ಹುಡ್ಗಿಗೆ ಅಡುಗೆ ಬರುತ್ತಾ?
Team Udayavani, Nov 8, 2017, 6:50 AM IST
ಮದುವೆಯಾದ ಬಳಿಕ ಹುಡುಗಿ ಅಡುಗೆಮನೆ ಹೊಕ್ಕು ಸಮಸ್ತ ಅಡುಗೆ ಜವಾಬ್ದಾರಿ ಹೊತ್ತುಕೊಳ್ಳುವ ಈ ವ್ಯವಸ್ಥೆಗೆ ಸಮಾಜ ಅದೆಷ್ಟು ಒಗ್ಗಿಕೊಂಡಿದೆಯೆಂದರೆ,ಅಲ್ಲಿ ಸಮಾನತೆಯ ಅವಶ್ಯಕತೆಯ ಕುರಿತು ಸಣ್ಣ ಯೋಚನೆಯೂ ಬರುವುದಿಲ್ಲ. ಹೆಚ್ಚಾಗಿ ಉಣ್ಣುವವರು, ದುಡಿವವರು ಇಬ್ಬರಾದರೂ ಅಡುಗೆ, ಪಾತ್ರೆ, ಮನೆಕೆಲಸ ಇತ್ಯಾದಿ ಮಹಿಳೆಯ ಹೆಗಲ ಮೇಲೆ ಎಗ್ಗಿಲ್ಲದೆ ಬೀಳುತ್ತದೆ. ಏಕೆ ಹೀಗೆ?
ಬೆಂಗಳೂರಿನ ಮೆಟ್ರೋ ರೈಲಿನ ದೃಶ್ಯ. ಪಕ್ಕದಲ್ಲಿ ಕುಳಿತ ಸುಮಾರು ನಲ್ವತ್ತೈದರ ಆಸುಪಾಸಿನ ಮಹಿಳೆ, ಅಲ್ಲೇ ನಿಂತಿದ್ದ ಒಬ್ಬ ಯುವಕನ ಬಳಿ ಪರಿಚಯದ ನಗೆ ಬೀರಿ ಮಾತು ಶುರುಹಚ್ಚಿಕೊಂಡರು. ಅತ್ಯಂತ ಉಚ್ಚ ಸ್ಥಾಯಿಯಲ್ಲಿ ಮಾತಾಡುತ್ತಿದ್ದ ಆಕೆಯ ಧ್ವನಿ, ಬೇಡ ಬೇಡವೆಂದರೂ ಕಿವಿಗೆ ಬೀಳುತ್ತಿತ್ತು. ಇಳಿಯುವ ತನಕ ಪ್ರಪಂಚದ ಆಗುಹೋಗುಗಳ ಬಗ್ಗೆ, ಹವಾಮಾನ, ಜಿಎಸ್‌ಟಿ, ಮೋದಿ, ಟ್ರಂಪ್- ಹೀಗೆ ಒಂದೇ ಒಂದು ವಿಷಯವನ್ನೂ ಬಿಡದೇ ಮಾತಾಡುತ್ತಾ ಹೋದಳು. ತಿಳಿವಳಿಕಸ್ಥೆಯಂತೆ ಕಂಡಿದ್ದ ಆಕೆ ಆ ಹುಡುಗನಿಗೆ “ಸರಿ, ಊಟಕ್ಕೇನು ಮಾಡ್ಕೊಂಡಿದ್ದೀಯಾ?’ ಎನ್ನುತ್ತಾಳೆ. “ಹೋಟೆಲ… ಊಟ ತಿಂದೂ ತಿಂದೂ ಸಾಕಾಗಿದೆ, ಮಾಮಿ’ ಅಂದ ಆತ. ಒಂದೇ ಏಟಿಗೆ, “ಹಾಗಾದ್ರೆ, ಮದ್ವೆ ಮಾಡ್ಕೊಂಡ್ ಬಿಡೋದಲ್ವಾ?’ ಎಂದು ಅದೊಂದು ಪರಿಹಾರವೆಂಬಂತೆ ಹೇಳಿದ ಆಕೆಯ ಮೇಲ್ಯಾಕೋ ಅಸಹನೆ ಹುಟ್ಟಿತು.
