ಡೋಂಟ್ ಶೇರ್ ಇಟ್
ಶ್ಯ್, ಮತ್ತೂ ಬ್ಬರ ವಸ್ತು ಮುಟ್ಬೆಡಿ..!
Team Udayavani, Jul 10, 2019, 11:00 AM IST
ಬೇರೆಯವರ ವಸ್ತುವನ್ನು ಬಳ ಸಬಾರದು ಎಂದು ಹೇಳಿಕೊಡುವ ನೀತಿಪಾಠ ಒಳ್ಳೆಯದೇ. ಆರೋಗ್ಯ, ಸ್ವಚ್ಛತೆಯ ವಿಷಯದಲ್ಲಿ ಇದು ಅಗತ್ಯ ಕೂಡಾ. ಆದರೆ, ಕುಟುಂಬದಲ್ಲಿ, ಮನೆಯೊಳಗೆ ಈ ರೀತಿಯ ಪ್ರತ್ಯೇಕತೆ ಎಷ್ಟು ಸರಿ?
ಶಿಶುವಿಹಾರದಿಂದ ಬಂದ ಮೂರೂವರೆ ವರ್ಷದ ಮಗುವಿನ ಕೈಕಾಲು ತೊಳೆಸಿ, ಅಜ್ಜನ ಬಳಿ ಹೋಗಿ ಒರೆಸಲು ಹೇಳು ಅಂತ ಕಳುಹಿಸಿದೆ. ಕಾಲು ಒರೆಸಲು ಬಂದ ಅಜ್ಜನ ಟವೆಲ್ ಅನ್ನು ದೂಡಿ ಒಳಗೋಡಿದ ಅವಳು ತನ್ನ ಟವೆಲನ್ನು ಹಿಡಿದು ಬಂದು, “ಅಜ್ಜಾ, ಇದರಲ್ಲಿ ಒರೆಸಿ’ ಅಂತ ಹೇಳಿದಳು. ಅವಳ ಮಾತುಗಳಿಂದ ಗಲಿಬಿಲಿಯಾದರೂ, ಪುಟ್ಟಮಗು ತಾನೇ ಅಂತ ಸುಮ್ಮನಾದೆವು.
ಕೆಲವಾರು ದಿನಗಳಲ್ಲೇ ಮತ್ತೂಂದು ಘಟನೆ ನಡೆಯಿತು. ಎಲ್ಲರೂ ಬಳಸುವ ಬಾತ್‌ರೂಮ್‌ನ ರಿಪೇರಿ ನಡೆಯುತ್ತಿತ್ತು. ಗಾರೆ ಕೆಲಸದವನು, “ನಾಳೆ ಬೆಳಗಿನವರೆಗೆ ನೀರು ಸುರಿಯಬೇಡಿ’ ಎಂದು ಹೇಳಿ ಹೋದ. ನಾವು ಇನ್ನೊಂದು ರೂಮಿನ ಬಾತ್‌ರೂಮನ್ನು ಬಳಸಲು ಹೋದಾಗ ಮೊಮ್ಮಗಳು ಅಡ್ಡ ನಿಂತು, “ಅಜ್ಜಿ, ಇದಕ್ಕೆ ನೀವು ಬರಬೇಡಿ. ಅವರವರದನ್ನು ಅವರೇ ಬಳಸಬೇಕು’ ಎಂದಾಗ ನಾವು ದಿಗ್ಭ್ರಾಂತರಾದೆವು.
ನಂತರವೂ ಇದೇ ರೀತಿಯ ಹಲವಾರು ಘಟನೆಗಳು ನಡೆದವು. ಅವಳ ಹಾಸಿಗೆ, ಹೊದಿಕೆ, ದಿಂಬುಗಳನ್ನು ಯಾರೂ ಮುಟ್ಟಬಾರದು. ಬಾಚಣಿಗೆಯನ್ನು ತೆಗೆದುಕೊಳ್ಳಬಾರದು. ಆಟಿಕೆಗಳನ್ನಂತೂ ಮುಟ್ಟಲೇ ಬಿಡುತ್ತಿರಲಿಲ್ಲ. ಇಷ್ಟೆಲ್ಲಾ ಯಾಕೆ, ಅವಳು ಕುಳಿತುಕೊಳ್ಳುವ ಕುರ್ಚಿಯಲ್ಲೂ ಬೇರೆಯವರಿಗೆ ಕೂರಲು ಬಿಡುತ್ತಿರಲಿಲ್ಲ. ಅವಳ ಸ್ವಭಾವದಲ್ಲಿ ಸ್ವಾರ್ಥ ಹುಟ್ಟಿದೆಯಾ ಎಂದು ಅನುಮಾನ ಬಂತು. ಇಷ್ಟು ಪುಟ್ಟ ವಯಸ್ಸಿನಲ್ಲೇ ಹೀಗಾದರೆ ಮುಂದೆ ಏನು ಕಥೆ ಅಂತ ಚಿಂತೆಯಾಯ್ತು.
