ಪುಷ್ಪಕ ವಿಮಾನ ಸನಿಹಕೆ ಬಂತು…
Team Udayavani, May 30, 2018, 12:22 PM IST
“ನಿನ್ನನ್ನು ಕಷ್ಟದಿಂದ ಪಾರುಮಾಡುವುದು ನನ್ನ ಕರ್ತವ್ಯವಾಗಿತ್ತು. ಅದನ್ನು ಮಾಡಿದ್ದೇನೆ. ನೀನು ಸ್ವತಂತ್ರಳು. ಇಷ್ಟವಿದ್ದಲ್ಲಿಗೆ ಹೋಗಬಹುದು. ರಾಕ್ಷಸರ ನಾಡಿನಲ್ಲಿದ್ದವಳನ್ನು ಸೇರಿಸಿಕೊಂಡರೆ ಲೋಕದ ಜನ ಒಪ್ಪರು. ನಾನು ಪ್ರಜೆಗಳಿಗೆ ಅಧೀನ’ ಎಂದು ಸೆಟೆದುನಿಂತ ರಾಮನ ನಿಲುವನ್ನು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗಲಿಲ್ಲ…
– – –
ಯಾವ ಪಾಪಕ್ಕೆ ನನಗೆ ಈ ಶಿಕ್ಷೆ? ಪೂರ್ವಜನ್ಮದ ಕರ್ಮಪರಿಪಾಕ ಇರಬೇಕು. ಸುತ್ತಲೂ ರಕ್ಕಸಿ ಮುಖಗಳು. ರಾಕ್ಷಸೀ ಮಾತುಗಳು. ಕಾದ ಕಬ್ಬಿಣ ಕಿವಿಗೆ ಬಿದ್ದ ಅನುಭವ.
ಒಂದು ದಿನ… ಅರ್ಧರಾತ್ರಿಯ ಸಮಯ. ಆ ದುರುಳ ನನ್ನ ಬಳಿಗೆ ಬಂದ. ಅವನ ಉದ್ದೇಶ ಅರ್ಥವಾಗಿಹೋಯಿತು. ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟು ಹೇಳಿದೆ, “ನೋಡು, ನಿನ್ನ ಸಕಲೈಶ್ವರ್ಯ ಹಾಗೂ ನೀನು ಈ ತೃಣಕ್ಕೆ ಸಮಾನ. ಮಾನಹೀನ ನಡೆಯವನೇ, ಒಬ್ಬ ರಾಜನಾಗಿ, ಶಿವಭಕ್ತನಾಗಿ ಪರಸ್ತ್ರೀ ಬಳಿಗೆ ಬರಲು ನಾಚಿಕೆಯಾಗದೇ? ಒಬ್ಬ ಸ್ತ್ರೀಗಾಗಿ ಸರ್ವನಾಶ ಹೊಂದಬೇಡ. ಸ್ವಾರ್ಥಕ್ಕಾಗಿ ಲಂಕೆಯನ್ನು ವಿಧವೆಯರ, ಅನಾಥ ಮಕ್ಕಳ ರಾಜ್ಯವನ್ನಾಗಿ ಮಾಡಬೇಡ. ಕರುಣಾಳು ರಾಮ ಈಗಲೂ ನಿನ್ನನ್ನು ಕ್ಷಮಿಸುತ್ತಾನೆ. ನನ್ನನ್ನು ಅವನಿಗೆ ಒಪ್ಪಿಸು, ಭವಿಷ್ಯದ ಅನಾಹುತ ತಪ್ಪಿಸು, ನಿನ್ನ ವರ್ತನೆ ಸರಿಯೆ? ಸಾದ್ವಿ ಮಂಡೋದರಿಯನ್ನು ಕೇಳು. ನಿನ್ನಾತ್ಮಸಾಕ್ಷಿಯನ್ನೇ ಕೇಳಿಕೋ’ ಎಂದೆ.
