ಪಾದ ಪೂಜೆ: ಪಾದಾಯ ತಸ್ಮೆ„ ನಮಃ
Team Udayavani, Apr 12, 2017, 6:56 AM IST
ಊರೆಲ್ಲ ಸುತ್ತಿಸುವ ಪಾದಗಳ ಬಗ್ಗೆ ಹೆಣ್ಮಕ್ಕಳಿಗೆ ಪ್ರೀತಿ ಹೆಚ್ಚು. ಅದಕ್ಕಂತಲೇ ಅವರು ಪಾದ ತುಸು ಬಿರುಕು ಮೂಡಿದರೂ, ಚಿಂತಾಕ್ರಾಂತರಾಗುತ್ತಾರೆ. ಪಾದವನ್ನು ಬೇಗ ನುಣುಪು ಮಾಡಿಕೊಳ್ಳಲು ಪೆಡಿಕ್ಯೂರ್‌ನ ಮೊರೆ ಹೋಗುತ್ತಾರೆ. ಅಷ್ಟಕ್ಕೂ ಪೆಡಿಕ್ಯೂರ್ ಅನ್ನು ಏಕೆ ಮಾಡಿಕೊಳ್ಳಬೇಕು? ಪಾದಕ್ಕೆ ಇದರಿಂದ ಅನುಕೂಲವೇನು?
ಸುಂದರ ಪಾದದ ಒಡತಿಯಾಗಲು ಎಲ್ಲರಿಗೂ ಇಷ್ಟ. ಪ್ರತಿ ಹೆಣ್ಣೂ ತನ್ನ ಪಾದದ ಕುರಿತು ಹೆಚ್ಚು ಆಸ್ಥೆ ವಹಿಸುತ್ತಾಳೆ. ಒಡೆದ ಹಿಮ್ಮಡಿ, ಉಗುರಿನ ಸಂದುಗಳಲ್ಲಿ ಸೇರಿರುವ ಮಣ್ಣು ಪಾದದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ದೇಹದ ಇಡೀ ಭಾರವನ್ನು ಹೊರುವ ಪಾದದ ಮೇಲೆ ಒಂದಷ್ಟು ಅಕ್ಕರೆ ತೋರಿಸಿದರೆ, ಅದು ಸ್ವತ್ಛವಾಗುತ್ತದೆ. ದೇಹದ ಇಡೀ ಭಾರವನ್ನು ಹೊರುವುದರಿಂದ ಪಾದದ ಮೇಲೆ ಅಧಿಕ ಒತ್ತಡ ಬೀರುತ್ತದೆ. ಹಾಗಾಗಿ ಹೆಂಗಳೆಯರು ತಿಂಗಳಿಗೆ ಒಮ್ಮೆಯಾದರೂ ಪೆಡಿಕ್ಯೂರ್ ಮಾಡಿಸಿಕೊಳ್ಳುವುದು ಉತ್ತಮ. ಪಾರ್ಲರ್‌ಗೆ ಹೋಗುವುದಕ್ಕೆ ಆಗದಿದ್ರೂ, ಮನೆಯಲ್ಲೇ ಆಲಿವ್ ಅಥವಾ ಕೊಬ್ಬರಿ ಎಣ್ಣೆಯಿಂದ ಹದವಾಗಿ ಮಸಾಜ್ ಮಾಡಿಕೊಂಡು ಪಾದದ ಸಂರಕ್ಷಣೆ ಮಾಡಿಕೊಳ್ಳುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು.
ಯಾರಿಗೆ ಯಾವ ಪೆಡಿಕ್ಯೂರ್?
– ಫೂಟ್‌ಲಾಜಿಕ್ ಪೆಡಿಕ್ಯೂರ್ ಅನ್ನು ಸಾಮಾನ್ಯವಾಗಿ ಮಧುಮೇಹಿಗಳು ಮಾಡಿಸಿಕೊಳ್ತಾರೆ. ಮಧುಮೇಹಿಗಳು ಹೆಚ್ಚು ಮಸಾಜ್ ಇರುವ ಪೆಡಿಕ್ಯೂರ್ ಬಳಸದೇ ಇರುವುದು ಒಳ್ಳೆಯದು.
– ಚಾಕೋಲೇಟ್ ಪೆಡಿಕ್ಯೂರ್ ಅನ್ನು ಒಣಚರ್ಮ ಇರುವವರು ಮಾಡಿಸಿಕೊಂಡರೆ ಉತ್ತಮ.
– ಗ್ರೀನ್ ಟೀ ಪೆಡಿಕ್ಯೂರ್ ಎಣ್ಣೆ ಚರ್ಮದವರಿಗೆ ಸೂಕ್ತ.
– ತುಂಬಾ ಒಣಚರ್ಮ ಇರುವವರಿಗೆ ಪ್ಯಾರಫಿನ್ ಒಳ್ಳೆಯದು. ಇದು ಹೆಚ್ಚು ತೇವಾಂಶವನ್ನು ನೀಡುತ್ತದೆ.