ಮದುವೆ ಅನ್ನುವುದು ಪವಿತ್ರ ಬಂಧ, ಅದೂ ಇದು ಎಂದೆಲ್ಲಾ ಕೇಳೀ ಕೇಳೀ ಬೇಸತ್ತು ಹೋಗಿರುವ ನಮಗೆ, ಅದರ ಈ ಯಾವುದೇ ರಂಗಿಲ್ಲದ ಮುಖ ಹೊಸತಲ್ಲ. ಮಹಿಳೆಯಾಗಿದ್ದುಕೊಂಡು ಆಕೆ ತನ್ನ ಪರಿಚಯದ ಹುಡುಗನಿಗೆ ಮದುವೆ ಮಾಡಿಕೊಂಡು ಬಿಟ್ಟರೆ, ಆತನಿಗೆ ಅಡುಗೆ ಮಾಡಿಕ್ಕಲು ಯಾರೋ ಸಿಕ್ಕಂತಾಯಿತು, ಎಂಬಂತೆ ಮಾತಾಡಿದ ಪರಿ ನಿಜಕ್ಕೂ ಅಸಹನೀಯ. ಆಕೆಯ ಯೋಚನಾಲಹರಿಗೆ ನೀನೇ ಅಡುಗೆ ಕಲಿತುಕೊಂಡು ಬಿಡು ಮಹರಾಯನೇ! ಎನ್ನುವ ಮಾತಂತೂ ಹೊಳೆಯಲಿಲ್ಲ. ಅದೂ ಸಾಧ್ಯವಾಗದಿದ್ದಲ್ಲಿ ಅಡುಗೆಯವರನ್ನು ನೇಮಿಸಿದರಾಯಿತಲ್ವೇ! ಇದಕ್ಕಾಗಿ ಯಾಕೆ ಮದುವೆಯಾಗಬೇಕು?! ಅಥವಾ, ಮದುವೆಯಾಗಿ ಬರುವ ಹುಡುಗಿಗೆ ಇವರು ಕೊಡುವ ಸ್ಥಾನ ಇಷ್ಟೇ?!
ಈಗೀಗ ಮದುವೆ ನಿಶ್ಚಯವಾದ ಹುಡುಗಿಗೆ, ವಿವಾಹದ ದಿನ ಹತ್ತಿರ ಬರುತ್ತಿದ್ದಂತೆ ಆತಂಕ. ಕಂಡ ಕಂಡವರೆಲ್ಲಾ, “ನಿನಗೆ ಅಡುಗೆ ಬರುತ್ತದೆಯೇ?’ ಎಂದು ಕೇಳುತ್ತಿದ್ದರು. ಅಡುಗೆ ಎನ್ನುವ ವಿದ್ಯೆ ತನಗೆ ಅಷ್ಟೊಂದು ಬರಲಿಲ್ಲವಾಗಿ, ಮದುವೆಯಾದ ಮೇಲೆ ತಾನು ಅದನ್ನು ಸಂಭಾಳಿಸಲೇ ಬೇಕು, ಹೇಗೋ ಏನೋ ಎಂದು ಆತಂಕಗೊಂಡಿದ್ದಳಾಕೆ.
ಮದುವೆಯಾದ ಬಳಿಕ ಹುಡುಗಿ ಅಡುಗೆಮನೆ ಹೊಕ್ಕು ಸಮಸ್ತ ಅಡುಗೆ ಜವಾಬ್ದಾರಿ ಹೊತ್ತುಕೊಳ್ಳುವ ಈ ವ್ಯವಸ್ಥೆಗೆ ಸಮಾಜ ಅದೆಷ್ಟು ಒಗ್ಗಿಕೊಂಡಿದೆಯೆಂದರೆ, ಅಲ್ಲಿ ಸಮಾನತೆಯ ಅವಶ್ಯಕತೆಯ ಕುರಿತು ಸಣ್ಣ ಯೋಚನೆಯೂ ಬರುವುದಿಲ್ಲ. ಹೆಚ್ಚಾಗಿ ಉಣ್ಣುವವರು, ದುಡಿವವರು ಇಬ್ಬರಾದರೂ ಅಡುಗೆ, ಪಾತ್ರೆ, ಮನೆಕೆಲಸ ಇತ್ಯಾದಿ ಮಹಿಳೆಯ ಹೆಗಲ ಮೇಲೆ ಎಗ್ಗಿಲ್ಲದೆ ಬೀಳುತ್ತದೆ. ವಿವಾಹಕ್ಕೂ ಮುನ್ನ ತನ್ನ ಮದುವೆಯಾಗುವ ಹುಡುಗನಿಗಿಂತಲೂ ಹೆಚ್ಚು ಮುದ್ದಿನಿಂದ ಬೆಳೆದ, ಅವನಿಗಿಂತಲೂ ಚಿಕ್ಕವಯಸ್ಸಿನ ಹುಡುಗಿಗೆ ಒಮ್ಮಿಂದೊಮ್ಮೆಲೇ ಒಂದಷ್ಟು ಭಾರ ಹೆಗಲ ಮೇಲೆ ಬಿದ್ದಾಗ ಕುಗ್ಗಿಬಿಡುವುದುಂಟು. ಆಫೀಸ್‌ನಲ್ಲಿ ಲೇಡೀಸ್ ರೂಂನಲ್ಲಿ ಒಬ್ಬಳೇ ಕಣ್ಣಲ್ಲಿ ನೀರು ತುಂಬಿಸಿಕೊಂಡು ಕೂತಿದ್ದ.