“ಇನ್ನು ಹತ್ತು ತಿಂಗಳಲ್ಲಿ. ನೀನಾಗಿಯೇ ನನ್ನವಳಾಗದಿದ್ದರೆ, ನಿನ್ನನ್ನು ತುಂಡು ತುಂಡು ಮಾಡಿ ಅಡುಗೆ ಮನೆಗೆ ಕಳುಹಿಸಲು ಆಜ್ಞೆ ಮಾಡುತ್ತೇನೆ. ನಿನ್ನ ಮಾಂಸವನ್ನಾದರೂ ತಿಂದು ತೃಪ್ತಿಪಡುತ್ತೇನೆ’ ಅಂದ. “ಅಲ್ಲಿಯವರೆಗೆ ಆಯುಷ್ಯ ಇರುವುದೋ ನೋಡಿಕೋ ಹೋಗು’ ಎಂದೆ.
ನನ್ನ ಧೈರ್ಯಕ್ಕೆ ನನಗೇ ಹೆಮ್ಮೆ ಎನಿಸಿತು. ಅಪ್ಪ ನೆನಪಾದರು. ಪಕ್ಷಿರಾಜ ಜಟಾಯು ನೆನಪಾದ. ಅನಸೂಯಾ ಅಜ್ಜಿ ನೆನಪಾದಳು.
ಕ್ಷಣಕ್ಷಣವೂ ಬದುಕು ಅಸಹನೀಯ ಎನಿಸಿತೊಡಗಿತು. ಇಂಥಾ ಬದುಕನ್ನು ನಾನು ಬದುಕಬೇಕಾ? ಈ ಅಶೋಕವನ ನನ್ನ ಪಾಲಿಗೆ ಶೋಕವನವಾಯಿತಲ್ಲಾ! ಪತಿದೇವ, ಎಲ್ಲಿದ್ದೀರಿ? ಹೇಗಿದ್ದೀರಿ? ನನಗೆ ಯಾವಾಗ ಈ ನರಕದಿಂದ ಮುಕ್ತಿ? ಎಂದು ಹಳಹಳಿಸಿದೆ.
ಅಂದೇ ರಾತ್ರಿ… ಅನಿರೀಕ್ಷಿತ ಅಚ್ಚರಿ. ಇದ್ದಕ್ಕಿದ್ದಂತೆ ಶಿಂಶಪಾವೃಕ್ಷದೆಡೆಯಿಂದ (ಈ ಮರದ ಕಟ್ಟೆಯೇ ನನ್ನ ಅರಮನೆ) ಉಲಿದು ಬಂತು ರಾಮನಾಮ! ಕಿವಿಗೆ ಅಮೃತಸೇಚನ. ಮೈಮನಗಳಲ್ಲಿ ಅನಿರ್ವಚನೀಯ ಆನಂದ. ವಾತಾವರಣವೇ ಬದಲಾಯಿತು, ಶುಭ್ರವಾಯಿತು. ಮತ್ತಾವ ಮಾಯೆ ಬಂತಪ್ಪಾ? ರಕ್ಕಸರಾಜ್ಯದಲ್ಲಿ ರಾಮಭಜನೆ! ರಾಮನಾಮವನ್ನೂ ನಂಬಲಾಗದಷ್ಟು ಅಪ್ರತ್ಯಯ ನನಗೆ. ಆದರೆ, ಕ್ಷಣಮಾತ್ರದಲ್ಲಿ ತಿಳಿದುಹೋಯಿತು. ಇದು ಮಾಯೆಯಲ್ಲ, ಮಾಯೆಯನ್ನು ಬಿಡಿಸುವ ಮೋಕ್ಷಮಂತ್ರ! ಕಣ್ಣರಳಿಸಿದೆ, ಹೊರಳಿಸಿದೆ..
ಯಾರನ್ನು ಪ್ರಾಣಕ್ಕಿಂತ ಪ್ರಿಯನೆಂದು ಭಾವಿಸಿದ್ದೇನೆಯೋ, ಯಾರಿಗಾಗಿ ಜೀವ ಹಿಡಿದುಕೊಂಡಿದ್ದೇನೆಯೋ, ಯಾರು ನನ್ನನ್ನೂ ಹೀಗೆಂದೇ ಭಾವಿಸಿದ್ದಾರೆಯೋ ಆ ರಾಮನೇ.. ಅಲ್ಲ ಅಲ್ಲ, ನನ್ನ ದೇವರೇ ಕಣ್ಣಮುಂದೆ ನಿಂತಂತಾಯಿತು. ಆಂ.. ಕನಸಾ ಎಂದುಕೊಂಡೆ. ನಿದ್ದೆಯೇ ಇಲ್ಲದಾಗ ಕನಸೆಲ್ಲಿಂದ?
