ಎಣ್ಣೆಗಾಯಿ “ಒಳ’ ಗುಟ್ಟು
ಹೊಸರುಚಿಗೆ ಹುಳ ಹಿಡಿಯಿತು...
Team Udayavani, Dec 25, 2019, 4:09 AM IST
ಯಜಮಾನರನ್ನು ಮೆಚ್ಚಿಸಬೇಕು ಎಂಬ ಮಹದಾಸೆಯಿಂದಲೇ ಬದನೆಕಾಯಿ ಎಣ್ಣೆಗಾಯಿ ತಯಾರಿಸಿದೆ. ಸಂಭ್ರಮದಿಂದಲೇ ಬಡಿಸಿದೆ. ಯಜಮಾನರು, ಒಂದು ಬದನೆಕಾಯಿಯನ್ನು ಎತ್ತಿ ಬಿಡಿಸಿದರು: ಅದರ ತುಂಬಾ ಬೆಂದು ಸತ್ತು ಹೋಗಿದ್ದ ಹುಳುಗಳು ಕಾಣಿಸಿದವು!
ಇದು ಮದುವೆಯಾದ ಹೊಸತರಲ್ಲಿ ನಡೆದ ಘಟನೆ. ಅಲ್ಲಿಯವರೆಗೂ ಅಮ್ಮನ ಕೈ ಅಡುಗೆ ಸವಿದು ಆರಾಮಾಗಿದ್ದ ನನಗೆ ಹೆಚ್ಚೆಂದರೆ ಏಳೆಂಟು ಸುಲಭದ ಪದಾರ್ಥಗಳನ್ನು ಮಾಡುವುದಷ್ಟೇ ಗೊತ್ತಿತ್ತು. ನಿಧಾನವಾಗಿ ಕಲಿತುಕೊಂಡರಾಯ್ತು ಅಂತ ಅಮ್ಮ ಧೈರ್ಯ ಹೇಳಿ ಕಳಿಸಿದ್ದಳು.
ಆಗ ಯಜಮಾನರ ಆಫೀಸ್ ನಮ್ಮ ಮನೆಯ ಸಮೀಪದಲ್ಲಿಯೇ ಇತ್ತು. ಅವರು ದಿನವೂ ಮಧ್ಯಾಹ್ನ ಮನೆಗೇ ಊಟಕ್ಕೆ ಬರುತ್ತಿದ್ದುದರಿಂದ, ಬೆಳಗ್ಗೆ ಬೇಗ ಎದ್ದು ಲಂಚ್ ಬಾಕ್ಸ್‌ಗೆ ಗಡಿಬಿಡಿಯಲ್ಲಿ ಅಡುಗೆ ಮಾಡುವುದು ಬೇಡವಾಗಿತ್ತು. ಎಷ್ಟಾದರೂ ಮದುವೆಯಾದ ಹೊಸತು, ಗಂಡನಿಗೆ ಬೊಂಬಾಟ್ ಅಡುಗೆಗಳನ್ನು ಮಾಡಿ, ಬಡಿಸುವ ಆಸೆ ನನ್ನದು. ಆದರೆ, ಮೊದಲೇ ಹೇಳಿದೆನಲ್ಲ; ನನಗೆ ಬರುತ್ತಿದ್ದುದೇ ಕೆಲವು ಅಡುಗೆಗಳು. ಹಾಗಾಗಿ, ಹೊಸ ಅಡುಗೆ ಕಲಿತು, ಮನೆಯವರಿಗೆ ಸರ್‌ಪ್ರೈಸ್ ಕೊಡೋಣ ಅಂತ ನಿರ್ಧರಿಸಿದೆ.
ಇಂದಿನ ದಿನಗಳಂತೆ ಯೂಟ್ಯೂಬ್ ಆಗಲಿ, ಅಡುಗೆ ಚಾನೆಲ್‌ಗಳಾಗಲಿ ಆಗ ಇರಲಿಲ್ಲ. ಹೊಸ ರೆಸಿಪಿಯನ್ನು ಕಲಿಯಲು ನನಗಿದ್ದ ಏಕೈಕ ಮಾರ್ಗವೆಂದರೆ, ಅಡುಗೆ ಪುಸ್ತಕ. ಹತ್ತಿರದ ಅಂಗಡಿಗೆ ಹೋಗಿ, ಅಡುಗೆ ಪುಸ್ತಕ ಖರೀದಿಸಿದೆ. ಅದರಲ್ಲಿ ಬಹಳಷ್ಟು ರೆಸಿಪಿಗಳಿದ್ದವು. ಎಲ್ಲವನ್ನೂ ಗಮನವಿಟ್ಟು ಓದಿದೆ. ಅದರಲ್ಲಿ, “ಬದನೆಕಾಯಿ ಎಣ್ಣೆಗಾಯಿ’ ರೆಸಿಪಿ ನನ್ನ ಬಾಯಲ್ಲಿ ನೀರೂರಿಸಿತು. ಹೇಗೆ ತಯಾರಿಸುವುದೆಂದು ಪುನಃ ಪುನಃ ಓದಿ ಕಂಠಪಾಠ ಮಾಡಿಕೊಂಡೆ.
