ಮನ್ಸಲ್ಲೇ ಏನೇನೋ ಅಂದ್ಕೋಬೇಡಿ…
Team Udayavani, Nov 6, 2019, 4:04 AM IST
ಜಗಳ, ಮನಸ್ತಾಪ ಮೂಡಲು ಬಹಳ ಸಲ ನಮ್ಮ ಪೂರ್ವಗ್ರಹಪೀಡಿತ ಭಾವನೆಗಳೇ ಕಾರಣ. ಅನುಮಾನ ಬಂದರೆ ಕೂತು ಮಾತಾಡಿ ಬಗೆಹರಿಸಿಕೊಳ್ಳಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ಮಾತನಾಡಿ ಸುಮ್ಮನೆ ಮುಖ ಕೆಡಿಸಿಕೊಳ್ಳುವುದೇಕೆ? ಅಂತ ಸುಮ್ಮನಾಗಿಬಿಡುತ್ತೇವೆ…ಬಹುತೇಕ ಸಲ. “ಇದಂ ಇತ್ಥಂ’- ಅಂದರೆ, ಹೀಗೇ ಇದ್ದಿರಬಹುದು ಅಂತ ನಮ್ಮ ಮೂಗಿನ ನೇರಕ್ಕೆ ಯೋಚಿಸಿ ತೀರ್ಮಾನಕ್ಕೂ ಬಂದುಬಿಡುತ್ತೇವೆ..ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳು …!
ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನನಗೊಬ್ಬಳು ಗೆಳತಿ ಇದ್ದಾಳೆ. ನನಗಿಂತಲೂ ಆರೇಳು ವರ್ಷಕ್ಕೆ ಸಣ್ಣವಳು. ತಮಿಳುನಾಡು ಮೂಲದವಳು. ಇಲ್ಲಿಗೆ ಬಂದಮೇಲೆ ಕನ್ನಡ ಕಲಿತು, ಕನ್ನಡಿಗರಿಗಿಂತ ಸ್ಪಷ್ಟವಾಗಿ, ಸುಂದರವಾಗಿ ಮಾತಾಡಬಲ್ಲಳು. ಆದ್ದರಿಂದ ಆಕೆಯ ಮೇಲೆ ವಿಶೇಷ ಪ್ರೀತಿ-ಗೌರವ ನನಗೆ. ನಮ್ಮ ಹವ್ಯಾಸ,ಅಭಿರುಚಿಗಳು ಬಹಳಷ್ಟು ಹೊಂದಿಕೊಳ್ಳುವುದರಿಂದ ಬಹುಬೇಗ ನನ್ನ ಆಪ್ತಳಾದಳು.
ಬೇಸಿಗೆ ರಜೆಗೆ ಊರಿಗೆ ಹೋದವಳು ತಿರುಗಿ ಬಂದರೂ ಮಾತಿಗೆ ಸಿಕ್ಕಿರಲಿಲ್ಲ. ಒಂದು ಬೆಳಗ್ಗೆ ದೂರದಲ್ಲಿ ಕಂಡಳು. ಮಾತಾಡಬೇಕು ಅಂದುಕೊಳ್ಳುವ ಹೊತ್ತಿಗೆ ನೋಡಿಯೂ ನೋಡದಂತೆ ಹೋಗಿಬಿಟ್ಟಳು. ಹಿಂದಿನ ದಿನ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸರ್ವ ಸದಸ್ಯರ ಸಭೆ ಇತ್ತು. “ಮೀಟಿಂಗ್‌ನಲ್ಲಿ ನನಗೂ, ಆಕೆಯ ಪತಿಗೂ ಯಾವುದೋ ವಿಷಯಕ್ಕೆ ಸಣ್ಣ ವಾಗ್ವಾದವಾಯಿತು ಇವತ್ತು..’ ಎಂದಿದ್ದರು ಯಜಮಾನರು. “ಛೇ, ಹಾಗೆಲ್ಲ ಮುಖ ಮುರಿದುಕೊಂಡು ಒಂದೇ ಕಡೆ ಇರಲಾಗದು. ನಾಳೆ ನೀವೇ ಮಾತಾಡಿಸಿಬಿಡಿ..ಮುನಿಸು ಮುಂದುವರಿಸಬೇಡಿ’ ಎಂದಿದ್ದೆ. ಮನಸ್ಸು ಅದಕ್ಕೂ ಇದಕ್ಕೂ ತಾಳೆ ಹಾಕಿತು. “ಓ..ಇದಕ್ಕಾಗಿಯೇ ಆಕೆ ಮಾತನಾಡಿಸಿಲ್ಲ ನನ್ನನ್ನು’ ಅಂದುಕೊಂಡೆ. ಕಸಿವಿಸಿಯಾಯಿತು.