ಕಪಿರೂಪದ ದಿವ್ಯ ಪುರುಷ ನನ್ನ ಮುಂದೆ ನಿಂತಿದ್ದ. ರಾಮನ ಸಂದೇಶ ಹೊತ್ತು ತಂದಿದ್ದ. “ದಾಸೋಹಂ ಕೋಸಲೇಂದ್ರಸ್ಯ’ ಎಂದು ಪರಿಚಯಿಸಿಕೊಂಡ. ತಾನು ಹನುಮಂತ ಎಂದು ಹೇಳಲೇ ಇಲ್ಲ. ರಾಮಸೇವಕ ಎನ್ನುವುದರಲ್ಲೇ ಆನಂದಪಡುತ್ತಿದ್ದ. “ಇಡೀ ಲಂಕೆ, ಇದರ ಸ್ವರೂಪ, ನಿಮ್ಮ ಸಂಕಟ, ನಿಮ್ಮ ಶಕ್ತಿ ಎಲ್ಲವೂ ಅರಿವಾಯಿತು ತಾಯಿ. ನಿಮ್ಮ ಸಂಕಟ ದೂರವಾಗುವ ಸಮಯ ದೂರವಿಲ್ಲ’ ಎಂದ.
ಭರವಸೆಯ ಬೆಳಕು ಫಳ್ ಎಂದಿತು.
“ನನ್ನ ಜನ್ಮಾಂತರದ ಬಂಧುವೇ, ನಿನಗೆ ಶತಶತ ಪ್ರಣಾಮಗಳು, (ನಮಸ್ಕರಿಸಿದ್ದನ್ನು ಆತ ತಡೆದ) ರಾಮ ಕಳುಹಿಸಿರುವ ಈ ಮುದ್ರೆಯುಂಗುರದಲ್ಲಿ ನನ್ನ ಮನಮೋಹನನ ಪ್ರೀತಿಯ ಎರಕವಿದೆ. ಇಗೋ ಈ ಚೂಡಾಮಣಿಯಲ್ಲಿ ನನ್ನ ರಾಮಪ್ರೀತಿ ತುಂಬಿರಿಸಿದ್ದೇನೆ. ಭೌತಿಕವಾಗಿ ದೂರವಾಗಿರುವ ನಮ್ಮನ್ನು ಮತ್ತೆ ಒಂದು ಮಾಡುವ ಸೇತುವೆ ನೀನು. ನಿನಗೆ ಧನ್ಯವಾದ ಹೇಳಲು ನನ್ನಲ್ಲಿ ಶಬ್ದಗಳಿಲ್ಲ. ಈ ನರಕದಿಂದ ಬಿಡುಗಡೆಯಾಗಬೇಕು. ಅದಕ್ಕೆ ಏನು ಬೇಕೋ ಅದನ್ನು ಮಾಡು’ ಎಂದೆ.
“ತಾಯಿ, ಆ ದುಷ್ಟ ರಾವಣನ ಸಹಿತ ಇಡೀ ಲಂಕೆಯನ್ನೇ ಸುಡುವ ಶಕ್ತಿ ನನಗಿದೆ. ಅನುಮತಿ ಕೊಡಿ’ ಎಂದ. “ಬೇಡ ಹನುಮ, ದುಡುಕೇ ಕೆಡುಕು. ಅಷ್ಟಕ್ಕೂ ಈ ನಿರಪರಾಧಿಗಳನ್ನು ಹಿಂಸಿಸಲು ನಮಗೇನು ಅಧಿಕಾರವಿದೆ? ಸುಡಬೇಕಾದ್ದು ಲಂಕೆಯನ್ನಲ್ಲ. ಆ ದುಷ್ಟ ಮಾತ್ರ ನಮ್ಮ ಗುರಿ. ನನ್ನ ರಾಮನೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಿ’ ಎಂದೆ.