– ಈಗ ಫಿಶ್ ಪೆಡಿಕ್ಯೂರ್‌ನದ್ದೇ ಟ್ರೆಂಡು. ಮೀನುಗಳಿರುವ ನೀರಿನ ತೊಟ್ಟಿಯಲ್ಲಿ ಕಾಲುಗಳನ್ನಿಟ್ಟರೆ ಇಟ್ಟರೆ 15 ನಿಮಿಷದಲ್ಲಿ ಬಿರುಕು ಪಾದಗಳನ್ನು ನುಣುಪಾಗಿಸುತ್ತವೆ. ನೀರಿನಲ್ಲಿ ನೆನೆದ ಪಾದದ ಮೇಲ್ಭಾಗವನ್ನು ಮೀನುಗಳು ಕಚ್ಚಿ ತಿನ್ನುತ್ತವೆ. ಮೀನಿನ ಎಂಜಲಿನಲ್ಲಿ ಆಂಟಿಸೆಫ್ಟಿಕ್ ಗುಣ ಇರುವುದರಿಂದ ಫಿಶ್ ಪೆಡಿಕ್ಯೂರ್‌ನಿಂದ ಕಾಲಿನ ಹುಣ್ಣನ್ನು ವಾಸಿ ಮಾಡಲು ಸಾಧ್ಯವಿದೆ. ಮೀನುಗಳು ಒರಟು ಚರ್ಮವನ್ನು ತಿನ್ನುವಾಗ ಕಾಲಿಗೆ ಉತ್ತಮ ಮಸಾಜ್ ಸಿಗುತ್ತದೆ.
ಪೆಡಿಕ್ಯೂರ್‌ನ ಉಪಯೋಗ
– ನಿಯಮಿತವಾಗಿ ಪೆಡಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಪಾದದ ಚರ್ಮದ ಒರಟುತನ ದೂರವಾಗಿ, ನುಣುಪಾಗುತ್ತದೆ.
– ಹಿಮ್ಮಡಿ ಒಡೆತ, ಉಗುರು ಸುತ್ತುವಿನಂಥ ಸಮಸ್ಯೆಗಳಿಗೆ ಮುಕ್ತಿ.
– ಹೈ ಹೀಲ್ಡ್ ಚಪ್ಪಲಿಯನ್ನು ಹೆಚ್ಚು ಬಳಸುವವರ ಪಾದ ಒಂದು ರೀತಿ ಗಡುಸಾಗಿರುತ್ತದೆ. ಪೆಡಿಕ್ಯೂರ್ ಇದನ್ನು ದೂರಮಾಡುತ್ತದೆ.
– ಪೆಡಿಕ್ಯೂರ್ ರಕ್ತ ಸಂಚಲನಕ್ಕೆ ಒಳ್ಳೆಯದು.
ಪಾದದ ರಕ್ಷಣೆ ಹೇಗೆ?
– ಲೋಳೆಸರವನ್ನು ಆಗಾಗ್ಗೆ ಕಾಲಿನ ಹಿಮ್ಮಡಿ, ಮೇಲಾºಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ.
– ತೇವಾಂಶವನ್ನು ಕಾಪಾಡುವ ಕ್ರೀಮ್ ಹೆಚ್ಚುವ ಅಭ್ಯಾಸ ರೂಢಿಸಿಕೊಳ್ಳಿ.
– ಕಾಲುಗಳ ಸ್ವತ್ಛತೆಯ ಬಗ್ಗೆ ಗಮನಹರಿಸಿ.
– ಬಿರುಕು ಪಾದವಿದ್ದರೆ ಕಾಲುಚೀಲ ಧರಿಸಿ. ಇದರಿಂದ ಧೂಳಿಗೆ ಪಾದ ತೆರೆದುಕೊಳ್ಳುವುದನ್ನು ತಪ್ಪಿಸಬಹುದು.
– ಆಲಿವ್ ಆಯಿಲ್ ಬಿಸಿಮಾಡಿಕೊಂಡು ಪಾದಗಳಿಗೆ ಲೇಪಿಸಿ.
– ಬೇಸಿಗೆಯ ಸಮಯದಲ್ಲಿ ಎಸ್‌ಪಿಎಫ್ 30ಕ್ಕೂ ಅಧಿಕವಿರುವ ಸನ್‌ಸ್ಕ್ರೀನ್ ಕ್ರೀಮ್ ಬಳಸಬೇಕು.
– ಪಾದ ಮೃದುವಾಗಲು ರಾತ್ರಿಯ ವೇಳೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿಮಾಡಿಕೊಂಡು ಪಾದದ ಸುತ್ತಲೂ ಹದವಾಗಿ ಮಸಾಜ್ ಮಾಡಿ.
ಪೆಡಿಕ್ಯೂರ್ ಬಗೆಗಳು
ಪಾದದ ಸಂರಕ್ಷಣೆಗೆ ಸಾಕಷ್ಟು ಪೆಡಿಕ್ಯೂರ್‌ಗಳಿವೆ. ಚಾಕ್ಲೆಟ್ ಪೆಡಿಕ್ಯೂರ್, ವೈನ್ ಪೆಡಿಕ್ಯೂರ್, ಐಸ್‌ಕ್ರೀಂ ಪೆಡಿಕ್ಯೂರ್, ಸ್ಟೋನ್ ಪೆಡಿಕ್ಯೂರ್, ಫ್ರೆಂಚ್ ಪೆಡಿಕ್ಯೂರ್, ರೆಗ್ಯುಲರ್ ಪೆಡಿಕ್ಯೂರ್, ಸ್ಪಾಪೆಡಿಕ್ಯೂರ್, ಪ್ಯಾರಫಿನ್, ಫೂಟ್ ಲಾಜಿಕ್ ಪೆಡಿಕ್ಯೂರ್ ಜತೆಗೆ ಇತ್ತೀಚೆಗಿನ ಟ್ರೆಂಡ್‌ಗಳಲ್ಲಿ ಜೆಲ್ ಪೆಡಿಕ್ಯೂರ್, ಅರ್ಥ್ ಸ್ಪಾಪೆಡಿಕ್ಯೂರ್, ಫಿಶ್ ಪೆಡಿಕ್ಯೂರ್ ಕೂಡ ಲಭ್ಯವಿದೆ.
ಪವಿತ್ರಾ ಶೆಟ್ಟಿ, ಈರೋಡ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.