ಗಡಿಬಿಡಿಯಲ್ಲಿ ತರಕಾರಿ ಅಂಗಡಿಗೆ ಹೋಗಿ ಅರ್ಧ ಕಿಲೋ ಬದನೆಕಾಯಿ ತಂದೆ. ಅದನ್ನು ತೊಳೆದು ನಾಲ್ಕು ಕಡೆಗಳಲ್ಲಿ ಸೀಳಿ, ಮಸಾಲೆ ತಯಾರಿಸಿ ಅದರಲ್ಲಿ ತುಂಬಿಸಿ, ಪುಸ್ತಕದಲ್ಲಿ ತಿಳಿಸಿದಂತೆ ಬದನೆಕಾಯಿಗಳನ್ನು ಎಣ್ಣೆಯಲ್ಲಿ ಬೇಯಿಸಿದೆ. ಬೆಂದ ನಂತರ, ಮಸಾಲೆಯನ್ನು ಕೈಗೆ ಹಾಕಿ ನೆಕ್ಕಿ ನೋಡಿದೆ. ತುಂಬಾ ರುಚಿಯಾಗಿದೆ ಅಂತನ್ನಿಸಿತು. ಯಜಮಾನರು ಎಣ್ಣೆಗಾಯಿ ಸವಿದು, ನನ್ನನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆಂದು ಮನಸ್ಸಿನಲ್ಲೇ ಬೀಗಿದೆ.
ಮಧ್ಯಾಹ್ನ ಊಟಕ್ಕೆ ಮನೆಗೆ ಬಂದ ಅವರಿಗೆ ಅನ್ನದೊಂದಿಗೆ ಎಣ್ಣೆಗಾಯಿಯನ್ನು ಬಡಿಸಿದೆ. ಅವರು ತಿನ್ನುವುದನ್ನೇ ನೋಡುತ್ತಾ ನಿಂತಿದ್ದೆ. ತಕ್ಷಣ ಅವರು ಒಂದು ಬದನೆಕಾಯಿಯನ್ನು ಎತ್ತಿ, ಮಧ್ಯದಲ್ಲಿ ಬಿಡಿಸಿದರು. ಅದರ ತುಂಬಾ ಬಿಳಿ ಹುಳಗಳಿದ್ದವು! ಹುಳುಗಳೆಲ್ಲಾ ಎಣ್ಣೆಯಲ್ಲಿ ಬೆಂದು ಸತ್ತು ಹೋಗಿದ್ದವು. ಅದನ್ನು ನೋಡಿ ನನಗೆ ಅಳುವೇ ಬಂದುಬಿಟ್ಟಿತು. “ಹೋಗಲಿ ಬಿಡು, ನೀನು ಬದನೆಕಾಯಿಯನ್ನು ಆರಿಸಿ ತಂದಿಲ್ಲ ಅಂತ ಕಾಣುತ್ತೆ. ಇನ್ನೊಮ್ಮೆ ತಯಾರಿಸುವಾಗ, ಮೊದಲು ಬದನೆಕಾಯಿಗೆ ಹುಳ ಹಿಡಿದಿದೆಯಾ ಅಂತ ನೋಡು. ತರಕಾರಿ ಕತ್ತರಿಸುವಾಗಲೂ ಅದರ ಬಗ್ಗೆ ಗಮನ ಕೊಡು. ಇಷ್ಟು ಕಷ್ಟಪಟ್ಟು ಮಾಡಿದ್ದು ಹಾಳಾಯ್ತಲ್ಲ ಅಂತ ಕೊರಗಬೇಡ. ಈಗ ನನಗೆ ಮೊಸರು ಬಡಿಸು’ ಅಂತ ಸಮಾಧಾನ ಮಾಡಿದರು. ಅದಾದ ನಂತರ, ತರಕಾರಿ ಆರಿಸುವಾಗ ಹೆಚ್ಚು ಜಾಗರೂಕಳಾಗಿರುತ್ತೇನೆ. ಆದರೂ, ಇಂದಿಗೂ ನನಗೆ ಬದನೆಕಾಯಿ ಎಣ್ಣೆಗಾಯಿಯೆಂದರೆ “ಒಳಗೊಳಗೇ’ ಭಯವಾಗುತ್ತದೆ.
(ಈ ಅಂಕಣ, ಈ ವಾರಕ್ಕೆ ಮುಕ್ತಾಯವಾಗುತ್ತಿದೆ. ಏನೋ ಮಾಡಲು ಹೋಗಿ, ಅದು ಮತ್ತೇನೋ ಆಗಿ, ಒಂದು ಹಾಸ್ಯದ ಪ್ರಸಂಗವಾಗಿ ಬದಲಾದ, ಮಧುರ ನೆನಪಾಗಿ ಜೊತೆಗೇ ಉಳಿದ ಸಂದರ್ಭಗಳನ್ನು ಅಕ್ಷರಗಳಲ್ಲಿ ಪೋಣಿಸಿಕೊಟ್ಟ ಎಲ್ಲ ಲೇಖಕಿಯರಿಗೂ ಕೃತಜ್ಞತೆಗಳು- ಸಂಪಾದಕರು)
-ವೇದಾವತಿ ಎಚ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.