ಇತ್ತೀಚೆಗೆ ಮದುವೆ ಆದ ಹುಡುಗಿಯೊಬ್ಬಳ ಕಣ್ಣೀರಿನಲ್ಲಿ ಹುದುಗಿದ್ದ ನೂರೆಂಟು ನೋವು ಇದನ್ನೇ ಹೇಳುತ್ತಿತ್ತು.
ತನ್ನ ಜೀವನದ ಮುಕ್ಕಾಲು ಭಾಗವನ್ನು ಮನೆಯವರಿಗೆ ಮೆದುವಾದ ಇಡ್ಲಿ, ತರಹೇವಾರಿ ದೋಸೆ ಮಾಡಿ ಕೊಟ್ಟುಕೊಂಡು ಬದುಕಿ ತನ್ನ ಇಷ್ಟಾನಿಷ್ಟಗಳನ್ನೇ ಮರೆತು ಬದುಕುವ ನೂರೆಂಟು ಮಹಿಳೆಯರನ್ನು ಕಾಣುವಾಗ ಸ್ವಂತಿಕೆ- ಸ್ವಾತಂತ್ರÂಗಳ ಇಚ್ಛೆ ಕೂಡಾ ಅವರಲ್ಲಿ ಸತ್ತು ಹೋಗಿರುವಂತೆ ಕಾಣಿಸುತ್ತದೆ. ಅದರಲ್ಲೂ ಮನೆಯಲ್ಲಿ ತಲಾ ಒಬ್ಬರಿಗೊಂದರಂತೆ ವಿಧ ವಿಧದ ಅಡುಗೆಗಳನ್ನು ಮಾಡುತ್ತಾ ಅಡುಗೆಮನೆಯೊಳಗೆಯೇ ಬೆಂದು ಹೋಗುವ ಜೀವಗಳೂ ಅನೇಕ.
ಇಲ್ಲಿ ಬಹುತೇಕರ ಪದಕೋಶದಲ್ಲಿ ಇಲ್ಲ ಎಂಬ ಪದ ಇಲ್ಲವೇ ಇಲ್ಲವೇನೋ ಅನಿಸುತ್ತದೆ. ಅದೆಷ್ಟೇ ಬವಣೆಯಿರಲಿ, ಸುಸ್ತಿರಲಿ, ಚಕಾರವೆತ್ತದೆ ಸಾಂಗೋಪಾಂಗವಾಗಿ ಊಟೋಪಚಾರಗಳನ್ನು ಮಾಡಿ ಬಡಿಸುತ್ತಾ ತೊಳೆ, ತಿಕ್ಕು, ಒರೆಸು, ಮಾಡು ಎಂಬ ಅಡುಗೆಮನೆಯೊಳಗಿನ ಚಕ್ರದೊಳಗಿಂದ ಹೊರಬಾರದೆ ಜೀವ ಸವೆಸಿದ, ಸವೆಸುತ್ತಿರುವವರು ಅನೇಕ ಮಂದಿಯಿದ್ದಾರೆ.
ಮದುವೆಯ ಶಾಸ್ತ್ರಗಳಲ್ಲಿ ವಧೂ ಗೃಹಪ್ರವೇಶದ ಬಳಿಕ ಸಟ್ಟುಗ ಹಿಡಿಸುವ, ತೆಂಗಿನಕಾಯಿ ತುರಿಯಿಸುವ ಶಾಸ್ತ್ರಗಳು ಅದ್ಯಾವುದೋ ಕಾಲದಲ್ಲಿ ಸಮಾಜ ಒಪ್ಪಿ ನಡೆಸಿಕೊಂಡು ಬರುತ್ತಿರುವ ಸಾಂಕೇತಿಕವಾದ ಆಚಾರಗಳಾದರೆ, ಇಂದಿನ ವ್ಯವಸ್ಥೆಗಳಲ್ಲಿ ಇವಕ್ಕೆ ಪ್ರಾಮುಖ್ಯತೆ ಕೊಡಬಾರದೆನಿಸುತ್ತದೆ. ಕಡೆಯದಾಗಿ, ಅಡುಗೆ ಮಾಡುವುದು ತೊಂದರೆಯಲ್ಲ, ತಪ್ಪಲ್ಲ. ಆದರೆ, ಇಲ್ಲಿ ಸಹಜವಾಗಿ ಎಲ್ಲ ಜವಾಬ್ದಾರಿಗಳು ಎಲ್ಲರದೆಂಬ ಮನಃಸ್ಥಿತಿ ಹುಟ್ಟಬೇಕಾಗಿರುವ ಅಗತ್ಯವಿದೆ. ಮದುವೆಗೂ ಅಡುಗೆಗೂ ಇರುವ ಅನಗತ್ಯ ನಂಟು ಪ್ರತಿ ಮನೆ- ಮನಗಳಿಂದ ಕಿತ್ತೂಗೆದಾಗ ಮಾತ್ರ ಇದು ಸಾಧ್ಯ.
– ಶ್ರುತಿ ಶರ್ಮಾ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.