ಲಂಕೆಯ ಸರ್ವನಾಶವನ್ನು ತಪ್ಪಿಸಲು ನಾನೂ, ರಾಮನೂ ಇನ್ನಿಲ್ಲದ ಪ್ರಯತ್ನ ಮಾಡಿದೆವು. ರಾವಣನ ತಮ್ಮಂದಿರಾದ ವಿಭೀಷಣ, ಕುಂಭಕರ್ಣ, ಸಾದ್ವಿ ಮಂಡೋದರಿ ಸಹಿತ ಎಲ್ಲರ ಪ್ರಯತ್ನವೂ ವ್ಯರ್ಥವಾಯಿತು. ದ್ವಿತೀಯ ಯುಗದ ಪ್ರಪ್ರಥಮ ಮಹಾಯುದ್ಧಕ್ಕೆ ಲಂಕೆ ಸಾಕ್ಷಿಯಾಯಿತು. ಬಹುಶಃ ಜಗತ್ತಿನಲ್ಲಿ ಶಾಂತಿ ಕಷ್ಟ. ಯುದ್ಧವೇ ಸುಲಭವಿರಬೇಕು!
– – –
ಒಂದು ವರ್ಷ ಕ್ಷಣಕ್ಷಣವೂ ಅಗ್ನಿಪರೀಕ್ಷೆ. ಎಲ್ಲವೂ ಸುಖಾಂತವಾಯಿತು ಎನ್ನುವಷ್ಟರಲ್ಲಿ ಮತ್ತೂಂದು ಅನಿರೀಕ್ಷಿತ ಆಘಾತ!
ನೋವುಗಳನ್ನು ಅನುಭವಿಸುವುದಕ್ಕಾಗಿಯೇ ನಾನು ಹುಟ್ಟಿದ್ದ? ನೋವುಗಳು ನನಗಾಗಿಯೇ ಹುಟ್ಟಿವೆಯಾ? ಈಗಿನ ಸಂಕಟ ಕೈಹಿಡಿದವರಿಂದಲೇ! ಯಾವ ಮಹಿಳೆಗೂ ಇಂಥ ಪರಿಸ್ಥಿತಿ ಬಾರದಿರಲಿ…
“ನಿನ್ನನ್ನು ಕಷ್ಟದಿಂದ ಪಾರುಮಾಡುವುದು ನನ್ನ ಕರ್ತವ್ಯವಾಗಿತ್ತು. ಅದನ್ನು ಮಾಡಿದ್ದೇನೆ. ನೀನು ಸ್ವತಂತ್ರಳು. ಇಷ್ಟವಿದ್ದಲ್ಲಿಗೆ ಹೋಗಬಹುದು. ರಾಕ್ಷಸರ ನಾಡಿನಲ್ಲಿದ್ದವಳನ್ನು ಸೇರಿಸಿಕೊಂಡರೆ ಲೋಕದ ಜನ ಒಪ್ಪರು. ನಾನು ಪ್ರಜೆಗಳಿಗೆ ಅಧೀನ’ ಎಂದು ಸೆಟೆದುನಿಂತ ರಾಮನ ನಿಲುವನ್ನು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗಲಿಲ್ಲ.
ನಿಜದಲ್ಲಿ ಅಗ್ನಿದಿವ್ಯಕ್ಕೆ ರಾಮ ಸೂಚಿಸಿರಲಿಲ್ಲ. ಆದರೆ, ಅಗ್ನಿಗಿಂತಲೂ ಹೆಚ್ಚು ಹೃದಯವನ್ನು ಸುಡುವ ಮಾತನಾಡಿದ್ದ. ನಾನು ಏನನ್ನೂ ಸಹಿಸಬಲ್ಲೆ, ಚಾರಿತ್ರÂಸಂಶಯವನ್ನು ಮಾತ್ರ ಸಹಿಸೆ. ಪ್ರಪಂಚದಲ್ಲಿ ಪವಿತ್ರ ದಾಂಪತ್ಯ ಹಾಳು ಮಾಡುವುದೇ ಈ ಸಂಶಯಪಿಶಾಚಿ. ಪವಿತ್ರದಾಂಪತ್ಯಕ್ಕೆ ಇಬ್ಬರೂ ಸಮಾನ ಜವಾಬ್ದಾರರು. ಹೆಂಡತಿ ಪತಿವ್ರತೆಯಾಗಿರಬೇಕು; ಗಂಡ ಪತ್ನಿàವ್ರತನಾಗಿರಬೇಕು. ನಾನಾಗಿಯೇ ನನ್ನನ್ನು ಅಗ್ನಿಪರೀಕ್ಷೆಗೆ ಒಡ್ಡಿಕೊಂಡೆ.
