ಮಲೆನಾಡಿನಲಿ ಮರುಕಳಿಸಿದೆ ಸಂಭ್ರಮ: ನೋವಿನ ನಡುವೆಯೂ ನಲಿವು…
Team Udayavani, Apr 22, 2020, 4:44 PM IST
ಸಾಂದರ್ಭಿಕ ಚಿತ್ರ
ಕೋವಿಡ್ - 19 ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾದ ಕಾರಣದಿಂದ, ನಗರದ ಬಹುತೇಕ ಚಟುವಟಿಕೆಗಳು ಸ್ತಬ್ಧವಾಗಿವೆ. ಜನಜೀವನವು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದೆ. ನಗರದ ಬೀದಿಗಳು ಬಿಕೋ ಎನ್ನುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಮಲೆನಾಡಿನ ಹಳ್ಳಿಗಳಲ್ಲಿ ಸಂಭ್ರಮ ತುಂಬಿಕೊಂಡಿದೆ. ಲಾಕ್‌ಡೌನ್ ಜಾರಿಯಾಗುವ ಸುಳಿವು ಸಿಕ್ಕ ಬಹಳಷ್ಟು ಜನರು, ನಗರ ಬಿಟ್ಟು ತಂತಮ್ಮ ಊರಿಗೆ ಬಂದಿದ್ದರಿಂದ, ಹೆಚ್ಚು ಕಡಿಮೆ ವೃದ್ಧಾಶ್ರಮದಂತಿದ್ದ ಹಳ್ಳಿಮನೆಗಳು, ಈಗ ಮಕ್ಕಳು- ಮೊಮ್ಮಕ್ಕಳ ಕಲರವದಿಂದ ತುಂಬಿಹೋಗಿವೆ. ಹಿರಿಯ ಸಂಬಂಧಿಯೊಬ್ಬರು ಕರೆ ಮಾಡಿ, “ಪ್ರತಿವರ್ಷ ಮಕ್ಕಳು ಊರಿಗೆ ಬರುತ್ತಿದ್ದರೂ ಟ್ಯೂಶನ್, ಆ ಕೆಲಸ, ಈ ಕೆಲಸವೆಂದು ಎರಡೇ ದಿನಗಳಲ್ಲಿ ವಾಪಸು ಹೊರಟುಬಿಡುತ್ತಿದ್ದರು. ಈಗ ಹಾಗಿಲ್ಲ. ಎಲ್ಲರೂ ಇಲ್ಲೇ ಇದ್ದಾರೆ. ಎಲ್ಲರೂ ಮನೆಯ ಸುತ್ತಲಿನ ಬೆಟ್ಟ, ತೋಟ ತಿರುಗಿ ಹಳ್ಳಿಯಲ್ಲಿ ಸಿಗುವ ಸಂಪಿಗೆ, ನೇರಳೆ, ಮುಳ್ಳೆಹಣ್ಣು, ಮುರುಗಲು ಮುಂತಾದ ಹಣ್ಣುಗಳನ್ನು ಇಷ್ಟಪಟ್ಟು ಸವಿಯುವುದು, ಖುಷಿ ಎನಿಸುತ್ತದೆ..’ ಎಂದು ಸಂತಸ ಹಂಚಿಕೊಂಡರು.
ಕೆಲಸದ ಒತ್ತಡ ಹಾಗೂ ಸಮಯದ ಕೊರತೆಯಿಂದಾಗಿ ಪಿಜ್ಜಾ, ಬರ್ಗರ್, ಹೋಟೆಲು ಊಟ ,ಸಿದ್ಧ ಆಹಾರದ ಪಾರ್ಸಲ್‌ಗಳಿಗೆ ಮೊರೆಹೋಗುತ್ತಿದ್ದ ನಗರವಾಸಿ ಮಹಿಳೆಯರು, ಈಗ ಮಲೆನಾಡಿನ ಮನೆಗಳಲ್ಲಿ ರುಚಿರುಚಿಯಾದ ತಾಜಾ ಅಡುಗೆ ಮಾಡಿ ಸವಿಯುತ್ತಿದ್ದಾರೆ. ಮನೆಯ ಸುತ್ತಮುತ್ತ ದೊರಕುವ ದೊಡ್ಡಪತ್ರೆ, ಎಲೆಗುರಿಗೆ, ಮಜ್ಜಿಗೆ ಹುಲ್ಲು, ಬಸಳೆ, ಹರಿವೆ, ನೆಲನೆಲ್ಲಿ, ಒಂದೆಲಗ, ಮುಂತಾದ ಸೊಪ್ಪುಗಳನ್ನು, ಹಲಸು, ಮಾವು, ಬಾಳೆದಿಂಡು, ಮರಗೆಣಸು ಮುಂತಾದವುಗಳನ್ನು ಅಡುಗೆಯಲ್ಲಿ ಬಳಸುತ್ತಿದ್ದಾರೆ. ಔಷಧ ಗುಣ ಹೊಂದಿರುವ ಸೊಪ್ಪುಗಳು, ಹಣ್ಣುಗಳನ್ನು ಆಹಾರದಲ್ಲಿ ಬಳಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರೊಂದಿಗೆ, ಅವಶ್ಯ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ.
ನಿಸರ್ಗದತ್ತ ಶುದ್ಧ ಗಾಳಿ, ನೀರು ಆಹಾರಗಳಿಂದ ವಂಚಿತರಾಗುತ್ತಿದ್ದ ನಗರವಾಸಿಗಳಿಗೆ ಲಾಕ್‌ಡೌನ್ ಕೆಲವು ವಿಚಾರಗಳಲ್ಲಿ ನಷ್ಟ ಉಂಟುಮಾಡಿದ್ದರೂ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ವರವಾಗಿದೆ. ಜೊತೆಗೆ ಹಳ್ಳಿಯ ಆಹಾರ ಪದ್ಧತಿಯನ್ನು ಯುವಜನತೆ ಮತ್ತೂಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ.
ರೇಖಾ ಭಟ್ ಹೊನ್ನಗದ್ದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.