ ಮಾಡಿದರೆ ಸಾಕು! ಹೀಗೆ, ಅಡುಗೆ ಮನೆ ಕೆಲಸ ಮಾಡಿಕೊಡುವ ರೋಬೋ ಇದ್ದರೆ ಎಷ್ಟು ಚೆಂದ ಅಲ್ವಾ?
ನಳಿನಿ. ಟಿ. ಭೀಮಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.