ನಾವ್ಯಾಕೆ ಹಾಗಿರಲಿಲ್ಲ?
ನಾವೆಲ್ಲಾ ಸಣ್ಣವರಿದ್ದಾಗ ಹೀಗೆ ವರ್ತಿಸಲು ಅವಕಾಶವೇ ಇರಲಿಲ್ಲ. ನಮ್ಮ ತಂದೆ-ತಾಯಿಗೆ ನಾವು ಏಳು ಜನ ಮಕ್ಕಳು. ಹೊಟ್ಟೆ ಬಟ್ಟೆಗೇ ಕಷ್ಟವಿದ್ದಾಗ ಐಷಾರಾಮಿ ಸೌಲಭ್ಯವೆಲ್ಲಿಂದ ಬಂತು? ನಮ್ಮ ಮನೆ ಅಂದ್ರೆ ಒಂದು ಹಾಲ್, ಒಂದು ರೂಮು, ಅಡುಗೆಮನೆ, ಬಚ್ಚಲುಮನೆ ಅಷ್ಟೇ… ಹಾಲ್‌ನಲ್ಲೇ ನಮ್ಮೆಲ್ಲಾ ಕೆಲಸಗಳೂ ಆಗಬೇಕಿತ್ತು. ರಾತ್ರಿ ಉದ್ದಕ್ಕೆ ಹಾಸಿಗೆ ಹಾಸಿಕೊಂಡು ಎಲ್ಲ ಮಕ್ಕಳೂ ಮಲಗುತ್ತಿದ್ದೆವು. ಓದುವ ಕೋಣೆಯೂ ಅದೇ. ಯಾರಾದರೂ ಜೋರಾಗಿ ಓದುತ್ತಿದ್ದರೆ, “ಏಯ್ ಮನಸ್ಸಿನಲ್ಲಿ ಓದಿಕೊಳ್ಳೋ’ ಎಂಬ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿದ್ದವು.
ಒಂದೇ ರೂಮು, ಒಂದೇ ಬಚ್ಚಲು
ಆಗೆಲ್ಲಾ ಮಕ್ಕಳಿಗೆ ಪ್ರತ್ಯೇಕ ಕೋಣೆಗಳ ವ್ಯವಸ್ಥೆಯನ್ನು ಊಹಿಸುವುದೂ ಅಸಾಧ್ಯ. ಹೆಣ್ಣುಮಕ್ಕಳು ಮಾತ್ರ ಕೋಣೆಗೆ ಹೋಗಿ ಬಟ್ಟೆ ಬದಲಾಯಿಸುತ್ತಿದ್ದೆವು. ಅಲ್ಲೇ ಹಾಲ್‌ನಲ್ಲಿ ಕಿಟಕಿಯ ಹತ್ತಿರ ಒಂದು ಪೌಡರ್ ಡಬ್ಬಿ, ಒಂದು ಬಾಚಣಿಗೆ. ಎಲ್ಲರೂ ಹೋಗಿ ಅದರಲ್ಲೇ ಬಾಚಿಕೊಳ್ಳುತ್ತಿದ್ದೆವು. ಎಲ್ಲರಿಗೂ ಒಂದೇ ಪೌಡರ್. ಬಚ್ಚಲು ಮನೆಯ ಡಬ್ಬಿಯೊಂದರಲ್ಲಿ ಇದ್ದಿಲನ್ನು ಪುಡಿಮಾಡಿ ಉಪ್ಪು ಸೇರಿಸಿ ಇಟ್ಟಿರುತ್ತಿದ್ದರು. ಅದೇ ನಮ್ಮ ಟೂತ್‌ಪೌಡರ್. ಟೂತ್ ಪೇಸ್ಟ್, ಸೋಪುಗಳು ಬಂದ ಮೇಲೆ ಎಲ್ಲರಿಗೂ ಒಂದೇ ಸೋಪು, ಒಂದೇ ಪೇಸ್ಟ್. ಯಾರಿಗಾದರೂ ಅಲರ್ಜಿಯಾದರೆ ಕಡಲೆಹಿಟ್ಟು, ಹೆಸರು ಹಿಟ್ಟಿನಲ್ಲಿ ಸ್ನಾನ. ಈಗಿನಂತೆ ವಿಧವಿಧದ ಸೋಪು, ಎಣ್ಣೆ, ಕ್ರೀಮ್‌ಗಳನ್ನು ನಾವು ಕಂಡಿರಲೇಇಲ್ಲ.