ಸಂಜೆ ಟೆರೇಸ್‌ನಲ್ಲಿರುವ ಗಿಡಗಳಿಗೆ ನೀರು ಹಾಕಲು ಹೋದರೆ..ಆಕೆಯ ಪಾಟ್‌ಗಳಲ್ಲಿರುವ ಗಿಡಗಳು ಒಣಗಿದಂತೆ ಅನಿಸಿತು. ಅದಕ್ಕೂ ನೀರು ಹಾಕಲು ಹೋದೆ. ಹಾಗೆಯೇ ಒಂದು ಕ್ಷಣ.. “ಕ್ಷುಲ್ಲಕ ಕಾರಣಕ್ಕೆ ಮುನಿಸಿಕೊಂಡವಳ ಗಿಡಕ್ಕೆ ನೀರು ಯಾಕೆ ಹಾಕಲಿ?’ ಎಂಬ ಯೋಚನೆ ಬಂತು. “ಛೇ.. ಛೇ.. ಗಿಡಗಳೇನು ಮಾಡಿವೆ? ಅದನ್ನು ಸಾಯಿಸಬಾರದು’ ಅಂದುಕೊಂಡು ನೀರು ಹಾಕಿ ಬಂದೆ. ವಾರವಾದರೂ ಆಕೆಯ ಸುಳಿವಿರಲಿಲ್ಲ. ನನ್ನ ಗಿಡಗಳಿಗೆ ನೀರು ಹಾಕಿದವಳು ಆಕೆಯ ಗಿಡಗಳಿಗೂ ನೀರು ಹಾಕುತ್ತಲೇ ಇದ್ದೆ.
ಒಂದು ದಿನ ಬೆಳ್ ಬೆಳಗ್ಗೆ ಕರೆಗಂಟೆಯ ಸದ್ದಿಗೆ ಬಾಗಿಲು ತೆರೆದರೆ.. ಆಕೆ ನಿಂತಿದ್ದಳು… ಕೈಯಲ್ಲಿ ಹೂವು,ಹಣ್ಣು,ತರಕಾರಿಯ ಪೊಟ್ಟಣ. ಮತ್ತೆ “ಧಿಡೀರ್ ಅಂತ ಊರಿಗೆ ಹೋಗಬೇಕಾಯ್ತು. ಭಾವನವರು ಹೋಗಿಬಿಟ್ಟರು ಆಕಸ್ಮಿಕವಾಗಿ. ದೂರದಲ್ಲಿ ನೀವು ಕಂಡರೂ ಗಡಿಬಿಡಿಯಲ್ಲಿ ಹೇಳಲಾಗಲಿಲ್ಲ..ತಗೊಳ್ಳಿ..’ ಅಂದಳು. ಮನಸ್ಸಲ್ಲಿ ಕೊರೆಯುತ್ತಿದ್ದ ಮೀಟಿಂಗ್ ವಿಷಯ ಪ್ರಸ್ತಾಪಿಸಿದೆ. “ಛೇ, ಛೇ.. ಮನೆ ಅಂದಮೇಲೆ ಒಂದು ಮಾತು ಬರುತ್ತೆ..ಹೋಗುತ್ತೆ.
ಅದೆಲ್ಲ ದೊಡ್ಡದು ಮಾಡಬಾರದು. ನಾವೆಲ್ಲ ವಿದ್ಯಾವಂತರು..ಮಕ್ಕಳಿಗೆ ಬುದ್ಧಿ ಹೇಳಬೇಕಾದವರು. ನಾವೇ ಹೀಗೆ ಕ್ಷುಲ್ಲಕವಾಗಿ ಯೋಚಿಸಬಾರದು ಅಲ್ವೇ? ನನ್ನ ಪತಿಯ ಮನಸ್ಸಲ್ಲೂ ಇದೆಲ್ಲ ಇಲ್ಲ. ಅಷ್ಟಕ್ಕೂ, ಇದೆಲ್ಲ ಕೊಟ್ಟು ಬಾ ಅಂತ ಅವರೇ ಕಳಿಸಿದ್ದು. ನಮ್ಮ ತೋಟದಲ್ಲಿ ಬೆಳೆದಿದ್ದು ಇದು..ನನ್ನ ಗಿಡಗಳಿಗೂ ನೀರು ಹಾಕಿದ್ದೀರಿ. ಗೊತ್ತಿತ್ತು ನಂಗೆ ನೀವು ಹಾಕಿಯೇ ಇರ್ತೀರಿ ಅಂತ. ಸದ್ಯ..ಗಿಡಗಳು ಚೆನ್ನಾಗಿವೆ..ಥ್ಯಾಂಕ್ಸ್…’ ಅಂದಳು ಕೃತಜ್ಞತೆಯಿಂದ..ತುಂಬಾ ಚಿಕ್ಕವಳಾಗಿಬಿಟ್ಟೆ ಅನಿಸಿತು..ಆಕೆಯ ವಿಶಾಲ ಮನೋಭಾವದ ಮುಂದೆ..!
* ಸುಮನಾ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.