ದೇಹ-ಮನಸಿನ ನಂಟು ಆಗದಿರಲಿ ಕಗ್ಗಂಟು
Team Udayavani, Aug 21, 2019, 5:19 AM IST
ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ.
48ರ ಕಮಲಾ ಈಗಷ್ಟೇ ವಿಚ್ಛೇದನ ಪಡೆದಿದ್ದಾರೆ. ಇಪ್ಪತ್ತು ವರ್ಷಗಳ ಬಂಧನ ಕಳೆದುಕೊಳ್ಳುವುದು ಸುಲಭವಲ್ಲ. ಹಾಗೆಯೇ ಪತಿಯ ಜೊತೆ ಕಟ್ಟಿಸಿದ್ದ ಪ್ರೀತಿಪಾತ್ರ ಮನೆ ಈಗ ನ್ಯಾಯಾಲಯದ ಕಟಕಟೆಯನ್ನೇರಿದೆ. ಜೊತೆಗೆ fybromyalgia ಎಂಬ ವೈದ್ಯಕೀಯ ಸ್ಥಿತಿಯಿಂದ ಅವರು ಬಳಲುತ್ತಿದ್ದಾರೆ. ರಾತ್ರಿ ನಿದ್ದೆ ಹತ್ತುವುದಿಲ್ಲ. ಸಣ್ಣ ಸಪ್ಪಳವಾದರೂ ಕಿರಿಕಿರಿ, ತಲೆನೋವು. ಇಷ್ಟೆಲ್ಲಾ ಸಂದಿಗ್ಧಗಳ ನಡುವೆ ಮೈ ತೂಕದ ಸಮಸ್ಯೆ ಬೇರೆ. ಸಲಹಾ ಮನೋವಿಜ್ಞಾನದ ನೆರೆವು ಪಡೆಯಬೇಕಿನಿಸಿ ಕಮಲಾ ನನ್ನ ಬಳಿ ಬಂದಿದ್ದರು.
ಕಮಲಾಗೆ ವಿದ್ಯಾವಂತ ಪತಿಯ ಮೇಲೆ ಗೌರವವಿತ್ತು. ಸಂಬಂಧವನ್ನು ಕಾಪಾಡುವಲ್ಲಿ ಆತನೂ ಬಹಳ ಶ್ರಮವಹಿಸುತ್ತಿದ್ದ. ಆದರೆ, ಮೂಲಭೂತ ಆದರ್ಶಗಳಲ್ಲಿ ಸಾಮ್ಯವಿರದೆ, ಇಬ್ಬರಿಗೂ ಜಗಳವಾಗುತ್ತಿತ್ತು. ಮನೆಯನ್ನು ಕಲಾತ್ಮಕವಾಗಿ ಇಟ್ಟುಕೊಳ್ಳುವುದು ಕಮಲಾರ ಅಭ್ಯಾಸ. ಪತಿ, ಕುಡಿದ ಕಾಫಿ ಲೋಟವನ್ನು ಕುಡಿದಲ್ಲಿಯೇ ಬಿಟ್ಟು ಹೋದಾಗ ಮೈ ಪರಚಿಕೊಳ್ಳುವಂತಾಗುತ್ತಿತ್ತು. ಅದನ್ನು ಪತಿಯ ಗಮನಕ್ಕೆ ತರುವ ರೀತಿಯಲ್ಲಿ ಎಡವಟ್ಟಾಗಿ, ಪತಿಗೆ ಭಯಂಕರ ಸಿಟ್ಟು ಬಂದು, ಕಮಲಾರನ್ನು ಹೊಡೆದದ್ದೂ ಉಂಟಂತೆ.
ಕಮಲಾಗೆ ಸಮಯವೂ ಒಂದೇ, ಚಿನ್ನವೂ ಒಂದೇ. ಯಾರನ್ನಾದರೂ ಕಾಯಿಸುವುದೆಂದರೆ ಅವರಿಗೆ ಅಸಾಧ್ಯದ ಮಾತು. ಪತಿಗೆ ಸಮಯದ ನಿರ್ಬಂಧವಿಲ್ಲ. ಕಮಲಾಗೆ ಶಿಸ್ತೇ ಆಂತರ್ಯ. ಹಾಗಾದಾಗ, ಮನುಷ್ಯ-ಮನುಷ್ಯರ ನಡುವೆ ಪ್ರೀತಿ ಟಿಸಿಲೊಡೆಯಲು ಸಾಧ್ಯವಿಲ್ಲ. ಇನ್ನೂ ಎಷ್ಟು ವರ್ಷ ಇಂಥ ಮನುಷ್ಯನನ್ನು ಸಹಿಸಿಕೊಳ್ಳುವುದು ಅನ್ನಿಸಿದಾಗ, ತಲೆನೋವು ಜಾಸ್ತಿಯಾಗುತ್ತಿತ್ತು. ಮನೆಯ ಗೋಡೆ ಗಲೀಜಾದಾಗ ಬರುವ ಸಿಟ್ಟು ನರದೌರ್ಬಲ್ಯವನ್ನುಂಟು ಮಾಡುತ್ತಿತ್ತು.