ಕಲ್ಲಾಗಿದ್ದ ಹೆಣ್ಣಿಗೆ ಜೀವಕೊಟ್ಟ ಕರುಣಾಮೂರ್ತಿ, ಮರಗಿಡಬಳ್ಳಿಗಳನ್ನು ಕುರಿತು ನನ್ನ ಸೀತೆಯನ್ನೇನಾದರೂ ಕಂಡಿರಾ? ವೈದೇಹಿ ಏನಾದಳ್ಳೋ ಎಂದು ನನಗಾಗಿ ಕರಗಿದ ಪ್ರೇಮಮೂರ್ತಿ ರಾಮ. ಅವನ ಹೃದಯವೇಕೆ ಇಂದು ಕಲ್ಲಾಯಿತು? ಇಷ್ಟಕ್ಕಾಗಿ ಅಷ್ಟೆಲ್ಲ ಹೋರಾಟವಾ? ಎಲ್ಲ ನಾಟಕವಾ? ಉತ್ತರ ಸಾಮಾನ್ಯರಿಗೆ ಹೊಳೆಯದು.
ಯೋಚಿಸಿ ನೋಡಿ, ನನ್ನ ಪರಿಸ್ಥಿತಿ ಏನಾಗಿರಬೇಡ? ಪ್ರಭು, ನನ್ನನ್ನು ಇನ್ನೆಷ್ಟು ಪರೀಕ್ಷಿಸಬೇಕೆಂದಿರುವೆ ಎಂದು ಆಕ್ಷೇಪಿಸಲಾ ಎಂದುಕೊಂಡೆ. ಆಕ್ಷೇಪ ನನ್ನ ಜಾಯಮಾನವಲ್ಲ. ಬಂದಿದ್ದನ್ನು ಸ್ವೀಕರಿಸುತ್ತೇನಷ್ಟೇ. ಲೋಕದ ಸಮ್ಮುಖದಲ್ಲೇ ಅಗ್ನಿಪರೀಕ್ಷೆಗೆ ಒಡ್ಡಿಕೊಂಡೆ…
“ಭೂಮಿಜಾತೆ, ಭೂಮಿಯಷ್ಟೇ ಸಹನಾ ಮೂರ್ತಿ ನೀನು. ನಿನ್ನನ್ನು ಪರೀಕ್ಷೆಗೊಡ್ಡಿದ ಹಿಂದಿನ ಮನಃಸ್ಥಿತಿಯನ್ನು ಅರಿತುಕೊಂಡೆಯಲ್ಲ! ನಿನ್ನ ಎತ್ತರಕ್ಕೇರಲು ನಾನೂ ಪ್ರಯತ್ನಿಸುವೆ. ನನ್ನ ಹೃದಯವೇ ಆಗಿರುವ ನಿನ್ನನ್ನು ಸಂಶಯಿಸುವೆನೇ? ನಿಷ್ಕಳಂಕ ಅಮರಚರಿತೆ ನೀನು. ಈ ಸಂದರ್ಭದಲ್ಲಿ ನಿನಗೆ ನಾನು ಆಡಿದ ಕಟುಮಾತು ನನ್ನದಲ್ಲ; ಸಾಧ್ಯವಾದರೆ ಕ್ಷಮಿಸು’ ಎಂದ ರಾಮ.
ಪತಿದೇವರ ಬಾಯಿ ಮೇಲೆ ಮೆಲ್ಲನೆ ಕೈಯಿಟ್ಟು ಎದೆಗೊರಗಿದೆ. ಪುಷ್ಪಕ ವಿಮಾನ ಸನಿಹಕ್ಕೆ ಬಂತು…
(ಮುಗಿಯಿತು)
– ಸಿ.ಎ. ಭಾಸ್ಕರ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.