ಎಲ್ಲರಿಗೂ ಸೇರಿ ಎರಡು ಮೂರು ಟವೆಲ್‌ಗಳು. ಈಗಿನ ಮಕ್ಕಳಿಗಿರುವಂತೆ ತಲಾ ಒಂದೊಂದು ಟವೆಲ್ ಅನ್ನು ಪೂರೈಸಲು ಸಾಧ್ಯವಾಗುತ್ತಿತ್ತೇ? ಒಗೆಯಲು ವಾಷಿಂಗ್‌ಮಷಿನ್‌ಗಳಿದ್ದವೆ? ಹೀಗಾಗಿ, ನಮ್ಮಲ್ಲಿ ಬೇರೂರಿದ್ದ ಮುಖ್ಯ ಸಂಸ್ಕಾರವೆಂದರೆ ಹಂಚಿಕೊಳ್ಳುವುದು. ಏನೇ ಇದ್ದರೂ ಅದರಲ್ಲಿ ಎಲ್ಲರಿಗೂ ಸಮಪಾಲಿರುತಿತ್ತು. ಹಬ್ಬ-ಹರಿದಿನಗಳಲ್ಲಿ ಬೇರೆಯವರ ಮನೆಗೆ ಅರಿಶಿನ ಕುಂಕುಮಕ್ಕೆ ಹೋದಾಗ ಸಿಗುತ್ತಿದ್ದ ಕೋಸಂಬರಿ ಉಸಲಿಯನ್ನೂ ನಾವು ಹಂಚಿಕೊಳ್ಳುತ್ತಿದ್ದೆವು. ಅದನ್ನು ಸರಿಯಾಗಿ ತಿಂದರೆ ಒಬ್ಬರಿಗೂ ಸಾಕಾಗುತ್ತಿರಲಿಲ್ಲ. ಆದರೆ, ಅದನ್ನೇ ಎಲ್ಲರಿಗೂ ಸಮನಾಗಿ ಹಂಚಿ, ಉಳಿದುದನ್ನು ತಿನ್ನುತ್ತಿದ್ದೆವು. ಹೊರಗಡೆ ಹೋಗಿರುತ್ತಿದ್ದ ಅಣ್ಣ ಬರುವವರೆಗೂ ಅವನ ಪಾಲು ಅವನಿಗಾಗಿ ಕಾದಿರುತ್ತಿತ್ತು.