ಆದರೆ, ವಿಚ್ಚೇದನದ ನಂತರವೂ ಆಕೆಗೆ ನೆಮ್ಮದಿಯಿರಲಿಲ್ಲ. ಪಶ್ಚಾತ್ತಾಪವಿತ್ತು. ಈಕೆ ವಿಚ್ಚೇದನವನ್ನು ಮಾನಸಿಕವಾಗಿ ಒಪ್ಪಿಕೊಳ್ಳುವ ಮೊದಲೇ, ಪತಿ ಮರುಮದುವೆಯಾಗಿದ್ದಾರೆ. ಜೀವನದಲ್ಲಿ ನಾನು ಸೋತೆ ಎಂಬ ಭಾವನೆಯಲ್ಲಿ ನರಗಳು ಸೆಟೆದುಕೊಂಡಾಗ Fat cells ರೊಚ್ಚಿಗೇಳುತ್ತವೆ.
ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. ಅತೀ ಸಿಟ್ಟುಬಂದರೆ, ತಲೆನೋವು ಖಚಿತ. ಕೋಪ ಬಂದಾಗ ಹೃದಯದ ಬಡಿತ ಮತ್ತು ರಕ್ತದೊತ್ತಡ ಜಾಸ್ತಿಯಾಗುತ್ತದೆ. ಕಮಲಾಗೆ ಮನಸ್ಸು-ಶರೀರದ ನಡುವಿನ ಸೂಕ್ಷ್ಮ ಸಂಬಂಧದ ಅರಿವಾದ ನಂತರ, ಆರೋಗ್ಯ ಸುಧಾರಿಸುತ್ತಾ ಬಂತು.
ಶರೀರ ಹುರುಪುಗೊಳ್ಳಲು, ಮನಸ್ಸಿನಲ್ಲಿ ನಡೆಯುವ ನಾನು ಸೋತೆ ಎಂಬ ಕದನಕ್ಕೆ ಮೊದಲು ವಿರಾಮ ಎಳೆದರು. ಆದರ್ಶಗಳು ಮತ್ತು ಸಂಬಂಧಗಳ ನಡುವಿನ ಆಯ್ಕೆ ಕಮಲಾಗೆ ಸುಲಭವಾಯಿತು. ಒಬ್ಬಳೇ ಬದುಕುವುದನ್ನು ರೂಢಿಸಿಕೊಂಡರು.
ವಿ.ಸೂ: ಪ್ರತಿನಿತ್ಯ ಬಿಡದೆ ಬೆಳಗ್ಗೆ ಅಥವಾ ಸಾಯಂಕಾಲ ಉದ್ಯಾನವನಕ್ಕೆ ಹೋಗಿ. ನಡಿಗೆ ಕಷ್ಟವಾದರೆ, ಒಂದೆಡೆ ಸುಮ್ಮನೆ ಕುಳಿತುಕೊಳ್ಳಿ. ಬೆಳಗಿನ ಒಂದು ಕಪ್ ಕಾಫೀ/ಟೀ ಕುಡಿಯುವಾಗ ಪ್ರತಿಯೊಂದು ಗುಟುಕನ್ನೂ ಪ್ರಶಾಂತವಾಗಿ ಆಸ್ವಾದಿಸಿ. ಪದೇ ಪದೆ ಕಾಲು ಲೋಟ ಟೀ/ಕಾಫೀಯನ್ನು ಚಟದಂತೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಳ್ಳೆಯ ಜೀವನಶೈಲಿ ರೂಪಿಸಿಕೊಂಡರೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.
? ಡಾ. ಶುಭಾ ಮಧುಸೂದನ್
ಚಿಕಿತ್ಸಾ ಮನೋವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.