ನವರಾತ್ರಿಯ ಸಂಭ್ರಮಕ್ಕೂ ಕಂಟಕ ಆಯ್ತು ಕೋವಿಡ್
Team Udayavani, Oct 14, 2020, 7:21 PM IST
ಗೊಂಬೆಗಳ ಸಂಗ್ರಹಣೆ, ಅವುಗಳ ತಯಾರಿಕೆ, ಪ್ರದರ್ಶನ ಮತ್ತು ಪೂಜೆಯ ನೆಪದಲ್ಲಿ ನವರಾತ್ರಿಯ ಸಂಭ್ರಮವು ನಾಡ ತುಂಬಾ ಹರಡುವಂತೆ ಮಾಡಿರುವುದು ಹೆಣ್ಣುಮಕ್ಕಳ ಹೆಚ್ಚುಗಾರಿಕೆ.
ಅಕ್ಟೋಬರ್ ಬಂತೆಂದರೆ, ಹೆಣ್ಣುಮಕ್ಕಳಿಗೆ ಸಂಭ್ರಮ, ಸಡಗರ. ಕಾರಣ, ಅವರು ಇಷ್ಟಪಡುವ ನವರಾತ್ರಿ, ಮಹಾನವಮಿ, ದಸರಾ ಎಂದೆಲ್ಲಾ ಹೆಸರಾದ ಹಬ್ಬಗಳು, ಈ ಆಚರಣೆಯ ಒಂದು ಭಾಗವೇ ಆಗಿರುವ ಗೊಂಬೆ ಹಬ್ಬವೆಲ್ಲಾ ಬರುವುದೇ ಅಕ್ಟೋಬರ್ ನಲ್ಲಿ. ಈ ಹಬ್ಬಗಳ ಸಡಗರವೆಲ್ಲಾ ಮುಗಿದಕೆಲವೇ ದಿನಗಳಿಗೆ ದೀಪಾವಳಿಯೂ ಮನೆಮನೆಯ ಬಾಗಿಲು ತಟ್ಟುತ್ತದೆ.
ದಸರಾ, ನವರಾತ್ರಿ, ಮಹಾನವಮಿ ಅಂದುಕೊಂಡಾಗ ವಿಜಯನಗರದಕಾಲದ ಆಚರಣೆ ನೆನಪಿಗೆ ಬಂದೇ ಬರುತ್ತದೆ. ವಿಜಯನಗರವನ್ನು ಆಳಿದ ಎರಡನೆಯ ದೇವರಾಯನಕಾಲದಿಂದ ಶ್ರೀಕೃಷ್ಣದೇವರಾಯನಕಾಲದವರೆಗೆ ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಈ ಹಬ್ಬದ ಆಚರಣೆಯನ್ನು ನೋಡಲೆಂದೇ ಬರುತ್ತಿದ್ದ ವಿದೇಶಿಪ್ರವಾಸಿಗರು, ಅರಮನೆಯಲ್ಲಿ ಇರುವ ದೇವಾಲಯ, ಆಸ್ಥಾನದಲ್ಲಿ ನಡೆಯುವ ಪೂಜೆಗಳು, ನೃತ್ಯಗಳು, ಜಟ್ಟಿಕಾಳಗ, ಆಟ ಪಾಠಗಳ ಪ್ರದರ್ಶನ ದೊಂದಿಗೆ, ಸಂಜೆ ಸಾರ್ವಜನಿಕರ ಸಭೆಯಲ್ಲಿ ಯಾವ ರೀತಿಯಲ್ಲಿ ಉತ್ಸವಗಳು ಕೊನೆಗೊಳ್ಳುತ್ತಿದ್ದವು ಎಂದೆಲ್ಲಾ ಹೇಳಿರುವುದನ್ನು ನಾವೆಲ್ಲಾ ಪಠ್ಯಗಳಲ್ಲಿ ಓದಿದ್ದೇವೆ.
ವಿಜಯನಗರ ಸಾಮ್ರಾಜ್ಯದ ಪತನದ ನಂತರ, ದಸರಾ ಮಹೋತ್ಸವವನ್ನು, ಮೈಸೂರಿನ ಅರಸರು ಮುಂದುವರಿಸಿಕೊಂಡು ಬಂದರು. ಅದೇ ಕಾರಣಕ್ಕೆ ಈಗಲೂ ಮೈಸೂರಿನ ಜನಕ್ಕೆ ದಸರಾ ಎಂದರೆ ಅಭಿಮಾನ, ಹಿಗ್ಗು, ಉತ್ಸಾಹ, ಹುಮ್ಮಸ್ಸು. ಗೊಂಬೆಗಳ ಸಂಗ್ರಹಣೆ, ಅವುಗಳ ತಯಾರಿಕೆ, ಪ್ರದರ್ಶನ ಮತ್ತು ಪೂಜೆಯ ನೆಪದಲ್ಲಿ ನವರಾತ್ರಿಯ ಸಂಭ್ರಮವು ನಾಡತುಂಬಾ ಹರಡುವಂತೆಮಾಡಿರುವುದು ಹೆಣ್ಣುಮಕ್ಕಳ ಹೆಚ್ಚುಗಾರಿಕೆ. ಆದರೆ ಈ ಬಾರಿ ಕೋವಿಡ್ ಕಾರಣಕ್ಕೆ, ಎಲ್ಲ ಬಗೆಯ ಸಂಭ್ರಮಕ್ಕೂ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಹಬ್ಬ ಮಾಡಬೇಕು ಅಂದರೆ ಅಗತ್ಯ ವಸ್ತುಗಳನ್ನು ತರಲು ಐದಾರು ಬಾರಿಯಾದರೂ ಮಾರ್ಕೆಟ್ ಗೆ ಹೋಗಲೇಬೇಕಾದ ಅನಿವಾರ್ಯತೆ. ಹಾಗೆಹೋದಾಗಲೇ ಯಾವುದೋ ಮಾಯದಲ್ಲಿ ಕೋವಿಡ್ ಅಮರಿ ಕೊಂಡರೆ? ನವರಾತ್ರಿಯ ಗೊಂಬೆಗಳನ್ನು ನೋಡಲೆಂದು ಬರುತ್ತಾರಲ್ಲ, ಪೈಕಿ ಯಾರಿಗಾದರೂ ಪಾಸಿಟಿವ್ ಇದ್ದರೆ?- ಇಂಥ ಯೋಚನೆಗಳೇ ಹೆಣ್ಣುಮಕ್ಕಳ ಉತ್ಸಾಹವನ್ನು ಉಡುಗಿಸಿವೆ. ಗೃಹಿಣಿಯರನ್ನು ಹೆದರಿಸಿವೆ. ಪರಿಣಾಮ ವಾಗಿ, ಇದುವರೆಗೂ ನವರಾತ್ರಿಗೆ ಇನ್ನೂ ತಿಂಗಳು ಉಳಿದಿದ್ದಾಗಲೇ ಗೊಂಬೆಗಳ ಸಂಗ್ರಹಕ್ಕೆ ತೊಡಗುತ್ತಿದ್ದ ಜನ, ಈಗ ಹಬ್ಬದ ದಿನಗಳು ಹತ್ತಿರ ಆಗಿದ್ದರೂ ಆ ಕುರಿತು ಹೆಚ್ಚಿನ ಆಸಕ್ತಿ ತೋರದೆಕೂತುಬಿಟ್ಟಿದ್ದಾರೆ.
– ಸೀಮಾ ಎಸ್. ಉಪಾಧ್ಯಾಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.