ಮನೆಗೊಂದೇ ಮಗು
ನಮ್ಮ ಬಾಲ್ಯಕ್ಕೂ, ಈಗಿನ ಮಕ್ಕಳಿಗೂ ಸ್ವಭಾವದಲ್ಲಿ ಅಜಗಜಾಂತರ. ಏಕೆ ಎಂಬುದಕ್ಕೆ ಕಾರಣ ಕಣ್ಮುಂದೆಯೇ ಇದೆ. ಅಂದು ನಾವು ಏಳು ಮಕ್ಕಳು ಒಟ್ಟಾಗಿ ಬೆಳೆದದ್ದು. ಇಂದು ಮನೆಗೆ ಒಂದೇ ಮಗು. ಮನೆಗೆ ಏನೇ ತಂದರೂ ಅವರೊಬ್ಬರಿಗೆ ಮಾತ್ರ. ಯಾರಿಗೂ ಹಂಚುವ ಗೋಜೇ ಇಲ್ಲ. ಹೀಗಿರುವಾಗ ಅವರಲ್ಲಿ ಸ್ವಾರ್ಥ, ಕೊಳ್ಳುಬಾಕತನ ಹುಟ್ಟದಿರುತ್ತದೆಯೇ? ಕೇಳಿದ್ದೆಲ್ಲ ಕ್ಷಣ ಮಾತ್ರದಲ್ಲಿ ಕೈಗೆಟಕುತ್ತದೆ. ಸಿಗದಿದ್ದರೆ ಅತ್ತು ಕರೆದಾದರೂ ಪಡೆದುಕೊಳ್ಳುವ ಉಪಾಯವೂ ಗೊತ್ತು. ಹೀಗಾಗಿ, ಅವರಲ್ಲಿ ಹಠಮಾರಿತನವೂ ಬೆಳೆದಿರುತ್ತದೆ. ಅದಕ್ಕಾಗಿಯೇ ಹಿರಿಯರು- “ಒಂದು ಮಗು ಮಗುವಲ್ಲ, ಒಂದು ಕಣ್ಣು ಕಣ್ಣಲ್ಲ’ ಎಂದು ಹೇಳುತ್ತಿದ್ದರು. ಒಬ್ಬಂಟಿಯಾಗಿ ಬೆಳೆದ ಮಗುವಿಗೂ, ಎರಡುಮೂರು ಮಕ್ಕಳ ಜೊತೆ ಬೆಳೆದ ಮಗುವಿನ ಸ್ವಭಾವಕ್ಕೂ ಅಪಾರ ವ್ಯತ್ಯಾಸವಿದೆ.
ಮಕ್ಕಳಿಗೆ ಸಂಸ್ಕಾರ ಪಾಠ
ಬೇರೆಯವರ ವಸ್ತುವನ್ನು ಬಳಸಬಾರದು ಎಂದು ಹೇಳಿಕೊಡುವ ನೀತಿಪಾಠ ಒಳ್ಳೆಯದೇ. ಆರೋಗ್ಯ, ಸ್ವತ್ಛತೆಯ ವಿಷಯದಲ್ಲಿ ಇದು ಅಗತ್ಯ ಕೂಡಾ. ಆದರೆ, ಕುಟುಂಬದಲ್ಲಿ, ಮನೆಯೊಳಗೆ ಈ ರೀತಿಯ ಪ್ರತ್ಯೇಕತೆ ಎಷ್ಟು ಸರಿ? ಈ ಬಗ್ಗೆ ಅಮ್ಮಂದಿರು ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮುಂದೆ ಮಕ್ಕಳಿಗೆ ಎಲ್ಲರೊಂದಿಗೆ ಬೆರೆಯಲು ಕಷ್ಟವಾಗಬಹುದು.
ಇಂಥ ಸ್ವಭಾವದ ಮಕ್ಕಳು ದೊಡ್ಡವರಾದ ಮೇಲೆ ಮನೆಯಿಂದ ಹೊರಗೆ ಎಲ್ಲಿಗೇ ಹೋದರೂ, ಹೊಂದಿಕೊಳ್ಳಲು ಸಮಸ್ಯೆಯಾಗಬಹುದು. ಒಂದುವೇಳೆ, ಯಾವುದಾದರೂ ವಸ್ತುವನ್ನು ಮರೆತುಹೋಗಿದ್ದರೆ ಬೇರೆಯವರದ್ದನ್ನು ಉಪಯೋಗಿಸಲು ಇಷ್ಟವಿಲ್ಲದೆ ಒದ್ದಾಡುತ್ತಾರೆ, ಪರದಾಡುತ್ತಾರೆ. ಯಾವುದೇ ವಿಷಯವಾದರೂ ಸರಿ ಎಷ್ಟು ಅನುಕೂಲವಿರುತ್ತದೋ ಅಷ್ಟೇ ಅನನುಕೂಲವೂ ಇರುತ್ತದೆ. ಅತಿಯಾದರೆ ಅಮೃತವೂ ವಿಷವೇ. ಆದ ಕಾರಣ ಮಕ್ಕಳಿಗೆ ತಿಳಿಹೇಳುವಾಗ, ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವ ಸ್ವಭಾವವನ್ನೂ, ಸಂಸ್ಕಾರವನ್ನೂ ಕಲಿಸಿಕೊಡಬೇಕಾದದ್ದು ತಾಯಂದಿರ ಆದ್ಯ ಕರ್ತವ್ಯ.
– ಪುಷ್ಪ ಎನ್. ಕೆ. ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.